varthabharthi

ನಿಮ್ಮ ಅಂಕಣ

ಹೊಸ ವರ್ಷವೆಂದರೆ ಹಳೇಗೋಡೆ, ಹೊಸ ಕ್ಯಾಲೆಂಡರ್ ಇಷ್ಟೇನಾ?

ವಾರ್ತಾ ಭಾರತಿ : 1 Jan, 2018
ಐ. ಸೇಸುನಾಥನ್

ಬದಲಾವಣೆ ಜಗದ ನಿಯಮ. ಬೇರು ಹಳೆಯದಾದರೂ ತರುಗಳು ಮತ್ತೆ ಮತ್ತೆ ಚಿಗುರುತ್ತವೆ. ಕಾಲಚಕ್ರ ತಿರುಗುತ್ತದೆ; ವರ್ಷಗಳು ಉರುಳುತ್ತವೆ. ಕೆಲವರು ಇತಿಹಾಸದಲ್ಲಿ ಹೂತು ಹೋಗುತ್ತಾರೆ; ಮತ್ತೆ ಕೆಲವರು ಇತಿಹಾಸವನ್ನು ನಿರ್ಮಿಸುತ್ತಾರೆ.

ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟಿನಿಂದ ಸಾವಿನವರೆಗೆ ಸಿಗುವ ಒಂದೊಂದು ಗಳಿಗೆಯೂ ಅಮೂಲ್ಯವಾದುದು. ಕಡಿಮೆ ಜೀವಿತಾವಧಿಯಲ್ಲೇ ದೊಡ್ಡ ಸಾಧನೆ ಮಾಡಿದವರಿದ್ದಾರೆ; ದೀರ್ಘಕಾಲ ಬದುಕಿದ್ದರೂ ಇದ್ದೂ ಇಲ್ಲದಂತೆ ಕಳೆದು ಹೋದವರಿದ್ದಾರೆ. ನಾವೆಷ್ಟು ಕಾಲ ಬದುಕಿದೆವು ಎನ್ನುವುದಕ್ಕಿಂತ ಬದುಕಿನ ಅವಧಿಯಲ್ಲಿ ಏನು ಸಾಧಿಸಿದೆವು ಎನ್ನುವುದು ಮುಖ್ಯ.

ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಏನಾದರೂ ಸಾಧಿಸಬೇಕು. ತಾನು ಬದುಕಿದ್ದಕ್ಕೆ ಸಾಕ್ಷಿಯಾಗಿ ಭುವಿಯಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿ ಹೋಗಬೇಕು. ಬದುಕೆಂದರೆ ಸಂಪಾದಿಸುವುದು, ತಿನ್ನುವುದು ಕೊನೆಗೊಂದು ದಿನ ಸತ್ತು ಹೋಗುವುದು ಇದಿಷ್ಟೇ ಅಲ್ಲ. ಹಾಗೆ ಬದುಕಿದರೆ ನಮಗೂ ಪ್ರಾಣಿಗಳಿಗೂ ವ್ಯತ್ಯಾಸ ಇರುವುದಿಲ್ಲ. ಕೇವಲ ಭೂಮಿಗೆ ಭಾರವಾಗಿ ಬದುಕಬಾರದಲ್ಲವೇ?

ಹೊಸ ವರ್ಷವನ್ನು ನಾವು ಹೇಗೆ ಸ್ವಾಗತಿಸುತ್ತೇವೆ? ಬರೀ ಸಂಭ್ರಮಾಚರಣೆಗಳಿಗಷ್ಟೇ ಸೀಮಿತವಾದರೆ ಸಾಕೇ? ನಾವು ನಡೆದು ಬಂದ ಹಾದಿ ನಮಗೆ ಕಲಿಸಿದ್ದೇನು? ಸಾಧಿಸಿದ್ದೆಷ್ಟು? ಸಾಧಿಸಬೇಕಾದುದು ಎಷ್ಟು? ಒಮ್ಮೆ ಪಟ್ಟಿ ಮಾಡಿ ನೋಡಿ. ಕಳೆದ ವರ್ಷಕ್ಕಿಂತ ಈ ವರ್ಷ ಒಳ್ಳೆಯ ವರ್ಷವಾಗಿರಬೇಕೆಂದು ಎಲ್ಲರೂ ನಿರೀಕ್ಷಿಸುತ್ತಾರೆ. ನಿರೀಕ್ಷಿಸಿದರಷ್ಟೇ ಸಾಲದು; ಆ ನಿಟ್ಟಿನಲ್ಲಿ ಕಾರ್ಯೋನ್ಮಖರಾಗಬೇಕು.

 ಒಳ್ಳೆಯದನ್ನೇ ಯೋಚಿಸಬೇಕು; ಒಳ್ಳೆಯದನ್ನೇ ಮಾಡಬೇಕು. ದ್ವೇಷ, ಕ್ರೋಧ, ಅಸೂಯೆ, ಮೇಲು-ಕೀಳು, ಸೇಡು, ಹತ್ಯೆ ಎಲ್ಲಕ್ಕೂ ಮನದಲ್ಲಿ ಹುಟ್ಟುವ ಆಲೋಚನೆಗಳೇ ಕಾರಣವಾಗಿವೆ. ಒಳ್ಳೆಯದನ್ನೇ ಯೋಚಿಸಿದರೆ ಒಳ್ಳೆಯದಾಗುತ್ತದೆ; ಕೆಟ್ಟದನ್ನು ಯೋಚಿಸಿದರೆ ವಿನಾಶ ಕಾದಿರುತ್ತದೆ. ಅದು ಮಾಡುವವರು, ಮಾಡಿಸಿಕೊಳ್ಳುವವರು ಎರಡೂ ಕಡೆಯವರ ನೆಮ್ಮದಿಯನ್ನೂ ಹಾಳು ಮಾಡುತ್ತದೆ. ಯೋಚನೆಯಲ್ಲೂ ಕೂಡ ಇತರರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ ಎಂಬ ತೀರ್ಮಾನ ಕೈಗೊಳ್ಳೋಣ. ಎಲ್ಲರೂ ಹೀಗೆಯೇ ಯೋಚಿಸಿದರೆ ಜಗತ್ತಿನಲ್ಲಿ ಅಸಹಿಷ್ಣುತೆ, ಪ್ರತೀಕಾರ ಮತ್ತು ಯುದ್ಧ ಏನೂ ಇರಲಾರವು!

ಹೊಸ ವರ್ಷವೆಂದರೆ ಹಳೇಗೋಡೆ, ಹೊಸ ಕ್ಯಾಲೆಂಡರ್ ಇಷ್ಟೇನಾ? ಹೊಸ ವರ್ಷದಲ್ಲಿ ಏನಾದರೂ ಹೊಸ ತೀರ್ಮಾನವನ್ನು ಕೈಗೊಳ್ಳುವುದು ಒಳ್ಳೆಯದು. ಆದರೆ ತೆಗೆದು ಕೊಂಡ ತೀರ್ಮಾನಗಳನ್ನು ಕೆಲವೇ ದಿನಗಳಲ್ಲಿ ಮರೆಯುವಂತಾಗಬಾರದು. ಹಿಂದಿನ ವರ್ಷದ ತಪ್ಪುಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಪ್ರತಿದಿನ ಬೆಳಗಾಗುತ್ತದೆ, ಇಂದು ಮಾತ್ರ ಇದೇನು ಹೊಸದೇ? ಹೌದು, ಪ್ರತಿದಿನವೂ ಹೊಸದೇ! ಅದು ತಪ್ಪುಗಳನ್ನು ತಿದ್ದಿಕೊಳ್ಳಲು ನಮಗೆ ನೀಡಿದ ಅವಕಾಶ. ಜೀವನದಲ್ಲಿ ನಮಗೆ ಸಿಗುವ ಸಮಯ ಅತ್ಯಮೂಲ್ಯವಾದದ್ದು. ಕಳೆದು ಹೋದ ಸಮಯ ಮರಳಿಬಾರದು. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಪ್ರಯೋಜನವಿಲ್ಲ. ಎಷ್ಟೋ ಮಂದಿ ಕಾಡು ಹರಟೆ, ಅಲ್ಲಲ್ಲಿ ಸುತ್ತಾಡುವುದು, ಮೊಬೈಲ್ ನೋಡುವುದು ಮುಂತಾದ ಚಟುವಟಿಕೆಗಳಲ್ಲೇ ಸಮಯ ಕಳೆದು ಬಿಡುತ್ತಾರೆ. ಹೊಸ ವರ್ಷ ಬಂದಾಗಲೆಲ್ಲಾ ನಮ್ಮ ಜೀವಿತಾವಧಿಯಲ್ಲಿ ಒಂದು ವರ್ಷ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ಕಾಲಹರಣ ಮಾಡುತ್ತಾ, ಬದುಕಿದರೆ ಜೀವನದ ಕೊನೆಗಾಲದಲ್ಲಿ ನಾನು ಏನೂ ಸಾಧಿಸಿಲ್ಲ ಎಂದು ಕೊರಗುವಂತಾಗಬಹುದು! ಆದ್ದರಿಂದ ಹೊಸ ವರ್ಷ ಬಂದಾಗ ಹಿಂದಿನ ವರ್ಷದ ನನ್ನ ಬದುಕು ತೃಪ್ತಿಕರವಾಗಿತ್ತೇ? ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಲೇಸು.

ಕ್ಷಣ, ನಿಮಿಷ, ಗಂಟೆ, ದಿನ, ವಾರ, ತಿಂಗಳು, ವರ್ಷ ಇವೆಲ್ಲವೂ ಕಾಲವನ್ನು ಸೂಚಿಸುವ ಪರಿಭಾಷೆಗಳಷ್ಟೆ. ಪ್ರತಿಯೊಂದು ಕ್ಷಣವೂ ನಮಗೆ ಹೊಸದೇ. ಪ್ರತಿಕ್ಷಣವೂ ನಾವು ಹೊಸದಾಗಿ ಹುಟ್ಟುತ್ತೇವೆ. ಈ ಕ್ಷಣದಲ್ಲಿ ನಡೆಯುತ್ತಿರುವುದಷ್ಟೇ ಸತ್ಯ; ಮುಂದಿನ ಕ್ಷಣ ಏನಾಗುತ್ತದೋ ಗೊತ್ತಿಲ್ಲ. ನನಗೆ ಸಮಯವೇ ಸಾಲುತ್ತಿಲ್ಲ ಎಂದು ಹಲುಬುವವರೂ ಇದ್ದಾರೆ. ಇದು ಕುಂಟು ನೆಪವಷ್ಟೇ. ಮಹಾನ್ ಸಾಧಕರಿಗೆ ಸಿಕ್ಕಿದ್ದು 24 ಗಂಟೆ; ನಮಗೆ ಸಿಗುವುದೂ ಅದೇ 24 ಗಂಟೆ. ಇರುವ ಸಮಯವನ್ನೇ ಸದುಪಯೋಗ ಮಾಡಿಕೊಂಡು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಸಾಧನೆ ಮಾಡುವ ಅವಕಾಶ ಎಲ್ಲರಿಗೂ ಇದ್ದೇ ಇದೆ.

ಹೊಸ ವರ್ಷದಲ್ಲಿ ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಳ್ಳಬೇಕು. ಗುರಿಯಿಲ್ಲದ ಮನುಷ್ಯ ರೆಕ್ಕೆಗಳಿಲ್ಲದ ಹಕ್ಕಿಯಂತೆ. ಗುರಿಗಳು ನಮ್ಮ ಕೆಲಸಗಳನ್ನು ಮುನ್ನಡೆಸುತ್ತವೆ; ಗೆಲುವನ್ನು ತಂದುಕೊಡುತ್ತವೆ. ಗುರಿಗಳನ್ನು ತಲುಪಲು ಯೋಜನೆಗಳನ್ನು ಹಾಕಿಕೊಳ್ಳಬೇಕು. ಕಾಲು ವರ್ಷದ ಯೋಜನೆ, ವಾರ್ಷಿಕ ಯೋಜನೆ, ದೀರ್ಘಕಾಲದ ಯೋಜನೆ ಹೀಗೆ ಯೋಜನೆಗಳಿಗೆ ತಕ್ಕಂತೆ ಕಾಲ ನಿರ್ಣಯ ಮಾಡಿಕೊಳ್ಳಬಹುದು. ಗುರಿಗಳನ್ನು ತಲುಪದಿದ್ದರೆ ನಮ್ಮನ್ನು ನಾವೇ ಸೋಲಿಗೆ ದೂಡುತ್ತೇವೆ ಎಂದರ್ಥ.

ಮುನುಷ್ಯರಿಂದ ಸಾಧ್ಯವಾಗದ ಕೆಲಸವೇ ಇಲ್ಲ. ಸಾಧಿಸುವ ದೃಢಸಂಕಲ್ಪ ಬೇಕಷ್ಟೇ. ಪ್ರತಿಯೊಬ್ಬರಲ್ಲೂ ತನ್ನದೇ ಆದ ಪ್ರತಿಭೆಗಳಿರುತ್ತವೆ. ಆ ಪ್ರತಿಭೆೆ ಮತ್ತು ಸಾಮರ್ಥ್ಯಗಳನ್ನು ಬಳಸಿಕೊಂಡು ಗುರಿಯನ್ನು ತಲುಪಬೇಕು. ಗುರಿ ಮುಟ್ಟುವತನಕ ವಿರಮಿಸಬಾರದು.

ವರ್ಷಗಳು ಉರುಳುತ್ತಿದ್ದಂತೆ ನಮ್ಮ ಅನುಭವವೂ ಹೆಚ್ಚಾಗಬೇಕು. ನಮ್ಮಲ್ಲಿ ಏನಾದರೂ ಹೆಚ್ಚಾಗಿದೆಯೇ ಎಂದು ಒಮ್ಮೆ ಯೋಚಿಸಿ ನೋಡಿ. ಇಂದು ನೋಡುವವರನ್ನು ನಾಳೆ ನೋಡುತ್ತೇವೆ ಎಂಬ ಖಾತ್ರಿಯಿಲ್ಲ. ಆದ್ದರಿಂದ ಇತರರನ್ನು ನೋಡುವಾಗ ಪ್ರೀತಿಯಿಂದ ಇರೋಣ. ನೊಂದವರಿಗೆ ಸಾಂತ್ವನ ಹೇಳೋಣ. ಕಷ್ಟದಲ್ಲಿರುವವರಿಗೆ ಹೆಗಲು ಕೊಡೋಣ. ನಾವು ಹುಟ್ಟಿದ ಈ ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಪ್ರಯತ್ನಿಸೋಣ; ಅದು ಸಾಧ್ಯವಿಲ್ಲದಿದ್ದರೆ ಕೆಟ್ಟದನ್ನಾದರೂ ಮಾಡದಿರೋಣ! ಹೊಸ ವರ್ಷದ ಈ ಖುಷಿ ವರ್ಷವಿಡಿ ಉಳಿಯುವಂತಾಗಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)