varthabharthi

ವಿಶೇಷ-ವರದಿಗಳು

ಬಾಬ್ರಿ ಮಸೀದಿ ಧ್ವಂಸವನ್ನು ‘ಕೆಟ್ಟ ತಪ್ಪು ಲೆಕ್ಕಾಚಾರ' ಎಂದಿದ್ದ ‘ಅಜಾತಶತ್ರು’

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ಹುಟ್ಟುಹಬ್ಬದ ಸಂಭ್ರಮ

ವಾರ್ತಾ ಭಾರತಿ : 25 Dec, 2017

ಹೊಸದಿಲ್ಲಿ, ಡಿ.25: ಮಾಜಿ ಪ್ರಧಾನಿ ಹಾಗೂ ಭಾರತದ ಪ್ರಸಿದ್ಧ ರಾಜಕೀಯ ನೇತಾರರಲ್ಲೊಬ್ಬರಾದ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬವನ್ನು ಡಿಸೆಂಬರ್ 25ರಂದು ಸರಕಾರ ‘ಉತ್ತಮ ಆಡಳಿತ ದಿನ’ವನ್ನಾಗಿ ಆಚರಿಸುತ್ತಿದೆ.

1924ರಲ್ಲಿ ಗ್ವಾಲಿಯರ್ ನಲ್ಲಿ ಜನಿಸಿದ ವಾಜಪೇಯಿ ಅವರು 1996ರಲ್ಲಿ 13 ದಿನಗಳ ಕಾಲ ಭಾರತದ ಪ್ರಧಾನಿಯಾಗಿದ್ದರೆ, 1998ರಲ್ಲಿ 13 ತಿಂಗಳು ಹಾಗೂ 1996ರಿಂದ ಸುಮಾರು ಆರು ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದವರು.  ತಮ್ಮ ಸಂಪೂರ್ಣ ಐದು ವರ್ಷ ಅವಧಿಯನ್ನು ಪೂರೈಸಿದ ಏಕೈಕ ಕಾಂಗ್ರೆಸ್ಸೇತರ ಪ್ರಧಾನಿ ಅವರಾಗಿದ್ದರು.

ಗ್ವಾಲಿಯರ್ ನ ಶಾಲಾ ಶಿಕ್ಷಕರೊಬ್ಬರ ಪುತ್ರನಾಗಿರುವ ವಾಜಪೇಯಿ ಅವರು 1939ರಲ್ಲಿ ಆರೆಸ್ಸೆಸ್ ಸೇರಿದ್ದರಲ್ಲದೆ 1947ರಲ್ಲಿ ಅದರ ಪೂರ್ಣಕಾಲಿಕ ಸದಸ್ಯರಾದರು. 1951ರಲ್ಲಿ ಅವರು ಆಗಿನ ಭಾರತೀಯ ಜನ ಸಂಘದಲ್ಲಿ ದೀನ್ ದಯಾಳ್ ಉಪಾಧ್ಯಾಯ ಜತೆ ಸೇವೆ ಸಲ್ಲಿಸಿದ್ದರು.

ಜೂನ್ 1975ರಲ್ಲಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿದಾಗ ವಾಜಪೇಯಿ ಹಲವು ತಿಂಗಳುಗಳ ಕಾಲ ಜೈಲು ಪಾಲಾಗಿದ್ದರು.  1977ರಲ್ಲಿ ಆಗ ಜನತಾ ಸರಕಾರ ಅಸ್ತಿತ್ವಕ್ಕೆ ಬಂದಾಗ ವಾಜಪೇಯಿ ವಿದೇಶ ಸಚಿವರಾಗಿ ಸೇವೆ ಸಲ್ಲಿಸಿದರು.

1984ರಲ್ಲಿ ಇಂದಿರಾ ಗಾಂದಿ ಅವರ ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ  545 ಸದಸ್ಯರ ಸಂಸತ್ತಿನಲ್ಲಿ ಬಿಜೆಪಿ ಕೇವಲ 2 ಸ್ಥಾನಗಳನ್ನು ಪಡೆದಿತ್ತಲ್ಲದೆ ವಾಜಪೇಯಿ ಕೂಡ ಗ್ವಾಲಿಯರ್ ಕ್ಷೇತ್ರದಿಂದ ಸೋಲುಂಡಿದ್ದರು.

ಅಯೋಧ್ಯೆಯ ರಾಮ ಜನ್ಮಭೂಮಿ ಆಂದೋಲನದ ಮೂಲಕ ಪಕ್ಷ ಮತ್ತೆ  ಮುಖ್ಯವಾಹಿನಿಗೆ ಬಂತು. 1992ರಲ್ಲಿ  ಕರಸೇವಕರು ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದಾಗ ‘ಕೆಟ್ಟ ತಪ್ಪು ಲೆಕ್ಕಾಚಾರ' ಎಂದು ಹೇಳಿದ ಬಿಜೆಪಿಯ ಏಕೈಕ ನಾಯಕರಾಗಿದ್ದರು ವಾಜಪೇಯಿ.

ಪ್ರಬುದ್ಧ ರಾಜಕಾರಣಿಯಾಗಿದ್ದ ವಾಜಪೇಯಿ ರಾಜಸ್ಥಾನದ ಪೊಖ್ರಾನ್ ನಲ್ಲಿ 1998ರಲ್ಲಿ ನಡೆದ ಪರಮಾಣು ಪರೀಕ್ಷೆಗಳಿಗೆ ಕಾರಣರಾಗಿದ್ದರು. ಇದರಿಂದಾಗಿಯೇ ಅಮೆರಿಕಾ ಮತ್ತು ಜಪಾನ್ ದೇಶಗಳಿಂದ ಭಾರತ ನಿರ್ಬಂಧಗೊಳಗಾಗಿತ್ತು,

ಅವರು ಪ್ರಧಾನಿಯಾಗಿದ್ದಾಗ 1999ರಲ್ಲಿ ಪಾಕಿಸ್ತಾನದ ಲಾಹೋರ್ ಗೆ  ಐತಿಹಾಸಿಕ ಬಸ್ ಸೇವೆಯನ್ನು  ಆಗಿನ ಪಾಕ್ ಪ್ರಧಾನಿ ನವಾಜ್ ಶರೀಫ್  ಜತೆ ಲಾಹೋರ್ ಘೋಷಣೆಯ ನಂತರ ಆರಂಭಿಸಿದ್ದು ಅವರ ದೊಡ್ಡ ಸಾಧನೆಯಾಗಿತ್ತು.

ಆದರೆ, ಇವರಿಗೆ ಆರೋಗ್ಯ ಸಮಸ್ಯೆ ಕಾಡಲಾರಂಭಿಸಿತ್ತು. 2009ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆ ನಾಗ್ಪುರದಲ್ಲಿ ಮುಕ್ತಾಯಗೊಂಡ 48 ಗಂಟೆಗಳೊಳಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಆರೋಗ್ಯ ಸಮಸ್ಯೆಗಳಿಂದಾಗಿ ಅವರು  ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. 2015ರಲ್ಲಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರ  ಭಾರತ ರತ್ನ ನೀಡಿ ಗೌರವಿಸಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)