varthabharthi

ನಿಮ್ಮ ಅಂಕಣ

ನಿರ್ಲಕ್ಷ್ಯಕ್ಕೀಡಾದ ಭಾಜಪ ರಾಜ್ಯ ನಾಯಕರು

ವಾರ್ತಾ ಭಾರತಿ : 3 Jan, 2018
ಕು.ಸ.ಮಧುಸೂದನ ನಾಯರ್, ರಂಗೇನಹಳ್ಳಿ

ಬಹಳ ಹಿಂದಿನಿಂದಲೂ ಬಹುಶ: ಮಾಜಿ ಪ್ರಧಾನಮಂತ್ರಿಗಳಾದ ದಿವಂಗತ ಇಂದಿರಾಗಾಂಧಿಯವರ ಕಾಲದಿಂದಲೂ ಕಾಂಗ್ರೆಸ್‌ಪಕ್ಷ ಹೈಕಮಾಂಡ್ ಸಂಸ್ಕೃತಿಯನ್ನು ಪಾಲಿಸಿಕೊಂಡು ಬರುತ್ತಿದ್ದು, ರಾಜ್ಯನಾಯಕರಿಗೆ ಯಾವುದೇ ಸ್ವಾತಂತ್ರ ನೀಡುತ್ತಿಲ್ಲವೆಂಬ ಆರೋಪವನ್ನು ಜನತಾ ಪರಿವಾರ, ಭಾಜಪ ಸೇರಿದಂತೆ ಬಹುತೇಕ ಎಲ್ಲ ವಿರೋಧ ಪಕ್ಷಗಳೂ ಮಾಡುತ್ತಲೇ ಬರುತ್ತಿವೆ. ಈ ಹೈಕಮಾಂಡ್ ಸಂಸ್ಕೃತಿಗೆ ಗಾಂಧಿ ಕುಟುಂಬದ ವಂಶ ಪಾರಂಪರ್ಯ ಅಡಳಿತವನ್ನು ತಳಕು ಹಾಕುತ್ತ, ಕಾಂಗ್ರೆಸ್ ಯಾವತ್ತಿಗೂ ಸ್ಥಳೀಯ ನಾಯಕತ್ವವನ್ನು ಬೆಳೆಯಲು ಮುಕ್ತ ಅವಕಾಶ ನೀಡುತ್ತಿಲ್ಲ ಎಂಬ ಅರೋಪವನ್ನು ಮಾಡುತ್ತಲೇ ಬಂದಿರುವುದನ್ನು ನಾವು ನೋಡಬಹುದಾಗಿದೆ. ಟಿಕೆಟ್ ಹಂಚಿಕೆಯಿಂದ ಹಿಡಿದು, ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ತನಕವೂ ದಿಲ್ಲಿಯ ನಾಯಕರೇ ನಿರ್ಧಾರ ತೆಗೆದುಕೊಳ್ಳುತ್ತಾರೆಂಬುದು ಕಾಂಗ್ರೆಸ್ ಮೇಲಿರುವ ಗುರುತರ ಆರೋಪ.

 ಒಂದು ರಾಷ್ಟ್ರೀಯ ಪಕ್ಷವಾಗಿ ತಾನು ಕಾಂಗ್ರೆಸ್‌ಗಿಂತ ವಿಭಿನ್ನವಾಗಿ ನಡೆದುಕೊಳ್ಳುವ ಪಕ್ಷವೆಂದು ತನಗೆ ತಾನೇ ಹೇಳಿಕೊಳ್ಳುತ್ತ ಬಂದ ಭಾಜಪ ಇವತ್ತು ಹೈಕಮಾಂಡ್ ಸಂಸ್ಕೃತಿಯಲ್ಲಿ ಕಾಂಗ್ರೆಸ್‌ನ್ನು ಮೀರಿಸುವಂತೆ ನಡೆದುಕೊಳ್ಳುತ್ತಿದೆ. ಇಡೀ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಂತೆ ನಡೆದುಕೊಳ್ಳುತ್ತಿರುವ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಮತ್ತು ಭಾಜಪದ ರಾಷ್ಟ್ರಾಧ್ಯಕ್ಷರೂ ಆದ ಮೋದಿಯವರ ಪರಮಾಪ್ತರಾದ ಅಮಿತ್ ಶಾ ಸದ್ಯಕ್ಕೆ ಭಾಜಪದ ಹೈಕಮಾಂಡ್ ಅಗಿದ್ದು, ಪಕ್ಷದೊಳಗಿನ ಸಕಲ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿರುವುದು ಇವತ್ತು ಗುಟ್ಟಾಗಿಯೇನೂ ಉಳಿದಿಲ್ಲ. ಅದು ಯಾವುದೇ ರಾಜ್ಯಗಳ ಚುನಾವಣೆಯೇ ಇರಲಿ ಮೋದಿ ಮತ್ತು ಶಾ ಜೋಡಿಯೇ ಅಲ್ಲಿಯ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಪ್ರಣಾಳಿಕೆ ಪ್ರಚಾರಗಳವರೆಗೂ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳುವ ಮಟ್ಟಿಗೆ ಸ್ಥಳೀಯ ನಾಯಕತ್ವವನ್ನು ನಿರ್ಲಕ್ಷಿಸುತ್ತಾ ಬರುತ್ತಿದ್ದಾರೆ.

ಇದಕ್ಕೆ ತೀರಾ ಇತ್ತೀಚೆಗಿನ ಉದಾಹರಣೆಯೆಂದರೆ ಮೊನ್ನೆ ಮುಗಿದ ಗುಜರಾತ್ ಚುನಾವಣೆ! ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಚುನಾವಣಾ ಪ್ರಚಾರದವರೆಗೂ ಸಕಲವನ್ನೂ ನಿರ್ವಹಿಸಿದ್ದು ಮತ್ತದೇ ಮೋದಿ-ಶಾ ಜೋಡಿಯೇ. ಕನಿಷ್ಠ ಚುನಾವಣಾ ಪ್ರಚಾರಗಳ ರ್ಯಾಲಿಗಳಲ್ಲಿಯಾಗಲಿ, ಇತರ ಬಹಿರಂಗ ಸಭೆಗಳಲ್ಲಾಗಲಿ ಒಬ್ಬನೇ ಒಬ್ಬ ಗುಜರಾತಿ ಪ್ರಾದೇಶಿಕ ನಾಯಕನ ಪಾತ್ರ ಇತ್ತೆಂದು ತೋರಿಸುವ ಯಾವ ಕುರುಹೂ ಇರಲಿಲ್ಲ. ಗುಜರಾತಿನ ಒಬ್ಬನೇ ಒಬ್ಬ ಸ್ಥಳೀಯ ನಾಯಕನಿಗೂ, ಮುಖ್ಯಮಂತ್ರಿ ರೂಪಾನಿಯವರೂ ಸೇರಿದಂತೆ, ಒಂದು ಪತ್ರಿಕಾ ಹೇಳಿಕೆ ನೀಡುವ ಸ್ವಾತಂತ್ರವೂ ಇರಲಿಲ್ಲ. ಅಷ್ಟರ ಮಟ್ಟಿಗೆ ಭಾಜಪದ ಆ ಎರಡು ವ್ಯಕ್ತಿಗಳ ಹೈಕಮಾಂಡ್ ಪಕ್ಷವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು.

ಇದೀಗ ಕರ್ನಾಟಕದಲ್ಲಿಯೂ ಅಂತಹುದೇ ಬೆಳವಣಿಗೆಗಳು ನಡೆಯುತ್ತಿರುವುದನ್ನು ನಾವು ನೋಡಬಹುದಾಗಿದೆ. ಮೊನ್ನೆ ಕರ್ನಾಟಕಕ್ಕೆ ಬಂದು ಹೋದ ಅಮಿತ್ ಶಾ, ಭಾಜಪದ ನಾಯಕರಿಗೆ ನೀಡಿರುವ ಸೂಚನೆಗಳನ್ನು (ಖಂಡಿತಾ ಅವು ಸೂಚನೆಗಳಂತೂ ಅಲ್ಲ, ಬದಲಿಗೆ ಆದೇಶಗಳು ಎನ್ನಬಹುದಷ್ಟೆ!) ಸೂಕ್ಷ್ಮವಾಗಿ ಗಮನಿಸಿದರೆ ಭಾಜಪದ ಕೇಂದ್ರ ನಾಯಕರಿಗೆ ರಾಜ್ಯ ಭಾಜಪದ ನಾಯಕರ ಮೇಲೆ ವಿಶ್ವಾಸ ಇಲ್ಲದೆ ಇರುವುದನ್ನೂ, ಜೊತೆಗೆ ಅವರ ಸರ್ವಾಧಿಕಾರಿ ಧೋರಣೆಯನ್ನೂ ಅರ್ಥಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು.

ಮೊದಲನೆಯದು, ಅಮಿತ್ ಶಾ ರಾಜ್ಯದ ಯಾವುದೇ ನಾಯಕರು, ಪಕ್ಷದ ಪರಿವರ್ತನಾ ಯಾತ್ರೆಯಲ್ಲಾಗಲಿ ಇನ್ಯಾವುದೇ ಬಹಿರಂಗ ಸಭೆಗಳಲ್ಲಾಗಲಿ ಮುಂದಿನ ಚುನಾವಣೆಯ ಟಿಕೆಟ್ ಹಂಚಿಕೆಯ ಬಗ್ಗೆ ಮಾತನಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ರಾಜ್ಯದ ಯಾವುದೇ ನಾಯಕರೂ ಅಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ ತಲೆಹಾಕಬಾರದೆಂಬುದು ಈ ಆದೇಶದ ಉದ್ದೇಶವಾಗಿದೆ. ಶಾ ಮುಂದುವರಿಯುತ್ತ, ಯಾರೊಬ್ಬರೂ ಯಾವುದೇ ಸಮಾವೇಶದಲ್ಲಿ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಬಾರದೆಂದು ಆದೇಶ ನೀಡಿದ್ದಾರೆ. ಇದು ಪರೋಕ್ಷವಾಗಿ ರಾಜ್ಯ ಭಾಜಪದ ಅಧ್ಯಕ್ಷರಾದ ಯಡಿಯೂರಪ್ಪನವರನ್ನೇ ಗುರಿಯಾಗಿಸಿಕೊಂಡು ಮಾಡಿದ ಆದೇಶ ಎನ್ನಬಹುದು. ಯಾಕೆಂದರೆ ಈಗಾಗಲೇ ಪರಿವರ್ತನಾ ಯಾತ್ರೆಗಳು ನಡೆದ ಹಲವಾರು ಕ್ಷೇತ್ರಗಳಲ್ಲಿ ವೇದಿಕೆಯ ಮೇಲೆಯೇ ಇಂತಹವರೇ ಈ ಕ್ಷೇತ್ರದ ಅಭ್ಯರ್ಥಿ ಎಂದು ಯಡಿಯೂರಪ್ಪನವರು ಘೋಷಣೆ ಮಾಡಿದ್ದು(ಅಂದಾಜು ಇಪ್ಪತ್ತೈದು ಅಭ್ಯರ್ಥಿಗಳನ್ನು ಯಡಿಯೂರಪ್ಪನವರು ಈಗಾಗಲೇ ಘೋಷಣೆ ಮಾಡಿಯಾಗಿದೆ.) ಇದನ್ನು ಸಹಿಸದ ಭಾಜಪದ ಇತರ ನಾಯಕರ ಚಿತಾವಣೆಯಂತೆ ಅಮಿತ್ ಶಾ, ಅಭ್ಯರ್ಥಿಗಳ ಆಯ್ಕೆಯನ್ನು ಕೇಂದ್ರ ಸಮಿತಿಯೇ ಮಾಡುತ್ತದೆಯಾದ್ದರಿಂದ ರಾಜ್ಯದ ಯಾವುದೇ ನಾಯಕರೂ ಆ ಬಗ್ಗೆ ತುಟಿ ಬಿಚ್ಚುವಂತಿಲ್ಲ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಅಲ್ಲಿಗೆ ಪಕ್ಷವೊಂದರ ರಾಜ್ಯಾಧ್ಯಕ್ಷರಿಗೆ ಇರಬಹುದಾದ ಪರಮಾಧಿಕಾರವನ್ನು ಭಾಜಪದ ಹೈಕಮಾಂಡ್‌ಕಿತ್ತುಕೊಂಡಂತಾಯಿತು. ನಾಮಪತ್ರದ ಬಿ ಫಾರಂಗೆ ಸಹಿ ಹಾಕುವ ಅಧಿಕಾರ ಉಳ್ಳ ಅಧ್ಯಕ್ಷರಿಗೇ ಅಭ್ಯರ್ಥಿಗಳ ಆಯ್ಕೆಯ ಅಧಿಕಾರ ಇಲ್ಲವೆಂದಾದರೆ ಆ ಅಧ್ಯಕ್ಷ ಗಾದಿ ಕೇವಲ ರಬ್ಬರ್ ಸ್ಟಾಂಪ್ ಮಟ್ಟಕ್ಕೆ ಇಳಿದಂತಾಗುತ್ತದೆ. ಪಕ್ಷದ ಟಿಕೆಟ್‌ಗಳನ್ನು ಅರ್ಹತೆ ಆಧರಿಸಿಯೇ ನೀಡಲಾಗುವುದೆಂಬ ಮಾತಿನ ಹಿಂದೆ ರಾಜ್ಯದ ನಾಯಕರಿಗೆ ಅರಿವಾಗದ ಅಭ್ಯರ್ಥಿಗಳ ಅರ್ಹತೆ, ಗೆಲ್ಲುವ ತಾಕತ್ತು ಕೇಂದ್ರದ ನಾಯಕರಿಗೆ ಅರ್ಥವಾಗಿ ಬಿಡುತ್ತದೆ ಎನ್ನುವುದಕ್ಕಿಂತ ರಾಜ್ಯದ ನಾಯಕರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವುದೇ ಆಗಿದೆ. ಇದು ದಿಲ್ಲಿ ಕೇಂದ್ರಿತ ಸರ್ವಾಧಿಕಾರಿ ಧೋರಣೆಯ ಪ್ರತೀಕವೇ ಆಗಿದೆ.

ಇನ್ನ್ನ್ನು ಮುಂದುವರಿದ ಶಾ, ವೀರಶೈವ ಲಿಂಗಾಯತ ವಿವಾದದಲ್ಲಿ ಭಾಜಪದ ರಾಜ್ಯ ನಾಯಕರು ತಟಸ್ಥರಾಗಿರಬೇಕೆಂದೂ, ಆ ಹೋರಾಟದಲ್ಲಿ ಯಾರೂ ಸಕ್ರಿಯವಾಗಿ ಪಾಲ್ಗೊಳ್ಳಬಾರದೆಂದೂ ಆದೇಶಿಸಿದ್ದಾರೆ. ಇದು ಒಂದು ಪಕ್ಷದ ಕೇಂದ್ರ ನಾಯಕರ ಸರ್ವಾಧಿಕಾರಿ ಧೋರಣೆಯ ಪರಮಾವಧಿ. ಲಿಂಗಾಯಿತ ಹೋರಾಟ ರಾಜ್ಯದ ಜನರ ಸ್ಥಳೀಯ ಸಮಸ್ಯೆಯಾಗಿದ್ದು ಒಂದು ರಾಜಕೀಯ ಪಕ್ಷವಾಗಿ ಒಂದು ನಿರ್ದಿಷ್ಟ ನಿಲುವನ್ನು ತೆಗೆದುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿರುತ್ತದೆ. ಈ ವಿಚಾರದಲ್ಲಿ ತಮ್ಮ ಕ್ಷೇತ್ರದ ಜನತೆಗೆ ತಮ್ಮ ನಿಲುವನ್ನು ಬಹಿರಂಗ ಪಡಿಸಬೇಕಿರುವುದು ರಾಜ್ಯ ನಾಯಕರ ಕರ್ತವ್ಯವೂ ಆಗಿರುತ್ತದೆ. ಆದರೆ ಈ ಕುರಿತಾಗಿ ಮಾತನಾಡಬಾರದೆಂಬ ಶಾರ ಸೂಚನೆ ರಾಜ್ಯನಾಯಕರ ಸ್ವಾತಂತ್ರವನ್ನೇ ಕಿತ್ತುಕೊಂಡಂತಾಗಿದೆ. ಅದೇ ರೀತಿ ಮಹಾದಾಯಿ ವಿಚಾರದಲ್ಲಿಯೂ ರಾಜ್ಯದ ನಾಯಕರು ಯಾವುದೇ ಹೇಳಿಕೆ ನೀಡಬಾರದೆಂದು ತಿಳಿಸಲಾಗಿದ್ದು, ಸ್ಥಳೀಯ ರೈತರ ಸಮಸ್ಯೆಗಳನ್ನು ಚರ್ಚಿಸಲು ರಾಜ್ಯ ನಾಯಕರಿಗೆ ಸ್ವಾತಂತ್ರ ಇಲ್ಲವಾಗಿದೆ. ಅಲ್ಲಿಗೆ ಚುನಾವಣೆಯನ್ನು ಗೆಲ್ಲುವುದೊಂದೇ ಭಾಜಪದ ಕೇಂದ್ರ ನಾಯಕರ ಗುರಿಯಾಗಿದ್ದು ರಾಜ್ಯದ ಯಾವುದೇ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬಾರದೆಂಬುದು ಅದರ ಘನ ಉದ್ದೇಶವೆಂಬುದು ಇದರಿಂದ ಮನದಟ್ಟಾಗುತ್ತದೆ.

ಇನ್ನು ಕಾಂಗ್ರೆಸ್ ಪಕ್ಷವೇ ನಮ್ಮ ಏಕೈಕ ವೈರಿ ಎಂದಿರುವ ಶಾ, ಜಾತ್ಯತೀತ ಜನತಾದಳ ಪಕ್ಷವನ್ನಾಗಲಿ, ಅದರ ನಾಯಕರನ್ನಾಗಲಿ ಹೆಚ್ಚು ಟೀಕಿಸಬಾರದೆಂದು ಪರೋಕ್ಷವಾಗಿ ಸೂಚಿಸಿದ್ದಾರೆ. ಇದರ ಅರ್ಥ ಮುಂದಿನ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಜನತಾದಳದೊಂದಿಗೆ ಮೈತ್ರಿಗೆ ಮುಂದಾಗಿ ಸರಕಾರ ರಚಿಸುವುದು ಭಾಜಪದ ಉದ್ದೇಶವಾಗಿದೆ. ಸ್ಥಳೀಯ ರಾಜಕಾರಣದ ಏರುಪೇರುಗಳನ್ನು ನೋಡಿಕೊಂಡು ಇನ್ನೊಂದು ಪಕ್ಷದೊಂದಿಗೆ ಮೈತ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಯಾವುದೇ ರಾಜ್ಯದ ರಾಜ್ಯ ನಾಯಕರ ಹಕ್ಕಾಗಿರುತ್ತದೆ.

ಯಾಕೆಂದರೆ ಸ್ಥಳೀಯವಾಗಿ ರಾಜಕೀಯ ಮಾಡುವ ನಾಯಕರಿಗೆ ಈ ಬಗ್ಗೆ ಒಂದು ಖಚಿತ ದೃಷ್ಟಿಕೋನವಿರುತ್ತದೆ. ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೆಂಬುದನ್ನೂ ಕೇಂದ್ರದ ನಾಯಕರೇ ನಿರ್ಧರಿಸುವುದಾದರೆ ರಾಜ್ಯದ ನಾಯಕರಿಗೆ ಪಕ್ಷದ ನೀತಿ ನಿರೂಪಣೆಯಲ್ಲಿ ಯಾವುದೆ ಪ್ರಾಮುಖ್ಯತೆ ಇಲ್ಲದಂತಾಗುವುದು ನಿಶ್ಚಿತ. ಹೀಗೆ ಭಾಜಪದ ಹೈಕಮಾಂಡ್ ರಾಜ್ಯದ ಭಾಜಪ ಘಟಕವನ್ನು ನಿರ್ಲಕ್ಷಿಸಿ ತನ್ನ ನಿರ್ಧಾರಗಳನ್ನು ರಾಜ್ಯನಾಯಕರ ಮೇಲೆ ಹೇರುತ್ತಿದೆ. ಪ್ರಜಾಸತ್ತಾತ್ಮಕ ಚಟುವಟಿಕೆಗಳಲ್ಲಿ ನಂಬಿಕೆ ಇರುವ ಯಾವ ರಾಜಕೀಯ ಪಕ್ಷವೂ ಹೀಗೆ ಏಕಮುಖವಾಗಿ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ.

ಇಷ್ಟು ಮಾತ್ರವಲ್ಲದೆ ಒಂದು ಶಾಲೆಯ ಮುಖ್ಯೋಪಾಧ್ಯಾಯರ ಶೈಲಿಯಲ್ಲಿ ಅಮಿತ್ ಶಾರವರು, ‘‘ನಾನು ಮತ್ತೊಮ್ಮೆ ರಾಜ್ಯಕ್ಕೆ ಬೇಟಿ ಕೊಡುವಾಗ ಈಗ ನಾನು ನೀಡಿರುವ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ ವರದಿ ನೀಡಬೇಕು’’ ಎಂದು ತಾಕೀತು ಮಾಡಿ ಹೋಗಿದ್ದಾರೆ. ಹೋಂ ವರ್ಕ್ ಮಾಡಲು ಮಕ್ಕಳಿಗೆ ಹೇಗೆ ಶಿಕ್ಷಕರು ಭಯ ಹುಟ್ಟಿಸುತ್ತಾರೋ ಆ ಮಾದರಿಯಲ್ಲಿಯೇ ಶಾ ಭಾಜಪದ ರಾಜ್ಯ ನಾಯಕರನ್ನು ನಡೆಸಿಕೊಳ್ಳುತ್ತಿದ್ದಾರೆ.

ಇವೆಲ್ಲದರ ಜೊತೆಗೆ ಕರ್ನಾಟಕದ ಚುನಾವಣೆಗಳಲ್ಲಿ ಯಾವ ವಿಷಯಗಳು ಚರ್ಚೆಯಾಗಬೇಕೆಂಬುದನ್ನೂ ಕೇಂದ್ರದ ಭಾಜಪವೇ ನಿರ್ಧರಿಸುವ ಮಟ್ಟಿಗೆ ಹೋಗಿದೆ. ತನ್ಮೂಲಕ ಅದು ಜನತೆಯ ಭಾವನಾತ್ಮಕ ವಿಚಾರಗಳನ್ನು ಚರ್ಚೆಗೆ ಎಳೆತಂದು ತನ್ನ ಮತಬ್ಯಾಂಕನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ. ರಾಜ್ಯದ ನೆಲಜಲಗಳ ಸಮಸ್ಯೆಗಳ ಅಳ ಅಗಲಗಳನ್ನು ಸಂಪೂರ್ಣವಾಗಿ ಅರಿತ ರಾಜ್ಯನಾಯಕರಿಗೆ ಚುನಾವಣಾ ವಿಷಯವನ್ನು ನಿರ್ಧರಿಸುವ ಹಕ್ಕು ಇರಬೇಕೇ ಹೊರತು, ದಿಲ್ಲಿಯ ದೊರೆಗಳಿಗೆ ಅಲ್ಲ. ಈ ಮಾತು ಕಾಂಗ್ರೆಸ್‌ಗೆ ಎಷ್ಟು ಅನ್ವಯಿಸುತ್ತದೆಯೋ ಅಷ್ಟರ ಮಟ್ಟಿಗೆ ಭಾಜಪಕ್ಕೂ ಅನ್ವಯಿಸುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)