varthabharthi

ನಿಮ್ಮ ಅಂಕಣ

ಉದ್ಧಟತನದ ಹೇಳಿಕೆ

ವಾರ್ತಾ ಭಾರತಿ : 26 Dec, 2017
-ಆರ್. ಎಚ್. ಇಟಗಿ, ಆರ್. ಟಿ. ನಗರ, ಬೆಂಗಳೂರು

ಮಾನ್ಯರೇ

‘‘ಜಾತ್ಯತೀತರಿಗೆ ತಮ್ಮ ಅಪ್ಪ-ಅಮ್ಮನ ರಕ್ತದ ಪರಿಚಯವೇ ಇಲ್ಲ ದೇಶದ ಸಂವಿಧಾನ ಬದಲಾವಣೆ ಮಾಡಲೆಂದೇ ನಾವು ಬಂದಿದ್ದೇವೆ’’ ಎಂಬ ಉದ್ಧಟತನದ ಹೇಳಿಕೆ ನೀಡುವುದರ ಮೂಲಕ ಉತ್ತರ ಕನ್ನಡ ಜಿಲ್ಲಾ ಸಂಸದ, ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರವೆಸಗಿದ್ದಾರೆ. ಭಾರತವನ್ನು ಎಲ್ಲಾ ಧರ್ಮೀಯರು ಜೊತೆಗೂಡಿ ತಮ್ಮ ರಕ್ತವನ್ನು ಅರ್ಪಿಸಿರುವುದರ ಮೂಲಕ ಸಾಮ್ರಾಜ್ಯಶಾಹಿ ಬ್ರಿಟಿಷ್ ಆಡಳಿತಕ್ಕೆ ತಿಲಾಂಜಲಿಯನ್ನು ಹಾಡಿ ರಾಷ್ಟ್ರವನ್ನು ಸ್ವತಂತ್ರಗೊಳಿಸಿದರು. ಆ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ದೇಶದ ಗೌರವಕ್ಕಾಗಿ ತಮ್ಮ ಮನೆ, ಮಠ, ಕುಟುಂಬ, ಆಸ್ತಿಯನ್ನು ಬಲಿಕೊಟ್ಟು ಬ್ರಿಟಿಷರ ದಬ್ಬಾಳಿಕೆಯಿಂದ ಈ ದೇಶವನ್ನು ರಕ್ಷಿಸಿದರು. ಸಂಸದರಿಗೆ ಇವುಗಳ ಮಹತ್ವ ಹಾಗೂ ದೇಶದ ಜಾತ್ಯತೀತ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಿದ್ದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ.

ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ದೇಶದ ಘನತೆಗೆ ಕುಂದು ತರುತ್ತಿರುವುದು ಮತ್ತು ಇದನ್ನು ಕೇಳಿಯೂ ಬಿಜೆಪಿ ವಕ್ತಾರರು ಮೌನವಾಗಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇವರಿಂದ ಅಪಾಯವಿದೆ ಎಂದೆನಿಸುತ್ತದೆ. ಇದೇ ಹೊತ್ತಿನಲ್ಲಿ ದೇಶದ ಸಂವಿಧಾನದ ಮೇಲೆ ನಂಬಿಕೆಯಿಲ್ಲದ ಸಂಸದರು ದೇಶ ಉದ್ದಾರಕ್ಕಾಗಿ ಏನು ಮಾಡಿಯಾರು ಎಂಬ ಸಹಜ ಪ್ರಶ್ನೆಯೂ ಹುಟ್ಟುಕೊಳ್ಳುತ್ತದೆ.

ದೇಶದ ಎಲ್ಲಾ ಧರ್ಮೀಯರನ್ನು ಸಮಾನವಾಗಿ ಕಾಣಬೇಕಾಗಿರುವುದು ರಾಜಕಾರಣಿಗಳ ಹೊಣೆಗಾರಿಕೆಯಾಗಿದೆ. ಇದನ್ನು ಪಾಲಿಸದ ಸಂಸದರನ್ನು ಮಾನ್ಯ ರಾಷ್ಟ್ರಪತಿಗಳು ತರಾಟೆಗೆ ತಗೆದುಕೊಂಡು ಬುದ್ಧಿ ಕಲಿಸಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)