varthabharthi

ವಚನ ಬೆಳಕು

ನಿಮ್ಮ ತೊತ್ತು ಸೇವೆಯೇ ಸಾಕು

ವಾರ್ತಾ ಭಾರತಿ : 30 Dec, 2017

ಪರಮಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.
ಪರಮಪದವಿಯ ನಿಮ್ಮ ತಲೆಯಲ್ಲಿ ಸುತ್ತಿಕೊಳ್ಳಿ.
ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು.
ಮಹಾಲಿಂಗ ಗಜೇಶ್ವರದೇವಾ,
ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ.
                                             - ಗಜೇಶಮಸಣಯ್ಯ

ಗಜೇಶಮಸಣಯ್ಯ ಶರಣರು ಈಗಿನ ಸೋಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ನೀಲಗಾರ ಕರಜಗಿ ಗ್ರಾಮದವರು. ಗಜೇಶಮಸಣಯ್ಯಗಳ ಪುಣ್ಯಸ್ತ್ರೀ ಕೂಡ ವಚನಕಾರ್ತಿ. ಆಕೆಯ ಹೆಸರು ತಿಳಿದುಬಂದಿಲ್ಲ. ಕೆಲವರು ಮಸಣಮ್ಮ ಎಂದು ಬರೆಯುವರು. ಕಲ್ಯಾಣದ ಪ್ರಧಾನಿ ಬಸವಣ್ಣನವರ ಮಾನವೀಯ ಸ್ಪಂದನದ ಕೀರ್ತಿ ಎಲ್ಲೆಡೆ ಹಬ್ಬಿತ್ತು. ಈ ದಂಪತಿಯ ಕಿವಿಗಳಿಗೂ ಬಿದ್ದಿತು. ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋದ ಮಸಣಯ್ಯ ದಂಪತಿ ಕಲ್ಯಾಣಕ್ಕೆ ಬಂದರು.

ಬಿಜ್ಜಳನ ಸೈನ್ಯದಿಂದ ಕಲ್ಯಾಣದಲ್ಲಿ ಶರಣರ ಮೇಲೆ ದೌರ್ಜನ್ಯ ನಡೆದ ನಂತರ ಮಸಣಯ್ಯನವರು ಮುನೋಳಿಯಲ್ಲಿ ಬಂದು ನೆಲೆಸಿದರು. ಕಲಬುರಗಿ ಜಿಲ್ಲೆ ಆಳಂದ ತಾಲ್ಲಕಿನ ಮುನೋಳಿಯಲ್ಲಿ ಮಸಣಯ್ಯ ದಂಪತಿಯ ಸಮಾಧಿಗಳಿವೆ. ಇವರ ಅನೇಕ ವಚನಗಳು ‘ಶರಣಸತಿ ಲಿಂಗಪತಿ’ ಭಾವ ಮಧುರಭಕ್ತಿಯ ಪ್ರತೀಕವಾಗಿವೆ.

ಜೀವಾತ್ಮ ಮತ್ತು ಪರಮಾತ್ಮನ ಮಧ್ಯದ ಸತಿಪತಿ ಭಾವದಲ್ಲಿ ಜೀವಾತ್ಮನಾದವನು ಪರಮಾತ್ಮನಿಂದ ಏನನ್ನೂ ಬಯಸುವುದಿಲ್ಲ. ‘ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ’ ಎಂದು ಪರಮಾತ್ಮನಾದ ಮಹಾಲಿಂಗ ಗಜೇಶ್ವರದೇವರಿಗೆ ಜೀವಾತ್ಮನಾದ ಮಸಣಯ್ಯ ಹೇಳುತ್ತಿದ್ದಾರೆ. ಈ ವಚನದಲ್ಲಿ ‘ಪರಮಪದವಿ’ ಮತ್ತೆ ಮತ್ತೆ ಬರುತ್ತದೆ. ಪರಮಾತ್ಮನು ಏಕಮೇವಾದ್ವಿತೀಯ, ಅತ್ಯುನ್ನತ, ಪರಮಾತ್ಮನೇ ಜಗತ್ತಿನ ರಹಸ್ಯವನ್ನು ತಿಳಿಸಬಲ್ಲವ, ಆದ್ದರಿಂದಲೇ ಗಜೇಶಮಸಣಯ್ಯನವರು ರಹಸ್ಯಭೇದದ ಅತ್ಯುನ್ನತ ಪದವಿಯನ್ನು ಪರಮಾತ್ಮನ ಕೊರಳಿಗೆ ಕಟ್ಟುತ್ತಾರೆ. ಪರಮಾತ್ಮನೇ ಮಹಾಜ್ಞಾನಿ. ಅಂತೆಯೆ ಪರಮಪದವಿಯನ್ನು ಆತನ ತಲೆಗೆ ಸುತ್ತುತ್ತಾರೆ. ಪರಮಾತ್ಮನೇ ಮಹಾಕರುಣಾಳು ಈ ಕಾರಣದಿಂದ ಪರಮಪದವಿಯನ್ನು ಅವನ ಎದೆಯಲ್ಲಿಡುತ್ತಾರೆ.

ಜೀವಾತ್ಮ ಸತಿಗೆ ತನ್ನ ಪರಮಾತ್ಮ ಪತಿಯೇ ಎಲ್ಲದರಲ್ಲೂ ಶ್ರೇಷ್ಠ ಎಂದು ಹೇಳಬೇಕಾಗಿದೆ. ಗಜೇಶ ಮಸಣಯ್ಯನವರು ಅದನ್ನಿಲ್ಲಿ ಅನ್ಯೋಕ್ತಿಯ ಮೂಲಕ ಹೇಳುತ್ತಾರೆ.

ಮಸಣಯ್ಯನವರ ವಚನಗಳ ಮೇಲೆ ಗ್ರಾಮೀಣ ಗರತಿಯರ ಮುಗ್ಧತೆ ಮತ್ತು ಮಾಧುರ್ಯದ ಪ್ರಭಾವ ದಟ್ಟವಾಗಿದೆ. ‘‘ನನಗೆ ಯಾವ ಪದವಿಯೂ ಬೇಡ, ನಿಮ್ಮ ತೊತ್ತುಸೇವೆಯೇ ಸಾಕು’’ ಎಂಬುದು ಮುಗ್ಧತೆಯ ಪ್ರತೀಕ. ಇದು ಸಾಧ್ವಿಯರ ಅರ್ಪಣಾ ಮನೋಭಾವದ ಮಾತು ಕೂಡ ಆಗಿದೆ. ಗಜೇಶಮಸಣಯ್ಯನವರು ಅಂಥ ಗರತಿಯರ ಸರಳ ಮತ್ತು ನಿರಾಳ ವ್ಯಕ್ತಿತ್ವವನ್ನು ಅರಿತುಕೊಂಡಿದ್ದರಿಂದಲೇ ದೇವರೊಡನೆ ಈ ವಿಶಿಷ್ಟವಾದ ಸಲುಗೆಯಿಂದ ಕೂಡಿದ ಮಧುರಭಾವದ ವಚನಗಳನ್ನು ಬರೆಯಲು ಸಾಧ್ಯವಾಯಿತು. ಗಜೇಶ ಮಸಣಯ್ಯನವರ ಮಧುರಭಕ್ತಿಯ ವಚನಗಳು ಓದುಗರ ಮನದಲ್ಲಿ ಮಾಧುರ್ಯದ ಹೊನಲನ್ನೇ ಹರಿಸುತ್ತವೆ. ನಿಸ್ವಾರ್ಥದಿಂದ ಕೂಡಿದ ಉತ್ಕಟ ಪ್ರೇಮಭಾವವನ್ನು ಮೂಡಿಸುತ್ತವೆ.

ಪರಮಪದವಿಯನ್ನು ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ ಎಂದು ಹೇಳುವ ಮೂಲಕ ಶರಣಸತಿಯಾದ ಗಜೇಶಮಸಣಯ್ಯನವರು, ತಾವು ಲಿಂಗಪತಿಯನ್ನು ಪ್ರೀತಿಸುವುದು ಆತನ ಯಾವುದೇ ಅನನ್ಯವಾದ ಶಕ್ತಿ ಸಾಮರ್ಥ್ಯಕ್ಕಾಗಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಪತಿಯ ಆಸ್ತಿಪಾಸ್ತಿ, ಪ್ರಭಾವ, ಪ್ರತಿಭೆ, ಪದವಿ ಮುಂತಾದವುಗಳೆಲ್ಲ ಪತಿಯನ್ನು ಪ್ರೀತಿಸುವ ಸತಿಗೆ ಮುಖ್ಯವಾಗುವುದಿಲ್ಲ. ಆತನ ಜೊತೆ ಅಭೇದ್ಯವಾಗಿ ಬದುಕುವುದೊಂದೇ ಅವಳ ಆಶಯವಾಗಿರುತ್ತದೆ. ಅವಳು ಪತಿಯಿಂದ ಏನನ್ನೂ ಬಯಸದೆ ಆತನ ಬದುಕಿನಲ್ಲಿ ಒಂದಾಗಿ ಕರಗಿಹೋಗಬೇಕೆನ್ನುತ್ತಾಳೆ.

ಶರಣಸತಿಯರು ಲಿಂಗಪತಿಯಿಂದ ಏನನ್ನೂ ಬಯಸುವುದಿಲ್ಲ. ಅವರು ಬಯಸುವುದು ನಿತ್ಯಲಿಂಗೈಕ್ಯವಾಗಿ ಬದುಕುವುದನ್ನು ಮಾತ್ರ. ಆ ಮೂಲಕ ಅವರು ಎಲ್ಲ ಆಸೆ ಆಮಿಷಗಳಿಂದ ಮುಕ್ತರಾಗುವರು. ಯಾವುದೇ ಪದವಿ ಅವರಲ್ಲಿ ಅಭಿಮಾನ ಮೂಡಿಸುವುದಿಲ್ಲ. ಅವರಿಗೆ ಸ್ವರ್ಗದ ಆಸೆ ಇರುವುದಿಲ್ಲ. ನರಕದ ಭಯವೂ ಇರುವುದಿಲ್ಲ. ಕೀರ್ತಿ ಶನಿಗೆ ಅವರನ್ನು ಕಾಡುವ ಧೈರ್ಯವಿಲ್ಲ. ಅವರು ವಸ್ತುಮೋಹದಿಂದ ಮುಕ್ತರಾಗಿದ್ದಾರೆ. ಬದುಕಿರುವಾಗಲೇ ಈ ರೀತಿಯ ಮುಕ್ತಿಯನ್ನು ಮತ್ತು ಲಿಂಗೈಕ್ಯವನ್ನು ಬಯಸುತ್ತಾರೆ. ಲಿಂಗೈಕ್ಯ ಸ್ಥಿತಿಯಲ್ಲಿ ಇರುವುದೆಂದರೆ ಸಕಲ ಜೀವರಾಶಿಯ ಜೊತೆ ಅಭೇದ್ಯವಾಗಿ ಇದ್ದೇವೆ ಎಂಬ ಸದ್ಭಾವದೊಂದಿಗೆ ಇರುವುದು. ಆದರೆ ಜಗತ್ತಿನ ಪ್ರತಿಯೊಂದು ವಸ್ತುವಿನ ಜೊತೆ ‘ನೀರೊಳಗಿನ ಕಮಲದ ಎಲೆಯಂತೆ’ ಇರುವುದು. ಜೀವಾತ್ಮರು ಪರಮಾತ್ಮನಿಂದ ಏನನ್ನೂ ಬಯಸದೆ ಲಿಂಗಾಂಗಸಾಮರಸ್ಯದಲ್ಲಿ ಇರಬೇಕೆಂಬುದೇ ಈ ವಚನದ ಆಶಯವಾಗಿದೆ.

‘‘ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು’’ ಎಂದು ಗಜೇಶ ಮಸಣಯ್ಯನವರು ಹೇಳುತ್ತಾರೆ. ಶರಣಸತಿ ಲಿಂಗಪತಿ ಭಾವದ ಇನ್ನೊಂದು ವೈಶಿಷ್ಟ್ಯವೆಂದರೆ ಶರಣರು ತಮ್ಮ ಉತ್ಕಟ ಪ್ರೀತಿಗೆ ಪ್ರತಿಯಾಗಿ ದೇವರಿಂದ ಪ್ರೀತಿಯನ್ನೂ ಬಯಸುವುದಿಲ್ಲ! ‘‘ಅಯ್ಯೊ ನೀ ಮೆಚ್ಚಿದರೆ ಮೆಚ್ಚು, ಮೆಚ್ಚದಿದ್ದರೆ ಮಾಣು. ನಾ ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯಿ’’ ಎಂದು ಮಹಾದೇವಿಯಕ್ಕ ದೇವರಿಗೆ ಹೇಳುತ್ತಾಳೆ. ಹೀಗೆ ತೊತ್ತು ಸೇವೆಯೇ ಸಾಕು ಎಂಬ ಭಾವ ಶರಣರದು. ಶರಣರಿಗೆ ಇಹಲೋಕದ ಸ್ವಾರ್ಥವೂ ಇಲ್ಲ, ಪರಲೋಕದ ಬಯಕೆಯೂ ಇಲ್ಲ. ಅವರ ಜೊತೆಗಿರುವುದು ಸಕಲ ಜೀವಾತ್ಮರ ಬಗೆಗೆ ಇರುವ ಕಾರುಣ್ಯ ಮತ್ತು ದೇವಪ್ರೇಮದಿಂದ ಬರುವ ಪರಮಾನಂದ ಮಾತ್ರ.

‘‘ಬೇಡುವಾತ ಭಕ್ತನಲ್ಲ’’ ಎಂದು ಬಸವಣ್ಣನವರು ತಿಳಿಸಿದ್ದಾರೆ. ಇಂಥ ಉನ್ನತ ಸ್ಥಿತಿಯನ್ನು ತಲುಪಿದ ಶರಣರು ಲೌಕಿಕರಲ್ಲಿಯೂ ಬೇಡಲಿಲ್ಲ. ದೇವರಲ್ಲೂ ಬೇಡಲಿಲ್ಲ. ಬೇಡದೆ ಬದುಕುತ್ತ ದಾಸೋಹಂಭಾವದಲ್ಲೇ ಪರಮಾನಂದ ಪಡೆದು ಲೋಕಕ್ಕೆ ಮಾದರಿಯಾದವರು ನಮ್ಮ ಶರಣರು. ಹೀಗೆ ಭಕ್ತಿಯು ಈ ಭೂಮಿಯ ಬಗ್ಗೆ ಗೌರವ ಮೂಡಿಸುತ್ತದೆ. ಆದರೆ ಎಲ್ಲ ತೆರನಾದ ಐಹಿಕ ಆಸೆಗಳಿಂದ ಮಾನವನನ್ನು ಮುಕ್ತಗೊಳಿಸುತ್ತದೆ. ಆ ಮೂಲಕ ವಿಶ್ವಪ್ರೇಮಭಾವದಿಂದ ಕೂಡಿದ ಆನಂದಮಯವಾ ಬದುಕಿಗೆ ಮಾರ್ಗದರ್ಶಿಯಾಗುತ್ತದೆ.

***

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)