varthabharthi

ಆರೋಗ್ಯ

ಅದು ಶ್ವಾಸಕೋಶದ ಕ್ಯಾನ್ಸರ್‌ನ ಸೂಚನೆಯಾಗಿರಬಹುದು

ನಿರಂತರ ಕೆಮ್ಮು ಕಾಡುತ್ತಿದೆಯೇ..? ತಕ್ಷಣ ವೈದ್ಯರನ್ನು ಭೇಟಿಯಾಗಿ...

ವಾರ್ತಾ ಭಾರತಿ : 27 Dec, 2017

ಹಲವಾರು ಕಾರಣಗಳಿಂದ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಬಹುದು, ಆದರೆ ಕೆಲವು ಪ್ರಕರಣಗಳಲ್ಲಿ ಕಾರಣ ಸ್ಪಷ್ಟವಿಲ್ಲ. ಆದರೂ ಶೇ.80ರಷ್ಟು ಪ್ರಕರಣಗಳಲ್ಲಿ ಧೂಮ್ರಪಾನವು ಕಾರಣವಾಗಿರುತ್ತದೆ. ಧೂಮ್ರಪಾನಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯ ಇತರರಿಗಿಂತ 10 ಪಟ್ಟು ಹೆಚ್ಚಾಗಿರುತ್ತದೆ.

ಇದರ ಜೊತೆಗೆ ವಂಶವಾಹಿ, ಅಸಬೆಸ್ಟಸ್ ಅಥವಾ ಕಲ್ನಾರು, ವಿಕಿರಣ ಮತ್ತು ರೆಡಾನ್ ಅನಿಲ ಕೂಡ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಅಲ್ಲದೆ ಇತರರು ಧೂಮ್ರಪಾನ ಮಾಡಿದಾಗ ಅದರ ಹೊಗೆ ಸೇವಿಸಿದವರು ಮತ್ತು ದೀರ್ಘ ಕಾಲದಿಂದ ಶ್ವಾಸಕೋಶ ಸಮಸ್ಯೆಗಳಿಂದ ನರಳುತ್ತಿರುವವರು ಕೂಡ ಈ ಮಾರಿಗೆ ತುತ್ತಾಗಬಹುದು. ಶ್ವಾಸಕೋಶದ ಅಂಗಾಂಶಗಳಲ್ಲಿ, ಸಾಮಾನ್ಯವಾಗಿ ಶ್ವಾಸನಾಳದ ಭಿತ್ತಿಕೋಶಗಳಲ್ಲಿ ಕ್ಯಾನ್ಸರ್ ಮೊದಲು ಕಾಣಿಸಿಕೊಳ್ಳುತ್ತದೆ.

ಕ್ಯಾನ್ಸರ್ ಕೋಶಗಳು ಸೂಕ್ಷ್ಮದರ್ಶಕದಲ್ಲಿ ಹೇಗೆ ಕಾಣಿಸುತ್ತವೆ ಎನ್ನುವುದನ್ನು ಅವಲಂಬಿಸಿ ಈ ರೋಗವನ್ನು ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್(ಎಸ್‌ಸಿಎಲ್‌ಸಿ) ಮತ್ತು ನಾನ್-ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್(ಎನ್‌ಎಸ್‌ಸಿಎಲ್‌ಸಿ) ಎಂದು ಎರಡು ಮುಖ್ಯ ವಿಧಗಳನ್ನಾಗಿ ವರ್ಗೀಕರಿಸಲಾಗಿದೆ. ಶ್ವಾಸಕೋಶ ಕ್ಯಾನ್ಸರ್‌ನ ಶೇ.80ರಷ್ಟು ಎನ್‌ಎಸ್‌ಸಿಎಲ್‌ಸಿ ಪ್ರಕರಣಗಳಾಗಿದ್ದು, ಇದು ಶ್ವಾಸನಾಳದ ಭಿತ್ತಿಯಲ್ಲಿ ಕಾಣಿಸಿಕೊಳ್ಳು ತ್ತದೆ. ಶೇ.20ರಷ್ಟು ಪ್ರಕರಣಗಳು ಎಸ್‌ಸಿಎಲ್‌ಸಿ ಆಗಿದ್ದು, ಇದು ನರ ಅಥವಾ ಗ್ರಂಥಿಗಳ ಕೋಶಗಳಲ್ಲಿ ಆರಂಭಗೊಳ್ಳುತ್ತದೆ.

ಒಮ್ಮೆ ಟ್ಯೂಮರ್ ಬೆಳೆಯಲು ಆರಂಭಗೊಂಡರೆ ಅದು ಶ್ವಾಸಕೋಶದಲ್ಲಿಯ ಜಾಗದಲ್ಲಿ ತುಂಬಿಕೊಳ್ಳತೊಡಗುತ್ತದೆ ಮತ್ತು ಉಸಿರಾಟಕ್ಕೆ ತೊಂದರೆ ಅಥವಾ ಕೆಮ್ಮಿಗೆ ಕಾರಣವಾಗುತ್ತದೆ. ಹರಡುತ್ತಲೇ ಹೋಗುವ ಕ್ಯಾನ್ಸರ್ ಶ್ವಾಸಕೋಶದ ಅಂಗಾಂಶಗಳನ್ನು ನಾಶಗೊಳಿಸುತ್ತದೆ ಮತ್ತು ದುಗ್ಧರಸ ಗ್ರಂಥಿಗಳಿಗೆ ಹಾನಿಯನ್ನುಂಟು ಮಾಡಬಹುದು. ಅಂತಿಮವಾಗಿ ಅದು ಪಕ್ಕೆಲಬುಗಳಿಗೆ ಮತ್ತು ಇನ್ನೊಂದು ಶ್ವಾಸಕೋಶಕ್ಕೂ ವ್ಯಾಪಿಸಬ ಹುದು.

ಸಾಮಾನ್ಯವಾಗಿ ಶ್ವಾಸಕೋಶದ ಕ್ಯಾನ್ಸರ್‌ನ್ನು ಪತ್ತೆ ಹಚ್ಚುವ ಮುನ್ನವೇ ಅದು ಹರಡಿಕೊಂಡಿರುತ್ತದೆ. ರಕ್ತಪ್ರವಾಹದಲ್ಲಿ ಸೇರಿಕೊಳ್ಳುವ ಅದು ಸ್ಥಾನಾಂತರಗೊಳ್ಳುತ್ತದೆ ಮತ್ತು ಶರೀರದಲ್ಲಿನ ಇತರ ಅಂಗಾಂಗಗಳಿಗೂ ವ್ಯಾಪಿಸಬಹುದು.

ಶ್ವಾಸಕೋಶದ ಕ್ಯಾನ್ಸರ್ ಮುಂದುವರಿದ ಹಂತವನ್ನು ತಲುಪುವವರೆಗೂ ಅದು ತನ್ನ ಇರುವಿಕೆಯ ಯಾವುದೇ ಲಕ್ಷಣಗಳನ್ನು ತೋರಿಸದಿರಬಹುದು. ಎದೆನೋವು, ನಿಲ್ಲದ ಮತ್ತು ಕ್ರಮೇಣ ತೀವ್ರವಾಗುವ ಕೆಮ್ಮು, ಉಸಿರಾಟದಲ್ಲಿ ತೊಂದರೆ, ಉಬ್ಬಸ, ಉಗುಳಿನಲ್ಲಿ ಅಥವಾ ಕೆಮ್ಮಿದಾಗ ಬರುವ ಕಫದಲ್ಲಿ ರಕ್ತ, ಗೊಗ್ಗರು ಧ್ವನಿ, ಹಸಿವು ಕ್ಷೀಣಿಸುವುದು, ಯಾವುದೇ ಕಾರಣವಿಲ್ಲದೆ ದೇಹತೂಕದಲ್ಲಿ ಇಳಿಕೆ, ವಿಪರೀತ ಬಳಲಿಕೆ, ನುಂಗುವಾಗ ನೋವು ಹಾಗೂ ಮುಖದಲ್ಲಿ ಅಥವಾ ಕುತ್ತಿಗೆಯ ಅಭಿಧಮನಿಗಲ್ಲಿ ಊತ ಇವು ನಾವು ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಲಕ್ಷಣಗಳಾಗಿವೆ.

 ಶ್ವಾಸಕೋಶ ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಆರಂಭಿಸುವ ಮುನ್ನ ವೈದ್ಯರು ಕ್ಯಾನ್ಸರ್ ಎಷ್ಟು ದೊಡ್ಡದಾಗಿದೆ ಮತ್ತು ಅದು ಎಷ್ಟು ಹರಡಿಕೊಂಡಿದೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುತ್ತಾರೆ. ರೋಗಿಯ ವಯಸ್ಸು ಮತ್ತು ಆತನ ಸಾಮಾನ್ಯ ಆರೋಗ್ಯದಂತಹ ಅಂಶಗಳನ್ನು ಪರಿಗಣಿಸಿ ಆತನಿಗೆ ನೀಡಬಹುದಾದ ಅತ್ಯುತ್ತಮ ಚಿಕಿತ್ಸೆಯನ್ನು ನಿರ್ಧರಿಸುತ್ತಾರೆ. ಈ ಕ್ಯಾನ್ಸರ್‌ನ ನಂತರದ ಹಂತಗಳಲ್ಲಿ ಮುಖ್ಯವಾಗಿ ಕೆಮೊಥೆರಪಿಯನ್ನು ಬಳಸಲಾಗುತ್ತದೆ. ರೋಗವು ಆರಂಭದ ಹಂತಗಳಲ್ಲಿಯೇ ಪತ್ತೆಯಾದರೆ ಹಲವಾರು ಇತರ ಚಿಕಿತ್ಸಾ ಪರ್ಯಾಯಗಳಿವೆ.

ಟ್ಯೂಮರ್ ಸಣ್ಣದಾಗಿದ್ದರೆ, ಅದನ್ನು ತೆಗೆಯಲು ಸಾಧ್ಯವೆಂದಾದರೆ ಹಾಗೂ ರೋಗಿಯ ಶ್ವಾಸಕೋಶ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಶಸ್ತ್ರಚಿಕಿತ್ಸೆ ನಡೆಸುವುದನ್ನು ವೈದ್ಯರು ಪರಿಗಣಿಸಬಹುದು. ಆದರೆ ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾದ ರೋಗಿಗಳ ಪೈಕಿ ಕೇವಲ ಶೇ.10ರಷ್ಟು ಜನರು ಮಾತ್ರ ಶಸ್ತ್ರಚಿಕಿತ್ಸೆಗೆ ಅರ್ಹರಾಗುತ್ತಾರೆ.

ರೋಗಿಗಳು ಸಾಕಷ್ಟು ಆರೋಗ್ಯ ಹೊಂದಿಲ್ಲದಿದ್ದರೆ ರೇಡಿಯೊ ಥೆರಪಿ ಉತ್ತಮ ಚಿಕಿತ್ಸೆ ಯಾಗುತ್ತದೆ. ಇಲ್ಲಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಅಥವಾ ಕುಗ್ಗಿಸಲು ಹಲವಾರು ದಿನಗಳ ಅಥವಾ ವಾರಗಳ ಕಾಲ ಕ್ಷ-ಕಿರಣಗಳನ್ನು ಬಳಸಲಾಗುತ್ತದೆ. ರೇಡಿಯೋ ಥೆರಪಿ ಕ್ಯಾನ್ಸರ್ ಕೋಶಗಳನ್ನು ಕುಗ್ಗಿಸಿ ಸಮಸ್ಯೆಯನ್ನು ಸಾಕಷ್ಟು ಕಡಿಮೆ ಮಾಡುತ್ತದೆ. ಶಸ್ತ್ರಚಿಕಿತ್ಸೆಯಷ್ಟು ಉತ್ತಮವಾಗಿ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲವಾದರೂ ರೇಡಿಯೊ ಥೆರಪಿಯು ಕೆಮ್ಮು, ನೋವು ಮತ್ತು ಉಸಿರಾಟದ ತೊಂದರೆಗಳನ್ನು ಕಡಿಮೆಗೊಳಿಸುತ್ತದೆ.

ಕ್ಯಾನ್ಸರ್ ರೋಗಿಗಳು ತಾವು ಒಂಟಿಯಲ್ಲ ಎಂದು ತಿಳಿದುಕೊಳ್ಳುವುದು ಮುಖ್ಯವಾ ಗಿದೆ. ಕುಟುಂಬ ಸದಸ್ಯರು, ಸ್ನೇಹಿತರ ಮತ್ತು ವ್ಯೆದ್ಯಕೀಯ ತಂಡವನ್ನು ಒಳಗೊಂಡ ತನ್ನ ಬಗ್ಗೆ ಕಾಳಜಿ ವಹಿಸುವವರೊಂದಿಗೆ ಮಾತನಾಡುತ್ತಿರುವುದು ಚಿಕಿತ್ಸೆಯಲ್ಲಿ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.

(ಅಂತರ್ಜಾಲ ಕೃಪೆ) ಡಾ.ಟಿ.ರಾಜಾ, ಅಪೋಲೊ ಆಸ್ಪತ್ರೆ, ಚೆನ್ನೈ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)