varthabharthi

ವೈವಿಧ್ಯ

ಏಳುಬೀಳುಗಳ ನಡುವೆ ಸರಿದು ಹೋದ 2017

ವಾರ್ತಾ ಭಾರತಿ : 31 Dec, 2017

2017 ಭಾರತದ ಪಾಲಿಗೆ ಸಿಹಿಗಿಂತ ಕಹಿಯ ಅನುಭವವೇ ಅಧಿಕ ಎನ್ನುವಂತಿದೆ. ಹಲವೆಡೆ ಸಂಭವಿಸಿದ ಭೀಕರ ಪ್ರವಾಹ ಹಾಗೂ ವರ್ಷಾಂತ್ಯದ ವೇಳೆಗೆ ಅಪ್ಪಳಿಸಿದ ಓಖಿ ಚಂಡಮಾರುತ ನೂರಾರು ಮಂದಿಯನ್ನು ಬಲಿತೆಗೆದುಕೊಂಡಿದೆ. ಗೋರಖ್ ಪುರದಲ್ಲಿದ ಸರಕಾರ ಆಸ್ಪತ್ರೆಯಲ್ಲಿ 290ಕ್ಕೂ ಅಧಿಕ ಕಂದಮ್ಮಗಳು ಸಾವನ್ನಪ್ಪಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತು. ಇತ್ತ ಆರ್ಥಿಕ ಕ್ಷೇತ್ರ ನಿರುತ್ಸಾಹದಾಯಕವಾಗಿತ್ತು. ಕಳೆದ ವರ್ಷದ ಅಂತ್ಯದಲ್ಲಿ ಜಾರಿಗೆ ಬಂದ ನೋಟು ನಿಷೇಧದ ಬಿಸಿ ಈ ವರ್ಷಾ ರಂಭದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ದೇಶದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ.5.7ಕುಸಿದು ಕಳವಳ ಮೂಡಿಸಿತು. ಜೂನ್‌ನಲ್ಲಿ ಜಾರಿಗೆ ಬಂದ ಜಿಎಸ್‌ಟಿ ಕೂಡಾ ಆರಂಭದಲ್ಲಿ ಆರ್ಥಿಕ ರಂಗದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಿತು. ಉತ್ತರಪ್ರದೇಶದಲ್ಲಿ 17 ವರ್ಷಗಳ ಬಳಿಕ ಬಿಜೆಪಿ ಸರಕಾರದ ಅಸ್ತಿತ್ವಕ್ಕೆ ಬಂದರೆ, ಹತ್ತು ವರ್ಷಗಳ ನಂತರ ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೇರಿದರೂ, ಪ್ರತಿಪಕ್ಷ ಕಾಂಗ್ರೆಸ್ ಪ್ರಬಲವಾದ ಸ್ಪರ್ಧೆ ನೀಡುವ ಮೂಲಕ ಎಲ್ಲರ ಗಮನಸೆಳೆಯಿತು. ಈ ಮಧ್ಯೆ ಕೋಮುಹಿಂಸೆ, ದಲಿತರ ಮೇಲಿನ ದೌರ್ಜನ್ಯದ ಘಟನೆಗಳು ಈ ವರ್ಷವೂ ದೇಶವನ್ನು ಬಹುವಾಗಿ ಕಾಡಿದವು. ಸರಿದುಹೋದ ವರ್ಷದಲ್ಲಿ ಭಾರತ ಕಂಡ ಕೆಲವು ಮಹತ್ವದ ವಿದ್ಯಮಾನಗಳ ಸಂಕ್ಷಿಪ್ತ ಒಳನೋಟ ಇಲ್ಲಿದೆ...

ಮಂಕಾದ ಜಿಡಿಪಿ

 ಕಳೆದ ವರ್ಷದ ಅಂತ್ಯದ ವೇಳೆಗೆ ಜಾರಿಗೆ ಬಂದ ನೋಟು ನಿಷೇಧದ ದುಷ್ಪರಿಣಾಮ ಈ ವರ್ಷ ಸ್ಪಷ್ಟವಾಗಿ ಗೋಚರವಾಗಿತ್ತು. ಈ ವರ್ಷದ ಆರಂಭದ ತಿಂಗಳುಗಳಲ್ಲಿ ದೇಶದ ಉದ್ಯಮ ವಲಯ ತೀವ್ರ ಹಿನ್ನಡೆ ಕಂಡಿತ್ತು. ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ವು ಮೊದಲ ತ್ರೈಮಾಸಿಕದಲ್ಲಿ 5.7ಕ್ಕೆ ಕುಸಿದಿದೆ. ಆದರೆ ಎರಡನೆ ತ್ರೈಮಾಸಿಕದಲ್ಲಿ 6.3್ಕೆ ಏರಿ, ತುಸು ಚೇತರಿಕೆ ಕಂಡಿತು.

ಜಿಎಸ್‌ಟಿ: ಒಂದೇ ದೇಶ ಒಂದೇ ತೆರಿಗೆ 

ಸ್ವಾತಂತ್ರಾನಂತರದ ಭಾರತದ ಅತೀ ದೊಡ್ಡ ತೆರಿಗೆ ಸುಧಾರಣೆಯೆಂದು ಬಣ್ಣಿಸಲಾದ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ಜೂನ್ 30ರ ಮಧ್ಯರಾತ್ರಿಯಂದು ಸಂಸತ್ ಭವನದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಚಾಲನೆ ನೀಡಲಾಯಿತು. ಒಂದೇ ದೇಶ, ಒಂದೇ ತೆರಿಗೆ ಎಂಬ ಘೋಷಣೆಯೊಂದಿಗೆ ಜಾರಿಗೆ ಬಂದ ಜಿಎಸ್‌ಟಿ ಈ ಮೊದಲು ಚಾಲ್ತಿಯಲ್ಲಿದ್ದ 16ಕ್ಕೂ ಅಧಿಕ ತೆರಿಗೆಗಳನ್ನು ರದ್ದುಪಡಿಸಿದೆ. ಆದರೆ ಪೆಟ್ರೋಲಿಯಂ ಸೇರಿದಂತೆ ಕೆಲವು ಉತ್ಪನ್ನಗಳನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ. ಶೇ.5. ಶೇ.12, ಶೇ.18 ಹಾಗೂ ಶೇ.28 ಹೀಗೆ ನಾಲ್ಕು ಸ್ಲಾಬ್‌ಗಳಲ್ಲಿ ವಿವಿಧ ಉತ್ಪನ್ನಗಳು ಹಾಗೂ ಸೇವೆಗಳಿಗೆ ತೆರಿಗೆ ವಿಧಿಸಲಾಗಿದೆ.

ಇತಿಹಾಸ ನಿರ್ಮಿಸಿದ ಇಸ್ರೋ

ಇಸ್ರೋ ಈ ವರ್ಷ ಇನ್ನೊಂದು ಇತಿಹಾಸ ನಿರ್ಮಿಸಿದೆ. ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಒಂದೇ ಬಾರಿಗೆ 104 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆಗೊಳಿಸುವ ಮೂಲಕ ಅದು ವಿಶ್ವದಾಖಲೆ ಸ್ಥಾಪಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಈ ಉಡಾವಣೆಯಲ್ಲಿ ಎಲ್ಲಾ 104 ರಾಕೆಟ್‌ಗಳನ್ನು ಅಂತರಿಕ್ಷ ಕಕ್ಷೆಯಲ್ಲಿ ಯಶಸ್ವಿಯಾಗಿ ಸ್ಥಾಪಿಸುವಲ್ಲಿ ಇಸ್ರೋ ಯಶಸ್ವಿಯಾಯಿತು.

ದಕ್ಕದ ಸಿಎಂ ಪಟ್ಟ; ಜೈಲು ಪಾಲಾದ ಚಿನ್ನಮ್ಮ

ಕಳೆದ ವರ್ಷ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನರಾದ ಬಳಿಕ ಅವರ ಉತ್ತರಾಧಿಕಾರಿಯಾಗಿ ಶಶಿಕಲಾರನ್ನು ಎಡಿಎಂಕೆ ಶಾಸಕಾಂಗ ಪಕ್ಷ ಆಯ್ಕೆ ಮಾಡಿತ್ತು. ಇದಾದ ಬೆನ್ನಲ್ಲೇ ಆಡಳಿತಾರೂಢ ಎಡಿಎಂಕೆ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿತು. ಜಯಲಲಿತಾ ಅವರ ಪರಮಾಪ್ತ, ಹಂಗಾಮಿ ಮುಖ್ಯಮಂತ್ರಿ ಪನೀರ್‌ಸೆಲ್ವಂ, ಶಶಿಕಲಾ ಬಣದ ವಿರುದ್ಧ ಬಂಡಾಯವೇಳುತ್ತಿದ್ದಂತೆ, ರಿಸಾರ್ಟ್ ರಾಜಕೀಯ ಆರಂಭ ಗೊಂಡಿತು. ಆನಂತರ ಶಶಿಕಲಾ ಮುಖ್ಯಮಂತ್ರಿಯಾಗಿ ಸರಕಾರ ರಚಿಸಲು ರಾಜ್ಯಪಾಲರ ಆಹ್ವಾನವೂ ದೊರೆತಿತ್ತು. ಆದರೆ ಆನಂತರದ ಬೆಳವಣಿಗೆಯಲ್ಲಿ 20 ವರ್ಷಗಳಷ್ಟು ಹಳೆಯದಾದ ಗಳಿಕೆಗೆ ಮೀರಿದ ಆಸ್ತಿ ಪ್ರಕರಣದಲ್ಲಿ ಶಶಿಕಲಾರನ್ನು ದೋಷಿಯೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿ, ಆಕೆಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರಿಂದ ಆಕೆ ಜೈಲು ಪಾಲಾಗಬೇಕಾಯಿತು.

ಡೋಕಾ ಲಾ ಬಿಕ್ಕಟ್ಟು

ಡೋಕಾ ಲಾದಲ್ಲಿ ರಸ್ತೆ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಚೀನದ ಪೀಪಲ್ ಲಿಬರೇಶನ್ ಆರ್ಮಿ ಹಾಗೂ ಭಾರತದ ಸಶಸ್ತ್ರ ಪಡೆ ನಡುವೆ ಬಿಕ್ಕಟ್ಟು ಉಂಟಾಯಿತು. ಡೋಕಾ ಲಾದಲ್ಲಿ ದಕ್ಷಿಣಾಭಿಮುಖವಾಗಿ ಇದ್ದ ರಸ್ತೆಯನ್ನು ವಿಸ್ತರಿಸಲು 2017 ಜೂನ್ 16ರಂದು ಚೀನಾ ಸೇನೆ ನಿರ್ಮಾಣ ವಾಹನ, ರಸ್ತೆ ನಿರ್ಮಾಣ ಸಲಕರಣೆ ಗಳನ್ನು ತಂದಿತ್ತು. 2017 ಜೂನ್ 18ರಂದು ಭಾರತೀಯ ಸೇನಾ ಪಡೆ ಶಸ್ತ್ರಾಸ್ತ್ರಗಳು ಹಾಗೂ ಎರಡು ಬುಲ್ಡೋಝರ್‌ನೊಂದಿಗೆ ಡೋಕಾ ಲಾ ಪ್ರದೇಶಕ್ಕೆ ಪ್ರವೇಶಿಸಿ ಚೀನಾ ಪಡೆ ರಸ್ತೆ ನಿರ್ಮಿಸುವುದನ್ನು ತಡೆಯಿತು. 

ಕೋಮುಹಿಂಸೆಗೆ ಕಡಿವಾಣವಿಲ್ಲ

2017ರಲ್ಲಿ ಭಾರತವು 300ಕ್ಕೂ ಅಧಿಕ ಕೋಮುಘರ್ಷಣೆಯ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಸಂಸತ್‌ನ ಗೃಹ ಸಚಿವಾಲಯವು ನವೆಂಬರ್‌ನಲ್ಲಿ ಬಿಡುಗಡೆಗೊಳಿಸಿದ ಅಂಕಿಅಂಶಗಳ ಪ್ರಕಾರ ಆವರೆಗೆ 44 ಮಂದಿ ಕೋಮಹಿಂಸೆಗೆ ಬಲಿಯಾಗಿದ್ದಾರೆ. ಬಿಜೆಪಿ ಆಡಳಿತವಿರುವ ಉತ್ತರಪ್ರದೇಶದಲ್ಲಿ 60 ಕೋಮುಹಿಂಸೆಯ ಘಟನೆಗಳು ನಡೆದಿದ್ದು, ಇದು ದೇಶದಲ್ಲೇ ಅತ್ಯಧಿಕ. ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಬಂಗಾಳ,ಅತ್ಯಧಿಕ ಕೋಮುಹಿಂಸೆ ನಡೆದ ರಾಜ್ಯಗಳ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನದಲ್ಲಿವೆ. ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕ ಗೋವ್ಯಾಪಾರಿಗಳು ಹಾಗೂ ಸಾಗಣೆದಾರರ ಮೇಲೆ ಸಂಘಪರಿವಾರದ ಬೆಂಬಲಿಗರು ಅಮಾನುಷ ದಾಳಿ ನಡೆಸಿರುವುದು ವರದಿಯಾಗಿವೆ. ಇದನ್ನು ಪ್ರಧಾನಿ ಬಹಿರಂಗವಾಗಿ ಖಂಡಿಸಿದರು. ಆದರೆ, ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. 

ಚಿತ್ರರಂಗಕ್ಕೂ ತಟ್ಟಿದ ಅಸಹಿಷ್ಣುತೆ, ಕೋಮುವಾದದ ಬಿಸಿ...

ಕೋಮುವಾದ, ಅಸಹಿಷ್ಣುತೆಯ ಬಿಸಿ ಈ ವರ್ಷ ಚಲನಚಿತ್ರರಂಗಕ್ಕೂ ತಟ್ಟಿದೆ. ಸಂಜಯ್ ಬನ್ಸಾಲಿಯವರ ‘ಪದ್ಮಾವತಿ’ ಚಿತ್ರದ ವಿರುದ್ಧ ರಜಪೂತ ಸಮುದಾಯದ ಕರ್ಣಿ ಸೇನಾ ಹಾಗೂ ಸಂಘಪರಿವಾರದ ಸಂಘಟನೆಗಳು ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆಸಿದವು. ಇದರಿಂದ ಡಿಸೆಂಬರ್ 1ರಂದು ತೆರೆಕಾಣಬೇಕಾಗಿದ್ದ ಚಿತ್ರದ ಬಿಡುಗಡೆ ಮುಂದೂಡಲಾಯಿತು. ಈ ಮಧ್ಯೆ ಮಧುಭಂಡಾರ್ಕರ್ ನಿರ್ದೇಶನದ ‘ಇಂದು ಸರಕಾರ್’ ಚಿತ್ರದ ವಿರುದ್ಧ ಕಾಂಗ್ರೆಸ್ ಪಕ್ಷ ಆಕ್ಷೇಪ ವ್ಯಕ್ತಪಡಿಸಿತ್ತು. ಹಾಗೆಯೇ ಮಲಯಾಳಂ ಚಿತ್ರ ‘ಎಸ್.ದುರ್ಗಾ’ ಹಾಗೂ ಮರಾಠಿ ಚಿತ್ರ ‘ನ್ಯೂಡ್’ ಚಿತ್ರದ ವಿರುದ್ಧವೂ ಕೇಸರಿ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವುಗಳ ಪ್ರದರ್ಶನವನ್ನು ರದ್ದುಪಡಿಸಲಾಯಿತು.

ಉತ್ತರಪ್ರದೇಶದಲ್ಲಿ ಯೋಗಿ ಸರಕಾರ ಅಸ್ತಿತ್ವಕ್ಕೆ

ಉತ್ತರಪ್ರದೇಶದ 17ನೇ ವಿಧಾನಸಭೆ ಚುನಾವಣೆ 2017 ಫೆಬ್ರವರಿ 11ರಿಂದ ಮಾರ್ಚ್ 8ರ ವರೆಗೆ 7 ಹಂತಗಳಲ್ಲಿ ನಡೆಯಿತು. ಈ ಚುನಾವಣೆಯಲ್ಲಿ ಶೇ. 61.04 ಮತದಾನವಾಗಿತ್ತು. ಚುನಾವಣೆಯ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸದ ಹೊರತಾಗಿಯೂ ಈ ಚುನಾವಣೆಯಲ್ಲಿ ಬಿಜೆಪಿ 325 ಸ್ಥಾನಗಳನ್ನು ಪಡೆದು ಅಭೂತಪೂರ್ವ ಜಯ ಸಾಧಿಸಿತ್ತು. ಈ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಸಾಮೂಹಿಕ ನಾಯಕತ್ವ ಹಾಗೂ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಬಳಸಿಕೊಂಡಿತು. 2017 ಮಾರ್ಚ್ 18ರಂದು ಯೋಗಿ ಅದಿತ್ಯನಾಥ ಅವರನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿ ನಿಯೋಜಿಸಲಾಯಿತು.

ನಿರ್ಮಲಾಗೆ ರಕ್ಷಣೆಯ ಹೊಣೆ

 ರಕ್ಷಣಾಸಚಿವೆಯಾಗಿ ನೇಮಕಗೊಳ್ಳುವ ಮೂಲಕ ನಿರ್ಮಲಾ ಸೀತಾರಾಮನ್, ಹೊಸ ದಾಖಲೆ ಸೃಷ್ಟಿಸಿದ್ದಾರೆ. ಮೋದಿ ಸಂಪುಟ ಪುನಾರಚನೆಯ ಬಳಿಕ ಸೆಪ್ಟೆಂಬರ್ 3ರಂದು ರಕ್ಷಣಾ ಸಚಿವೆಯಾಗಿ ನಿರ್ಮಲಾ ಅಧಿಕಾರ ಸ್ವೀಕರಿಸಿದರು. 72 ಗಂಟೆ ಹಿಮಪಾತ: 20 ಸಾವು ಜಮ್ಮ ಹಾಗೂ ಕಾಶ್ಮೀರದಲ್ಲಿ 72 ಗಂಟೆಗಳ ಹಿಮಪಾತದಿಂದ 15 ಮಂದಿ ಯೋಧರು ಸೇರಿದಂತೆ 20 ಮಂದಿ ಮೃತಪಟ್ಟರು. ಗುರೇಜ್ ಕಣಿವೆಯ ನಿರು ಸಮೀಪ ಸಂಭವಿಸಿದ ಹಿಮಪಾತದಲ್ಲಿ ಗಸ್ತು ನಡೆಸುತ್ತಿದ್ದ 11 ಯೋಧರಲ್ಲಿ ಹಲವರು ನಾಪತ್ತೆಯಾಗಿದ್ದರು. ನಕ್ಸಲ್ ದಾಳಿ: 12ಯೋಧರ ಸಾವು ಛತ್ತೀಸ್‌ಗಡದ ಸುಕ್ಮಾದಲ್ಲಿ ನಕ್ಸಲೀಯರು ದಾಳಿ ನಡೆಸಿ ಕೇಂದ್ರ ಮೀಸಲು ಪೊಲೀಸ್ ಪಡೆಯ 12 ಯೋಧರನ್ನು ಹತ್ಯೆಗೈದಿದ್ದರು. ಈ ಘಟನೆಯಲ್ಲಿ 4 ಮಂದಿ ಯೋಧರು ಗಂಭೀರ ಗಾಯಗೊಂಡಿದ್ದರು. ಇದು ಈ ವರ್ಷ ಭದ್ರತಾ ಪಡೆಯ ಮೇಲೆ ನಕ್ಸಲೀಯರು ನಡೆಸಿದಅತಿ ದೊಡ್ಡ ದಾಳಿಯಾಗಿತ್ತು. 

ಆಕ್ಸಿಜನ್ ಕೊರತೆ: ಕಂದಮ್ಮಗಳ ಸಾವು

ಉತ್ತರಪ್ರದೇಶದಲ್ಲಿ ಗೋರಖ್‌ಪುರದ ಬಾಬಾ ರಾಘವದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿದ್ದ 213 ಶಿಶುಗಳು, ಮೆದುಳು ಜ್ವರದ ವಾರ್ಡ್‌ನಲ್ಲಿ 77 ಮಂದಿ ಸೇರಿ ಒಟ್ಟು 290 ಮಂದಿ ಸಾವನ್ನಪ್ಪಿದ್ದರು. ತನಿಖೆ ನಡೆಸಲು ಯೋಗಿ ಆದಿತ್ಯನಾಥ್ ಸಮಿತಿಯೊಂದನ್ನು ರಚಿಸಿದ್ದರು. 

ಸಹಾರಣ್‌ಪುರ ಗಲಭೆ

ದೇಶದ ವಿವಿಧೆಡೆ ದಲಿತರ ಮೇಲಿನ ದೌರ್ಜನ್ಯ ನಡೆದ ಪ್ರಕರಣಗಳೂ ವರದಿಯಾಗಿವೆ. ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಸಹಾರಣ್‌ಪುರ ಜಿಲ್ಲೆಯ ಶಬ್ಬಿಪುರ್ ಗ್ರಾಮದಲ್ಲಿ ದಲಿತರು ಹಾಗೂ ಮೇಲ್ಜಾತಿಯ ಟಾಕೂರ್ ಸಮುದಾಯಗಳ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಓರ್ವ ಮೃತಪಟ್ಟು 15 ಮಂದಿ ಗಾಯಗೊಂಡಿದ್ದರು.

ಮುಂಬೈ ಬೆಂಕಿ ಅವಘಡದಲ್ಲಿ 14 ಸಾವು

ಮಂಬೈನ ಕಮಲಾ ಮಿಲ್ಸ್ ಕಾಂಪೌಂಡ್‌ನಲ್ಲಿರುವ ಸಂಕೀರ್ಣದಲ್ಲಿ ಬೆಂಕಿ ಅವಘಡ ಸಂಭವಿಸಿ 14 ಮಂದಿ ಮೃತಪಟ್ಟು 21 ಮಂದಿ ಗಾಯಗೊಂಡರು. ಕಟ್ಟಡದ ರೂಫ್‌ಟಾಪ್‌ನಲ್ಲಿದ್ದ ಒನ್ ಅಬೊವ್ ಪಬ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು ಹಾಗೂ ಅದು ಇತರ ಕಡೆಗಳಿಗೆ ಹಬ್ಬಿತು. ಪಬ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪೊಲೀಸರ ವರದಿ ಹೇಳಿತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರವಾಹ, ಭೂಕಂಪ, ಚಂಡಮಾರುತ ಜುಲೈನಲ್ಲಿ ಕುಂಭದ್ರೋಣ ಮಳೆಯಿಂದ ಬ್ರಹ್ಮಪುತ್ರಾ ನದಿ ಉಕ್ಕಿ ಹರಿದ ಪರಿಣಾಮ ಈಶಾನ್ಯದ ರಾಜ್ಯಗಳು ಹಾಗೂ ಮಣಿಪುರ ರಾಜ್ಯಗಳು ಭಾರೀ ಪ್ರವಾಹದಿಂದ ತತ್ತರಿಸಿದವು. ಭೂಕುಸಿತ ಹಾಗೂ ನೆರೆಯಿಂದ ಸಂಭವಿಸಿದ ದುರಂತಗಳಲ್ಲಿ ಕನಿಷ್ಠ 85 ಮಂದಿ ಮೃತಪಟ್ಟರು. ಹಿಮಾಚಲ ಪ್ರದೇಶದ ಮಾಂಡಿ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಮಳೆಯಿಂದಾಗಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಕನಿಷ್ಠ 46 ಮಂದಿ ಭೂಸಮಾಧಿಯಾದರು. ವರ್ಷಾಂತ್ಯದ ವೇಳೆಗೆ ತಮಿಳುನಾಡು,ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಓಖಿ ಚಂಡಮಾರುತ 63ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿತು. ನೂರಾರು ಮನೆಗಳು ನಾಶವಾದವು. 1 ಲಕ್ಷ ಕೋ.ರೂ.ಗೂ ಅಧಿಕ ಮೊತ್ತದ ಹಾನಿ ಸಂಭವಿಸಿತು. 

ತ್ರಿವಳಿ ತಲಾಖ್ ಅಸಿಂಧು: ಸುಪ್ರೀಂಕೋರ್ಟ್

 ಮುಸ್ಲಿಂ ಸಮುದಾಯದಲ್ಲಿ ಪ್ರಚಲಿತದಲ್ಲಿರುವ ತ್ರಿವಳಿ ತಲಾಖ್ ಪದ್ಧತಿಯನ್ನು ಕಾನೂನುಬಾಹಿರವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಐವರು ಸದಸ್ಯರ ನ್ಯಾಯಪೀಠವು 3:2 ಬಹುಮತದೊಂದಿಗೆ ತ್ರಿವಳಿ ತಲಾಕ್ ಪದ್ಧತಿಯನ್ನು ಅಸಾಂವಿಧಾನಿಕವೆಂದು ಘೋಷಿಸಿತು.

 ತ್ರಿವಳಿ ತಲಾಖ್ ಪದ್ಧತಿಯನ್ನು ಅಸಿಂಧುಗೊಳಿಸುವ ಕುರಿತ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ವಿಧೇಯಕವನ್ನು ಕೇಂದ್ರ ಸರಕಾರವು ಲೋಕಸಭೆಯಲ್ಲಿ ಡಿಸೆಂಬರ್‌ನಲ್ಲಿ ಅಂಗೀಕರಿಸಿತು. ರಾಜ್ಯಸಭೆ ಯಲ್ಲಿ ಈ ವಿಧೇಯಕವು ಮುಂದಿನ ವರ್ಷದ ಆರಂಭದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ. ತ್ರಿವಳಿ ತಲಾಖ್ ಪದ್ಧತಿಯನ್ನು ಪ್ರಶ್ನಿಸಿ ಮುಸ್ಲಿಂ ಮಹಿಳೆ ಶಾಯರಾಬಾನೊ ಮತ್ತಿತರರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಒಟ್ಟಾಗಿ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿತ್ತು. ವಿಧೇಯಕ ರಚಿಸುವಾಗ ವಿವಿಧ ಮುಸ್ಲಿಂ ಸಂಘಟನೆಗಳ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಅವಘಡ...ದುರಂತ...

14  ಜನವರಿ : ಬಿಹಾರದ ಪಾಟ್ನಾ ಬಳಿ ಮಕರಸಂಕ್ರಾಂತಿ ಹಬ್ಬದ ಆಚರಣೆಯ ಸಂದರ್ಭ ಗಂಗಾನದಿಯಲ್ಲಿ ದೋಣಿ ಮುಳುಗಿ 25 ಮಂದಿ ಜಲಸಮಾಧಿ.

16 ಜುಲೈ: ಜಮ್ಮುಕಾಶ್ಮೀರದಲ್ಲಿ ನಡೆದ ಬಸ್ ಅವಘಡದಲ್ಲಿ 26 ಅಮರನಾಥ ಯಾತ್ರಿಕರ ಸಾವು.
19 ಆಗಸ್ಟ್: ಉತ್ತರಪ್ರದೇಶದ ಮುಝಫ್ಫರ್‌ನಗರ್‌ನ ಹರಿದ್ವಾರದಲ್ಲಿ ಕಳಿಂಗ-ಉತ್ಕಲ್ ಎಕ್ಸ್‌ಪ್ರೆಸ್ ಹಳಿ ತಪ್ಪಿ 23 ಮಂದಿ ಸಾವು ; 100ಕ್ಕೂ ಅಧಿಕ ಮಂದಿಗೆ ಗಾಯ
31 ಆಗಸ್ಟ್: ಮುಂಬೈನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು 32 ಮಂದಿ ಸಾವು.
22  ಸೆಪ್ಟಂಬರ್: ಮುಂಬೈನ ಲೋವರ್ ಪರೇಲ್ ಹಾಗೂ ಪ್ರಭಾದೇವಿ ರೈಲು ನಿಲ್ದಾಣಗಳಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 22 ಮಂದಿ ದಾರುಣ ಸಾವು.

 ನಟ ದಿಲೀಪ್ ಬಂಧನ

ತಿರುವನಂತಪುರ: ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಮಲೆಯಾಳದ ಖ್ಯಾತ ನಟ ದಿಲೀಪ್‌ನನ್ನು ವಿಶೇಷ ತನಿಖಾ ತಂಡ ಬಂಧಿಸಿತ್ತು. ನಟಿ ಶೂಟಿಂಗ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಪ್ರಧಾನ ಆರೋಪಿಯಾಗಿದ್ದ ಸುನೀಲ್ ಕುಮಾರ್ ಆಲಿಯಾಸ್ ಪಲ್ಸರ್ ಸುನಿ ನಟಿಯನ್ನು ಅಪಹರಿಸಿದ್ದ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಪಿತೂರಿಯಲ್ಲಿ ದಿಲೀಪ್ ಭಾಗಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಅನಂತರ ದಿಲೀಪ್ ಜಾವಿುೀನಿನ ಮೇಲೆ ಬಿಡುಗಡೆಯಾಗಿದ್ದರು.

ಗುರ್ಮಿತ್‌ಗೆ 20 ವರ್ಷ ಕಾರಾಗೃಹ

ಅತ್ಯಾಚಾರ ಅಪರಾಧಕ್ಕೆ ಸಂಬಂಧಿಸಿ ಡೆೇರಾ ಸಚ್ಚಾ ಸೌದಾದ ವರಿಷ್ಠ ಹಾಗೂ ಸ್ವಘೋಷಿತ ದೇವ ಮಾನವ ಬಾಬಾ ಗುರ್ಮಿತ್‌ಗೆ ವಿಶೇಷ ಸಿಬಿಐ ನ್ಯಾಯಾಲಯ 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ 30 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿತು. 

ಗುಜರಾತ್: ಬಿಜೆಪಿಗೆ ಲಘು ಕಂಪನ

ನರೇಂದ್ರ ಮೋದಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದ್ದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಯಾಸದ ವಿಜಯ ಸಾಧಿಸಿದೆ. ರಾಹುಲ್‌ಗಾಂಧಿಯವರ ಬಿರುಸಿನ ಚುನಾವಣಾ ಪ್ರಚಾರ, ಪಟೇಲ್ ಹೋರಾಟದ ಕಾವು, ಜಿಎಸ್‌ಟಿ ಬಿಸಿ ಕಾಂಗ್ರೆಸ್ ಪಕ್ಷವು ಬಿಜೆಪಿಗೆ ಪ್ರಬಲವಾದ ಹೋರಾಟವನ್ನು ನೀಡಲು ಬಲತುಂಬಿತು. ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳ ಸರಳ ಬಹುಮತದಲ್ಲಿ ತೃಪ್ತಿಪಟ್ಟುಕೊಂಡರೆ, ಕಾಂಗ್ರೆಸ್ 79 ಸ್ಥಾನಗಳನ್ನು ಪಡೆದು ಪ್ರಬಲ ಪೈಪೋಟಿ ನೀಡಿದೆ. ದಲಿತ ನಾಯಕ ಜಿಗ್ನೇಶ್ ಮೇವಾನಿ, ಒಬಿಸಿ ಮುಖಂಡ ಅಲ್ಪೇಶ್ ಠಾಕೂರ್ ವಿಧಾನಸಭೆಗೆ ಆಯ್ಕೆಯಾಗಿರುವುದು ಈ ಚುನಾವಣೆಯ ಇನ್ನೊಂದು ವಿಶೇಷವಾಗಿದೆ. ವಿಜಯ್ ರೂಪಾನಿಗೆ ಮುಖ್ಯಮಂತ್ರಿ ಪಟ್ಟ ಮತ್ತೊಮ್ಮೆ ಒಲಿದಿದೆ.

ರಾಹುಲ್‌ಗೆ ಕಾಂಗ್ರೆಸ್ ಸಾರಥ್ಯ

ಸುಮಾರು 19 ವರ್ಷಗಳ ಸುದೀರ್ಘ ಅಧಿಕಾರಾವಧಿಯ ಬಳಿಕ ಸೋನಿಯಾಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ದಿಂದ ನಿರ್ಗಮಿಸಿದ್ದು, ಅವರಉತ್ತರಾಧಿಕಾರಿಯಾಗಿ ರಾಹುಲ್ ಅವಿರೋ ಧವಾಗಿ ಆಯ್ಕೆ ಯಾದರು. ಬಹಳ ವರ್ಷಗಳ ಬಳಿಕ ಇದೇ ಮೊದ ಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ಘೋಷಿಸಲಾಗಿತ್ತು. ಆದರೆ ಚುನಾವಣೆಯಲ್ಲಿ ರಾಹುಲ್ ವಿರುದ್ಧ ಯಾರೂ ನಾಮಪತ್ರ ಸಲ್ಲಿಸದಿರುವ ಕಾರಣ ಅವರು ಅವಿರೋ ಧವಾಗಿ ಆಯ್ಕೆ ಯಾಗಿದ್ದಾರೆ.

ರಾಜಕೀಯಕ್ಕೆ ರಜನಿ

 ಜಯಲಲಿತಾ ನಿಧನದ ಬಳಿಕ ಅಸ್ಥಿರಗೊಂಡಿರುವ ತಮಿಳುನಾಡಿನ ರಾಜಕೀಯದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪ್ರವೇಶವು ಹೊಸ ಸಂಚಲನವನ್ನು ಸೃಷ್ಟಿಸಿದೆ. ಡಿಸೆಂಬರ್ 31ರಂದು ರಜನಿಕಾಂತ್, ತಾನು ರಾಜಕೀಯ ಪಕ್ಷವೊಂದನ್ನು ಸ್ಥಾಪಿಸು ವುದಾಗಿ ಘೋಷಿಸುವ ಮೂಲಕ ರಾಜ್ಯದ ರಾಜಕೀಯದಲ್ಲಿ ಬದಲಾವಣೆಯ ಸೂಚನೆ ನೀಡಿದ್ದಾರೆ.

ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್

   ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಮನಾಥ್ ಕೋವಿಂದ್ ಭಾರತದ 14ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು. ರಾಮನಾಥ್ ಕೋವಿಂದ್ ರಾಷ್ಟ್ರಪತಿ ಚುನಾವಣೆಯಲ್ಲಿ ಶೇ. 65.65 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪಧಿ ಮೀರಾ ಕುಮಾರ್ ಅವರನ್ನು ಸೋಲಿಸಿದ್ದರು.

ದೀಪಕ್ ಮಿಶ್ರಾ 45ನೇ ಮುಖ್ಯ ನ್ಯಾಯಮೂರ್ತಿ

ಭಾರತದ 45ನೇ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು. ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರ ಉತ್ತರಾಧಿಕಾರಿಯಾಗಿ ಅವರು ನೇಮಕರಾದರು. ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ. ವೆಂಕಯ್ಯ ನಾಯ್ಡು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು. ರಾಷ್ಟ್ರಪತಿ ಚುನಾವಣೆಯಲ್ಲಿ ಅವರು ತನ್ನ ಪ್ರತಿಸ್ಪರ್ಧಿ ಗೋಪಾಲ ಕೃಷ್ಣ ಗಾಂಧಿ ಅವರನ್ನು 272 ಮತಗಳ ಅಂತರದಿಂದ ಸೋಲಿಸಿದರು.

ಮಾನುಷಿ ಮಿಸ್ ವರ್ಲ್ಡ್

ವೈದ್ಯಕೀಯ ವಿದ್ಯಾರ್ಥಿನಿ ಮಾನುಷಿ ಚಿಲ್ಲರ್ ಮಿಸ್ ವರ್ಲ್ಡ್ ಆಗಿ ಆಯ್ಕೆ ಆಗಿ ಆಯ್ಕೆಯಾಗಿದ್ದರು. ಮಿಸ್ ವರ್ಲ್ಡ್‌ಗೆ ಭಾರತದಿಂದ ಆಯ್ಕೆಯಾಗುತ್ತಿರುವ 6ನೇ ವ್ಯಕ್ತಿ ಮಾನುಷಿ ಚಿಲ್ಲರ್. ಈ ಹಿಂದೆ ಬಾಲಿವುಡ್‌ನ ಪ್ರಿಯಾಂಕಾ ಚೋಪ್ರಾ, ಐಶ್ವರ್ಯಾ ರೈ ಆಯ್ಕೆಯಾಗಿದ್ದರು.

ಪಾರಿಕ್ಕರ್ ಗೋವಾ ಸಿಎಂ

ಬಿಜೆಪಿ ನಾಯಕ ಮನೋಹರ್ ಪಾರಿಕ್ಕರ್ ನಾಲ್ಕನೇ ಬಾರಿ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಫೆಬ್ರವರಿ 4ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 16 ಸ್ಥಾನಗಳೊಂದಿಗೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ 13 ಸ್ಥಾನಗಳನ್ನು ಗೆದ್ದ ಬಿಜೆಪಿಯು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.

ಮಣಿಪುರಕ್ಕೆ ಬಿರೇನ್ ಸಿಂಗ್

 ಬಿಜೆಪಿ ನಾಯಕ ಎನ್. ಬಿರೇನ್ ಸಿಂಗ್ ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಜ್ಯದಲ್ಲಿ ಮೊದಲ ಬಿಜೆಪಿ ನೇತೃತ್ವದ ಸರಕಾರ ಮಣಿಪುರದಲ್ಲಿ ಅಸ್ತಿತ್ವಕ್ಕೆ ಬಂತು. ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 21 ಸ್ಥಾನ ಗಳಿಸಿತ್ತು. ಆದರೆ ಟಿಎಂಸಿ, ಕಾಂಗ್ರೆಸ್‌ನ ತಲಾ ಓರ್ವ ಬಂಡುಕೋರ ಶಾಸಕರು, ಪಕ್ಷೇತರರ ಬೆಂಬಲದೊಂದಿಗೆ ಅದು ಅಧಿಕಾರಕ್ಕೇರುವಲ್ಲಿ ಸಫಲವಾಗಿದೆ.

ಅಮರೀಂದರ್ ಪಂಜಾಬ್ ಸಿಎಂ

ಪಂಜಾಬ್‌ನ 26ನೇ ಮುಖ್ಯಮಂತ್ರಿಯಾಗಿ ಕ್ಯಾ. ಅಮರೀಂದರ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಿದರು. ಪಂಜಾಬ್ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮರೀಂದರ್ ಸಿಂಗ್ ಹಾಗೂ ಇತರ 9 ಸಚಿವರಿಗೆ ಪಂಜಾಬ್ ರಾಜ್ಯಪಾಲ ವಿ.ಪಿ. ಸಂಗ್ ಬಂದೋರೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಹಿಮಾಚಲದಲ್ಲಿ ಕಮಲದ ಕಲರವ
ಇತ್ತ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್‌ನಿಂದ ಅಧಿಕಾರ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಿರಿಯ ನಾಯಕ ಪ್ರೇಮ್‌ಕುಮಾರ್ ಧುಮಾಲ್ ಬೆಂಬಲಿಗರ ವಿರೋಧದ ನಡುವೆಯೂ ನೂತನ ಮುಖ್ಯಮಂತ್ರಿಯಾಗಿ ಜೈರಾಮ್ ಠಾಕೂರ್‌ರನ್ನು ಪಕ್ಷದ ನಾಯಕತ್ವ ಆಯ್ಕೆ ಮಾಡಿದೆ. 

ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಮೆಲುಗಲ್ಲುಗಳು

► ಭಾರತೀಯ ವಿಜ್ಞಾನಿಗಳಿಂದ ಮಹಾತಾರಾಪುಂಜ ಪತ್ತೆ

ಪುಣೆ ಮೂಲದ ಐಯುಸಿಎಎ ಹಾಗೂ ಐಐಎಸ್‌ಇಆರ್‌ನ ಖಗೋಳಶಾಸ್ತ್ರಜ್ಞರು ಜುಲೈನಲ್ಲಿ ಮಹಾ ತಾರಾಪುಂಜವೊಂದನ್ನು ಪತ್ತೆಹಚ್ಚಿದ್ದು, ಅದಕ್ಕೆ ಸರಸ್ವತಿ ಎಂದು ಹೆಸರಿಟ್ಟಿದ್ದಾರೆ.ಒಂದು ಸಾಮಾನ್ಯ ತಾರಾಪುಂಜದಲ್ಲಿ 1 ಸಾವಿರದಿಂದ 10 ಸಾವಿರ ನಕ್ಷತ್ರಗಳಿದ್ದರೆ ಮಹಾತಾರಾಪುಂಜವು 40ರಿಂದ 43ರಷ್ಟು ಇಂತಹ ತಾರಾ ಪುಂಜಗಳನ್ನು ಒಳಗೊಂಡಿರುತ್ತದೆ. ನಾಲ್ಕು ಶತಕೋಟಿ ವರ್ಷಗಳಷ್ಟು ಹಳೆಯದಾದ ಸರಸ್ವತಿ ಮಹಾತಾರಾಪುಂಜವು ಭೂಮಿಯಿಂದ 4 ಶತಕೋಟಿ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ.

►ಹೃದ್ರೋಗಿಗಳ ಪ್ರಾಣ ಕಾಪಾಡುವ ಉಪಕರಣ

 ವಿದ್ಯುತ್ ಕಡಿತಗೊಂಡ ಸಂದರ್ಭದಲ್ಲಿ ಹೃದಯಾಘಾತಕ್ಕೊಳಗಾಗಿರುವ ರೋಗಿಗಳನ್ನು ರಕ್ಷಿಸಬಲ್ಲ ವಿಶ್ವದ ಪ್ರಪ್ರಥಮ ಅವಳಿ ಶಕ್ತಿ ಚಾಲಿತ ಡೆಫಿಬ್ರಿಲ್ಲೇಟರ್‌ನ್ನು ಪುಣೆ ಮೂಲದ ಜೀವ್‌ಟ್ರೋನಿಕ್ಸ್ ಈ ವರ್ಷ ಅನಾವರಣಗೊಳಿಸಿದೆ.ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಈ ಉಪಕರಣದಲ್ಲಿರುವ ಸಣ್ಣ ಕೈಪೆಡಲ್ ಅನ್ನು ತಿರುಗಿಸುವ ಮೂಲಕ 12 ಸೆಕೆಂಡ್‌ಗಳವರೆಗೆ ವಿದ್ಯುತ್ ಒದಗಿಸಬಹುದಾಗಿದೆ. ವಿಶ್ವ ಹೃದಯ ದಿನವಾದ ಸೆಪ್ಟಂಬರ್ 29ರಂದು ಈ ವಿಶಿಷ್ಟ ಡೆಫಿಬ್ರಿಲ್ಲೇಟರ್ ಉಪಕರಣ ವನ್ನು ಅನಾವರಣ ಗೊಳಿಸಲಾಯಿತು.

►64 ಗ್ರಾಂ ಉಪಗ್ರಹ ಉಡಾವಣೆ

ತಮಿಳುನಾಡಿನ ಹದಿಹರೆಯದ ವಿದ್ಯಾರ್ಥಿಗಳ ತಂಡವೊಂದು ಅಭಿವೃದ್ಧಿ ಪಡಿಸಿದ ಕಲ್ಯಾಂಸ್ಯಾಟ್ ಉಪಗ್ರಹವನ್ನು ಜೂನ್‌ನಲ್ಲಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಉಡಾವಣೆಗೊಳಿಸಿತು.

ವಿಶ್ವದ ಅತೀ ಸಣ್ಣ ಬಾಹ್ಯಾಕಾಶ ನೌಕೆ ಉಡಾವಣೆ

ವಿಶ್ವದ ಅತ್ಯಂತ ಸಣ್ಣ ಬಾಹ್ಯಾಕಾಶ ನೌಕೆ, ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಜುಲೈನಲ್ಲಿ ಯಶಸ್ವಿಯಾಗಿ ಉಡಾವಣೆಗೊಳಿಸಿ, ಭೂಮಿಯ ಕಕ್ಷೆಯಲ್ಲಿ ಸ್ಥಾಪಿಸ ಲಾಯಿತು. ಇದಕ್ಕೆ ಸ್ಪ್ರೈಟ್ಸ್ ಎಂದು ಹೆಸರಿಡಲಾಗಿದೆ.

----------------------------------------------------

2017ರಲ್ಲಿ ದಿಟ್ಟ ಪತ್ರಕರ್ತೆ, ಮೂಲಭೂತವಾದದ ವಿರೋಧಿ, ಜೀವಪರ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಒಂದು ಪ್ರಮುಖ ಘಟನೆಯಾಗಿ ಪತ್ರಿಕೋದ್ಯಮ ಹಾಗೂ ಬರಹಗಾರರ ವಲಯದಲ್ಲಿ ತಲ್ಲಣವನ್ನು ಉಂಟು ಮಾಡಿತು. ವಿಶ್ವದಾದ್ಯಂತ ಆಕ್ರೋಶ, ಖಂಡನೆಗಳು ವ್ಯಕ್ತವಾದವು. ಮಾನವ ಪರ ಸಂವೇದನೆ, ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ಹಲ್ಲೆಯ ನಿದರ್ಶನವಾಗಿಯೂ ಈ ಘಟನೆ ಗೋಚರಿಸಿತು. ಇನ್ನು 12ನೇ ಶತಮಾನದಲ್ಲಿ ವೈದಿಕ ಧರ್ಮದ ಮೇಲು ಕೀಳು ಭಾವನೆಗಳನ್ನು ಹೊಡೆದೋಡಿಸಿ ಅನುಭವ ಮಂಟಪದಲ್ಲಿ ಜಾತೀಯತೆಯನ್ನು ಕಡೆಗಣಿಸಿ ಎಲ್ಲರಿಗೂ ಸಮಾನ ಸ್ಥಾನವನ್ನು ಬಸವಣ್ಣನವರು ನೀಡಿದ್ದರು. ಅದೇ ಹಾದಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು, ಹೋರಾಟ 2017ರಲ್ಲಿ ಆರಂಭವಾಗಿ ತನ್ನ ವಿಸ್ತಾರವನ್ನು ವ್ಯಾಪಿಸುತ್ತಿದೆ.

ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದ ಶ್ರೀನಿವಾಸ ಪ್ರಸಾದ್ ನಂಜನಗೂಡು ಉಪಚುನಾವಣೆಯಲ್ಲಿ ಸೋತು ಹೈರಾಣಾದರು. ತಾನೇ ಅಭ್ಯರ್ಥಿ ಎಂದು ಸಾರಿದ್ದ ಯಡಿಯೂರಪ್ಪನವರ ನೈತಿಕ ಸೋಲಾಗಿಯೂ ಇದು ಪರಿಣಮಿಸಿತು. ಗುಂಡ್ಲುಪೇಟೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆಗಳಿಗೆ ನೀರುಣಿಸುವ ಮಹಾದಾಯಿ ನದಿ ನೀರು ಹೋರಾಟದಲ್ಲಿ ರಾಜಕೀಯ ಪಕ್ಷಗಳ ದೊಂಬರಾಟ, ರೈತರ ಪರದಾಟ ಮುಂದುವರಿಯಿತು. ನೀರು ಕೊಡಿಸುತ್ತೇನೆಂದು ಮಾಜಿ ಸಿಎಂ ಬಿಎಸ್‌ವೈ ಗೋವಾ ಸಿಎಂ ಪಾರಿಕ್ಕರ್‌ರೊಂದಿಗೆ ಸೇರಿ ಹೊಸ ನಾಟಕವಾಡಿ, ಮಹಾದಾಯಿ ಹೋರಾಟಗಾರರ ಆಕ್ರೋಶ ಎದುರಿಸಬೇಕಾಯಿತು. ಜಾತಿ, ಧರ್ಮಾಧಾರಿತ ಗಲಭೆಗಳು, ಕೊಲೆಗಳು, ರಾಜಕೀಯ ನಾಯಕರ ಲಂಗು ಲಗಾಮಿಲ್ಲದ, ಬೆಂಕಿ ಹಚ್ಚುವ ಹೇಳಿಕೆಗಳು, ರಾಯಣ್ಣ ಬ್ರಿಗೇಡ್ ಎಂಬ ನಾಟಕ, ಮತ್ತು ಅಮಾನವೀಯ ಅತ್ಯಾಚಾರ ಘಟನೆಗಳು ಮುಂದುವರಿದವು. ಅಪಘಾತ, ದುರಂತಗಳಲ್ಲಿ ಹಲವು ಜೀವಗಳು ಬಲಿಯಾಗಿವೆ. ಹಲವರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಇನ್ನು ವಿಧಾನಸಭಾ ಚುನಾವಣೆ ಹತ್ತಿರವಾಗಿದೆ. ಆದ್ದರಿಂದ ಬರುವ ವರ್ಷ ಹೆಚ್ಚು ಮಹತ್ವವನ್ನೂ ಪಡೆದಿದೆ. ಹೊಸ ನಿರೀಕ್ಷೆ, ಸಂಕಲ್ಪಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ.

ಪ್ರಜಾಪ್ರಭುತ್ವದ ಕಗ್ಗೊಲೆ

ಸೆ.5 ರಂದು ರಾತ್ರಿ 8:15ರ ಸುಮಾರಿಗೆ ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್(55) ಮೇಲೆ ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ಘಟನೆಗೆ ರಾಜ್ಯ ಮತ್ತು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ಮತ್ತು ಆಕ್ರೋಶ ವ್ಯಕ್ತವಾಗಿತ್ತು.

ಕೋಮುವಾದಿಗಳ ವಿರುದ್ಧ ದನಿ ಎತ್ತಿದ್ದ ಪತ್ರಕರ್ತೆ ಗೌರಿ ಹತ್ಯೆ ಖಂಡಿಸಿ ರಾಜ್ಯಾದ್ಯಂತ ದಲಿತ, ವಿದ್ಯಾರ್ಥಿ, ಪ್ರಗತಿಪರ ಮತ್ತು ಎಡಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದವು ಮತ್ತು ಇನ್ನು ಕೆಲವೆಡೆ ಪ್ರತಿಭಟನೆಗಳು ನಡೆಯುತ್ತಲಿವೆ. ಸೈದ್ಧಾಂತಿಕ ಹಾಗೂ ವೈಯಕ್ತಿಕ ಕಾರಣಗಳಿಂದ ಹತ್ಯೆ ನಡೆದಿರುವ ಶಂಕೆ ಯನ್ನು ಸರಕಾರ ವ್ಯಕ್ತಪಡಿಸಿತ್ತು. ಹತ್ಯೆಕೋರರನ್ನು ಬಂಧಿಸಲು ರಾಜ್ಯ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.

ಸೆ. 12ರಂದು ಹತ್ಯೆ ವಿರೋಧಿ ವೇದಿಕೆಯಿಂದ ಪ್ರತಿರೋಧ ಸಮಾವೇಶ ನಡೆಯಿತು. ಇದರಲ್ಲಿ ಸಾಹಿತಿ, ಕಲಾವಿದರು, ಹೋರಾಟಗಾರರು, ಪ್ರಗತಿಪರರು, ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು. ‘ನಾನು ಗೌರಿ ನಾವೆಲ್ಲ ಗೌರಿ’ ಘೋಷಣೆಯ ಮೂಲಕ ಹೋರಾಟಗಾರ್ತಿಯ ಹತ್ಯೆಯನ್ನು ಖಂಡಿಸಿ ಹಂತಕರನ್ನು ಬಂಧಿಸಲು ಸರಕಾರವನ್ನು ಒತ್ತಾಯಿಸಿಲಾಯಿತು.

ಹಂತಕರ ಸುಳಿವು ನೀಡಿದವರಿಗೆ ರಾಜ್ಯ ಸರಕಾರ ಹತ್ತು ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿತ್ತು. ಗೃಹ ಸಚಿವರು ತನಿಖೆ ಹಂತದಲ್ಲಿದೆ ಮಹತ್ವದ ಸುಳಿವು ಸಿಕ್ಕಿದೆ ಹಂತಕರನ್ನು ಬಂಧಿಸಲಾಗುವುದು ಎಂದಿದ್ದರು. ಆದರೆ ಈವರೆಗೆ ಅಂತಹ ಯಾವ ಕೆಲಸವು ತನಿಖಾ ತಂಡದಿಂದ ಆಗಿಲ್ಲ.

ಗೌರಿ ಲಂಕೇಶ್ ರಶ್ಯಾದ ತನಿಖಾ ಪತ್ರಕರ್ತೆಯ ಹೆಸರಿನಲ್ಲಿ ನೀಡುವ ಅಂತಾರಾಷ್ಟ್ರೀಯ ‘ಅನ್ನಾ ಪೊಲಿತ್ಕೊವಸ್ಕಾಯ’ ಪ್ರಶಸ್ತಿಗೆ ಆಯ್ಕೆಯಾದರು.

ವಿಚಾರವಾದಿಗಳ ವೇದಿಕೆಯಿಂದ ವಿಚಾರವಾದಿ ಪೆರಿಯಾರ್‌ರ 138ನೇ ಜನ್ಮ ದಿನಾಚರಣೆ ಅಂಗವಾಗಿ 2017ನೇ ಸಾಲಿನ ಪೆರಿಯಾರ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್‌ಗೆ (ಮರಣೋತ್ತರ) ನೀಡಲಾಗಿದೆ.

ಸಾವು- ನೋವು

► ಜ.2ರಂದು ಹೊಸ ವರ್ಷಾಚರಣೆಯ ದಿನವೇ ಬೆಂಗಳೂರಿನ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಯಲ್ಲಿ ಯುವತಿಯರಿಗೆ ಹಲ್ಲೆ, ದೌರ್ಜನ್ಯ ಘಟನೆ ನಡೆದಿತ್ತು.

► ಜ.5ರಂದು ಎಂಡೋಪೀಡಿತ ಕುಟುಂಬದ ನಾಲ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆಯಿತು.

► ಮಾ.18ರಂದು ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ: ಲಾರಿಯ ಚಕ್ರ ಸ್ಫೋಟಗೊಂಡು ಎರಡು ಆಟೊ ಹಾಗೂ ಟೆಂಪೋ ಟ್ರಾವೆಲರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮಕ್ಕಳಿಬ್ಬರು ಸಹಿತ 14 ಮಂದಿ ದಾರುಣ ಸಾವು ಸಂಭವಿಸಿತ್ತು.

► ಮಾ.31ರಂದು ಬೆಂಗಳೂರಿನ ಜೆ.ಜೆ ನಗರದ ಕುರ್ಚಿ ತಯಾರಿಕಾ ಕಾರ್ಖಾನೆಗೆ ಆಕಸ್ಮಿಕ ಬೆಂಕಿಯಿಂದ ಇಬ್ಬರು ಕಾರ್ಮಿಕರು ಸಜೀವ ದಹನ.

► ಎ.12ರಂದು ಗದಗ ಜಿಲ್ಲೆಯ ರೋಣ ತಾಲೂಕು ಸವಡಿ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದು ಕಾರ್ಮಿಕರಿಬ್ಬರು ಮೃತ್ಯು.

► ಮೇ 25ರಂದು ಭಟ್ಕಳದಲ್ಲಿ ಬಸ್ ಹಾಗೂ ಟೆಂಪೊ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಧು ಸಹಿತ 8 ಮಂದಿ ದಾರುಣ ಸಾವು, 24ಕ್ಕೂ ಅಧಿಕ ಮಂದಿಗೆ ಗಾಯ.

► ಜೂ.11ರಂದು ಕುಮಟಾ ತಾಲೂಕಿನ ತಂಡ್ರಕುಳಿ ಎಂಬಲ್ಲಿ ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರ ಬದಿಯ ಗುಡ್ಡ ಕುಸಿದು ಮನೆ ಮೇಲೆ ಬಂಡೆ ಬಿದ್ದ ಪರಿಣಾಮ ಮೂವರು ಮಕ್ಕಳ ಮೃತಪಟ್ಟು, 10 ಕ್ಕೂ ಹೆಚ್ಚು ಜನಕ್ಕೆ ಗಾಯ.

► ಆ.15ರಂದು ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಸ್ವಾತಂತ್ರ ಸಡಗರಕ್ಕೆ ಅಡ್ಡಿಯುಂಟಾ ಗಿತ್ತು. ನಂತರ ಮಳೆಯಿಂದಾಗಿ ನಗರದ ರಸ್ತೆಗಳು ಹದಗೆಟ್ಟು, ಮರಗಳು ಧರೆಗುರುಳಿ ನಗರದ ಮನೆಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ತವಾಗಿತ್ತು.

► ಆ.24ರಂದು ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಿರುತೆರೆ ನಟ ಜೀವನ್ ಸುರೇಶ್ ಹಾಗೂ ಕಿರುತೆರೆ ನಟಿ ರಚನಾಗೌಡ ಮೃತ್ಯು.

► ಸೆ.13ರಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾ.ಹೆ. 63 ರಲ್ಲಿ ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಢಿಕ್ಕ್ಕಿ ಸಂಭವಿಸಿ 9 ಮಂದಿ ಸ್ಥಳದಲ್ಲೇ ದುರ್ಮರಣವಾದ ಘಟನೆ ನಡೆಯಿತು.

► ಅ.16ರಂದು ಬೆಂಗಳೂರು ನಗರದ ಈಜಿಪುರದ ಗುಂಡಪ್ಪ ಲೇಔಟ್‌ನಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದುಬಿದ್ದ ಪರಿಣಾಮ ಅವಶೇಷಗಳಡಿ ಸಿಲುಕಿ ಏಳು ಮಂದಿ ಮೃತಪಟ್ಟರು. ಆರು ಜನರನ್ನು ರಕ್ಷಿಸಲಾಯಿತು.

► ನವೆಂಬರ್‌ನಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಮಸೂದೆ ವಿರೋಧಿಸಿ ಐದು ದಿನಗಳ ಕಾಲ ನಡೆದ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರಕ್ಕೆ 50ರಷ್ಟು ಜನರು ಮೃತಪಟ್ಟರು.

ಹೋರಾಟ-ಬಗೆಹರಿಯದ ಗೊಂದಲಗಳು

► ಎಸ್ಸಿ-ಎಸ್ಟಿ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿ ಕಲ್ಪಿಸಿ ರಾಜ್ಯ ಸರಕಾರ 2002ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿ ಫೆ.9ರಂದು ಆದೇಶ ನೀಡಿತ್ತು. ನೌಕರರ ಭಡ್ತಿ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರ ಮುಂದಾಗಿದ್ದು ಇದು ಇನ್ನೂ ಕಗ್ಗಂಟಾಗಿಯೇ ಇದೆ.

► ನ್ಯಾ. ಸದಾಶಿವ ಆಯೋಗದ ವರದಿ ಜಾರಿ: ಈ ಕುರಿತು ಪರ -ವಿರೋಧ ಹೋರಾಟಮುಂದುವರಿದಿವೆ ರಾಜ್ಯ ಸರಕಾರ ಈ ಕುರಿತು ಸ್ಪಷ್ಟವಾದ ನಿಲುವನ್ನು ತಾಳಿಲ್ಲ.

► ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟ: 2016ಕ್ಕೆ ಉದಯವಾದ ದೊಡ್ಡ ಕೂಗು ಎಂದರೆ ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟ ಲಿಂಗಾಯತ ಧರ್ಮ ರಚನೆಗೆ ಹಲವಾರು ಮಠದ ಸ್ವಾಮೀಜಿಗಳು, ರಾಜಕಾರಣಿಗಳು, ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿ ದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್, ಸಚಿವರಾದ ವಿನಯ್ ಕುಲಕರ್ಣಿ, ಎಂ.ಬಿ.ಪಾಟೀಲ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಲಿಂಗಾಯತ ಧರ್ಮ ಅಧ್ಯಯನಕ್ಕೆ ರಾಜ್ಯ ಸರಕಾರದಿಂದ ಸಮಿತಿ ರಚಿಸಲಾಯಿತು ಇದಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

► ಮಹಾದಾಯಿ ಹೋರಾಟದ ಕಿಚ್ಚು ಆರಲಿಲ್ಲ: ಕಳಸಾ- ಬಂಡೂರಿ ಯೋಜನೆ ಜಾರಿ ಗಾಗಿ ನರಗುಂದ, ನವಲಗುಂದ ಹಾಗೂ ಉತ್ತರ ಕರ್ನಾಟಕದ ಹಲವು ಕಡೆ ನಡೆಯುತ್ತಿರುವ ಹೋರಾಟವು ತೀವ್ರಗೊಂಡಿದೆ. ಡಿಸೆಂಬರ್ 23ರಂದು ಮಹಾದಾಯಿ ಹೋರಾಟ ಗಾರರು ಬೆಂಗಳೂರಿನ ಬಿಜೆಪಿ ಕಚೇರಿ ಎದುರು ಐದು ದಿನಗಳ ಕಾಲ ಧರಣಿ ನಡೆಸಿ ವಿವಾದ ಇತ್ಯರ್ಥಗೊಳಿಸುವ ಆಶ್ವಾಸನೆ ನೀಡಿದ್ದ ಮಾಜಿ ಸಿಎಂ ಬಿಎಸ್‌ವೈ ವಿರುದ್ಧ ಕಿಡಿಕಾರಿದರು. ರಾಜ್ಯ ಸರಕಾರಕ್ಕೆ ಜನವರಿವರೆಗೆ ಗಡುವು ನೀಡಿದರು. ಡಿ.27ರಂದು ಮಹಾದಾಯಿ ಯೋಜನೆ ಜಾರಿಗಾಗಿ ಕಳಸಾ ಬಂಡೂರಿ ಸಮನ್ವಯ ಹೋರಾಟ ಸಮಿತಿ ಹಾಗೂ ವಿವಿಧ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಿ ಪ್ರತಿಭಟನೆ ನಡೆಸಿದವು.

► ಅಂಗನವಾಡಿ ಕಾರ್ಯಕರ್ತೆಯರ ಹೋರಾಟ: ಮಾ. 20ರಂದು ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಕಿಯರ ವೇತನ ಹೆಚ್ಚಳ ಸೇರಿದಂತೆ ಇತರ ಬೇಡಿಕೆ ಗಳ ಈಡೇರಿಕೆಗಾಗಿ ಆಗ್ರಹಿಸಿ ಬೆಂಗಳೂರಿನ ಪ್ರೀಡಂ ಪಾರ್ಕ್ ನ ಶೇಷಾದ್ರಿ ರಸ್ತೆಯಲ್ಲಿ ಸಿಐಟಿ ಯು ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ನಾಲ್ಕು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಯಿತು. ಕರ್ನಾಟಕ ರಾಜ್ಯ ಅಂಗನ ವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮೀ ಧರಣಿಯ ನೇತೃತ್ವ ವಹಿಸಿದ್ದರು. ಸರಕಾರ ಹೋರಾಟಕ್ಕೆ ಮಣಿಯಿತು. ಸರಕಾರ ಸಂಧಾನ ಸಭೆ ನಡೆಸಿ ಬೇಡಿಕೆಗಳ ಈಡೇರಿಸುವುದಾಗಿ ಭರವಸೆ ನೀಡಿತ್ತು. ಈ ಹೋರಾಟಕ್ಕೆ ರಾಜ್ಯಾದ್ಯಂತ ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.

ಐಟಿ ದಾಳಿಗಳು

► ಜ.19ರಂದು ಸಹಕಾರ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮೇಲೆ ಐಟಿ ದಾಳಿ ನಡೆಸಿತು.

► ಮೇ 18ರಂದು ದಾವಣಗೆರೆಯ ಬಿಜೆಪಿ ಸಂಸದ ಸಿದ್ದೇಶ್ ಮನೆ, ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿತು.

► ಆ.2ರಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮನೆ. ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿತು. ಸತತ ನಾಲ್ಕು ದಿನಗಳ ಕಾಲ ನಡೆದ ಈ ದಾಳಿಯನ್ನು ಕಾಂಗ್ರೆಸ್, ರಾಜಕೀಯ ಪ್ರೇರಿತ ಎಂದು ದೂರಿತ್ತು.

► ಸೆ.21ರಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಒಡೆತನದ 20 ಕ್ಕೂ ಹೆಚ್ಚು ಕಚೇರಿಗಳ ಮೇಲೆ ಐಟಿ ದಾಳಿ.

ಅಗಲಿದ ಮಹನೀಯರು

► ಜ.3: ಸಹಕಾರ ಹಾಗೂ ಸಕ್ಕರೆ ಖಾತೆ ಸಚಿವ ಮಹಾದೇವ ಪ್ರಸಾದ್

► ಫೆ.20: ಆರೆಸ್ಸೆಸ್ ಹಿರಿಯ ನಾಯಕ ಮೈ.ಚ.ಜಯದೇವ್

► ಎ. 6: ಗಾಂಧಿ ತತ್ವದ ಪ್ರಚಾರಕ ಡಾ. ಹೊ.ಶ್ರೀನಿವಾಸಯ್ಯ

► ಮೇ 14: ಹಿರಿಯ ಪತ್ರಕರ್ತ, ಮಾಧ್ಯಮ ಅಕಾಡಮಿಯ ಮಾಜಿ ಅಧ್ಯಕ್ಷ ಗರುಡನಗಿರಿ ನಾಗರಾಜ್

► ಮೇ 31: ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್

► ಜು.24: ಬಾಹ್ಯಾಕಾಶ ವಿಜ್ಞಾನಿ, ಪ್ರೊ. ಯು.ಆರ್. ರಾವ್

► ಜು.27: ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್

► ಆ.7ರಂದು ಗಾಂಧಿವಾದಿ, ಸಮಾಜಸೇವಕ ಸುರೇಂದ್ರ ಕೌಲಗಿ

► ಆ.18ರಂದು ನಾಡೋಜ, ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ

► ಸೆ.8: ಹಿರಿಯ ನಟ ಸುದರ್ಶನ್

► ಸೆ.10: ಹಿರಿಯ ನಟಿ ಬಿ.ವಿ.ರಾಧಾ

► ಸೆ.18: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಖಮರುಲ್ ಇಸ್ಲಾಂ

► ಅ.3:ಯಕ್ಷಗಾನ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗ್ಡೆ

► ಅ.28: ಹಿರಿಯ ಸಾಹಿತಿ, ಅಂಕಣಕಾರ ರವಿ. ರಾ. ಅಂಚನ್

► ನ.15: ಪ್ರಾದೇಶಿಕ ಪತ್ರಿಕೋದ್ಯಮಕ್ಕೆ ‘ಆಂದೋಲನ’ದ ರೂಪ ಕೊಟ್ಟ ಹಿರಿಯ ಪತ್ರಕರ್ತ ರಾಜಶೇಖರ್ ಕೋಟಿ

ಅಮಾನವೀಯ ಘಟನೆಗಳು

► ಜೂ.2ರಂದು ಶಿವಮೊಗ್ಗದ ಸರಕಾರಿ ಮೆಗ್ಗಾನ್ ಆಸ್ಪತ್ರೆಯ ಆಸ್ಪತ್ರೆ ಸಿಬ್ಬಂದಿ ವ್ಹೀಲ್ ಚೇರ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ತನ್ನ ರೋಗಗ್ರಸ್ಥ ಪತಿಯನ್ನು ಮಹಿಳೆಯೋರ್ವರು ನೆಲದ ಮೇಲೆಯೇ ಎಳೆಯೊಯ್ದ ಅಮಾನವೀಯ ಘಟನೆ ನಡೆಯಿತು.

► ಅ.19ರಂದು ಆಧಾರ್ ಕಾರ್ಡ್ ಇಲ್ಲದ್ದಕ್ಕೆ ಆಹಾರ ಪಡಿತರ ನಿರಾಕರಿಸಿದ ಪರಿಣಾಮ ಜುಲೈನಲ್ಲಿ ಮೂರು ದಲಿತರ ಸಹೋದರರು ಹಸಿವಿಗೆ ಬಲಿಯಾದ ಅಮಾನವೀಯ ಘಟನೆ ಗೋಕರ್ಣ ಸಮೀಪದ ಬೆಳೆಹಿತ್ತಲು ಗ್ರಾಮದಲ್ಲಿ ನಡೆದಿತ್ತು. ಇದು ನಾಗರಿಕರ ಹಕ್ಕುಗಳ ಜನತಾ ಒಕ್ಕೂಟ(ಪಿಯುಸಿಎಲ್)ದ ವರದಿಯಲ್ಲಿ ಬಹಿರಂಗವಾಗಿತ್ತು.

► ಮಾ.12ರಂದು ದಾವಣಗೆರೆಯ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಲಂಕೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಬಳಿ ತೆರಳುತ್ತಿದ್ದ ಸಾಹಿತಿ ಯೋಗೇಶ್ ಮಾಸ್ಟರ್ ಮೇಲೆ ದುಷ್ಕರ್ಮಿಳಿಂದ ಮಸಿ ದಾಳಿ.

► ಜು. 10ರಂದು ಹಾವೇರಿಯ ರಾಣೆಬೆನ್ನೂರಿ ನಲ್ಲಿ ಸರಕಾರಿ ಬಸ್‌ನಲ್ಲಿ ಶಾಲಾ ಬಾಲಕಿಯ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಕುರಿತು ಮೂವರು ಸಾರಿಗೆ ಸಿಬ್ಬಂದಿಯ ಬಂಧನವಾಯಿತು.

► ಡಿ.19ರಂದು ವಿಜಯಪುರದಲ್ಲಿ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಘಟನೆ ಖಂಡಿಸಿ ರಾಜ್ಯಾದ್ಯಂತ ವಿದ್ಯಾರ್ಥಿ, ದಲಿತ, ಮಹಿಳಾ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು ವಿಜಯಪುರದಲ್ಲಿ ಡಿ.23ರಂದು ಬಂದ್ ನಡೆಸಲಾಯಿತು.

ಹರಕು ಬಾಯಿ - ವಿವಾದ

► ಜ.1: ಕಾರ್ತಿಕ್‌ರಾಜ್ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾ ಖೆಗೆ ಹತ್ತು ದಿನಗಳ ಕಾಲಾವಕಾಶ ನೀಡು ತ್ತಿದ್ದು, ಬಂಧನ ಅಸಾಧ್ಯವಾದರೆ ದ.ಕ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಸಂಸದ ನಳಿನ್‌ಕುಮಾರ್ ಕಟೀಲು ವಿವಾದಿತ ಹೇಳಿಕೆ.

► ಜ.3: ಉತ್ತರ ಕನ್ನಡ ಸಂಸದ, ಪ್ರಸ್ತುತ ಕೇಂದ್ರ ಸಚಿವರಾಗಿರುವ ಅನಂತಕುಮಾರ್ ಹೆಗಡೆ, ಶಿರಸಿಯ ಟಿಎಸ್‌ಎಸ್ ಆಸ್ಪತ್ರೆ ಯಲ್ಲಿ ತನ್ನ ತಾಯಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲವೆಂದು ಆರೋಪಿಸಿ ಇಬ್ಬರು ವೈದ್ಯರಿಗೆ ಹಲ್ಲೆ ನಡೆಸಿದರು.

► ಜು.13: ಕಲ್ಲಡ್ಕ ಪ್ರಭಾಕರ್ ಭಟ್ಟರನ್ನು ಬಂಧಿಸಿದರೆ ರಾಜ್ಯಕ್ಕೆ ಬೆಂಕಿ ಹಚ್ಚುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆ

► ಜು. 18: ರಾಜ್ಯದಲ್ಲಿ ಸಂಘಪರಿವಾರದ ಕಾರ್ಯಕರ್ತರ ಕೊಲೆ ಯಾದವರ ಪಟ್ಟಿ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ ಬದುಕಿದ್ದ ಅಶೋಕ್ ಪೂಜಾರಿ ಹೆಸರನ್ನೂ ಸೇರಿಸಿ ಎಡವಟ್ಟು ಮಾಡಿದ್ದರು.

► ಡಿ.24: ‘ಜಾತ್ಯತೀತರಿಗೆ ತಮ್ಮ ಅಪ್ಪ- ಅಮ್ಮರ ರಕ್ತದ ಪರಿಚಯವೇ ಇಲ್ಲ, ಸಂವಿಧಾನ ಬದ ಲಾವಣೆ ಮಾಡಲೆಂದೇ ನಾವು ಬಂದಿದ್ದೇವೆ’ನಾಲಿಗೆ ಹರಿಬಿಟ್ಟಿದ್ದ ಅನಂತಕುಮಾರ ಹೆಗಡೆ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತ ವಾದವು ಈ ಕುರಿತು ಸಂಸತ್‌ನಲ್ಲಿ ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದು ನಂತರ ಸಚಿವ ಹೆಗಡೆ ಕ್ಷಮೆಯಾಚಿಸಿದರು.

► ಡಿ.3: ಬಾಬಾ ಬುಡಾನ್‌ಗಿರಿಯಲ್ಲಿ ದತ್ತಜಯಂತಿ ಸಂದರ್ಭ ದಲ್ಲಿ ಸಂಘಪರಿವಾರದ ಕಾರ್ಯಕರ್ತರ ಗುಂಪೊಂದು ದತ್ತಪೀಠ ಆವರಣದ ಬೇಲಿ ಹಾರಿ ಅಲ್ಲಿರುವ ಗೋರಿಗಳನ್ನು ಧ್ವಂಸಗೊಳಿಸಲು ಯತ್ನಿಸಿದ ವೇಳೆ ಪೊಲೀಸರು ಲಾಠಿ ಪ್ರಹಾರದ ಮೂಲಕ ವಿಫಲಗೊಳಿಸಿದರು.

► ಡಿ.11: ಹೊನ್ನಾವರದ ಯುವಕ ಪರೇಶ್ ಮೇಸ್ತಾನ ನಿಗೂಢ ಸಾವು: ಸಂಘಪರಿವಾರದಿಂದ ಪ್ರತಿಭಟನೆ: ಕುಮಟಾದಲ್ಲಿ ಐಜಿ ಕಾರಿಗೆ ಬೆಂಕಿ, ಕಲ್ಲು ತೂರಾಟ. ಶಿರಸಿ, ಹೊನ್ನಾವರ, ಕಾರವಾರ, ಕುಮಟಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಜ್ಯ ಸರಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿದೆ.

ಅಧಿಕಾರ ಸ್ವೀಕಾರ

► ಜ.28ರಂದು ನೂತನ ಲೋಕಾಯುಕ್ತರಾಗಿ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಪ್ರಮಾಣ ವಚನ ಸ್ವೀಕಾರ.

► ಅ.31ರಂದು ಕರ್ನಾಟಕದ ಮೊದಲ ಮಹಿಳಾ ಡಿಜಿಪಿಯಾಗಿ ನೀಲಮಣಿ ಎನ್. ಅಧಿಕಾರ ಸ್ವೀಕಾರ.

► ನ.30ರಂದು ರಾಜ್ಯಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರತ್ನಪ್ರಭಾ ಅಧಿಕಾರ ಸ್ವೀಕಾರ.

► ಸೆ.1ರಂದು ನೂತನ ಸಚಿವರಾಗಿ ಗೀತಾ ಮಹದೇವ ಪ್ರಸಾದ್, ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ ಪ್ರಮಾಣ ವಚನ ಸ್ವೀಕಾರ.

ಬಂಧನ

► ಡಿ.3ರಂದು ಬೇಜವಾಬ್ದಾರಿಯಿಂದ ವಾಹನ ಚಾಲನೆ: ಸಂಸದ ಪ್ರತಾಪಸಿಂಹ ಬಂಧನ

► ಡಿ.8ರಂದು ತನ್ನ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಕೊಟ್ಟ ಆರೋಪದ ಮೇಲೆ ಹಿರಿಯ ಪತ್ರಕರ್ತ ‘ಹಾಯ್ ಬೆಂಗಳೂರು’ ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಬಂಧನವಾಯಿತು. 11ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಡಿಸಿಲಾಯಿತು. ನಂತರ ಷರತ್ತುಬದ್ಧ ಜಾಮೀನು ಮಂಜೂರು.

ಪ್ರಮುಖ ರಾಜಕೀಯ ಬೆಳವಣಿಗೆ

► ಎ.13: ನಂಜನಗೂಡು ಮತ್ತು ಗುಂಡ್ಲುಪೇಟೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಹಾಗೂ ಗೀತಾ ಮಹದೇವ್ ಪ್ರಸಾದ್‌ಗೆ ಗೆಲುವು

► ರಾಯಣ್ಣ ಬ್ರಿಗೇಡ್: ಬಿಎಸ್‌ವೈ ಮತ್ತು ಈಶ್ವರಪ್ಪ ನಡುವೆ ಗುದ್ದಾಟ

ಹೊಸ ಪಕ್ಷಗಳು

► ಅ.31ರಂದು ನಟ ಉಪೇಂದ್ರರ ಹೊಸ ರಾಜಕೀಯ ಪಕ್ಷ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಅಸ್ತಿತ್ವಕ್ಕೆ

► ನ.1: ‘ಭಾರತೀಯ ಜನಶಕ್ತಿ ಕಾಂಗ್ರೆಸ್’ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈರಿಂದ ಹೊಸ ಪಕ್ಷ ಸ್ಥಾಪನೆ.

83ನೇ ಕನ್ನಡ ಸಾಹಿತ್ಯ ಸಮ್ಮೇಳನ

ನ.24ರಂದು ಕನ್ನಡ ತಾಯಿಯ ನುಡಿಹಬ್ಬ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಮನೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು. ‘ಸಂಕ್ರಮಣ ಕವಿ’ ಚಂದ್ರಶೇಖರ ಪಾಟೀಲ (ಚಂಪಾ)ಈ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅಲಂಕರಿಸಿದ್ದರು. ಪ್ರತೀ ವರ್ಷದ ಪದ್ಧತಿಯಂತೆ ಸಮ್ಮೇಳಾನಾಧ್ಯಕ್ಷರ ಮೆರವಣಿಗೆ ವೈಭವೋಪೇತ, ಕಣ್ಮನ ಸೆಳೆಯುವಂತಹ ಸಾರೋಟಿನಲ್ಲಿ ಜರುಗಿತು. ನಗರದೆಲ್ಲೆಡೆ ಕೆಂಪು ಮತ್ತು ಹಳದಿ ಬಾವುಟಗಳು ರಾರಾಜಿಸಿದವು.

ಪೂಜೆ ಸಲ್ಲಿಸಲಿಲ್ಲ, ಪೇಟ ಧರಿಸಲಿಲ್ಲ... 

ಸಂಪ್ರದಾಯದಂತೆ ಅರಮನೆ ಆವರಣದಲ್ಲಿ ಭುವನೇಶ್ವರಿ ದೇವ ಸ್ಥಾನಕ್ಕೆ ಪೂಜೆ ಸಲ್ಲಿಸದಿದ್ದುದು ಒಂದಾದರೆ, ಮೆರವಣಿಗೆಯಲ್ಲಿ ಮೈಸೂರು ಪೇಟವನ್ನು ಕೂಡ ಧರಿಸಲು ನಿರಾಕರಿಸಿದರು.

ಅಧ್ಯಕ್ಷೀಯ ಭಾಷಣ....

ಅಧ್ಯಕ್ಷೀಯ ಭಾಷಣಗೈದ ಚಂಪಾ, ಸಂವಿಧಾನ, ಜಾತ್ಯತೀತತೆ, ಸ್ವಾತಂತ್ರ ಸಮಾನತೆ ಸಹಬಾಳ್ವೆಗೆ ಒದಗಿಬರುತ್ತಿರುವ ಕಂಟಕಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, ಅಭಿವ್ಯಕ್ತಿ ಸ್ವಾತಂತ್ರ, ವೈಚಾರಿಕತೆ, ಅಭಿವ್ಯಕ್ತಿ ಸ್ವಾತಂತ್ರ ಗಳ ಮೇಲಾಗುತ್ತಿರುವ ದಾಳಿಗಳ ಬಗ್ಗೆ ಖೇದ ವ್ಯಕ್ತಪಡಿಸಿದರು. ಹಿಂದಿ ಭಾಷೆಯ ಬಲವಂತದ ಹೇರಿಕೆಯನ್ನು ಬಲವಾಗಿ ಖಂಡಿಸಿದ ಚಂಪಾ, ಹಿಂದಿ ಹೇರಿಕೆ ಸಾಮ್ರಾಜ್ಯಶಾಹಿಯ ಧೋರಣೆಯ ಪ್ರತೀಕ ಎಂದು ಕಿಡಿಕಾರಿದರು. ‘ನಮ್ಮ ನೆಲದ ಸಾರವನ್ನು ಹೀರಿ, ನಮ್ಮ ಹವೆಯನ್ನುಂಡು, ನಮ್ಮ ಆಕಾಶ ದಲ್ಲಿ ನಮ್ಮ ಟೊಂಗೆಗಳನ್ನು ಹರಡಿ, ನಮ್ಮ ಹೂಗಳ ಸುವಾಸನೆ ಬೀರಬಲ್ಲ ಒಂದು ವೃಕ್ಷ ವಾಗಿ, ಒಂದು ನಿರ್ಣಾಯಕ ರಾಜಕೀಯ ಶಕ್ತಿಯಾಗಿ ಕನ್ನಡ ಶಕ್ತಿ ಕ್ರೋಡೀಕರಣಗೊಂ ಡಾಗ ಕನ್ನಡ ಅರಳಬಲ್ಲುದು’ ಎಂದು ಕವಿತೆ ರೂಪದಲ್ಲಿ ಕಿವಿಮಾತು ಹೇಳಿದರು.

‘ಪ್ರಾದೇಶಿಕ ಪಕ್ಷ, ಜಾತ್ಯತೀತರ ಬೆಂಬಲಿಸಿ’

ನೇರ ನುಡಿಯವರಾದ ಚಂಪಾ ಯಾರ ಮುಲಾಜಿಗೂ ಒಳಗಾಗದ ವ್ಯಕ್ತಿತ್ವದವರು. ‘ಮಾತೃಭಾಷೆ ಕನ್ನಡದ ಹಿತಾಸಕ್ತಿ ಕಾಪಾಡಬೇಕಾದರೆ ನಾವು ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಬೇಕಿದೆ. ಒಂದು ವೇಳೆ ಬರಲಿರುವ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ವನ್ನೇ ಬೆಂಬಲಿಸುವುದಾದರೆ ಸಂವಿಧಾನದ ವೌಲ್ಯಗಳಿಗೆ ಬದ್ಧವಿರುವ, ಅಧಿಕಾರದ ಗದ್ದುಗೆಗೆ ಹತ್ತಿರ ಬರುವ ‘ಜಾತ್ಯತೀತ’ ನಿಲುವು ಹೊಂದಿರುವ ಪಕ್ಷವನ್ನು ಬೆಂಬಲಿಸ ಬಹುದು’ ಎಂದು ಚಂಪಾ ನುಡಿದರು. ‘ಹೊಸ’ ಪಕ್ಷಗಳ ಕಟ್ಟಿದವರು ಕೈ ಬಾಯಿ ಸುಟ್ಟು ಕೊಂಡಿದ್ದೇ ಹೆಚ್ಚು, ಆ ಸಾಧ್ಯತೆ ಸದ್ಯಕ್ಕಂತೂ ಕಾಣುತ್ತಿಲ್ಲ . ಕೋಮುವಾದಿ ಶಕ್ತಿಗಳ ವಿರುದ್ಧ ಗಮನ ಕೇಂದ್ರೀಕರಿಸಬೇಕು ಎಂದು ಚಂಪಾ ಉವಾಚಿಸಿದರು.

ಹೆಗಲು ಮುಟ್ಟಿಕೊಂಡರು.....ಸಮರ್ಥಿಸಿದರು.

ಸಮ್ಮೇಳನಾಧ್ಯಕ್ಷ ಚಂಪಾ ಅವರ, ಜಾತ್ಯತೀತ ನಿಲುವಿನ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿಎಂಬ ಹೇಳಿಕೆ ರಾಜ್ಯದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿತು. ಸಾಮಾಜಿಕ ಜಾಲತಾಣ ಗಳಲ್ಲಿ ಕೆಲವರು ಚಂಪಾರ ಹೇಳಿಕೆಯನ್ನು ಖಂಡಿಸಿ ತಾವು ‘ಜಾತ್ಯತೀತ’ ಅಲ್ಲ ಎಂಬಂತೆ ಹೆಗಲು ಮುಟ್ಟಿಕೊಂಡರು. ಸಂಸದ ಪ್ರತಾಪಸಿಂಹರಂತೂ ಚಂಪಾರ ಬಾಯಿ ಯಿಂದ ‘ಮೂತ್ರದ ವಾಸನೆ’ಯನ್ನೇ ಮೂಸಿದರು. ಕನ್ನಡ ಸಮ್ಮೇಳನದಂತಹ ವೇದಿಕೆ ಯಲ್ಲಿ ರಾಜಕೀಯ ಮಾತನಾಡುವ ಅಗತ್ಯತೆ ಇತ್ತೇ ಎಂಬ ಪ್ರಶ್ನೆಗಳು ಎದುರಾದವು. ಆದರೆ ಪ್ರಸ್ತುತ ಸಂದರ್ಭದಲ್ಲಿ ಯಾವ ಕ್ಷೇತ್ರವೂ ರಾಜಕೀಯ ಹೊರತಾಗಿಲ್ಲ ಎಂಬ ಸಮರ್ಥನೆಯ ಉತ್ತರಗಳು ಅಷ್ಟೇ ಪ್ರಬಲವಾಗಿ ಕೇಳಿಬಂದವು.

ಸಾಧಕರು

► ಮೇ 31ರಂದು 2017ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷಾ ಫಲಿತಾಂಶ ಪ್ರಕಟವಾಯಿತು. ಕರ್ನಾಟಕದ ಕೋಲಾರದ ನಂದಿನಿ ಕೆ.ಆರ್. ಅವರು ದೇಶಕ್ಕೇ ಪ್ರಥಮ ರ್ಯಾಂಕ್ ಪಡೆದು ಸಾಧನೆ ಮಾಡಿದರು.

► ಜು.6ರಂದು ಏಶ್ಯಾ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಕನ್ನಡಿಗ ವಿಕಾಸ್‌ಗೌಡ ಕಂಚು ಪಡೆದರು

► ನ.3ರಂದು ಕಾಮನ್‌ವೆಲ್ತ್ ಕ್ರೀಡಾಕೂಟದ 50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಕನ್ನಡಿಗ ಪ್ರಕಾಶ್ ನಂಜಪ್ಪ ಚಿನ್ನ ಪಡೆದು ಸಾಧನೆ ಮಾಡಿದರು.

ಪ್ರಮುಖ ರಾಜಕೀಯ ಬೆಳವಣಿಗೆ

ಎ.13: ನಂಜನಗೂಡು ಮತ್ತು ಗುಂಡ್ಲುಪೇಟೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಹಾಗೂ ಗೀತಾ ಮಹದೇವ್ ಪ್ರಸಾದ್‌ಗೆ ಗೆಲುವು

ರಾಯಣ್ಣ ಬ್ರಿಗೇಡ್: ಬಿಎಸ್‌ವೈ ಮತ್ತು ಈಶ್ವರಪ್ಪ ನಡುವೆ ಗುದ್ದಾಟ

ಅತ್ತಿಂದಿತ್ತ -ಇತ್ತಿಂದತ್ತ

► ಜು.2ರಂದು ಡಿನೋಟಿಫಿಕೇಶನ್ ಪ್ರಕರಣದ ಹಿನ್ನೆಲೆಯಲ್ಲಿ ಪಕ್ಷದಿಂದ ದೂರವಾಗಿದ್ದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಬಿಜೆಪಿಗೆ ಮರು ಸೇರ್ಪಡೆಯಾದರು.

► ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಜನವರಿ ಅಂತ್ಯದಲ್ಲಿ ಕಾಂಗ್ರೆಸ್ ತೊರೆದರು. ನಂತರ ಬಿಜೆಪಿ ಸೇರ್ಪಡೆಯಾದರು.

► ಆ.3ರಂದು ಬಿಜೆಪಿ ಮುಖಂಡ, ಯಡಿಯೂರಪ್ಪ ಆಪ್ತ ಧನಂಜಯ್ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾದರು.

► ಜು. 4ರಂದು ಮಾಜಿ ಸಚಿವ ಕಾಂಗ್ರೆಸ್‌ನ ಮುಖಂಡ ಎಚ್.ವಿಶ್ವನಾಥ್ ಜೆಡಿಎಸ್‌ಗೆ ಸೇರ್ಪಡೆಯಾದರು.

► ನ.2ರಂದು ಶಾಸಕರಾದ ಯೋಗೇಶ್ವರ, ಪಿ.ರಾಜೀವ್ ಬಿಜೆಪಿ ಸೇರ್ಪಡೆಯಾದರು.

ಆಯ್ಕೆ, ಪ್ರಶಸ್ತಿ ಪ್ರದಾನ, ತಿರಸ್ಕಾರ

► ಜ.11ರಂದು ಸಾಹಿತಿ ಡಾ.ಹಂ.ಪ ನಾಗರಾಜಯ್ಯ ಪಂಪ ಪ್ರಶಸ್ತಿಗೆ ಆಯ್ಕೆ.

► ಜ.11ರಂದು 2015ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿಯನ್ನು ಹಿರಿಯ ಚಿಂತಕ, ಖ್ಯಾತ ವಿಮರ್ಶಕ ಜಿ.ರಾಜಶೇಖರ್ ನಿರಾಕರಿಸಿದರು.

► ಜ.23ರಂದು ಕನ್ನಡ ಸಂಘರ್ಷ ಸಮಿತಿಯಿಂದ ರಾಷ್ಟ್ರಕವಿ ಕುವೆಂಪು ಹೆಸರಿನಲ್ಲಿ ನೀಡುವ ಅನಿಕೇತನ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ವಾರ್ತಾ ಭಾರತಿ ಅಂಕಣಕಾರ ಸನತ್‌ಕುಮಾರ್ ಬೆಳಗಲಿ ಆಯ್ಕೆ.

► ಜ.25ರಂದು ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಕರ್ನಾಟಕದ ಪ್ರೊ. ಯು.ಆರ್. ರಾವ್‌ಗೆ ಪದ್ಮವಿಭೂಷಣ ಹಾಗೂ ಹಿರಿಯ ನಟಿ ಭಾರತೀ ವಿಷ್ಣುವರ್ಧನ್, ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ, ನಿಘಂಟು ತಜ್ಞ ಪ್ರೊ.ಜಿ ವೆಂಕಟಸುಬ್ಬಯ್ಯ, ಸಮಾಜ ಸೇವಕ ಗಿರೀಶ್ ಭಾರಧ್ವಾಜ್, ಅಂಧ ಕ್ರಿಕೆಟಿಗ ಶೇಖರ್ ನಾಯ್ಕ, ಡಿಸ್ಕಸ್ ಥ್ರೋ ಪಟು ವಿಕಾಸ್ ಗೌಡ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ.

► ಫೆ.3ರಂದು ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೆ ನಟರಾಜ್ ಹುಳಿಯಾರ್ ಆಯ್ಕೆ.

► ಎ.7ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುವ ಅಕ್ಕಮಹಾದೇವಿ ಪ್ರಶಸ್ತಿಗೆ ಮಲ್ಲಿಕಾ ಘಂಟಿ ಹಾಗೂ ಮಹಾವೀರ ಶಾಂತಿ ಪ್ರಶಸ್ತಿಗೆ ಶಿವಕುಮಾರ ಸ್ವಾಮೀಜಿ ಆಯ್ಕೆ.

► ಎ. 8ರಂದು 2017ನೇ ಸಾಲಿನ ಬಿ. ಸರೋಜಾದೇವಿ ಪ್ರಶಸ್ತಿಗೆ ಬಹುಭಾಷಾ ತಾರೆ ಜಯಂತಿ ಆಯ್ಕೆ.

► ಮೇ 15ರಂದು ಖ್ಯಾತ ಗಣಿತತಜ್ಞ ಭಾಸ್ಕರಾಚಾರ್ಯರ ಹೆಸರಿನಲ್ಲಿ ಶ್ರೀ ಚನ್ನವೀರಸ್ವಾಮೀಜಿ ಪ್ರತಿಷ್ಠಾನದಿಂದ ನೀಡುವ ‘ಭಾಸ್ಕರ ಪ್ರಶಸಿ’್ತಗೆ ಬಾಹ್ಯಾಕಾಶ ವಿಜ್ಞಾನಿ ಯು.ಆರ್ ರಾವ್ ಆಯ್ಕೆ.

► ಮೇ 18ರಂದು ಹಿರಿಯ ಪತ್ರಕರ್ತ, ಪರಿಸರ ತಜ್ಞ ನಾಗೇಶ್ ಹೆಗಡೆ ಟಿಎಸ್ಸಾರ್ ಪ್ರಶಸ್ತಿಗೆ ಆಯ್ಕೆ.

► ಆ.20ರಂದು 2017ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಯನ್ನು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರದಾನಿಸಲಾಯಿತು.

► ಆ.22ರಂದು ಕನ್ನಡಿಗ ಕೊಡಗಿನ ಹಾಕಿ ಆಟಗಾರ ಎಸ್.ವಿ. ಸುನೀಲ್ ಅರ್ಜುನ ಪ್ರಶಸ್ತಿಗೆ ಆಯ್ಕೆ.

► ಸೆ.13ರಂದು 2016ನೇ ಸಾಲಿನ ಪೆರಿಯಾರ್ ಪ್ರಶಸ್ತಿಗೆ ಕೋಟಿಗಾನಹಳ್ಳಿ ರಾಮಯ್ಯ ಆಯ್ಕೆ.

► ಅ.10ರಂದು ಖ್ಯಾತ ನಟ ಪ್ರಕಾಶ್ ರೈಗೆ ಡಾ.ಶಿವರಾಮ್ ಕಾರಂತರ ಹುಟ್ಟೂರ ಪ್ರಶಸ್ತಿ ಪ್ರದಾನ.

► ಅ.13ರಂದು ಚಿತ್ರದುರ್ಗದ ಮರುಘಾಮಠದಿಂದ ನೀಡುವ ಬಸವಶ್ರೀ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮದ ಹರಿಕಾರ ಪಿ.ಸಾಯಿನಾಥ್ ಆಯ್ಕೆ.

► ಡಾ.ವೈದೇಹಿ, ನಿ.ನ್ಯಾಯಮೂರ್ತಿ ನಾಗಮೋಹನ್‌ದಾಸ್, ಖ್ಯಾತ ಹಿನ್ನೆಲೆ ಗಾಯಕ ಕೆ.ಜೆ.ಯೇಸುದಾಸ್, ಇತಿಹಾಸತಜ್ಞ ರಾಮಚಂದ್ರ ಗುಹಾ, ಹಿರಿಯ ಸಿನೆಮಾ ನಟ ಮುಖ್ಯಮಂತ್ರಿ ಚಂದ್ರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 62 ಸಾಧಕರ ಆಯ್ಕೆ ಮಾಡಲಾಯಿತು.

► ಉಡುಪಿ ಮಾನವಹಕ್ಕು ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನ್‌ಭಾಗ್ ಹಾಗೂ ಪ್ರಗತಿಪರ ಚಿಂತಕ, ಸಾಹಿತಿ ಡಿ.ಎಸ್. ನಾಗಭೂಷಣ್ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕಾರ ಮಾಡಿದರು.

► ನ.1ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪಂಪ ಪ್ರಶಸ್ತಿಗೆ ನಿಸಾರ್ ಅಹಮದ್ ಆಯ್ಕೆ.

► ನ.29ರಂದು ಮೋಹನ್ ಆಳ್ವಾ ಹಿಂದೂ ಸಿದ್ಧಾಂತದ ಪರವಾಗಿದ್ದಾರೆ ಎಂದು ಕಾರಣ ನೀಡಿ ನುಡಿಸಿರಿ ಪ್ರಶಸ್ತಿಯನ್ನು ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ನಿರಾಕರಿಸಿದರು.

► ಡಿ.4ರಂದು ನಾಡೋಜ ಪಾಟೀಲ ಪುಟ್ಟಪ್ಪ ರಾಜ್ಯ ಸರಕಾರದ ‘ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ.

► ಡಿ.14ರಂದು ಬಿಎಂಟಿಸಿಯಿಂದ ನೀಡುವ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿರುವ ಪ್ರತಿಷ್ಠಿತ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಆಯ್ಕೆ.

► ಡಿ.21ರಂದು ಪ್ರೆಸ್‌ಕ್ಲಬ್ ಬೆಂಗಳೂರು ಕೊಡಮಾಡುವ ವರ್ಷದ ವ್ಯಕ್ತಿ ಪ್ರಶಸ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಹುಭಾಷಾ ನಟ ಪ್ರಕಾಶ್ ರೈ ಆಯ್ಕೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)