varthabharthi

ಸಿನಿಮಾ

ಬಾಲಿವುಡ್: ಗೆಲುವು ವಿರಳ, ಸೋಲು ಹೇರಳ...

ವಾರ್ತಾ ಭಾರತಿ : 31 Dec, 2017

ಬಾಕ್ಸ್‌ಆಫೀಸ್ ದೃಷ್ಟಿಯಿಂದ 2017, ಬಾಲಿವುಡ್‌ಗೆ ಅತ್ಯಂತ ಶೋಚನೀಯ ವರ್ಷವಾಗಿದೆ. ಬಾಲಿವುಡ್ ಈ ವರ್ಷ ಗೆಲುವಿಗಿಂತಲೂ ಸೋಲನ್ನೇ ಹೆಚ್ಚಾಗಿ ಕಂಡಿದೆ. ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆ ಗೊಂಡ ‘ದಂಗಲ್’, ಈ ವರ್ಷದ ಆರಂಭದ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಪ್ರಚಂಡ ಜಯಭೇರಿ ಬಾರಿಸಿತು. ಈ ವರ್ಷ ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆ ಗೊಂಡಿದ್ದ ಸಲ್ಮಾನ್ ಅಭಿನಯದ ‘ಟ್ಯೂಬ್‌ಲೈಟ್’ ಗಳಿಕೆಯಲ್ಲಿ ಮಂಕಾಯಿತು. ಅಮಿತಾಭ್ ನಟನೆಯ ‘ಸರ್ಕಾರ್ 3’ ಹಾಗೂ ಕಂಗನಾ, ಶಹೀದ್, ಸೈಫ್ ಭರ್ಜರಿ ತಾರಾಗಣದ ‘ರಂಗೂನ್’ ಸೇರಿದಂತೆ ಅನೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮುಗ್ಗರಿಸಿದವು. ಜನವರಿಯಲ್ಲಿ ಬಿಡುಗಡೆಗೊಂಡ ಶಾರುಕ್ ಅಭಿನಯದ ‘ರಾಯೀಸ್’, ಗಳಿಕೆಯಲ್ಲಿ ಈ ವರ್ಷದ ನಂ.1 ಬಾಲಿವುಡ್ ಚಿತ್ರವೆನಿಸಿದೆ. ಸೆಪ್ಟಂಬರ್ ಕೊನೆಯಲ್ಲಿ ತೆರೆಕಂಡ ‘ಜುಡ್ವಾ 2’ ಬಿಗ್‌ಬಜೆಟ್ ಚಿತ್ರಗಳಿಗೆ ಸವಾಲೆಸೆದು, ಬಾಕ್ಸ್ ಆಫೀಸ್‌ನಲ್ಲಿ ಈ ವರ್ಷದ ನಂ.2 ಪಟ್ಟವನ್ನಲಂಕರಿಸಿದೆ.

 ಅನೇಕ ಬಿಗ್‌ಬಜೆಟ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ವಿಫಲಗೊಂಡಿದ್ದರೂ, ಕೆಲವು ಸಾಧಾರಣ ಬಜೆಟ್‌ನ ಚಿತ್ರಗಳು ಅಚ್ಚರಿಪಡುವಂತಹ ಯಶಸ್ಸನ್ನು ಕಂಡಿವೆ. ಅಜಯ್‌ದೇವಗನ್‌ರ ‘ಗೋಲ್‌ಮಾಲ್ ಎಗೇನ್’ ಅಕ್ಷಯ್ ಕುಮಾರ್ ಅವರ ‘ಟಾಯ್ಲೆಟ್ ಏಕ್ ಪ್ರೇಮ್’ ಕಥಾ ಚಿತ್ರಗಳು ಅದ್ಭುತವಾದ ಯಶಸ್ಸನ್ನು ಕಂಡಿವೆ.

 ಭರ್ಜರಿ ಪ್ರಚಾರದೊಂದಿಗೆ ಬಿಡುಗಡೆಯಾದ ಹೃತಿಕ್ ರೋಶನ್ ಅಭಿನಯದ ‘ಕಾಬಿಲ್’, ರಾಯಿಸ್ ಜೊತೆಗೆ ಬಿಡುಗಡೆಯಾಗಿದ್ದರೂ ಎರಡೂ ಚಿತ್ರಗಳು ಭರ್ಜರಿ ಯಶಸ್ಸನ್ನು ಕಾಣುವಲ್ಲಿ ಸಫಲವಾದವು.

ಇತ್ತ ಆಸ್ಕರ್ ಸ್ಪರ್ಧೆಯಲ್ಲೂ ಭಾರತಕ್ಕೆ ಈ ವರ್ಷ ನಿರಾಶಾದಾಯಕ ವರ್ಷವಾಗಿ ಪರಿಣಮಿಸಿದೆ. ಆಸ್ಕರ್ ಸ್ಪರ್ಧೆಗೆ ಭಾರತದಿಂದ ಆಯ್ಕೆಯಾಗಿದ್ದ ಬಾಲಿವುಡ್ ಚಿತ್ರ ನ್ಯೂಟನ್ ಬಗ್ಗೆ ಚಿತ್ರವಲಯಗಳಲ್ಲಿ ಭಾರೀ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ ಅದು ಮೊದಲ ಹಂತದಲ್ಲೇ ಸ್ಪರ್ಧಾ ಕಣದಿಂದ ಹೊರಬಿದ್ದಿದೆ. ಆದಾಗ್ಯೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಕ್ಷಕಿರಣ ಬೀರುವ ಈ ಚಿತ್ರದ ಬಗ್ಗೆ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು.

ಆದಾಗ್ಯೂ ಮಲಯಾಳಂನ ಸೂಪರ್‌ಹಿಟ್ ಚಿತ್ರ ಮೋಹನ್‌ಲಾಲ್ ಅಭಿನಯದ ‘ಪುಲಿಮುರುಗನ್’ನ ಎರಡು ಹಾಡುಗಳು, ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್‌ಗೆ ನಾಮಕರಣಗೊಂಡಿರುವುದು ಭಾರತೀಯ ಚಿತ್ರರಂಗಕ್ಕೆ ತುಸು ಸಮಾಧಾನ ತಂದಿದೆ.

  ಹಲವು ಸೋಲುಗಳ ನಡುವೆಯೂ ಬಾಲಿವುಡ್ ಈ ವರ್ಷ ಕೆಲವು ಅನಿರೀಕ್ಷಿತ ಹಿಟ್‌ಗಳನ್ನು ಕೊಟ್ಟಿದೆ. ಸದ್ದಿಲ್ಲದೆ ಬಿಡುಗಡೆಗೊಂಡ ಇರ್ಫಾನ್ ಖಾನ್ ಅಭಿನಯದ ‘ಹಿಂದಿ ಮೀಡಿಯಂ’, ‘ಫುಕ್ರೆ ರಿಟರ್ನ್ಸ್’, ‘ಶುಭಮಂಗಲ್ ಸಾವಧಾನ್’, ‘ಬರೇಲಿ ಕಿ ಬರ್ಫಿ’ ಗೆಲುವಿನ ನಗೆ ಬೀರಿವೆ. ಇದರ ಜೊತೆಗೆ ವಿದ್ಯಾಬಾಲನ್ ಅಭಿನಯದ ಕಾಮಿಡಿ ಹಾಗೂ ಕೌಟುಂಬಿಕ ಮನರಂಜನೆಯ ‘ತುಮಾರಿ ಸುಲು’ ಕೂಡಾ ಯಶಸ್ಸಿನ ಸವಿ ಉಂಡಿದೆ.

    ಕಳೆದ ಕೆಲವು ವರ್ಷಗಳಿಂದ ಸಾಲುಸಾಲು ಹಿಟ್ ಚಿತ್ರಗಳನ್ನು ನೀಡಿದ್ದ ಸಲ್ಮಾನ್ ಖಾನ್‌ಗೆ ಈ ವರ್ಷ ಸ್ವಲ್ಪ ಮಟ್ಟಿಗೆ ನಿರಾಶಾದಾಯಕ ವರ್ಷವೆನಿಸಿದೆ. ಭಾರೀ ನಿರೀಕ್ಷೆಯೊಂದಿಗೆ ತೆರೆಕಂಡ ಅವರ ಅಭಿನಯದ ಟ್ಯೂಬ್‌ಲೈಟ್, ಬಾಕ್ಸ್‌ಆಫೀಸ್‌ನಲ್ಲಿ ಬೆಳಗಲಿಲ್ಲ. ಆದರೆ ಈ ಕೊರತೆಯನ್ನು ಸಲ್ಮಾನ್ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ನೀಗಿಸಿದ್ದಾರೆ. ವರ್ಷಾಂತ್ಯದಲ್ಲಿ ತೆರೆಕಂಡ ಟೈಗರ್ ಜಿಂದಾ ಹೈ ಕೇವಲ ಮೂರೇ ದಿನಗಳಲ್ಲಿ 100 ಕೋಟಿ ರೂ. ಗಳಿಸಿ ಬಾಕ್ಸ್‌ಆಫೀಸ್‌ನಲ್ಲಿ ಅಬ್ಬರಿಸಿದೆ.

 ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳ ಪೈಕಿ ಈ ವರ್ಷ ಅಕ್ಷಯ್‌ಕುಮಾರ್ ಅತ್ಯಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಅಭಿನಯದ ‘ಜಾಲಿ ಎಲ್‌ಎಲ್‌ಬಿ 2’, ‘ಹೇರಾಫೇರಿ’, ‘ನಾಮ್‌ಶಬನಾ’ ಹಾಗೂ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಈ ವರ್ಷ ತೆರೆಕಂಡಿದ್ದು, ಎಲ್ಲವೂ ಯಶಸ್ಸು ಕಂಡಿವೆ. ಸಲ್ಮಾನ್ ಖಾನ್ ‘ಟ್ಯೂಬ್‌ಲೈಟ್ ಹಾಗೂ ‘ಟೈಗರ್ ಜಿಂದಾ ಹೈ’ ಹೀಗೆ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಶಾರುಕ್ ಕೂಡಾ ಎರಡು ಚಿತ್ರಗಳಲ್ಲಿ (ರಾಯೀಸ್ ಹಾಗೂ ಹ್ಯಾರಿ ಮೆಟ್ ಸೇಜಲ್ ) ನಟಿಸಿದ್ದಾರೆ.

   ಈ ಮಧ್ಯೆ ವರುಣ್ ಧವನ್ ಅಭಿನಯದ ಬದರಿನಾಥ್ ಕೆ ದುಲ್ಹನಿಯಾ ಹಾಗೂ ಜುಡ್ವಾ 2 ಎರಡೂ ಭರ್ಜರಿ ಯಶಸ್ಸು ಕಂಡಿವೆ. ಇದರೊಂದಿಗೆ ವರುಣ್‌ಧವನ್ ತಾನು ಕೂಡಾ ಸೂಪರ್‌ಸ್ಟಾರ್‌ಗಳ ಪಟ್ಟಕ್ಕೆ ಲಗ್ಗೆಯಿಡುವ ಸೂಚನೆ ನೀಡಿದ್ದಾರೆ.

  ಬಾಲಿವುಡ್‌ನ ಸೂಪರ್ ಹೀರೋಯಿನ್‌ಗಳ ಪೈಕಿ ಕತ್ರೀನಾ ಅಭಿನಯದ ‘ಜಗ್ಗಾ ಜಾಸೂಸ್’ ಹಾಗೂ ‘ಟೈಗರ್ ಜಿಂದಾ ಹೈ’ ತೆರೆಕಂಡಿವೆ. ಆದರೆ ಬಾಲಿವುಡ್‌ನ ನಂ. 1 ನಟಿಯೆನಿಸಿರುವ ದೀಪಿಕಾ ಪಡುಕೋಣೆ ‘ರಬ್ತಾ’ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಆಕೆಯ ಉಳಿದ ಯಾವ ಚಿತ್ರಗಳೂ ತೆರೆಕಾಣಲಿಲ್ಲ. ಆಲಿಯಾ ಭಟ್ ಅಭಿನಯದ ಒಂದೇ ಒಂದು ಚಿತ್ರ (ಬದ್ರಿನಾಥ್ ಕಿ ದುಲ್ಹನಿಯಾ,) ರಿಲೀಸ್ ಆಗಿದ್ದರೂ, ಅದು ಸೂಪರ್‌ಹಿಟ್ ಎನಿಸಿದೆ.

ಬಾಲಿವುಡ್‌ನ ಪ್ರತಿಭಾವಂತ ನಟಿ ಕಂಗನಾ ರಣಾವತ್ ನಾಯಕಿಯಾಗಿರುವ ‘ರಂಗೂನ್ ಹಾಗೂ ಸಿಮ್ರಾನ್’ ಬಿಡುಗಡೆಯಾಗಿದ್ದರೂ, ಬಾಕ್ಸ್‌ಆಫೀಸ್‌ನಲ್ಲಿ ಮುಗ್ಗರಿಸಿವೆ.

ದಾಖಲೆ ಬರೆದ ಬಾಹುಬಲಿ 2 

 ರಾಜವೌಳಿ ನಿರ್ದೇಶನದ ಬಹುಭಾಷಾ ಚಿತ್ರ ‘ಬಾಹುಬಲಿ 2’ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ. 2015ರಲ್ಲಿ ಬಿಡುಗಡೆಗೊಂಡ ಬಾಹುಬಲಿ ಚಿತ್ರದ ಮುಂದುವರಿದ ಭಾಗವಾದ ‘ಬಾಹುಬಲಿ 2’ ಪ್ರದರ್ಶನ ಕಂಡ ಎಲ್ಲಾ ಕಡೆಗಳಲ್ಲೂ ಜಯಭೇರಿ ಬಾರಿಸಿ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 510 ಕೋಟಿ ರೂ. ಸಂಪಾದಿಸಿದೆ. ಈ ಚಿತ್ರದ ಮೂಲಕ ಟಾಲಿವುಡ್ ನಟ ಪ್ರಭಾಸ್ ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳ ಸಾಲಿಗೆ ಸೇರಿದ್ದಾರೆ.ತೆಲುಗು, ಹಿಂದಿ,ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಭಾರತದಲ್ಲಿ ಗರಿಷ್ಠ ಹಣ ಸಂಪಾದಿಸಿದ ಚಿತ್ರವೆಂಬ ದಾಖಲೆಯನ್ನು ನಿರ್ಮಿಸಿದೆ. ಭರ್ಜರಿಸೆಟ್‌ಗಳು, ರೋಮಾಂಚಕಕಾರಿ ಫೈಟ್ ಹಾಗೂ ಆ್ಯಕ್ಷನ್ ದೃಶ್ಯಗಳಿಂದ ಈ ಚಿತ್ರವು ಭಾರತದಲ್ಲಿ ಮಾತ್ರವಲ್ಲ ದೇಶವಿದೇಶಗಳಲ್ಲೂ ಪ್ರೇಕ್ಷಕರನ್ನು ಮೋಡಿ ಮಾಡಿದೆ.

ತಮಿಳಿನ ವಿಕ್ರಂ ವೇದಾ ಟಾಪ್ 1...!

 ಬಾಹುಬಲಿ ಬಾಕ್ಸ್‌ಆಫೀಸ್‌ನಲ್ಲಿ ದಾಖಲೆ ಮಾಡಿದೆಯಾದರೂ, ಚಲನಚಿತ್ರ, ಟಿವಿ ವಾಹಿನಿಗಳ ಕುರಿತ ದತ್ತಾಂಶಗಳ ವಿವರಗಳನ್ನು ಪ್ರಕಟಿಸುವ ಅಂತಾರಾಷ್ಟ್ರೀಯ ಸಂಸ್ಥೆ ‘ಇಂಟರ್‌ನೆಟ್ ಮೂವಿ ಡಾಟಾಬೇಸ್’ (ಐಎಂಡಿಬಿ) ಪ್ರಕಟಿಸಿದ ಅತ್ಯುತ್ತಮ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ತಮಿಳು ಚಿತ್ರ ವಿಕ್ರಮ್ ವೇದಾ ಪ್ರಥಮ ಸ್ಥಾನ ಪಡೆದುಕೊಂಡಿದೆ. ಬಾಹುಬಲಿ 2ಗೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಲಭಿಸಿದೆ. ತೆಲುಗಿನ ಅರ್ಜುನ್ ರೆಡ್ಡಿ ಕೂಡಾ ಅಚ್ಚರಿಕರವೆಂಬಂತೆ ತೃತೀಯ ಸ್ಥಾನಪಡೆದಿದೆ.ಐಎಂಡಿಬಿ ಪಟ್ಟಿಯಲ್ಲಿ ಆಮಿರ್‌ಖಾನ್-ಝೈರಾ ವಾಸಿಂ ಅಭಿನಯದ ಸೀಕ್ರೆಟ್ ಸೂಪರ್‌ಸ್ಟಾರ್‌ಗೆ 4 ನೇ ಸ್ಥಾನ ದೊರೆತರೆ, ಹಿಂದಿ ಮೀಡಿಯಂ ಐದನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಏನಿದ್ದರೂ ಐಎಂಡಿಬಿಯ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳು ಪ್ರಾದೇಶಿಕ ಚಿತ್ರಗಳ ಪಾಲಾಗಿರುವುದು ಗಮನಾರ್ಹವಾಗಿದೆ.

ಗಮನಸೆಳೆದ ಸೀಕ್ರೆಟ್ ಸೂಪರ್‌ಸ್ಟಾರ್

 ಆಮಿರ್‌ಖಾನ್ ವಿಶೇಷ ಪಾತ್ರದಲ್ಲಿ ನಟಿಸಿರುವ ‘ಸೀಕ್ರೆಟ್ ಸೂಪರ್ ಸ್ಟಾರ್’ ಈ ವರ್ಷದ ಗಮನಸೆಳೆದ ಚಿತ್ರಗಳಲ್ಲೊಂದಾಗಿದೆ. ಆಮಿರ್‌ಖಾನ್ ನಟಿಸಿದ್ದರೂ, ಬಾಲನಟಿ ಝೈರಾವಾಸಿಂ ಚಿತ್ರದ ಕಥೆಯ ಕೇಂದ್ರಬಿಂದುವಾಗಿದ್ದಾರೆ. ಮಧ್ಯಮವರ್ಗದ ಕುಟುಂಬದ ಮುಸ್ಲಿಂ ಬಾಲಕಿಯೊಬ್ಬಳು, ಪರಿಶ್ರಮದಿಂದ ಜನಪ್ರಿಯ ಗಾಯಕಿಯಾಗುವ ವಿಭಿನ್ನ ವಾದ ಕಥಾವಸ್ತುವನ್ನು ಹೊಂದಿರುವ ‘ಸೀಕ್ರೆಟ್ ಸೂಪರ್‌ಸ್ಟಾರ್’ ಪ್ರೇಕ್ಷಕರು, ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿತ ಲ್ಲದೆ, ಬಾಕ್ಸ್‌ಆಫೀಸ್‌ನಲ್ಲೂ ಗೆದ್ದಿದೆ.

ಗೆದ್ದ ಚಿತ್ರಗಳು
ಗೋಲ್‌ಮಾಲ್ ಎಗೇನ್
ರಾಯೀಸ್
ಜುಡ್ವಾ 2
ಟಾಯ್ಲೆಟ್ ಏಕ್ ಪ್ರೇಮ್ ಕಥಾ
ಬದ್ರಿನಾಥ್ ಕಿ ದುಲ್ಹನಿಯಾ
ಜಾಲಿ ಎಲ್‌ಎಲ್‌ಬಿ 2
ಹಿಂದಿ ಮೀಡಿಯಂ
ಸೀಕ್ರೆಟ್ ಸೂಪರ್‌ಸ್ಟಾರ್

ಸೋತ ಚಿತ್ರಗಳು

 ಜಗ್ಗಾ ಜಾಸೂಸ್
ಭೂಮಿ
ಬೇಗಂ ಜಾನ್
ಟ್ಯೂಬ್‌ಲೈಟ್
ಜಬ್ ಹ್ಯಾರಿ ಮೆಟ್ ಸೇಜಲ್
ರಂಗೂನ್
ಸರ್ಕಾರ್ 3
ಓ.ಕೆ.ಜಾನು
ಮರೆಗೆ ಸರಿದವರು
ಓಂಪುರಿ (ನಟ)
ವಿನೋದ್ ಖನ್ನಾ(ನಟ)
ಅಬಿಸ್ ರಿಝ್ವಿ (ನಿರ್ದೇಶಕ)
ರೀಮಾ ಲಾಗೂ (ನಟಿ)
ಶ್ಯಾಮಾ (ಹಿರಿಯ ನಟಿ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)