varthabharthi

ಸುಗ್ಗಿ

ಬೆಳೆಯುವ ಪೈರು

ಭಿತ್ತಿಗಳಾಗುವ ವರ್ತನೆಗಳು

ವಾರ್ತಾ ಭಾರತಿ : 30 Dec, 2017
ಯೋಗೇಶ್ ಮಾಸ್ಟರ್,

ಭಾಗ-3

ಮಾದರಿಗಳ ನಾಂದಿ

ಸಣ್ಣ ಮಕ್ಕಳು ಕಂಕುಳಲ್ಲಿರುವಾಗಲೋ, ಅಥವಾ ಬೆರಳು ಹಿಡಿದುಕೊಂಡು ನಡೆಯುವ ಮಗುವೋ, ಒಟ್ಟಾರೆ ತಂದೆ ಮತ್ತು ತಾಯಿಯರ ಅಥವಾ ಯಾವುದೇ ಕುಟುಂಬ ವರ್ಗದವರ ಜೊತೆಯಲ್ಲಿರುವ ಮಗು ಯಾರೇ ಅಪರಿಚಿತರು ಕರೆದರೆ ಬಳಿಗೆ ಹೋಗುವುದಿಲ್ಲ. ತಕ್ಷಣವೇ ಹಿಂದಕ್ಕೆ ತಿರುಗಿಕೊಂಡು ತನ್ನನ್ನು ಎತ್ತಿಕೊಂಡಿರುವವರನ್ನು ಆತುಕೊಳ್ಳುತ್ತದೆ. ಅಷ್ಟೇಕೆ ಅಂಗನವಾಡಿಗೆ ಹೋಗುವಂತಹ ಮಕ್ಕಳಲ್ಲೂ ಬಹಳಷ್ಟು ಮಕ್ಕಳು ಅಪರಿಚಿತರು ನಕ್ಕರೆ ನಗುವುದಿಲ್ಲ. ಹಾಯ್ ಎಂದೋ, ಬಾಯ್ ಎಂದೋ ಕೈ ಬೀಸಿದರೆ ಕೆಲವಷ್ಟೇ ಮಕ್ಕಳು ಪ್ರತಿಕ್ರಿಯಿಸುವುದು. ಮಾತಾಡಿಸಿದರೆ ತಕ್ಷಣವೇ ಹಿಂದಕ್ಕೆ ತಿರುಗಿ ತನ್ನ ಪೋಷಕರ ಕಡೆಗೆ ನೋಡುತ್ತದೆ. ಕೆಲವು ಪೋಷಕರು ಮಾತಾಡಿಸು ಎಂದು ಸಮ್ಮತಿ ಸೂಚಿಸುತ್ತಾರೆ, ಪ್ರೋತ್ಸಾಹಿಸುತ್ತಾರೆ. ಮಗುವು ಸಣ್ಣದಾಗಿ ಪ್ರತಿಕ್ರಿಯಿಸಿದರೆ ಮುಗುಳ್ನಕ್ಕು ತಮ್ಮ ಪ್ರತಿಕ್ರಿಯೆ ನೀಡುತ್ತಾರೆ. ಕೆಲವರು ತಮ್ಮ ಮಗುವು ಅಪರಿಚಿತರೊಂದಿಗೆ ಹಾಯ್, ಬಾಯ್ ಎಂದೋ, ಇನ್ನೇನಾದರೂ ಸ್ನೇಹಪೂರ್ವಕ ಸಂಕೇತಗಳನ್ನು ತೋರಿಸುತ್ತಾ ಪ್ರತಿಕ್ರಿಯೆಗಳನ್ನು ನೀಡಿಕೊಳ್ಳುತ್ತಿದ್ದರೂ ತಮಗೂ ಅದಕ್ಕೂ ಏನೂ ಸಂಬಂಧವಿಲ್ಲದಂತೆ ತಮ್ಮ ಕೆಲಸದಲ್ಲಿ ನಿರತರಾಗಿತ್ತಾರೆ. ಈ ಸನ್ನಿವೇಶದಲ್ಲಿ ಎರಡು ವಿಷಯಗಳು ಮುಖ್ಯವಾಗಿ ಗಮನಕ್ಕೆ ಬರುತ್ತವೆ. ಒಂದು, ಮಗುವು ತಾನು ವರ್ತಿಸುವ ಮುನ್ನ ‘‘ಏನು ಮಾಡಲಿ?’’ ಎಂದು ತನ್ನ ಪೋಷಕರ ಕಡೆಗೆ ನೋಡುವುದು. ಮತ್ತೊಂದು, ತನ್ನ ವರ್ತನೆಗೆ ಪೋಷಕರು ಯಾವ ಪ್ರತಿಕ್ರಿಯೆ ನೀಡುತ್ತಾರೆಂದು ಕಂಡುಕೊಳ್ಳುವುದು. ಇದೇ ವರ್ತನೆಗಳ ಮಾದರಿಗಳ ಗ್ರಹಿಕೆಯ ನಾಂದಿ. ಇದು ಏನನ್ನು ಸೂಚಿಸುವುದು ಎಂದರೆ, ಮಗುವು ತನ್ನ ಪ್ರತೀ ವರ್ತನೆಯ ಕ್ರಿಯೆ ಮತ್ತು ಪ್ರತಿಕ್ರಿಯೆಗೆ ಪೋಷಕರ ಸಮ್ಮತಿಯನ್ನು ತೆಗೆದುಕೊಳ್ಳುತ್ತದೆ ಮಾತ್ರವಲ್ಲದೇ ಏನು ಮಾಡಬೇಕೆಂಬ ತಿಳುವಳಿಕೆಯ ಮೂಲವಾಗಿ ಪೋಷಕರನ್ನೇ ಅವಲಂಬಿಸುತ್ತದೆ. ಹಾಗೆಯೇ, ತನ್ನ ಕ್ರಿಯೆ ಅಥವಾ ಪ್ರತಿಕ್ರಿಯೆಗೆ ಸಮ್ಮತಿ ಅಥವಾ ಅಸಮ್ಮತಿಯ ಜೊತೆಗೆ ವೌಲ್ಯಮಾಪಕರನ್ನಾಗಿಯೂ ಅವರ ಕಡೆ ನೋಡುತ್ತದೆ. ತಾನು ಮನೆಯಲ್ಲಿರುವಾಗ ತನ್ನ ಪಾಡಿಗೆ ತಾನು ಆಡಿಕೊಂಡು ಇರುವಂತಹ ಮಗು ಹೊರಗೆ ಬಂದಾಗ ತನ್ನದು ಎನಿಸಿಕೊಳ್ಳುವ ಕ್ಷೇತ್ರದ ವ್ಯಾಪ್ತಿ ಕಿರಿದು ಎನ್ನುವಂತಹ ಭಾವ ಬರುತ್ತದೆ. ಆದ್ದರಿಂದ ತನ್ನನ್ನು ಹೊರಗೆ ಕರೆದುಕೊಂಡು ಬಂದಿರುವ ಪೋಷಕರ ಮೇಲೆ ತನ್ನ ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ಅವಲಂಬಿಸುತ್ತದೆ. ಮಗುವಿನಲ್ಲಿ ವರ್ತನೆಗಳ ಗಟ್ಟಿಯಾದ ತಳಹದಿ ಅಲ್ಲಿಯೇ ರೂಪುಗೊಳ್ಳುತ್ತದೆ. ಮಗುವು ಮುಖೇಡಿಯಾಗುವುದೋ, ಅಧಿಕಪ್ರಸಂಗವಾಗುವುದೋ, ಹೊರಗೆ ತನ್ನನ್ನು ತಾನು ಅಭಿವ್ಯಕ್ತಿ ಗೊಳಿಸಿಕೊಳ್ಳುವುದೋ, ವಿಷಯಗಳನ್ನು ಕಂಡರೂ ಕಾಣದಂತೆ, ಕೇಳಿದರೂ ಕೇಳದಂತೆ, ತನ್ನ ಮುಂದೆ ಏನಾದರೂ ಆದರೂ ಏನೂ ಆಗದಂತೆ ಇರುವುದೋ; ಇವೆಲ್ಲವೂ ಪೋಷಕರ ಪ್ರತಿಕ್ರಿಯೆಗಳ ಮಾದರಿಗಳ ಮೇಲೆ ಅವಲಂಬಿತವಾಗಿರುತ್ತದೆ.

ವರ್ತನೆಗಳನ್ನು ಓದುವುದು

ನಮ್ಮ ಕೈ ಹಿಡಿದುಕೊಂಡು ರಸ್ತೆಯಲ್ಲಿ ಬರುತ್ತಿರುವ ಮಗುವು ತಾನು ಕಾಣುವ ಯಾವುದೇ ಹೊಸದಾದ ಅಥವಾ ತನ್ನ ಮನೆಯಲ್ಲಿ ಕಾಣದ ವ್ಯಕ್ತಿಯನ್ನು ಮತ್ತು ಸನ್ನಿವೇಶವನ್ನು ಸಾಕ್ಷೀಕರಿಸಿದ ತಕ್ಷಣ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಕೂಡಲೇ ತನ್ನ ಪೋಷಕರ ಕಡೆಗೆ ನೋಡುತ್ತದೆ. ಉದಾಹರಣೆಗೆ ಓರ್ವ ಭಿಕ್ಷುಕ ಬಂದು ಬೇಡಿದಾಗ ತನ್ನ ಪೋಷಕರು ಮುಖ ಸಿಂಡರಿಸಿಕೊಂಡು ಹೋಗು ಎನ್ನುವರೋ, ಭಿಕ್ಷುಕ ತನ್ನ ಎದುರಿಗೆ ಬರಲೇ ಇಲ್ಲ ಎನ್ನುವಂತೆ ಅಲ್ಲೆಲ್ಲೋ ನೋಡಿಕೊಂಡಿರುವರೋ, ಮುಂದಕ್ಕೆ ಹೋಗು ಎಂದು ಗದರುವರೋ, ಕೆಲಸ ಮಾಡಿ ತಿನ್ನು ಎಂದು ಪುಕ್ಸಟ್ಟೆ ಸಲಹೆಯನ್ನು ನೀಡುವರೋ, ಅವರನ್ನು ನೋಡಿ ದೇಶದಲ್ಲಿ ಇರುವ ಆರ್ಥಿಕ ಸಮಸ್ಯೆಯ ಬಗ್ಗೆ ತಮ್ಮ ಜೊತೆಯಲ್ಲಿರುವವರೊಂದಿಗೆ ಮಾತಾಡುವರೋ, ತಕ್ಷಣವೇ ತಮ್ಮಲ್ಲಿರುವ ಹಣವನ್ನು ಅವರಿಗೆ ನೀಡುವರೋ, ಆ ನೀಡುವಿಕೆಯಲ್ಲಿ ಔದಾರ್ಯವಿದೆಯೋ, ಅಸಡ್ಡೆ ಇದೆಯೋ, ತಮ್ಮಲ್ಲಿರುವುದನ್ನು ಹಂಚಿಕೊಳ್ಳಬೇಕೆಂಬ ಭಾವವಿ ದೆಯೋ, ನೀಡುವಿಕೆ ತಮ್ಮ ಧಾರ್ಮಿಕತೆಯ ಭಾಗವಾಗಿರುತ್ತದೋ; ಹೀಗೆ ಹತ್ತುಹಲವು ವಿಚಾರಗಳನ್ನು ಮಗುವು ನೇರ ಗಮನಿಸುತ್ತದೆ ಮತ್ತು ಗ್ರಹಿಸುತ್ತದೆ. ಇದನ್ನೇ ವರ್ತನೆಗಳನ್ನು ಓದುವುದು ಎನ್ನುವುದು. ಇನ್ನು ರಸ್ತೆಯಲ್ಲಿ ತಮಗಾಗಲಿ, ಇತರರಿಗಾಗಲಿ ಏನೇ ಆದರೂ ತೋರುವ ವರ್ತನೆಗಳು ಮಕ್ಕಳ ಮನಸ್ಸಿನ ಮೇಲೆ ತೀವ್ರವಾದ ಪರಿಣಾಮಗಳನ್ನು ಬೀರುತ್ತದೆ. ಅಷ್ಟೇ ಅಲ್ಲದೇ ಅವರು ಅದನ್ನು ತಮಗೇ ಅರಿವಿಲ್ಲದಂತೆ ರೂಢಿಸಿಕೊಳ್ಳುತ್ತಾ ಹೋಗುತ್ತಾರೆ. ಮಕ್ಕಳೇನಾದರೂ ಮಾನಸಿಕವಾಗಿ ತಮ್ಮ ಪೋಷಕರಿಂದ ಬಂದಂತಹ ಈ ಮಾದರಿಗಳನ್ನು ಶಾಶ್ವತವಾಗಿ ಅಳವಡಿಸಿಕೊಂಡುಬಿಟ್ಟರೆ ಅವರು ಎಲ್ಲಿಗೇ ಹೋದರೂ ಅದನ್ನೇ ಪ್ರದರ್ಶಿಸುತ್ತಿರುತ್ತಾರೆ. ಅದಕ್ಕೆ ಹೊರತಾಗಿ ಬೇರೆ ರೀತಿಯಲ್ಲಿ ವರ್ತಿಸಲೂ ಬಾರದು. ಆದರೆ, ಇನ್ನೂ ಕೆಲವು ಮಕ್ಕಳು ಮನೆಯ ವಾತಾವರಣದಲ್ಲಿ ಪರಿಚಿತವಾಗಿರುವಂತಹ ಮಾದರಿಗಳಿಗೆ ಹೊರತಾಗಿ ದೊರಕುವ ಮಾದರಿಗಳಿಗೂ ಆಕರ್ಷಿತರಾಗುತ್ತಾರೆ. ಜೊತೆಗೆ ಅಗತ್ಯಗಳನ್ನೂ ಕಂಡುಕೊಳ್ಳುತ್ತಾರೆ ಹಾಗೂ ಅವುಗಳಿಗೆ ರೂಢಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಬೆಳೆಯುತ್ತಾ ಬಂದಂತೆ ಈ ಎರಡೂ ಬಗೆಯ ಮಾದರಿಗಳನ್ನು ಅಭ್ಯಾಸ ಮಾಡುತ್ತಿರುತ್ತಾರೆ. ಇನ್ನೂ ಕೆಲವು ಮಕ್ಕಳು ತಾವು ಬೆಳೆದಂತೆ ತಮ್ಮ ಅರಿವಿನ, ತಿಳುವಳಿಕೆಯ ಪ್ರಕಾರಗಳಲ್ಲಿ ತಾವೇ ಮಾದರಿಗಳನ್ನು ರೂಪಿಸಿಕೊಳ್ಳುತ್ತಿರುತ್ತಾರೆ. ಒಂದು ವೇಳೆ ಮನೆಯವರ ಮಾದರಿಗಳು ತೀರಾ ವ್ಯತಿರಿಕ್ತವಾಗಿದ್ದಲ್ಲಿ ತಮ್ಮ ಮಾದರಿಗಳ ಛಾಪನ್ನು ತಮ್ಮ ಮನೆಯಲ್ಲಿ ಮೂಡಿಸುವ ಪ್ರಯತ್ನ ಮಾಡುತ್ತಾರೆ.

ಪ್ರಾಥಮಿಕ ಭಿತ್ತಿ ಶಾಶ್ವತವೇ?

ಒಂದು ವಿಷಯ ಬಹಳ ಗಂಭೀರವಾಗಿ ಗಮನಿಸಬೇಕಾಗಿರುವುದು, ಪೋಷಕರ ವರ್ತನೆಗಳ ಮಾದರಿಗಳು ನೇರಾನೇರ ಮಕ್ಕಳಿಗೆ ದಕ್ಕುವುದು. ಇನ್ನು ಮುಂದಿನದೆಲ್ಲಾ ಅನಿರೀಕ್ಷಿತ. ಏನೋ ಎಂತೋ ಆಗಬಹುದು. ಅವೆಲ್ಲವೂ ಸ್ವಪ್ರಯತ್ನ, ಪರಿಸರ, ಸಾಮಾಜಿಕ ಪ್ರಭಾವ ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತವೆ. ಆದರೆ ಪ್ರಾಥಮಿಕ ಛಾಪುಗಳದ್ದು ಮಾತ್ರ ಪೋಷಕರ ಮತ್ತು ಆಪ್ತ ಕುಟುಂಬ ವರ್ಗದವರ ಮಾದರಿಗಳದ್ದೇ ಎಂಬುದನ್ನು ಮರೆಯುವಂತಿಲ್ಲ. ಪೋಷಕರು ಎಚ್ಚೆತ್ತುಕೊಳ್ಳಬೇಕಾಗಿರುವುದೇ ಇಲ್ಲಿ. ತಾವು ಎಂತಹ ಗುಣಮಟ್ಟದ ಮಾದರಿಗಳನ್ನು ನೀಡುತ್ತಿದ್ದೇವೆ ಎಂಬುದನ್ನು ಗಂಭೀರವಾಗಿ ಗಮನಿಸಿಕೊಳ್ಳಬೇಕು. ಹಾಗಾಗಿಯೇ ಶಿಶುಪ್ರಧಾನ ಸಮಾಜದ ಬಗ್ಗೆ ಚರ್ಚಿಸಬೇಕಾಗಿದೆ. ಮನೆಯವರಾಗಲಿ, ಅಪರಿಚಿತರಾಗಲಿ, ಮಕ್ಕಳ ಎದುರಿಗೆ ಕುಟುಂಬದಲ್ಲಾಗಲಿ, ಹೊರಗಾಗಲಿ ವರ್ತಿಸುವಂತಹ ಸಂದರ್ಭ ಬಂದಾಗೆಲ್ಲಾ ಬಹಳ ಎಚ್ಚರಿಕೆಯಿಂದಲೇ ತಮ್ಮ ವರ್ತನೆಯನ್ನು ಕಾಯ್ದುಕೊಳ್ಳಬೇಕು. ಪರಿಶೀಲಿಸಿಕೊಳ್ಳಬೇಕು. ತಮ್ಮನ್ನು ನೋಡುತ್ತಿರುವ ಮಗುವಿಗೆ ಹೇಗೆ ತಮ್ಮ ವರ್ತನೆಗಳನ್ನು ಪ್ರದರ್ಶಿಸುತ್ತಿದ್ದೇವೆ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳಬೇಕು. ಏಕೆಂದರೆ ಮಾದರಿಯು ಸಣ್ಣದೋ ದೊಡ್ಡದೋ ಎಂಬುದನ್ನು ನಾವು ನಿರ್ಧರಿಸಲೂ ಸಾಧ್ಯವಿಲ್ಲ. ಮಗುವಿನ ಗ್ರಹಿಕೆಯಲ್ಲಿ ಅದು ಎಷ್ಟರಮಟ್ಟಿಗೆ ದೊರಕುತ್ತದೆ ಎಂಬುದರ ಅಂದಾಜು ನಮಗೆ ಸಿಗುವುದಿಲ್ಲ. ಅದು ಎಷ್ಟು ತೀವ್ರವಾಗಿ ಪ್ರಭಾವಿಸುತ್ತದೆ ಎಂದು ನಮ್ಮ ಅರಿವಿಗೆ ಬರುವುದಿಲ್ಲ. ಏಕೆಂದರೆ, ಪ್ರಯಾಣ ಮಾಡುತ್ತಿರುವಾಗ ಯಾವುದೋ ಊರಿನಲ್ಲಿ, ಯಾವುದೋ ಮೂಲೆಯಲ್ಲಿ, ಯಾವುದೋ ಅಪರಿಚಿತ ಮಗುವು ನನ್ನ ಯಾವುದೋ ವರ್ತನೆಯನ್ನು ಸಾಕ್ಷೀಕರಿಸಿದ್ದು, ಅದರ ಮಾದರಿಯನ್ನು ಗ್ರಹಿಸಿ ಅದರ ಪ್ರಭಾವವನ್ನು ತನ್ನ ಜೀವನಪೂರ್ತಿ ಒಯ್ಯಬಹುದು. ಅಥವಾ ಮಾನಸಿಕವಾಗಿ ಅದರ ಭಿತ್ತಿಯನ್ನು ಕೆತ್ತಿಟ್ಟುಕೊಳ್ಳಬಹುದು. ಅದು ಎಂತಹ ಮಾದರಿಯಾಗಿ ನಿಲ್ಲುತ್ತದೆ ಎಂಬುದನ್ನು ಮಾದರಿಯನ್ನು ನೀಡುವವರಿಗೆ ಎಂದಿಗೂ ತಿಳಿಯದು. ಅದು ಶಾಶ್ವತ ಭಿತ್ತಿಯಾಗುವುದರ ಬಗ್ಗೆಯೂ ಸುಳಿವೂ ಇರದು. ಆದರೆ ಅದು ಆಗಬಹುದು. ಮಗುವಿನ ಮನಸ್ಸಿನಲ್ಲಿ ಭಯದ, ಆನಂದದ, ಆಕ್ರೋಶದ, ಸಮಾಜಮುಖಿಯಾದ, ಜೀವನ್ಮುಖಿಯಾದ, ಪ್ರೇಮದ, ಅಸಡ್ಡೆಯ, ತಿರಸ್ಕಾರದ, ಪ್ರಗತಿಪರವೋ, ವಿಗತಿಮುಖವೋ; ಯಾವ ಬಗೆಯ ಭಿತ್ತಿಗಳನ್ನು ನಮ್ಮ ಮಾದರಿಗಳು ನೀಡುತ್ತವೆ ಎಂಬುದನ್ನು ಆಲೋಚಿಸಲೂ ಆಗದು.

ಮಿಂಚುಗಳ ಗೊಂಚಲು

ಒಂದು ಹೊಟೇಲ್‌ನಲ್ಲಿ ನೋಡಿದ ವ್ಯಕ್ತಿಯೊಬ್ಬನ ವರ್ತನೆ ಮಗು ವಿನ ಜೀವನ ಪೂರ್ತಿ ಎಂತಹ ಪರಿಣಾಮವನ್ನು ಬೀರುತ್ತದೆ ಎಂಬುದು ಆ ವ್ಯಕ್ತಿಗೆ ಅರಿವೂ ಇರುವುದಿಲ್ಲ. ಮಕ್ಕಳ ವರ್ತನೆಗಳಲ್ಲಿ ತಲೆದೋರುವ ಖಿನ್ನತೆ, ಭಿನ್ನತೆ, ಸಮಾನತೆ, ಸ್ವೀಕಾರದ ಮನೋಭಾವ ಅಥವಾ ತಿರಸ್ಕಾರದ ಮನೋಭಾವ, ತಿರಸ್ಕೃತ ಮನೋಭಾವ; ಹೀಗೆ ಹಲವು ಭಿತ್ತಿಗಳ ಮಾದರಿಗಳನ್ನು ಅದಾರು ನೀಡಿರುತ್ತಾರೋ? ಆದರೆ ಪ್ರಾಥಮಿಕವಾಗಿ ಅದು ಪೋಷಕರಿಂದ ಎಂಬುದಂತೂ ನಿಜ.

ಭಿತ್ತಿಗಳು ಪರಿಕಲ್ಪನೆಗಳನ್ನು ರೂಪಿಸುವುದರಲ್ಲಿಯೂ ಕೂಡ ಮಹತ್ತರ ಪಾತ್ರವಹಿಸುತ್ತವೆ. ಪರಿಕಲ್ಪನೆಗಳು ಸಿದ್ಧ ಮಾದರಿಯಲ್ಲಿದ್ದರೂ, ಅವುಗಳು ಸಾಮಾಜಿಕ ಪರಿಸರದಲ್ಲಿ ನಾನಾ ಬಗೆಯಲ್ಲಿ ಪ್ರಯೋಗಿಸಲ್ಪಡುತ್ತಿರುತ್ತವೆ. ಹಾಗೆ ಪ್ರಯೋಗಿಸಲ್ಪಡುವ ಮತ್ತು ರೂಢಿಯಲ್ಲಿ ಉಳಿಸಿಕೊಳ್ಳುವ ಬಗೆಯೂ ಕೂಡ ಮಕ್ಕಳು ತಮ್ಮ ಮಾದರಿಗಳಿಂದಲೇ ಗಮನಿಸುತ್ತಿರುತ್ತವೆ. ಯಾವುದೇ ಪರಿಕಲ್ಪನೆಯ ಬಗ್ಗೆ ಮಗುವಿಗೆ ದೊರಕುವ ಪ್ರಾರಂಭಿಕ ಮಾದರಿಗಳು ಗಾಢ ಪರಿಣಾಮ ಬೀರುತ್ತವೆೆ. ಉದಾಹರಣೆಗೆ ಭಿಕ್ಷೆ ಬೇಡುವುದನ್ನೇ ತೆಗೆದುಕೊಂಡರೆ, ಮಗುವು ತನ್ನ ಪೋಷಕರು ಭಿಕ್ಷೆ ಬೇಡುವವರ ಬಗ್ಗೆ ತೋರುವಂತಹ ಧೋರಣೆ ಮತ್ತು ಅವರೊಂದಿಗೆ ವರ್ತಿಸಿದ ರೀತಿಯ ಮಾದರಿಯ ಭಿತ್ತಿಯನ್ನು ತನ್ನಲ್ಲಿ ಹೊಂದುತ್ತದೆ. ಅದರ ಪ್ರಕಾರವಾಗಿ ಬೇಡುವುದು ಹೀನವೆಂದೋ, ಬೇಡುವುದು ದುರದೃಷ್ಟದ ಭಾಗವೆಂದೋ, ಬೇಡುವುದು ಅನಿವಾರ್ಯವೆಂದೋ, ಏನೇ ಆಗಲಿ ಬೇಡಬಾರದು ಎಂದೋ; ಒಟ್ಟಾರೆ ಭಿಕ್ಷುಕನ ಬಳಿ ತನ್ನ ಪೋಷಕರು ವರ್ತಿಸುವ ರೀತಿಯ ಮೇಲೆ ಬೇಡುವ ವಿಷಯದ ಬಗ್ಗೆ ತನ್ನ ಒಲವು ನಿಲುವುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತದೆ. ಅದು ಮುಂದೆ ಬದಲಾಗಬಹುದು ಅಥವಾ ಆಗದೇ ಇರಬಹುದು. ಆದರೆ ಪ್ರಾಥ ಮಿಕ ಹಂತದಲ್ಲಿ ಒಂದು ತಳಹದಿಯನ್ನು ನಿರ್ಮಿಸುವುದಂತೂ ನಿಜ.

ಮಿಂಚಿನಂತೆ ಹಾದುಹೋಗುವ ವ್ಯಕ್ತಿ, ಸನ್ನಿವೇಶ, ಸಂದರ್ಭ, ದೃಶ್ಯ; ಯಾವುದಾದರೂ ಮಗುವಿನ ಭಿತ್ತಿಯಲ್ಲಿ ಹರಳುಗಟ್ಟುತ್ತಾ ಹೋಗಬಹುದು. ಮಗುವು ಮುಂದೊಂದು ದಿನ ಆ ಮಿಂಚಿದ ಮಿಂಚನ್ನು ಮರೆತಿದ್ದರೂ ಅದರ ಬೆಳಕಿನಲ್ಲಿ ಬದುಕನ್ನು, ಸಮಾಜವನ್ನು, ವ್ಯಕ್ತಿಗಳನ್ನು ನೋಡುತ್ತಿರುತ್ತದೆ. ತನ್ನನ್ನೂ ಅದರಲ್ಲಿಯೇ ನೋಡಿಕೊಳ್ಳಬಹುದು.

  ಯೋಗೇಶ್ ಮಾಸ್ಟರ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)