varthabharthi

ನಿಧನ

ಹಿರಿಯ ಚಿಂತಕ ,ಲೇಖಕ, ಶಿಕ್ಷಣ ತಜ್ಞ ಫಾ. ಆ್ಯಂಬ್ರೋಸ್ ಪಿಂಟೋ ನಿಧನ

ವಾರ್ತಾ ಭಾರತಿ : 3 Jan, 2018

ಮಂಗಳೂರು, ಜ.3: ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳು ಹಾಗೂ ಜನಪರ ಸೇವೆಗಳ ಮೂಲಕ ಗುರುತಿಸಿಕೊಂಡಿದ್ದ ಫಾ. ಡಾ.ಆ್ಯಂಬ್ರೋಸ್ ಪಿಂಟೋ ಎಸ್.ಜೆ. ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಮೂಲತಃ ಬಜ್ಪೆಯವರಾದ ಫಾ.ಆ್ಯಂಬ್ರೋಸ್ ಕೆಲ ಸಮಯದಿಂದ ಅಸೌಖ್ಯದಿಂದಿದ್ದು, ಇಂದು ಬೆಳಗ್ಗೆ 7 ಗಂಟೆಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳ ಸೇವೆ ಸಲ್ಲಿಸಿರುವ ಡಾ.ಆ್ಯಂಬ್ರೋಸ್ ಪಿಂಟೋ 2010ರಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ವಿಜೇತರು. ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಇವರು ದಲಿತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಲ್ಲದೆ, ದಲಿತರಿಗೆ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಬರವಣಿಗೆಯ ಮೂಲಕ ಕ್ರಾಂತಿ ಮೂಡಿಸಿದ್ದರು.

ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಫಾ.ಆ್ಯಂಬ್ರೋಸ್ ಅವರಿಗೆ ಅತ್ಯುತ್ತಮ ಪ್ರಾಂಶುಪಾಲರಿಗೆ ನೀಡಲಾಗುವ ಗಾರ್ಡನ್ ಸಿಟಿ ಅವಾರ್ಡ್, ಎಸ್‌ಸಿಎಸ್‌ಟಿ ಸಮುದಾಯಗಳಿಗೆ ನೀಡಿದ ಉತ್ತಮ ಸೇವೆಗಾಗಿ ಸಿಬಿಸಿಐನಿಂದ ಜರ್ನಲಿಸ್ಟಿಕ್ ಪ್ರಶಸ್ತಿ ದೊರಕಿದೆ. 110ಕ್ಕೂ ಅಧಿಕ ವಿವಿಧ ಲೇಖನಗಳು, 60ಕ್ಕೂ ಅಧಿಕ ಪ್ರಬಂಧಗಳು, 85ಕ್ಕೂ ಅಧಿಕ ವೃತ್ತಪತ್ರಿಕೆ ಲೇಖನಗಳು, 100ಕ್ಕೂ ಅಧಿಕ ಸಮಾರಂಭಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಲ್ಲದೆ, 12 ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದರು.

‘ಕರ್ನಾಟಕದಲ್ಲಿ ದಲಿತ ಕ್ರೈಸ್ತರು’ ಎಂಬ ಸಾಮಾಜಿಕ- ಆರ್ಥಿಕ ಅಧ್ಯಯನ ನಡೆಸಿದ್ದ ಇವರು, 2007ರಿಂದ 2010ರವರೆಗಿನ ವಿಶ್ವವಿದ್ಯಾನಿಲಯ ಅನುದಾನ ಆಯೋಗದ ನಡೆಸಿದ ಕರ್ನಾಟದಲ್ಲಿ ದಲಿತರ ಸ್ಥಿತಿಗತಿ ಬದಲಾವಣೆ ಎಂಬ ಪ್ರಮುಖ ಪ್ರಾಜೆಕ್ಟ್‌ನಲ್ಲಿ ಫಾ.ಆ್ಯಂಬ್ರೋಸ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. 2015ರಲ್ಲಿ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಗುರುತಿಸುವಿಕೆಗಾಗಿನ ತಜ್ಞ ಸಮಿತಿಯ ಸದಸ್ಯರಾಗಿದ್ದ ಅವರು 2016ರಲ್ಲಿ ಕರ್ನಾಟಕದಲ್ಲಿ ಸರಕಾರಿ ಶಾಲೆಗಳ ಸುಧಾರಣೆಗಾಗಿ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಬೆಂಗಳೂರಿನ ಸೈಂಟ್ ಜೋಸೆಫ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾಗಿ, ಹೊಸದಿಲ್ಲಿ ಇಂಜಿಯನ್ ಸೋಶಿಯಲ್ ಇನ್‌ಸ್ಟಿಟ್ಯೂಟ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲರಾಗಿ, ಸೈಂಟ್ ಜೋಸೆಫ್ ಸಂಧ್ಯಾ ಕಾಲೇಜಿನ ನಿರ್ದೇಶಕರಾಗಿ ಹಾಗೂ 2013ರಿಂದ 16ರವರೆಗೆ ಬೆಂಗಳೂರಿನ ಸೈಂಟ್ ಅಲೋಶಿಯಸ್ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಅವರು ಸೇವೆ ಸಲ್ಲಿಸಿದ್ದರು.

ಮೃತರ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಬೆಂಗಳೂರಿನ ಸೈಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್‌ನಲ್ಲಿ ಜ.5ರಂದು ಬೆಳಗ್ಗೆ 10:30ಕ್ಕೆ ನಡೆಯಲಿದೆ. ಧಾರ್ಮಿಕ ಪೂಜಾ ವಿಧಿ ವಿಧಾನಗಳ ಬಳಿಕ ಅಂತ್ಯ ಸಂಸ್ಕಾರವು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಮಾಂಟ್ ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ನಡೆಯಲಿದೆ.


ಮರೆಯಲಾಗದ ಮಾರ್ಗದರ್ಶಕ 

ಫಾ.ಆ್ಯಂಬ್ರೋಸ್ ಪಿಂಟೋ ಅವರು ಬೆಂಗಳೂರಿನ ಸಂತ ಜೋಸೆಫರ ಕಾಲೇಜಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಅಲ್ಲಿ ಪ್ರಾಂಶುಪಾಲರಾಗಿದ್ದರು. ಅವರ ಅಧ್ಯಯನಶೀಲತೆ, ಅಗಾಧ ಜ್ಞಾನ, ಕ್ರೀಯಾಶೀಲತೆ ಹಾಗೂ ಸಮಾಜದ ದುರ್ಬಲ ವರ್ಗಗಳ ಕುರಿತ ಪ್ರಾಮಾಣಿಕ ಕಳಕಳಿ ನಮಗೆ ಸ್ಫೂರ್ತಿ. ನಾವು ಈಗಲೂ ಅವರ ವಿದ್ಯಾರ್ಥಿಗಳೇ ಆಗಿದ್ದೆವು. ಯಾವುದೇ ವಿಷಯದಲ್ಲಿ ಸಲಹೆ ಬೇಕಿದ್ದರೆ ಅವರನ್ನು ಭೇಟಿಯಾಗಿ ಮಾತನಾಡುತ್ತಿದ್ದೆ. ಸದಾ ಒಂದಿಲ್ಲೊಂದು ರಚನಾತ್ಮಕ ಕೆಲಸಗಳಲ್ಲಿ ಸಕ್ರಿಯವಾಗಿರುತ್ತಿದ್ದ ಫಾ.ಆ್ಯಂಬ್ರೋಸ್ ಅವರು ಒಬ್ಬ ಮಾದರಿ ಗುರು ಹಾಗೂ ಮರೆಯಲಾಗದ ಮಾರ್ಗದರ್ಶಕರಾಗಿದ್ದರು. 

-ಅಬ್ದುಲ್ ಅಹದ್ ಪುತ್ತಿಗೆ , ಐಪಿಎಸ್ 
ಡಿಸಿಪಿ, ವೈಟ್ ಫೀಲ್ಡ್ , ಬೆಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)