varthabharthi

ವೈವಿಧ್ಯ

ಗುಜರಾತ್ ಚುನಾವಣೆಗಳಲ್ಲಿ ಸಲಾಮಿ ವಂಚನೆ ನಡೆದಿರಬಹುದೇ?

ವಾರ್ತಾ ಭಾರತಿ : 25 Dec, 2017
ಸುರೇಶ್ ಭಟ್ ಬಾಕ್ರಬೈಲ್

ಇಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ‘ಸಲಾಮಿ ವಂಚನೆ’ ನಡೆದಿದೆಯೇ ಎಂಬುದನ್ನು ಪತ್ತೆ ಹಚ್ಚಲು ಒಂದೇ ದಾರಿ ಎಂದರೆ ಚೀಟಿಗಳು ಮತ್ತು ಯಂತ್ರಗಳನ್ನು ತಾಳೆ ನೋಡುವುದು. ಯಂತ್ರದಲ್ಲಿ ನಮೂದಿಸಲ್ಪಟ್ಟ ಸಂಖ್ಯೆ ಮತ್ತು ಚೀಟಿಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬಂತೆಂದರೆ ಮತಗಳ ಕಳ್ಳತನ ಆಗಿದೆ ಎಂದೇ ಹೇಳಬಹುದು.

ಗುಜರಾತ್ ಚುನಾವಣೆಗಳನ್ನು ಗೆಲ್ಲುವುದು ಸಂಘ ಪರಿವಾರದ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆದರೆ ಮೋದಿಜಿಯ ಅತಿರಂಜಿತ ಗುಜರಾತ್ ಮಾದರಿ ಅಭಿವೃದ್ಧಿ ಫಾರ್ಮುಲಾ ಅಡ್ರೆಸ್ ಇಲ್ಲದೆ ಸಂಪೂರ್ಣ ನಾಪತ್ತೆಯಾಗಿದ್ದುದರಿಂದ ಸಂಘ ಪರಿವಾರ ತುಂಬಾ ಹತಾಶೆಯ ಪರಿಸ್ಥಿತಿಯಲ್ಲಿತ್ತು. ಆದುದರಿಂದಲೇ ಕೋಮು ಧ್ರುವೀಕರಣ ಮುಂತಾದ ಸೊಂಟದ ಕೆಳಗಿನ ವಿಧಾನಗಳನ್ನು ಬಳಸಲಾಯಿತು. ಈ ಸಂದರ್ಭದಲ್ಲಿ ಇಲೆಕ್ಟ್ರಾನಿಕ್ ಮತದಾನಕ್ಕೆ ಸಂಬಂಧಿಸಿದಂತೆ ‘ಸಲಾಮಿ ವಂಚನೆ’ಯ ಮಾತುಗಳೂ ಕೇಳಿಬರುತ್ತಿರುವುದರಿಂದ ಮತಯಂತ್ರಗಳ ದುರ್ಬಳಕೆಯ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹಾಗಾದರೆ ಏನಿದು ಸಲಾಮಿ ವಂಚನೆ? ಇದೊಂದು ವಿಧದ ಹೈಟೆಕ್ ಕಳ್ಳತನ. ಉದಾಹರಣೆಗೆ ಬ್ಯಾಂಕಿಂಗ್ ಕ್ಷೇತ್ರವನ್ನು ತೆಗೆದುಕೊಂಡರೆ ಸಾಫ್ಟ್‌ವೇರ್‌ನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿ ಒಂದೊಂದು ಬ್ಯಾಂಕ್ ಖಾತೆಯಿಂದ ಕೆಲವೇ ಪೈಸೆ ಅಥವಾ ರೂಪಾಯಿಗಳ ಹಾಗೆ ಲಕ್ಷಾಂತರ ಖಾತೆಗಳಿಂದ ದೊಡ್ಡ ಮೊತ್ತವನ್ನು ಲಪಟಾಯಿಸುವುದೇ ಸಲಾಮಿ ವಂಚನೆ. ಸಾಮಾನ್ಯವಾಗಿ ಖಾತೆದಾರನೊಬ್ಬ ತನ್ನ ಖಾತೆಯಲ್ಲಾಗುವ ಇಂತಹ ಜುಜುಬಿ ಮೊತ್ತದ ವಹಿವಾಟುಗಳನ್ನು ಸೂಕ್ಷ್ಮವಾಗಿ ಗಮನಿಸುವ ಗೋಜಿಗೆ ಹೋಗದಿರುವುದರಿಂದ ಇಂತಹ ಮೋಸ ಸಾಧ್ಯವಾಗುತ್ತದೆ. ಇನ್ನೊಂದು ‘ಸಲಾಮಿ ವಂಚನೆ’ ಪ್ರಕರಣ ಪೆಟ್ರೋಲ್ ಪಂಪ್‌ಗಳ ಬಿಲ್‌ಗಳಿಗೆ ಸಂಬಂಧಪಟ್ಟಿದೆ. 1998ರಲ್ಲಿ ಅಮೆರಿಕದ ಲಾಸ್ ಏಂಜಲಿಸ್ ನಗರದ ಹೈಟೆಕ್ ದರೋಡೆಕೋರರು ತಮ್ಮ ಕಾರ್ಯಾಚರಣೆಗೆ ಪೆಟ್ರೋಲ್ ಪಂಪ್‌ಗಳನ್ನು ಆಯ್ಕೆ ಮಾಡಿಕೊಂಡರು. ಅವರು ಅಲ್ಲಿನ ಕಂಪ್ಯೂಟರ್ ಚಿಪ್‌ಗಳನ್ನು ಹ್ಯಾಕ್ ಮಾಡಿ ಪಂಪ್ ಮಾಡಿದ್ದಕ್ಕಿಂತಲೂ ಅಧಿಕ ಪ್ರಮಾಣ ಬಿಲ್‌ನಲ್ಲಿ ಮುದ್ರಣವಾಗುವಂತೆ ನೋಡಿಕೊಂಡು ಬಿಲಿಯಾಂತರ ಡಾಲರ್ ಜೇಬಿಗಿಳಿಸಿದರು. ಆದರೆ ಕೊನೆಗೊಮ್ಮೆ ಸಿಕ್ಕಿಬಿದ್ದು ಶಿಕ್ಷೆಗೊಗಾದರೆನ್ನುವುದು ಬೇರೆ ಮಾತು.

ವಾಸ್ತವ ಹೀಗಿರುವಾಗ ಇಲೆಕ್ಟ್ರಾನಿಕ್ ಮತಯಂತ್ರದ

ಸಾಫ್ಟ್‌ವೇರ್‌ನಲ್ಲೂ ಇದೇ ರೀತಿ ಹಸ್ತಕ್ಷೇಪ ಮಾಡಿ ಮತದಾರರಿಗೆ ಸಂಶಯ ಬರದ ಹಾಗೆ ಮತಗಳನ್ನು ಲಪಟಾಯಿಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಒಂದು ಇಲೆಕ್ಟ್ರಾನಿಕ್ ಮತಯಂತ್ರದಲ್ಲಿ ಎಷ್ಟು ಮತಗಳು ದಾಖಲಾಗಿಮೋ ಅಷ್ಟೇ ದೃಢೀಕರಣದ ಚೀಟಿಗಳು (Voter Verified Paper Trail; VVPAT) ಮುದ್ರಣಗೊಳ್ಳಬೇಕು. ಹೆಚ್ಚು ಅಥವಾ ಕಡಿಮೆ ಚೀಟಿಗಳು ಮುದ್ರಣಗೊಂಡರೆ ಸಾಫ್ಟ್‌ವೇರ್‌ನಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ. ಇಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಸಲಾಮಿ ವಂಚನೆ ನಡೆದಿದೆಯೇ ಎಂಬುದನ್ನು ಪತ್ತೆ ಹಚ್ಚಲು ಒಂದೇ ದಾರಿ ಎಂದರೆ ಚೀಟಿಗಳು ಮತ್ತು ಯಂತ್ರಗಳನ್ನು ತಾಳೆ ನೋಡುವುದು. ಯಂತ್ರದಲ್ಲಿ ನಮೂದಿಸಲ್ಪಟ್ಟ ಸಂಖ್ಯೆ ಮತ್ತು ಚೀಟಿಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬಂತೆಂದರೆ ಮತಗಳ ಕಳ್ಳತನ ಆಗಿದೆ ಎಂದೇ ಹೇಳಬಹುದು.

ಈಗ ಇತ್ತೀಚಿನ ಗುಜರಾತ್ ಚುನಾವಣೆಗಳನ್ನೇ ತೆಗೆದುಕೊಳ್ಳಿ. ಕನಿಷ್ಠ ನಾಲ್ಕು ಬೂತ್‌ಗಳ ಇಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ದಾಖಲಾದ ಮತಗಳ ಸಂಖ್ಯೆ ಮತ್ತು ದೃಢೀಕರಣ ಚೀಟಿಗಳ ಸಂಖ್ಯೆ ಒಂದಕ್ಕೊಂದು ತಾಳೆಯಾಗುತ್ತಿಲ್ಲವೆಂದು ಗುಜರಾತಿನ ಮುಖ್ಯ ಚುನಾವಣಾ ಅಧಿಕಾರಿ ಬಿ.ಬಿ.ಸ್ವೈನ್ ಒಪ್ಪಿಕೊಂಡಿರುವುದಾಗಿ ಪಿಟಿಐ ಸಂಸ್ಥೆ ವರದಿಮಾಡಿದೆ. ಆದರೆ ಚುನಾವಣೆಗಳ ಬಗ್ಗೆ ಪುಟಗಟ್ಟಲೆ ಬರೆದ ಅಥವಾ ಗಂಟೆಗಟ್ಟಲೆ ಚರ್ಚಿಸಿದ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಈ ವಿಷಯವನ್ನು ಎತ್ತಿತೋರಿಸಲಿಲ್ಲ. ಬದಲು ಶೇಕಡಾ 100ರಷ್ಟು ಾಳೆಯಾಗಿವೆ ಎಂದೇ ವರದಿ ಮಾಡಿದವು! ಇದೊಂದು ಅತ್ಯಂತ ಆತಂಕದ ಬೆಳವಣಿಗೆಯಾಗಿದೆ. ಮತಗಳ್ಳತನ ಮತ್ತು ಮತಯಂತ್ರಗಳಲ್ಲಿರುವ ಸಮಸ್ಯೆಗಳ ಬಗ್ಗೆ ಏನನ್ನೂ ಪ್ರಕಟಿಸಬಾರದು ಅಥವಾ ಪ್ರಸಾರ ಮಾಡಬಾರದು ಎಂದು ಪತ್ರಕರ್ತರಿಗೆ ಆದೇಶಿಸಿರುವ ಮಾಧ್ಯಮ ಮಾಲಕರು ಆ ಕುರಿತು ನಿಷೇಧಾಜ್ಞೆಯೊಂದನ್ನು ಹೊರಡಿಸಿದ್ದಾರೆಂದು ನಂಬಲರ್ಹ ಮಾಧ್ಯಮ ಮೂಲಗಳಿಂದ ತಿಳಿದುಬರುತ್ತದೆ.

ಚುನಾವಣಾ ಆಯೋಗ ಮತಗಳನ್ನು ತಾಳೆ ನೋಡುವುದಕ್ಕೋಸ್ಕರ ಒಂದೊಂದು ಕ್ಷೇತ್ರದಿಂದ ಒಂದೊಂದು ಬೂತನ್ನು ಆರಿಸಿತ್ತು. ಆದುದರಿಂದ ನಾಲ್ಕು ಬೂತ್‌ಗಳಲ್ಲಿ ತಾಳೆಯಾಗಿಲ್ಲವೆಂದರೆ ನಾಲ್ಕು ಕ್ಷೇತ್ರಗಳಲ್ಲಿ ಆಗಿಲ್ಲವೆಂಬ ತೀರ್ಮಾನಕ್ಕೆ ಬರಬಹುದು. ತಾಳೆ ನೋಡಿದ ಬಳಿಕ ಒಂದೊಂದು ಯಂತ್ರದಲ್ಲಿ ಎಷ್ಟೆಷ್ಟು ಮತಗಳ ವ್ಯತ್ಯಾಸ ಕಂಡುಬಂದಿದೆ ಎಂದು ತಿಳಿಯಹೊರಟರೆ ಸೋಲು ಎದುರಾಗುತ್ತದೆ. ಏಕೆಂದರೆ ಆಯೋಗದ ಪ್ರಕ್ರಿಯೆ ಅಪಾರದರ್ಶಕವೂ ನಿಗೂಢವೂ ಆಗಿದೆ. ಅದು ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಿಲ್ಲ. ವಾಸ್ತವವಾಗಿ ಈ ತಾಳೆ ನೋಡುವ ಪ್ರಕ್ರಿಯೆಯನ್ನು ಅಭ್ಯರ್ಥಿಗಳು ಮತ್ತು ಎಣಿಕೆಯ ಏಜೆಂಟ್‌ಗಳ ಉಪಸ್ಥಿತಿಯಲ್ಲಿ ಮಾಡಿದ ನಂತರವೇ ಫಲಿತಾಂಶವನ್ನು ಘೋಷಿಸಬೇಕಾಗಿತ್ತು. ಆಯೋಗ ತನ್ನ ಈ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲವಾಗಿರುವ ಬಗ್ಗೆ ಸ್ಪಷ್ಟೀಕರಣ ನೀಡುವುದೇ? ಮತ್ತೊಂದು ಗಮನಾರ್ಹ ವಿಷಯವೆಂದರೆ ದೇಶದಲ್ಲಿರುವ ಪ್ರತಿಯೊಂದು ಇಲೆಕ್ಟ್ರಾನಿಕ್ ಮತಯಂತ್ರಕ್ಕೂ ದೃಢೀಕರಣ ಚೀಟು ಕಡ್ಡಾಯಗೊಳಿಸುವ ಬಗ್ಗೆ ಸಂಬಂಧಪಟ್ಟ ಯಾರಿಗೂ ಆಸಕ್ತಿ ಇರುವಂತೆ ತೋರುತ್ತಿಲ್ಲ.

ಗುಜರಾತ್ ಸರಕಾರದೊಳಗಣ ಮೂಲವೊಂದರ ಪ್ರಕಾರ ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಸುಲಭದಲ್ಲಿ ಹ್ಯಾಕ್ ಮಾಡಬಹುದೆಂದು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಹೇಳಿದ್ದಾರೆ. ಮತಯಂತ್ರದ ಚಿಪ್‌ನಲ್ಲಿ ಒಂದು ವಾಕ್ಯವನ್ನು ಸೇರಿಸುವ ಮೂಲಕ ನಿರ್ದಿಷ್ಟ ಶೇಕಡಾವಾರು ಮತಗಳನ್ನು ಒಂದು ಪಕ್ಷದಿಂದ ಇನ್ನೊಂದಕ್ಕೆ ವರ್ಗಾಯಿಸಬಹುದಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಅವರು ಹೊರಗೆಡವಿದ್ದಾರೆ. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಸಲಾಮಿ ವಂಚಕರು ಮತಯಂತ್ರಗಳನ್ನು ಹ್ಯಾಕ್ ಮಾಡಿ ಮತಗಳಲ್ಲಿ ಆಟವಾಡಬಲ್ಲರು.

ಮತಯಂತ್ರ ಚಿಪ್‌ಗಳ ಭದ್ರತೆಯ ಬಗ್ಗೆ ತಯಾರಕರು ಏನು ಹೇಳುತ್ತಾರೆಂದು ನೋಡೋಣ. ಮೈಕ್ರೊಚಿಪ್ ಎಂಬ ತಯಾರಕ ಸಂಸ್ಥೆ ತನ್ನ ಉತ್ಪನ್ನಗಳು ಅತ್ಯಂತ ಸುರಕ್ಷಿತವಾಗಿವೆ ಎಂದು ಹೇಳುತ್ತಲೇ ಅದೇ ವೇಳೆ ಅಪ್ರಾಮಾಣಿಕ, ಕಾನೂನುಬಾಹಿರ ಮಾರ್ಗಗಳ ಮೂಲಕ ಕೋಡ್ ಸಂರಕ್ಷಣೆಯನ್ನು ಭೆೇದಿಸಬಹುದು...... ಕೋಡ್ ಸಂರಕ್ಷಣೆಯ ಅರ್ಥ ನಮ್ಮ ಉತ್ಪನ್ನ ಅಭೇದ್ಯವೆಂದು ಗ್ಯಾರಂಟಿ ನೀಡುತ್ತೇವೆ ಎಂದಲ್ಲ ಎಂದೂ ಕೈತೊಳೆದುಕೊಳ್ಳುತ್ತದೆ! ಅಂದರೆ ಅಪ್ರಾಮಾಣಿಕ ವ್ಯಕ್ತಿಗಳು ಚಿಪ್‌ಗಳನ್ನು ಹ್ಯಾಕ್ ಮಾಡಿ ವ್ಯತ್ಯಾಸಗಳನ್ನು ಮಾಡಲು ಸಾಧ್ಯವಿದೆ ಎಂದಂತಾಯಿತು!

ಗುಜರಾತ್ ಚುನಾವಣೆಗಳಲ್ಲಿ 16ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವಿನ ಅಂತರ 3,000 ಮತಗಳಿಗಿಂತ ಕಡಿಮೆ ಇತ್ತು. ಹೀಗಿರುವಾಗ 2 ಲಕ್ಷ ಮತದಾರರಿರುವ ಕ್ಷೇತ್ರವೊಂದರಲ್ಲಿ ಶೇಕಡಾ 0.5ರಷ್ಟು ಮತಗಳು ಆಚೀಚೆ ಆದರೂ 2,000 ಮತಗಳಿಂದ ಹಿಂದೆ ಬಿದ್ದಂತಹ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಿದೆ. ಇಂತಹ ಸಂದರ್ಭಗಳಲ್ಲಿ ಮರುಎಣಿಕೆಯಂತೂ ತಿರುಕನ ಕನಸೇ ಆಗಲಿದೆ ಏಕೆಂದರೆ ಹೀಗೆ ಕಾನೂನುಬಾಹಿರವಾಗಿ ಅಧಿಕಾರಕ್ಕೆ ಬರುವ ಸರಕಾರವೊಂದು ಮರುಎಣಿಕೆಗೆ ಅವಕಾ ನೀಡುತ್ತದೆಂದು ಊಹಿಸಲೂ ಆಗದು.

ಜಾಗತಿಕವಾಗಿ ಇಲೆಕ್ಟ್ರಾನಿಕ್ ಮತಯಂತ್ರಗಳ ಏಳುಬೀಳುಗಳ ಇತಿಹಾಸದಿಂದ ಕಲಿಯುವುದು ಬೇಕಾದಷ್ಟಿದೆ. 1990ರಿಂದ 2,000 ಇಸವಿಯ ತನಕ ವಿಶ್ವದ ಹಲವಾರು ರಾಷ್ಟ್ರಗಳು ಇಲೆಕ್ಟ್ರಾನಿಕ್ ಮತದಾನವನ್ನು ಜಾರಿಗೆ ತಂದವು. ಆದರೆ ಅನತಿ ಕಾಲದೊಳಗಾಗಿ ಸಂಶಯಗಳು ಮೂಡತೊಡಗಿದವು. 2006ರಲ್ಲಿ ನೆದರ್‌ಲ್ಯಾಂಡ್ ದೇಶದಲ್ಲಿ ನಡೆಸಲಾದ ಪ್ರಯೋಗವೊಂದರಲ್ಲಿ ಇಲೆಕ್ಟ್ರಾನಿಕ್ ಮತಯಂತ್ರಗಳ ಸಾಫ್ಟ್‌ವೇರನ್ನು 5 ನಿಮಿಷಗಳಲ್ಲಿ ಬದಲಾಯಿಸಬಹುದೆಂದು ಪ್ರತ್ಯಕ್ಷ ಮಾಡಿ ತೋರಿಸಲಾಯಿತು. ಹೀಗೆ ಇಲೆಕ್ಟ್ರಾನಿಕ್ ಮತಯಂತ್ರಗಳಲ್ಲಿರುವ ಸಮಸ್ಯೆಗಳಿಗೆ ವ್ಯಾಪಕ ಪ್ರಚಾರ ನೀಡಿದ ಪರಿಣಾಮವಾಗಿ ಸರಕಾರದ ಮೇಲೆ ಸಾರ್ವಜನಿಕರ ಒತ್ತಡ ಹೆಚ್ಚುತ್ತಾ ಸಾಗಿತು. ಅಂತಿಮವಾಗಿ 2007ರಲ್ಲಿ ಇಲೆಕ್ಟ್ರಾನಿಕ್ ಮತದಾನವನ್ನು ನಿಷೇಧಿಸಲಾಯಿತು.

 ಜರ್ಮನಿಯಲ್ಲಿಯೂ ಇಲೆಕ್ಟ್ರಾನಿಕ್ ಮತದಾನವನ್ನು 2009ರಷ್ಟು ಹಿಂದೆ ನಿಲ್ಲಿಸಲಾಗಿದೆ. ಸಾರ್ವಜನಿಕರಿಂದ ಅರ್ಥಪೂರ್ಣ ಪರಿಶೀಲನೆ ಅಸಾಧ್ಯವಿರುವಾಗ ಇಲೆಕ್ಟ್ರಾನಿಕ್ ಮತದಾನ ಅಸಾಂವಿಧಾನಿಕವಾಗುತ್ತದೆ ಎಂದು ಜರ್ಮನಿಯ ಸಾಂವಿಧಾನಿಕ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಅಲ್ಲಿ ಇಲೆಕ್ಟ್ರಾನಿಕ್ ಮತದಾನ ನಿಷೇಧಿಸಲ್ಪಟ್ಟಿದೆ.

ಇಂಗ್ಲೆಂಡ್, ಅಮೆರಿಕ, ಕೆನಡಾದಂತಹ ಮುಂದುವರಿದ ರಾಷ್ಟ್ರಗಳಂತೂ ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಉಪಯೋಗಿಸಿಯೇ ಇಲ್ಲ. ಹೀಗೆ ವಿಶ್ವದ ಹೆಚ್ಚಿನ ಮುಂದುವರಿದ ದೇಶಗಳೆಲ್ಲವೂ ಮತಪತ್ರಗಳನ್ನು ಬಳಸುತ್ತಿರುವಾಗ ನಮ್ಮ ದೇಶ ಇನ್ನೂ ನಂಬಲನರ್ಹವಾದ ಇಲೆಕ್ಟ್ರಾನಿಕ್ ಮತದಾನಕ್ಕೆ ಬಿಗಿಯಾಗಿ ಅಂಟಿಕೊಂಡಿದೆ. ಮತಪತ್ರಗಳಿಗೆ ಮರಳುವ ಇಚ್ಛಾಶಕ್ತಿಯ ಈ ಕೊರತೆಗೆ ಕಾರಣವೇನಿರಬಹುದು? ಇದು ಮಿಲಿಯನ್ ಡಾಲರ್ ಪ್ರಶ್ನೆ.

(ಆಧಾರ: ಜನತಾ ಕ ರಿಪೋರ್ಟರ್; ಕೌಂಟರ್‌ವ್ಯೆ ಲೇಖನಗಳು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)