varthabharthi

ಸಂಪಾದಕೀಯ

ಮಹಾದಾಯಿ ರೈತರಿಗೆ ಬಿಜೆಪಿ ವಂಚನೆ

ವಾರ್ತಾ ಭಾರತಿ : 27 Dec, 2017

ಮಹಾದಾಯಿ ನೀರಿಗಾಗಿ ಬೆಂಗಳೂರಿನ ಬಿಜೆಪಿ ಕಚೇರಿಯ ಎದುರು ಉತ್ತರಕರ್ನಾಟಕದ ರೈತರು ನಡೆಸಿದ ಪ್ರತಿಭಟನಾ ಧರಣಿ ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಇದೇ ಬೇಡಿಕೆಗಾಗಿ ಬುಧವಾರ ಉತ್ತರಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಚುನಾವಣಾ ಲಾಭಕ್ಕಾಗಿ ಈ ಆಂದೋಲನದ ದಿಕ್ಕು ತಪ್ಪಿಸಲು ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರು ಗಿಮಿಕ್ ಮಾಡಲು ಹೋಗಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಮಂಗಳವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಕೂಡಾ ಪಕ್ಷದ ಕಚೇರಿಯಲ್ಲಿ ನಡೆಸಲಾಗದೆ ಯಡಿಯೂರಪ್ಪನವರ ಮನೆಯಲ್ಲೇ ನಡೆಸಲಾಯಿತು. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಂತಾದ ನಾಯಕರು ಯಡಿಯೂರಪ್ಪನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ವಿವಾದ ಬಿಜೆಪಿ ಅದರಲ್ಲೂ ಯಡಿಯೂರಪ್ಪ ತಾನೇ ಮೈಮೇಲೆ ಎಳೆದುಕೊಂಡ ವಿವಾದವಾಗಿದೆ.

ಬಾಗಲಕೋಟೆ, ಬೆಳಗಾವಿ ಮತ್ತು ಗದಗ ಜಿಲ್ಲೆಗಳ ಹನ್ನೊಂದು ತಾಲೂಕುಗಳಿಗೆ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಮಹಾದಾಯಿ ನದಿಯಿಂದ ಕಳಸಾ ಬಂಡೂರಿ ನಾಲೆಗೆ ನೀರು ಹರಿಸುವ ವಿವಾದ ನ್ಯಾಯಮಂಡಳಿಯ ಮುಂದೆ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ವಿವಾದವನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕೆಂದು ನ್ಯಾಯಮಂಡಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಗಳಿಗೆ ಒಂದು ವರ್ಷದ ಹಿಂದೆಯೇ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮಂಡಳಿಯ ಹೊರಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಿಕೊಳ್ಳಬೇಕಾಗಿತ್ತು.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ವರ್ಷ ಸರ್ವ ಪಕ್ಷಗಳ ನಿಯೋಗವೊಂದನ್ನು ಪ್ರಧಾನಮಂತ್ರಿಗಳ ಬಳಿ ಕರೆದುಕೊಂಡು ಹೋಗಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಈ ವಿವಾದವನ್ನು ಬಗೆಹರಿಸುವ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಕರ್ನಾಟಕದ ನಿಯೋಗಕ್ಕೆ ಅದರಲ್ಲೂ ಮುಖ್ಯಮಂತ್ರಿಗಳಿಗೆ ಮೋದಿ, ಗೋವಾ ಮತ್ತು ಮಹಾರಾಷ್ಟ್ರದ ವಿರೋಧ ಪಕ್ಷಗಳ ನಾಯಕರನ್ನು ನೀವು ಒಪ್ಪಿಸಿಕೊಂಡು ಬಂದ ತಾನು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಮಾತನಾಡುತ್ತೇನೆ ಎಂದು ನೆಪ ಹೇಳಿದ್ದರು. ಆಗ ನಿಯೋಗದೊಂದಿಗೆ ಹೋಗಿದ್ದ ಕರ್ನಾಟಕದ ಬಿಜೆಪಿ ಮುಖಂಡರು ಬಾಯಿ ಮುಚ್ಚಿಕೊಂಡು ಕುಳಿತಿದ್ದರು.

ಈ ಹಿಂದೆ ಇಂದಿರಾ ಗಾಂಧಿ ಪ್ರಧಾನಮಂತ್ರಿ ಆಗಿದ್ದಾಗ ಇಂತಹ ವಿವಾದ ಉಂಟಾದಾಗ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿಗಳನ್ನು ಕರೆದು ಚೆನ್ನೈ ನಗರಕ್ಕೆ ಕುಡಿಯುವ ನೀರು ಪೂರೈಸುವ ‘ತೆಲುಗು ಗಂಗಾ’ ಯೋಜನೆಗೆ ಒಪ್ಪಿಗೆ ನೀಡುವಂತೆ ಮೂರೂ ರಾಜ್ಯಗಳನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ನಮ್ಮ ಈಗಿನ ಪ್ರಧಾನಿ ಮೋದಿ ಅವರಿಗೆ ಈ ಬಗ್ಗೆ ಆಸಕ್ತಿ ಇಲ್ಲ. ಮಹಾದಾಯಿ ಕಣಿವೆಯಿಂದ ಮಲಪ್ರಭೆಗೆ ನೀರು ಹರಿಸುವ ಬಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ತಮ್ಮ ಒಪ್ಪಿಗೆ ಇಲ್ಲ ಎಂದು ಎರಡು ತಿಂಗಳ ಹಿಂದೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಹೇಳಿದ್ದರಂತೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಗೋವಾ ಮುಖ್ಯಮಂತ್ರಿಯನ್ನು ಭೇಟಿಯಾಗಲು ಹಲವಾರು ಬಾರಿ ಪ್ರಯತ್ನಿಸಿದರೂ ಪಾರಿಕ್ಕರ್ ಭೇಟಿಗೆ ಅವಕಾಶವೇ ನೀಡಿರಲಿಲ್ಲ. ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅಮಿತ್ ಶಾ ಸಮ್ಮುಖದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಪಾರಿಕ್ಕರ್, ಕರ್ನಾಟಕಕ್ಕೆ ಮಹಾದಾಯಿ ನೀರು ಬಿಟ್ಟರೆ ಗೋವಾದಲ್ಲಿ ಕಷ್ಟವಾಗುತ್ತದೆ. ಆದರೂ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದರಂತೆ.

ಕರ್ನಾಟಕದಲ್ಲಿ ಚುನಾವಣೆಯನ್ನು ಗೆಲ್ಲುವ ಅನಿವಾರ್ಯತೆಯಲ್ಲಿರುವ ಯಡಿಯೂರಪ್ಪ ಹೋರಾಟಗಾರರನ್ನು ಭೇಟಿ ಮಾಡಿ ಮಹಾದಾಯಿ ವಿವಾದ ಬೇಗನೆ ಸುಖಾಂತ್ಯವಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೂ ಈ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆ ಆಗಲಿಲ್ಲ. ಕೊನೆಗೆ ಈ ಮಾತುಕತೆಗೆ ತಾನು ಸಿದ್ಧವಿರುವುದಾಗಿ ಮಾತ್ರ ಹೇಳಬಲ್ಲೆ ಎಂದು ಪಾರಿಕ್ಕರ್ ಯಡಿಯೂರಪ್ಪನವರಿಗೆ ಪತ್ರ ಬರೆಯುವಂತೆ ನೋಡಿಕೊಳ್ಳಲಾಯಿತು. ಇದೇ ಪತ್ರವನ್ನು ಯಡಿಯೂರಪ್ಪನವರು ಹುಬ್ಬಳ್ಳಿಯ ಪರಿವರ್ತನಾ ಸಭೆಯಲ್ಲಿ ಓದಿ ಹೇಳಿದರು. ಆಗ ಈ ವಿವಾದ ಆರಂಭವಾಯಿತು. ನ್ಯಾಯವಾಗಿ ಗೋವಾ ಮುಖ್ಯಮಂತ್ರಿ ಕರ್ನಾಟಕದ ಮುಖ್ಯಮಂತ್ರಿಗೆ ಪತ್ರ ಬರೆಯಬೇಕಾಗಿತ್ತು. ಕರ್ನಾಟಕದ ಮುಖ್ಯಮಂತ್ರಿ ಕಳೆದ ಒಂದು ವರ್ಷದಲ್ಲಿ ಆರು ಪತ್ರಗಳನ್ನು ಬರೆದಿದ್ದರೂ ಗೋವಾ ಮುಖ್ಯಮಂತ್ರಿ ಉತ್ತರ ಕೊಟ್ಟಿರಲಿಲ್ಲ. ಮಹಾದಾಯಿ ನೀರಿಗಾಗಿ ಉತ್ತರಕರ್ನಾಟಕದ ರೈತರು ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಈ ಹೋರಾಟದಲ್ಲಿ ಎಷ್ಟೋ ಮಂದಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಸನ್ನಿವೇಶದಲ್ಲಿ ಯಡಿಯೂರಪ್ಪ ಓದಿದ ಪತ್ರ ರೈತರ ಆಕ್ರೋಶಕ್ಕೆ ಕಾರಣವಾಗಿ, ಖಚಿತ ಭರವಸೆ ನೀಡಬೇಕೆಂದು ಒತ್ತಾಯಿಸಿದರು. ಯಡಿಯೂರಪ್ಪನವರಿಂದ ಸ್ಪಷ್ಟನೆ ಬಯಸಿರುವ ರೈತರು ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಬಂದು ಧರಣಿ ಆರಂಭಿಸಿ ನಾಲ್ಕು ದಿನ ಕಳೆದರೂ ಯಾವ ಬಿಜೆಪಿ ನಾಯಕರೂ ಅವರನ್ನು ಭೇಟಿ ಮಾಡಲಿಲ್ಲ. ಕೊನೆಗೆ ಮಂಗಳವಾರ ಅಮಿತ್ ಶಾ ಒತ್ತಡಕ್ಕೆ ಮಣಿದು ಯಡಿಯೂರಪ್ಪ ಧರಣಿ ಸ್ಥಳಕ್ಕೆ ಬಂದು ರೈತರನ್ನು ಭೇಟಿ ಮಾಡಿದರು. ಆದರೆ, ಯಡಿಯೂರಪ್ಪನವರ ಒಣ ಭರವಸೆಗಳಿಗೆ ರೈತರು ಒಪ್ಪಲಿಲ್ಲ. ಹೀಗಾಗಿ ಸಂಧಾನ ಯತ್ನ ವಿಫಲಗೊಂಡಿತು.

ಮಹಾದಾಯಿ ಯೋಜನೆ ಬಗ್ಗೆ ಯಡಿಯೂರಪ್ಪನವರು ತನ್ನನ್ನು ಮುಖ್ಯಮಂತ್ರಿಯಾಗಿ ಮಾಡಿದರೆ 24 ಗಂಟೆಯಲ್ಲಿ ಗೋವಾದಿಂದ ನೀರು ತರುವುದಾಗಿ ಹೇಳುತ್ತಿರುವುದು ಬರೀ ಚುನಾವಣಾ ರಾಜಕೀಯದ ಗಿಮಿಕ್ ಎನ್ನುವುದು ಸ್ಪಷ್ಟ. ಬಿಜೆಪಿ ಮತ್ತು ಗೋವಾ ಸರಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ ಅವರ ಪ್ರಾಮಾಣಿಕತೆಯ ಬಗ್ಗೆ ಗಂಭೀರ ಅನುಮಾನಗಳು ಉಂಟಾಗುತ್ತವೆ.

ಬಿಜೆಪಿಯ ಈ ಚುನಾವಣಾ ಪೂರ್ವ ಕಸರತ್ತಿನ ಬಗ್ಗೆ ಉತ್ತರಕರ್ನಾಟಕದ ರೈತರು ಮತ್ತು ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಆರಂಭಕ್ಕೆ ಮುನ್ನ ಮಹಾದಾಯಿ ಕುರಿತು ಸ್ಪಷ್ಟವಾದ ನಿಲುವನ್ನು ತಿಳಿಸಬೇಕೆಂದು ಪ್ರತಿಭಟನಾ ಕಾರರು ಒತ್ತಾಯಿಸಿದ್ದರು. ಬಿಜೆಪಿ ಪರಿವರ್ತನಾ ಯಾತ್ರೆಯನ್ನು ವಿರೋಧಿಸಿ ನವಲಗುಂದ ಮತ್ತು ನರಗುಂದಗಳಲ್ಲಿ ರೈತರು ತೀವ್ರ ಪ್ರತಿಭಟನೆ ನಡೆಸಿದ್ದರು. ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ಮನೆಯ ಎದುರು ಧರಣಿ ನಡೆಸಿದ್ದರು. ಆಗ ತಾವಾಗಿಯೇ ಅಲ್ಲಿ ಹೋದ ಯಡಿಯೂರಪ್ಪ ಡಿಸೆಂಬರ್ 15ರ ಒಳಗಾಗಿ ಈ ಸಮಸ್ಯೆ ಬಗೆಹರಿಸಿ ಈ ಭಾಗಕ್ಕೆ ಕಾಲಿಡುವುದಾಗಿ ಮಾತುಕೊಟ್ಟು ಬಂದಿದ್ದರು. ಕೊಟ್ಟ ಮಾತಿನಂತೆ ಯಡಿಯೂರಪ್ಪ ನಡೆದುಕೊಂಡಿಲ್ಲ ಎಂದು ರೊಚ್ಚಿಗೆದ್ದ ರೈತರು ಬೆಂಗಳೂರಿಗೆ ಬಂದು ಬಿಜೆಪಿ ಕಚೇರಿಯ ಎದುರು ಧರಣಿ ನಡೆಸಿದ್ದಾರೆ.

ಬಿಜೆಪಿಯ ಈ ವಚನ ಭ್ರಷ್ಟತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರವಲ್ಲ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೂ ತೀವ್ರವಾಗಿ ಖಂಡಿಸಿ, ಬಿಜೆಪಿ ಕರ್ನಾಟಕದ ಜನರಿಗೆ ಟೋಪಿ ಹಾಕಲು ಹೋಗಿದೆ ಎಂದು ಟೀಕಿಸಿದ್ದಾರೆ. ಗೋವಾ ಮುಖ್ಯಮಂತ್ರಿಗೆ ಈ ವಿವಾದದ ಬಗ್ಗೆ ಮಾತುಕತೆ ನಡೆಸುವ ಇಚ್ಛೆ ಇದ್ದರೆ ಅವರು ಕರ್ನಾಟಕದ ಮುಖ್ಯಮಂತ್ರಿಗೆ ಇಲ್ಲವೇ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆಯಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.

 ಈ ಅರ್ಥಹೀನ ರಾಜಕೀಯ ಗಿಮಿಕ್‌ನ್ನು ಮೆಚ್ಚಿ ಬಿಜೆಪಿಯನ್ನು ಬೆಂಬಲಿಸಲು ಕರ್ನಾಟಕದ ಜನ ಮೂರ್ಖರಲ್ಲ. ಈಗಲೂ ಕಾಲ ಮಿಂಚಿಲ್ಲ. ಈ ವಿವಾದವನ್ನು ಬಗೆಹರಿಸುವ ಪ್ರಾಮಾಣಿಕ ಇಚ್ಛೆ ಬಿಜೆಪಿಗೆ ಇದ್ದರೆ ಪ್ರಧಾನಮಂತ್ರಿಯ ಮೂಲಕ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಒಂದು ಒಪ್ಪಂದಕ್ಕೆ ಬಂದು, ನ್ಯಾಯಮಂಡಲಿಯ ಮುಂದೆ ಪ್ರಮಾಣಪತ್ರ ಸಲ್ಲಿಸುವಂತೆ ಮಾಡಬೇಕು. ಆದರೆ, ಬಿಜೆಪಿಗೆ ಅಂತಹ ಪ್ರಾಮಾಣಿಕತೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಮಹಾದಾಯಿಗೆ ಸಂಬಂಧಿಸಿದ ಯಾವುದೇ ಮಾತುಕತೆಯನ್ನು ಕರ್ನಾಟಕ ವಿಧಾನಸಭೆಯ ಚುನಾವಣೆಯ ಆನಂತರ ಮಾಡುವುದಾಗಿ ಗೋವಾ ಮುಖ್ಯಮಂತ್ರಿ ಹೇಳಿರುವುದರಿಂದ ಯಡಿಯೂರಪ್ಪ ನೀಡುತ್ತಿರುವ ಭರವಸೆ ಬರೀ ಬೂಟಾಟಿಕೆ ಎಂಬುದು ಸ್ಪಷ್ಟ. ಅಂತಲೇ ಬೆಂಗಳೂರಿನ ಬಿಜೆಪಿ ಕಚೇರಿಯ ಎದುರು ಉತ್ತರಕರ್ನಾಟಕದ ರೈತರು ಧರಣಿಯನ್ನು ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಹೋರಾಟ ತೀವ್ರವಾಗುವ ಸಾಧ್ಯತೆ ಇದೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)