varthabharthi

ಸಿನಿಮಾ

ಚಮಕ್: ಚಮ್ಕಾಯ್ಸಿ ಚಿಂದಿ ಉಡಾಯಿಸಿ

ವಾರ್ತಾ ಭಾರತಿ : 31 Dec, 2017
ಶಶಿ

ಇತ್ತೀಚೆಗೆ ಮದುವೆಯ ಮೊದಲಿನ ಸಾದಾ ಪ್ರೇಮಕತೆಗಳಿಗಿಂತ ಮದುವೆಯ ಬಳಿಕದ ಬದುಕೇ ವಿಭಿನ್ನ ಎನ್ನುವಂಥ ಚಿತ್ರಗಳು ಬರುತ್ತಿವೆ. ಕನ್ನಡ ಸಿನೆಮಾಗಳಲ್ಲಿ ಅಪರೂಪ ಎನಿಸುವಂಥ ಈ ವಿಚಾರವನ್ನೇ ನಿರ್ದೇಶಕರು ಕತೆಯಾಗಿ ಆಯ್ಕೆ ಮಾಡಿದ್ದಾರೆ. ತಾನು ಹೇಗಿದ್ದರೂ ಪರವಾಗಿಲ್ಲ, ಆದರೆ ಪತ್ನಿಯಾಗಿ ಬರುವವಳು ಭಾರತೀಯ ನಾರಿಯಂತೆ ಇರಬೇಕು ಎಂಬ ಕಲ್ಪನೆ ಬಹುತೇಕ ಪುರುಷರಲ್ಲಿ ಇದೆ. ಆದರೆ ಅದೇ ಭಾವನೆ ಹುಡುಗಿಯಲ್ಲೂ ಇದ್ದಾಗ ಹೇಗಿರುತ್ತದೆ ಎನ್ನುವುದೇ ಚಿತ್ರದ ಒಂದೆಳೆ ಕತೆ ಎನ್ನಬಹುದು.

ಮನರಂಜನೆಗಾಗಿ ವೀಕೆಂಡ್ ಪಾರ್ಟಿ ಎನ್ನುವುದು ಇಂದು ನಗರದ ಹುಡುಗಿಯರಲ್ಲಿ ಸಾಮಾನ್ಯ ವಿಚಾರ. ಅಂಥ ಹುಡುಗಿ ಖುಷಿ, ತನ್ನ ಗಂಡನ ಮುಂದೆ ಗರತಿ ಗೌರಮ್ಮಳಂತೆ ಲುಕ್ ಕೊಡುತ್ತಿರುತ್ತಾಳೆ. ಅದೇ ವೇಳೆ ಖುಷಿಯ ಗಂಡ ಖುಷ್ ಕೂಡ ಆಕೆಯೆದುರು ದುರಭ್ಯಾಸ ಇರದ ಗಂಡನಾಗಿ ಕಾಣಿಸಿಕೊಂಡು ಸುಳ್ಳು ಹೇಳುವ ವೀಕೆಂಡ್ ಕುಡುಕನಾಗಿರುತ್ತಾನೆ. ಈ ಇಬ್ಬರ ಸತ್ಯ ಪರಸ್ಪರ ಅರಿವಾದಾಗ ಏನಾಗುತ್ತದೆ ಎನ್ನುವುದೇ ಚಿತ್ರದ ಮುಖ್ಯ ಕತೆ. ಇನ್ನೇನಾಗುತ್ತದೆ? ಜಗಳವಾಗಿ ವಿಚ್ಛೇದನವಾಗುತ್ತದೆ ಎಂದು ನೀವು ಅಂದುಕೊಂಡರೆ ಅದು ತಪ್ಪು. ಅದೇ ಕಾರಣಕ್ಕೆ ಚಿತ್ರ ಇತರ ಸಿನೆಮಾಗಳಿಗಿಂತ ವಿಭಿನ್ನವಾಗಿ ಆಕರ್ಷಿಸುತ್ತಾ ಹೋಗುತ್ತದೆ. ಚಿತ್ರದಲ್ಲಿ ಖುಷಿಯಾಗಿ ರಶ್ಮಿಕಾ ಮಂದಣ್ಣ ಮತ್ತು ಡಾಕ್ಟರ್ ಖುಷ್ ಪಾತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಬಳಿಕ ಮತ್ತೊಮ್ಮೆ ಪ್ರೇಕ್ಷಕರ ಮನಕ್ಕೆ ಲಗ್ಗೆ ಇಡುವಂಥ ಪಾತ್ರ ನಿರ್ವಹಿಸಿದ್ದಾರೆ.

ಸ್ವತಃ ಡಬ್ ಮಾಡಿರುವುದರಿಂದಾಗಿ ಅವರ ಕಂಠದಲ್ಲಿನ ಹೊಸತನ ಸಂಭಾಷಣೆಗೆ ರಂಗು ನೀಡಿದೆ. ಗಣೇಶ್ ಈ ಹಿಂದಿನ ಚಿತ್ರಗಳಿಗಿಂತ ಮಾಗಿದ ನಟನೆಯನ್ನು ನೀಡಿದ್ದಾರೆ! ಚಿತ್ರದ ಮೂಡ್‌ಗೆ ತಕ್ಕಂಥ ಹಾಡುಗಳಿವೆ. ಛಾಯಾಗ್ರಹಣ ಆತ್ಮೀಯವೆನಿಸುತ್ತದೆ. ಉಳಿದಂತೆ ತಾರಾಗಣದಲ್ಲಿ ಸುಮಿತ್ರಾ, ಸಾಧು ಕೋಕಿಲ ಮೊದಲಾದವರಿದ್ದಾರೆ. ಚಿತ್ರದ ಆರಂಭದಲ್ಲಿ ನಾಯಕನ ತಾಯಿಯನ್ನು ಧಾರಾವಾಹಿ ಪ್ರಿಯೆಯಾಗಿ ತೋರಿಸಿದಾಗ, ಸುನಿ ಮತ್ತೊಂದು ಅಲಮೇಲಮ್ಮ ಮಾಡಿದ್ದಾರೇನೋ ಎಂಬ ಸಂದೇಹ ಮೂಡುವಂತಿತ್ತು. ಆದರೆ ಕೆಲವೇ ಕ್ಷಣದಲ್ಲಿ ಕತೆ ಬೇರೆಯೇ ಆಯಾಮ ಪಡೆದುಕೊಳ್ಳುತ್ತದೆ. ಸದಾ ತುಂಟತನದ ಸಂಭಾಷಣೆಗಳಿಂದ ಕೆಣಕುವ ಸುನಿ ಚಿತ್ರದಲ್ಲಿ ನಾಯಕನಿಗೆ ಪ್ರಸೂತಿ ತಜ್ಞನ ಪಾತ್ರ ನೀಡಿದ್ದಾರೆ. ಅಲ್ಲಿಗೆ ಅವರ ಸಂಭಾಷಣೆಯ ವಿಚಾರದಲ್ಲಿ ಇನ್ನಷ್ಟು ಅವಕಾಶಗಳು ಹೆಚ್ಚಿದಂತಿವೆ. ಗಂಭೀರವಾಗಿ ನೋಡಿದರೆ ಚಿತ್ರದಲ್ಲಿ ಸಾಕಷ್ಟು ಲಾಜಿಕ್‌ಗಳು ಮಿಸ್ ಹೊಡೆದಂತೆ ಕಾಣಿಸಬಹುದು. ಆದರೆ ಅದಕ್ಕಿಂತ ಮನರಂಜನೆ ಮುಖ್ಯವೆಂದಾದರೆ ಖಂಡಿತವಾಗಿ ಕುಟುಂಬ ಸಮೇತ ನೋಡಬಹುದಾದ ಚಿತ್ರ ಇದು.

ಒಟ್ಟಿನಲ್ಲಿ ಸಿಂಪಲ್ ಸುನಿ ತಮ್ಮ ಎಂದಿನ ಶೈಲಿಯಂತೆ ಗಂಭೀರ ಸಮಸ್ಯೆಯೊಂದನ್ನು ಕೂಡ ಚಿತ್ರದಲ್ಲಿ ಸಿಂಪಲಾಗಿ ಹೇಳಿದ್ದಾರೆ.


ತಾರಾಗಣ: ಗಣೇಶ್, ರಶ್ಮಿಕಾ ಮಂದಣ್ಣ
ನಿರ್ದೇಶಕ: ಸಿಂಪಲ್ ಸುನಿ
ನಿರ್ಮಾಪಕ: ಟಿ ಆರ್ ಚಂದ್ರಶೇಖರ್ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)