varthabharthi

ವಿಶೇಷ-ವರದಿಗಳು

ಅಲರ್ಜಿಯ ವಿಧಗಳು ಹಾಗು ಕಾರಣಗಳು ನಿಮಗೆ ಗೊತ್ತೇ?

ವಾರ್ತಾ ಭಾರತಿ : 25 Dec, 2017

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಅಲರ್ಜಿಯಿಂದ ಬಳಲುತ್ತಾರೆ. ಅಲರ್ಜಿಯು ಸಾಮಾನ್ಯವಾಗಿ ಹಾನಿಕಾರಕವಲ್ಲದ ಪ್ರೋಟಿನ್ ಮತ್ತು ಇತರ ಪದಾರ್ಥಗಳ ವಿರುದ್ಧ ನಮ್ಮ ಶರೀರದ ರೋಗ ನಿರೋಧಕ ಶಕ್ತಿಯ ವಿಪರೀತ ಪ್ರತಿಕ್ರಿಯೆಯಾಗಿದೆ. ವ್ಯಕ್ತಿಯೋರ್ವ ಅಲರ್ಜಿನ್‌ಗೆ ಅಥವಾ ತನ್ನ ಶರೀರಕ್ಕೆ ಒಗ್ಗದ ಪದಾರ್ಥ ಅಥವಾ ವಸ್ತುವಿಗೆ ತೆರೆದುಕೊಂಡಾಗ ಅಲರ್ಜಿ ಉಂಟಾಗುತ್ತದೆ. ಶರೀರವು ಬಾಹ್ಯ ಪ್ರೋಟಿನ್‌ಗಳ ವಿರುದ್ಧ ಆ್ಯಂಟಿಬಾಡಿ ಅಥವಾ ರೋಗ ಪ್ರತೀಕಾರಕಗಳು ಎಂಬ ಕಣಗಳನ್ನು ಉತ್ಪಾದಿಸುತ್ತದೆ ಮತ್ತು ಈ ಪ್ರಕ್ರಿಯೆಯನ್ನು ನಿರೋಧಕ ಪ್ರತಿಕ್ರಿಯೆ ಎಂದು ಕರೆಯಲಾಗುತ್ತದೆ. ವ್ಯಕ್ತಿಯು ಮತ್ತೆ ಮತ್ತೆ ಅಲರ್ಜಿನ್‌ಗೆ ಒಡ್ಡಿಕೊಂಡಾಗ ರೋಗ ನಿರೋಧಕ ವ್ಯವಸ್ಥೆಯು ಆ್ಯಂಟಿಬಾಡಿಗಳನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸುತ್ತದೆ ಮತ್ತು ಇದರ ಪರಿಣಾಮವಾಗಿ ಹಿಸ್ಟಾಮೈನ್‌ನಂತಹ ರಾಸಾಯನಿಕಗಳನ್ನು ಒಳಗೊಂಡಿರುವ ಮಾಸ್ಟ್ ಸೆಲ್‌ಗಳೆಂಬ ಕೋಶಗಳು ನಿಷ್ಕ್ರಿಯಗೊಳ್ಳುತ್ತವೆ. ಇದು ಶರೀರದಲ್ಲಿ ಅಲರ್ಜಿಗೆ ಕಾರಣವಾಗುತ್ತದೆ.

ಅಲರ್ಜಿಯಿಂದ ಬಳಲುತ್ತಿರುವಾಗ ಶರೀರದಲ್ಲಿ ವಿವಿಧ ಬಗೆಯ ಲಕ್ಷಣಗಳು ಕಂಡು ಬರುತ್ತವೆ. ಸೀನುವಿಕೆ, ಉಸಿರಾಟದಲ್ಲಿ ತೊಂದರೆ, ಉಬ್ಬಸ, ಕಣ್ಣು ಮತ್ತು ಮೂಗಿನಿಂದ ನೀರು ಸುರಿಯುವುದು, ಸೈನಸ್ ನೋವು, ಕೆಮ್ಮು, ಚರ್ಮದಲ್ಲಿ ದದ್ದುಗಳು, ತುಟಿಗಳ ಊದುವಿಕೆ, ಕಣ್ಣು, ಕಿವಿ, ತುಟಿ ಮತ್ತು ಶರೀರದ ಇತರ ಭಾಗಗಳಲ್ಲಿ ತುರಿಕೆ ಇತ್ಯಾದಿಗಳು ಈ ಲಕ್ಷಣಗಳಲ್ಲಿ ಸೇರಿವೆ. ಅಲರ್ಜಿಯಲ್ಲಿ ಸುಮಾರು 10 ವಿಧಗಳಿವೆ.

► ಋತುಮಾನದ ಅಲರ್ಜಿ

ಋತುಮಾನದಲ್ಲಿ ಬದಲಾವಣೆಗಳು ಮತ್ತು ಜಾಗತಿಕ ತಾಪಮಾನ ಏರಿಕೆಯು ಈ ಅಲರ್ಜಿಗೆ ಕಾರಣವಾಗಿದೆ. ಹವಾಮಾನದಲ್ಲಿಯ ತೀವ್ರ ಬದಲಾವಣೆಗಳು ನಮ್ಮಲ್ಲಿ ಶಾರೀರಿಕ ಬದಲಾವಣೆಗಳನ್ನು ಉಂಟುಮಾಡುತ್ತವೆ ಮತ್ತು ಫ್ಲೂ ತರಹದ ಲಕ್ಷಣಗಳು ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು.

► ಪರಾಗದ ಅಲರ್ಜಿ

ನಮ್ಮ ಸುತ್ತಲಿನ ಪರಿಸರದಲ್ಲಿನ ಕೆಲವು ಸಸ್ಯಗಳ ಪರಾಗಗಳು ತುಂಬ ಹಗುರವಾಗಿದ್ದು ಗಾಳಿಯಲ್ಲಿ ಸುಲಭವಾಗಿ ಬೆರೆಯುತ್ತವೆ. ಈ ಗಾಳಿಯನ್ನು ಉಸಿರಾಡಿದಾಗ ಕೆಲವರಿಗೆ ಅಲರ್ಜಿಯುಂಟಾಗುತ್ತದೆ.

► ಆಹಾರದ ಅಲರ್ಜಿ

ಕೆಲವರು ಮೊಟ್ಟೆ, ಹಾಲು, ಬಟಾಟೆ, ಕಿವಿ ಹಣ್ಣು, ನೆಲಗಡಲೆ, ಸಮುದ್ರ ಉತ್ಪನ್ನಗಳು, ಗೋದಿ, ಸೋಯಾದಂತಹ ಆಹಾರ ಪದಾರ್ಥಗಳಿಗೆ ಅಲರ್ಜಿಕ್ ಆಗಿರುತ್ತಾರೆ. ಎಳ್ಳು ಮತ್ತು ಸಾಸಿವೆ ಸೇರಿದಂತೆ ಕೆಲವು ಬೀಜಗಳೂ ಅಲರ್ಜಿಯನ್ನುಂಟು ಮಾಡುತ್ತವೆ.

► ಪ್ರತಿಜೀವಕ ಅಲರ್ಜಿ

ಹಲವಾರು ಆ್ಯಂಟಿ ಬಯಾಟಿಕ್‌ಗಳು ಅಥವಾ ಪ್ರತಿಜೀವಕಗಳು ಪೆನ್ಸಿಲಿನ್ ಮತ್ತು ಅಮೊಕ್ಸಿಸಿಲಿನ್‌ನಂತಹ ರಾಸಾಯನಿಕಗಳನ್ನು ಒಳಗೊಂಡಿದ್ದು, ಇವು ಹಲವರಲ್ಲಿ ಅಲರ್ಜಿ ಯನ್ನುಂಟು ಮಾಡುತ್ತವೆ. ಶರೀರದಲ್ಲಿ ಚುಚ್ಚಿದಂತಹ ಅನುಭವ, ಜ್ವರ ಮತ್ತು ದದ್ದುಗಳು ಆ್ಯಂಟಿ ಬಯಾಟಿಕ್ ಅಲರ್ಜಿಯ ಕೆಲವು ಲಕ್ಷಣಗಳಾಗಿವೆ.

► ಸಸ್ಯಗಳಿಂದ ಅಲರ್ಜಿ

ಪಾಯ್ಸನ್ ಐವಿ ಎಂದು ಕರೆಯಲಾಗುವ ವಿಷಕಾರಿ ಅಂಶಗಳನ್ನು ಹೊಂದಿರುವ ತುರಿಕೆ ಗಿಡದಂತಹ ಸಸ್ಯಗಳು ಹಲವರಿಗೆ ಅಲರ್ಜಿಯನ್ನುಂಟು ಮಾಡುತ್ತವೆ. ಇವುಗಳ ಎಲೆಗಳನ್ನು ಸ್ಪರ್ಶಿಸಿದರೆ ಶರೀರದಲ್ಲಿ ದದ್ದುಗಳು, ಉರಿಯೂತ ಮತ್ತು ತೀವ್ರ ತುರಿಕೆ ಉಂಟಾಗುತ್ತದೆ.

► ಧೂಳಿನ ಅಲರ್ಜಿ

ವಾತಾವರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಜನರು ಆಗಾಗ್ಗೆ ಧೂಳಿನ ಅಲರ್ಜಿ ಯಿಂದ ನರಳುತ್ತಿರುತ್ತಾರೆ. ಮನೆಗಳಲ್ಲಿಯೂ ಪೀಠೋಪಕರಣಗಳು ಮತ್ತು ಹಾಸಿಗೆಗಳ ಲ್ಲಿಯ ಧೂಳು ಶರೀರದಲ್ಲಿ ಅಲರ್ಜಿಯನ್ನುಂಟು ಮಾಡುತ್ತದೆ ಮತ್ತು ಚರ್ಮ ಹಾಗೂ ಉಸಿರಾಟದ ತೊಂದರೆಗಳಿಗೆ ಕಾರಣವಾಗುತ್ತದೆ.

► ಬೆಕ್ಕಿನ ಅಲರ್ಜಿ

 ಈ ಅಲರ್ಜಿ ಉಳ್ಳವರು ಬೆಕ್ಕಿನ ಮೂತ್ರ, ಜೊಲ್ಲು ಮತ್ತು ಅದರ ಚರ್ಮದಲ್ಲಿಯ ಒಣ ಹಪ್ಪಳೆಗಳಿಂದ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಕೆಮ್ಮು, ಉಬ್ಬಸ, ಕಣ್ಣುಗಳು ಕೆಂಪಗಾಗುವುದು ಮತ್ತು ಅವುಗಳಲ್ಲಿ ತುರಿಕೆಯುಂಟಾಗವುದು, ದದ್ದುಗಳು ಇತ್ಯಾದಿಗಳು ಈ ಅಲರ್ಜಿಯ ಲಕ್ಷಣಗಳಲ್ಲಿ ಸೇರಿವೆ.

► ಸಲ್ಫೈಟ್ ಅಲರ್ಜಿ

ಸಲ್ಫೈಟ್ ರಾಸಾಯನಿಕಕ್ಕೆ ನೀವು ಅಲರ್ಜಿಕ್ ಆಗಿದ್ದರೆ ಅದರಿಂದ ದೂರವಿರಿ. ಇದು ಕೆಲವು ಸಂಸ್ಕರಿತ ಅಥವಾ ನೈಸರ್ಗಿಕ ಆಹಾರಗಳಲ್ಲಿ ಕಂಡು ಬರುತ್ತದೆ. ಬೇಕ್ಡ್ ಖಾದ್ಯಗಳು, ಸೂಪ್ ಮಿಕ್ಸ್‌ಗಳು, ಡಬ್ಬಿಗಳಲ್ಲಿ ಪ್ಯಾಕ್ ಮಾಡಲಾದ ತರಕಾರಿಗಳು ಮತ್ತು ಉಪ್ಪಿನಕಾಯಿ, ಒಣಹಣ್ಣು ಇತ್ಯಾದಿಗಳು ಸಲ್ಫೈಟ್‌ಗಳನ್ನು ಒಳಗೊಂಡಿರುತ್ತವೆ.

► ಕೀಟಗಳ ಕಡಿತದ ಅಲರ್ಜಿ

ಕೆಲವು ಕೀಟಗಳು ಕಡಿದರೆ ಅದರ ಉರಿ ಸುಮಾರು ಎರಡು ಗಂಟೆಗಳವರೆಗೆ ಇರುತ್ತದೆ. ಆದರೆ ಕೆಲವರಲ್ಲಿ ಇದರಿಂದ ತೀವ್ರ ದುಷ್ಪರಿಣಾಮಗಳಾಗುತ್ತವೆ. ಚರ್ಮದಲ್ಲಿ ದದ್ದುಗಳು, ಗುಳ್ಳೆಗಳು ಉಂಟಾಗುತ್ತವೆ. ಕೀಟಗಳು ವಿಷಯುಕ್ತ ಜೊಲ್ಲನ್ನು ಮತ್ತು ಹೆಚ್ಚಿನ ಜನರು ಅಲರ್ಜಿಕ್ ಆಗಿರುವ ಕೆಲವು ರಾಸಾಯನಿಕಗಳನ್ನು ಹೊಂದಿರುತ್ತವೆ. ಶರೀರದಲ್ಲಿ ಚುಚ್ಚಿದಂತೆ ಅನುಭವ, ಉಸಿರಾಟದಲ್ಲಿ ತೊಂದರೆ ಇತ್ಯಾದಿಗಳು ಈ ಅಲರ್ಜಿಯ ಲಕ್ಷಣಗಳಾಗಿರುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)