varthabharthi

ಸುಗ್ಗಿ

ಮೈಸೂರಿಗೆ ಕೈಗಾರಿಕಾ ಮಹತ್ವ ತಂದುಕೊಟ್ಟ ಫಾರೂಕ್ ಇರಾನಿ

ವಾರ್ತಾ ಭಾರತಿ : 31 Dec, 2017
ಎಸ್. ಪಟ್ಟಾಭಿರಾಮನ್

ಮೈಸೂರಿನ ಬಗ್ಗೆ ಉತ್ಕಟ ಅಭಿಮಾನಿಯಾಗಿದ್ದ ಫಾರೂಕ್ ಇರಾನಿ ಅವರು 25 ವರ್ಷಗಳ ಕಾಲ ಮೈಸೂರು ನಗರದ ಸಾರ್ವಜನಿಕ ಜೀವನದಲ್ಲಿ ಬೆರೆತು ಹೋಗಿದ್ದರು. ಇಂಥವರ ಹೆಸರು ಶಾಶ್ವತವಾಗಿ ಉಳಿಯುವಂತೆ ಯಾವುದೇ ಸ್ಮಾರಕವೊಂದನ್ನು ನಿರ್ಮಿಸದೇ ಹೋದದ್ದು ಮೈಸೂರಿನ ಮುಂದಾಳುಗಳು ಎಸಗಿದ್ದ ಒಂದು ದೊಡ್ಡ ಲೋಪ ಎನ್ನದೆ ವಿಧಿಯಿಲ್ಲ.

1960ಕ್ಕೆ ಮುಂಚೆ ಮೈಸೂರು ನಗರದಲ್ಲಿ ಕೆಲವು ಅಗರ್‌ಬತ್ತಿ ಕಾರ್ಖಾನೆಗಳನ್ನು ಬಿಟ್ಟರೆ ಇದ್ದ ಒಂದೇ ಒಂದು ಹಳೇ ಕಾರ್ಖಾನೆ ಎಂದರೆ ಕೆ.ಆರ್. (ಕೃಷ್ಣರಾಜೇಂದ್ರ) ಮಿಲ್ ಇನ್ನೊಂದು ಮೈಸೂರು ದಕ್ಷಿಣದಲ್ಲಿದ್ದದ್ದು ರೈಲ್ವೆ ವರ್ಕ್ ಶಾಪ್. ಈ ಎರಡೂ ಕಾರ್ಖಾನೆಗಳು ನೂರಾರು ಜನರಿಗೆ ಉದ್ಯೋಗ ಒದಗಿಸಿದ್ದವು. ಉಳಿದ ಎರಡು ಸರಕಾರಿ ಕಾರ್ಖಾನೆಗಳೆಂದರೆ:

1. ಗಂಧದೆಣ್ಣೆ ಕಾರ್ಖಾನೆ ಮತ್ತು

2. ರೇಷ್ಮೆ ನೆಯ್ಗೆ, ಕಾರ್ಖಾನೆ. ಈ ಕಾರ್ಖಾನೆಗಳು ಮೈಸೂರಿನ ದಕ್ಷಿಣ ಭಾಗದ ನೂರಾರು ಜನರಿಗೆ ನೌಕರಿ ನೀಡಿದ್ದುವು.

ಆದರೆ 1952 ರಲ್ಲಿ ಮೈಸೂರಿಗೆ ಮೊದಲ ಬಾರಿಗೆ ಬಂದ ಎಫ್.ಕೆ. (ಫಾರೂಕ್) ಇರಾನಿ ಯವರು ತಮ್ಮ ಚಿಕ್ಕಪ್ಪ ರುಸ್ತುಂ ಇರಾನಿ ಹಾಗೂ ಹಿಂದೆ ಮಹಾರಾಜರಾಗಿ, ಬಳಿಕ ರಾಜ ಪ್ರಮುಖರೂ, ರಾಜ್ಯಪಾಲರೂ ಆಗಿದ್ದ ಜಯಚಾಮರಾಜೇಂದ್ರ ಒಡೆಯರ್ ಜೊತೆ ಸೇರಿ ಪಾಲುದಾರಿಕೆಯಿಂದ ಐಡಿಯಲ್ ಜಾವಾ ಮೋಟಾರ್ ಬೈಸಿಕಲ್ ಕಾರ್ಖಾನೆಯೊಂದನ್ನು 1960 ರಲ್ಲಿ ಇಲ್ಲಿನ ಯಾದವಗಿರಿಯ ವಿಶಾಲ ಜಾಗವೊಂದರಲ್ಲಿ ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಯಶಸ್ಸಿನ ಮೇಲೆ ಯಶಸ್ಸನ್ನು ಕಂಡ ಜಾವಾ ಕಾರ್ಖಾನೆ 250 ಸಿ.ಸಿ. ಹಾಗೂ 175 ಸಿ.ಸಿ. ಬಳಿಕ 75 ಸಿ.ಸಿ. ಮೋಟಾರ್ ಬೈಸಿಕಲ್ ಅನ್ನು ತಯಾರಿಸಿ ಇರಾನ್, ಲ್ಯಾಟಿನ್ ಅಮೆರಿಕ ಮುಂತಾದ ದೇಶಗಳಿಗೂ ರಫ್ತು ಮಾಡುವ ಜೊತೆಗೆ ನಮ್ಮ ರಕ್ಷಣಾ ಇಲಾಖೆಗೂ ಸರಬರಾಜು ಮಾಡಿತು. ಮೊದಲ ಬಾರಿಗೆ ಮೈಸೂರು ನಗರಕ್ಕೆ ಭಾರತದ ಕೈಗಾರಿಕಾ ಭೂಪಟದಲ್ಲಿ ಒಂದು ಹೆಮ್ಮೆಯ ಸ್ಥಾನವನ್ನು ಗಳಿಸುವಲ್ಲಿ ಇನ್ನೂ 40 ರ ಹರೆಯದಲ್ಲಿದ್ದ ಎಫ್.ಕೆ. ಇರಾನಿ ಮತ್ತು ಅವರ ಚಿಕ್ಕಪ್ಪ ರುಸ್ತುಂ ಇರಾನಿ ಅವರು ಯಶಸ್ವಿಯಾದರು.

ಫಾರೂಕ್ ಇರಾನಿ

ಹಣ, ಹೆಸರು, ಯಶಸ್ಸನ್ನು ಗಳಿಸಿದ ಇರಾನಿ ಅವರು ಮೈಸೂರಿನ ಬಗ್ಗೆ ಅಭಿಮಾನದಲ್ಲಿ ಯಾರಿಗೂ ಎರಡನೆಯವರಾಗಿ (ತಮ್ಮ ಸಾವಿನವರೆಗೂ) ಉಳಿದಿರಲಿಲ್ಲ. ನಗರದ ರೋಟರಿ ಚಳವಳಿಗೆ ಚೈತನ್ಯ ನೀಡಿ, ರೇಸ್ ಕ್ಲಬ್ ಅಧ್ಯಕ್ಷರಾಗಿ, ಫುಟ್‌ಬಾಲ್ ಆಟಕ್ಕೂ ಸಾಕಷ್ಟು ಉತ್ತೇಜನ ನೀಡುತ್ತಿದ್ದರು. ನಗರದ ಸಾಮಾಜಿಕ ಜೀವನದಲ್ಲಿ ಎಫ್.ಕೆ. ಇರಾನಿಯವರು ಎಷ್ಟೊಂದು ಬೆರೆತು ಹೋಗಿದ್ದರೆಂದರೆ, ಎಲ್ಲ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳೂ ತಮ್ಮ ಸಾರ್ವಜನಿಕ ಚಟುವಟಿಕೆಗಳು ನಡೆಯಬೇಕಾಗಿದ್ದರೆ, ನೆರವಿಗಾಗಿ ಇರಾನಿಯವರ ಬಳಿ ಮೊದಲು ಹೋಗುತ್ತಿದ್ದರು. ಯಾರಿಗೂ ಇಲ್ಲ ಎನ್ನದೆ ಬಂದವರ ಅಂತಸ್ತು, ಅವರು ಬಂದಿರುವ ಸಭೆ-ಸಮ್ಮೇಳನಗಳ ಮಹತ್ವವನ್ನು ಅರಿತು ಸಹಾಯ ಮಾಡುತ್ತಿದ್ದರು.

ನೆರವಿಗಾಗಿ ತಮ್ಮ ಬಳಿಗೆ ಬಂದವರು ಇನ್ನೂ ಚಿಕ್ಕ ವಯಸ್ಸಿ ನವರು ಅಥವಾ ತಮ್ಮ ಸಮವಯಸ್ಕರಾದರೆ ಅವರೊಂದಿಗೆ ಸಲಿಗೆ ವಹಿಸಿ ಮಾತಾಡುತ್ತಿದ್ದರು. ಮೊದಲು ಕಾಫಿ, ಟೀ ತರಿಸಿ ಕೊಟ್ಟು ಆಮೇಲೆ ಏನು ಬಂದಿರಿ ಎಂದು ಕೇಳಿ ಹಣ ಸಹಾಯ ಕೇಳಲು ಬಂದುದಾಗಿ ಹೇಳಿದರೆ, ‘‘ಅರೆ ಸಾಲ, ನಾನೇನು ನೋಟು ಮುದ್ರಣಾಲಯವನ್ನು ಇಟ್ಟಿದ್ದೇನೆ ಎಂದುಕೊಂಡಿರಾ?’’ ಎಂದು ಖುಷಿ ಮಾಡಿ, ಆ ಮೇಲೆ ಚೆಕ್ ಅನ್ನು ತಪ್ಪದೆ ಕೊಡುತ್ತಿದ್ದರು. ಒಂದು ಚುನಾವಣೆಗೆ ಮುಂಚೆ ಹಣ ಕೇಳುವ ಅಭ್ಯರ್ಥಿಗಳು ಮತ್ತಿತರರ ಕಾಟ ತಡೆದು ಕೊಳ್ಳಲಾರದೆ ಕೆ.ಆರ್. ಆಸ್ಪತ್ರೆಗೆ ಸೇರಿಕೊಂಡುಬಿಟ್ಟಿದ್ದರು.

1980 ರ ಆರಂಭದಲ್ಲಿ ಆರ್. ಗುಂಡೂರಾವ್ ಮುಖ್ಯಮಂತ್ರಿ ಯಾಗಿದ್ದಾಗ ತಮ್ಮ ಮನೆಯ ಬಳಿಯೇ (ನಝರ್‌ಬಾದ್‌ನಲ್ಲಿ) ಇದ್ದ ಖಾಲಿ ನಿವೇಶನದಲ್ಲಿ ಮಕ್ಕಳ ಸಂಚಾರಿ ಪಾರ್ಕ್‌ವೊಂದನ್ನು ನಿರ್ಮಿಸಿಕೊಟ್ಟರು. ಆದರೆ ಕೆಲ ಕಾಲದ ನಂತರ ಆ ಸಂಚಾರಿ ಪಾರ್ಕ್ ಅನ್ನು ಪೊಲೀಸರು ಸರಿಯಾಗಿ ಬಳಸದೇ ಹೋದ ಕಾರಣ ಈಗಲೂ ಪಾಳು ಬಿದ್ದಿದೆ. ಜೊತೆಗೆ ನಗರದ ಅನೇಕ ವೃತ್ತಗಳಿಗೆ ಸಂಚಾರಿ ಛತ್ರಿಗಳನ್ನೂ ಮಾಡಿಸಿಕೊಟ್ಟರು. ಈಗ ಅವುಗಳೂ ಇಲ್ಲ.

ಇರಾನಿ ಅವರಿಗೆ ಸಮ ಜೋಡಿಯಾಗಿದ್ದ ಅವರ ಪತ್ನಿ ಶೀಲ ಇರಾನಿ ಅವರು ಆಂಗ್ಲೋ ಇಂಡಿಯನ್ ಪ್ರತಿನಿಧಿಯಾಗಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ವಿಧಾನ ಸಭಾ ಸದಸ್ಯೆಯಾಗಿ, ಬಳಿಕ ಕೆಲ ಕಾಲ ಲೋಕಸಭಾ ಸದಸ್ಯರಾಗಿದ್ದುದೇ ಅಲ್ಲದೆ ಐಡಿಯಲ್ ಜಾವಾ ಕಾರ್ಖಾನೆಯ ಸಹಕಾರದೊಂದಿಗೆ ರೋಟರಿ ಶಾಲೆಯೊಂದನ್ನು ಸ್ಥಾಪಿಸಿ ಶಿಶುವಿಹಾರದಿಂದ ಹಿಡಿದು ಎಸೆಸೆಲ್ಸಿಯವರೆಗೆ ಶಿಕ್ಷಣ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ.

1993 ರ ಡಿಸೆಂಬರ್‌ನಲ್ಲಿ ಕ್ಯಾನ್ಸರ್ ವ್ಯಾಧಿಗೆ ತುತ್ತಾಗಿ ಮುಂಬೈಯ ಆಸ್ಪತ್ರೆಯಲ್ಲಿ ಅಸುನೀಗಿದ ಫಾರೂಕ್ ಇರಾನಿಯವರ ಅಂತ್ಯ ದರ್ಶನವೂ ಮೈಸೂರಿಗರಿಗೆ ಆಗದೆ ಹೋದದ್ದು ದುರ್ದೈವ. ಅವರ ನಿಧನದ ನಂತರ ಜಾವಾ ಕಾರ್ಖಾನೆಯೂ ಅವನತಿಯ ಹಾದಿ ಹಿಡಿಯಿತು. ಕ್ರಮೇಣ ಮುಚ್ಚಿಯೇ ಹೋಯಿತು.

ಮೈಸೂರಿನ ಬಗ್ಗೆ ಉತ್ಕಟ ಅಭಿಮಾನಿಯಾಗಿದ್ದ ಫಾರೂಕ್ ಇರಾನಿ ಅವರು 25 ವರ್ಷಗಳ ಕಾಲ ಮೈಸೂರು ನಗರದ ಸಾರ್ವಜನಿಕ ಜೀವನದಲ್ಲಿ ಬೆರೆತುಹೋಗಿದ್ದರು. ಇಂಥವರ ಹೆಸರು ಶಾಶ್ವತವಾಗಿ ಉಳಿಯುವಂತೆ ಯಾವುದೇ ಸ್ಮಾರಕವೊಂದನ್ನು ನಿರ್ಮಿಸದೇ ಹೋದದ್ದು ಮೈಸೂರಿನ ಮುಂದಾಳು ಗಳು ಎಸಗಿದ್ದ ಒಂದು ದೊಡ್ಡ ಲೋಪ ಎನ್ನದೆ ವಿಧಿಯಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)