varthabharthi

ಸುಗ್ಗಿ

ನರೇಂದ್ರ ನಾಯಕ್ ಜೀವನ ಕಥನ

ಮುಂದುವರಿದಿದೆ ಪವಾಡ ಪುರುಷರಿಗೆ ಸವಾಲುಗಳು...

ವಾರ್ತಾ ಭಾರತಿ : 30 Dec, 2017
ನಿರೂಪಣೆ: ಸತ್ಯಾ ಕೆ.

ನಾವು ಕೇವಲ ಪವಾಡಗಳ ರಹಸ್ಯವನ್ನು ಬಯಲು ಮಾಡುವುದು ಮಾತ್ರವಲ್ಲ. ಹಲವು ವರ್ಷಗಳಿಂದ ಈ ಪವಾಡ ಪುರುಷರೆಂದು ಕರೆಸಿಕೊಳ್ಳುವವರಿಗೆ ನಾನು ಸವಾಲುಗಳನ್ನು ಹಾಕುತ್ತಾ ಬಂದಿದ್ದೇನೆ. 1996ರಿಂದ ದಕ್ಷಿಣ ಕನ್ನಡ ಜಿಲ್ಲಾ ವಿಚಾರವಾದಿ ಸಂಘದ ಪರವಾಗಿ, ಸಂಘದ ಕಾರ್ಯದರ್ಶಿಯಾಗಿ ನಾನು ಈ ಪವಾಡ, ಅತೀಂದ್ರಿಯ ಶಕ್ತಿ ಮತ್ತು ಅತಿಮಾನಷ ಶಕ್ತಿಗಳನ್ನು ಪ್ರಶ್ನಿಸಿದ್ದೇನೆ. 1989ರಲ್ಲಿ ಇಂತಹ ಶಕ್ತಿಗಳನ್ನು ತೋರಿಸುವವರಿಗೆ 25,000 ರೂ. ಬಹುಮಾನವನ್ನೂ ಘೋಷಿಸಿದ್ದೆ. ಈ ಬಹುಮಾನದ ಮೊತ್ತಕ್ಕೆ ಯಾರೂ ಸವಾಲು ಸ್ವೀಕರಿಸಲು ಮುಂದಾಗದ ಕಾರಣ 1990ರಲ್ಲಿ ಆ ಮೊತ್ತವನ್ನು ದ್ವಿಗುಣಗೊಳಿಸಿದೆ. 1992ರಲ್ಲಿ ಸಂಘವು ಈ ಹಣದ ವೌಲ್ಯವನ್ನು ಹೆಚ್ಚಿಸಲು ತೀರ್ಮಾನಿಸಿತು. ನನ್ನ ಸವಾಲುಗಳಿಗೆ ಯಾವುದಾದರೂ ಒಂದು ಅಥವಾ ಅಧಿಕ ಶಕ್ತಿಗಳಿಗೆ ಅನುಗುಣವಾಗಿ ಪವಾಡ ಮಾಡಿ ತೋರಿಸಿದ್ದಲ್ಲಿ ನನ್ನ ಎಲ್ಲಾ ಲೌಕಿಕ ಸಂಪತ್ತನ್ನು ಪಣವಾಗಿ ಒಡ್ಡಿದ್ದೇನೆ. ಇದಲ್ಲದೆ ಈ ಪವಾಡ ಮಾಡಿ ತೋರಿಸಿದ ವ್ಯಕ್ತಿ ಹೇಳಿದ ಯಾವುದೇ ಕಾರ್ಯಕ್ಕೆ ನನ್ನ ಉಳಿದ ಜೀವನವನ್ನು ಮೀಸಲಾಗಿಸಿರುವುದಾಗಿಯೂ ಸವಾಲು ಹಾಕಿದ್ದೇನೆ. ನಾನು ಮುಂದೆ ಸಂಪಾದಿಸಬಹುದಾದ ಯಾವುದೇ ಹಣ, ಆಸ್ತಿ- ಪಾಸ್ತಿಯ ಮೇಲೆ ನನ್ನ ಯಾವುದೇ ಹಕ್ಕಿದ್ದರೆ ಅವೆಲ್ಲವೂ ಸವಾಲು ಮಾಡಿ ತೋರಿಸಿದವರಿಗೆ ಮೀಸಲಾಗಿರುತ್ತದೆ. ಸವಾಲನ್ನು ಸ್ವೀಕರಿಸಲು ಮುಂದಾಗುವವರು ವಿವರವಾದ ಷರತ್ತು ಗಳನ್ನು ಬರವಣಿಗೆಯ ರೂಪದಲ್ಲಿ ನೀಡಬೇಕೆಂಬುದು ನನ್ನ ಒಪ್ಪಂದ.

ನನ್ನ ಸವಾಲುಗಳು ಹೀಗಿವೆ....

*ನೀರಿನ ಮೇಲೆ ಮೂರು ಹೆಜ್ಜೆ ಇಡುವುದು.

*ನೆಲದಿಂದ ಎರಡು ಅಡಿ ಎತ್ತರದಲ್ಲಿ ಇಪ್ಪತ್ತು ಸೆಕೆಂಡುಗಳ ಕಾಲ ತೇಲುವುದು.

*ಕೆಂಡಗಳ ಮೇಲೆ ಬರಿಗಾಲಿನಲ್ಲಿ ಮೂವತ್ತು ಸೆಕೆಂಡು ಕಾಲ ನಿಂತು ಕಾಲಿಗೆ ಯಾವುದೇ ಹಾನಿಯಾಗದಿರುವುದು.

*ನೀರನ್ನು ಪೆಟ್ರೋಲ್, ದ್ರಾಕ್ಷಾರಸ ಅಥವಾ ಇತರ ಯಾವುದೇ ದ್ರವವನ್ನಾಗಿ ಪರಿವರ್ತಿಸುವುದು.

*ನಾನು ಹೇಳಿದ ವಸ್ತುಗಳನ್ನು 10 ಸೆಕೆಂಡ್‌ಗಳೊಳಗೆ ಶೂನ್ಯದಿಂದ ಸೃಷ್ಟಿಸುವುದು.

*ಫೋಟೊ ತೆಗೆದ ಬಳಿಕ ನೆಗೆಟಿವ್‌ನಿಂದ ಕಾಣೆಯಾಗುವುದು. ಬೀಗ ಹಾಕಿದ ಕೋಣೆಯಿಂದ ಅದೃಶ್ಯನಾಗುವುದು.

*ಯಾವುದೇ ಅತೀಂದ್ರಿಯ, ಅತಿಮಾನುಷ ಶಕ್ತಿಯಿಂದ ಲಕೋಟೆಯಲ್ಲಿ ಮೊಹರು ಮಾಡಲಾದ ನೋಟಿನ ನಂಬರನ್ನು ಓದುವುದು.

*ಮುಂದೆ ನಡೆಯಬಹುದಾದ ನಾವು ತಿಳಿಸಿದ ವಿಷಯವನ್ನು, ನಾವು ತಿಳಿಸಿದ ನಿಖರತೆಗೆ ಅನುಗುಣವಾಗಿ ಮುನ್ಸೂಚಿಸುವುದು.

*ನಾವು ತೋರಿಸಿದ ನೋಟಿನ ದ್ವಿಪ್ರತಿಯನ್ನು ಸೃಷ್ಟಿಸುವುದು. ಅದರ ವೌಲ್ಯ ಕ್ರಮಾಂಕವೆಲ್ಲವೂ ಒಂದೇ ಆಗಿರಬೇಕು.

*ನಾವು ತೋರಿಸಿದ, ನಾವೇ ನಿರ್ಧರಿಸಿದ ರೋಗವುಳ್ಳ 10 ರೋಗಿಗಳಲ್ಲಿ ಕನಿಷ್ಠ ಐದು ಮಂದಿಯನ್ನು ಯಾವುದೇ ಔಷಧ, ಪಥ್ಯಗಳ ನಿರ್ಬಂಧವಿಲ್ಲದೆ ಬರೀ ಪ್ರಾರ್ಥನೆ ಅಥವಾ ಇತರ ಅತಿಮಾನುಷ ಶಕ್ತಿಯಿಂದ ನಾವು ನಿಗದಿಪಡಿಸಿದ ಅವಧಿಯೊಳಗೆ ಗುಣಪಡಿಸಬೇಕು.

*ಕೊಟ್ಟ ಹತ್ತು ಜನ್ಮ ದಿನಾಂಕ, ಸ್ಥಳ ಮತ್ತು ಸಮಯಗಳನ್ನು ಉಪಯೋಗಿಸಿ ಜಾತಕವನ್ನು ರಚಿಸಿ, ಅದರಲ್ಲಿ ಯಾರು ಗಂಡು? ಯಾರು ಹೆಣ್ಣು? ಯಾರು ಬದುಕಿದ್ದಾರೆ? ಯಾರು ಸತ್ತಿದ್ದಾರೆ ಎಂದು ಫಲಜೋತಿಷ್ಯದ ಮೂಲಕ ಶೇ.95ರಷ್ಟು ನಿಖರತೆಯಲ್ಲಿ ತಿಳಿಸುವುದು.

*ಇದಕ್ಕೆ ಹೊರತಾದ ಅತಿಮಾನುಷ, ಅತೀಂದ್ರಿಯ ಅಥವಾ ಇತರ ಯಾವುದೇ ವಿಶೇಷ ಸದೃಶ ಶಕ್ತಿಯನ್ನು ಹೊಂದಿರುವ ಅಥವಾ ತೋರಿಸಿಕೊಳ್ಳುವವರು ಈ ಬಗ್ಗೆ ಮೊದಲೇ ನಿಷ್ಕರ್ಷ ಮಾಡಿಕೊಂಡು ಅವುಗಳನ್ನು ತೋರಿಸಲು ಮುಂದಾದಲ್ಲಿ ಅಂತಹವರಿಗೂ ಪಣ ಒಡ್ಡಲಾಗುವುದು. ಪಣದ ಮೊತ್ತ ಇತ್ಯಾದಿಗಳು ಮಾಡಿ ತೋರಿಸಬಹುದಾದ ವಿಷಯಗಳಿಗೆ ಅನುಗುಣವಾಗರುತ್ತದೆ.

ಷರತ್ತುಗಳು ಅನ್ವಯ!

ಪಣವು ಬರೇ ಮೇಲ್ಕಾಣಿಸಿದ ಕ್ರಿಯೆಗಳನ್ನು ಮಾಡಿ ತೋರಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಈ ಬಗ್ಗೆ ಯಾವುದೇ ಐತಿಹಾಸಿಕ ಪುರಾವೆಗಳು, ಮುದ್ರಿತ ದಾಖಲೆಗಳು, ಪ್ರಕಟಿತ ಅಥವಾ ಅಪ್ರಕಟಿತ ಸಾಕ್ಷಿ ವೃತ್ತಾಂತಗಳನ್ನು ಸ್ವೀಕರಿಸಲಾಗುವುದಿಲ್ಲ.

► ಮಾನಸಿಕ ರೋಗಗಳಿಂದ ಬಳಲುವವರು, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ ಇತರರ ಪರವಾಗಿ ಪಣಗಳನ್ನು ಒಡ್ಡುವವರಿಂದ ಸವಾಲುಗಳನ್ನು ಸ್ವೀಕರಿಸಲಾಗುವುದಿಲ್ಲ.

► ಸಂಬಂಧಪಟ್ಟ ಪ್ರಯೋಗಗಳನ್ನು ಮಾಡಿ ತೋರಿಸುವ 24 ಗಂಟೆಗಳ ಮೊದಲು ಎಲ್ಲಾ ಷರತ್ತುಗಳನ್ನು ವಿವರವಾಗಿ ಅಗತ್ಯವುಳ್ಳ ವೌಲ್ಯದ ಸ್ಟಾಂಪ್ ಕಾಗದದ ಮೇಲೆ ದಾಖಲಿಸಿ ಈ ಬಗ್ಗೆ ಷರತ್ತು ರಚಿಸಲಾಗುವುದು.

► ಪಣ ಒಡ್ಡುವವರು ಭದ್ರತಾ ಠೇವಣಿಯಾಗಿ 10,000 ರೂ.ಗಳನ್ನು ಇರಿಸಬೇಕು. ಅವರು ಷರತ್ತುಗಳಿಗನ್ವಯ ಪ್ರಯೋಗಗಳನ್ನು ಮಾಡಿ ತೋರಿಸಿ ಗೆದ್ದಲ್ಲಿ ಮಾತ್ರ ಆ ಹಣವನ್ನು ಹಿಂದಿರುಗಿಸಲಾಗುವುದು. ಇಲ್ಲವಾದಲ್ಲಿ ಮೊತ್ತವನ್ನು ಕಳೆದುಕೊಳ್ಳುವರು.

► ಷರತ್ತುಗಳಿಗನ್ವಯ ಪ್ರಯೋಗಳನ್ನು ಮಂಗಳೂರಿನಲ್ಲಿಯೇ ಪೂರ್ವ ನಿರ್ಧಾರಿತ ದಿನಾಂಕ ಮತ್ತು ಸಮಯದಂದು ನಡೆಸಲಾಗುವುದು. ಈ ಬಗ್ಗೆ ನಡೆಯುವ ಖರ್ಚು ವೆಚ್ಚಗಳನ್ನು, ಪ್ರಯೋಗಗಳನ್ನು ಮಾಡಿ ತೋರಿಸುವವರು ಭರಿಸತಕ್ಕದ್ದು. ಪ್ರಯೋಗ ನಡೆಸುವ ಸಮಯದಲ್ಲಿ ಯಾವುದೇ ಹಾನಿ, ಜೀವ ನಷ್ಟಕ್ಕೆ ಪಣವೊಡ್ಡಿದ ನಾನು ಜವಾಬ್ದಾರನ್ನಲ್ಲ. ಮಂಗಳೂರಿಗೆ ಪ್ರಯಾಣಿಸುವ ಖರ್ಚು, ತಿಂಡಿ, ಊಟ, ವಸತಿ ಹಾಗೂ ಇತರ ಯಾವುದೇ ಖರ್ಚಿಗೆ ನಾನು ಜವಾಬ್ದಾರನಲ್ಲ.

ಪವಾಡ ಪುರುಷರು, ಅತಿಮಾನುಷ ಶಕ್ತಿಯುಳ್ಳವವರು, ಫಲ ಜೋತಿಷಿಗಳು, ಅತೀಂದ್ರಿಯ ಶಕ್ತಿಯುಳ್ಳವರು, ಅಪಾರವಾಗಿರುವ ನಮ್ಮ ಕರ್ನಾಟಕ ರಾಜ್ಯದ ಯಾವುದೇ ಮೂಲೆಯಿಂದ ಬರುವವರು ಈ ಸವಾಲುಗಳನ್ನು ಸ್ವೀಕರಿಸಲು ಬರುತ್ತಾರೆಂದು ನಾನು ಮಾತ್ರ ಕಾಯುತ್ತಲೇ ಇದ್ದೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)