varthabharthi

ವೈವಿಧ್ಯ

ಇಂದು ಸಾವಿತ್ರಿ ಬಾಯಿ ಫುಲೆಯವರ ಅವರ ಜನ್ಮದಿನ

ಅಕ್ಷರದಾತೆ ಸಾವಿತ್ರಿ ಬಾಯಿ ಫುಲೆ

ವಾರ್ತಾ ಭಾರತಿ : 2 Jan, 2018
ವೆಂಕಟೇಶ ಬೇವಿನಬೆಂಚಿ, ರಾಯಚೂರು

ಸಾವಿತ್ರಿಬಾಯಿಯವರು ಹೆಣ್ಣುಮಕ್ಕಳಿಗೆ ವಿದ್ಯೆ ಕಲಿಸಲು ಶಾಲೆಗೆ ಹೋಗುವಾಗ ಅವರನ್ನು ಶಾಲೆಗೆ ಹೋಗದಂತೆ ಕುತಂತ್ರಿ ಜಾತಿವಾದಿಗಳು ಅವರ ಮೇಲೆ ಕಲ್ಲು, ಸೆಗಣಿ ಮತ್ತು ಕೆಸರು ಎಸೆದರು. ದಾರಿಯಲ್ಲಿ ಮುಳ್ಳುಗಳನ್ನೂ ಹಾಕಿದರು. ಅವರನ್ನು ಅವಮಾನ ಮಾಡಿ ಅಶ್ಲೀಲವಾಗಿ ನಿಂದಿಸಿದರೂ, ಮಾನಸಿಕ, ದೈಹಿಕ ಹಲ್ಲೆ ಮಾಡಿದರೂ, ಅದಾವುದಕ್ಕೂ ಅಂಜದೆ, ಛಲಬಿಡದೆ ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸಿ ಅವರ ಬಾಳಿಗೆ ಬೆಳಕಾದರು. ಇವರ ತ್ಯಾಗದ ಫಲವೇ ಡಾ. ಅಂಬೇಡ್ಕರ್ ಅವರು ನಮ್ಮ ಸಂವಿಧಾನದಲ್ಲಿ ಸ್ತ್ರೀ ಶಿಕ್ಷಣಕ್ಕೆ ಹೆಚ್ಚು ಆದ್ಯತೆಯನ್ನು ಅವಕಾಶಗಳನ್ನು ನೀಡಿರುವುದನ್ನು ಕಾಣುತ್ತೇವೆ.

ಪ್ರಗತಿಗೆ  ವಿದ್ಯೆಯೇ ಮೂಲ. ಅಜ್ಞಾನದ ಕತ್ತಲೆಯನ್ನು ಅಳಿಸದೆ ಜ್ಞಾನದ ಬೆಳಕಿನ ಕಿರಣಗಳು ಮೂಡುವುದಿಲ್ಲ, ವಿದ್ಯೆ ಪ್ರತಿಯೊಬ್ಬರ ಬಾಳಿನ ಜೀವ ಸೆಲೆ ಎಂದು ತಿಳಿಸಿಕೊಟ್ಟ, ಜ್ಞಾನದ ಬೆಳಕಿಗಾಗಿ ಪರಿತಪಿಸಿ ಶೋಷಿತರ ಬಾಳಿನಲ್ಲಿ ಹೊಸ ಕಿರಣಗಳನ್ನು ಮೂಡಿಸಿದ ವರು ಆಧುನಿಕ ಭಾರತದ ಮೊದಲ ಅಕ್ಷರದಾತೆ ಸಾವಿತ್ರಿ ಬಾಯಿ ಫುಲೆ.

ಭಾರತದ ಇತಿಹಾಸದಲ್ಲಿ ಎಷ್ಟೋ ಸತ್ಯಗಳು ಈ ನೆಲದ ಚರಿತ್ರೆಯಲ್ಲಿ ಮುಚ್ಚಿ ಹೋಗಿವೆ. ಆ ಸತ್ಯದ ಇತಿಹಾಸದ ಪುಟಗಳನ್ನು ತೆರೆದಾಗಲೆ ಮುಚ್ಚಿ ಹೋದ ಸಾವಿತ್ರಿ ಬಾಯಿಯವರಂತಹ ಎಷ್ಟೋ ನೈಜ ಚರಿತ್ರೆಗಳು ನಮಗೆ ಕಾಣಸಿಗುತ್ತವೆ. ಡಾ.ಅಂಬೇಡ್ಕರ್ ಹೇಳಿದಂತೆ ‘ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು’ ಎನ್ನುವಂತೆ ಭಾರತ ನೆಲದ ಇತಿಹಾಸವನ್ನು ನೈಜ ಕಣ್ಣುಗಳಿಂದ ನೋಡಿದಾಗ ನಮಗೆ ಸಾಕಷ್ಟು ಸಮಾಜ ಪರಿವರ್ತನಾಕಾರರ ಚಳ ವಳಿಗಳು, ಹೋರಾಟಗಳು ಚರಿತ್ರೆಯಲ್ಲಿ ನಮಗೆ ಕಾಣ ಸಿಗುತ್ತವೆ.

18ನೇ ಶತಮಾನ ಕಾಲಘಟ್ಟದಲ್ಲಿ ಮಹಾರಾಷ್ಟ್ರದ ಸತಾರಾ ಜೆಲ್ಲೆಯ ನಾಯಿಗಾಂವ್ ಎಂಬ ಕುಗ್ರಾಮದಲ್ಲಿ 1831 ಜನವರಿ 3ರಂದು ಸಾವಿತ್ರಿ ಬಾಯಿ ಜನನವಾಯಿತು. ತಾಯಿ ಲಕ್ಷ್ಮೀಬಾಯಿ, ತಂದೆ ಖಂಡೋಜಿ ನೇವಸೆ ಪಾಟೀಲ್. ಈ ದಂಪತಿಯ ಮೂರು ಮಕ್ಕಳಲ್ಲಿ ಕೊನೆಯವಳು ಸಾವಿತ್ರಿಬಾಯಿ. ಖಂಡೋಜಿ ನೇವಸೆ ಪಾಟೀಲ್ ಅವರ ಸರಳತೆ ನ್ಯಾಯಪರತೆಯಿಂದಾಗಿ ಜನರ ಹೃದಯದಲ್ಲಿ ಉಳಿದುಬಿಟ್ಟಿದ್ದರು. ಇಂತಹ ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ ಬೆಳೆದು ಸಾರ್ಥಕ ಬದುಕನ್ನು ಕಂಡವರು ಸಾವಿತ್ರಿಬಾಯಿ.

ಸಾವಿತ್ರಿ ಬಾಯಿಯವರು ಬಾಲ್ಯದಲ್ಲಿ ಧೈರ್ಯವಂತೆ, ಹಠವಾದಿಯಾಗಿದ್ದರು. ಪ್ರತಿಯೊಂದನ್ನೂ ಪ್ರಶ್ನಿಸುವ ಗುಣವುಳ್ಳವಳಾಗಿದ್ದರು. ಅವರ ಕ್ರಿಯಾಶೀಲ ಗುಣವನ್ನು ಅರಿತ ತಂದೆ ಖಂಡೋಜಿಯವರು ಅಹಲ್ಯಾಬಾಯಿ, ತಾರಾಬಾಯಿ, ಝಲಕಾರಿಬಾಯಿ, ಝಾನ್ಸಿರಾಣಿ, ಮಂಡೋದರಿ, ಅರುಂಧತಿ, ಅವರ ಕಥೆಗಳನ್ನು ಮಗಳಿಗೆ ಹೇಳುತ್ತಿದ್ದರು. ಈ ಕಥೆಗಳೇ ಸಾವಿತ್ರಿ ಬಾಯಿಯವರು ಕ್ರಾಂತಿಕಾರಿ ವುಹಿಳೆಯಾಗಿ ತಯಾರಾಗಲು ಕಾರಣವಾದವು.

ಅಂದಿನ ಕಾಲದಲ್ಲಿ ಹೆಣ್ಣು ಮಕ್ಕಳನ್ನು 6-7 ವರ್ಷಕ್ಕೆ ವಿವಾಹ ಮಾಡಿಕೊಡುವ ಪದ್ಧತಿ ಜಾರಿಯಲ್ಲಿ ಇತ್ತು. ಅಂತಹ ಸ್ಥಿತಿಯಲ್ಲಿ ಸಾವಿತ್ರಿ ಬಾಯಿಯವರನ್ನು 1840ರಲ್ಲಿ ಧನಕನವಾಡಿ ಊರಿನ ಗೌರವಸ್ಥ ಮನೆತನದ ಗೋವಿಂದರಾವ್, ಚಿಮಣಾಬಾಯಿ ದಂಪತಿಯ ಮಗನಾದ ಜ್ಯೋತಿ ಬಾ ಫುಲೆಯವರೊಂದಿಗೆ ವಿವಾಹ ಮಾಡಿಕೊಡಲಾಯಿತು.

ಜ್ಯೋತಿ ಬಾ ಫುಲೆಯವರು ಮಹಾರಾಷ್ಟ್ರದ ಆಧುನಿಕ ಸಮಾಜದ ಕ್ರಾಂತಿಪುರುಷರು. ಇವರು ಸಮಾಜದ ಕೆಳವರ್ಗದ ಜನರ ನೋವುಗಳ ಪರಿಹಾರಕ್ಕಾಗಿ, ಬಿಡುಗಡೆಗಾಗಿ ಜೀವನವನ್ನೇ ಸವಿಸಿದ ಮಹಾನುಭಾವರು. ಅಂಧಃಕಾರದ ಜನರ ಬದುಕಿನಲ್ಲಿ ಜ್ಞಾನದ ದೀಪವನ್ನು ಹಚ್ಚಿ ಅವರ ಬಾಳಿಗೆ ಬೆಳಕಾದವರು. ಅಂತಹ ಚೇತನಕ್ಕೆ ಸಮಾಜದ ಬಗ್ಗೆ ಕಳಕಳಿಯ ಗುಣವುಳ್ಳ ಸಾವಿತ್ರಿ ಬಾಯಿ ಜ್ಯೋತಿ ಬಾ ಪತ್ನಿಯಾಗಿ ಬಂದರು. ಜ್ಯೋತಿ ಬಾಫುಲೆಯವರ ಪ್ರತೀ ಸಾಧನೆಯ ಹಾದಿಯಲ್ಲಿ ಸಾವಿತ್ರಿಯವರ ಹೆಜ್ಜೆ ಗುರುತು ಅಚ್ಚಳಿಯದೆ ಉಳಿದುಕೊಂಡಿವೆ.

ಸ್ವತಃ ಜ್ಯೋತಿ ಬಾ ಫುಲೆಯವರು ಸಾವಿತ್ರಿ ಬಾಯಿಯವರನ್ನು ಕುರಿತು, ‘‘ನಾನು ಸಮಾಜಮುಖಿಯಾದ ಯಾವುದೇ ಕಾರ್ಯವನ್ನು ಮಾಡಿದರೂ ಅದಕ್ಕೆ ಕೊನೆಯವರೆಗೆ ಪ್ರೇರೇಪಣೆ ನೀಡಿ ಯಶಸ್ಸು ಸಿಗುವಂತೆ ಮಾಡಿದ್ದೇ ನನ್ನ ಸಹಧರ್ಮಿಣಿ ಸಾವಿತ್ರಿ’’ ಎಂದಿದ್ದಾರೆ. ಇಂತಹ ಮಾನವ ಪ್ರೇಮಿ ನಿಶ್ಕಲ್ಮಶದ ನಕ್ಷತ್ರಗಳು ನಮ್ಮ ದೇಶದ ಅಧುನಿಕ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದವರು.

 ಅಂದು ಭಾರತದಲ್ಲಿ ಒಂದು ಧರ್ಮದ ಕಟ್ಟುಪಾಡಿನೊಳಗೆ ಕೆಲ ಜನಾಂಗವನ್ನು ಸಾವಿರಾರು ವರ್ಷಗಳವರೆಗೆ ಮನುಷ್ಯರಂತೆ ಕಾಣದೆ ಪಶುಗಳಿಗಿರುವ ಸ್ವಾತಂತ್ರ ಕೂಡ ಕೊಡದೆ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಪ್ರಕೃತಿಯಲ್ಲಿ ಸಕಲ ಜೀವರಾಶಿಗಳಿಗೆ ಸಿಗುವ ಗಾಳಿ, ನೀರು, ಕೂಡ ಆ ಸಮದಾಯಕ್ಕೆ ಸಿಗದಂತೆ ಮಾಡಿದ, ಧಾರ್ಮಿಕ ಬರ್ಬರತೆಯನ್ನು ಕಣ್ಣಾರೆ ಕಂಡ ಜ್ಯೋತಿ ಬಾ ದಂಪತಿಯ ಮಾನವೀಯ ಹೃದಯ ಮಿಡಿಯುತ್ತದೆ. ಅದ್ದರಿಂದ ಕೆಳ ಸಮುದಾಯದ ಸೇವೆಗಾಗಿ ಆ ಜನರ ವಿಮೋಚನೆಗಾಗಿ ಅವರು ಹೋರಾಡಲು ಮುಂದಾಗುತ್ತಾರೆ. ಅಂದು ಧರ್ಮ ಶಾಸ್ತ್ರಕ್ಕೆ ಸಿಲುಕಿದ ಮಹಿಳೆಯರ ಬದುಕು ಘನಘೋರವಾಗಿತ್ತು. ಸ್ತ್ರೀಯರನ್ನು ಭೋಗದ ವಸ್ತುವಾಗಿಸಿ, ಹೆರುವ ಯಂತ್ರವಾಗಿಸಿ ಪುರುಷನ ಆಸೆಗಳನ್ನು ಪೂರೈಸುವ ದಾಸಿಯರನ್ನಾಗಿ ಬಿಂಬಿಸಲಾಗಿತ್ತು, ವಿದ್ಯೆ ಬುದ್ಧ್ದಿಗೆ ಸ್ತ್ರೀ ಅರ್ಹಳಲ್ಲ, ಪುರುಷನ ಸೇವೆಗಾಗಿಯೇ ಹುಟ್ಟಿದವಳು ಹೆಣ್ಣು ಎಂದು ಧಾರ್ಮಿಕ ಕಟ್ಟುಪಾಡುಗಳನ್ನು ಹೆಣ್ಣಿನ ಬದುಕಿನಲ್ಲಿ ಹೇರಲಾಗಿತ್ತು. ಅಂತಹ ಜೀವವಿರೋಧಿ ಸಂಸ್ಕೃತಿಗೆೆ ಮತ್ತು ಧರ್ಮಕ್ಕೆ ಮರ್ಮಾಘಾತ ನೀಡಿದವರು ಜೋತಿ ಬಾ ಫುಲೆ ದಂಪತಿ.

ದೇಶದ ಚರಿತ್ರೆಯಲ್ಲೇ ಮೊದಲ ಬಾರಿಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿ ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂದು ಭಾವಿಸಿದವರು ಫುಲೆ ದಂಪತಿ. ತಮ್ಮ ಪತಿಯಿಂದ ಅಕ್ಷರ ಕಲಿತ ಸಾವಿತ್ರಿಬಾಯಿ 1847ರಲ್ಲಿ ಶ್ರೀಮತಿ ಮಿಚಲ್‌ರವರ ನಾರ್ಮಲ್ ಸ್ಕೂಲ್‌ನಲ್ಲಿ ಶಿಕ್ಷಕಿ ತರಬೇತಿ ಪಡೆದು ಮಹಾರಾಷ್ಟ್ರದಲ್ಲಿಯೇ ತರಬೇತಾದ ಮೊದಲ ಶಿಕ್ಷಕಿಯಾದರು., ಅಷ್ಟೇ ಅಲ್ಲ ದೇಶದಲ್ಲೇ ಮೊದಲ ಶಿಕ್ಷಕಿಯಾಗಿ ಖ್ಯಾತಿಪಡೆದರು.

 1848ರಲ್ಲೇ ಹೆಣ್ಣು ಮಕ್ಕಳಿಗಾಗಿ ಕನ್ಯಾಶಾಲೆ ಪ್ರಾರಂಭಿಸಿ, ಅಕ್ಷರ ಬೀಜವನ್ನು ಬಿತ್ತಿ, ಜ್ಞಾನದ ಬೆಳಕನ್ನು ಮೂಡಿಸಿದರು. ಮತ ಧರ್ಮ ಭೇದವಿಲ್ಲದೆ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಹೆಣ್ಣಿನ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳ ವಿರುದ್ಧ ಹೋರಾಡಿ ಸಂಪ್ರದಾಯವಾದಿಗಳನ್ನು ಎದುರು ಹಾಕಿಕೊಳ್ಳುತ್ತಾರೆ. ಸಾವಿತ್ರಿಬಾಯಿಯವರು ಹೆಣ್ಣುಮಕ್ಕಳಿಗೆ ವಿದ್ಯೆ ಕಲಿಸಲು ಶಾಲೆಗೆ ಹೋಗುವಾಗ ಅವರನ್ನು ಶಾಲೆಗೆ ಹೋಗದಂತೆ ಕುತಂತ್ರಿ ಜಾತಿವಾದಿಗಳು ಅವರ ಮೇಲೆ ಕಲ್ಲು, ಸೆಗಣಿ ಮತ್ತು ಕೆಸರು ಎಸೆದರು. ದಾರಿಯಲ್ಲಿ ಮುಳ್ಳುಗಳನ್ನೂ ಹಾಕಿದರು. ಅವರನ್ನು ಅವಮಾನ ಮಾಡಿ ಅಶ್ಲೀಲವಾಗಿ ನಿಂದಿಸಿದರೂ, ಮಾನಸಿಕ, ದೈಹಿಕ ಹಲ್ಲೆ ಮಾಡಿದರೂ, ಅದಾವುದಕ್ಕೂ ಅಂಜದೆ, ಛಲಬಿಡದೆ ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸಿ ಅವರ ಬಾಳಿಗೆ ಬೆಳಕಾದರು. ಇವರ ತ್ಯಾಗದ ಫಲವೇ ಡಾ. ಅಂಬೇಡ್ಕರ್ ಅವರು ನಮ್ಮ ಸಂವಿಧಾನದಲ್ಲಿ ಸ್ತ್ರೀ ಶಿಕ್ಷಣಕ್ಕೆ ಹೆಚ್ಚು ಆದ್ಯತೆಯನ್ನು ಅವಕಾಶಗಳನ್ನು ನೀಡಿರುವುದನ್ನು ಕಾಣುತ್ತೇವೆ.

ಸಂಪ್ರದಾಯವಾದಿಗಳಿಗೆ ಹೆಣ್ಣು ಮಕ್ಕಳು ಅಕ್ಷರ ಕಲಿಯುವುದು ಸರಿಕಾಣಲಿಲ್ಲ, ಅದರಲ್ಲ್ಲೂ ಶಿಕ್ಷಕಿಯಾಗುವುದು ಎಂದರೆ ಮಹಾದ್ರೋಹವಾಗಿತ್ತು. ಹೀಗಾಗಿ ಜಾತಿವಾದಿಗಳು ಸಾವಿತ್ರಿ ಬಾಯಿವರ ಮಾವ, ಗೋವಿಂದರಾವ್ ಫುಲೆಯವರಿಗೆ ಜೀವ ಬೆದರಿಕೆ ಹಾಕುತ್ತಾರೆ. ಇದಕ್ಕೆ ಭಯಪಟ್ಟ ಗೋವಿಂದರಾವ್ ಅವರು ಸಾವಿತ್ರಿ ಬಾಯಿ ಮತ್ತು ಜ್ಯೋತಿ ಬಾರಿಗೆ ಶೂದ್ರರಿಗೆ ಮತ್ತು ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸುವುದನ್ನು ನಿಲ್ಲಿಸಲು ಒತ್ತಾಯಿಸುತ್ತಾರೆ. ಒಪ್ಪದಿದ್ದಾಗ ಅವರನ್ನು ಮನೆಯಿಂದ ಹೊರಗೆ ಹಾಕುತ್ತಾರೆ. ಆದರೂ ದಂಪತಿ ಮನೆಯಿಂದ ಹೊರಬಂದು ಸಮಾಜ ಸೇವೆಗಾಗಿ ನಿಲ್ಲುತ್ತಾರೆ.

1851ರಲ್ಲಿ ದಲಿತರಿಗಾಗಿಯೇ ಮೊದಲು ಶಾಲೆ ಪ್ರಾರಂಭಿಸಿದ ಕೀರ್ತಿ ಜ್ಯೋತಿ ಬಾ ಫುಲೆ ದಂಪತಿಗೆ ಸಲ್ಲುತ್ತದೆ. ಈ ದಂಪತಿಯ ಪ್ರಯತ್ನದ ಫಲವಾಗಿಯೇ ಬ್ರಿಟಿಷರು ಹಂಟರ್ ಕಮಿಷನ್ ನೇಮಿಸಿದರು. ಹಂಟರ್ ಕಮಿಷನ್ ಮುಂದೆ ಪ್ರಮುಖ ಬೇಡಿಕೆಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಭಾರತದ ಪ್ರತೀ ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆಯಬೇಕು. ಶೂದ್ರ, ಅತಿ ಶೂದ್ರ ಮಕ್ಕಳಿಗೆ ಶಿಷ್ಯವೇತನ ನೀಡಬೇಕು, ಹಾಸ್ಟೆಲ್ ಸೌಲಭ್ಯ ನೀಡಬೇಕು ಎನ್ನುವ ಬೇಡಿಕೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಯಿತು. ಈ ಕಾರಣಕ್ಕಾಗಿ ಶೂದ್ರರು ಶಿಕ್ಷಣ ಪಡೆಯಲು ಸಾಧ್ಯವಾಯಿತು.

1864ರಲ್ಲಿ ವಿಧವಾ ವಿವಾಹ ನೆರವೇರಿಸುವುದರ ಮೂಲಕ ಕ್ರಾಂತಿಯನ್ನೇ ಮಾಡುತ್ತಾರೆ. ವಿಧವೆಯರು ತಾವು ಹೆತ್ತ ಮಕ್ಕಳನ್ನು ಪೋಷಿಸಲು 1863ರಲ್ಲಿ ಅವರಿಗಾಗಿ ಅನಾಥಾಲಯಗಳನ್ನು ಪ್ರಾರಂಭಿಸುತ್ತಾರೆ. ‘ಬಾಲಹತ್ಯಾ ನಿಷೇಧಕ ಪ್ರಸೂತಿ ಗೃಹ’ವನ್ನು ಆರಂಭಿಸುತ್ತಾರೆ. ಸ್ವತಃ ಜ್ಯೋತಿ ಬಾ ದಂಪತಿಗೆ ಮಕ್ಕಳಾಗದಾಗ ಕಾಶಿಬಾಯಿ ಎಂಬ ಬ್ರಾಹ್ಮಣ ವಿಧವೆಯ ಕೂಸನ್ನು ದತ್ತು ಪಡೆದು ಮಗನೆಂದು ಸ್ವೀಕರಿಸಿ ಓದಿಸಿ ಡಾಕ್ಟರ್‌ನ್ನಾಗಿ ಮಾಡುತ್ತಾರೆ. ತಮ್ಮ ಎಲ್ಲಾ ಆಸ್ತಿಯನ್ನು ಆ ಮಗುವಿನ ಹೆಸರಿಗೆ ಬರೆಯುತ್ತಾರೆ. ವಿಧವೆಯರಿಗೆ ಪುನರ್ವಿವಾಹ ಮಾಡಿದ ಪ್ರಥಮ ಮಹಿಳೆ ಸಾವಿತ್ರಿಬಾಯಿಯವರು. ಮೇಲ್ಜಾತಿ ವಿಧವೆಯರ ಕೇಮುಂಡನವನ್ನು ತಡೆಯಲು ಕ್ಷೌರಿಕರನ್ನು ಸಂಘಟಿಸಿ ಧರ್ಮ ಸಂಸ್ಕೃತಿ ಹೆಸರಿನಲ್ಲಿ ನಡೆಯುವ ಕೆಟ್ಟ ಸಂಪ್ರದಾಯವನ್ನು ವಿರೋಧಿಸುತ್ತಾರೆ. ಬಾಲ್ಯವಿವಾಹ ವಿರೋಧಿ ಚಳವಳಿ ರೂಪಿಸುತ್ತಾರೆ. ಧರ್ಮದ ಹೆಸರಿನಲ್ಲಿ ತಾರತಮ್ಯ ವೈಷಮ್ಯವಾಗದಿರಲೆಂದು 1873ರಲ್ಲಿ ಸತ್ಯಶೋಧಕ ಸಮಾಜವನ್ನು ಪತಿಯ ನಿರ್ದೇಶನದಲ್ಲಿ ಮುನ್ನಡೆಸುತ್ತಾರೆ. 1880ರಲ್ಲಿ ಸರಕಾರದ ಹೆಂಡದ ಅಂಗಡಿಗಳು ಹೆಚ್ಚಾಗಿರುವುದನ್ನು ವಿರೋಧಿಸಿ ಪತಿಯ ಜೊತೆ ಸೇರಿ ಸರಕಾರಕ್ಕೆ ಎಚ್ಚರಿಕೆ ನೀಡಿ ಮಾದರಿ ಸಮಾಜ ಸುಧಾರಕೆಸಿಕೊಳ್ಳುತ್ತಾರೆ.

ಸಾವಿತ್ರಿ ಬಾಯಿಯವರು ಶಿಕ್ಷಕಿ, ಸುಧಾರಕಿ ಅಷ್ಟೇ ಅಲ್ಲ ಪ್ರಭಾವಶಾಲಿ ಭಾಷಣಗಾರ್ತಿ ಹಾಗೂ ಆಡಳಿತಗಾರ್ತಿ ಆಗಿದ್ದರು. ಅವರು ಉತ್ತಮ ಲೇಖಕಿ ಕವಯಿತ್ರಿಯೂ ಆಗಿದ್ದರು. ಕಾವ್ಯಫುಲೆ ಹೆಸರಿನ ಕವನ ಸಂಕಲನ 1854ರಲ್ಲಿ ಹೊರತಂದಿದ್ದಾರೆ.

ಸಮಾಜದ ಬಗ್ಗೆ ಕಕ್ಕುಲತೆ, ಪ್ರೀತಿ ಇದ್ದ ಸಾವಿತ್ರಿಬಾಯಿಯವರು 1876-1896ರಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಆವರಿಸಿದಾಗ ಬರಗಾಲ ಪೀಡಿತರ ನೆರವಿಗೆ ಬ್ರಿಟಿಷ್ ಸರಕಾರ ಮುಂದಾಗಲು ಒತ್ತಾಯಿಸುತ್ತಾರೆ. 1897ರಲ್ಲಿ ಪುಣೆಯಲ್ಲಿ ಭಂಕಾರ ಪ್ಲೇಗ್ ಹಾವಳಿ ಶುರುವಾಗುತ್ತದೆ. ಆ ಸೋಂಕು ಸುತ್ತಮುತ್ತಲಿನ ಹಳ್ಳಿಗಳಿಗೂ ಹಬ್ಬುತ್ತದೆ. ಲೆಕ್ಕವಿಲ್ಲದಷ್ಟು ಜನ ಸಾವಿಗೀಡಾಗುತ್ತಾರೆ, ಆಗ ಅವರ ಸಾಕು ಮಗ ಡಾ.ಯಶವಂತ ಅನೇಕ ರೋಗಿಗಳಿಗೆ ನೆರವಾಗುತ್ತಾರೆ. ಸಾವಿತ್ರಿ ಬಾಯಿಫುಲೆಯವರು ಮನೆಮನೆಗೂ ಹೋಗಿ ರೋಗಿಗಳನ್ನು ಗುರುತಿಸಿ ಚಿಕಿತ್ಸೆಗಾಗಿ ಯಶವಂತರ ಬಳಿ ಕರೆದುಕೊಂಡು ಬರುತ್ತಾರೆ. ಸೇವೆ ಮಾಡುತ್ತಿರುವಾಗಲೇ ಸಾವಿತ್ರಿ ಬಾಯಿ ಅವರಿಗೂ ಪ್ಲೇಗ್ ತಗಲಿ ಅದರಲ್ಲಿಯೇ ಕೊನೆಯುಸಿರೆಳೆಯುತ್ತಾರೆ. ಸಮಾಜದ ಕೆಳಸ್ತರದ, ಮಹಿಳೆಯರ ಆಶಾಕಿರಣವೊಂದು ಸೇವೆಯ ಸಾರ್ಥಕತೆಯಿಂದಲೇ ಮರೆಯಾಗುತ್ತದೆ.

ಹೆಣ್ಣು ಮಕ್ಕಳಿಗೆ ಅಕ್ಷರದ ಬೆಳಕು ಕೊಟ್ಟು ಮಹಿಳೆಯರು ಸ್ವಾಭಿಮಾನಿಗಳಾಗಿ ಬದುಕಲು ಜೀವ ಸವೆಸಿದ ಈ ಮಹಾ ವ್ಯಕ್ತಿತ್ವಕ್ಕೊಂದು ಅಕ್ಷರ ನಮನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)