varthabharthi

ಸಂಪಾದಕೀಯ

ಕೆ.ಆರ್. ನಗರ ಫಲಿತಾಂಶ: ಮೂಗು ಕತ್ತರಿಸಿಕೊಂಡ ಬಿಜೆಪಿ

ವಾರ್ತಾ ಭಾರತಿ : 25 Dec, 2017

ಜಯಲಲಿತಾ ಅವರು ನಿಧನರಾದ ಬೆನ್ನಿಗೇ, ತಮಿಳುನಾಡಿನ ರಾಜಕೀಯದೊಳಗೆ ಮೂಗು ತೂರಿಸಲು ಹೊರಟ ಬಿಜೆಪಿಯ ರಾಷ್ಟ್ರೀಯ ನಾಯಕರು ಮೂಗು ಕತ್ತರಿಸಿಕೊಂಡಿದ್ದಾರೆ. ಆರ್.ಕೆ.ನಗರ ವಿಧಾನಸಭಾ ಚುನಾವಣೆಯಲ್ಲಿ ತಮಿಳರು ಮುಟ್ಟಿ ನೋಡಿಕೊಳ್ಳುವಂತಹ ಏಟನ್ನು ಬಿಜೆಪಿಯ ದಿಲ್ಲಿ ವರಿಷ್ಠರಿಗೆ ನೀಡಿದ್ದಾರೆ. ದಕ್ಷಿಣ ಭಾರತದ ರಾಜಕೀಯದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಜಯಲಲಿತಾ ಅನುಪಸ್ಥಿತಿಯನ್ನು ಬಳಸಿಕೊಳ್ಳಲು ಹೊರಟ ಬಿಜೆಪಿಯ ಯತ್ನ ಈ ಮೂಲಕ ವಿಫಲವಾದಂತಾಗಿದೆ. ಆರ್.ಕೆ. ನಗರದ ಫಲಿತಾಂಶಕ್ಕೆ ಭವಿಷ್ಯದ ತಮಿಳುನಾಡಿನ ಹಣೆಬರಹ ಬರೆಯುವ ಶಕ್ತಿಯಿದೆ. ಜಯಲಲಿತಾ ನಿರ್ಗಮನದ ಬಳಿಕವೂ ಶಶಿಕಲಾ ತಮಿಳುನಾಡಿನ ಜನರ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿಲ್ಲ ಎನ್ನುವ ಅಂಶವನ್ನು ಆರ್. ಕೆ. ನಗರ ಚುನಾವಣಾ ಫಲಿತಾಂಶ ಬಹಿರಂಗಪಡಿಸಿದೆ.

ಎಡಿಎಂಕೆಯ ಉತ್ತರಾಧಿಕಾರಿಗಳಾಗಿ ಸರಕಾರವನ್ನು ಹಂಚಿಕೊಂಡ ಸಮಯಸಾಧಕ ನಾಯಕರ ಬುಡಕ್ಕೇ ಫಲಿತಾಂಶ ಕೊಡಲಿಯೇಟು ನೀಡಿದೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿರ್ಗಮನದ ಬಳಿಕ ಅವರ ಉತ್ತರಾಧಿಕಾರಿಯಾಗಲು ಗುಂಪಿನ ನಡುವೆ ಪೈಪೋಟಿ ನಡೆಯಿತು. ಜಯಲಲಿತಾ ಅವರ ಆಪ್ತ ಗೆಳತಿ ಶಶಿಕಲಾ ಅವರು ಉತ್ತರಾಧಿಕಾರಿಯಾಗಿ ಪಳನಿ ಸ್ವಾಮಿಯನ್ನು ಆರಿಸಿದಾಗ, ಅದು ಸಹಜವಾಗಿಯೇ ಪನ್ನಿರ್‌ಸೆಲ್ವಂ ಅವರಿಗೆ ಆಘಾತ ತಂದಿತ್ತು. ಯಾಕೆಂದರೆ, ಈ ಹಿಂದೆ ಜಯಲಲಿತಾ ಜೈಲಿಗೆ ಹೋದಾಗ ಅವರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡವರು ಪನ್ನೀರ್ ಸೆಲ್ವಂ.

ಜಯಲಲಿತಾರ ನಂಬಿಕಸ್ತ ಎಂದು ಅದಾಗಲೇ ಗುರುತಿಸಿಕೊಂಡಿದ್ದ ಸೆಲ್ವಂ, ಮುಂದಿನ ಮುಖ್ಯಮಂತ್ರಿಯಾಗಬಹುದು ಎನ್ನುವುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಅವೆಲ್ಲವನ್ನು ಹುಸಿಗೊಳಿಸಿ ಪಳನಿಸ್ವಾಮಿ ಅವರನ್ನು ಶಶಿಕಲಾ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದರು. ಇದು ಪನ್ನೀರ್ ಸೆಲ್ವಂ ಅವರ ಬಂಡಾಯಕ್ಕೆ ಕಾರಣವಾಯಿತು. ಬಂಡಾಯ ಏಳುವಷ್ಟು ರಾಜಕೀಯ ಶಕ್ತಿಯಾಗಲಿ, ಆತ್ಮಶಕ್ತಿಯಾಗಲಿ ಇಲ್ಲದ, ಕೇವಲ ಜಯಲಲಿತಾ ಅವರ ಕಾಲಾಳುವಾಗಿಯಷ್ಟೇ ಬಳಕೆಯಲ್ಲಿದ್ದ ಪನ್ನೀರ್ ಸೆಲ್ವಂರನ್ನು ಬಳಸಿಕೊಂಡದ್ದು ಕೇಂದ್ರದ ಬಿಜೆಪಿ. ತಮಿಳುನಾಡಿನಲ್ಲಿ ಎಡಿಎಂಕೆಯನ್ನು ದುರ್ಬಲಗೊಳಿಸಿ, ಅಲ್ಲಿ ತನ್ನ ಬೇರನ್ನು ಊರುವುದು ಬಿಜೆಪಿಯ ಗುರಿಯಾಗಿತ್ತು. ನಿರೀಕ್ಷೆಯಂತೆ ಶಶಿಕಲಾ ಜೈಲು ಸೇರಿದರು.

ಪನ್ನೀರ್ ಸೆಲ್ವಂ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ಪಳನಿಸ್ವಾಮಿಯ ಸರಕಾರವನ್ನು ಬ್ಲಾಕ್ ಮೇಲ್ ಮಾಡ ತೊಡಗಿತು. ರಾಜಕೀಯವಾಗಿ ಯಾವ ರೀತಿಯಲ್ಲೂ ಶಕ್ತಿಯಾಗಿರದ ಪನ್ನೀರ್ ಸೆಲ್ವಂ ಅವರನ್ನು ಮಾಧ್ಯಮಗಳ ಮೂಲಕ ಬಿಜೆಪಿ ‘ಹುಲಿ’ಯಾಗಿ ಬಿಂಬಿಸಿತು. ಜೊತೆಗೆ ಶಶಿಕಲಾ ಅವರ ಆಪ್ತರೂ, ಪಳನಿ ಸ್ವಾಮಿ ನೇತೃತ್ವದ ಸರಕಾರ ರಚನೆಯಲ್ಲಿ ಮುಂಚೂಣಿಯಲ್ಲಿ ಇದ್ದ ದಿನಕರನ್ ಅವರನ್ನು ಚುನಾವಣಾ ಆಯೋಗದ ಮೂಲಕ ಕೇಂದ್ರ ಬಿಜೆಪಿ ಬೇಟೆಯಾಡಿತು. ಲಂಚ ಪ್ರಕರಣದಲ್ಲಿ ಸಿಲುಕಿಕೊಂಡ ದಿನಕರನ್ ಜೈಲು ಸೇರುವಂತಾಯಿತು. ಒಂದಡೆ ಶಶಿಕಲಾ ಜೈಲು ಸೇರಿದ್ದಾರೆ. ಮಗದೊಂದೆಡೆ ಪಕ್ಷದ ಪ್ರಮುಖ ಶಕ್ತಿಯಾಗಿರುವ ದಿನಕರನ್ ಕೂಡ ಲಂಚ ಪ್ರಕರಣದಲ್ಲಿ ಸಿಲುಕಿಕೊಂಡು ತನಿಖೆ ಎದುರಿಸುತ್ತಿದ್ದಾರೆ.

ಈ ಹೊತ್ತಿನಲ್ಲಿ ಪನ್ನೀರ್ ಸೆಲ್ವಂ ಅವರನ್ನು ಮುಂದಿಟ್ಟು ಕೇಂದ್ರ ಪಳನಿಸ್ವಾಮಿ ಸರಕಾರದ ಮೇಲೆ ಒತ್ತಡ ಹಾಕುತ್ತಿತ್ತು. ಶಶಿಕಲಾ ಅವರನ್ನು ನಂಬಿದರೆ ಮುಂದುವರಿಯುವಂತಿಲ್ಲ ಎಂದು ಭಾವಿಸಿದ ಮುಖ್ಯಮಂತ್ರಿ ಪಳನಿ ಸ್ವಾಮಿ ಶಶಿಕಲಾ ಸೆರಗನ್ನು ಬಿಟ್ಟು ಪ್ರಧಾನಿ ಮೋದಿಯ ವರ್ಚಸ್ಸಿನ ಒತ್ತಡಕ್ಕೆ ಬಾಗಿದರು. ಒಂದು ರೀತಿಯಲ್ಲಿ ಬಿಜೆಪಿ ವರಿಷ್ಠರ ಮಧ್ಯಸ್ಥಿಕೆಯ ಪರಿಣಾಮವಾಗಿಯೇ ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಒಂದಾದರು. ಪನ್ನೀರ್ ಸೆಲ್ವಂ ಪರೋಕ್ಷವಾಗಿ ಬಿಜೆಪಿ ಪ್ರತಿನಿಧಿಯಾಗಿಯೇ ಸರಕಾರವನ್ನು ಸೇರ್ಪಡೆಗೊಂಡರು. ಶಶಿಕಲಾ ಜೈಲೊಳಗೆ ಒಬ್ಬಂಟಿಯಾದರು. ಆ ಸಂದರ್ಭದಲ್ಲೂ ಅವರ ಜೊತೆಗಿದ್ದುದು ದಿನಕರನ್ ಮಾತ್ರ.

ಜಯಲಲಿತಾ ಅವರ ಉತ್ತರಾಧಿಕಾರಿ ಯಾರು ಎನ್ನುವುದನ್ನು ನಿರ್ಧರಿಸಬೇಕಾದವರು ತಮಿಳುನಾಡಿನ ಜನತೆ. ಅವರ ಒಲವು ಯಾರ ಕಡೆಗಿದೆ ಎನ್ನುವುದನ್ನು ಮಾಧ್ಯಮಗಳ ವರದಿಯ ಆಧಾರದಲ್ಲಿ ನಿರ್ಧರಿಸುವಂತಿಲ್ಲ. ಯಾಕೆಂದರೆ ಮಾಧ್ಯಮಗಳ ವರದಿಗಳೆಲ್ಲ ಕೇಂದ್ರದ ಬಿಜೆಪಿ ವರಿಷ್ಠರ ಮೂಗಿನ ನೇರಕ್ಕೆ ಪ್ರಕಟವಾಗುತ್ತಿತ್ತು. ಈಗ ಶಶಿಕಲಾ ಬಣಕ್ಕೆ ಒಂದೇ ಒಂದು ಆಶಾಕಿರಣವಾಗಿ ಉಳಿದದ್ದು ಜಯಲಲಿತಾ ಅವರ ನಿರ್ಗಮನದಿಂದ ಖಾಲಿ ಉಳಿದಿರುವ ಆರ್. ಕೆ. ನಗರ ಕ್ಷೇತ್ರ. ಹಲವು ವರ್ಷಗಳಿಂದ ಜಯಲಲಿತಾ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಇದಾಗಿರುವುದರಿಂದ, ಈ ಕ್ಷೇತ್ರಕ್ಕೆ ತಮಿಳುನಾಡಿನ ಜನರು ಯಾರನ್ನು ಆರಿಸುತ್ತಾರೋ ಅವರು ಸಹಜವಾಗಿಯೇ ಜಯಲಲಿತಾ ಉತ್ತರಾಧಿಕಾರಿಯಾಗಿ ಬಿಂಬಿತವಾಗುತ್ತಾರೆ.

ಆದುದರಿಂದಲೇ ಶಶಿಕಲಾ ಬಣಕ್ಕೆ ಈ ಕ್ಷೇತ್ರವನ್ನು ಗೆಲ್ಲುವುದು ಅತ್ಯಗತ್ಯವಾಗಿತ್ತು. ಆದರೆ ಎಡಿಎಂಕೆ ಪಕ್ಷವೇ ಅವರಿಗೆ ವಿರುದ್ಧವಿತ್ತು. ಸರಕಾರವೂ ವಿರೋಧಿಗಳ ಕೈಯಲ್ಲಿತ್ತು. ಜೊತೆಗೆ ವಿರೋಧಿಗಳಿಗೆ ಕೇಂದ್ರ ಸರಕಾರದ ಆಶೀರ್ವಾದ ಬೇರೆ. ಇತ್ತ ಶಶಿಕಲಾ ಜೈಲಲ್ಲಿದ್ದಾರೆ. ಆದರೆ, ದಿನಕರನ್ ಆರ್. ಕೆ. ನಗರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಇಳಿದು ಬಿಟ್ಟರು. ಜಯಲಲಿತಾ ಅವರ ಪಕ್ಷದ ಲಾಂಛನದ ಬಲವೂ ದಿನಕರನ್‌ಗೆ ಇರಲಿಲ್ಲ. ಶಶಿಕಲಾ ಬೆಂಬಲಿತ ದಿನಕರನ್ ಬಣಕ್ಕೆ ಈ ಕ್ಷೇತ್ರ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ದಿನಕರನ್ ಈ ಕ್ಷೇತ್ರವನ್ನು ಕಳೆದುಕೊಂಡರೆ ಶಶಿಕಲಾ ರಾಜಕೀಯ ಬದುಕೂ ಅಲ್ಲಿಗೇ ಮುಗಿದು ಬಿಡುತ್ತಿತ್ತು. ಇದೀಗ ನೋಡಿದರೆ ಫೀನಿಕ್ಸ್ ಹಕ್ಕಿಯಂತೆ ಆರ್. ಕೆ. ನಗರದಲ್ಲಿ ಶಶಿಕಲಾ ಎದ್ದು ನಿಂತಿದ್ದಾರೆ.

ಜಯಲಲಿತಾ ಜೊತೆಗಿದ್ದ ಮತದಾರರು ಶಶಿಕಲಾ ಕೈ ಬಿಟ್ಟಿಲ್ಲ ಎನ್ನುವುದನ್ನು ಫಲಿತಾಂಶ ಹೇಳಿದೆ. ಮುಂದಿನ ದಿನಗಳಲ್ಲಿ ತಮಿಳುನಾಡಿನ ರಾಜಕೀಯದ ಮೇಲೆ ಇದು ಭಾರೀ ಪರಿಣಾಮವನ್ನು ಬೀರಲಿದೆ. ಮುಖ್ಯವಾಗಿ ಎಡಿಎಂಕೆ ಮತ್ತೆ ಒಡೆಯಲಿದೆ. ಪನ್ನೀರ್ ಸೆಲ್ವಂ ಏಕಾಂಗಿಯಾಗಲಿದ್ದಾರೆ. ಪಕ್ಷದ ಒಂದು ಬಣ ದಿನಕರನ್ ಜೊತೆಗೆ ಕೈ ಜೋಡಿಸಿ ಭವಿಷ್ಯದಲ್ಲಿ ಹೊಸದಾಗಿ ಚುನಾವಣೆ ಎದುರಿಸುವ ಸಾಧ್ಯತೆಗಳು ಕಾಣುತ್ತಿವೆ. ಮುಖ್ಯವಾಗಿ ಈ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಒಂದು ದಾಖಲೆ ಸಾಧಿಸಿದೆ. ಬಿಜಿಪಿ ಅಭ್ಯರ್ಥಿ ಕರು ನಾಗರಾಜನ್ ಪಡೆದಿರುವ ಒಟ್ಟು ಮತ 1,417.

ಈ ಮೂಲಕ ಅವರು ಠೇವಣಿಯನ್ನು ಕಳೆದುಕೊಂಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ 2,373 ಮತದಾರರು ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸಲು ಬಯಸದೆ ವಿದ್ಯುನ್ಮಾನ ಮತದಾನ ಯಂತ್ರದಲ್ಲಿ ನೋಟಾ ಬಟನ್ ಒತ್ತಿದ್ದಾರೆ. ತಮಿಳುನಾಡಿನ ರಾಜಕೀಯದೊಳಗೆ ಮೂಗು ತೂರಿಸಲು ಬಂದ ಕೇಂದ್ರ ವರಿಷ್ಠರ ಮೂಗನ್ನೇ ಈ ಮೂಲಕ ತಮಿಳರು ಕತ್ತರಿಸಿದ್ದಾರೆ. ಗುಜರಾತ್‌ನಲ್ಲಿ ಕಿವಿ ಕತ್ತರಿಸಿಕೊಂಡ ಬಿಜೆಪಿ, ತಮಿಳುನಾಡಿಗೆ ತಾನಾಗಿಯೇ ಮೂಗನ್ನು ಒಪ್ಪಿಸಿ ನಗೆಪಾಟಲಿಗೀಡಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)