varthabharthi

ಪ್ರಚಲಿತ

ಕಾಂಗ್ರೆಸ್ ಪುನಃಶ್ಚೇತನ ಸಾಧ್ಯವೇ?

ವಾರ್ತಾ ಭಾರತಿ : 25 Dec, 2017
ಸನತ್ ಕುಮಾರ್ ಬೆಳಗಲಿ

ಕಾಂಗ್ರೆಸ್‌ನ ದೊಡ್ಡ ದೌರ್ಬಲ್ಯವೆಂದರೆ ಅದಕ್ಕೆ ಸ್ವಾತಂತ್ರ ಹೋರಾಟದ ಹಿನ್ನೆಲೆಯಿದ್ದರೂ ಕೂಡಾ ತನ್ನ ಇತಿಹಾಸ ಪರಂಪರೆಯನ್ನು ಜನರಿಗೆ ತಿಳಿಸುವುದರಲ್ಲಿ ಅದು ವಿಫಲಗೊಂಡಿದೆ. ಆರೆಸ್ಸೆಸ್‌ನ ರಾಜಕೀಯ ವೇದಿಕೆಯಾದ ಬಿಜೆಪಿಗೆ ಸ್ವಾತಂತ್ರ ಚಳವಳಿಯ ಹಿನ್ನೆಲೆಯಿಲ್ಲದಿದ್ದರೂ ಅದು ಉಳಿದೆಲ್ಲ ಪಕ್ಷಗಳನ್ನು ಹಿಂದಿಕ್ಕಿ ಮುನ್ನಡೆಯುತ್ತಿರುವುದಕ್ಕೆ ಕಾರಣ ಕಾರ್ಪೊರೇಟ್ ಲಾಬಿಯೊಂದಿಗೆ ಮಾಡಿಕೊಂಡ ಮೈತ್ರಿ ಮತ್ತು ಅವರ ಜೊತೆಗಿರುವ ಯುವಶಕ್ತಿ.


ಗುಜರಾತ್ ವಿಧಾನಸಭಾ ಚುನಾವಣೆ ಮುಗಿದಿದೆ. 99 ಸ್ಥಾನ ಗಳಿಸಿ ಬಿಜೆಪಿ ರಾಜ್ಯದ ಅಧಿಕಾರ ಸೂತ್ರ ಹಿಡಿದಿದೆ. ಕಾಂಗ್ರೆಸ್ ಶಾಸನ ಸಭೆಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ಈ ಚುನಾವಣೆಯಲ್ಲಿ ಜಿಗ್ನೇಶ್ ಮೇವಾನಿ ಜಯಶಾಲಿಯಾಗಿದ್ದಾರೆ. ಹೊಸ ರಾಜಕೀಯ ನಾಯಕತ್ವವೊಂದು ಈ ಚುನಾವಣೆಯಲ್ಲಿ ಹೊರ ಹೊಮ್ಮಿದೆ. ಆದರೂ ಇಪ್ಪತ್ತೆರಡು ವರ್ಷಗಳ ನಿರಂತರ ಆಡಳಿತದ ವೈಫಲ್ಯಗಳ ನಡುವೆಯೂ ಬಿಜೆಪಿ ಅಲ್ಲಿ ಗೆದ್ದಿದೆ. ಗುಜರಾತ್‌ನ ಗೆಲುವು ಬರೀ ಅಭಿವೃದ್ಧಿ ಮಂತ್ರದಿಂದ ದೊರೆತ ಗೆಲುವಲ್ಲ. ಹಾಗೆ ನೋಡಿದರೆ ಅಲ್ಲಿ ಅಹ್ಮದಾಬಾದ್, ಬರೋಡಾ, ಸೂರತ್‌ನಂತಹ ಕೆಲ ನಗರಗಳನ್ನು ಬಿಟ್ಟರೆ ಗ್ರಾಮೀಣ ಪ್ರದೇಶ ಹಾಳು ಕೊಂಪೆಯಾಗಿದೆ. ರೈತರ ಆತ್ಮಹತ್ಯೆಗಳ ಸಂಖ್ಯೆ ಅಲ್ಲಿ ಉಳಿದ ರಾಜ್ಯಗಳಿಗಿಂತ ಹೆಚ್ಚು. ಕೈಗಾರಿಕೆಗಳು ಮುಚ್ಚಿ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಆದರೂ ಬಿಜೆಪಿ ಗೆಲುವು ಸಾಧಿಸಿದ್ದು ಹೇಗೆ? ಮೊದಲನೆಯದಾಗಿ ಕೋಮುವಾದಿ ಅಸ್ತ್ರವನ್ನು ಅದು ಅಲ್ಲಿ ಲಜ್ಜೆಗೆಟ್ಟು ಪ್ರದರ್ಶಿಸಿತು.

ಸ್ವತಃ ಪ್ರಧಾನಿ ಮೋದಿ ‘‘ತನ್ನನ್ನು ಸೋಲಿಸಲು ಪಾಕಿಸ್ತಾನ ಸಂಚು ಮಾಡಿದೆ’’ ಎಂದು ಆರೋಪಿಸಿದ್ದರು. ಎರಡನೆಯದಾಗಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಕಾಗ್ರೆಸ್ - ಬಿಜೆಪಿ ನಡುವೆ ನೇರ ಹಣಾಹಣಿ ಮಾತ್ರ ಇರಲಿಲ್ಲ. ಅನೇಕ ಕಡೆ ಬಿಎಸ್ಪಿ ಮತ್ತು ಎನ್‌ಸಿಪಿಗಳು ತೊಡರುಗಾಲು ಹಾಕಿದ್ದರಿಂದ ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗಿ ಆಳುವ ಪಕ್ಷಕ್ಕೆ ಅನುಕೂಲವಾಯಿತು. ಅನೇಕ ಕಡೆ ಜಯಶಾಲಿಯಾದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವಿನ ಅಂತರ ಅತ್ಯಂತ ಕಡಿಮೆ ಇತ್ತು. ನಾಲ್ಕನೆಯದಾಗಿ ರಾಹುಲ್ ಗಾಂಧಿ ಎಷ್ಟೇ ಹಿಂದೂ ದೇವಾಲಯಗಳಿಗೆ ಹೋಗಿ ದರ್ಶನ ಪಡೆದರೂ ಕಾಂಗ್ರೆಸ್ ಸರಕಾರ ರಚಿಸುವಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇದಕ್ಕೆ ಇನ್ನೊಂದು ಮುಖ್ಯ ಕಾರಣವೇನೆಂದರೆ ಕಾಂಗ್ರೆಸ್‌ನ್ನು ಮುಸ್ಲಿಂ ಪರ ಪಕ್ಷ ಎಂದು ಬ್ರಾಂಡ್ ಮಾಡುವಲ್ಲಿ ಸಂಘ ಪರಿವಾರ ಯಶಸ್ವಿಯಾಗಿದೆ. ಆ ಪರಿ ಹಿಂದೂಗಳಲ್ಲಿ ಸಂದೇಹದ ಅಡ್ಡಗೋಡೆ ಎದ್ದುನಿಂತಿದೆ.

ಇನ್ನೊಂದೆಡೆ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಶಾಲಿಯಾಗಿರುವುದನ್ನು ಗಮನಿಸಿದರೆ ಗುಜರಾತಿನ ಮುಸಲ್ಮಾನರು ಒಂದು ವಿಧದ ಭೀತಿಯ ವಾತಾವರಣದಲ್ಲಿ ಬದುಕುತ್ತಿದ್ದಾರೆ, ಬಿಜೆಪಿಗೆ ಮತ ಹಾಕದಿದ್ದರೆ ತಮ್ಮ ಬದುಕು ಸುರಕ್ಷಿತವಾಗಿರುವುದಿಲ್ಲ, ಸೆಕ್ಯುಲರ್ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದಿಂದ ತಮಗೆ ರಕ್ಷಣೆ ಸಿಗುವುದಿಲ್ಲ ಎಂಬ ಆತಂಕ ಅವರಲ್ಲಿ ಮನೆಮಾಡಿದೆ. ಗುಜರಾತ್ ಚುನಾವಣೆಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾಂಗ್ರೆಸ್ ಒಂದೇ ಏಕಾಂಗಿಯಾಗಿ ಬಿಜೆಪಿಯನ್ನು ಎದುರಿಸಿ ಗೆಲ್ಲಲು ಸಾಧ್ಯವಿಲ್ಲ. ಗುಜರಾತ್‌ನಲ್ಲಿ ದಲಿತ ಸ್ವಾಭಿಮಾನಿ ಚಳವಳಿಯ ಜಿಗ್ನೇಶ್ ಮೇವಾನಿ, ಹಿಂದುಳಿದ ವರ್ಗಗಳ ಯುವ ನಾಯಕ ಅಲ್ಪೇಶ್ ಠಾಕೂರ್ ಹಾಗೂ ಪಾಟಿದಾರ್ ಮೀಸಲಾತಿ ಚಳವಳಿಯ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲದಿದ್ದರೆ ಇಷ್ಟು ಸ್ಥಾನವನ್ನು ಅದು ಗೆಲ್ಲಲು ಸಾಧ್ಯವಿರಲಿಲ್ಲ. ಗುಜರಾತ್ ಚುನಾವಣೆಯ ಹಿನ್ನೆಲೆಯಿಂದ ಮುಂಬರುವ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಮತ್ತು 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವ ವಹಿಸಿದರೂ ಕೂಡಾ ಕಾಂಗ್ರೆಸ್ ಗೆಲ್ಲುವುದು ಅಷ್ಟು ಸುಲಭವಲ್ಲ. ಗೆಲುವು ಸಾಧಿಸಬೇಕಿದ್ದರೆ ಅದು ತನ್ನನ್ನು ಬದಲಾವಣೆಗೆ ಒಡ್ಡಿಕೊಳ್ಳಬೇಕಾಗುತ್ತದೆ.

ಕಾಂಗ್ರೆಸ್‌ನ ದೊಡ್ಡ ದೌರ್ಬಲ್ಯವೆಂದರೆ ಅದಕ್ಕೆ ಸ್ವಾತಂತ್ರ ಹೋರಾಟದ ಹಿನ್ನೆಲೆಯಿದ್ದರೂ ಕೂಡಾ ತನ್ನ ಇತಿಹಾಸ ಪರಂಪರೆಯನ್ನು ಜನರಿಗೆ ತಿಳಿಸುವುದರಲ್ಲಿ ಅದು ವಿಫಲಗೊಂಡಿದೆ. ಆರೆಸ್ಸೆಸ್‌ನ ರಾಜಕೀಯ ವೇದಿಕೆಯಾದ ಬಿಜೆಪಿಗೆ ಸ್ವಾತಂತ್ರ ಚಳವಳಿಯ ಹಿನ್ನೆಲೆಯಿಲ್ಲದಿದ್ದರೂ ಅದು ಉಳಿದೆಲ್ಲ ಪಕ್ಷಗಳನ್ನು ಹಿಂದಿಕ್ಕಿ ಮುನ್ನಡೆಯುತ್ತಿರುವುದಕ್ಕೆ ಕಾರಣ ಕಾರ್ಪೊರೇಟ್ ಲಾಬಿಯೊಂದಿಗೆ ಮಾಡಿಕೊಂಡ ಮೈತ್ರಿ ಮತ್ತು ಅವರ ಜೊತೆಗಿರುವ ಯುವಶಕ್ತಿ.

ದೇಶದೊಳಗಿನ ಇಪ್ಪತ್ತರೊಳಗಿನ ಯುವಕರನ್ನು ಆಕರ್ಷಿಸುವಲ್ಲಿ ಬಿಜೆಪಿ ಕೊಂಚಮಟ್ಟಿಗೆ ಯಶಸ್ವಿಯಾಗಿದೆ. ಈ ಯುವಕರು ಒಂದು ಸಮುದಾಯಕ್ಕೆ ಸೇರಿದ ಮಧ್ಯಮ ವರ್ಗದ ತರುಣರಾಗಿದ್ದಾರೆ. ಇವರಿಗೆ ಹಿಂದುತ್ವದ ನಶೆ ಏರಿಸುವಲ್ಲಿ ಸಂಘ ಪರಿವಾರ ಸಫಲವಾಗಿದೆ. ಹೊಸ ಪೀಳಿಗೆಯಲ್ಲಿ ಗಾಂಧಿ, ನೆಹರೂರ ಬಗ್ಗೆ ತಿರಸ್ಕಾರ ಮಾಡುವಂತೆ ಸುಳ್ಳುಗಳನ್ನು ಅದು ಸೃಷ್ಟಿಸಿದೆ. ಭಾರತದ ಎಲ್ಲ ಸಮಸ್ಯೆಗಳಿಗೆ ಈ ದೇಶವನ್ನು ಅರುವತ್ತು ವರ್ಷ ಆಳಿದ ಕಾಂಗ್ರೆಸ್ ಕಾರಣ... ಜಾತ್ಯತೀತತೆ ಹೆಸರಿನಲ್ಲಿ ಹಿಂದೂಗಳಿಗೆ ಅನ್ಯಾಯ ಮಾಡಲಾಗಿದೆ, ಅಲ್ಪಸಂಖ್ಯಾತರನ್ನು ಓಲೈಸಲಾಗುತ್ತದೆ... ಇದೆಲ್ಲ ಸರಿಯಾಗಬೇಕಾದರೆ ಭಾರತ ಹಿಂದೂ ರಾಷ್ಟ್ರವಾಗಬೇಕು, ಮೀಸಲಾತಿ ಎಂಬುದು ಇರಬಾರದು ಎಂದು ಮೇಲ್ಜಾತಿ ಯುವಕರಲ್ಲಿ ಮಾತ್ರವಲ್ಲ ಹಿಂದುಳಿದ ಸಮುದಾಯದವರಲ್ಲಿ ಅದು ವಿಷ ತುಂಬಿದೆ.

ಆದರೆ, ಸಂಘಪರಿವಾರ ಯುವಕರಿಗೆ ನೀಡಿದ ಸಿದ್ಧಾಂತಕ್ಕೆ ಪ್ರತಿಯಾಗಿ ತರುಣರನ್ನು ಆಕರ್ಷಿಸಬಲ್ಲಂತಹ ಒಂದು ಸಿದ್ಧಾಂತ ಮತ್ತು ಕಾರ್ಯಕ್ರಮ ಕಾಂಗ್ರೆಸ್ ಬಳಿ ಇಲ್ಲ. ನೆಹರೂ ಕಾಲದ ಉದಾರವಾದಿ ಜಾತ್ಯತೀತ ಸಮಾಜವಾದಿ ಆಶಯಗಳಿಗೆ ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದಾಗಲೇ ಎಳ್ಳುನೀರು ಬಿಡಲಾಯಿತು. ಕಾಂಗ್ರೆಸ್‌ನ ಅವನತಿ ಆರಂಭವಾಗಿದ್ದು ಇಂದಿರಾ ಗಾಂಧಿ ಅವರ ದುರಂತ ಸಾವಿನ ನಂತರ, ಅಲ್ಲಿನ ವರೆಗೆ ಅವರು ಗರೀಬೀ ಹಠಾವೋ, ಬ್ಯಾಂಕ್ ರಾಷ್ಟ್ರೀಕರಣದಂತಹ ಕಾರ್ಯಕ್ರಮಗಳನ್ನು ನೀಡಿ ದೇಶದ ಬಡವರನ್ನು ಹೇಗೋ ಹಿಡಿದಿಟ್ಟುಕೊಂಡಿದ್ದರು. ದಲಿತರು, ಹಿಂದುಳಿದವರು, ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ಎಲ್ಲ ಜಾತಿಯ ಬಡವರು ಆಗ ಕಾಂಗ್ರೆಸ್‌ನ ಜೊತೆಗಿದ್ದರು.

ಆದರೆ, ಇಂದಿರಾ ಗಾಂಧಿ ಅವರು 1984ರಲ್ಲಿ ಹಂತಕರ ಗುಂಡಿಗೆ ಬಲಿಯಾದ ನಂತರ ರಾಜೀವ್ ಗಾಂಧಿ ಪಕ್ಷದ ನೇತೃತ್ವ ವಹಿಸಿಕೊಂಡು ದೇಶದ ಪ್ರಧಾನಿಯಾದರು. ಅವರಿಗೆ ಸರಿಯಾದ ಸಲಹೆಗಾರರು ಇರಲಿಲ್ಲ. ಅರುಣ್ ನೆಹರೂ ಅಂಥವರನ್ನು ನಂಬಿದ ರಾಜೀವ್ ಅವರ ಮಾತನ್ನು ಕೇಳಿ ತಾವೂ ದಾರಿ ತಪ್ಪಿದರು, ಪಕ್ಷವನ್ನೂ ದಾರಿ ತಪ್ಪಿಸಿದರು. ಶಬಾನು ಪ್ರಕರಣದಲ್ಲಿ ಅವರು ಕೈಗೊಂಡ ತೀರ್ಮಾನದಿಂದ ಹಿಂದೂಗಳು ಕೋಪಗೊಂಡಿದ್ದಾರೆಂದು ಅಯೋಧ್ಯೆಯ ಬಾಬರಿ ಮಸೀದಿಯ ಬಾಗಿಲು ತೆಗೆಸಿದರು. ಈ ಮೃದು ಹಿಂದುತ್ವ ನೀತಿಯೇ ಮುಂದಿನ ಎಲ್ಲ ಅನಾಹುತಗಳಿಗೆ ಕಾರಣ. ತಮ್ಮ ತಾತ ಜವಾಹರಲಾಲ್ ನೆಹರೂ ಈ ಬೀಗವನ್ನು ಯಾಕೆ ಹಾಕಿಸಿದ್ದರೆಂಬುದನ್ನು ಅವರು ವಿಚಾರ ಮಾಡಲಿಲ್ಲ. ನಂತರ ಶ್ರೀಲಂಕಾ ಆಂತರಿಕ ಬಿಕ್ಕಟ್ಟಿನಲ್ಲಿ ಶಾಂತಿ ಪಾಲನಾ ಪಡೆಯನ್ನು ಅಲ್ಲಿ ಕಳುಹಿಸಿ ಇನ್ನೊಂದು ವಿವಾದವನ್ನು ಮೈಮೇಲೆ ಹಾಕಿಕೊಂಡರು. ಈ ಕಾಲ ಘಟ್ಟದಲ್ಲಿ ಜಾಗತಿಕವಾಗಿ ಮಹತ್ವದ ಬೆಳವಣಿಗೆಗಳಾಗತೊಡಗಿದವು.

ಎಂಬತ್ತರ ದಶಕದ ಕೊನೆಯಲ್ಲಿ ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಪತನಗೊಂಡಿತು. ರಾಜೀವ್ ಗಾಂಧಿ ಅವರು ತಮಿಳು ಉಗ್ರರ ಮಾನವ ಬಾಂಬ್‌ಗೆ ಬಲಿಯಾದರು. ರಾಜೀವ್ ಗಾಂಧಿ ದುರಂತ ಸಾವಿನ ನಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಪಿ.ವಿ.ನರಸಿಂಹ ರಾವ್ ಕಾಲದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆರ್ಥಿಕ ಧೋರಣೆಗಳಿಗೆ ತಿಲಾಂಜಲಿ ನೀಡಲಾಯಿತು. ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯನ್ನು ದೇಶದ ಮೇಲೆ ಹೇರಲಾಯಿತು. ಗ್ಯಾಟ್..., ಡಂಕೆಲ್... ಒಪ್ಪಂದಗಳಿಗೆ ಅಂಕಿತ ಹಾಕಲಾಯಿತು. ದೇಶದಲ್ಲಿ ಜಾಗತೀಕರಣ ಪ್ರವೇಶದೊಂದಿಗೆ ಹಿಂದೂ ಕೋಮುವಾದವೂ ತಲೆ ಎತ್ತಿತು. ಮಾರುಕಟ್ಟೆ ಆರ್ಥಿಕ ನೀತಿಗಳನ್ನೇ ವಿರೋಧಿಸಿ ಹೋರಾಡಬೇಕಿದ್ದ ಜನಸಮುದಾಯವನ್ನು ಮುಂದೆ ಮಸೀದಿಯ ಕಲಹದಲ್ಲಿ ಮುಳುಗಿಸಲಾಯಿತು ಎಲ್.ಕೆ. ಅಡ್ವಾಣಿ ಗುಜರಾತ್‌ನ ಸೋಮನಾಥದಿಂದ ಅಯೋಧ್ಯೆಗೆ ರಥಯಾತ್ರೆ ಹೊರಟರು. ಈ ರಥದ ಗಾಲಿಗೆ ಸಿಕ್ಕು ದೇಶದ ಸಹ ಬಾಳ್ವೆ ಸಂಸ್ಕೃತಿ ತತ್ತರಿಸಿ ಹೋಯಿತು.

1992ರ ಡಿಸೆಂಬರ್ 6ನೆ ತಾರೀಕು ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ವೌನ ಸಮ್ಮತಿಯೊಂದಿಗೆ ಅಯೋಧ್ಯೆಯ ಬಾಬರಿ ಮಸೀದಿಯನ್ನು ನೆಲಸಮಗೊಳಿಸಲಾಯಿತು. ಸಂಘಿಗಳು ಮಸೀದಿ ಉರುಳಿಸುತ್ತಾರೆಂದು ಗೊತ್ತಿದ್ದರೂ ಪಿ.ವಿ.ಎನ್. ಕರಸೇವೆಗೆ ಅನುಮತಿ ನೀಡಿದರು. ಮಸೀದಿ ರಕ್ಷಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಕಲ್ಯಾಣ್ ಸಿಂಗ್ ಮಸೀದಿ ಉರುಳುವಾಗ ಪೊಲೀಸರು ಸುಮ್ಮನೆ ನಿಲ್ಲುವಂತೆ ವೌನ ಸಂದೇಶ ನೀಡಿದರು. ಇದೆಲ್ಲ ನಡೆದು ಕಾಲು ಶತಮಾನ ಗತಿಸಿದೆ. ಬಾಬರಿ ಮಸೀದಿ ಕೆಡವಿದ ಜಾಗದಲ್ಲಿ ಬೃಹತ್ ಮಂದಿರ ನಿರ್ಮಿಸುವ ತಯಾರಿ ನಡೆದಿದೆ. ಆಗ ಅಲ್ಪಸಂಖ್ಯಾತರ ನಂಬಿಕೆ ಕಳೆದುಕೊಂಡ ಕಾಂಗ್ರೆಸ್ ಈಗ ಶಕ್ತಿಹೀನವಾಗಿದೆ.

ದೇಶವನ್ನು ಹಿಂದೂರಾಷ್ಟ್ರ ನಿರ್ಮಾಣದ ತನ್ನ ಗುರಿಯತ್ತ ಕೊಂಡೊಯ್ಯಲು ಸಂಘಪರಿವಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಂಘಪರಿವಾರವನ್ನು ಎದುರಿಸಲು ಕಾಂಗ್ರೆಸ್ ತನ್ನದೇ ಆದ ಸಿದ್ಧಾಂತ ಹಾಗೂ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿಲ್ಲ. ಕಾಂಗ್ರೆಸ್‌ಗೆ ಶಿಸ್ತುಬದ್ಧ ಕಾರ್ಯಕರ್ತರ ಪಡೆಯೂ ಇಲ್ಲ. ಚುನಾವಣೆ ಬಂದಾಗ ಅಧಿಕಾರಕ್ಕಾಗಿ ಬರುವ ಕಂಟ್ರಾಕ್ಟರ್‌ಗಳು, ರಿಯಲ್ ಎಸ್ಟೇಟ್ ಮಾಫಿಯಾಗಳು, ಲಾಭಕೋರರು ಅದರಲ್ಲಿ ತುಂಬಿದ್ದಾರೆ. ಅವರು ಹಗಲು ಕಾಂಗ್ರೆಸ್‌ನಲ್ಲಿರುತ್ತಾರೆ. ರಾತ್ರಿ ಸಂಘಿಗಳ ಜೊತೆಯಿರುತ್ತಾರೆ. ಇನ್ನು ಎಡ ಪಕ್ಷಗಳು ಮತ್ತು ದಲಿತ ಸಂಘಟನೆಗಳು ಮಾತ್ರ ಸಂಘಪರಿವಾರವನ್ನು ಸೈದ್ಧಾಂತಿಕವಾಗಿ ಎದುರಿಸುತ್ತಿವೆ. ಆದರೆ, ಎಡಪಕ್ಷಗಳ ಜೊತೆಗಿರುವ ಸಂಘಟಿತ ಕಾರ್ಮಿಕ ವರ್ಗ ಫ್ಯಾಶಿಸಂನ್ನು ಎದುರಿಸುವ ತನ್ನ ಐತಿಹಾಸಿಕ ಕರ್ತವ್ಯದಲ್ಲಿ ವಿಫಲಗೊಂಡಿದ್ದರಿಂದ ದೇಶದಲ್ಲಿ ಎಲ್ಲೆಡೆ ಒಡಕಿನ ದನಿಗಳು ಕೇಳಿಬರುತ್ತಿವೆ.

ಇವೆಲ್ಲದರ ಒಟ್ಟು ಪರಿಣಾಮವೆಂದರೆ ದೇಶದ ಸಂವಿಧಾನ ಅಪಾಯದಲ್ಲಿದೆ. ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎದುರಾಗಿದೆ. ಈ ಜಾತ್ಯತೀತ ಜನತಂತ್ರದ ಸಮಾಧಿಯ ಮೇಲೆ ಹಿಂದೂರಾಷ್ಟ್ರ ನಿರ್ಮಿಸಲು ಆರೆಸ್ಸೆಸ್ ಷಡ್ಯಂತ್ರ ರೂಪಿಸಿದೆ. ಇದರೊಂದಿಗೆ ಕಾರ್ಪೊರೇಟ್ ಬಂಡವಾಳಶಾಹಿ ಕೈಗೂಡಿಸಿದೆ. ಹಿಂದೂ ಕೋಮುವಾದ ಹಾಗೂ ಕಾರ್ಪೊರೇಟ್ ಶಕ್ತಿಗಳ ಮೈತ್ರಿಯಿಂದ ಪರಿಸ್ಥಿತಿ ಹದಗೆಡುತ್ತಿದೆ. ಈ ಅಪಾಯದಿಂದ ದೇಶವನ್ನು ಪಾರು ಮಾಡಬೇಕಾದರೆ ಕಾಂಗ್ರೆಸ್ ತನ್ನ ನವಉದಾರವಾದಿ ಆರ್ಥಿಕ ನೀತಿಗಳನ್ನು ಕೈಬಿಡಬೇಕು. ಅದು ಮತ್ತೆ ನೆಹರೂವಾದಕ್ಕೆ ಮರಳಬೇಕು. ಯುವಕರನ್ನು ಆರ್ಕರ್ಷಿಸುವ ಕಾರ್ಯಕ್ರಮಗಳನ್ನು ನೀಡಬೇಕು. ಎಡಪ್ರಜಾಪ್ರಭುತ್ವವಾದಿ ಶಕ್ತಿಗಳ ಜೊತೆ ಮೈತ್ರಿಗೆ ಮುಂದಾಗಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)