varthabharthi

ವೈವಿಧ್ಯ

ಆರ್.ಕೆ.ನಗರ ಉಪಚುನಾವಣೆ

ಫಲಿತಾಂಶ ಒಂದು ಪರಿಣಾಮ ಮೂರು!

ವಾರ್ತಾ ಭಾರತಿ : 26 Dec, 2017
ಕು.ಸ.ಮಧುಸೂದನ ನಾಯರ್, ರಂಗೇನಹಳ್ಳಿ

ರ್.ಕೆ.ನಗರ ಉಪಚುನಾವಣೆಯಲ್ಲಿ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾರವರ ಸೋದರ ಸಂಬಂಧಿ ಟಿ.ಟಿ.ವಿ. ದಿನಕರನ್ ಅಭೂತಪೂರ್ವ ಜಯಗಳಿಸುವುದರೊಂದಿಗೆ ತಮಿಳುನಾಡಿನ ರಾಜಕಾರಣದಲ್ಲಿ ಸಂಚಲನವೊಂದನ್ನು ಮೂಡಿಸಿದ್ದಾರೆ. ಅದರಲ್ಲೂ ದಿನಕರನ್ ಅವರ ವಿಜಯದ ಅಂತರ ತಮಿಳು ನಾಯಕರುಗಳ ನಿದ್ದೆಗೆಡಿಸಿರುವುದಂತೂ ಸತ್ಯ..

ದಿನಕರನ್ ಅವರ ಗೆಲುವು ಕೇವಲ ಆಡಳಿತಾರೂಢ ಎಐಎಡಿಎಂಕೆ ಪಕ್ಷದಲ್ಲಿ ಮಾತ್ರವಲ್ಲದೆ, ವಿರೋಧಪಕ್ಷವಾದ ಡಿಎಂಕೆಯಲ್ಲೂ ಆತಂಕ ಮೂಡಿಸಿರುವುದು ಸುಳ್ಳೇನಲ್ಲ. ಇದರ ಜೊತೆಗೆ ಮಾಜಿಮುಖ್ಯಮಂತ್ರಿ ಕುಮಾರಿ ಜಯಲಲಿತಾರವರ ನಿರ್ಗಮನದೊಂದಿಗೆ ತಮಿಳುನಾಡಿನ ರಾಜಕೀಯದಲ್ಲಿ ಮೂಗುತೂರಿಸಿ, ತನ್ನ ಬೇರುಗಳನ್ನು ಬಿಡಲು ಯತ್ನಿಸಿದ ರಾಷ್ಟ್ರೀಯ ಪಕ್ಷ ಭಾಜಪಕ್ಕೂ ದಿನಕರನ್ ಹೊಸ ತಲೆನೋವಿಗೆ ಕಾರಣರಾಗಿದ್ದಾರೆ.

   ಕುಮಾರಿ ಜಯಲಲಿತಾರವರ ನಿಧನದಿಂದಾಗಿ ತೆರವಾಗಿದ್ದ ಆರ್.ಕೆ.ನಗರ ಉಪಚುನಾವಣೆ ಹಲವಾರು ಕಾರಣಗಳಿಗಾಗಿ ರಾಜಕೀಯ ಮಹತ್ವ ಪಡೆದಿತ್ತು. ಕೆಲವು ತಿಂಗಳ ಹಿಂದೆಯೇ ನಡೆಯಬೇಕಿದ್ದ ಉಪಚುನಾವಣೆಯನ್ನು ಚುನಾವಣಾ ಆಯೋಗವು ಆದಾಯ ತೆರಿಗೆ ಇಲಾಖೆಯ ಸಲಹೆಯಂತೆ ರದ್ದು ಪಡಿಸಿತ್ತು. ಆಗ ಎಐಎಡಿಎಂಕೆಯ ಎರಡು ಬಣಗಳಿನ್ನೂ ಒಂದಾಗಿ, ಪಕ್ಷದ ಅಧಿಕೃತ ಚಿಹ್ನೆಯನ್ನು ಪಡೆಯಲಾಗಿರಲಿಲ್ಲ. ಆಡಳಿತಾರೂಢ ಬಣದ ಮುಖ್ಯಮಂತ್ರಿ ಪಳನಿಸ್ವಾಮಿಯವರ ಬಣದಿಂದ ಸ್ಪರ್ಧಿಸಿದ್ದ ದಿನಕರನ್ ಅವರ ಹಲವಾರು ಕಚೇರಿಗಳ ಮೇಲೆ, ತಮಿಳುನಾಡು ಸರಕಾರದ ಹಲವಾರು ಸಚಿವರುಗಳು ಮತ್ತು ಅಧಿಕಾರಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಸದರಿ ಚುನಾವಣೆಯಲ್ಲಿ ಹಂಚಲು ಸಂಗ್ರಹಿಸಿಡಲಾಗಿತ್ತೆಂದು ಹೇಳಲಾದ ಅಪಾರ ಪ್ರಮಾಣದಹಣವನ್ನು ವಶ ಪಡಿಸಿಕೊಂಡಿತ್ತು ಮಾತ್ರವಲ್ಲದೆ. ಸದರಿ ಚುನಾವಣೆಯಲ್ಲಿ ಈಗಾಗಲೇ ಭಾರೀ ಪ್ರಮಾಣದ ಹಣಕಾಸು ವಹಿವಾಟು ನಡೆದಿದೆ ಎಂದು ಆರೋಪಿಸಿ ಚುನಾವಣೆಯನ್ನು ಮುಂದೂಡಲು ಚುನಾವಣಾ ಆಯೋಗಕ್ಕೆ ಶಿಫಾರಸನ್ನೂ ಮಾಡಿತ್ತು. ಈ ಮೇರೆಗೆ ರಾಜ್ಯ ಚುನಾವಣಾ ಆಯೋಗವು ಮತದಾನಕ್ಕೆ ಕೆಲವೇ ದಿನಗಳ ಮುಂಚೆ ಆರ್.ಕೆ. ನಗರದ ಚುನಾವಣೆಯನ್ನು ಅನಿರ್ದಿಷ್ಟಾವಧಿವರೆಗೂ ಮುಂದೂಡಿತ್ತು. ಹೀಗೆ ಮಾಡಲು ಕೇಂದ್ರ ಚುನಾವಣಾ ಆಯೋಗದ ಮೇಲೆ ಭಾಜಪದ ಕೇಂದ್ರ ಸರಕಾರ ತೀವ್ರ ಒತ್ತಡ ಹೇರಿತ್ತು

 ದಿವಂಗತ ಜಯಲಲಿತಾ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ದಿನದಿಂದಲೂ ತಮಿಳುನಾಡು ರಾಜಕೀಯದಲ್ಲಿ ತಾನು ಕಾಲೂರಲು ಪ್ರಯತ್ನ ನಡೆಸುತ್ತಲೇ ಬಂದ ಭಾಜಪಕ್ಕೆ ಒಂದು ವಿಷಯದ ಸ್ಪಷ್ಟ ಅರಿವಿತ್ತು. ಎಲ್ಲಿಯವರೆಗೆ ಶಶಿಕಲಾರವರು ರಾಜಕಾರಣದಲ್ಲಿ ಸಕ್ರಿಯವಾಗಿರುತ್ತಾರೋ ಅಲ್ಲಿಯವರೆಗೂ ತನ್ನ ಆಟ ನಡೆಯುವುದಿಲ್ಲವೆಂದು. ಹೀಗಾಗಿಯೇ ಶಶಿಕಲಾರವರನ್ನು ಮುಖ್ಯಮಂತ್ರಿ ಎಂದು ಎಐಎಡಿಎಂಕೆ ಪಕ್ಷ ಘೋಷಿಸಿದರೂ, ರಾಜ್ಯಪಾಲರು ನ್ಯಾಯಾಲಯದ ತೀರ್ಪು ಕಾಯುವ ನೆಪದಲ್ಲಿ ಶಶಿಕಲಾರಿಗೆ ಪ್ರಮಾಣವಚನ ಬೋಧಿಸದೆ ವಿಳಂಬ ನೀತಿ ಅನುಸರಿಸುತ್ತಾ ಹೋದರು. ಇದೇ ವೇಳೆಗೆ ಕೇಂದ್ರದ ಒತ್ತಡಕ್ಕೆ ಮಣಿದ ಆಗಿನ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ತಾವೇ ಸೂಚಿಸಿದ್ದ ಶಶಿಕಲಾರವರು ಮುಖ್ಯಮಂತ್ರಿ ಗಾದಿಗೆ ಏರಬಾರದೆಂದು ಅಮ್ಮನ ಆತ್ಮ ಹೇಳಿದೆ ಎಂಬ ಕುಂಟು ನೆಪ ಹೇಳಿ ಎಐಎಡಿಎಂಕೆ ಪಕ್ಷದೊಳಗೆ ಗೊಂದಲಮೂಡಿಸಿದ್ದರು. ಶಶಿಕಲಾರವರ ದುರಾದೃಷ್ಟಕ್ಕೆ ನ್ಯಾಯಾಲಯ ಶಶಿಕಲಾರನ್ನು ಅಪರಾಧಿಯೆಂದು ಪರಿಗಣಿಸಿ ಸೆರೆಮನೆಯ ಶಿಕ್ಷೆ ವಿಧಿಸಿತು. ಆಗ ಶಶಿಕಲಾಬಣದ ಪಳನಿಸ್ವಾಮಿಯವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಕೇವಲ ಹದಿನೆಂಟು ಶಾಸಕರನ್ನು ಹೊಂದಿದ್ದ ಪನ್ನೀರ್ ಸೆಲ್ವಂ ಅಧಿಕಾರವಂಚಿತರಾಗಬೇಕಿತ್ತು. ಇತ್ತ ಭಾಜಪ ಪನ್ನೀರ್ ಸೆಲ್ವಂ ಮತ್ತು ರಾಜ್ಯಪಾಲರ ಮೂಲಕ ಶಶಿಕಲಾರನ್ನು ಮುಖ್ಯಮಂತ್ರಿಗಾದಿಗೆ ಏರುವುದನ್ನು ತಡೆದು ಹೇಗಾದರೂ ಮಾಡಿ, ಸೆಲ್ವಂ ಬಣದ ಎಐಎಡಿಎಂಕೆ ಬಣದೊಂದಿಗೆ ಮೈತ್ರಿ ಮಾಡಿಕೊಂಡು ತಮಿಳುನಾಡಿನ ರಾಜಕೀಯದಲ್ಲಿ ತನ್ನ ಹೆಜ್ಜೆಗುರುತು ಮೂಡಿಸುವ ಉದ್ದೇಶ ಹೊಂದಿತ್ತು. ಇದಕ್ಕಾಗಿಯೇ ಅದು ನಿಧಾನವಾಗಿ ಇತ್ತ ಸೆಲ್ವಂ ಮೇಲೆ ಒತ್ತಡ ಹೇರುತ್ತ ಅತ್ತ ಪಳನಿಸ್ವಾಮಿಯವರನ್ನೂ ಸಂಪರ್ಕಿಸುತ್ತಲಿತ್ತು. ಅದರ ನಿಜ ಉದ್ದೇಶ ಇದ್ದುದು ಶಶಿಕಲಾರವರ ಕುಟುಂಬವನ್ನು ರಾಜಕೀಯದಿಂದ ಹೊರಗಿಡುವುದಾಗಿತ್ತು. ಅದರ ಪರಿಣಾಮವಾಗಿಯೇ ಸೆಲ್ವಂ ಬಣದ ಜೊತೆ ಒಂದಾಗುವ ನೆಪದಲ್ಲಿ ಶಶಿಕಲಾ ಮತ್ತು ಅವರ ಕುಟುಂಬದ ಸದಸ್ಯರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ವಜಾಗೊಳಿಸಲಾಯಿತು ಮತ್ತು ಅವರು ನೇಮಿಸಿದ್ದ ಎಲ್ಲಾ ಪದಾಧಿಕಾರಿಗಳನ್ನು ಕೈ ಬಿಡಲಾಯಿತು. ಅಲ್ಲಿಗೆ ಶಶಿಕಲಾ ಕುಟುಂಬದಿಂದ ಎಐಎಡಿಎಂಕೆ ಪಕ್ಷವನ್ನು ದೂರಮಾಡುವ ಮೊದಲಯತ್ನದಲ್ಲಿ ಭಾಜಪದ ಒತ್ತಡತಂತ್ರ ಯಶಸ್ವಿಯಾಯಿತೆಂದು ಹೇಳಬಹುದು.

ಇಷ್ಟಾದರೂ ಪಕ್ಷದ ಅಧಿಕೃತ ಚಿಹ್ನೆ ಪಡೆಯಲು ಸೆಲ್ವಂ, ಪಳನಿಸ್ವಾಮಿ ಬಣಗಳ ಮತ್ತು ದಿನಕರನ್ ನಡುವೆ ಕಾನೂನು ಹೋರಾಟ ನಡೆದು ದಿನಕರನ್ ಸೋಲಬೇಕಾಯಿತು. ಹಾಗಾಗಿ ಇದೀಗ ನಡೆದ ಆರ್.ಕೆ.ನಗರ್ ಉಪಚುನಾವಣೆಯಲ್ಲಿ ದಿನಕರನ್ ಪಕ್ಷೇತರರಾಗಿ ಪ್ರೆಷರ್ ಕುಕ್ಕರ್ ಗುರುತಿನ ಮೇಲೆ ಚುನಾವನೆ ಎದುರಿಸಬೇಕಾಗಿ ಬಂತು. ಎಐಎಡಿಎಂಕೆ ಪಕ್ಷದಿಂದ ಮಧುಸೂದನ್, ಡಿಎಂಕೆ ಪಕ್ಷದಿಂದ ಮರದುಗಣೇಶ್ ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದರು. ಇಲ್ಲಿ ಭಾಜಪ ಸಹ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ವಿಶೇಷವೆಂದರೆ ಚುನಾವಣೆಯ ಪ್ರಾರಂಭದಿಂದಲೂ ಎಐಎಡಿಎಂಕೆ ತಾನೇ ಜಯಲಲಿತಾರವರ ನಿಜವಾದ ಪಕ್ಷವೆಂದು ಕೂಗಿಹೇಳುತ್ತಾ ಬಂತು. ಅದೇ ರೀತಿ ದಿನಕರನ್ ಸಹ ತಾನೇ ಜಯಲಲಿತಾರ ನಿಜವಾದ ಉತ್ತರಾಧಿಕಾರಿ ಎಂದು ಹೇಳುತ್ತಾ ಬಂದರು.

 ಕೆಲವು ವಿಚಾರಗಳಿಗಾಗಿ ಈ ಚುನಾವಣೆ ಬಹಳ ಮಹತ್ವದ್ದೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದರು. ಜಯಲಲಿತಾರವರ ಸ್ವಕ್ಷೇತ್ರವಾಗಿದ್ದರಿಂದ ಎಐಎಡಿಎಂಕೆ ಇದನ್ನು ಉಳಿಸಿಕೊಂಡು ತಾನೇ ಜಯಾರವರ ನಿಜವಾದ ಪಕ್ಷವೆಂದು ಸಾಬೀತು ಪಡಿಸಬೇಕಿತ್ತು. ಇನ್ನು ಜಯಲಲಿತಾರವರ ಸಾವಿನ ನಂತರದ ಅತಿಮಹತ್ವದ ಚುನಾವಣೆ ಇದಾಗಿದ್ದು ಜಯಾ ಅನುಪಸ್ಥಿತಿಯಲ್ಲಿ ಇದನ್ನು ಡಿಎಂಕೆ ಗೆಲ್ಲುವ ಭರವಸೆ ಹೊಂದಿತ್ತು. ಜಯಾರವರ ಸಾವಿನ ನಂತರ ಈಗಿರುವ ಎಐಎಡಿಎಂಕೆ ತನಗೆ ಎದುರಾಳಿಯೇ ಅಲ್ಲವೆಂಬುದನ್ನು ತಮಿಳರಿಗೆ ತೋರಿಸಿಕೊಡಬೇಕಾದ ಅನಿವಾರ್ಯತೆಯೂ ಅದಕ್ಕೆ ಇತ್ತು.

 ಇದೆಲ್ಲಕ್ಕಿಂತ ಹೆಚ್ಚಿಗೆ ಕಳೆದ ಒಂದು ವರ್ಷದಲ್ಲಿ ಒಂದು ರಾಷ್ಟ್ರೀಯ ಪಕ್ಷವಾಗಿ ಭಾಜಪ ತಮಿಳುನಾಡಲ್ಲಿ ನಡೆಸಿದ ಹಿಂಬಾಗಿಲಿನ ರಾಜಕೀಯ ತಂತ್ರಗಾರಿಕೆ, ಪಿತೂರಿಗಳು ಎಷ್ಟರ ಮಟ್ಟಿಗೆ ಆ ಪಕ್ಷಕ್ಕೆ ಪೂರಕವಾಗಿವೆ ಎನ್ನುವುದನ್ನು ಈಚುನಾವಣೆಯ ಫಲಿತಾಂಶಗಳು ತೋರಿಸಿಕೊಡಲಿವೆಯೆಂದು ನಂಬಲಾಗಿತ್ತು. ಅದರೆ ಈ ಚುನಾವಣೆಯ ಫಲಿತಾಂಶಗಳು ಭಾಜಪಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿದೆ. ಯಾಕೆಂದರೆ ಆರ್.ಕೆ.ನಗರದಲ್ಲಿ ಅದರ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದಾರೆ. ತಮಿಳುನಾಡಿನ ಜನತೆ ತಮ್ಮ ದ್ರಾವಿಡ ಅಸ್ಮಿತೆಯನ್ನು ಅಷ್ಟು ಸುಲಭಕ್ಕೆ ಬಿಟ್ಟು ಕೊಡಲಾರರು ಎನ್ನುವುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ಅಲ್ಲದೆಕಳೆದ ಒಂದು ವರ್ಷದಿಂದ ದಿಲ್ಲಿ ಕೇಂದ್ರೀತ ರಾಷ್ಟ್ರೀಯ ಪಕ್ಷವಾದ ಭಾಜಪ ತಮಿಳುನಾಡಿನಲ್ಲಿ ಆಡಲು ಪ್ರಯತ್ನಿಸಿದ ನಾಟಕಗಳನ್ನು ತಮಿಳರು ಒಪ್ಪಿಕೊಂಡಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಭಾಜಪದ ಒತ್ತಡಕ್ಕೆ ಮಣಿದ ಸೆಲ್ವಂ ಮತು ಪಳನಿಸ್ವಾಮಿಯವರಿಗಿಂತ ದಿಲ್ಲಿಯ ರಾಜಕೀಯ ವ್ಯವಸ್ಥೆಯನ್ನು ಎದುರಿಸಿ ನಿಂತ ಶಶಿಕಲಾ ಕುಟುಂಬದ ದಿನಕರ್ ವಾಸಿ ಎಂದು ತಮಿಳರು ಭಾವಿಸಿದ್ದರೆ ವಿಶೇಷವೇನಿಲ್ಲ. ತಮಿಳುನಾಡಿನ ದ್ರಾವಿಡ ರಾಜಕಾರಣದ ಮೂಲದ್ರವ್ಯ ಇರುವುದೇ ತಮಿಳರ ಆತ್ಮಾಭಿಮಾನ ಮತ್ತು ದಿಲ್ಲಿಯ ದೊರೆಗಳನ್ನು ಧಿಕ್ಕರಿಸಿ ನಿಲ್ಲುವ ಮನೋಸ್ಥಿತಿಯಲ್ಲಿ.

  ಅದೇನಾದರೂ ಇರಲಿ ಈ ಚುನಾವಣೆಯ ಫಲಿತಾಂಶಗಳು ಮುಂದಿನ ದಿನಗಳ ತಮಿಳುನಾಡಿನ ರಾಜಕಾರಣದಲ್ಲಿ ಪ್ರಭಾವ ಬೀರುವುದು ಖಚಿತ. ಸೆಲ್ವಂ ಮತ್ತು ಪಳನಿಸ್ವಾಮಿ ಇಬ್ಬರನ್ನೂ ಒಪ್ಪದ ಲಕ್ಷಾಂತರ ಕಾರ್ಯಕರ್ತರು ಪಕ್ಷದಲ್ಲಿದ್ದು ಅವರಿಗೆ ದಿನಕರನ್ ಆಶಾಕಿರಣದಂತೆ ಕಂಡರೆ ಅಚ್ಚರಿಯೇನಿಲ್ಲ. ಈಗಿರುವ ಶಾಸಕರಲ್ಲಿ ಸುಮಾರು ನಲವತ್ತಕ್ಕೂ ಅಧಿಕ ಜನ ಆಂತರಿಕವಾಗಿ ದಿನಕರನ್ ಪರವಾಗಿರುವ ಶಂಕೆಯಿದೆ. ಈಗಾಗಲೇ ದಿನಕರನ್ ಬಣದ ಹದಿನೆಂಟು ಶಾಸಕರ ಅನರ್ಹತೆಯ ಪ್ರಕರಣ ನ್ಯಾಯಾಲಯದಲ್ಲಿದ್ದು ಅದೇನಾದರು ಆ ಶಾಸಕರ ಪರವಾಗಿ ಬಂದರೆ ಸರಕಾರ ಉಳಿಯುತ್ತದೆಯೆಂದು ಖಚಿತವಾಗಿ ಹೇಳಲಾಗುವುದಿಲ್ಲ. ಯಾಕೆಂದರೆ ಕೆಲ ತಿಂಗಳುಗಳ ಹಿಂದೆಯೇ ದಿನಕರನ್ ಎಐಎಡಿಎಂಕೆ ಪಕ್ಷದೊಳಗೆ ತಮ್ಮ ಪರವಾದ ಹಲವು ಸ್ಲೀಪರ್‌ಸೆಲ್‌ಗಳು ಇರುವುದಾಗಿ ಹೇಳಿಕೊಂಡಿದ್ದರು. ಪಕ್ಷದೊಳಗೆ ಸ್ಲೀಪರ್ ಸೆಲ್ ಇದೆಯೊ ಇಲ್ಲವೊ ಗೊತ್ತಿಲ್ಲ, ಆದರೆ ಆರ್.ಕೆ.ನಗರದ ಮತದಾರರ ನಡುವೆಯಿದ್ದ ಈ ಸ್ಲೀಪರ್ ಸೆಲ್‌ಗಳೇ ದಿನಕರನ್ ಅವರನ್ನು ಭಾರೀ ಮತಗಳ ಅಂತರದಿಂದ ಜಯಗಳಿಸಲು ಕಾರಣಕರ್ತವಾಗಿರುವುದಂತೂ ನಿಶ್ಚಿತ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)