varthabharthi

ವೈವಿಧ್ಯ

ಅಭಿವೃದ್ಧಿಗಾಥೆ ಮಸುಕಾಗಿಸುವ ಅಸಮಾನತೆ!

ವಾರ್ತಾ ಭಾರತಿ : 30 Dec, 2017
ರಿಯಾಝ್ ಹಸನ್

ತೀವ್ರವಾಗಿ ಬೆಳೆದ ಅರ್ಥವ್ಯವಸ್ಥೆಯು ದೇಶದ ನಾಗರಿಕ ಬದುಕಿನ ಪರಿಸ್ಥಿತಿಗಳನ್ನು ಸುಧಾರಿಸಿದೆ, ಆದರೆ ಈ ಆರ್ಥಿಕ ಅಭಿವೃದ್ಧಿಗಳು ದೇಶದ ವಿಭಿನ್ನ ಜನಸಮುದಾಯಗಳಲ್ಲಿ ಸಮಾನವಾಗಿ ಹಂಚಿಕೆಯಾಗಲಿಲ್ಲ. ಭಾರತವು ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದರೂ, ಅದು ರಶ್ಯಾದ ಬಳಿಕ, ವಿಶ್ವದಲ್ಲಿ ಅತ್ಯಂತ ಅಸಮಾನ ದೇಶಗಳಲ್ಲಿ ಎರಡನೆಯದು ಎಂದು ನೇತ್ಯಾತ್ಮಕ ಗಮನ ಸೆಳೆೆದಿದೆ.

ಳೆದ ಮೂರು ದಶಕಗಳಲ್ಲಾದ ಅದ್ಭುತವಾದ ಆರ್ಥಿಕ ಅಭಿವೃದ್ಧಿ ಭಾರತವನ್ನು ಒಂದು ಜಾಗತಿಕ ಶಕ್ತಿಯಾಗಿ, ಪವರ್‌ಹೌಸ್ ಆಗಿ ಮಾಡಿದೆ. 1990 ಮತ್ತು 2016ರ ನಡುವೆ ಭಾರತದ ಅರ್ಥವ್ಯವಸ್ಥೆಯು ಇಂದಿನ ಡಾಲರ್‌ಗಳಲ್ಲಿ ಸುಮಾರು ಶೇ.7 ಚಕ್ರ (ಕಾಂಪೌಂಡ್) ದರದಲ್ಲಿ ಬೆಳವಣಿಗೆ ಕಂಡಿತು. ಕೊಳ್ಳುವ ಶಕ್ತಿಯ ಮಾನದಂಡದ ಪ್ರಕಾರ, ಚೀನಾ ಮತ್ತು ಅಮೆರಿಕದ ಬಳಿಕ, ಈಗ ಭಾರತದ ಅರ್ಥವ್ಯವಸ್ಥೆಯು ವಿಶ್ವದಲ್ಲೇ ತೃತೀಯ ಅತ್ಯಂತ ಬೃಹತ್ ಅರ್ಥವ್ಯವಸ್ಥೆಯಾಗಿದೆ.

ಆದರೆ ಭಾರತದ ಸಂಪತ್ತಿನ ಶೇ.80ರಷ್ಟು ಭಾಗ ದೇಶದ ಜನಸಂಖ್ಯೆಯ ಶೇ.10ರಷ್ಟು ಮಂದಿಯ ಕೈಯಲ್ಲಿದೆ. ತೀವ್ರವಾಗಿ ಬೆಳೆದ ಅರ್ಥವ್ಯವಸ್ಥೆಯು ದೇಶದ ನಾಗರಿಕ ಬದುಕಿನ ಪರಿಸ್ಥಿತಿಗಳನ್ನು ಸುಧಾರಿಸಿದೆ, ಆದರೆ ಈ ಆರ್ಥಿಕ ಅಭಿವೃದ್ಧಿಗಳು ದೇಶದ ವಿಭಿನ್ನ ಜನಸಮುದಾಯಗಳಲ್ಲಿ ಸಮಾನವಾಗಿ ಹಂಚಿಕೆಯಾಗಲಿಲ್ಲ. ಭಾರತವು ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದರೂ, ಅದು ರಶ್ಯಾದ ಬಳಿಕ, ವಿಶ್ವದಲ್ಲಿ ಅತ್ಯಂತ ಅಸಮಾನ ದೇಶಗಳಲ್ಲಿ ಎರಡನೆಯದು ಎಂದು ನೇತ್ಯಾತ್ಮಕ ಗಮನ ಸೆಳೆೆದಿದೆ.

ಕ್ರೆಡಿಟ್ ಸೂಯಿಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಪ್ರಕಾರ, ಭಾರತದ ಜನಸಂಖ್ಯೆಯ ಶೇ.1 ಶ್ರೀಮಂತ ವರ್ಗವು ಅದರ ಶೇ.60 ಸಂಪತ್ತಿನ ಮಾಲಕತ್ವ ಹೊಂದಿದೆ; ರಶ್ಯಾದಲ್ಲಿ ಮೇಲ್‌ಸ್ತರದ ಶೇ.1 ಜನ ಅಲ್ಲಿಯ ಸಂಪತ್ತಿನ ಶೇ.74 ಭಾಗದ ಮಾಲಕತ್ವ ಹೊಂದಿದ್ದಾರೆ. ಆರ್ಥಿಕ ಅಭಿವೃದ್ಧಿಯದರ ಜನಸಂಖ್ಯೆಯ ಪ್ರವೃತ್ತಿಗಳು(ಟ್ರೆಂಡ್ಸ್), ಉಳಿತಾಯ ದರಗಳು, ಜಾಗತೀಕರಣ, ಆನುವಂಶಿಕ ಆಸ್ತಿ ಮತ್ತು ಸರಕಾರದ ನೀತಿಗಳು ಸಂಪತ್ತು, ಆದಾಯ ಕೆಲವೇ ಕೈಗಳಲ್ಲಿ ಕೇಂದ್ರೀಕೃತವಾಗಲು ಕಾರಣವಾಗುತ್ತವೆ.

  1990ರಿಂದ, ತಲಾ ಒಟ್ಟು ರಾಷ್ಟ್ರೀಯ ಉತ್ಪನ್ನವು 1,130 ಡಾಲರ್‌ನಿಂದ 6,572 ಡಾಲರ್‌ಗೆ, ಅಂದರೆ ಸುಮಾರು ಆರು ಪಟ್ಟು ಏರಿಕೆಯಾಗಿದೆ. 1.3 ಬಿಲಿಯನ್‌ಗಿಂತಲೂ ಹೆಚ್ಚು ಜನರ ಬದುಕಿನಲ್ಲಿ ಶಿಕ್ಷಣ, ಮಹಿಳಾ ಸಾಕ್ಷರತೆ, ನೈರ್ಮಲ್ಯ, ಆಯುಷ್ಯದ ಹೆಚ್ಚಳ ಇತ್ಯಾದಿ ಅಂಶಗಳು ಮಹತ್ವಪೂರ್ಣ ಸುಧಾರಣೆಗಳನ್ನು ತಂದಿವೆ. ಈ ಎಲ್ಲ ಕ್ಷೇತ್ರಗಳಲ್ಲಿ ಭಾರತವು ತನ್ನ ಎರಡು ಬೃಹತ್ ದಕ್ಷಿಣ ಏಶ್ಯಾದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಕ್ಕಿಂತ ಹೆಚ್ಚಿನ ಸಾಧನೆಗಳನ್ನು ಮಾಡಿದೆ.

ನಮ್ಮ ದೇಶದಲ್ಲಿ ಭರದಿಂದ ಸಾಗಿದ ಆರ್ಥಿಕ ಬೆಳವಣಿಗೆಯ ಮುಖ್ಯ ಫಲಾನುಭವಿಗಳು ಸಮಾಜದ ಮೇಲುವರ್ಗಗಳು ಮತ್ತು ಹಿಂದೂಗಳಲ್ಲಿರುವ ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳು ಹಾಗೂ ಮುಸ್ಲಿಮರಿಗಿಂತ ಮೇಲ್ಜಾತಿಯ ಹಿಂದೂಗಳಲ್ಲಿ ಬಡತನದ ದರಗಳು ತುಂಬ ಕಡಿಮೆ ಇವೆೆ. ಮೇಲ್ಜಾತಿ ಹಿಂದೂಗಳಲ್ಲಿರುವ ಶೇ. 10ರಷ್ಟು ಬಡತನದಲ್ಲಿರುವವರಿಗೆ ಹೋಲಿಸಿದಾಗ, ಮುಸ್ಲಿಂ ಮತ್ತು ಹಿಂದೂ ಪರಿಶಿಷ್ಟಜಾತಿ/ವರ್ಗಗಳ ಮೂರನೆಯ ಒಂದುಪಾಲು ಮಂದಿ ಬಡತನದಲ್ಲಿದ್ದಾರೆ. ಒಟ್ಟಿನಲ್ಲಿ ಸುಮಾರು ಶೇ.28 ಅಥವಾ 360 ಮಿಲಿಯನ್ ಭಾರತೀಯರು ಕಡುಬಡತನದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಎರಡು ಅತಿರೇಕಗಳು

ಭಾರತದ ಬೃಹತ್ ಜನಸಂಖ್ಯೆಯ ಜೀವನ ಮಟ್ಟಗಳನ್ನು ಏರಿಸಲು ಆರ್ಥಿಕ ಅಭಿವೃದ್ಧಿ ಅತ್ಯಂತ ಮುಖ್ಯವಾದರೂ, ದೇಶದ ದೀರ್ಘಕಾಲೀನ ಅಭಿವೃದ್ಧಿ ಪ್ರವೃತ್ತಿಗಳು ನಾಗರಿಕರ ಸಾಮಾಜಿಕ, ಆರ್ಥಿಕ ಬದುಕನ್ನು ನಿರ್ಧರಿಸುವುದರಲ್ಲಿ ಮಹತ್ವ ಪೂರ್ಣವಾದ ಪಾತ್ರವಹಿಸುತ್ತವೆ. ಭಾರತವು ವಿಶ್ವದಲ್ಲೇ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲೊಂದು, ಆದರೂ ಕೂಡ ಆದಾಯ ಹಂಚಿಕೆಯ ಅಸಮಾನತೆಯ ಪರಿಣಾಮವಾಗಿ ಜನಸಾಮಾನ್ಯ ಭಾರತೀಯ, ತುಲನಾತ್ಮಕವಾಗಿ, ತುಂಬ ಬಡವನೇ ಆಗಿದ್ದಾನೆ.

ಕ್ರೆಡಿಟ್ ಸೂಯಿಸ್ ಆ್ಯಂಡ್ ಆಕ್ಸ್‌ಫ್ಯಾಮ್‌ನ ಇತ್ತೀಚಿನ ದತ್ತಾಂಶಗಳ ಪ್ರಕಾರ, ಅತ್ಯಂತ ಶ್ರೀಮಂತರಾದ ಶೇ.10 ರಷ್ಟು ಮಂದಿ ಭಾರತೀಯರು ದೇಶದ ಒಟ್ಟು ಸಂಪತ್ತಿನ ಶೇ.80ರಷ್ಟು ಸಂಪತ್ತಿನ ಒಡೆಯರಾಗಿದ್ದಾರೆ. ಇನ್ನೊಂದು ಕೊನೆಯಲ್ಲಿ ಬಡವರಾಗಿರುವ ದೇಶದ ಅರ್ಧದಷ್ಟು ಜನರು ರಾಷ್ಟ್ರದ ಸಂಪತ್ತಿನ ಕೇವಲ ಶೇ.4.1 ಸಂಪತ್ತಿಗಾಗಿ ನುಗ್ಗಾಟ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲ ದೇಶದ ಶೀಘ್ರವಾದ ಆರ್ಥಿಕ ಬೆಳವಣಿಗೆಯಲ್ಲಿ ಅತ್ಯಂತ ಹೆಚ್ಚಿನ ಫಲಾನುಭವಿಗಳು ಕೂಡ ಶ್ರೀಮಂತರೇ ಆಗಿದ್ದಾರೆ. 2000 ಮತ್ತು 2016ರ ನಡುವಿನ ಅವಧಿಯಲ್ಲಿ ದೇಶದ ಶೇ.1ರಷ್ಟು ಅತ್ಯಂತ ಶ್ರೀಮಂತರ ಸಂಪತ್ತು ಶೇ.36.8ರಿಂದ ಶೇ.50ಕ್ಕಿಂತಲೂ ಹೆಚ್ಚಿಗೆ ಏರಿಕೆಯಾಯಿತು.

  ಸಂಪತ್ತು ಕೆಲವೇ ಕೆಲವರ ಕೈಯಲ್ಲಿ ಹೆಚ್ಚು ಹೆಚ್ಚು ಕೇಂದ್ರೀಕೃತವಾಗುವುದು ಆದಾಯದ ಹೆಚ್ಚಳದಲ್ಲೂ ಪ್ರತಿಫಲನಗೊಳ್ಳುತ್ತದೆ. 1988 ಮತ್ತು 2011ರ ನಡುವೆ ದೇಶದ ಅತ್ಯಂತ ಬಡವರಾದ ಶೇ.10ರಷ್ಟು ಭಾರತೀಯರ ಆದಾಯಗಳು 29ಡಾಲರ್ ಅಥವಾ ಸುಮಾರು 2ಸಾವಿರ ರೂಪಾಯಿಯಷ್ಟು. ಅಂದರೆ ವಾರ್ಷಿಕ ಶೇ.1ರಷ್ಟು ಏರಿಕೆಯಾಯಿತು. ಅದೇ ಅವಧಿಯಲ್ಲಿ, ದೇಶದ ಅತ್ಯಂತ ಶ್ರೀಮಂತರಾದ ಶೇ.10ರಷ್ಟು ಮಂದಿಯ ಆದಾಯದಲ್ಲಿ ವಾರ್ಷಿಕ ಶೇ.25 ದರದಲ್ಲಿ, ಸುಮಾರು 40 ಸಾವಿರ ರೂ.ನಷ್ಟು ಏರಿಕೆಯಾಯಿತು.

ಮಧ್ಯಮ ವರ್ಗದ ಪರಿಸ್ಥಿತಿ

ಆದಾಯದ ಹೆಚ್ಚಿನ ಮಟ್ಟದ ಅಸಮಾನತೆಯ ವರ್ಗರಚನೆ ಮತ್ತು ಬಡತನದ ಇಳಿಕೆಗೆ ಅಡ್ಡಿಯಾಗುತ್ತದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಪ್ರಜಾಸತ್ತಾತ್ಮಕ ಚೌಕಟ್ಟುಗಳನ್ನು ಮತ್ತು ಸಂಸ್ಕೃತಿಗಳನ್ನು ಬಲಪಡಿಸುವುದರಲ್ಲಿ ಮಧ್ಯಮವರ್ಗದ ಬೆಳವಣಿಗೆ ಒಂದು ಮಹತ್ವಪೂರ್ಣವಾದ ಪಾತ್ರವಹಿಸುತ್ತದೆ. ಆದರೆ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯೂ ಭಾರತದಲ್ಲಿ ಮಧ್ಯಮ ವರ್ಗದ ರಚನೆ ಮತ್ತು ಬೆಳವಣಿಗೆಯನ್ನು ಅಡ್ಡಿಪಡಿಸುತ್ತದೆ. ಈ ನಿಟ್ಟಿನಲ್ಲಿ ಭಾರತವು ಮಲೇಶ್ಯಾ, ಇಂಡೋನೇಶ್ಯಾ ಮತ್ತು ಚೀನಾ ಸಾಧಿಸಿರುವಷ್ಟು ಪ್ರಗತಿಯನ್ನು ಸಾಧಿಸಿಲ್ಲ.

‘ಸೂಪರ್‌ರಿಚ್’ ಅಥವಾ ಅತ್ಯಂತ ಸಿರಿವಂತರು ತೆರಿಗೆಗಳನ್ನು ತಪ್ಪಿಸುವ ಯೋಜನೆಗಳ ಮೂಲಕ ತಮ್ಮ ಸಂಪತ್ತನ್ನು ಉಳಿಸಿಕೊಂಡು, ದೇಶದ ರಾಜಕೀಯ ವ್ಯವಸ್ಥೆಯನ್ನು ತಮಗೆ ಬೇಕಾದಂತೆ ನಿಯಂತ್ರಿಸಬಲ್ಲವರಾದ್ದರಿಂದ, ಆರ್ಥಿಕ ಅಸಮಾನತೆಯು ಇನ್ನಷ್ಟು ಹೆಚ್ಚಿ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗರಂಗಗಳ ಮೇಲೆ ಗಂಭೀರ ಪರಿಣಾಮಗಳಾಗಬಹುದು. ಸಾಮಾಜಿಕ ಸಮಸ್ಯೆಗಳು, ಅಂತರ್ ಸಮುದಾಯ ತಿಕ್ಕಾಟಗಳು ಹಾಗೂ ಹಿಂಸಾತ್ಮಕ ಅಪರಾಧಗಳು ಸಮಾಜದ ಸ್ವಾಸ್ಥವನ್ನೇ ಹದಗೆಡಿಸಬಹುದು.

ಕೃಪೆ: scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)