varthabharthi

ವಿಶೇಷ-ವರದಿಗಳು

ದ.ಕ.: ಕೊಲೆ, ನಿಷೇಧಾಜ್ಞೆಯ ಭೀತಿಯಲ್ಲಿ ಕಳೆದು ಹೋದ 2017

ವಾರ್ತಾ ಭಾರತಿ : 1 Jan, 2018

ದ.ಕ. ಜಿಲ್ಲೆಯ ಜನತೆ 2017ನೇ ವರ್ಷದಲ್ಲಿ ಸಂತಸಕ್ಕಿಂತಲೂ ಹೆಚ್ಚಾಗಿ ಆತಂಕದ ದಿನಗಳನ್ನೇ ಎದುರಿಸಬೇಕಾಯಿತು. ವರ್ಷದ ಬಹುತೇಕ ದಿನಗಳು ಜಿಲ್ಲೆಯಲ್ಲಿ ಮಾದಕ ದ್ರವ್ಯದ ಹಾವಳಿ, ಕೊಲೆ, ನಿಷೇಧಾಜ್ಞೆಯ ಭೀತಿಯಲ್ಲೇ ಜನತೆ ದಿನ ದೂಡಬೇಕಾಯಿತು. ಆದರೂ ಕರಾವಳಿಯ ನಾಲ್ವರಿಗೆ ಪದ್ಮ ಪ್ರಶಸ್ತಿಗಳ ಗೌರವ, ಚೇತನ್ ಮುಂಡಾಡಿ ನಿರ್ದೇಶನದ ತುಳು ಚಿತ್ರ ‘ಮದಿಪು’ಗೆ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ವಾಸ್ತವ್ಯ, ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಮಾನ್ಯತೆ ಮೊದಲಾದ ಸಿಹಿ ಸುದ್ದಿಗಳು ಸ್ವಲ್ಪ ಮಟ್ಟಿಗೆ ಕರಾವಳಿಗರಿಗೆ ನೆಮ್ಮದಿಯನ್ನು ನೀಡಿದ್ದವು.

ಜಲೀಲ್ ಕರೋಪಾಡಿ ಕಗ್ಗೊಲೆ

ಎಪ್ರಿಲ್ 20ರಂದು ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಕರೋಪಾಡಿ ಅವರನ್ನು ಹಾಡಹಗಲೇ ಗ್ರಾಪಂ ಕಚೇರಿಯಲ್ಲಿ ಕೊಚ್ಚಿ ಕೊಲೆಗೈಯುವ ಮೂಲಕ ದ.ಕ. ಜಿಲ್ಲೆಯಲ್ಲಿ ಪಾತಕ ಜಗತ್ತು ತನ್ನ ಬೀಭತ್ಸತೆಯನ್ನು ಪ್ರದರ್ಶಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಬಂಧಿಸಲಾಗಿದ್ದರೂ ಮುಖ್ಯ ಆರೋಪಿ ಕರೋಪಾಡಿ ಗ್ರಾಪಂ ಸದಸ್ಯ ಹಾಗೂ ಇತರ ಇಬ್ಬರ ಬಂಧನ ಆಗಿಲ್ಲ ಎಂಬ ಜಲೀಲ್ ಕರೋಪಾಡಿ ಅವರ ಕುಟುಂಬದ ಆರೋಪಕ್ಕೆ ಉತ್ತರವಿನ್ನೂ ದೊರಕಿಲ್ಲ.

-------------------

ಜೂನ್ 21ರಂದು ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಎಸ್‌ಡಿಪಿಐ ಮುಖಂಡ, ರಿಕ್ಷಾ ಚಾಲಕ ಅಶ್ರಫ್ ಕಲಾಯಿ ಎಂಬವರನ್ನು ತಂಡವೊಂದು ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದಿತ್ತು. ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

-------------------

ಜುಲೈ 4ರಂದು ಬಿ.ಸಿ.ರೋಡ್‌ನಲ್ಲಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಶರತ್ ಜುಲೈ 7ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.ಫರಂಗಿಪೇಟೆ: ಗ್ಯಾಂಗ್‌ವಾರ್‌ಗೆ ಇಬ್ಬರು ಬಲಿ

-------------------

 ಸೆ.26: ಫರಂಗಿಪೇಟೆಯಲ್ಲಿ ಗ್ಯಾಂಗ್‌ವಾರ್‌ಗೆ ಅಡ್ಯಾರ್‌ಕಟ್ಟೆ ನಿವಾಸಿ ನಿಯಾಝ್ ಹಾಗೂ ಅಡ್ಯಾರ್ ಬೀರ್ಪುಗುಡ್ಡೆ ನಿವಾಸಿ ಫಯಾಝ್ ಎಂಬವರ ಹತ್ಯೆ. ಘಟನೆಯಿಂದ ಮೂವರಿಗೆ ಗಂಭೀರ ಗಾಯ. ಆರೋಪಿಗಳ ಬಂಧನ.

-------------------

ಸುದ್ದಿಯಾದ ‘ವಾರ್ತಾ ಭಾರತಿ’ ಪತ್ರಕರ್ತನ ಬಂಧನ

ಬಂಟ್ವಾಳದ ಶರತ್ ಮಡಿವಾಳ ಹತ್ಯೆ ಆರೋಪಿ ಖಲಂದರ್ ಎಂಬಾತನ ಹಾಗೂ ಪತ್ನಿಯ ಮನೆಗೆ ಪರಿಶೀಲನೆಗೆಂದು ತೆರಳಿದ್ದ ಬಂಟ್ವಾಳ ಪೊಲೀಸರ ತಂಡ ಮನೆಯಲ್ಲಿದ್ದ ಕುರ್‌ಆನ್ ಗ್ರಂಥವನ್ನು ನೆಲಕ್ಕೆ ಎಸೆದು ಅಪಮಾನಗೊಳಿಸಿದ್ದರು ಎಂದು ಮನೆಯವರು ಆರೋಪಿಸಿದ್ದರು. ಈ ಬಗ್ಗೆ ವರದಿ ಮಾಡಿದ್ದ ‘ವಾರ್ತಾ ಭಾರತಿ’ ಪತ್ರಿಕೆಯ ಬಂಟ್ವಾಳ ವರದಿಗಾರ ಇಮ್ತಿಯಾಝ್ ಶಾ ತುಂಬೆ ಅವರನ್ನು ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪದಡಿ ಸೆ.7ರಂದು ಬಂಧಿಸಿದ್ದ ಪೊಲೀಸರ ವಿರುದ್ಧ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

-------------------

ದ.ಕ. ಜಿಲ್ಲೆಗೆ ಬೆಂಕಿ: ನಳಿನ್ ವಿವಾದ

2016ರ ಅಕ್ಟೋಬರ್ 22ರಂದು ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ನಿವಾಸಿ ಕಾರ್ತಿಕ್ ರಾಜ್ ಕೊಲೆ ಪ್ರಕರಣ ಜನವರಿ ಆರಂಭದಲ್ಲಿ ಭಾರೀ ಸುದ್ದಿಗೆ ಕಾರಣವಾಗಿತ್ತು. ಸಂಸದ ನಳಿನ್ ಕುಮಾರ್ ಕಟೀಲು ಜ.1ರಂದು ಕೊಣಾಜೆ ಠಾಣೆಯ ಎದುರು ದ.ಕ. ಜಿಲ್ಲೆಗೆ ಬೆಂಕಿ ಹಾಕುವುದಾಗಿ ಪ್ರಚೋದನಾಕಾರಿ ಭಾಷಣದ ಮೂಲಕ ಜಿಲ್ಲೆಯ ಕೋಮು ಸೌಹಾರ್ದವನ್ನು ಕೆದಕಿದ್ದರು. ಬಳಿಕ ಸಂಸದರು ಈ ಬಗ್ಗೆ ಕ್ಷಮೆಯನ್ನೂ ಯಾಚಿಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಕಾರ್ತಿಕ್‌ರಾಜ್ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದ್ದರು. ಸಂಘಪರಿವಾರದಿಂದ ಕೊಣಾಜೆ ಠಾಣೆಗೆ ವಾಹನ ಜಾಥಾ, ಸರಣಿ ಪ್ರತಿಭಟನೆಗಳೂ ನಡೆದಿತ್ತು. ಆದರೆ, ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಪ್ರಿಲ್ 29ರಂದು ಮೃತ ಕಾರ್ತಿಕ್‌ನ ಸಹೋದರಿ ಕಾವ್ಯಾಶ್ರೀ ಮತ್ತಾಕೆಯ ಪ್ರಿಯಕರ ಕುತ್ತಾರ್ ಸುಭಾಷ್‌ನಗರದ ಗೌತಮ್ ಮತ್ತಾತನ ಸಹೋದರ ಗೌರವ್‌ನನ್ನು ಬಂಧಿಸುವ ಮೂಲಕ ಇದೊಂದು ಕೋಮು ಸಂರ್ಘರ್ಷವಲ್ಲ ಎಂಬುದು ಸಾಬೀತುಗೊಂಡಿತ್ತು.

-------------------

ಕಲ್ಲಡ್ಕದಲ್ಲಿ ಆರಂಭಗೊಂಡ ಕೋಮು ತಲ್ಲಣ ನಿಷೇಧಾಜ್ಞೆವರೆಗೆ

ಮೇ 26ರಂದು ಕಲ್ಲಡ್ಕದಲ್ಲಿ ಮಸೀದಿಯಿಂದ ಮನೆಗೆ ತೆರಳುತ್ತಿದ್ದ ಮುಹಮ್ಮದ್ ಹಾಶೀರ್ ಮತ್ತು ಮುಹಮ್ಮದ್ ಮಾಶೂಕ್ ಎಂಬವರಿಗೆ ಚೂರಿ ಇರಿತ ಘಟನೆಯ ಬಳಿಕ ಕಲ್ಲಡ್ಕದಲ್ಲಿ ಕೋಮು ಘರ್ಷಣೆ ಆರಂಭಗೊಂಡಿತ್ತು. ಪರಿಸ್ಥಿತಿಯನ್ನು ಅವಲೋಕಿಸಿ ಅಂದಿನಿಂದ ಬಂಟ್ವಾಳ ತಾಲೂಕಿನಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಈ ನಡುವೆ ಜೂನ್ 13ರಂದು ಕಲ್ಲಡ್ಕದಲ್ಲಿ ಖಲೀಲ್ ಮತ್ತು ರತ್ನಾಕರ್ ಶೆಟ್ಟಿ ಎಂಬವರ ನಡುವೆ ನಡೆದ ಘರ್ಷಣೆ ತೀವ್ರ ಸ್ವರೂಪ ಪಡೆದುಕೊಂಡಿತು. ಈ ಘಟನೆಯ ಬಳಿಕ ಎರಡು ತಂಡಗಳ ನಡುವೆ ಕಲ್ಲು ತೂರಾಟ ನಡೆಯಿತು. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಜಿಲ್ಲಾದ್ಯಂತ ವಿಸ್ತರಿಸಲಾಗಿತ್ತು.

ನಿಷೇಧಾಜ್ಞೆಯ ನಡುವೆಯೂ ಜೂನ್ 21ರಂದು ಅಶ್ರಫ್ ಕಲಾಯಿ ಅವರ ಕೊಲೆ ನಡೆಯಿತು. ಜುಲೈ 4ರಂದು ಶರತ್ ಮಡಿವಾಳ ಮೇಲೆ ಹಲ್ಲೆ ನಡೆದು ಜುಲೆ 7ರಂದು ಅವರು ಮೃತಪಟ್ಟರು.

ಜುಲೈ 7ರಂದು ಬಿ.ಸಿ.ರೋಡಿನಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಮುಖಂಡರು ನಿಷೇಧಾಜ್ಞೆ ಉಲ್ಲಂಘಿಸಿ ಸಾವಿರಾರು ಮಂದಿಯನ್ನು ಸೇರಿಸಿ ಪ್ರತಿಭಟನೆ ನಡೆಸಿದರು. ಜುಲೈ 8ರಂದು ನಿಷೇಧಾಜ್ಞೆ ಉಲ್ಲಂಘಿಸಿ ಶರತ್ ಮಡಿವಾಳ ಮೃತದೇಹದ ಮೆರವಣಿಗೆ ನಡೆಯಿತು. ಈ ಸಂದರ್ಭ ಬಿ.ಸಿ.ರೋಡಿನಲ್ಲಿ ಮತ್ತೆ ಕಲ್ಲು ತೂರಾಟ, ಹಲ್ಲೆ, ಇರಿತದಂತಹ ಅಹಿತರ ಘಟನೆಗಳು ಮರುಕಳಿಸಿದ್ದವು.

ಮೇ 26ರಿಂದ ಜುಲೈ 8ರ ನಡುವೆ ಬಂಟ್ವಾಳ ತಾಲೂಕು ಸೇರಿದಂತೆ ದ.ಕ. ಜಿಲ್ಲೆಯ ವಿವಿಧೆಡೆ 2 ಕೊಲೆ ಸಹಿತ ಹಲವು ಕೊಲೆ ಯತ್ನ, ಹಲ್ಲೆ, ಚೂರಿ ಇರಿತ, ಕಲ್ಲು ತೂರಾಟ ಪ್ರಕರಣಗಳು ನಡೆದವು. ಇದರಿಂದಾಗಿ ದ.ಕ. ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ 50 ದಿನಗಳಿಗೂ ಹೆಚ್ಚು ಕಾಲ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

-------------------

ವಿದ್ಯಾರ್ಥಿನಿ ಕಾವ್ಯಾ ಆತ್ಯಹತ್ಯೆ ಪ್ರಕರಣ

ಜುಲೈ 20ರಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ಎಂಬಾಕೆಯ ನಿಗೂಢ ಸಾವು ಮತ್ತೆ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆಗೆ ಸಾಕ್ಷಿಯಾಯಿತು. ಮಂಗಳೂರು ಸಹಿತ ವಿವಿಧೆಡೆ ಹಲವು ಸಂಘಟನೆಗಳಿಂದ ನಡೆದ ಪ್ರತಿಭಟನೆಯ ಪರಿಣಾಮ ರಾಜ್ಯ ಸರಕಾರದ ವಿವಿಧ ಸಮಿತಿಗಳ ನಿಯೋಗಳ ಭೇಟಿ, ಪರಿಶೀಲನೆ ನಡೆಯಿತು.

-------------------

ಉಡುಪಿಯನ್ನು ಬೆಂಬಿಡದೆ ಕಾಡಿದ ವಿವಾದಗಳ ವರ್ಷ

ಪೇಜಾವರ ಸ್ವಾಮೀಜಿಯ ಇಫ್ತಾರ್ ಕೂಟ, ಧರ್ಮ ಸಂಸದ್, ನಟ ಪ್ರಕಾಶ್ ರೈಗೆ ಕಾರಂತ ಪ್ರಶಸ್ತಿ ಸಹಿತ ಹಲವು ವಿವಾದಗಳು 2017ನೇ ವರ್ಷ ಉಡುಪಿಯನ್ನು ಕಾಡಿದ್ದು, ಅಕ್ರಮ ಮರಳುಗಾರಿಕೆ ಸಂಬಂಧ ಜಿಲ್ಲಾಧಿಕಾರಿ ಮೇಲೆ ನಡೆದ ದಾಳಿಯು ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು.

ಮಠದಲ್ಲಿ ಇಫ್ತಾರ್ ಕೂಟ

ಜೂ.24ರಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಸ್ವಾಮೀಜಿ ಮುಸ್ಲಿಮರಿಗಾಗಿ ಆಯೋಜಿಸಿದ್ದ ಇಫ್ತಾರ್ ಕೂಟ ಮತ್ತು ಮಠದಲ್ಲಿ ನಮಾಝ್ ನಿರ್ವಹಿಸಲು ಅವಕಾಶ ನೀಡಿದ್ದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಯಿತು. ಶ್ರೀರಾಮಸೇನೆ ಸಂಘಟನೆ ಇದರ ವಿರುದ್ಧ ಪ್ರತಿಭಟನೆ ನಡೆಸಿತ್ತು.

-------------------

ಜಿಲ್ಲಾಧಿಕಾರಿಯ ಸಹಿತ ಅಧಿಕಾರಿಗಳ ಕೊಲೆ ಯತ್ನ!

ಎ.2ರಂದು ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡ್ಲೂರು ಎಂಬಲ್ಲಿ ರಾತ್ರಿ 11:15ರ ಸುಮಾರಿಗೆ ಅಕ್ರಮ ಮರಳುಗಾರಿಕೆ ಪರಿಶೀಲಿಸಲು ತೆರಳಿದ್ದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕುಂದಾಪುರ ಉಪ ವಿಭಾಗ ದಂಡಾಧಿಕಾರಿ ಶಿಲ್ಪಾ ನಾಗ್ ಸಹಿತ ಆರು ಮಂದಿಯ ಮೇಲೆ ಸ್ಥಳೀಯ ಸುಮಾರು 50 ಮಂದಿಯ ಗುಂಪು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದು, ಈ ಸಂಬಂಧ ಒಟ್ಟು 26 ಮಂದಿಯನ್ನು ಬಂಧಿಸಲಾಗಿತ್ತು. ಈ ಮೂಲಕ ಜಿಲ್ಲೆಯ ಮರಳು ವಾಫಿಯಾ ಸುದ್ದಿಯ ಮುಂಚೂಣಿಗೆ ಬಂತು.

-------------------

ಸಂವಿಧಾನ ಬದಲಾಯಿಸಬೇಕೆಂಬ ಹೇಳಿಕೆಗೆ ಪೇಜಾವರ ಶ್ರೀ ವಿರುದ್ಧ ವ್ಯಾಪಕ ಪ್ರತಿಭಟನೆ

ನ.26ರಿಂದ ಮೂರು ದಿನಗಳ ಕಾಲ ನಡೆದ ಧರ್ಮ ಸಂಸದ್‌ನಲ್ಲಿ ಸಂವಿಧಾನ ಬದಲಾಯಿಸಬೇಕೆಂಬ ಪೇಜಾವರ ಶ್ರೀ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ವಿರೋಧ ಹಾಗೂ ಪ್ರತಿಭಟನೆಗಳು ವ್ಯಕ್ತವಾದವು.

-------------------

ಪ್ರಕಾಶ್ ರೈಗೆ ಕಾರಂತ ಹುಟ್ಟೂರ ಪ್ರಶಸ್ತಿ

ಅ.10ರಂದು ಬಿಜೆಪಿ, ಸಂಘ ಪರಿವಾರದ ವಿರೋಧ, ಬೆದರಿಕೆ ಹಾಗೂ ಪ್ರತಿಭಟನೆಯ ಮಧ್ಯೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಕೋಟ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು.

-------------------

ಟಿಪ್ಪು ಜಯಂತಿಗೆ ಉಸ್ತುವಾರಿ ಸಚಿವ ಪ್ರಮೋದ್ ಗೈರು!

ಉಡುಪಿಯಲ್ಲಿ ನ.10ರಂದು ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ ಜಯಂತಿಗೆ ಗೈರು ಹಾಜರಾಗುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವಾಜ್ ಸಹ ವಿವಾದಕ್ಕೆ ಕಾರಣರಾದರು.

-------------------

ಡಿ.18ರಂದು ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯ ಹೂಡಿದರು. ಅವರು ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ ದೆೀಶದ ಮೂರನೇ ಪ್ರಧಾನಿಯಾಗಿದ್ದಾರೆ.

-------------------

ಕರಾವಳಿಯ ನಾಲ್ವರಿಗೆ ಪದ್ಮ ಪ್ರಶಸ್ತಿ

 ಸುಳ್ಯದ ತೂಗುಸೇತುವೆ ನಿರ್ಮಾಪಕ ಗಿರೀಶ್ ಭಾರದ್ವಾಜ್, ಸಂಸ್ಕೃತ ಭಾರತಿಯ ಚ.ಮೂ.ಕೃಷ್ಣಮೂರ್ತಿ, ಮಂಗಳೂರು ಮೂಲದ ಡಾ. ಅನಂತ್ ಅಗರ್ವಾಲ್ 2017ನೇ ಸಾಲಿನಲ್ಲಿ ಪದ್ಮ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದರು.

-------------------

ಕಂಬಳಕ್ಕೆ ಮಾನ್ಯತೆ

ಕರಾವಳಿಯ ಗ್ರಾಮೀಣ, ಮಣ್ಣಿನ ಕ್ರೀಡೆಯಾಗಿ ಗುರುತಿಸಿಕೊಂಡಿರುವ ಕಂಬಳ ನಿಷೇಧದ ತೂಗುಗತ್ತಿ ಭಾರೀ ಪ್ರತಿಭಟನೆ, ಆಕ್ಷೇಪಕ್ಕೆ ಕಾರಣವಾಗಿತ್ತು. ಕೊನೆಗೂ ಕಂಬಳ ಕ್ರೀಡೆಗೆ ರಾಷ್ಟ್ರಪತಿಯಿಂದ ಮಾನ್ಯತೆ ದೊರೆಯುವ ಮೂಲಕ ಅವಿಭಜಿತ ದ.ಕ. ಜಿಲ್ಲೆಯ ಜನರು ಸಂಭ್ರಮಾಚರಿಸಿದ ಪ್ರಸಂಗವೂ ಈ ವರ್ಷಾಂತ್ಯಕ್ಕೆ ನಡೆಯಿತು.

-------------------

ಡಾ. ಅಮೃತ ಸೋಮೇಶ್ವರರಿಗೆ ಪ್ರಶಸ್ತಿ

ಜನಪದ ವಿದ್ವಾಂಸ, ನಾಡೋಜ ಡಾ. ಅಮೃತ ಸೋಮೇಶ್ವರರವರು ಕೇಂದ್ರ ಸಾಹಿತ್ಯ ಅಕಾಡಮಿಯ ಭಾಷಾ ಸಮ್ಮಾನ್ ಪ್ರಶಸ್ತಿಗೆ ಪಾತ್ರರಾದರು.

-------------------

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕ

ಮೂಲತಃ ಬೆಳುವಾಯಿ ಕಾನದವರಾದ ಅಬ್ದುಲ್ ಖಾದರ್ ಫೆಬ್ರವರಿ 18ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕವಾಗುವ ಮೂಲಕ ಜಿಲ್ಲೆಗೆ ಗೌರವ ತಂದು ಕೊಟ್ಟರು.

-------------------

ಕೇರಳ ಮುಖ್ಯಮಂತ್ರಿಯ ಯಶಸ್ವಿ ಮಂಗಳೂರು ಭೇಟಿ

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಗಳೂರಿಗೆ ಬರುವುದನ್ನು ಸಂಘಪರಿವಾರ ವಿರೋಧಿಸಿದ್ದವು. ಮಾತ್ರವಲ್ಲದೆ ಹರತಾಳವನ್ನು ಹಮ್ಮಿಕೊಂಡಿದ್ದವು. ಆದರೆ ಜಿಲ್ಲಾ ಹಾಗೂ ಮಂಗಳೂರು ಪೊಲೀಸರ ವಿಶೇಷ ರಕ್ಷಣೆಯೊಂದಿಗೆ ಪಿಣರಾಯಿ ಮಂಗಳೂರಿಗೆ ಭೇಟಿ ನೀಡಿ ತೆರಳಿದ ಪ್ರಸಂಗ ಫೆಬ್ರವರಿ 25ರಂದು ನಡೆಯಿತು.

-------------------

ಜೂ.29: ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ರಸ್ತೆ ಉದ್ಘಾಟನೆ ವಿಷಯಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಲು ಸದಸ್ಯರೊಬ್ಬರು ಸದನಕ್ಕೆ ಕರೆಸಿದ ನಾಗರಿಕರೊಬ್ಬರ ಮೇಲೆ ಆಡಳಿತ ಪಕ್ಷದ ಸದಸ್ಯರು ಹಲ್ಲೆ ನಡೆಸಿ ಹೊರದಬ್ಬಿದ್ದ ಘಟನೆ ಕೋಲಾಹಲವನ್ನು ಸೃಷ್ಟಿಸಿತ್ತು. ಈ ಮೂವರು ಸದಸ್ಯರ ವಿರುದ್ಧ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನ.13: ಕುಂದಾಪುರದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಕುಂದಾಪುರ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆ ಕುರಿತು ಎರಡು ಬಣಗಳ ಮಧ್ಯೆ ಮಾತಿನ ಚಕಮಕಿ ನಡೆದು ಗದ್ದಲ ಉಂಟಾಗಿದ್ದು, ಕಾರ್ಯಕರ್ತರನ್ನು ಚದುರಿಸಲು ಪೊಲೀಸು ಲಘು ಲಾಠಿ ಪ್ರಹಾರ ನಡೆಸಿದ್ದರು.

ಜೂ.18: ಉಡುಪಿ ಶ್ರೀಕೃಷ್ಣ ಮಠ ಹಾಗೂ ಕೊಲ್ಲೂರು ದೇವಳ ಭೇಟಿ ಮತ್ತು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸಕ್ಕಾಗಿ ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉಡುಪಿಗೆ ಮೊದಲ ಬಾರಿಗೆ ಆಗಮಿಸಿದ್ದರು.

ನ.19: ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಉಡುಪಿ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನೆ. ಕಾಂಗ್ರೆಸ್ ನಾಯಕ, ಮಾಜಿ ಸಚಿವ ಜುಪ್ರಕಾಶ್ ಹೆಗ್ಡೆ ಬಿಜೆಪಿಗೆ ಸೇರ್ಪಡೆ.

ನ.12: ಕಾಗಿನೆಲೆ ಸ್ವಾಮೀಜಿ ಪ್ರಥಮ ಬಾರಿಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ.

ಮೇ 8: ಕುಂಜಾರುಗಿರಿಯಲ್ಲಿ ಬೃಹತ್ ವುಧ್ವಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ.

ಜ. 30: ಮಾಜಿ ಪ್ರಧಾನಿ ದೇವೇಗೌಡ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ.

ಡಿ. 6: ರವಿಶಂಕರ್ ಗುರೂಜಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ.

-------------------

ಎಂಡೋ ಪೀಡಿತ ಒಂದೇ ಕುಟುಂಬದ ನಾಲ್ವರು ಆತ್ಯಹತ್ಯೆ!

ಜ.5ರಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಅಲಕ್ಕೆ ಎಂಡೋ ಸಲ್ಫಾನ್ ಪೀಡಿತ ಕುಟುಂಬದ ನಾಲ್ವರು (ತಂದೆ, ತಾಯಿ, ಇಬ್ಬರು ಗಂಡು ಮಕ್ಕಳು) ಕೆರೆಗೆ ಹಾರಿ ಆತ್ಮಹತ್ಯೆಗೈದ ಪ್ರಕರಣ ಇಡೀ ರಾಜ್ಯದಲ್ಲಿ ಚರ್ಚೆಗೆ ಕಾರಣವಾಯಿತು.

-------------------

ಎ. 4: ಅಹ್ಮದ್ ಖುರೇಷಿ ಮೇಲೆ ಸಿಸಿಬಿ ಪೊಲೀಸರು ನಡೆಸಿದ ದೌರ್ಜನ್ಯ ಖಂಡಿಸಿ ಮತ್ತು ಆತನ ಬಿಡುಗಡೆಗೆ ಒತ್ತಾಯಿಸಿ ಪೊಲೀಸ್ ಕಮಿಷನರ್ ಕಚೇರಿಗೆ ಪಿಎಫ್‌ಐ ಮುತ್ತಿಗೆ, ಲಾಠಿಜಾರ್ಜ್, ಹಲವರ ಬಂಧನ. ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಐಡಿ ಪೊಲೀಸರು ಮಂಗಳೂರಿಗೆ ಆಗಮನ.

ಜ.10: ಬೆಳ್ತಂಗಡಿಯ ನಡ ಗ್ರಾಮದ ಅಂತ್ರಾಯಪಲ್ಕೆ ಹೊಳೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತ್ಯು.

ಜ. 24: ಖೋಟಾನೋಟು ಚಲಾವಣೆ ಆರೋಪಿ ಅಬ್ದುಲ್ ಖಾದರ್‌ಗೆ 5 ವರ್ಷ ಕಠಿಣ ಶಿಕ್ಷೆ.

ಫೆ. 8: ರಾ.ಹೆ.ಯ ನಾಲ್ಕು ಕಡೆ ಟೋಲ್‌ಗೇ್ ಸ್ಥಾಪನೆ/ಸ್ಥಳೀಯರಿಂದ ಪ್ರತಿಭಟನೆ.

ಫೆ.10: ಎತ್ತಿನಹೊಳೆ ಯೋಜನೆ ವಿರೋಧಿಸಿ ಗಾಂಧಿಪಾರ್ಕ್ ಬಳಿ ಧರಣಿ, ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಹಲವರ ಸೆರೆ/ಬಿಡುಗಡೆ.

ಫೆ.15: ಕೋಟೆಕಾರ್‌ನಲ್ಲಿ ಉಪ್ಪಳದ ಗೂಂಡಾ ಕಾಲಿಯಾ ರಫೀಕ್‌ನ್ನು ಬರ್ಬರ ಕೊಲೆ. ಮೂವರ ಸೆರೆ.

ಮಾ.15: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಮೂಡುಬಿದಿರೆ -ಕಡಬ ತಾಲೂಕು ಮತ್ತು ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಘೋಷಣೆ. ಮಾ. 25: ಬಜ್ಪೆ ಎಎಸ್ಸೈ ಪ್ರವೀಣ್ ಪೋಕ್ಸೊ ಕಾಯ್ದೆಯಡಿ ಬಂಧನ. ನ್ಯಾಯಾಲಯಕ್ಕೆ ಹಾಜರುಪಡಿಸುವಾಗ 4ನೇ ಮಹಡಿಯಿಂದ ಹಾರಿ ಆತ್ಮಹತ್ಯೆ.

ಡಿ. 30: ದ.ಕ. ಜಿಲ್ಲೆಯ ಕಲ್ಲಡ್ಕದಲ್ಲಿ ಜೂನ್ ತಿಂಗಳಲ್ಲಿ ನಡೆದ ಮತೀಯ ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹಿಂದೂ ಜಾಗರಣ ವೇದಿಕೆಯ ಮುಖಂಡ ರತ್ನಾಕರ್ ಶೆಟ್ಟಿ ಹಾಗೂ ಕಲ್ಲಡ್ಕ ನಿವಾಸಿ ಇಬ್ರಾಹೀಂ ಖಲೀಲ್ ಎಂಬವರನ್ನು 6 ತಿಂಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದರು.

ಜು. 25: ರೌಡಿ ವಾಮಂಜೂರು ರೋಹಿಯ ಪುತ್ರ ಪವನ್‌ರಾಜ್ ಶೆಟ್ಟಿ ಎಂಬಾತನನ್ನು ಮತ್ತೊಂದು ರೌಡಿ ತಂಡವು ಮಾರಕಾಯುಧದಿಂದ ಕಡಿದು ಕೊಲೆ.

ಸೆ. 4: ಕೊಣಾಜೆ ಸಮೀಪದ ಇನೋಳಿಯಲ್ಲಿ ಮೂವರು ಕಾಲೇಜು ವಿದ್ಯಾರ್ಥಿಳು ನದಿಯಲ್ಲಿ ಮುಳುಗಿ ಮೃತ್ಯು.

ಸೆ. 8: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಕದ್ರಿ ೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಅ. 12: ಮುಕ್ಕಚ್ಚೇರಿ: ಝುಬೈರ್ ಹತ್ಯೆ ಪ್ರರಣ; ಐವರು ಆರೋಪಿಗಳ ಬಂಧನ.

ನ. 7: ಬಂಟ್ವಾಳ ತಾಲೂಕಿನ ಮುಲ್ಲರಪಟ್ಣದಲ್ಲಿ ಸ್ನಾನಕ್ಕೆ ತೆರಳಿದ್ದ ಐವರು ಬಾಲಕರು ನೀರು ಪಾಲು.

ನ. 7: ಕೆ.ಸಿ.ರೋಡ್‌ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸೊಸೈಟಿಯಲ್ಲಿ ಮಲಗಿದ್ದ ಮೂವರು ಭದ್ರತಾ ಸಿಬ್ಬಂದಿ ಮೃತ್ಯು.

ನ. 14: ಹುಣಸೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಉಳ್ಳಾಲದ ಒಂದೆೀ ಕುಟುಂಬದ ಮೂವರು ಮೃತ್ಯು.

ನ.17: ಖಾಸಗಿ ವೈದ್ಯರ ಮುಷ್ಕರ ದುಷ್ಪರಿಣಾಮಕ್ಕೆ .ಕ. ಜಿಲ್ಲೆಯಲ್ಲಿ ಇಬ್ಬರು ಮೃತ್ಯು.

ನ. 23: ಕರ್ನಾಟಕ ಕರಾವಳಿಯ ಹಿರಿಯ ವಿದ್ವಾಂಸರಲ್ಲೋರ್ವರಾದ ವೌಲಾನ ಸೈಯದ್ ಯೂಸುಫ್ ಸಾಹೇಬ್ ನಿಧನ. ನ.27: ಅಪಹರಣಕ್ಕೀಡಾಗಿದ್ದ ಕಾಟಿಪಳ್ಳ ಸಮೀಪದ ಸಫ್ವಾ್ ಹತ್ಯೆ: ಆರೋಪಿಗಳ ತಪ್ಪೊಪ್ಪಿಗೆ.

ನ. 28: ಐಒ ಬ್ಯಾಂಕ್ ಕುಳಾಯಿ ಶಾಖೆಯಲ್ಲಿ 55 ಕೋಟಿ ರೂ. ದುರ್ಬಳಕೆ ಆರೋಪ: ಮ್ಯಾನೇಜರ್ ಸಹಿತ ಐವರ ಬಂಧನ. ಡಿ.2: ಓಖಿ ಚಂಡಮಾರುತ ಪ್ರಭಾವ: ಉಳ್ಳಾಲ, ಸೋಮೇಶ್ವರದಲ್ಲಿ ತೀವ್ರಗೊಂಡ ಕಡಲ ಅಬ್ಬರ. ಎರಡು ಮನೆಗಳು ನಾಶ.

-------------------

ಉಡುಪಿ ಸಾವಿನ ಸರಣಿ

ಜೂ.15: ಅಜೆಕಾರು ಕಡ್ತಲ ಮೀಸಲು ಅರಣ್ಯದಲ್ಲಿ ಶಿಕಾರಿ ವೇಳೆ ಗುಂಡು ಹಾರಿಸಿ ಮರ ಕಡಿಯುತ್ತಿದ್ದ ಪಾಲ್‌ಜೆಡ್ಡುವಿನ ರವೀಂದ್ರ ನಾಯ್ಕ ಕೊಲೆ, ಮೂವರ ಬಂಧನ.

ಎ. 25: ಪಡು ಅಲೆವೂರು ಗ್ರಾಮದ ದುರ್ಗಾನಗರ ಎಂಬಲ್ಲಿ ಬಟ್ಟೆ ಒಗೆಯುತ್ತಿದ್ದ ತಾಯಿ, ಮಗು ಸಹಿತ ಕಲ್ಲುಕೋರೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿತ್ತು. ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆಯ ಯಮನಪ್ಪ ಅಸಂಗಿಯ ಪತ್ನಿ ದ್ಯಾಮವ್ವ ಯಾನೆ ನೀಲವ್ವ(29) ಹಾಗೂ ಅವರ ಎರಡನೆ ಮಗ ಹನುಮಂತ(5) ಮೃತ ದುದೈರ್ವಿಗಳು. ಇವರು 25 ವರ್ಷಗಳಿಂದ ಪಡುಅಲೆವೂರಿನ ುರ್ಗಾ ನಗರದಲ್ಲಿ ವಾಸವಾಗಿದ್ದರು.

ಎ. 27:  ಕಾರ್ಕಳ ಕಾಂತಾವರ ಬಾಳೆಹಿತ್ಲು ವಿನ ಸುರೇಖಾ ಪೂಜಾರಿ ಆತ್ಮಹತ್ಯೆಗೆ ಪ್ರಚೋದನೆ, ಹೊಸಮಾರಿನ ಶ್ರೀರಾಮ ಸೇನೆ ಕಾರ್ಯಕರ್ತ ರೋಶನ್ ಕೋಟ್ಯಾನ್ ಸಹಿತ ಮೂವರ ಸೆರೆ.

ಜು.13: ಪಡುಬೆಳ್ಳೆಯ ಜ್ಯುವೆಲ್ಲರಿ ಮಾಲಕ ಶಂಕರ ಆಚಾರ್ಯ, ಪತ್ನಿ ನಿರ್ಮಲಾ, ಮಕ್ಕಳಾದ ಶ್ರುತಿ, ಶ್ರೀಯಾ ಅನ್ನದಲ್ಲಿ ಸಯನೈಡ್ ಬೆರೆಸಿ, ಸೇವಿಸಿ ಆತ್ಮಹತ್ಯೆ.

ಮೇ. 30: ಕೋಟ ಬೇಳೂರು ಗ್ರಾಮದ ದೇಲಟ್ಟು ಎಂಬಲ್ಲಿ ಕೆರೆಗೆ ಬಿದ್ದು ಭಾರತಿ ಶೆಟ್ಟಿ ಹಾಗೂ ಅವರ ಇಬ್ಬರು ಮಕ್ಕಳಾದ ಪೃಥ್ವಿ ಶೆಟ್ಟಿ ಮತ್ತು ಪ್ರಜ್ಞಾ ಶೆಟ್ಟಿ ಮೃತ್ಯು.

ಡಿ.12: ಕೋಟ ವಿವೇಕ ಹೈಸ್ಕೂಲ್ ಜಂಕ್ಷನ್ ಬಳಿ ಆಲ್ಟೋ ಕಾರು ಮತ್ತು ಲಾರಿಗೆ ಢಿಕ್ಕಿ ಹೊಡೆದು ಬೆಣ್ಣೆಕುದ್ರುವಿನ ಗಿರಿಜಾ ಹಾಗೂ ಅವರ ಮಗ ಅವಿನಾಶ್ ಮೃತ್ಯು, ಮೆದುಳು ನಿಷ್ಕ್ರಿಯಗೊಂಡ ಗಾಯಾಳು ಕಸ್ತೂರಿಯ ಅಂಗಾಂಗ ದಾನ.

-------------------

ಕೋಮು ಹಿಂಸೆ

ಜ. 28: ಮಂಗಳೂರು ಉಳ್ಳಾಲ ಸಮೀಪದ ಕುಂಪಲ ನಿವಾಸಿ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಅಂಖಿತ್ ಪೂಜಾರಿಯಿಂದ ಮಧ್ಯರಾತ್ರಿ ವೇಳೆ ಆದಿಉಡುಪಿಯ ನೂರುಲ್ ಇಸ್ಲಾಮ್ ಮಸೀದಿಗೆ ಕಲ್ಲೆಸೆತ ಮತ್ತು ಕರಾವಳಿ ಬೈಪಾಸ್ ಬಳಿ ರಿಕ್ಷಾ ಚಾಲಕ ಹನೀಫ್ ಕೊಲೆ. ಫೆ.1ರಂದು ಆರೋಪಿಯ ಬಂಧನ.

ಎ. 24: ಗಂಗೊಳ್ಳಿ ಗಾಣದಮಕ್ಕಿ ಕೊರಗ ಕಾಲನಿಯಲ್ಲಿ ನಿಶ್ಚಿತಾರ್ಥ ಪ್ರಯುಕ್ತ ಗೋಮಾಂಸದ ಊಟ ಮಾಡುತ್ತಿದ್ದ ಕೊರಗ ಕುಟುಂಬದ ಮನೆಯ ಮೇಲೆ ದಾಳಿ ಮಾಡಿದ ಬಜರಂಗದಳದ ಕಾರ್ಯಕರ್ತರು ಮೂವರು ಕೊರಗ ಸಮುದಾಯದ ಯುವಕರಿಗೆ ಹಲ್ಲೆ ನಡೆಸಿ, ಗ್ರಾಪಂ ಸದಸ್ಯೆ ಶಕುಂತಳಾಗೆ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದರು.

-------------------

ಅಪರಾಧ

ಮಾ.17: ಕೇರಳದ ಚಿನ್ನಾಭರಣ ವ್ಯಾಪಾರಿ ದಿಲೀಪ್ ಟಿ.ಡಿ. ಅವರನ್ನು ಅಪಹರಿಸಿ 42 ಲಕ್ಷ ರೂ. ವೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ, ಏಳು ಮಂದಿ ಬಂಧನ.

ಸೆ.18: ಸುರತ್ಕಲ್ ಸಮೀಪ ರೈಲಿನಲ್ಲಿ ಮುಂಬೈಯ ಚಿನ್ನಾಭರಣ ಕಂಪೆನಿ ಸೇಲ್ಸ್‌ಮೆನ್ ರಾಜೇಂದ್ರ ಸಿಂಗ್‌ಗೆ ಪಿಸ್ತೂಲ್ ತೋರಿಸಿ 1.28 ಕೋಟಿ ರೂ. ವೌಲ್ಯದ 4.112 ಕೆ.ಜಿ. ತೂಕದ ಚಿನ್ನಾಭರಣ ದರೋಡೆ, ಏಳು ಮಂದಿ ಅಂತಾರಾಜ್ಯ ದರೋಡೆಕೋರರ ಬಂಧನ.

ಆ. 6: ರೈಲಿನಲ್ಲಿ ಇನ್ನಾ ಗ್ರಾಮದ ಸಂಜೀವ ಶೆಟ್ಟಿ ಹಾಗೂ ರತ್ನಾ ಶೆಟ್ಟಿ ದಂಪತಿಗೆ ಅಮಲು ಪದಾರ್ಥ ನೀಡಿ ಲಕ್ಷಾಂತರ ರೂ. ವೌಲ್ಯದ ನಗನಗದು ಲೂಟಿ, ಅಸ್ವಸ್ಥ ದಂಪತಿ ಮಣಿಪಾಲ ಆಸ್ಪತ್ರೆಗೆ ದಾಖಲು.

ಆ. 21: ಹೆಬ್ರಿ ಪೊಲೀಸರಿಂದ ಹೆಬ್ರಿ ಭೋಜ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಶಂಕಿತ ನಕ್ಸಲ್ ಈಶ್ವರ ಯಾನೆ ವಿೀರಮಣಿ ಉಡುಪಿ ಕೋರ್ಟ್‌ಗೆ ಹಾಜರು.

ಮಾ. 9: ಭ್ರಷ್ಟಾಚಾರ ನಿಗ್ರಹ ದಳದಿಂದ ಕೊಲ್ಲೂರು ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ಯರ ಮನೆ, ವಸತಿಗೃಹ, ಕಚೇರಿಗಳಿಗೆ ದಾಳಿ, ಅಾರ ಮೊತ್ತದ ಅಕ್ರಮ ಆಸ್ತಿ ಪತ್ತೆ.

ನ. 22: ನಾಡ ಬಾಂಬ್ ತಯಾರಿ ಹಾಗೂ ಮಾರಾಟ ಮಾಡುತ್ತಿದ್ದ ಆಲ್ಬಾಡಿಯ ಗುಣಕರ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ಹೆಬ್ರಿ ಕನ್ಯಾನದ ನಾಗೇಶ್ ನಾಯಕ್ ಬಂಧನ, ಒಟ್ಟು 33 ನಾಡ ಬಾಂಬ್‌ಗಳು ವಶ.

ಸೆ. 19: ಶಂಕರನಾರಾಯಣ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮುಖ್ಯ ಶಿಕ್ಷಕ ಶ್ರೀನಿವಾಸ ಜೋಶಿ ಪೊಕ್ಸೊ ಕಾಯ್ದೆಯಡಿ ಬಂಧನ.

ಜು. 5: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಜು.5ರಂದು ಸರಕಾರಿ ಬಸ್‌ನಲ್ಲಿ ಉಡುಪಿಯ ಬಾಲಕಿಯ ಸಾಮೂಹಿಕ ಅತ್ಯಾಚಾರ, ಮೂವರು ಚಾಲಕರು ಹಾಗೂ ನಿರ್ವಾಹಕರ ಬಂಧನ.

ಆ. 21: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಲು ಹವಾನಿಯಂತ್ರಿತ ಇನ್ನೋವಾ ಕಾರಿನ ವ್ಯವಸ್ಥೆ ಕಲ್ಪಿಸಿ ರಾಜಾತಿಥ್ಯ ನೀಡಿರುವ ಆರೋಪದಲ್ಲಿ ಎಎಸ್ಸೈ ಸಹಿತ ಮೂವರು ಪೊಲೀಸ್ ಸಿಬ್ಬಂದಿಯ ಅಮಾನತು.

ಎ. 4: ಪತ್ನಿಗೆ ಕಿರುಕುಳ ನೀಡಿದ ಆರೋಪದಲ್ಲಿ ಮಲ್ಪೆ ರಾಜ್ ಫಿಶ್‌ಮಿಲ್‌ನ ಟ್ಯಾಕ್ಟರ್ ಚಾಲಕ ಕುಮಾರ್ ಎಂಬಾತನನ್ನು ಠಾಣೆಗೆ ಕರೆದೊಯ್ದು ದೌರ್ಜನ್ಯ ಎಸಗಿದ ಆರೋಪದಲ್ಲಿ ಮಲ್ಪೆ ಪೊಲೀಸ್ ಪೇದೆ ಪ್ರಕಾಶ್ ಅಮಾನತು.

-------------------

ಒಖಿ ಚಂಡ ಮಾರುತ ಅಬ್ಬರಕ್ಕೆ ಡಿ.6ರಂದು ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್‌ಗಳು.

ಡಿ. 6: ಕರಾವಳಿ ಕಾವಲು ಪಡೆಯಿಂದ ಒಖಿ ಚಂಡ ಮಾರುತದ ಅಬ್ಬರಕ್ಕೆ ಉಡುಪಿ ಮಲ್ಪೆ ಆಳ ಸಮುದ್ರದಲ್ಲಿ ಸಿಲುಕಿದ್ದ 13 ಮೀನುಗಾರರ ರಕ್ಷಣೆ.

-------------------

ಜೀವಾವಧಿ ಶಿಕ್ಷೆ

ಮೇ. 24: ಬ್ರಹ್ಮಾವರ ಹೇರೂರು ಸುನಂದಾ ಎ.ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಯೋಗೀಶ್‌ಗೆ ಉಡುಪಿ ಕೋರ್ಟ್‌ನಿಂದ ಜೀವಾವಧಿ ಶಿಕ್ಷೆ.

ಜೂ. 28: ಕಾರ್ಕಳ ರೆಂಜಾಳ ಗ್ರಾಮದ ದಾಸಬೆಟ್ಟುವಿನಲ್ಲಿ ಅಜ್ಜನನ್ನು ಕೊಲೆಗೈದ ಮೊಮ್ಮಗ ರವಿವರ್ಮ ಜೈನ್‌ಗೆ ಜೀವಾವಧಿ ಶಿಕ್ಷೆ.

ಜು. 20: ಕೋಟ ಮಣೂರು ಗಿರಿಜಾ ಉರಾಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಕೆ.ವಿ.ಗೆ ಕುಂದಾಪುರ ಕೋರ್ಟ್‌ನಿಂದ ಕಠಿಣ ಜೀವಾವಧಿ ಶಿಕ್ಷೆ.

ಆ. 1: ಕಾರ್ಕಳ ಕಾಂತಾವರದ ಬಾರಾಡಿಯ ರಾಮ ಮೂಲ್ಯ ಕೊಲೆ ಪ್ರಕರಣದ ಆರೋಪಿ ಶೇಖರ ದೂಜಾ ಮೂಲ್ಯ, ಮಾಲತಿ ದಂಪತಿಗೆ ಉಡುಪಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ.

ಆ. 10: ನಾವುಂದ ಮಾಧವ ಪೂಜಾರಿ ಕೊಲೆ ಪ್ರಕರಣದ ಆರೋಪಿ ನರಸಿಂಹ ನಾಯ್ಕಗೆ ಕುಂದಾಪುರ ನ್ಯಾಯಾಲಯ ದಿಂದ ಜೀವಾವಧಿ ಶಿಕ್ಷೆ.

ಸೆ. 8: ಮಲ್ಪೆ ಕೆಮ್ಮಣ್ಣು ಗುಡ್ಯಾಂ ಶಕುಂತಳಾ ಕೊಲೆ ಪ್ರಕರಣದ ಆರೋಪಿಗಳಾದ ಹರೀಶ ಪೂಜಾರಿ ಮತ್ತು ಂತೋಷ ಪೂಜಾರಿಗೆ ಜೀವಾವಧಿ ಶಿಕ್ಷೆ.

ಸೆ. 14: ಕೋಟ ಕಾರ್ಕಡ ವಿಜಯ ಕಾರಂತ ಕೊಲೆ ಪ್ರಕರಣದ ಆರೋಪಿ ಶರತ್ ಪೂಜಾರಿಗೆ ಕುಂದಾಪುರ ಕೋರ್ಟ್‌ನಿಂದ ಜೀವಾವಧಿ ಶಿಕ್ಷೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)