varthabharthi

ಸಂಪಾದಕೀಯ

ಖಾತೆ ಮರೆತ ಸಚಿವರ ಕ್ಯಾತೆ

ವಾರ್ತಾ ಭಾರತಿ : 26 Dec, 2017

ಕೋಮು ಪ್ರಚೋದಕ ಹೇಳಿಕೆಗಳನ್ನೇ ಬಂಡವಾಳ ಮಾಡಿಕೊಂಡು ಉತ್ತರ ಕನ್ನಡ ಜಿಲ್ಲೆಗೆ ಅಂಟಿಕೊಂಡಿರುವ ಸಂಸದ ಅನಂತ ಕುಮಾರ್ ಹೆಗಡೆ, ಕೇಂದ್ರದಲ್ಲಿ ಸಚಿವ ಸ್ಥಾನ ಸಿಕ್ಕಿದ ಬಳಿಕ ತನ್ನ ವಿಷವನ್ನು ಜಿಲ್ಲೆಯ ಹೊರಗೂ ಕಕ್ಕುವ ಆತುರದಲ್ಲಿದ್ದಾರೆ. ಉದ್ಯೋಗಗಳನ್ನು ಹಂಚಿ ಎಂದು ಖಾತೆ ಕೊಟ್ಟರೆ, ಯುವಕರಿಗೆ ಕತ್ತಿ ಚೂರಿ ಹಿಡಿದು ಬಡಿದಾಡುವುದನ್ನು ಹೇಳಿಕೊಡುತ್ತಿರುವ ಇವರು ಕೌಶಲ್ಯಾಭಿವೃದ್ಧಿ ಖಾತೆಗೆ ಬೇರೆಯೇ ವ್ಯಾಖ್ಯಾನ ನೀಡುತ್ತಿದ್ದಾರೆ.

ಕೌಶಲ್ಯಾಭಿವೃದ್ಧಿ ಖಾತೆಯನ್ನು ಸಮರ್ಪಕವಾಗಿ ಬಳಸಿದರೆ ರಾಜ್ಯದ ಯುವಕರಿಗೆ ನೆರವಾಗುವ ಸರ್ವ ಅವಕಾಶಗಳು ಅವರ ಮುಂದಿವೆ. ನೋಟು ನಿಷೇಧದ ಬಳಿಕ ದೇಶಾದ್ಯಂತ ನಿರುದ್ಯೋಗ ಹೆಚ್ಚಿದೆ. ಯುವಕರು ಭವಿಷ್ಯದ ಕುರಿತಂತೆ ಆತಂಕದಲ್ಲಿ, ಖಿನ್ನತೆಯಲ್ಲಿ ಬಿದ್ದಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಕೌಶಲ್ಯಾಭಿವೃದ್ಧಿ ಖಾತೆಯ ಮೂಲಕ ಯುವಕರಿಗೆ ಸ್ವಯಂ ಉದ್ಯೋಗಗಳ ಕುರಿತಂತೆ ಮಾಹಿತಿಗಳನ್ನು ನೀಡುತ್ತಾ ಅವರೊಳಗೆ ಜಾಗೃತಿಯನ್ನು ಮಾಡುವ ಮೂಲಕ, ಆತ್ಮ ವಿಶ್ವಾಸವನ್ನು ತುಂಬುವ ಮೂಲಕ ಜನಪ್ರಿಯರಾಗುವ ದಾರಿಯೊಂದು ಅವರಿಗೆ ತೆರೆದಿತ್ತು. ಈ ಮೂಲಕ ಉತ್ತರ ಕನ್ನಡಕ್ಕಷ್ಟೇ ಈವರೆಗೆ ಸೀಮಿತವಾಗಿದ್ದ ಹೆಗಡೆ ರಾಜ್ಯಮಟ್ಟದಲ್ಲಿ ತಮ್ಮ ವರ್ಚಸ್ಸನ್ನು ಬೆಳೆಸುವುದಕ್ಕೆ ಸಾಧ್ಯವಿತ್ತು. ಹೆಗಡೆ ಅವರು ಸಚಿವ ಸ್ಥಾನವನ್ನು ಅಲಂಕರಿಸಿದ ದಿನದಿಂದ ತನ್ನ ಖಾತೆಯನ್ನು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ? ವಿವಿಧ ಸಭೆಗಳಲ್ಲಿ, ವೇದಿಕೆಗಳಲ್ಲಿ ತಮ್ಮ ಖಾತೆಯನ್ನು ಬಳಸಿಕೊಂಡು ಯುವ ಜನರಲ್ಲಿ ಎಷ್ಟರಮಟ್ಟಿಗೆ ಜಾಗೃತಿಯನ್ನು ಬಿತ್ತಿದ್ದಾರೆ? ಎಂದು ನಾವು ಅವಲೋಕಿಸಿದರೆ ನಮಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಇಂತಹದೊಂಂದು ಮಹತ್ವದ ಖಾತೆಯನ್ನು ಹೊಂದಿದ್ದೂ ಅವರು ಅದರ ಪ್ರಯೋಜನವನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾಗುತ್ತಿದ್ದಾರೆ. ಬದಲಿಗೆ, ತಾವು ವಹಿಸಿಕೊಂಡಿರುವ ಖಾತೆಯ ಉದ್ದೇಶವನ್ನೇ ಅಣಕಿಸುವಂತೆ, ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸುತ್ತಿದ್ದಾರೆ.

ಯುವ ಜನರನ್ನು ಕುಶಲಕರ್ಮಿಗಳಾಗಿ ಮಾಡಿ ಸ್ವಾವಲಂಬನೆಯ ಕಡೆಗೆ ಕೊಂಡೊಯ್ಯಬೇಕಾದ ಸಚಿವರೇ ಸಾರ್ವಜನಿಕ ವೇದಿಕೆಗಳಲ್ಲಿ ಕೋಮು ಪ್ರಚೋದಕ ಮಾತುಗಳನ್ನಾಡುತ್ತಾ ಯುವಕರನ್ನು ಹಾದಿ ತಪ್ಪಿಸುತ್ತಿದ್ದಾರೆ. ದತ್ತಜಯಂತಿ, ಕಾರವಾರ ಗಲಭೆ, ಮೈಸೂರು ಗಲಭೆ ಇತ್ಯಾದಿಗಳಿಗೂ ಅವರ ಕೌಶಲ್ಯಾಭಿವೃದ್ಧಿ ಖಾತೆಗೂ ಏನಾದರೂ ಸಂಬಂಧವಿದೆಯೇ? ಯುವಕರನ್ನು ಇನ್ನಷ್ಟು ತಪ್ಪುದಾರಿಗೆ ಒಯ್ದು ಅವರು ಬೀದಿಯಲ್ಲಿ ಹೊಡೆದಾಡುತ್ತಾ ಜೈಲು ಸೇರುವಂತೆ ಮಾಡುವುದು ಕೌಶಲ್ಯಾಭಿವೃದ್ಧಿ ಖಾತೆಯ ಗುರಿಯಾಗಿದೆಯೇ? ಅಥವಾ ರಾಜ್ಯಾದ್ಯಂತ ಗಲಭೆ ಎಬ್ಬಿಸುವುದಕ್ಕಾಗಿಯೇ ಹೆಗಡೆಯವರನ್ನು ಆದ್ಯತೆಯ ಮೇರೆಗೆ ಸಚಿವರನ್ನಾಗಿ ಮಾಡಲಾಗಿದೆಯೇ? ಗಲಭೆ ಎಬ್ಬಿಸುವುದಕ್ಕಾಗಿ ಅಮಿತ್ ಶಾ ಅವರು ಈ ಖಾತೆಯನ್ನು ಹೆಗಡೆಯವರಿಗೆ ಸುಪಾರಿಯಾಗಿ ನೀಡಿದ್ದಾರೆಯೇ? ಸಾರ್ವಜನಿಕ ವೇದಿಕೆಗಳಲ್ಲಿ ಹೆಗಡೆ ತಮ್ಮ ಖಾತೆಯ ಘನತೆಯನ್ನು ಮರೆತು ನೀಡುತ್ತಿರುವ ಉದ್ವಿಗ್ನಕಾರಿ ಹೇಳಿಕೆಗಳು ಇಂತಹದೊಂದು ಪ್ರಶ್ನೆಯನ್ನು ಶ್ರೀಸಾಮಾನ್ಯರು ಕೇಳುವಂತೆ ಮಾಡಿದೆ.

 ಇತ್ತೀಚೆಗೆ ಬ್ರಾಹ್ಮಣ ಯುವ ಸಮಾವೇಶವೊಂದರಲ್ಲಿ ಹೆಗಡೆಯವರು ಆಡಿದ ಮಾತುಗಳಿಗೆ ಪ್ರಧಾನಿ ಮೋದಿಯವರೇ ತಲೆತಗ್ಗಿಸಬೇಕು. ‘‘ಜಾತ್ಯತೀತರು ಎಂದು ಕರೆಸಿಕೊಳ್ಳುವವರ’’ ಕುರಿತಂತೆ ಅತ್ಯಂತ ಹೀನಾಯವಾಗಿ ಈ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿಯವರೇ ಈ ಹಿಂದೆ ಹಲವು ಭಾಷಣಗಳಲ್ಲಿ ತಮ್ಮನ್ನು ತಾವು ಜಾತ್ಯತೀತರು ಎಂದು ಘೋಷಿಸಿಕೊಂಡಿದ್ದಾರೆ. ಜಾತ್ಯತೀತ ಸಂವಿಧಾನದ ಕುರಿತಂತೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಇದೀಗ ನೋಡಿದರೆ, ಅವರದೇ ಸಂಪುಟದ ಸಚಿವರೊಬ್ಬರು ಜಾತ್ಯತೀತರಿಗೆ ತಂದೆ ತಾಯಿ ಇಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಬಹುಶಃ ಅವರ ಈ ಮಾತುಗಳು ಪ್ರಧಾನಿ ನರೇಂದ್ರ ಮೋದಿಯವರಿಗೂ ಅನ್ವಯವಾಗುವುದರಿಂದ, ಉಳಿದ ಜಾತ್ಯತೀತರು ಅದಕ್ಕೆ ಉತ್ತರ ನೀಡುವ ಅಗತ್ಯವಿಲ್ಲವೆನಿಸುತ್ತದೆ.

ಜಾತ್ಯತೀತ ಹುಟ್ಟಿನ ಕುರಿತಂತೆ ಹೆಗಡೆಯವರಿಗೆ ಯಾವುದೇ ಅನುಮಾನಗಳಿದ್ದರೂ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಹಾಲಿ ಪ್ರಧಾನಿ ಮೋದಿಯವರಲ್ಲೇ ಮಾತನಾಡಿ ಅದನ್ನು ಪರಿಹರಿಸಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ‘ಸಂವಿಧಾನ ಬದಲಿಸುವುದಕ್ಕಾಗಿ ನಾವು ಬಂದಿದ್ದೇವೆ’’ ಎಂದೂ ಹೇಳಿದ್ದಾರೆ. ಸಂವಿಧಾನವನ್ನು ತಿದ್ದುಪಡಿ ಮಾಡುವುದು, ಬದಲಿಸುವುದು ಎಲ್ಲವೂ ಸರಿ. ಆದರೆ ಯಾರ ಒಳಿತಿಗಾಗಿ? ಎನ್ನುವ ಪ್ರಶ್ನೆಗೂ ಅವರು ಉತ್ತರಿಸಬೇಕಾಗುತ್ತದೆ. ಬ್ರಾಹ್ಮಣ ಯುವ ಸಮಾವೇಶದಲ್ಲಿ ಇಂತಹ ಮಾತುಗಳನ್ನು ಆಡಿರುವುದರಿಂದ ಇದು ಬೇರೆ ಬೇರೆ ಧ್ವನಿಗಳನ್ನು ಪಡೆದುಕೊಳ್ಳುತ್ತದೆ. ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡುವುದರಿಂದ ಬ್ರಾಹ್ಮಣರಿಗೆ ಅನ್ಯಾಯವಾಗುತ್ತಿದೆ ಎನ್ನುವ ಆರೋಪಗಳನ್ನು ಕೆಲವರು ಮಾಡುತ್ತಾ ಬಂದಿದ್ದಾರೆ. ಹೆಗಡೆಯವರು ಸಂವಿಧಾನ ಬದಲಿಸುವ ಮಾತನ್ನು ಬ್ರಾಹ್ಮಣ ಯುವ ಸಮಾವೇಶದ ವೇದಿಕೆಯಲ್ಲಿ ಆಡಿರುವುದರಿಂದ, ಬ್ರಾಹ್ಮಣರ ಹಿತಾಸಕ್ತಿಗಾಗಿ ಸಂವಿಧಾನವನ್ನು ಬದಲಿಸುತ್ತೇವೆ ಎಂಬ ಧ್ವನಿ ಬರುತ್ತದೆ.

ಈ ದೇಶದಲ್ಲಿ ಜಾರಿಯಲ್ಲಿರುವ ಜಾತೀಯತೆ, ಅಸ್ಪಶ್ಯತೆ, ಶೋಷಣೆ ಇವೆಲ್ಲವುಗಳ ಹೊಣೆಯನ್ನು ಈ ದೇಶ ಬ್ರಾಹ್ಮಣರ ತಲೆಗೆ ಕಟ್ಟಿರುವ ಸಂದರ್ಭದಲ್ಲಿ, ಹೆಗಡೆಯವರು ಬ್ರಾಹ್ಮಣರ ಹಿತಾಸಕ್ತಿಗಾಗಿ ಸಂವಿಧಾನವನ್ನು ಬದಲಿಸುತ್ತೇನೆ ಎಂದು ಹೇಳುವುದರ ಪರಿಣಾಮವನ್ನು ಮತ್ತೆ ಬ್ರಾಹ್ಮಣರೇ ಅನುಭವಿಸಬೇಕಾಗುತ್ತದೆ. ಬ್ರಾಹ್ಮಣರ ಹಿತಾಸಕ್ತಿಗೆ ಪೂರಕವಾಗಿ ಸಂವಿಧಾನವನ್ನು ತಿದ್ದುವುದು ಅಥವಾ ಬದಲಿಸುವುದು ಎಂದರೆ ಮೀಸಲಾತಿಯನ್ನು ಕಿತ್ತೊಗೆಯುವುದು ಮತ್ತು ಸಾಧ್ಯವಾದಷ್ಟು ಮನು ಸಿದ್ಧಾಂತವನ್ನು ಜಾರಿಗೊಳಿಸುವುದು. ಇದು ಮತ್ತೆ ಕೆಳಜಾತಿಯ ಜನರನ್ನು ಶೋಷಣೆಗೆ ತಳ್ಳುತ್ತದೆ. ಹೆಗಡೆಯವರು ತನ್ನ ನೀಚ ರಾಜಕೀಯಕ್ಕಾಗಿ ಬ್ರಾಹ್ಮಣ ಯುವ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಆದರೆ ಅವರ ಆ ಮಾತಿನ ಹೊಣೆಯನ್ನು ಅನಿವಾರ್ಯವಾಗಿ ಇಡೀ ಬ್ರಾಹ್ಮಣ ಯುವ ಸಮುದಾಯ ಹೊತ್ತುಕೊಳ್ಳಬೇಕಾಗಿದೆ. ಆ ಕಾರಣದಿಂದ ಯುವ ಸಮಾವೇಶವನ್ನು ಹಮ್ಮಿಕೊಂಡ ಬ್ರಾಹ್ಮಣ ಸಂಘಟನೆ ತಕ್ಷಣ ಹೆಗಡೆ ಮಾತಿಗೆ ಸ್ಪಷ್ಟೀಕರಣ ನೀಡಬೇಕಾಗಿದೆ. ಜೊತೆಗೆ ಅವರ ಹೇಳಿಕೆಯಿಂದ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ. ಮತ್ತು ಅವರ ಹೇಳಿಕೆಯನ್ನು ಖಂಡಿಸಬೇಕಾಗಿದೆ. ಯುವ ಸಮಾವೇಶದಲ್ಲಿ ಓರ್ವ ಸಚಿವನಾಗಿ ಸ್ವ ಉದ್ಯೋಗಗಳ ಬಗ್ಗೆ, ಕೌಶಲ್ಯಗಳ ಬಗ್ಗೆ ಮಾತನಾಡಿ ಬ್ರಾಹ್ಮಣ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಬದಲು ಅದನ್ನು ಉದ್ವಿಗ್ನಕಾರಿ ಹೇಳಿಕೆಗಳನ್ನು ನೀಡುವ ರಾಜಕೀಯ ವೇದಿಕೆಯಾಗಿ ಬಳಸಿಕೊಂಡದ್ದಕ್ಕೆ ಆ ಸಂಘಟನೆಯ ಜೊತೆಗೆ ಸಚಿವರು ಕ್ಷಮೆಯನ್ನು ಯಾಚಿಸಬೇಕಾಗಿದೆ.

ದಲಿತರು, ಶೋಷಿತರ ಪರವಾಗಿ ಮಾತನಾಡಿದ, ಹೋರಾಟ ನಡೆಸಿದ ಬ್ರಾಹ್ಮಣ ಸಮುದಾಯದ ಬಹುದೊಡ್ಡ ದಂಡೇ ನಮ್ಮ ನಡುವೆ ಇದೆ. ಕುದ್ಮುಲ್ ರಂಗರಾವ್, ಕಾರ್ನಾಡು ಸದಾಶಿವ ರಾವ್‌ರಂತಹ ಮಹನೀಯರು ಬಾಳಿ ಹೋದ ನೆಲ ನಮ್ಮದು. ಶೋಷಿತರನ್ನು ಮೇಲೆತ್ತುವಲ್ಲಿ ಸಂವಿಧಾನವನ್ನು ಜಾರಿಗೊಳಿಸುವಲ್ಲಿ, ಜಾತ್ಯತೀತತೆಯನ್ನು ಹರಡುವಲ್ಲಿ ಇವರ ಸೇವೆಯನ್ನು ಮರೆತರೆ ಅದು ನಾವು ನಮಗೆ ಮಾಡಿಕೊಳ್ಳುವ ಅನ್ಯಾಯವಾಗುತ್ತದೆ. ಸಚಿವ ಅನಂತಕುಮಾರ್ ಹೆಗಡೆ ಜಾತ್ಯತೀತರ ತಂದೆ ತಾಯಿಯ ಮೂಲವನ್ನು ಪ್ರಶ್ನಿಸುವ ಮೂಲಕ ಬ್ರಾಹ್ಮಣ ಸಮುದಾಯದಿಂದ ಬಂದ ಈ ಹಿರಿಯ ಜಾತ್ಯತೀತ ನಾಯಕರ ಬದುಕಿನ ವೌಲ್ಯಗಳಿಗೂ ಅಪಚಾರ ಎಸಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)