varthabharthi


ಇ-ಜಗತ್ತು

ಹ್ಯಾಕರ್ ಗಳ ಈ ತಂತ್ರದ ಬಗ್ಗೆ ಅರಿತುಕೊಳ್ಳಿ

ನಿಮ್ಮ ಮೊಬೈಲ್ ನಿಧಾನವಾಗಿರಲು ಕ್ರಿಪ್ಟೊ ಕಾಯ್ನೊ ಮೈನಿಂಗ್ ಕಾರಣವಾಗಿರಬಹುದು!

ವಾರ್ತಾ ಭಾರತಿ : 28 Dec, 2017

ಬ್ರೌಸರ್ ಆಧಾರಿತ ಕ್ರಿಪ್ಟೊ ಕರೆನ್ಸಿಗಳ ಮೈನಿಂಗ್ ಅಥವಾ ಗಣಿಗಾರಿಕೆ ಇತ್ತೀಚಿನ ತಿಂಗಳುಗಳಲ್ಲಿ ತೀವ್ರವಾಗಿ ಹೆಚ್ಚುತ್ತಿದೆ. ಈ ವರ್ಚುವಲ್ ಕರೆನ್ಸಿಗಳನ್ನು ಹೆಕ್ಕಿಕೊಳ್ಳಲು ಕೋಡ್ ಒಳಗೊಂಡಿರುವ ಮೊಬೈಲ್ ಆ್ಯಪ್‌ಗಳ ಸಂಖ್ಯೆಯಲ್ಲಿ ಶೇ.34ರಷ್ಟು ಏರಿಕೆ ಯಾಗಿದೆ ಎಂದು ಸೈಬರ್ ಸೆಕ್ಯೂರಿಟಿ ಕಂಪನಿ ಸಿಮಂಟೆಕ್ ಹೇಳಿದೆ.

ಕ್ರಿಪ್ಟೊ ಕಾಯ್ನೊಗಳನ್ನು ಆರ್‌ಬಿಐನಂತಹ ಯಾವುದೇ ಶಾಸನಬದ್ಧ ಸಂಸ್ಥೆಗಳು ಸೃಷ್ಟಿಸುತ್ತಿಲ್ಲ. ಮೊನೆರೊ ಮತ್ತು ಬಿಟ್‌ಕಾಯ್ನಿನಂತಹ ಈ ಕರೆನ್ಸಿಗಳನ್ನು ಸಂಕೀರ್ಣ ಗಣಿತ ಸಮಸ್ಯೆಗಳನ್ನು ಬಿಡಿಸುವ ಮೂಲಕ ಕಂಪ್ಯೂಟರ್ ಕೋಡ್‌ಗಳಿಂದ ಸೃಷ್ಟಿಸಲಾಗುತ್ತದೆ. ಈ ಪ್ರಕ್ರಿಯೆಗೆ ಅಗಾಧ ಕಂಪ್ಯೂಟರ್ ಶಕ್ತಿ ಬೇಕಾಗುತ್ತದೆ.

ಸೈಬರ್ ಖದೀಮರು ಇಂತಹ ಕೋಡ್‌ನ ತುಣುಕೊಂದನ್ನು ಜಾಲತಾಣದಲ್ಲಿ ಸೇರಿಸುವ ಮೂಲಕ ಈ ಜಾಲತಾಣಕ್ಕೆ ಭೇಟಿ ನೀಡುವವರ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಸಾಧನಗಳನ್ನು ಅವರ ಅರಿವಿಗೆ ಬಾರದಂತೆ ಕ್ರಿಪ್ಟೊಕರೆನ್ಸಿಗಳ ಮೈನಿಂಗ್‌ಗೆ ಬಳಸುತ್ತಾರೆ. ಈ ಮೈನಿಂಗ್ ಪ್ರಕ್ರಿಯೆಯನ್ನು ಯಾರ ಗಮನಕ್ಕೂ ಬಾರದಂತೆ ತ್ವರಿತವಾಗಿ ಮತ್ತು ಸದ್ದಿಲ್ಲದೆ ಆರಂಭಿಸಬಹುದು. ಇದರಿಂದಾಗಿ ಮೊಬೈಲ್‌ಗಳ ಕಾರ್ಯ ನಿರ್ವಹಣೆ ನಿಧಾನಗೊಳ್ಳುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಜನರು ಭೇಟಿ ನೀಡುವ ಭಾರತೀಯ ಜಾಲತಾಣಗಳು ಈ ಬೆಳವಣಿಗೆಯ ಬಗ್ಗೆ ಗಮನ ಹರಿಸಬೇಕಾಗಿದೆ ಎನ್ನುತ್ತಾರೆ ಸೆಕ್ಯೂರಿಟಿ ಸಂಶೋಧಕ ಇಂದ್ರಜಿತ್ ಭುಯಾನ್.

ಬ್ರೌಸರ್ ಆಧಾರಿತ ಮೈನಿಂಗ್ 2013ರಿಂದಲೇ ಚಾಲ್ತಿಯಲ್ಲಿದೆಯಾದರೂ 2017ರ ಕೊನೆಯ ತಿಂಗಳುಗಳಲ್ಲಿ ಬಿಟ್‌ಕಾಯ್ನಿಗಳಂತಹ ಕ್ರಿಪ್ಟೊಕರೆನ್ಸಿಗಳ ವೌಲ್ಯ ಗಗನಕ್ಕೇರಿದ ಹಿನ್ನೆಲೆಯಲ್ಲಿ ಈ ಮೈನಿಂಗ್ ಚಟುವಟಿಕೆಗಳೂ ಬಿರುಸುಗೊಂಡಿವೆ.

ಕಳೆದ ಸೆಪ್ಟೆಂಬರ್‌ನಲ್ಲಿ ಕಾಯ್ನೆಹೈವ್ ಹೊಸ ಬ್ರೌಸರ್ ಆಧಾರಿತ ಮೈನಿಂಗ್ ಸೇವೆಗೆ ಚಾಲನೆ ನೀಡಿದ್ದು ಹಲವಾರು ವರ್ಷಗಳ ಕಾಲ ನಿಸ್ತೇಜವಾಗಿದ್ದ ಈ ಚಟುವಟಿಕೆಗಳು ತೀವ್ರಗೊಳ್ಳಲು ಕಾರಣವಾಗಿರುವಂತಿದೆ ಎನ್ನುತ್ತದೆ ಸಿಮಂಟೆಕ್ ವರದಿ.

ಕಾಯ್ನಹೈವ್ ಒದಗಿಸಿರುವ ಸೇವೆಯು ತಮ್ಮ ಜಾಲತಾಣಗಳಿಗೆ ಭೇಟಿ ನೀಡುವವರ ಕಂಪ್ಯೂಟರ್ ಶಕ್ತಿಯನ್ನು ಪಡೆಯಲು ಈ ತಾಣಗಳ ಮಾಲಕರು ತಮ್ಮ ಕೋಡ್‌ಗಳನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಉದಾಹರಣೆಗೆ 1,000 ಜನರು ಟಿಕೆಟ್ ಬುಕಿಂಗ್ ವೆಬ್‌ಸೈಟ್‌ವೊಂದಕ್ಕೆ ಭೇಟಿ ನೀಡಿದರೆ ಅದರ ಮಾಲಿಕ ಮೈನಿಂಗ್‌ಗೆ 1,000 ಕಂಪ್ಯೂಟರ್‌ಗಳ ಸಿಪಿಯು ಪವರ್‌ನ್ನು ಬಳಸಿ ಕ್ರಿಪ್ಟೊಕರೆನ್ಸಿಯನ್ನು ಗಳಿಸಬಹುದು ಎನ್ನುತ್ತಾರೆ ಭುಯಾನ್.

 ಯಾವುದೇ ವೆಬ್‌ಸೈಟ್‌ನಲ್ಲಿ ಕೋಡ್ ಅನ್ನು ಸೇರಿಸುವುದು ಅತ್ಯಂತ ಸುಲಭವಾಗಿದೆ ಮತ್ತು ತನ್ಮೂಲಕ ಸುಲಭವಾಗಿ ಮೈನಿಂಗ್ ಆರಂಭಿಸಬಹುದು. ವೆಬ್‌ಸೈಟ್ ಮಿಲಿಯ ಗಟ್ಟಲೆ ಹಿಟ್ಸ್ ಮತ್ತು ಟ್ರಾಫಿಕ್ ಹೊಂದಿದ್ದರೆ ಮಾತ್ರ ಇದು ಲಾಭದಾಯಕವಾಗುತ್ತದೆ ಎನ್ನುತ್ತಾರೆ ಹೆಸರು ಹೇಳಿಕೊಳ್ಳಲು ಬಯಸದ ಮುಂಬೈನ ಟೆಕ್ ಬ್ಲಾಗರ್ ಓರ್ವರು.

ಮೈನಿಂಗ್ ಮೊಬೈಲ್ ಅಥವಾ ಕಂಪ್ಯೂಟರ್ ಬಳಕೆದಾರನ ಅರಿವಿಗೆ ಬಾರದಂತೆ ನಡೆಯುತ್ತದೆ. ಇದರಿಂದಾಗಿ ಸಾಧನವು ಬಿಸಿಯಾಗುತ್ತದೆ ಮತ್ತು ನಿಧಾನಗೊಳ್ಳುತ್ತದೆ.

ಇತ್ತೀಚಿನ ಕೆಲವು ತಿಂಗಳ ಹಿಂದಿನವರೆಗೂ ಬಳಕೆದಾರ ವೆಬ್‌ಸೈಟ್‌ನ್ನು ಓಪನ್ ಮಾಡಿದರೆ ಮಾತ್ರ ಕೋಡ್ ಕೆಲಸ ಮಾಡುತ್ತಿತ್ತು. ಆದರೆ ಈಗ ಹೊಸ ಮಾದರಿಯ ಕೋಡ್ ಸ್ಟ್ರಿಪ್‌ಗಳು ಬರುತ್ತಿದ್ದು, ವೆಬ್‌ಸೈಟ್‌ನ್ನು ಮುಚ್ಚಿದರೂ ಅವು ಮೈನಿಂಗ್‌ಗೆ ಕಂಪ್ಯೂಟರ್ ಹಾರ್ಡ್‌ವೇರ್‌ನ್ನು ಬಳಸುವುದನ್ನು ಮುಂದುವರಿಸುತ್ತವೆ. ಈ ಸೈಬರ್ ಕಳ್ಳರು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಸ್ಕ್ರಿಪ್ಟ್‌ಗಳನ್ನು ಸೇರಿಸುತ್ತಾರೆ ಮತ್ತು ದುಡ್ಡನ್ನು ಗಳಿಸುತ್ತಾರೆ ಎನ್ನುತ್ತಾರೆ ಭುಯಾನ್.

ಉದಾಹರಣೆಗೆ ಐಆರ್‌ಸಿಟಿಸಿಯಂತಹ ಸರಕಾರಿ ವೆಬ್‌ಸೈಟ್‌ಗಳಿಗೆ ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡಲು ದಿನನಿತ್ಯ ಕನಿಷ್ಠ 10 ಮಿಲಿಯನ್ ಜನರು ಭೇಟಿ ನೀಡುತ್ತಿರುತ್ತಾರೆ. ‘ಕಸ್ಟಮ್ ಸ್ಕ್ರಿಪ್ಟ್’ನ್ನು ಸೇರಿಸಲು ಇಂತಹ ವೆಬ್‌ಸೈಟ್‌ಗಳು ಪರಿಪೂರ್ಣ ವೇದಿಕೆಗಳಾಗಿವೆ. ಕಸ್ಟಮ್ ಸ್ಕ್ರಿಪ್ಟ್ ನಿರ್ದಿಷ್ಟ ವೆಬ್ ಸೈಟ್‌ಗಳಲ್ಲಿ ಮೈನಿಂಗ್ ಮಾಡಲು ಸಿದ್ಧಗೊಳಿಸಿದ ವಿಶೇಷ ಕೋಡ್ ತುಣುಕು ಆಗಿದೆ.

ಪ್ಲಗ್‌ಇನ್‌ಗಳ ಮೂಲಕ ಈ ಪಿಡುಗಿನಿಂದ ನಿಮ್ಮ ಸಾಧನಗಳನ್ನು ರಕ್ಷಿಸಿಕೊಳ್ಳಬಹುದು ಎನ್ನುತ್ತಾರೆ ಭುಯಾನ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)