varthabharthi

ವಚನ ಬೆಳಕು

ನಿನ್ನ ಒಡವೆ ಎಂಬುದು ಜ್ಞಾನರತ್ನ

ವಾರ್ತಾ ಭಾರತಿ : 26 Dec, 2017

ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ
ಅವು ಜಗಕ್ಕಿಕ್ಕಿದ ವಿಧಿ.
ನಿನ್ನ ಒಡವೆ ಎಂಬುದು ಜ್ಞಾನರತ್ನ.
ಅಂತಪ್ಪದಿವ್ಯರತ್ನವ ಕೆಡಗುಡದೆ
ಆ ರತ್ನವ ನೀನು ಅಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿಂಗದಲ್ಲಿ
ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೆ.
                                         - ಅಲ್ಲಮಪ್ರಭುದೇವರು

ಸುಖ, ದುಃಖ ಮತ್ತು ವಿಷಾದಗಳಿಗೆ ವಿಧಿತ್ರಯ ಎನ್ನುತ್ತಾರೆ. ಭೂಮಿ, ಬಂಗಾರ ಮತ್ತು ಕಾಮನೆಗಳ ಬೆನ್ನು ಹತ್ತಿ ಹೋಗುವವರಿಗೆ ದುಃಖ ಮತ್ತು ವಿಷಾದ ಬೆನ್ನುಹತ್ತಿರುತ್ತವೆ. ಈ ವಿಧಿತ್ರಯಗಳಿಗೆ ಮೂರು ಮುಖಗಳಿದ್ದರೂ ಅವುಗಳ ಮೂಲ ಒಂದೇ ಆಗಿದೆ. ಆದ್ದರಿಂದ ದುಃಖ ಮತ್ತು ವಿಷಾದಗಳು ಸುಖದ ಬೆನ್ನಿಗೆ ಅಂಟಿಕೊಂಡೇ ಇರುತ್ತವೆ.

ಈ ಭೂಮಿ ಎಲ್ಲರಿಗಾಗಿ ಇದೆ. ಹೇಮ ಮುಂತಾದ ಜಗತ್ತಿನ ಎಲ್ಲ ಸಂಪತ್ತಿನ ಮೇಲೆ ಪ್ರತಿಯೊಂದು ಜೀವಿಯ ಹಕ್ಕಿದೆ. ಕಾಮಿನಿ ಮತ್ತು ರಸಿಕರ ಸಂಬಂಧದ ಹಾಗೆ ಸತಿಪತಿಗಳ ಸಂಬಂಧ ಐಹಿಕ ಮತ್ತು ದೈಹಿಕ ಆಸೆಗಳ ಮೇಲೆಯೇ ನಿಂತಿಲ್ಲ. ‘‘ಉಭಯ ದೃಷ್ಟಿ ಏಕದೃಷ್ಟಿಯಲ್ಲಿ ಕಾಂಬಂತೆ ದಂಪತಿ ಏಕೋಭಾವವಾಗಿ ನಿಂದಲ್ಲಿ, ಗುಹೇಶ್ವರ ಲಿಂಗಕ್ಕೆ ಅರ್ಪಿತವಾಯಿತು’’ ಎಂದು ಅಲ್ಲಮ ಪ್ರಭುಗಳು ಮತ್ತೊಂದು ವಚನದಲ್ಲಿ ಹೇಳಿದ್ದಾರೆ. ಕಾಮಿನಿ ಮತ್ತು ಸತಿಯ ವ್ಯತ್ಯಾಸ ಇಲ್ಲಿ ಸ್ಪಷ್ಟವಾಗುತ್ತದೆ. ಒಂದುವೇಳೆ ಸತಿಪತಿಗಳ ಉಭಯ ದೃಷ್ಟಿ ಏಕದೃಷ್ಟಿಯಾಗದೆ ಇದ್ದಾಗ ಸತಿಯಾದವಳು ಬರೀ ಕಾಮಿನಿಯಾಗೇ ಉಳಿಯುತ್ತಾಳೆ. ದಾಂಪತ್ಯದಲ್ಲಿ ದೈಹಿಕ ಆಕರ್ಷಣೆ ಪ್ರಾಥಮಿಕ ಹಂತದ ವಾಸ್ತವ. ಆದರೆ ಕೊನೆಯವರೆಗೂ ದೈಹಿಕ ಆಕರ್ಷಣೆಯೇ ಮುಖ್ಯವಾದರೆ ಹೆಂಡತಿ ಗಂಡನಿಗೆ ಮಾಯೆಯಾಗಿ ಮತ್ತು ಗಂಡ ಹೆಂಡತಿಗೆ ಮಾಯೆಯಾಗಿ ಉಳಿಯುವುದರಿಂದ ಉಭಯ ದೃಷ್ಟಿ ಏಕದೃಷ್ಟಿಯಾಗುವುದಿಲ್ಲ. ಏಕದೃಷ್ಟಿಾಗದೆ ಏಕೋಭಾವ ಮೂಡುವುದಿಲ್ಲ.

 ಸತಿಪತಿಗಳ ದೃಷ್ಟಿಕೋನ ಒಂದೇ ಆಗುವುದರ ಮೂಲಕ ಅವರಲ್ಲಿ ಏಕೋಭಾವ ಮೂಡಿದಾಗ ಅಂಥ ದಾಂಪತ್ಯದ ಭಾವೈಕ್ಯ ಗುಹೇಶ್ವರಲಿಂಗಕ್ಕೆ ಅರ್ಪಣೆಯಾಗುವಂಥ ಯೋಗ್ಯತೆ ಪಡೆಯುತ್ತದೆ. ಇಲ್ಲಿ ಸತಿ-ಪತಿ ಎಂಬ ಗುರುತು ಅಳಿದು ಒಂದುತನದ ಅರಿವು ಮೂಡುತ್ತದೆ. ಇಂಥ ಸತಿಪತಿಗಳು ಮಾನವ ಬದುಕಿನಲ್ಲಿ ಸಹಜವಾದ ಎಲ್ಲ ವಿಧದ ಭೌತಿಕ ಸುಖಗಳನ್ನು ಮೀರಿದ ಶಿವಯೋಗದಲ್ಲಿ ಪರಮಾನಂದವನ್ನು ಹೊಂದುತ್ತಾರೆ. ಇದುವೇ ಲಿಂಗಾಂಗಸಾಮರಸ್ಯ. ಇಂಥ ಸಾಮರಸ್ಯ ಹೊಂದಿದವರಿಗೆ ಭೂಮಿ, ಹೇಮ ಅಷ್ಟೇ ಏಕೆ ಸಕಲಜೀವರಾಶಿಗಳು, ಆಕಾಶ, ಸೂರ್ಯ, ಚಂದ್ರ, ನಕ್ಷತ್ರ ಮತ್ತು ಗ್ರಹಗಳು ತಮ್ಮ ಶರೀರದ ಭಾಗಗಳಾಗೇ ಕಾಣುತ್ತವೆ.

ಎಲ್ಲ ವಸ್ತುಗಳು ದೇವರ ಸೃಷ್ಟಿಯೇ ಆಗಿರುವುದರಿಂದ ಅವೆಲ್ಲ ಆತ್ಮಿಕವಾಗಿ ನಮ್ಮ ವಸ್ತುಗಳೇ ಹೌದು. ಆದರೆ ಭೌತಿಕವಾಗಿ ಯಾವುದೇ ವಸ್ತು ನಮ್ಮದಾಗಿರುವುದಿಲ್ಲ. ಏಕೆಂದರೆ ವಸ್ತುಗಳು ನಮ್ಮ ಜೊತೆ ಬರುವುದಿಲ್ಲ. ಸತ್ತಮೇಲೆ ನಮ್ಮ ದೇಹ ಕೂಡ ನಮ್ಮ ಜೊತೆ ಬರುವುದಿಲ್ಲ. ಹೀಗಿದ್ದರೂ ಬೆಳ್ಳಿ ಬಂಗಾರ ಆಸ್ತಿಪಾಸ್ತಿ ಮುಂತಾದವು ನಮ್ಮವು ಎಂಬ ಭ್ರಮೆಯಲ್ಲೇ ಇರುತ್ತೇವೆ. ಹೊನ್ನು-ಹೆಣ್ಣು -ಮಣ್ಣು ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಇದನ್ನು ಅರಿತರೆ ಇದೇ ಜ್ಞಾನರತ್ನ. ಈ ದಿವ್ಯಜ್ಞಾನರತ್ನವನ್ನು ಹಾಳುಗೆಡವದೆ ಇನ್ನೂ ಅರ್ಥೈಸುತ್ತ ಹೋದವರು ಅನುಭಾವದ ಲೋಕದಲ್ಲಿ ಎಲ್ಲರಿಗೂ ಮಿಗಿಲಾದ ಶ್ರೀಮಂತರು ಎಂದು ಅಲ್ಲಮಪ್ರಭುಗಳು ಹೇಳುತ್ತಾರೆ.

ಅಲ್ಲಮ ಪ್ರಭುಗಳು ಹೇಳುವ ಜ್ಞಾನರತ್ನ ಎಲ್ಲರ ಬಳಿಯೂ ಇದೆ. ಆದರೆ ಕೋಟಿಗೊಬ್ಬನಾಗಿರುವ ದಾರ್ಶನಿಕ ಮಾತ್ರ ಆ ಜ್ಞಾನರತ್ನದ ಬಳಕೆ ಮಾಡುತ್ತಾನೆ. ಜ್ಞಾನರತ್ನವೆಂಬ ಒಡವೆಯಿಂದ ಅಲಂಕೃತರಾದವರನ್ನು ಮೀರಿಸುವ ಶ್ರೀಮಂತರು ಇನ್ನೊಬ್ಬರು ಇರಲಾರರು ಎಂದು ಅಲ್ಲಮಪ್ರಭುಗಳು ಹೇಳುವುದು ಎಷ್ಟೊಂದು ಅರ್ಥಗರ್ಭಿತವಾಗಿದೆ!

  ಈ ಜ್ಞಾನರತ್ನವನ್ನು ಅಲ್ಲಮಪ್ರಭುಗಳು ದಿವ್ಯರತ್ನ ಎಂದೂ ಕರೆದಿದ್ದಾರೆ. ದಿವ್ಯ ಎಂದರೆ 1) ನಿಶ್ಚಿತವಾದ ಸಾಕ್ಷಿ ಪುರಾವೆಗಳಿಲ್ಲದಾಗ ಅಪರಾಧವನ್ನು ನಿರ್ಣಯಿಸಲು ಮಾಡುವ ಉಗ್ರ ಪರೀಕ್ಷೆ. 2) ತುಲಾ, ಅಗ್ನಿ, ಜಲ, ತಂಡುಲ, ತಪ್ತಮಾಷ, ಫಾಲ ಮತ್ತು ಧರ್ಮ ಗಳೆಂಬ ಏಳು ಬಗೆಯ ದಿವ್ಯಗಳು. 3) ಸುಂದರವಾದ. 4) ಶ್ರೇಷ್ಠವಾದ. 5) ಸ್ವರ್ಗಕ್ಕೆ ಸಂಬಂಧಿಸಿದ. ಹೀಗೆ ದಿವ್ಯಕ್ಕೆ ಅನೇಕ ಅರ್ಥಗಳಿವೆ. ಅಗ್ನಿದಿವ್ಯ ಎಂದರೆ ಬೆಂಕಿಯನ್ನು ಮುಟ್ಟಿ, ಕೆಂಡದ ಮೇಲೆ ನಡೆದು ಅಥವಾ ಉರಿಯುವ ಅಗ್ನಿಯನ್ನು ಪ್ರವೇಶಿಸಿ ತನ್ನ ನಿರ್ದೋಷಿತ್ವವನ್ನು ಸ್ಥಾಪಿಸುವ ಕಠಿಣ ಪರೀಕ್ಷೆ. ಅಲ್ಲಮಪ್ರಭುಗಳು ಹೇಳುವ ಈ ದಿವ್ಯರತ್ನವು ವ್ಯಕ್ತಿಯನ್ನು ಸ್ವಯಂ ಕಠಿಣ ಪರೀಕ್ಷೆಗೆ ಒಳಪಡಿಸುವಂಥದ್ದು. ಆ ಮೂಲಕ ಸುಂದರ ಮನಸ್ಸನ್ನು ಸೃಷ್ಟಿಸುವಂಥದ್ದು. ತನ್ನನ್ನು ಕಠಿಣ ಪರೀಕ್ಷೆಗೆ ಒಳಪಡಿಸಿಕೊಳ್ಳುವ ಮಾನವನೇ ಜ್ಞಾನಿ. ಆತನೇ ಶ್ರೇಷ್ಠ ಮಾನವ ಎಂದು ಸಾರುವಂಥದ್ದು. ಅವನ ಬದುಕೇ ಸ್ವರ್ಗಸಮಾನವಾಗಿದ್ದು ಆತ ನಡೆಯುವ ಮಾರ್ಗವೇ ಧರ್ಮಮಾರ್ಗ ಆಗುವುದು. ಈ ದಿವ್ಯರತ್ನವೇ ಜ್ಞಾನರತ್ನವಾಗುವುದು. ಏಕೆಂದರೆ ಈ ರೀತಿ ಸ್ವವಿಮರ್ಶೆಗೆ ಒಳಗಾಗುವ ವ್ಯಕ್ತಿ ವಿಶ್ವಪ್ರಜ್ಞೆಯನ್ನು ಹೊಂದುವನು. ಆಗ ಆತನಿಗೆ ಅಂತಿಮ ಸತ್ಯದ ದರ್ಶನವಾಗುವುದು. ರೂಪಿಂಗೆ ಕೇಡುಂಟು ಎಂಬುದನ್ನು ಈ ದರ್ಶನದಿಂದ ಅರಿತುಕೊಳ್ಳುವನು. ರೂಪು ಎಂದರೆ ಕಣ್ಣಿಗೆ ಕಾಣುವಂಥದ್ದು. ತಾರಾಮಂಡಲ ಸಮೇತ ಕಣ್ಣಿಗೆ ಕಾಣುವುದೆಲ್ಲವೂ ಒಂದು ದಿನ ಲಯವಾಗುವುದು. ಇನ್ನು ಮಾನವನ ಭೌತಿಕ ಬದುಕು ಉಳಿಯುವುದೇ? ಮಾನವ ನೆಚ್ಚಿಕೊಂಡಿರುವ ಈ ಭೂಮಿ, ಹೇಮ ಮತ್ತು ಕಾಮಿನಿಯರು ಅದು ಹೇಗೆ ಉಳಿಯುತ್ತಾರೆ? ಎಂದು ಈ ಜ್ಞಾನರತ್ನವನ್ನು ಭಗ್ನಗೊಳಿಸದೆ ಅಲಂಕರಿಸಿದ ಜ್ಞಾನಿಯು ಕೇಳುವನು.

ಈ ಪ್ರಕಾರ ಮಾನವರನ್ನು ಸಿರಿವಂತಗೊಳಿಸುವುದು ಯಾರಿಂದಲೂ ಸಾಧ್ಯವಿಲ್ಲ. ಪ್ರತಿಯೊಬ್ಬರು ತಮ್ಮನ್ನು ತಾವು ಅರಿತುಕೊಂಡು ತಮ್ಮಳಗಿನ ಜ್ಞಾನರತ್ನವನ್ನು ಜೋಪಾನವಾಗಿ ಅಲಂಕರಿಸುವ ಮೂಲಕ ತಾವೇ ಎಲ್ಲ ಲೌಕಿಕ ಐಶ್ವರ್ಯವಂತರಿಗಿಂತ ಸಿರಿವಂತರಾಗುತ್ತಾರೆ ಎಂಬ ಮೂಲಜ್ಞಾನವನ್ನು ಅಲ್ಲಮಪ್ರಭುಗಳು ಈ ವಚನದ ಮೂಲ ಲೋಕಕ್ಕೆ ಸಾರಿದ್ದಾರೆ.

 ***

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)