varthabharthi

ನಿಮ್ಮ ಅಂಕಣ

ಕರ್ನಾಟಕ ವಿಧಾನಸಭಾ ಚುನಾವಣೆ ಯಾರಿಗೆಷ್ಟು ಮುಖ್ಯ?

ವಾರ್ತಾ ಭಾರತಿ : 30 Dec, 2017
ಕು.ಸ.ಮಧುಸೂದನ ನಾಯರ್, ರಂಗೇನಹಳ್ಳಿ

ಅನಿಯಂತ್ರಿತ ಆಕಸ್ಮಿಕಗಳೇನು ಘಟಿಸದೇ ಹೋದಲ್ಲಿ ಇನ್ನು ನಾಲ್ಕು ತಿಂಗಳುಗಳಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವುದು ಖಚಿತ. ಈಗಿನ್ನು ಮುಗಿದ ಗುಜರಾತ್ ಚುನಾವಣೆ ರಾಷ್ಟ್ರ ರಾಜಕಾರಣದಲ್ಲಿ ಎಷ್ಟು ಮಹತ್ವ ಪಡೆದುಕೊಂಡಿತ್ತೋ ಅಷ್ಟೇ ಮತ್ತು ಅದಕ್ಕಿಂತ ಸ್ವಲ್ಪ ಹೆಚ್ಚೇ ಮಹತ್ವವನ್ನು ಈ ಚುನಾವಣೆಯೂ ಪಡೆದುಕೊಂಡಿವೆ ಎಂದು ಹೇಳಬೇಕು. ಯಾಕೆ ಈ ಚುನಾವಣೆ ರಾಷ್ಟ್ರ ರಾಜಕೀಯಕ್ಕೆ ಮತ್ತು ಎರಡು ರಾಷ್ಟ್ರೀಯ ಪಕ್ಷಗಳಿಗೆ ಮುಖ್ಯವೆಂದು ನೋಡುತ್ತಾ ಹೋದರೆ ಹಲವು ಮಹತ್ವಪೂರ್ಣ ವಿಷಯಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ.

ಕಾಂಗ್ರೆಸ್ ಮತ್ತು ಭಾಜಪ ಸೇರಿದಂತೆ ಪ್ರಾದೇಶಿಕ ಪಕ್ಷವಾದ ಜನತಾದಳಕ್ಕೂ ಈ ಚುನಾವಣೆ ಮುಖ್ಯವಾಗಿದ್ದು, ಈ ಚುನಾವಣೆ ಮುಂದಿನ ಒಂದು ದಶಕದ ರಾಜ್ಯದ ರಾಜಕೀಯ ಭವಿಷ್ಯವನ್ನು ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದ ಮೇಲೂ ಪ್ರಭಾವ ಬೀರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಈ ದಿಸೆಯಲ್ಲಿ ನಾವು ಮೊದಲು ಯಾವ ಪಕ್ಷಕ್ಕೆ ಯಾವ ದೃಷ್ಟಿಕೋನದಿಂದ ಈ ಚುನಾವಣೆ ಮುಖ್ಯವಾಗುತ್ತಿವೆ ಎನ್ನುವುದನ್ನು ನೋಡೋಣ;

 ಭಾಜಪ:

2014ರ ಸಾರ್ವತ್ರಿಕ ಚುನಾವಣೆಗಳ ಸಮಯದಿಂದಲೂ ಭಾಜಪ ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡುತ್ತಲೇ ಬರುತ್ತಿದೆ. (ಈ ಕಾಂಗ್ರೆಸ್ ಮುಕ್ತ ಎನ್ನುವ ಮಾತೇ ಭಾಜಪದ ಸರ್ವಾಧಿಕಾರಿ ಫ್ಯಾಶಿಸ್ಟ್ ಧೋರಣೆಯನ್ನು ಪ್ರತಿನಿಧಿಸುತ್ತದೆ ಎನ್ನುವುದು ಬೇರೆ ಮಾತು) ಆ ಮಾತಿಗೆ ತಕ್ಕಂತೆ 2011ರ ನಂತರ ನಡೆದ ಹಲವಾರು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುತ್ತ ತನ್ನತೆಕ್ಕೆಯಲ್ಲಿದ್ದ ಹಲವಾರು ರಾಜ್ಯಗಳನ್ನು ಭಾಜಪದ ಮಡಿಲಿಗೆ ಹಾಕುತ್ತಾ ಬಂದಿದೆ. ಕರ್ನಾಟಕ ಮತ್ತು ಪಂಜಾಬ್ ಹೊರತುಪಡಿಸಿ ಮಿಕ್ಕೆಲ್ಲಾ ದೊಡ್ಡ ರಾಜ್ಯಗಳನ್ನು ಕಾಂಗ್ರೆಸ್ ಸೋಲುತ್ತಾ ಬಂದಿದ್ದು, ಮಧ್ಯ ಭಾರತ ಮತ್ತು ಉತ್ತರ, ಪಶ್ಚಿಮ ಭಾರತದ ಬಹುತೇಕ ರಾಜ್ಯಗಳನ್ನು ಗೆದ್ದಿರುವ ಭಾಜಪಕ್ಕೆ ದಕ್ಷಿಣದ ರಾಜ್ಯಗಳು ಯಾವತ್ತಿಗೂ ಕಬ್ಬಿಣದ ಕಡಲೆಯಾಗಿಯೇ ಉಳಿದಿವೆ.

2006ರಲ್ಲಿ ಜಾತ್ಯತೀತ ಜನತಾದಳದ ಕುಮಾರಸ್ವಾಮಿಯವರ ಒಂದು ತಪ್ಪಾದ ರಾಜಕಿಯ ನಡೆಯಿಂದ ಮೊತ್ತಮೊದಲ ಬಾರಿಗೆ ಭಾಜಪ ಸಮ್ಮಿಶ್ರ ಸರಕಾರದಲ್ಲಿ ಅಧಿಕಾರದ ರುಚಿ ಅನುಭವಿಸಿತು. ಮತ್ತೆ 2008ರಲ್ಲಿ ಕುಮಾರಸ್ವಾಮಿಯವರು ಮಾಡಿದ ವಚನಭ್ರಷ್ಟತೆಯ ಎರಡನೆಯ ತಪ್ಪಿನಿಂದ ಭಾಜಪ ಸ್ವತಂತ್ರವಾಗಿ ಗೆದ್ದು ಅಧಿಕಾರಹಿಡಿಯಿತು. ಇಲ್ಲಿ ಭಾಜಪದ ಸ್ವಸಾಮರ್ಥ್ಯಕ್ಕಿಂತ ಜನತಾದಳದ ಅಪಕ್ವ ರಾಜಕೀಯ ನಿರ್ಧಾರಗಳೇ ಭಾಜಪಕ್ಕೆ ವರದಾನವಾಗಿದ್ದು ನಿಜ. ಇನ್ನುಳಿದಂತೆ ತಮಿಳುನಾಡಿನಲ್ಲಿ ಭಾಜಪ ತನ್ನ ಖಾತೆಯನ್ನು ತೆರೆಯಲಾಗದಂತಹ ಸ್ಥಿತಿ ಇದೆ. ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಮಣಿಸುವ ಬಲ ಅದಕ್ಕಿನ್ನೂ ಬಂದಿಲ್ಲ. ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳ ಹೆಗಲ ಮೇಲೆ ಕೂತು ರಾಜಕೀಯ ಮಾಡಬೇಕಾದ ಅನಿವಾರ್ಯತೆ ಅದಕ್ಕಿದೆ. ಹೀಗಾಗಿ ಸಂಘಟನಾತ್ಮಕವಾಗಿ ಬಲವಾಗಿ ಬೇರು ಬಿಟ್ಟಿರುವ ಕರ್ನಾಟಕವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಭಾಜಪಕ್ಕಿದೆ.

ಕರ್ನಾಟಕದಲ್ಲಿ ಭಾಜಪಕ್ಕೆ ಗೆಲುವೇನಾದರೂ ದಕ್ಕಿದರೆ ತನ್ಮೂಲಕ ದಕ್ಷಿಣದ ಇತರ ರಾಜ್ಯಗಳಲ್ಲಿಯೂ ತನ್ನ ಸಂಘಟನೆಯನ್ನು ಬಲಪಡಿಸುವುದು ಅದರ ಸದ್ಯದ ಮುಖ್ಯ ಗುರಿಯಾಗಿದೆ. ಮುಂದಿನ 2019ರ ಲೋಕಸಭಾ ಚುನಾವಣೆಯ ಹೊತ್ತಿಗೆ ಕರ್ನಾಟಕದಲ್ಲಿ ಆದಷ್ಟು ಹೆಚ್ಚು ಸ್ಥಾನಗಳನ್ನು ಪಡೆಯಬೇಕಾದ ಅನಿವಾರ್ಯತೆ ಭಾಜಪಕ್ಕಿದ್ದು ಆ ದಿಸೆಯಲ್ಲಿ ಈ ವಿಧಾನಸಭಾ ಚುನಾವಣೆೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ಅಗತ್ಯ ಭಾಜಪಕ್ಕಿದೆ. ಯಾಕೆಂದರೆ 2014ರ ರೀತಿಯಲ್ಲಿಯೇ ಉತ್ತರದ ರಾಜ್ಯಗಳಲ್ಲಿ ಭಾಜಪ ಹೆಚ್ಚು ಸ್ಥಾನಗಳನ್ನುಗೆಲ್ಲುವ ಭರವಸೆ ಯಾರಿಗೂ ಇಲ್ಲ. 2019ರ ಹೊತ್ತಿಗೆ ಉತ್ತರದ ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆಯೇನಾದರೂ ಎದ್ದರೆ ಭಾಜಪಕ್ಕೆ ದಕ್ಷಿಣದಲ್ಲಿ ಗೆಲ್ಲುವ ಪ್ರತೀ ಸ್ಥಾನವೂ ಮುಖ್ಯವಾಗುತ್ತದೆ. ಹೀಗಾಗಿ ಕರ್ನಾಟಕ ರಾಜ್ಯವನ್ನು ಗೆಲ್ಲುವುದು ಭಾಜಪದ ಮಟ್ಟಿಗೆ ಭಾರೀ ಮಹತ್ವದ ವಿಚಾರವಾಗಿದೆ.

ಕಾಂಗ್ರೆಸ್

ಪಂಜಾಬ್ ಹೊರತು ಪಡಿಸಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಒಂದೇ ಒಂದು ರಾಜ್ಯ ಕರ್ನಾಟಕವಾಗಿದ್ದು ಇದನ್ನು ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯ ಅದಕ್ಕಿದೆ. ರಾಹುಲ್ ಗಾಂ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಅವರಿಗೆ ಎದುರಾಗಲಿರುವ ದೊಡ್ಡ ಚುನಾವಣೆ ಎಂದರೆ ಕರ್ನಾಟಕದ ಚುನಾವಣೆಯೇ!. ಗುಜರಾತಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆದ್ದು ತಮ್ಮ ನಾಯಕತ್ವದ ಬಗ್ಗೆ ಪಕ್ಷದ ಒಳಗೆ ಮತ್ತು ಹೊರಗೆ ಇದ್ದ ಅನುಮಾನ, ಅಸಮಾಧಾನಗಳನ್ನು ಮುಕ್ಕಾಲುಭಾಗದಷ್ಟು ತೊಡೆದು ಹಾಕಿರುವ ರಾಹುಲ್ ಅವರಿಗೆ ತಮ್ಮ ನಾಯಕತ್ವದ ಬಲವನ್ನು ಪ್ರದರ್ಶಿಸಲು ಈ ಚುನಾವಣೆ ಅತ್ಯಂತ ಮುಖ್ಯವಾಗಿದೆ. ಕರ್ನಾಟಕ ರಾಜ್ಯವನ್ನು ಗೆಲ್ಲುವ ಮೂಲಕ ತಮ್ಮ ಅಧ್ಯಕ್ಷಗಾದಿಯ ಆರೋಹಣದ ಬಗ್ಗೆ ಅಪಸ್ವರ ಎತ್ತಿದವರೆಲ್ಲರಿಗೂ ಸಮರ್ಥ ಉತ್ತರ ನೀಡಬೇಕಾದ ಅನಿವಾರ್ಯ ರಾಹುಲ್‌ರಿಗೆ ಇದೆ.

2019ರ ಲೋಕಸಭೆ ಚುನಾವಣೆ ಎದುರಿಸಲು ಬೇಕಾದ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲು ಕರ್ನಾಟಕವನ್ನು ಗೆಲ್ಲಲೇ ಬೇಕಾಗಿದೆ. ಇಷ್ಟಲ್ಲದೆ ಭಾಜಪದ ಮತೀಯವಾದವನ್ನು ಅಹಿಂದ ಮಂತ್ರದ ಮೂಲಕ ಎದುರಿಸಲು ಸಾಧ್ಯ ಎಂಬುದನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಡೀ ರಾಷ್ಟ್ರಕ್ಕೆ ತೋರಿಸಿಕೊಡಬೇಕಾಗಿದೆ.

ಜಾತ್ಯತೀತ ಜನತಾದಳ

ಎರಡು ರಾಷ್ಟ್ರೀಯ ಪಕ್ಷಗಳ ಕಾದಾಟದ ನಡುವೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ಚುನಾವಣೆ ಜನತಾದಳಕ್ಕೆ ಬಹಳಮುಖ್ಯವಾಗಿದೆ. ಪ್ರಾದೇಶಿಕ ಪಕ್ಷಗಳನ್ನು ಬಳಸಿಕೊಂಡು ಬೆಳೆಯುವ ಮತ್ತು ತದನಂತರದಲ್ಲಿಅವುಗಳನ್ನೇ ಇಲ್ಲವಾಗಿಸುವ ತಂತ್ರಗಾರಿಕೆಯಲ್ಲಿ ಎರಡೂ ರಾಜಕೀಯ ಪಕ್ಷಗಳು ನೈಪುಣ್ಯತೆ ಸಾಧಿಸಿದವೇ. ಎಲ್ಲಾ ವಿಷಯಗಳಲ್ಲಿಯೂ ಬಲಶಾಲಿಗಳಾದ ರಾಷ್ಟ್ರೀಯ ಪಕ್ಷಗಳ ನಡುವೆಯೇ ಸೆಟೆದು ನಿಂತು ಹೋರಾಡಿ ಅಧಿಕಾರಕ್ಕೆ ಬರುವುದು ಕಷ್ಟಸಾಧ್ಯವಾದರೂ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಲೇ ಚುನಾವಣೋತ್ತರ ದಿನಗಳಲ್ಲಿ ಅಗತ್ಯಬಿದ್ದರೆ ಮೈತ್ರಿಯ ಸಾಧ್ಯತೆ ಇದ್ದಲ್ಲಿ ಸರಕಾರ ರಚಿಸುವ ಪ್ರಯತ್ನ ಮಾಡುವುದು ಜನತಾದಳದ ಉದ್ದೇಶವಿದ್ದಂತೆ ಕಾಣುತ್ತಿದೆ. ಹೀಗಾಗಿ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಗಳಿಸಿಕೊಳ್ಳುವ ಉದ್ದೇಶದಿಂದ ಈ ಚುನಾವಣೆ ಮಹತ್ವದ್ದಾಗಿದೆ.

 ಹೀಗೆ ಮೂರೂ ಪಕ್ಷಗಳಿಗೆ ಬರಲಿರುವ ಚುನಾವಣೆಗಳು ಅವುಗಳ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮಹತ್ವಪೂರ್ಣವಾಗಿದ್ದು, ಗೆಲ್ಲಲು ಬಿರುಸಿನ ಹೋರಾಟ ನಡೆಯುವುದು ಖಚಿತ.

ಅದೇ ರೀತಿ ರಾಜ್ಯ ಮತ್ತು ರಾಷ್ಟ್ರದ ರಾಜಕೀಯ ಹಿತಾಸಕ್ತಿಯ ದೃಷ್ಟಿಯಿಂದಲೂ ಈ ಚುನಾವಣೆ ಮಹತ್ವದ್ದಾಗಿದ್ದು ಭವಿಷ್ಯದಲ್ಲಿ ನಮ್ಮ ಪ್ರಜಾಪ್ರಭುತ್ವ ಹೇಗೆ ನಡೆಯಬಲ್ಲದು ಎಂಬುದನ್ನು ತೋರಿಸುವ ದಿಕ್ಸೂಚಿಯೂ ಹೌದು ಎನ್ನಬಹುದಾಗಿದೆ. ಈಗಾಗಲೇ ಬಲಾಢ್ಯವಾಗುತ್ತಾ ಸಾಗಿರುವ ಮತೀಯ ಶಕ್ತಿಗಳೇ ಮುಂದೆಯೂ ಪ್ರಭುತ್ವದ ಮೇಲೆ ಹತೋಟಿ ಸಾಧಿಸುತ್ತವೆಯೋ ಇಲ್ಲಾ ಜಾತ್ಯತೀತ ಶಕ್ತಿಗಳು ದೇಶದ ಚುಕ್ಕಾಣಿ ಹಿಡಿಯುತ್ತವೆಯೋ ಎಂಬುದರ ಬಗ್ಗೆ ಒಂದು ಸಣ್ಣ ಮುನ್ಸೂಚನೆಯನ್ನು ಸದರಿ ಚುನಾವಣೆ ನೀಡಬಲ್ಲದ್ದಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)