varthabharthi

ಅನುಗಾಲ

ಜಾತ್ಯತೀತತೆಯ ವ್ಯಾಖ್ಯಾನಗಳು

ವಾರ್ತಾ ಭಾರತಿ : 27 Dec, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಅಭಿವ್ಯಕ್ತಿ ಸ್ವಾತಂತ್ರ್ಯವು ಭಾರತೀಯ ಸಂವಿಧಾನದ ಮೂಲ ಸೆಲೆ. ಸಮಾನತೆಯ ಪ್ರಾಥಮಿಕ ಹಂತ ಅದೇ. ಶಕ್ತ ಬದುಕನ್ನು, ಸಶಕ್ತ ಸಮಾಜವನ್ನು ನಿರ್ಮಿಸುವ ಕಾಯಕದಲ್ಲಿ ಅಭಿವ್ಯಕ್ತಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತದೆ. ಆದ್ದರಿಂದ ಬೇಕು-ಬೇಡಗಳ ಅಭಿಪ್ರಾಯ-ಭಿನ್ನಾಭಿಪ್ರಾಯಗಳೇ ಕೊನೆಗೂ ಒಂದು ಕಾಲದ, ದೇಶದ ಅಳಿವು-ಉಳಿವನ್ನು ನಿರ್ಧರಿಸುತ್ತವೆ. ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆಳುವವರೊಬ್ಬರು ತನ್ನ ಮೂಗಿನ ನೇರಕ್ಕೆ ಹೇಳುವುದು ಹೊಸತೇನಲ್ಲ. ಆದರೆ ಅದು ಅಭಿಪ್ರಾಯದ ಹಂತವನ್ನು ದಾಟಿ ಆಕ್ರೋಶದ, ಪ್ರೇರಣೆಯ ಬದಲು ಇತರರನ್ನು ರೊಚ್ಚಿಗೆಬ್ಬಿಸುವ ಧೋರಣೆಯನ್ನು ಪ್ರಕಟಿಸಿದಾಗ ಸಮಾಜ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಆಗುವ ಹಾನಿ ಅನಿಯಂತ್ರಿತವಾಗುತ್ತದೆ. ಸಾಮಾನ್ಯರಿಗೂ ಹೊಣೆಯಿದೆ. ಆದರೆ ಸಾಮಾನ್ಯರಿಗಿಲ್ಲದ ಗುರುತರ ಜವಾಬ್ದಾರಿ ಜನಪ್ರತಿನಿಧಿಗಳಿಗಿದೆ. ಅದರಲ್ಲೂ ಶಾಸಕರು, ಸಂಸದರು ಪ್ರಜಾತಂತ್ರದ, ಸಂವಿಧಾನದ ಒಂದು ಭಾಗ. ಅವರು ಏನೇ ಹೇಳಬೇಕಾದರೂ ಎಚ್ಚರದಿಂದ ಹೇಳಬೇಕಾಗುತ್ತದೆ. ಚುನಾವಣೆಯ ಸಂದರ್ಭದಲ್ಲಿ ಅವರು ಮಾತುಗಳ ಸೀಮೆಎಣ್ಣೆ ಮತ್ತು ಬೆಂಕಿಕಡ್ಡಿ ಹಿಡಿದು ಹೊರಟರೆ ಅದನ್ನು ಚುನಾವಣಾ ತಂತ್ರವೆಂದು ತಿಳಿಯಬಹುದು. ಅದಲ್ಲದೆ ಮಾಮೂಲಾಗಿ ಅವರು ಹೀಗೆ ಮಾತನಾಡುತ್ತಿದ್ದಾರೆಂದರೆ ಅವರು ಭ್ರಮಾಧೀನರೆಂದೇ ತಿಳಿಯಬೇಕು. ಏಕೆಂದರೆ ಅದು ಅವಿವೇಕತನದ ಲಕ್ಷಣ.

 ಕೇಂದ್ರ ಸಚಿವ ಸಂಪುಟದಲ್ಲಿರುವ ಕರ್ನಾಟಕದ ಸಂಸದ ಅನಂತ ಕುಮಾರ ಹೆಗಡೆ ಭಾರತದ ಸಂವಿಧಾನಕ್ಕೆ, ಜಾತ್ಯತೀತತೆಗೆ ಹೊಸ ವ್ಯಾಖ್ಯಾನಗಳನ್ನು ನೀಡಿದ್ದಾರೆ; ಈಚೆಗೆ ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಅವರು ಜಾತ್ಯತೀತತೆಯನ್ನು ಮತ್ತು ಭಾರತದ ಸಂವಿಧಾನವನ್ನು ‘ತಮ್ಮದೇ ಧಾಟಿಯಲ್ಲಿ’ (ಇದು ಯಾರೊಬ್ಬರ ಗುಣಮಟ್ಟವನ್ನು ಪತ್ರಿಕೆಯವರು ಬರೆಯುವ ಕ್ರಮ!) ಟೀಕಿಸಿದರು. ಅಷ್ಟೇ ಅಲ್ಲ, ‘‘ಜಾತ್ಯತೀತರಿಗೆ ಅಪ್ಪ ಅಮ್ಮ ಯಾರೆಂದು ಗೊತ್ತಿಲ್ಲ’’ ಮತ್ತು ‘‘ಸಂವಿಧಾನ ಬದಲಾಯಿಸುತ್ತೇವೆ’’ ಅಥವಾ ಅದೇ ಅರ್ಥ ಬರುವ ಪದಗಳನ್ನು ಹೇಳಿದರೆಂದು ವರದಿಯಾಗಿದೆ. ‘‘ಜಾತ್ಯತೀತ ಪದಕ್ಕೆ ಅಪ್ಪ-ಅಮ್ಮ ಇಲ್ಲ’’, ‘‘ಇತ್ತೀಚೆಗೆ ಜಾತ್ಯತೀತ ಎಂಬ ಹೊಸ ಪದ ಹುಟ್ಟಿಕೊಂಡಿದೆ. ಇದಕ್ಕೆ ಅಪ್ಪ-ಅಮ್ಮ ಯಾರು ಎಂಬುದು ಗೊತ್ತಿಲ್ಲ.’’ ಎಂಬ ಮಾತುಗಳನ್ನು ನಮ್ಮ ಪ್ರಸಾರ ಮಾಧ್ಯಮಗಳು ಅತ್ಯಂತ ಉತ್ಸಾಹಿತರಾಗಿ ವರದಿಮಾಡಿದ್ದು ನಾಚಿಕೆಗೇಡಿನ ಸಂಗತಿ. ಸಾಮಾಜಿಕ ಹೊಣೆಯರಿತು ವರದಿಮಾಡುವವರಿಗೆ ಇದು ಪ್ರಸಾರ ಮಾಡಬೇಕಾದ ಸುದ್ದಿಯಾಗಬಾರದು. ಯಾರೋ ಒಬ್ಬ-ಕುಡುಕನೆಂದರೂ ಸರಿಯೆ- ಯಾರನ್ನೋ ಬೈದರೆ ಅದನ್ನು ಸುದ್ದಿಯಾಗಿ ಪ್ರಕಟಿಸಬಹುದೇ ಎಂಬುದನ್ನು ವರದಿಗಾರರು ಗಮನಿಸಬೇಕು. ಪತ್ರಿಕೆಯ ಸುದ್ದಿ ದಿನದ ಆನಂತರವೂ ತನ್ನ ಮೌಲ್ಯವನ್ನು ಪಡೆಯಬೇಕಾದರೆ ಅದು ಮಹತ್ವದ್ದಾಗಿರಬೇಕು. ಅದಲ್ಲದಿದ್ದರೆ ಯಾವುದನ್ನೂ ಸುದ್ದಿಯಾಗಿಸಬಹುದು. ಪತ್ರಿಕೆಗಳ ಹೊಣೆಗಾರಿಕೆಯನ್ನು ಅವಲೋಕಿಸಿದರೆ ಅವನ್ನು ನಂಬಿ ಯಾರಾದರೂ ಯಾವುದಾದರೂ ವಿಶ್ಲೇಷಣೆಯನ್ನು ಮಾಡಬಹುದೇ ಎಂದು ಯೋಚಿಸಬೇಕಾದ ಪರಿಸ್ಥಿತಿಯಿದೆ. ಹೆಗಡೆಯವರು ರಾಜಕಾರಣಕ್ಕೆ ಹೊಸದೊಂದು ಭಾಷ್ಯ ಬರೆಯುತ್ತಿ ದ್ದಾರೇನೋ ತಿಳಿಯದು. ಅವರನ್ನು ವೈಯಕ್ತಿಕವಾಗಿ ನಿಂದಿಸುವುದೂ ತಪ್ಪು. ಏಕೆಂದರೆ ಒಬ್ಬ ಪ್ರಾತಿನಿಧಿಕ ವ್ಯಕ್ತಿಯು ಒಂದು ಕೇಡನ್ನು ಸೂಚಿಸುತ್ತಿ ದ್ದಾನೆಂದರೆ ಆತನ ಹಿಂದೆ ಅಂತಹ ಅನೇಕ ಕೆಟ್ಟ ಮನಸ್ಸುಗಳಿವೆಯೆಂದೇ ಅರ್ಥ. ಆದ್ದರಿಂದ ವ್ಯಕ್ತಿ ಪ್ರಾಸಂಗಿಕ; ಆನುಷಂಗಿಕ. ಪ್ರಕಟಗೊಡ ಭಾವ(ನೆ), ಅದರ ಹಿಂದೆ ಕಾರ್ಯಮಗ್ನವಾದ ಮತ್ತು ಅದು ಮಾಡಿದ, ಮಾಡುವ, ಮಾಡಬಲ್ಲ ಪರಿಣಾಮಗಳು, ಫಲಿತಾಂಶಗಳು ಮುಖ್ಯ. ಪ್ರಾಯಃ ತಮ್ಮ ಹಠವಾದಿ ದರ್ಪರಾಜಕಾರಣದಿಂದ ಪ್ರಧಾನಿಯಾದ ಮೋದಿ ಮತ್ತು ಈಚೆಗೆ ಇಂತಹ ಮೂಲಭೂತವಾದದ ಬಲದಿಂದಲೇ ಮುಖ್ಯಮಂತ್ರಿಯಾದ ಯೋಗಿಯ ಪ್ರೇರಣೆಯಿಂದ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಆಸೆ, ಆಕಾಂಕ್ಷೆ ಅವರಿಂದ ಹೀಗೆ ಹೇಳಿಸಿರಬಹುದೇನೋ?

 ‘ಜಾತ್ಯತೀತತೆ’ ಎಂಬುದು ಒಂದು ಪದ. ಪದ ಮಾತ್ರವಲ್ಲ ಒಂದು ಸಿದ್ಧಾಂತ. ಒಂದು ಪದದ ಅರ್ಥ ಅಥವಾ ವ್ಯತ್ಪತ್ತಿ ನಮಗೆ ಗೊತ್ತಿಲ್ಲ ಎಂದಾಕ್ಷಣ ಅದರ ಅಪ್ಪ-ಅಮ್ಮ ಯಾರೆಂಬುದು ಗೊತ್ತಿಲ್ಲ ಎಂಬುದು ಅಜ್ಞಾನದ ಚರಮಸ್ಥಿತಿ. ಅಧಿಕಾರ ಸ್ಥಾನದಲ್ಲಿರುವವರು ಇದನ್ನು ಹೇಳಿದಾಗ ಸಹಜವಾಗಿಯೇ ಅವರ ಮಾತುಗಳಿಗೆ ತಲೆದೂಗುವುದಕ್ಕೆ, ತಲೆಯಾಡಿಸುವುದಕ್ಕೆ ಹೌದಪ್ಪಗಳಿರುತ್ತಾರೆ. ಆದರೆ ಸತ್ಯದೆದುರು ಇವೆಲ್ಲವೂ ಗೌಣ. ಅಪ್ಪ-ಅಮ್ಮ ಇಲ್ಲದಿರುವವರಿಗೆ ಅನಾಥರೆಂದು ಹೆಸರು. ಈ ದೇಶದಲ್ಲಿ ಸಾಕಷ್ಟು ಅನಾಥ ಮಕ್ಕಳಿದ್ದಾರೆ. ಅವರ ಅಪ್ಪ-ಅಮ್ಮ ಯಾರೆಂದು ಸಾಮಾನ್ಯವಾಗಿ ಗೊತ್ತಿರುವುದಿಲ್ಲ. (ಗೊತ್ತಿರಬೇಕಾದ ಅಗತ್ಯವೂ ಇರುವುದಿಲ್ಲ.) ಆದರೆ ಅಪ್ಪ-ಅಮ್ಮ ಇದ್ದೇ ಇರುತ್ತಾರಲ್ಲ!

‘ಜಾತ್ಯತೀತತೆ’ ಎಂಬುದು ಈ ಸಂಸದರಿಗೆ ಹೊಸ ಪದವಿರಬಹುದು. ಆದರೆ ಜ್ಞಾನಕೋಶಕ್ಕಲ್ಲ. ಭಾರತದ ಸಂವಿಧಾನದಲ್ಲೇ ಈ ಪದ ಸೇರಿಕೊಂಡಿದೆ. ಸಂಸದರಿಗೆ ಸಂವಿಧಾನದ ಪರಿಚಯವಿಲ್ಲದಿದ್ದರೆ ಪ್ರಜೆಗಳಾದರೂ ಏನು ಮಾಡಿಯಾರು? ಮನುಷ್ಯನ ಹಾಗೆ ಪದವೂ ಅಪ್ಪ ಅಮ್ಮ ಇಲ್ಲದೆ ಹುಟ್ಟುವುದಿಲ್ಲ ಎಂಬುದನ್ನು ಅರಿತು ಮಾತನಾಡಿದರೆ ಕ್ಷೇಮ. (ವಾಗರ್ಥ ಪ್ರತಿಪಾದನೆಯಲ್ಲೂ ಇದನ್ನು ಹೇಳಲಾಗಿದೆ.) ಜಾತಿ+ಅತೀತ ಎಂಬ ಎರಡು ಪದಗಳ ಜೋಡಣೆೆ ಇದು. ತಿಳಿಯದ್ದನ್ನು ಇಲ್ಲವೆಂದು ಪ್ರಚಾರಮಾಡುವ ಮೊದಲು ಮತ್ತು ಬದಲು ಅದರ ಬಗ್ಗೆ ತಿಳಿದವರಿಂದ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು.

(Secularism) ಎಂದು ಆಂಗ್ಲ ಭಾಷೆಯಲ್ಲಿ ಚಾಲ್ತಿಯಲ್ಲಿರುವ ಈ ಪದದ ಮಾಹಿತಿ ಸೂಕ್ಷ್ಮವಾಗಿ ಹೀಗಿದೆ: ಯುರೋಪಿನಲ್ಲಿ ಕ್ರೈಸ್ತ ಧಾರ್ಮಿಕರೇ ಸಮಾಜದ ಲಗಾಮನ್ನು ಹಿಡಿದು ನಿಯಂತ್ರಿಸುತ್ತಿದ್ದ ಕಾಲವೊಂದಿತ್ತು. ಆಳುವ ಅರಸರಿದ್ದರೂ ಅವರನ್ನೂ ಧರ್ಮಪೀಠವೇ ನಿಯಂತ್ರಿಸುತ್ತಿತ್ತು. ಯೇಸುವನ್ನು ಶಿಲುಬೆಗೇರಿಸಿದ, ಗೆಲಿಲಿಯೋವನ್ನು ಶಿಕ್ಷಿಸಿದ ದಬ್ಬಾಳಿಕೆಯೂ ಮತೀಯ ಸಾರ್ವಭೌಮತ್ವದ್ದೇ. ಇದು ಮಧ್ಯಯುಗದ ವರೆಗೂ ಮುಂದುವರಿಯಿತು. ಎಲ್ಲ ತತ್ವಗಳೂ ಇಂತಹ ಧಾರ್ಮಿಕ ನಂಬಿಕೆಗಳನ್ನೇ ಅವಲಂಬಿಸಿತು. ಮಧ್ಯಯುಗದ ತತ್ವಶಾಸ್ತ್ರಜ್ಞರ ಇಂತಹ ಪ್ರಮೇಯಗಳನ್ನು 16ನೇ ಶತಮಾನದ (ಮತ್ತು 17ನೇ ಶತಮಾನದ ಆರಂಭದ)ಲ್ಲಿ ಪ್ರಶ್ನಿಸಲಾಯಿತು. ನಿಕೋಲೋ ಮಷಿಯವಲ್ಲಿ ಎಂಬ ಪ್ರಖ್ಯಾತ ಫ್ಲೋರೆಂಟೀನ್ (ಇಟಲಿ) ರಾಜಕಾರಣಿಯು ಕ್ರೈಸ್ತ ಆದರ್ಶವಾದವನ್ನು ಧಿಕ್ಕರಿಸಿ ವಾಸ್ತವ ಅಧಿಕಾರ ರಾಜಕಾರಣವನ್ನು ಎತ್ತಿಹಿಡಿದ. ಮಷಿಯವಲ್ಲಿಯ ಚಿಂತನೆಗಳನ್ನು ಆಂಗ್ಲ ತತ್ವಶಾಸ್ತ್ರಜ್ಞ ಥಾಮಸ್ ಹಾಬ್ಸ್ ಸಾಮಾನ್ಯೀಕರಿಸಿದ. ಹಾಬ್ಸ್‌ನ ದೃಷ್ಟಿಯಲ್ಲಿ ಪ್ರತೀ ಮನುಷ್ಯನ ಇಡೀ ಬದುಕೇ ‘ಅಧಿಕಾರಕ್ಕಾಗಿ ನಡೆಯುವ ಅವಿರತ ಹುಡುಕಾಟ’. ಈ ದೃಷ್ಟಿಕೋನವು ರಾಜಕೀಯವನ್ನು ಧರ್ಮದಿಂದ ಬೇರ್ಪಡಿಸಿದ್ದಕ್ಕಾಗಿ ಜಾತ್ಯತೀತತೆಯೆಂದು ಪ್ರಸಿದ್ಧಿಯಾಯಿತು. ಈ ಚಿಂತನೆಗಳನ್ನು ಕಾನೂನಿನ ಸ್ವರೂಪಕ್ಕೆ ಇಳಿಸಿದ ಮೂವರು ಬರಹಗಾರರೆಂದರೆ ಜೋ ಬಾಡಿನ್ ಎಂಬ ಫ್ರೆಂಚ್ ಕಾನೂನು ತಜ್ಞ, ಜೊಹಾನ್ಸ್ ಅಲ್ತೂಸಿಯಸ್ ಎಂಬ ಜರ್ಮನ್ ರಾಜನೀತಿಜ್ಞ ಮತ್ತು ಹ್ಯುಗೋ ಗ್ರೋಷಿಯಸ್ ಎಂಬ ಡಚ್ ನ್ಯಾಯವಾದಿ. ಅಂತಾರಾಷ್ಟ್ರೀಯ ಕಾನೂನು ಇದನ್ನೇ ಆಧರಿಸಿದೆ.

ಡಿ.ಕೆ. ಭಾರದ್ವಾಜರ ಆಂಗ್ಲ-ಕನ್ನಡ ಅರ್ಥಕೋಶದಲ್ಲಿ (Secularism) ಎಂಬ ಪದಕ್ಕೆ ‘‘ರಾಜನೀತಿ, ನೀತಿ ಮತ್ತು ಶಿಕ್ಷಣಗಳು ಧರ್ಮ ಪ್ರಭಾವದಿಂದ ಬೇರ್ಪಡಬೇಕೆಂಬ ತತ್ವ; ಜಾತ್ಯತೀತತೆ’’ ಎಂಬ ಅರ್ಥವನ್ನು ನೀಡಲಾಗಿದೆ. ಭಾರತದಲ್ಲಿ ರಾಜಕೀಯ ರಾಜಿಸೂತ್ರದಿಂದಾಗಿ ಇದನ್ನೇ ಧರ್ಮನಿರಪೇಕ್ಷತೆ ಎಂದು ಕರೆಯುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು ಹೊರತಂದ ಕನ್ನಡ ನಿಘಂಟುವಿನಲ್ಲಿ ಜಾತ್ಯತೀತ ಎಂಬ ಪದಕ್ಕೆ ಗುಣವಾಚಕವಾಗಿ ಜಾತಿಯನ್ನು ಮೀರಿದ; ಜಾತಿ ಭಾವನೆಯನ್ನು ಬಿಟ್ಟ; ಎಂಬ ಹಾಗೂ ನಾಮಪದವಾಗಿ ಜಾತಿಯನ್ನು ಮೀರಿದವನು; ಜಾತಿಯ ದುರಭಿಮಾನವನ್ನು ಬಿಟ್ಟವನು ಎಂಬ ಅರ್ಥಗಳಿವೆ. ಇಂತಹ ಪಾರಿಭಾಷಿಕ ಪದದ ಮೌಲ್ಯವನ್ನು ಗುರುತಿಸಿ ಗೌರವಿಸಬೇಕು. ಜಾತ್ಯತೀತನು ವಿಶಾಲವಾದ ಧೋರಣೆಯನ್ನೂ ದೃಷ್ಟಿಕೋನವನ್ನೂ ಹೊಂದಿರುತ್ತಾನೆ. ಇದಕ್ಕೆ ಹೊರತಾದವನು ಕುತ್ಸಿತ, ಸಂಕುಚಿತ ಮನಸ್ಥಿತಿಯನ್ನು ಹೊಂದಿರುತ್ತಾನೆ. ಜಾತ್ಯತೀತತೆ ಎಂಬ ಪದವನ್ನು ಇಂದಿರಾ ಸರಕಾರ ಭಾರತದ ಸಂವಿಧಾನದಲ್ಲಿ ಸೇರಿಸಿತು. ರಾಜಕೀಯ ಉದ್ದೇಶಕ್ಕಾಗಿ ಸೇರಿಸಿದ ಈ ಪದವನ್ನು ಆನಂತರ ಬಂದ ಯಾವ ಸರಕಾರವೂ ಕಿತ್ತು ಹಾಕುವ ಧೈರ್ಯ ತೋರಲಿಲ್ಲ. ಅದಕ್ಕೆ ಬಹುಮತದ ಕೊರತೆಗಿಂತಲೂ ದೂರಗಾಮಿ ವಿವೇಕವೇ ಕಾರಣವಿರಬಹುದು. ಸಂವಿಧಾನವನ್ನು ತಿದ್ದುಪಡಿ ಮಾಡುತ್ತೇವೆ ಎಂದು ಒಬ್ಬ ಸಂಸದರು ಹೇಳಿದರೆ ಗಾಬರಿಪಡಬೇಕಾಗಿಲ್ಲ. ಸಂವಿಧಾನವನ್ನು ತಿದ್ದುಪಡಿಮಾಡಬಹುದು; ಆದರೆ ಬದಲಾಯಿಸಲು ಸಾಧ್ಯವಿಲ್ಲ ಎಂದು ಅರಿಯದ ಮೂಢರು ಹೇಳಿದ ಮಾತಿಗೆ ಸಿಟ್ಟಿಗೇಳುವ ಅಗತ್ಯವಿಲ್ಲ. ತಿದ್ದುಪಡಿ ಮತ್ತು ಬದಲಾವಣೆಯ ನಡುವಣ ವ್ಯತ್ಯಾಸ ಗೊತ್ತಿಲ್ಲದ ಮಂದಿಯ ಬಗ್ಗೆ ಅನುಕಂಪವಿರಲಿ. ನಮ್ಮ ರಾಜಕಾರಣಿಗಳು ಜಾತ್ಯತೀತತೆಯನ್ನು ತಮ್ಮ ನಾಲಗೆಯಲ್ಲಿ ಅಟ್ಟಾಡಿಸಿ ಚಿಂದಿ ಮಾಡಿದ್ದಾರೆ; ಹಗುರಾಗಿಸಿದ್ದಾರೆ. ಈ ಪ್ರವೃತ್ತಿಯನ್ನು ಆರಂಭಿಸಿದವರು ಈಗ ಮೂಲೆಪಾಲಾಗಿರುವ ಬಿಜೆಪಿಯ ಹಿರಿಯ ರಾಜಕಾರಣಿ ಎಲ್.ಕೆ.ಅಡ್ವಾಣಿಯವರು. ಅಯೋಧ್ಯಾ ಆಂದೋಲನದ ಸಂದರ್ಭದಲ್ಲಿ ಅವರು ಈ ಪದವನ್ನು ಹುಟ್ಟುಹಾಕಿದರು; ಕಾಂಗ್ರೆಸನ್ನು ದೂಷಿಸುವ ಭರದಲ್ಲಿ ಢೋಂಗಿ ಜಾತ್ಯತೀತತೆ (pseudo secularism) ಎಂಬ ಪದವನ್ನು ಸೃಷ್ಟಿಸಿದರು. ಈಗ ಅವರ ರಾಜಕೀಯ ಬದುಕು ಮುಗಿದರೂ ಈ ಪದ ಉಳಿದುಕೊಂಡಿದೆ. ಅಡ್ವಾಣಿಯವರ ಅಭಿಪ್ರಾಯವನ್ನು ಗೌರವಿಸೋಣ. ಏಕೆಂದರೆ ಅದು ರಾಜಕಾರಣ. ಲೋಕೋ ಭಿನ್ನ ರುಚಿಃ. ಆದರೆ ಇದನ್ನು ರಾಜಕಾರಣದಿಂದ ಅನಾಮತ್ತಾಗಿ ಎತ್ತಿಕೊಂಡು ಎಲ್ಲ ಕಡೆ ಮಾತನಾಡುವವರಿಗೆ ಇದು ಬಿಟ್ಟಿ ಕೂಳಾಗಿದೆ. ಪರಿಣಾಮವಾಗಿ ಭಾಷೆ ನರಳುತ್ತಿದೆ. ಜಾತ್ಯತೀತತೆ ಒಂದು ಗುಣಾತ್ಮಕ, ಧನಾತ್ಮಕ ವಿಚಾರ-ಧರ್ಮದ ಹಾಗೆ. ಅದನ್ನು ಅನುಷ್ಠಾನಗೊಳಿಸುವವರು, ಅದರ ಅರ್ಥವನ್ನು ತಿಳಿದಿರಬೇಕು. ಇಲ್ಲವಾದರೆ ಇಂದು ಧರ್ಮವು ಹೇಗೆ ದುರಾಡಳಿತಕ್ಕೆ ಒಳಪಟ್ಟಿದೆಯೋ ಹಾಗೆಯೇ ಜಾತ್ಯತೀತತೆಯೂ ರಾಜಕೀಯದ ದುಷ್ಟತನಕ್ಕೆ ಬಲಿಯಾದೀತು. ಇದಕ್ಕೆ ಪರ್ಯಾಯವಾಗಿ ಮತಾಂಧತೆ ಅಥವಾ ಕೋಮುವಾದ ಎಂಬ ಪದವಿದೆ. ಜಾತಿ-ಮತಗಳನ್ನೇ ಆಧರಿಸಿ ವಿನಾಶಕಾರಿ ಉದ್ದೇಶಗಳಿಗಾಗಿ ಒಗ್ಗಟ್ಟನ್ನು ಸ್ಥಾಪಿಸುವುದು ಇಂತಹವರ ಧ್ಯೇಯವಾಗಿರುತ್ತದೆ. ಇದು ಎಲ್ಲ ಜಾತಿ-ಮತಗಳಲ್ಲಿದೆಯೆಂಬುದನ್ನು ನೆನಪಿಡಬೇಕು. ಯಾವುದೇ ಒಂದು ಮತದ ಪರವಾಗಿ ಅಥವಾ ಇನ್ನೊಂದನ್ನು ವಿರೋಧಿಸಲು ಇದು ಸದಾ ಬಳಕೆಯಲ್ಲಿದೆ. ನಮ್ಮ ಮಾಧ್ಯಮಗಳು ಈ (ಕು)ತಂತ್ರಕ್ಕೆ ಆಗಲೇ ಬಲಿಯಾಗಿವೆ. ಉದಾಹರಣೆಗೆ ಹಿಂದೂ ಧರ್ಮದ ಹೆಸರಿನಲ್ಲಿ ಜನರನ್ನು ಧ್ರುವೀಕರಿಸುವ ಸಂಘಟನೆಗಳನ್ನು ಹಿಂದೂಪರಗಳೆಂದು ಪ್ರಸಾರ, ಪ್ರಚಾರ ಮಾಡಲಾಗುತ್ತದೆ. ಇವು ಹಿಂದೂ ಪರ ಆಗಲು ಸಾಧ್ಯವಿಲ್ಲ. ಹೆಚ್ಚೆಂದರೆ ಒಂದು ಗೊತ್ತಾದ ರಾಜಕೀಯ ಪಕ್ಷದ, ಅಥವಾ ಮತೀಯ ಸಂಘಟನೆಗಳ ಹಿಂಸಾಪರ. ಯಾರೂ ಹಿಂದೂ, ಇಸ್ಲಾಮ್ ಅಥವಾ ಇನ್ಯಾವುದೇ ಮತೀಯರ ಪರವಾಗಿ ಗುತ್ತಿಗೆ ಹಕ್ಕನ್ನು ಪಡೆದಿರುವುದಿಲ್ಲ. ಯಾವುದೇ ಸಮಾಜದಲ್ಲಿ ಬಹುಪಾಲು ಜನರು ಮುಠ್ಠಾಳರೋ ಧೂರ್ತರೋ ಆಗಿರುತ್ತಾರೆ. ಅವರಿಗೆ ಬೆಂಬಲವಾಗಿ ನಿಲ್ಲುವ ಮಿನಿರೌಡಿಗಳೂ ಒಂದಷ್ಟಿರುತ್ತಾರೆ. ಜನರಿಗೆ ಸಾಮಾನ್ಯವಾಗಿ ಇದು ಗೊತ್ತಿರುವುದಿಲ್ಲ. ಗೊತ್ತಿದ್ದರೂ ತಮ್ಮ ಸ್ವಾರ್ಥ ಸಾಧನೆಗೆ, ಹಿತಕ್ಕೆ ಅನುಗುಣವಾಗಿ ಅವರು ಇಂತಹ ಮರುಳುತನವನ್ನು ಸ್ವೀಕರಿಸುತ್ತಾರೆ. ತಮಗೇಕೆ ಈ ದೇಶ-ಕಾಲ ಎಂದುಕೊಂಡು ತಮ್ಮ ಪಾಡಿಗೆ ತಾವಿರುವ ಅವಕಾಶವಾದಿಗಳು ಇನ್ನೊಂದಷ್ಟು ಮಂದಿ. ಅವರೂ ಸರಿ ಇವರೂ ಸರಿ ಎಂಬ ಜಾಣರೂ ಇರುತ್ತಾರೆ. ಇವರ ನಡುವೆ ಬೆರಳೆಣಿಕೆಯ ಪ್ರಾಜ್ಞರು ಅಸಹಾಯಕರಾಗುತ್ತಾರೆ; ಪ್ರತಿರೋಧಿಸಿದರೆ ಹುತಾತ್ಮರಾಗುತ್ತಾರೆ.

ಅದರಿಂದಾಗಿಯೇ ಜಾತ್ಯತೀತತೆಯು ಅನಾಥವಾಗುತ್ತದೆ. ಹಾಗಾಗಬಾರದು. ಆದರೆ ದುರದೃಷ್ಟ.

ಸಂವಿಧಾನವನ್ನು ತಿದ್ದುಪಡಿ ಮಾಡುತ್ತೇವೆ ಎಂದು ಒಬ್ಬ ಸಂಸದರು ಹೇಳಿದರೆ ಗಾಬರಿಪಡಬೇಕಾಗಿಲ್ಲ. ಸಂವಿಧಾನವನ್ನು ತಿದ್ದುಪಡಿಮಾಡಬಹುದು; ಆದರೆ ಬದಲಾಯಿಸಲು ಸಾಧ್ಯವಿಲ್ಲ ಎಂದು ಅರಿಯದ ಮೂಢರು ಹೇಳಿದ ಮಾತಿಗೆ ಸಿಟ್ಟಿಗೇಳುವ ಅಗತ್ಯವಿಲ್ಲ. ತಿದ್ದುಪಡಿ ಮತ್ತು ಬದಲಾವಣೆಯ ನಡುವಣ ವ್ಯತ್ಯಾಸ ಗೊತ್ತಿಲ್ಲದ ಮಂದಿಯ ಬಗ್ಗೆ ಅನುಕಂಪವಿರಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)