varthabharthi

ವೈವಿಧ್ಯ

ಗ್ರಾಹಕರ ದಿನ ಡಿಸೆಂಬರ್ 24

ಗ್ರಾಹಕ ಹಕ್ಕುಗಳು ಅಪಾಯದ ಅಂಚಿನಲ್ಲಿ

ವಾರ್ತಾ ಭಾರತಿ : 24 Dec, 2017
ಪ್ರೊ.ಬಿ.ಎಂ. ಇಚ್ಲಂಗೋಡು ಮಂಗಳೂರು ಗ್ರಾಹಕ ಜಾಗೃತಿ ವೇದಿಕೆ

ಇಂದಿನ ಜಗತ್ತಿನಲ್ಲಿ ಹಣ ಮತ್ತು ಹಣದ ವೌಲ್ಯದ ಕುರಿತಾದ ಚಿಂತನೆಗಳು ಜನಸಾಮಾನ್ಯರನ್ನು ಚಿಂತೆಗೀಡು ಮಾಡಿವೆ. ದುಡಿಮೆಗೆ ತಕ್ಕ ಪ್ರತಿಫಲವನ್ನು ಬಳಸುವ ಸ್ವಾತಂತ್ರ, ಬಳಸಿದ ವಸ್ತುಗಳ ಸುರಕ್ಷೆ ಇಂದು ಜನರನ್ನು ಕಾಡುತ್ತಿರುವ ಚಿಂತೆಗಳು. ನೋಟು ಅಪವೌಲ್ಯದ ನಂತರ ದೇಶದಾದ್ಯಂತ ಉಂಟು ಮಾಡಿದ ತಲ್ಲಣ ಜನರಲ್ಲಿ ಭಯ ಮೂಡಿಸಿದೆ. ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣವನ್ನು ತನ್ನಲ್ಲಿರಿಸಿಕೊಳ್ಳಲಾಗದ, ಬ್ಯಾಂಕಿನಲ್ಲಿರಿಸಿದರೆ ಅಗತ್ಯಕ್ಕೆ ಬಳಸಲು ಪಡೆಯಲಾಗದ ಸ್ಥಿತಿ ಉಂಟಾಗಿರುವುದು ವ್ಯಕ್ತಿ ಸ್ವಾತಂತ್ರಹರಣ ಮಾಡಿದಂತಾಗಿದೆ. ಅಂತರ್ಜಾಲತಾಂತ್ರಿಕ ದೋಷಗಳಿಂದಾಗಿ ಬ್ಯಾಂಕುಗಳ ಪಾವತಿ ನಿಧಾನವಾಗುವುದು. ನಗದೀಕರಣ ಮಾಡಲಾಗದಿರುವುದು ಕೂಡ ಅನುಭವವೇದ್ಯವಾಗಿದೆ. ಅನಿಯಂತ್ರಿತ ನೈಸರ್ಗಿಕ ವೈಪರೀತ್ಯಗಳು ಯಾವತ್ತೂ ಸಂಭವಿಸಬಹುದು. ನೆರೆ, ಸುನಾಮಿ, ಮಳೆಗಾಳಿ, ಓಖಿ ತೂಫಾನುಗಳು ಸಾಮಾನ್ಯ ಅನಿಯಂತ್ರಿತ ಘಟನೆಗಳು. ಇಂತಹ ಸಂದರ್ಭಗಳಲ್ಲಿ ವಿದ್ಯುತ್ ಸ್ಥಗಿತವಾಗುತ್ತದೆ. ಅಂತರ್ಜಾಲವು ಸ್ಥಗಿತಗೊಳ್ಳಬಹುದು. ಆಗ ಈ ನಗದು ರಹಿತ ಬ್ಯಾಂಕ್ ವ್ಯವಹಾರ ಏನಾಗುತ್ತದೆ? ಎಲ್ಲವನ್ನೂ ಮನುಷ್ಯನೇ ನಿಯಂತ್ರಿಸಬಹುದೆಂದು ತಿಳಿಯುವುದು ಮೂರ್ಖತನ. ಈ ವರ್ಷದ ವಿಪರೀತ ಮಳೆ, ಓಖಿ ತೂಫಾನ್, ಕಡಲಲೆಗಳ ಅಬ್ಬರ ಮಾನವ ನಿಯಂತ್ರಣದಲ್ಲಿ ಇರಲಿಲ್ಲ. ಇದೊಂದು ಚಿಕ್ಕ ಪಾಠ ಮಾತ್ರ. ಇಂತಹ ವೈಪರೀತ್ಯಗಳಿಂದ ಅಂತರ್ಜಾಲ ನಿಂತು ಹೋದರೆ, ಬ್ಯಾಂಕ್ ವ್ಯವಹಾರವೂ ಸ್ಥಗಿತಗೊಳ್ಳುತ್ತದೆ. ಜನರಿಗೆ ತಮ್ಮ ಹಣವನ್ನು ಉಪಯೋಗಿಸಲಾಗದ ಪರಿಸ್ಥಿತಿ ಉಂಟಾದರೆ ಆಶ್ಚರ್ಯಪಡಬೇಕಾಗಿಲ್ಲ. ಇಂತಹದೊಂದು ಕೆಟ್ಟ ಅನುಭವ ನೋಟು ಅಪವೌಲ್ಯವಾದಾಗ ಜನರಿಗಾಗಿದೆ. ಪರಿಣಾಮವಾಗಿ ಗ್ರಾಹಕ ಸಂರಕ್ಷಣಾ ಕಾಯ್ದೆ ನೀಡಿದ ಗ್ರಾಹಕ ಹಕ್ಕುಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ನಿರುಪಯುಕ್ತವಾಗಿದೆ. ಹಾಗಾಗಿ ಬ್ಯಾಂಕಿನಲ್ಲಿರಿಸಿದ ಹಣವನ್ನು ತಮಗೆ ಬೇಕಾದಾಗ ಬಳಸಲು ಸಾಧ್ಯವೇ ಎಂಬ ಚಿಂತೆ ಜನರನ್ನು ಇನ್ನೂ ಕಾಡುತ್ತಿದೆ. ಇದೀಗ ಬ್ಯಾಂಕುಗಳು ಖಾತೆದಾರನ ಒಪ್ಪಿಗೆ ಇಲ್ಲದೆ ಖಾತೆ ಸ್ಥಗಿತ, ಹಣ ಮುರಿತ ಮತ್ತು ಸ್ವೇಚ್ಛಾನುಸಾರ ಬಳಸಿಕೊಳ್ಳುವ ಅಧಿಕಾರ ಹೊಂದಿದೆ ಎಂದು ಹೇಳಲಾಗುತ್ತಿದೆ. ಅದೆಷ್ಟೋ ಗ್ರಾಹಕರ ಗಮನಕ್ಕೆ ಬಾರದೆ, ಹಣ ಕಡಿತಗೊಳಿಸುವ ಅಥವಾ ಪಾವತಿ ಮಾಡಿದ ದೂರುಗಳಿವೆ. ಬ್ಯಾಂಕು ಗ್ರಾಹಕರು ಇನ್ನಾದರೂ ಎಚ್ಚರಗೊಳ್ಳಬೇಕು. ತಮ್ಮ ಖಾತೆಯ ನಿರ್ವಹಣಾ ಹಕ್ಕನ್ನು ಹಂತ ಹಂತವಾಗಿ ಕಳೆದುಕೊಳ್ಳುವ ಅಪಾಯ ಮುಂದಿದೆ. ಬ್ಯಾಂಕಿನಲ್ಲಿರಿಸಿದ ಹಣ ನಿಮ್ಮದ್ದೋ? ಬ್ಯಾಂಕಿನದ್ದೋ? ಸರಕಾರದ್ದೋ? ಎಂದು ಪ್ರತಿಯೋರ್ವ ನಾಗರಿಕನೂ ಯೋಚಿಸಬೇಕಾಗಿದೆ. ನಿಮ್ಮ ಸಂಪಾದನೆಯ ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ. ಬ್ಯಾಂಕಿನಲ್ಲಿಟ್ಟರೆ ನಿಮಗೆ ಬೇಕಾದಾಗ ಸಿಗುವ ಭರವಸೆಯಿಲ್ಲ. ಅದರ ನಿರ್ವಹಣಾಧಿಕಾರ ರಿಸರ್ವ್ ಬ್ಯಾಂಕುಗಳದ್ದೇ ಆದರೆ ಹೇಗಾಗಬಹುದೆಂದು ಯೋಚಿಸಿ ನೋಡಿ. ಜನರ ಮೂಲಭೂತ ಹಕ್ಕುಗಳಿಗೆ ಅಪಾಯವಿದೆ. ಇತ್ತೀಚೆಗೆ ಏರ್‌ಟೆಲ್ ಮೊಬೈಲ್ ಕಂಪೆನಿ ಬ್ಯಾಂಕಿಂಗ್ ವ್ಯವಹಾರ ನಡೆಸುವುದು ಬೆಳಕಿಗೆ ಬಂದಿದೆ. ಖಾತೆದಾರನ ಒಪ್ಪಿಗೆ ಇಲ್ಲದೆ ಖಾತೆ ತೆರೆದು ಹಣ ಜಮಾಯಿಸಿಕೊಂಡದ್ದಿದೆ. ಅವರಿಗೆ ಬ್ಯಾಂಕಿಂಗ್ ಅಧಿಕಾರ ಕೊಟ್ಟವರಾರು? ಆಧಾರ ಕಾರ್ಡ್ ಲಿಂಕಿಂಗ್ ಮೊಬೈಲುಗಳಿಗೆ ಕಡ್ಡಾಯ. ಅದರರ್ಥ ಅವರು ಖಾತೆ ಆರಂಭಿಸಬಹುದೆಂದೇ? ನಮ್ಮ ದೇಶದಲ್ಲಿ ಹಲವಾರು ಮೊಬೈಲ್ ಕಂಪೆನಿಗಳಿವೆ. ಅವುಗಳೆಲ್ಲಾ ಬ್ಯಾಂಕಿಂಗ್ ವ್ಯವಹಾರ ನಡೆಸಿ, ಖಾತೆದಾರನ ಒಪ್ಪಿಗೆಯಿಲ್ಲದೆ ಖಾತೆ ತೆರೆದು ಹಣ ಜಮಾಯಿಸತೊಡಗಿದರೆ, ಒ್ಪಪಿಗೆಯಿಲ್ಲದೆಯೇ ಯಾರ್ಯಾರನ್ನೋ ‘ನೋಮಿನಿ’ ಹೆಸರಿಸಿದರೆ, ಅರಾಜಕತೆ ನಿರ್ಮಾಣವಾಗುತ್ತದೆ. ಇಂತಹದೊಂದು ಇತ್ತೀಚೆಗೆ ವರದಿಯಾದ ಹಿನ್ನೆಲೆಯಲ್ಲಿ ಏರ್‌ಟೆಲ್ ಇ ಕೆವೈಸಿ ಸೇವೆ ತಾತ್ಕಾಲಿಕ ಸ್ಥಗಿತವಾದ ವರದಿ ಪ್ರಕಟವಾಗಿದೆ. ಇ ಕೆವೈಸಿ ಎಂದರೇನು? ಬ್ಯಾಂಕುಗಳ ಹೊರತಾಗಿ ಖಾಸಗಿ ಕಂಪೆನಿಗಳು ಬ್ಯಾಂಕಿಂಗ್ ವ್ಯವಹಾರ ನಡೆಸುವುದು ಸರಿಯೇ? ಖಾತೆ ತೆರೆಯುವುದು ಗ್ರಾಹಕ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆಧಾರ್ ಲಿಂಕಿಂಗ್‌ನಿಂದ ಬ್ಯಾಂಕಿಂಗ್ ವ್ಯವಹಾರಕ್ಕೆ ಅನುಮತಿ ಅಪಾಯಕಾರಿಯಾಗಿದೆ. ಸರಕಾರ ಬ್ಯಾಂಕುಗಳ ಹೊರತಾಗಿ ‘ಲಿಂಕಿಂಗ್ ಬ್ಯಾಂಕಿಂಗ್ ಸೇವೆ’ ಶಾಶ್ವತ ರದ್ದುಗೊಳಿಸಬೇಕು. ಇದು ಅಪಾಯಕಾರಿಯೂ, ಗ್ರಾಹಕ ಹಕ್ಕಿನ ಉಲ್ಲಂಘನೆಯೂ ಆಗಿದೆ.

ಅಧಿಕೃತ ಗ್ರಾಹಕ ಹಕ್ಕುಗಳನ್ನು ಉದ್ದೇಶಪೂರ್ವಕ ಉಲ್ಲಂಘಿಸಿದ ಉದಾಹರಣೆಗಳಿವೆ. ಕೇವಲ ಇ-ಮೇಲ್ ಆಧಾರದಲ್ಲಿ ಯಾರ್ಯಾರಿಗೋ ಹಣ ಕಳುಹಿಸಿದ ಉದಾಹರಣೆಗಳಿವೆ. ಹಣ ಕಡಿತಗೊಳಿಸಿದ ಉದಾ ಹರಣೆಗಳಿವೆ. ಗ್ರಾಹಕರಿಗೆ ಸೂಚನೆ ನೀಡದೆ ಸ್ಥಗಿತಗೊಳಿಸಿದ್ದಿದೆ. ಗ್ರಾಹಕ ಇದೀಗ ಅಸ್ತಿತ್ವವನ್ನು ಕಳೆದುಕೊಂಡಂತಿದೆ. ಗಾಂಧೀಜಿ ಹೇಳಿದ ಮಾತುಗಳಿವು "A Consumer is the most important visitor to our process. He is not dependent on us, we are on him. He is giving us a favour by giving an opportunity to serve him". ಆದರೆ ಈಗ ಆಗಿರುವುದು ತದ್ವಿರುದ್ಧ. ಗ್ರಾಹಕನಿಗೆ ಅಸ್ತಿತ್ವವೇ ಇಲ್ಲ. ಅಂತರ್ಜಾಲ ಬ್ಯಾಂಕಿಂಗ್ ಮತ್ತು ನಗದುರಹಿತ ವ್ಯವಹಾರ ಸುರಕ್ಷಿತವಲ್ಲ. ಬ್ಯಾಂಕುಗಳನ್ನೇ ನಂಬಿಕೊಂಡಿರುವುದೂ ಅಪಾಯಕಾರಿ ಎಂದು ಅನುಭವಗಳೇ ಸಾರಿ ಹೇಳುತ್ತಿದ್ದರೂ ಅದನ್ನೇ ಸಮರ್ಥಿಸುವ ಜನಸಾಮಾನ್ಯರು ಯೋಚಿಸಬೇಕಾಗಿದೆ. ಹಂತ ಹಂತವಾಗಿ ವ್ಯಕ್ತಿಸ್ವಾತಂತ್ರವನ್ನು, ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದೆೀವೆ ಎಂಬ ಸೂಚನೆ ನಿಮ್ಮ ಮುಂದಿದೆ.

ಪ್ರಧಾನಿಯವರ ಸ್ವಚ್ಛ ಭಾರತ ಆಂದೋಲನ ಕೇವಲ ಶೌಚಾಲಯ ನಿರ್ಮಾಣಕ್ಕೆ ಮಾತ್ರ ಸೀಮಿತವಾದಂತಿದೆ. ಮಂಗಳೂರು ನಗರದಲ್ಲೇ ಕಸ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಕಾರ್ಪೊರೇಷನ್ ವಾರ್ಡುಗಳ ಅಡ್ಡ ರಸ್ತೆಗಳನ್ನು ನೋಡಿದರೆ ಸಾಕು. ಖಾಲಿ ಖಾಸಗಿ ನಿವೇಶನಗಳು ಕಸ ತುಂಬುವ ಕುಪ್ಪೆಗಳಾಗಿವೆ. ಅದರ ಕೆಟ್ಟ ವಾಸನೆ ಅಕ್ಕಪಕ್ಕದ ನಿವಾಸಿಗಳಿಗೆ ಹಿಂಸೆಯಾಗಿದೆ. ಕಾರ್ಪೊರೇಟರುಗಳಿಗಿದು ಸಮಸ್ಯೆಯಾಗಿ ಕಾಣುವುದಿಲ್ಲ. ಶಾಸಕರಂತೂ ವಾರ್ಡುಗಳತ್ತ ಸುಳಿಯುವುದೇ ಇಲ್ಲ. ಜನಪ್ರತಿನಿಧಿಗಳು, ಆಹ್ವಾನಿತರಾಗಲು, ಅತಿಥಿಗಳಾಗಲು, ವೇದಿಕೆ ಹಂಚಲು ಜನರು ತಮ್ಮನ್ನು ಆರಿಸಿದ್ದಾರೆಂದು ತಿಳಿದುಕೊಂಡಂತಿದೆ. ಜನರ ಆರೋಗ್ಯ, ಜನರ ಹಕ್ಕು, ಪರಿಸರ ಸ್ವಚ್ಛತೆ ಸ್ಥಳೀಯಾಡಳಿತದ ಹೊಣೆ. ಸ್ವಚ್ಛ ಭಾರತ ಆಗಬೇಕಾದದ್ದು ರಸ್ತೆ ಬದಿಗಳಲ್ಲಿ. ಕಸದ ರಾಶಿಗಳ ನಿರ್ವಹಣೆಯಲ್ಲಿ. ವೇದಿಕೆಯಲ್ಲಿ ಭಾಷಣ ಮಾಡಿದ್ದರಿಂದ ಭಾರತ ಸ್ವಚ್ಛವಾಗುವುದಿಲ್ಲ. ಪ್ರತಿನಿಧಿಗಳೇ ನಾಗರಿಕರೊಡನೆ ಬೆರೆತು ಸ್ವಚ್ಛಗೊಳಿಸಲು ಮುಂದಾಗಬೇಕು. ಶ್ರೀ ರಾಮಕೃಷ್ಣ ಮಿಷನ್‌ನಂತಹವರು ಮಾಡಿ ತೋರಿಸಿದ ಕೆಲಸವನ್ನು ಜನಪ್ರತಿನಿಧಿಗಳು ಮಾಡಿ ತೊೀರಿಸಬೇಕು. ಇದು ಪೌರರ ಆಗ್ರಹ.

ಇತ್ತೀಚೆಗಷ್ಟೆ ಗಂಭೀರವಾಗಿ ಚರ್ಚಿಸಲ್ಪಟ್ಟ ವೈದ್ಯರ ಮುಷ್ಕರದಿಂದ ರೋಗಿಗಳಿಗಾದ ಆತಂಕ, ಆರೋಗ್ಯ ಸೇವೆ ಪಡೆಯುವ ನಾಗರಿಕ ಹಕ್ಕುಗಳೇನು ಎಂದು ಕೇಳುವಂತಾಗಿದೆ. ಸುರಕ್ಷೆಯ ಹಕ್ಕು ಇದೆ ಯೆಂದು ಗ್ರಾಹಕ ರಕ್ಷಣಾ ಕಾಯ್ದೆ ತಿಳಿಸುತ್ತದೆ. ಖರೀದಿ ಯಾ ಸೇವೆಗೆ ರಶೀದಿ ಕೊಡುವುದು ಮತ್ತು ಪಡೆಯುವುದು ಕೂಡಾ ಕಡ್ಡಾಯ. ಯಾವ ಖಾಸಗಿ ವೈದ್ಯರು ಸೇವಾ ಶುಲ್ಕಕ್ಕೆ ರಶೀದಿ ಕೊಡುತ್ತಾರೆ? ದಯನೀಯಾವಸ್ಥೆಯಲ್ಲಿರುವ ರೋಗಿಗಳು ರಶೀದಿ ಕೇಳುವುದಿಲ್ಲ. ಆದರೆ ವೈದ್ಯರಿಗೆ ನಿಯಮ ಅನ್ವಯ ಅಲ್ಲವೇ? ಅವರಿಗೂ ಆದಾಯ ತೆರಿಗೆ ಕಡ್ಡಾಯ ಅಲ್ಲವೇ? ರಶೀದಿಯೇ ನೀಡದ ವೈದ್ಯರ ಆದಾಯ ಲೆಕ್ಕಾಚಾರ ಹೇಗೆ ಸಾಧ್ಯ. ಇಂತಹ ಯಾವ ವಿಚಾರವೂ ಮಾಧ್ಯಮಗಳ ಗಮನಕ್ಕೇ ಬರುವುದಿಲ್ಲ. ವೈದ್ಯರು ತಮ್ಮ ಆದಾಯಕ್ಕೆ ಆಪತ್ತಾಗಬಹುದೆಂದು ಮುಷ್ಕರ ಹೂಡಿದರು. ರೋಗಿಗಳ ಸಮ್ಮರಿ ವರದಿಯನ್ನು ನೀಡದೆ, ತಮಗಿಷ್ಟವಾದಲ್ಲಿ ಚಿಕಿತ್ಸೆ ಪಡೆಯುವ ಹಕ್ಕನ್ನು ನಿರಾಕರಿಸಿ ಸತಾಯಿಸುವ ಆಸ್ಪತ್ರೆಗಳ ಬಗೆಗೆ, ವೈದ್ಯರುಗಳ ಬಗೆಗೆ, ಕೇಂದ್ರ ಸರಕಾರ ಏಕೆ ವೌನ? ಕೇವಲ ಐದು ಕಿ.ಮೀ.ಗಳ ವ್ಯಾಪ್ತಿಯಲ್ಲಿ ಮೂರು ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಿಗೆ ಅವಕಾಶ ಮಾಡಿಕೊಟ್ಟ ಸರಕಾರ, ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜನ್ನು ಕೊಡದಿರಲು ಕಾರಣವೇನು? ಜಿಲ್ಲೆಯ ಇತರ ಭಾಗಗಳಿಗೂ ಅನುಕೂಲವಾಗುವಂತೆ ಆ ಕಾಲೇಜುಗಳ ಅಂತರ ದೂರವಿರಿಸುವ ಅವಕಾಶ ಸರಕಾರಕ್ಕಿಲ್ಲವೇ? ಜನಸಾಮಾನ್ಯರ ಪ್ರಾಣ, ನೋವು, ಮಾನ ರಕ್ಷಿಸಲು ಸರಕಾರವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇವೆಲ್ಲವೂ ಗ್ರಾಹಕ ಹಕ್ಕುಗಳ ವ್ಯಾಪ್ತಿಗೊಳಪಡುತ್ತದೆ. ಗ್ರಾಹಕರೇ! ಇಂದು ರಾಷ್ಟ್ರೀಯ ಗ್ರಾಹಕ ದಿನ. ಗ್ರಾಹಕರ ಹಕ್ಕುಗಳನ್ನು ನೆನಪಿಸುತ್ತಿದ್ದೇನೆ. ಚುನಾವಣೆ ಹತ್ತಿರ ಬರುತ್ತಿದೆ. ನೀವು ಮತ ನೀಡಿ ಆರಿಸುವವರು ನಿಮ್ಮನ್ನು ಸಾಯಿಸುವವರಾಗಬೇಕೇ? ಬದುಕಿಸುವವರಾಗಬೇಕೇ? ನೀವೇ ನಿರ್ಧರಿಸಿ. ನಿಮ್ಮ ಅನುಭವ, ನೋವುಗಳ ಪಾಠ ಯಾವತ್ತೂ ಮರೆಯದಿರಲಿ. ಗ್ರಾಹಕ ಹಕ್ಕುಗಳ ರಕ್ಷಣೆ ನಿಮ್ಮ ಕೈಯಲ್ಲಿದೆ. ಎಚ್ಚೆತ್ತ ಗ್ರಾಹಕರಾಗಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)