varthabharthi

ನಿಮ್ಮ ಅಂಕಣ

ಇದು ವಿಕಾಸವೇ?

ವಾರ್ತಾ ಭಾರತಿ : 28 Dec, 2017

ಮಾನ್ಯರೇ,

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರತಿಯೊಂದು ರಾಜ್ಯದಲ್ಲಿ ಚುನಾವಣೆ ನಡೆದಾಗ ಹತ್ತಾರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಎಲ್ಲಾ ರಾಜ್ಯಗಳಲ್ಲೂ ಸುತ್ತಾಡುತ್ತಾರೆ. ಮತದಾರರ ಮುಂದೆ ವಿಕಾಸಕ್ಕಾಗಿ ಮತ ನೀಡಿ ಎಂದು ಕೇಳಿಕೊಳ್ಳತ್ತಾರೆ. ಆದರೆ ಇವರ ವಿಕಾಸದ ಅರ್ಥ ಇನ್ನೂ ತಿಳಿಯುತ್ತಲೇ ಇಲ್ಲ.

 ಬಿಜೆಪಿ ಆಡಳಿತದಲ್ಲಿರುವ ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಡ, ಮಹಾರಾಷ್ಟ್ರ, ಹರ್ಯಾಣ, ಉತ್ತರಾಖಂಡ, ರಾಜಸ್ಥಾನ ಮುಂತಾದ ರಾಜ್ಯಗಳು ಈಗಾಗಲೇ ವಿಕಾಸವಾಗಿರಬೇಕಿತ್ತು. ಅಲ್ಲಿ ಬಡತನ ಮಾಯವಾಗಿರಬೇಕು, ನಿರುದ್ಯೋಗ ಇಲ್ಲವಾಗಿರಬೇಕು, ನೀರಾವರಿ ಸೌಲಭ್ಯಗಳು ತುಂಬಿ ತುಳುಕುತ್ತಿರಬೇಕು. ಸಾಮಾಜಿಕ ನ್ಯಾಯ, ಸಾಮರಸ್ಯದ ಬದುಕು ಅಲ್ಲಿ ಮನೆಮಾಡಿರಬೇಕು. ಮೂಲಭೂತ ಸೌಕರ್ಯ, ಸೌಲಭ್ಯಗಳು ಎಲ್ಲರಿಗೂ ಸಿಕ್ಕಿರಬೇಕಿತ್ತು. ಆದರೆ ಈ ಎಲ್ಲಾ ರಾಜ್ಯಗಳಲ್ಲಿ ಮೇಲಿನ ಎಲ್ಲಾ ಸೌಲಭ್ಯಗಳು ತುಂಬಿದೆ ಎನ್ನುವ ಯಾವ ಮಾಹಿತಿ ಯಾರಲ್ಲಿಯೂ ಇಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಭ್ರಷ್ಟಾಚಾರದ ಕತೆಯಿದೆ. ಈ ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಪೌಷ್ಟಿಕಾಂಶಗಳ ಕೊರತೆಯಿಂದ ಸಾವನ್ನಪ್ಪುವ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಈ ರಾಜ್ಯಗಳಲ್ಲಿ ದಿನನಿತ್ಯ ನಡೆಯುವ ಕೊಲೆ, ಸುಲಿಗೆ, ಅತ್ಯಾಚಾರಗಳ ಸಂಖ್ಯೆಗಳಿಗೆ ಲೆಕ್ಕವಿಲ್ಲ. ಹಾಳಾದ ರಸ್ತೆಗಳು, ವೈದ್ಯರಿಲ್ಲದ ಆಸ್ಪತ್ರೆಗಳು ಈ ರಾಜ್ಯಗಳಲ್ಲಿ ಬೇಕಾದಷ್ಟಿವೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಆಮ್ಲಜನಕದ ಕೊರತೆಯಿಂದ ಹಲವಾರು ಮಕ್ಕಳು ಸಾವನ್ನಪ್ಪಿರುವುದು ಇದಕ್ಕೊಂದು ಉತ್ತಮ ಉದಾಹರಣೆ. ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣದ ವಾಸನೆ, ಛತ್ತೀಸ್‌ಗಡದಲ್ಲಿ ಅಕ್ಕಿ ಹಗರಣದ ಗಬ್ಬುನಾತವಿದೆ.

 ಅಷ್ಟೇ ಅಲ್ಲದೆ ಕೇಂದ್ರ ಸರಕಾರ ವಿವಿಧ ಇಲಾಖೆಗಳಲ್ಲಿನ ಅತ್ಯುತ್ತಮ ಸಾಧನೆಗಾಗಿ ನೀಡುವ ಪ್ರಶಸ್ತಿಗಳನ್ನು ಪಡೆದವರ ಪಟ್ಟಿಯಲ್ಲಿ ಈ ರಾಜ್ಯಗಳಿಗಿಂತ ಬೇರೆ ರಾಜ್ಯಗಳೇ ಹೆಚ್ಚಿವೆ. ವಿಕಾಸವೆಂದರೆ ವಿಸ್ತಾರವಲ್ಲ. ಸರಕಾರದ ಸ್ಥಾಪನೆಯಲ್ಲ. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ, ಹಸಿದ ಹೊಟ್ಟೆಗಳಿಲ್ಲದ, ನಿರುದ್ಯೋಗ ಸಮಸ್ಯೆ, ಅಸಮಾನತೆಯಿಲ್ಲದ, ಶಾಂತಿಯ ವಾತಾವರಣ ಎಲ್ಲಿ ನಿರ್ಮಾಣವಾಗುತ್ತದೆಯೋ ಅದನ್ನು ವಿಕಾಸವೆನ್ನುತ್ತಾರೆ. ಹೀಗಾಗಿ ಪ್ರಧಾನಿಯವರು ವಿಕಾಸದ ಬಗ್ಗೆ ಮಾತನಾಡುವಾಗ ತಮ್ಮ ಪಕ್ಷ ಆಡಳಿತದಲ್ಲಿರುವ ರಾಜ್ಯಗಳ ಪ್ರಸಕ್ತ ಸ್ಥಿತಿಗಳನ್ನು ಗಮನಿಸಿ ಮಾತನಾಡುವುದು ಒಳ್ಳೆಯದು.

-ಕೆ.ಎಸ್. ನಾಗರಾಜ್, ಬೆಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)