varthabharthi

ಸುಗ್ಗಿ

ಡಿಜಿಟಲ್ ಕನ್ನಡ

ಕನ್ನಡದಲ್ಲೇ ಪ್ರೋಗ್ರಾಮಿಂಗ್ ಕಲಿಯಲು ‘ತಂತ್ರಾಂಶ ರಚನಾ ಭಾಷೆ’: ಕನ್ನಡ ಲೋಗೊ

ವಾರ್ತಾ ಭಾರತಿ : 23 Dec, 2017
ಡಾ. ಎ. ಸತ್ಯನಾರಾಯಣ

60ರ ದಶಕದಿಂದಲೇ ಪ್ರಪಂಚಾದ್ಯಂತ ಬಳಕೆಯ ಲ್ಲಿರುವ ‘ಲೋಗೊ’ ಮೂಲತಃ ಇಂಗ್ಲಿಷ್ ಭಾಷೆಯಲ್ಲಿದೆ. ಜರ್ಮನ್, ಫ್ರೆಂಚ್, ಇಟಾಲಿಯನ್, ಗ್ರೀಕ್, ಡಚ್, ಜಪಾನ್, ಇತ್ಯಾದಿ ಭಾಷೆಗಳಲ್ಲಿ ‘ಲೋಗೊ’ ಅನುವಾದಗೊಂಡಿದೆ.

ಕಂಪ್ಯೂಟರ್ಗಳಲ್ಲಿ ಕನ್ನಡವನ್ನು ಬಳಸುವಲ್ಲಿನ ಹೆಚ್ಚಿನ ಜ್ಞಾನವನ್ನು ಹಿರಿಯರಿಗಿಂತಲೂ ವಿದ್ಯಾರ್ಥಿಗಳಿಗೆ ನೀಡುವುದು ಅಗತ್ಯವಾಗಿದೆ. ಮಾಹಿತಿ ತಂತ್ರಜ್ಞಾನ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಪ್ರಮುಖವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬೇಕಾದರೆ ಅವರ ಕಂಪ್ಯೂಟರ್ ಶಿಕ್ಷಣದ ‘ಬೋಧನಾ ಮಾಧ್ಯಮ’ ಮತ್ತು ‘ಬಳಕೆಯ ಭಾಷೆ’ ಎರಡೂ ಕನ್ನಡವೇ ಆಗಿರಬೇಕು. ಪ್ರಾಥಮಿಕ ಶಿಕ್ಷಣದಲ್ಲಿ ಗಣಿತ, ವಿಜ್ಞಾನ ಇತ್ಯಾದಿ ವಿಷಯಗಳನ್ನು ಹೇಗೆ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಾರೆಯೋ, ಹಾಗೆಯೇ, ಕಂಪ್ಯೂಟರ್ ವಿಷಯವನ್ನೂ ಸಹ ಕನ್ನಡ ಮಾಧ್ಯಮದಲ್ಲಿಯೇ ಕಲಿಯಬೇಕು. ಇದರಿಂದ ಉನ್ನತ ಶಿಕ್ಷಣಕ್ಕೆ ಪ್ರಾಥಮಿಕ ಬುನಾದಿಯು ಭದ್ರವಾಗುತ್ತದೆ. ಅಲ್ಲದೆ, ಕಂಪ್ಯೂಟರ್‌ನ ಬಳಕೆಯ ಭಾಷೆ ಕೇವಲ ಇಂಗ್ಲಿಷ್ ಅಷ್ಟೇಅಲ್ಲ, ಕನ್ನಡವೂ ಸಹ ಆಗಬಹುದು ಎಂಬ ಸತ್ಯ ವಿದ್ಯಾರ್ಥಿಗಳಿಗೆ ತಿಳಿಯುತ್ತದೆ. ಕನ್ನಡವನ್ನೇ ಕಂಪ್ಯೂಟರ್‌ಗಳ ಬಳಕೆಯ ಭಾಷೆಯನ್ನಾಗಿಸಿ ಪ್ರತ್ಯಕ್ಷವಾಗಿ ಕನ್ನಡದಲ್ಲಿಯೇ ಕಲಿಕೆಯನ್ನು ಸಾಧ್ಯವಾಗಿಸುವ ಉತ್ತಮವಾದ ಪ್ರೋಗ್ರಾಂಮಿಂಗ್ ಭಾಷೆಯೇ ಇದೆ. ಅದೇ ‘ಕನ್ನಡ ಲೋಗೊ’ ಕ್ರಮವಿಧಿ ರಚನಾ ಭಾಷೆ. ಅದನ್ನು ‘ಕನ್ನಡ ಲೋಗೊ’ ತಂತ್ರಾಂಶ ಎಂದೂ ಕರೆಯಲಾಗುತ್ತದೆ. (LOGO Language - Logic Oriented Graphic Oriented Language) ಈ ತಂತ್ರಾಂಶವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೋಧಿಸಿದರೆ, ಕನ್ನಡ ಬಳಕೆಯನ್ನು ಕಂಪ್ಯೂಟರ್‌ಗಳಲ್ಲಿ ಪ್ರತ್ಯಕ್ಷವಾಗಿ ಅವರು ಕಲಿಯುತ್ತಾರೆ. ಪ್ರೋಗ್ರಾಮಿಂಗ್‌ನ ಮೂಲತತ್ವಗಳನ್ನು ಕಲಿಯುವುದರಿಂದ, ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಕಂಪ್ಯೂಟರ್ ಕಾರ್ಯನಿರ್ವಹಿಸಲು ತಂತ್ರಾಂಶಗಳನ್ನು ಹೇಗೆ ಸಿದ್ಧಪಡಿಸು ತ್ತಾರೆ ಎನ್ನುವ ಪರಿಕಲ್ಪನೆ ಅವರಿಗೆ ದೊರೆಯುತ್ತದೆ. ವಿದ್ಯಾರ್ಥಿಗಳ ತರ್ಕಶಕ್ತಿ ಹೆಚ್ಚಿ, ಬುದ್ಧಿಮತ್ತೆ ಅಭಿವೃದ್ಧಿಗೊಂಡು ಇತರ ವಿಷಯಗಳ ಕಲಿಕೆಯಲ್ಲಿ ಪ್ರಗತಿ ಕಂಡುಬರುತ್ತದೆ.

60ರ ದಶಕದಿಂದಲೇ ಪ್ರಪಂಚಾದ್ಯಂತ ಬಳಕೆಯಲ್ಲಿರುವ ‘ಲೋಗೊ’ ಮೂಲತಃ ಇಂಗ್ಲಿಷ್ ಭಾಷೆಯಲ್ಲಿದೆ. ಜರ್ಮನ್, ಫ್ರೆಂಚ್, ಇಟಾಲಿಯನ್, ಗ್ರೀಕ್, ಡಚ್, ಜಪಾನ್, ಇತ್ಯಾದಿ ಭಾಷೆಗಳಲ್ಲಿ ‘ಲೋಗೊ’ ಅನುವಾದಗೊಂಡಿದೆ. ಭಾರತದ ಶಾಲೆಗಳಲ್ಲೂ ಇಂಗ್ಲಿಷ್ ಭಾಷೆಯ ‘ಲೋಗೊ’ವನ್ನು ಕಲಿಸುತ್ತಿದ್ದಾರೆ. ಕಲಿಕೆಯ ನಂತರದ ಅಧ್ಯಯನಗಳಿಂದ ವಿದ್ಯಾರ್ಥಿಗಳ ಬುದ್ಧಿಮತ್ತೆ ವೃದ್ಧಿಯಾಗಿರುವುದು ಸಾಬೀತಾಗಿದೆ. ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿರುವ ರಾಜ್ಯದಲ್ಲಿ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ‘ಕನ್ನಡ ಲೋಗೊ’ವನ್ನು ಕಂಪ್ಯೂಟರ್ ಶಿಕ್ಷಣದ ಪಠ್ಯಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಪ್ರಸ್ತುತ, ಈ ‘ಲೋಗೊ’ ಇತರ ಯಾವುದೇ ಭಾರತೀಯ ಭಾಷೆಯಲ್ಲಿ ಲಭ್ಯವಿಲ್ಲ. ಭಾರತೀಯ ಭಾಷೆಗಳಲ್ಲಿಯೇ ಮೊತ್ತಮೊದಲ ಬಾರಿಗೆ ಇದನ್ನು ಕನ್ನಡಕ್ಕೆ ಪರಿವರ್ತಿಸಲಾಗಿದೆ. ಈ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿ ಕನ್ನಡದಲ್ಲಿಯೇ ಆದೇಶಗಳು ಮತ್ತು ಸೂಚನೆಗಳನ್ನು ನೀಡಿ ಕಂಪ್ಯೂಟರನ್ನು ನಿಯಂತ್ರಿಸಬಹುದು. MSW-LOGO (Microsoft Windows - Logic Oriented Graphi Oriented) ಲಾಂಗ್ವೇಜ್ ಎಂಬ ಹೆಸರಿನ ಪ್ರೋಗ್ರಾಮಿಂಗ್ ಭಾಷೆಯ ಕನ್ನಡ ಅವತರಣಿಕೆ ಇದು. ಕನ್ನಡ ಲೋಗೋ ಬಳಸಿ ಕಂಪ್ಯೂಟರಿನಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ನೂರಾರು ಆದೇಶಗಳ ಸಾಲುಗಳಿರುವ ಕ್ರಮವಿಧಿಯನ್ನು (ಪ್ರೋಗ್ರಾಮನ್ನು) ಕನ್ನಡದಲ್ಲಿಯೇ ಸಿದ್ಧಪಡಿಸಬಹುದು. ಅಂತಹ ಪ್ರೋಗ್ರಾಮುಗಳ ಸಂಚಯವನ್ನೇ ಸಿದ್ಧಪಡಿಸಿ, ನಿಗದಿತ ಕೆಲಸಕ್ಕಾಗಿ ತಂತ್ರಾಂಶವನ್ನು (ಸಾಫ್ಟ್‌ವೇರನ್ನು) ಸಿದ್ಧಪಡಿಸಬಹುದು. ಕನ್ನಡ ಲೋಗೊ ಭಾರತೀಯ ಭಾಷೆಗಳಲ್ಲಿಯೇ ಪ್ರಪ್ರಥಮವಾದುದು. ಇದು ಕನ್ನಡದ ಕ್ರಮವಿಧಿ ರಚನಾ ಭಾಷೆಯಾಗಿದೆ. (ಪ್ರೋಗ್ರಾಮಿಂಗ್ ಲಾಂಗ್ವೇಜ್). ಅಲ್ಲದೆ, ಒಂದು ನಿರೂಪಣಾ (ಇಂಟರ್‌ಪ್ರೆಟಿಂಗ್ ಲಾಂಗ್ಜೇಜ್) ಭಾಷೆಯಾಗಿದೆ. ಕ್ರಮವಿಧಿಗಳನ್ನು ವಿಧಾನಕಗಳನ್ನು (ಪ್ರೊಸೀಜರ್) ರಚಿಸುವಲ್ಲಿ ಹೆಚ್ಚಿನ ತಿಳುವಳಿಕೆ ನೀಡುವ ಮತ್ತು ಕ್ರಿಯಾ ಆದೇಶಪದಗಳನ್ನು (ಕಮಾಂಡುಗಳು)_ ಹೇಗೆ ಬಳಸಬೇಕು ಎಂದು ಕನ್ನಡದಲ್ಲಿಯೇ ಉದಾಹರಣೆಗಳ ಸಹಿತ ವಿವರಿಸುವ ಸಹಾಯ ವ್ಯವಸ್ಥೆಯು ಈ ಲೋಗೋ ತಂತ್ರಾಂಶದ ಒಂದು ಉಪಯುಕ್ತ ಭಾಗವಾಗಿದೆ. ರಾಜ್ಯ ಸರಕಾರವು ಸಾರ್ವಜನಿಕರಿಗೆ ಉಚಿತವಾಗಿ ನೀಡುತ್ತಿರುವ ‘ನುಡಿ’ ಲಿಪಿತಂತ್ರಾಂಶವನ್ನು ಇದರಲ್ಲಿ ಬಳಸಲಾಗಿದೆ. ಸುಲಭವಾಗಿ ಬೆರಳಚ್ಚಿಸಬಹುದಾದ ಕೀಲಿಮಣೆ ವಿನ್ಯಾಸ. ಇದೆ. ಕಂಪ್ಯೂಟರ್‌ನ ಪ್ರಾಥಮಿಕ ಶಿಕ್ಷಣ ಪಡೆಯುವ ಮಕ್ಕಳು ಕಂಪ್ಯೂಟರ್ ತಂತ್ರಾಂಶ ರಚನೆಯ ಪರಿಕಲ್ಪನೆಗಳನ್ನು ಕನ್ನಡದಲ್ಲಿಯೇ ತಿಳಿಯಬೇಕು. ಅಲ್ಲದೆ, ಕನ್ನಡದ ಆದೇಶಗಳನ್ನೂ ಕಂಪ್ಯೂಟರ್ ಪಾಲಿಸಬಲ್ಲದು ಎಂಬುದನ್ನು ಅವರಿಗೆ ಪ್ರತ್ಯಕ್ಷವಾಗಿ ಮಾಡಿತೋರಿಸುವ ಉತ್ತಮ ಉದ್ದೇಶದಿಂದ ಈ ಕನ್ನಡ ಲೋಗೋ ಸಿದ್ಧಪಡಿಸಲಾಗಿದೆ.

ಭಾರತೀಯ ಭಾಷೆಗಳನ್ನು ಕಂಪ್ಯೂಟರಿನಲ್ಲಿ ಅಳವಡಿಸುವಲ್ಲಿ ವಿಶೇಷ ತಜ್ಞತೆಯನ್ನು ಹೊಂದಿರುವ ಡಾ. ಯು.ಬಿ.ಪವನಜ ಈ ತಂತ್ರಾಂಶ ತಯಾರಿಕೆಯ ಪರಿಕಲ್ಪನೆ, ವಿನ್ಯಾಸ ಮತ್ತು ಯೋಜನೆಯ ತಾಂತ್ರಿಕ ಮಾರ್ಗದರ್ಶನವನ್ನು ನಿರ್ವಹಿಸಿದ್ದಾರೆ. ಈ ಅಂಕಣಕಾರ ಇಂಗ್ಲಿಷ್ ಆದೇಶಗಳ ಕನ್ನಡಾನುವಾದ, ಸಹಾಯ ಪಠ್ಯದ ರಚನೆ ಮತ್ತು ಸಹಾಯ ವ್ಯವಸ್ಥೆಯ ನಿರ್ಮಾಣವನ್ನು ಮಾಡಿದ್ದಾರೆ. 2006ನೇ ಸಾಲಿನಲ್ಲಿ ಕನ್ನಡ ಲೋಗೊ ತಂತ್ರಾಂಶಕ್ಕೆ ಪ್ರತಿಷ್ಠಿತ ‘ಮಂಥನ್’ ಪ್ರಶಸ್ತಿಯು ಲಭಿಸಿದೆ. ಸಾಮಾಜಿಕ ಕಳಕಳಿಯಿಂದ ಜನಸಾಮಾನ್ಯರಿಗಾಗಿ ತಂತ್ರಜ್ಞಾನ ಅಭಿವೃದ್ಧಿಪಡಿಸುವ ವ್ಯಕ್ತಿ, ಸಂಘ-ಸಂಸ್ಥೆಗಳನ್ನು ಪ್ರೋತ್ಸಾಹಿಸಲು ದಿಲ್ಲಿಯ ‘ಡಿಜಿಟಲ್ ಎಂಪವರ್‌ಮೆಂಟ್ ಫೌಂಡೇಷನ್’ ಈ ‘ಮಂಥನ್’ ಪ್ರಶಸ್ತಿಯನ್ನು ಆಯ್ದ ಹೊಸ ತಂತ್ರಾಂಶಗಳಿಗೆ ಪ್ರತಿವರ್ಷ ನೀಡುತ್ತಿದೆ. ಜನಸಾಮಾನ್ಯರಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಬಳಕೆಯಲ್ಲಿ ಇರುವ ಅಂತರವನ್ನು ನಿವಾರಿಸುವತ್ತ ಕಾರ್ಯನಿರತವಾದ ಕೇಂದ್ರ ಸರಕಾರದ ಹಲವು ಸಂಸ್ಥೆಗಳು ಅಂತಹುದೇ ವಿದೇಶಿ ಸಂಸ್ಥೆಯೊಡಗೂಡಿ ಈ ಫೌಂಡೇಷನ್‌ನ್ನು ಸ್ಥಾಪಿಸಿವೆ.

ಕನ್ನಡ ಲೋಗೋ ಉಚಿತ ತಂತ್ರಾಂಶವಾಗಿದ್ದು http://vishvakannada.com/kannadalogo ಜಾಲತಾಣ ದಿಂದ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದನ್ನು ಬಳಸುವ ಕುರಿತು ಸರಳವಾಗಿ ತಿಳಿಸುವ, ಕನ್ನಡದಲ್ಲಿಯೇ (ಈ ಅಂಕಣಕಾರ) ರಚಿಸಿರುವ ‘ಬಳಕೆಯ ಕೈಪಿಡಿ’ಯು ಸಹ ಇದೇ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ತಂತ್ರಾಂಶ ದಲ್ಲಿಯೇ ಅಳವಡಿಸಿ ನೀಡಲಾಗಿರುವ ಸಹಾಯ ವ್ಯವಸ್ಥೆ ಯು ಉತ್ತಮವಾಗಿದೆ. ತಾಂತ್ರಿಕವಾಗಿ ಇಂಗ್ಲಿಷ್‌ನ ಯಾವುದೇ ವಿಂಡೋಸ್ ಹೆಲ್ಪ್ ಫೈಲ್‌ಗಳಿಗೂ ಕಡಿಮೆ ಇಲ್ಲದ, ಕನ್ನಡ ಪಠ್ಯವನ್ನು ಹೊಂದಿರುವ ಸಹಾಯ ಕಡತವು ಲಭ್ಯವಿದೆ. ಕನ್ನಡದ ಸಂದರ್ಭಕ್ಕೆ ಇದು ತನ್ನದೇ ರೀತಿಯಲ್ಲಿ ಪ್ರಪ್ರಥಮವಾದುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)