varthabharthi

ಸಿನಿಮಾ

ಹಾಗಾದರೆ ಮಾಜಿ ಮಿಸ್ ಇಂಡಿಯಾ ಹೇಳಿದ ಕಹಿ ಸತ್ಯವೇನು ಕೇಳಿ

ಮಿಸ್ ಇಂಡಿಯಾ ಅಂದರೆ ಅತ್ಯಂತ ಪ್ರತಿಷ್ಠಿತ ಪಟ್ಟ ಅಲ್ಲವೇ?

ವಾರ್ತಾ ಭಾರತಿ : 3 Jan, 2018

ಮುಂಬೈ, ಜ.3: ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸುವುದೆಂದರೆ ಪ್ರತಿಷ್ಠೆಯ ವಿಚಾರವೆಂದೇ ಪರಿಗಣಿಸಲ್ಪಡುತ್ತದೆ. ಆದರೆ ಮಾಜಿ ಮಿಸ್ ಇಂಡಿಯಾ ಹಾಗೂ ನಟಿ ಶೋಭಿತಾ ಧುಲೀಪಾಲಾ ಅವರು ಹೇಳಿದ್ದನ್ನು ಕೇಳಿದರೆ ನೀವು ಹುಬ್ಬೇರಿಸುವುದು ಖಂಡಿತ.  ಈ ಕಿರೀಟವನ್ನು ತಮ್ಮದಾಗಿಸುವ ಪ್ರಕ್ರಿಯೆಯಲ್ಲಿ ತಮ್ಮ ಆತ್ಮಗೌರವಕ್ಕೆ  ಘಾಸಿಯಾಗಿರುವುದಾಗಿ ಶೋಭಿತಾ ಹೇಳುತ್ತಾರೆ.

25 ವರ್ಷದ ಶೋಭಿತಾ ವಿಶಾಖಪಟ್ಟಣಂನಲ್ಲಿ ಬೆಳೆದವರು. ಬಾಲ್ಯದಲ್ಲಿ  ತಾವು 20ಕ್ಕಿಂತ  ಹೆಚ್ಚು ಸಿನಿಮಾ ನೋಡಿಲ್ಲ, ನೋಡಿದ್ದರಲ್ಲಿ ಹೆಚ್ಚಿನವು ಹ್ಯಾರಿ ಪಾಟರ್ ಕಥೆಗಳ ಸಿನೆಮಾವಾಗಿತ್ತು ಎನ್ನುತ್ತಾರೆ.

ಮುಂದೆ ಶೋಭಿತಾ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡು ಆಕೆ ಅಲ್ಲಿನ ಕಾಲೇಜೊಂದಕ್ಕೆ ಪ್ರವೇಶ ಪಡೆದಿದ್ದರು, ಆಗ ಎಣ್ಣೆ ಹಾಕಿದ ಉದ್ದದ ಕೂದಲು  ಹಣೆಗೆ ದೊಡ್ಡ ಬಿಂದಿ ಇಡುತ್ತಿದ್ದ ಈ ನಟಿ, ಕಾಲೇಜಿನಲ್ಲಿ ಸಹಪಾಠಿಯೊಬ್ಬಳು ಮಿಸ್ ಇಂಡಿಯಾ ಆಡಿಷನ್ ಗೆ ಬರ ಹೇಳಿದಾಗ ಒಪ್ಪಿಕೊಂಡು ಪ್ರಥಮ ಹಂತದಲ್ಲಿ ತೇರ್ಗಡೆಗೊಂಡಿದ್ದರು. ಆರಂಭದಲ್ಲಿ ತನ್ನ ಸ್ನೇಹಿತರಲ್ಲಿ ಹೇಳಿಕೊಳ್ಳಲು ಇಷ್ಟೇ ಸಾಕೆಂದು ಯೋಚಿಸಿದ್ದ ಆಕೆ ತನಗೆ ದೊರೆಯುತ್ತಿದ್ದ ಗಮನದಿಂದ ಪ್ರಭಾವಿತರಾಗಿದ್ದರಲ್ಲದೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ನಿರ್ಧರಿಸಿದ್ದರು. "ನಾನೊಬ್ಬಳು ಸಾಧಾರಣ ಹುಡುಗಿಯಾಗಿದ್ದೆ. ಆದರೆ ಮಿಸ್ ಇಂಡಿಯಾ ಕಿರೀಟದಿಂದ ನನ್ನ ಆತ್ಮ ಗೌರವಕ್ಕೆ ಧಕ್ಕೆಯಾಗಿತ್ತು. ಆ ಪಟ್ಟ ಮುಡಿಗೇರಿದ ನಂತರ ನಾವು ಇತರರಿಗೆ ಮನರಂಜನೆ ಒದಗಿಸುವವರು  ಹಾಗೂ ಸಂತೋಷ ನೀಡುವವರಾಗಿ ಬಿಡುತ್ತೇವೆ" ಎಂದು ಸಂದರ್ಶನವೊಂದರಲ್ಲಿ ಆಕೆ ಹೇಳಿದ್ದಾರೆ.

2013ರಲ್ಲಿ ಮಿಸ್ ಇಂಡಿಯಾ ಗೆದ್ದ ಆಕೆ ಫಿಲಿಪ್ಪೀನ್ಸ್ ನಲ್ಲಿ ನಡೆದ ಮಿಸ್ ಅರ್ಥ್ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸ್ ಫೋಟೋಜಿನಿಕ್, ಮಿಸ್ ಬ್ಯೂಟಿ ಫಾರ್ ಎ ಕಾಸ್, ಮಿಸ್ ಟ್ಯಾಲೆಂಟ್ ಹಾಗೂ ಮಿಸ್ ಬ್ಯೂಟಿಫುಲ್ ಫೇಸ್ ಬಿರುದುಗಳನ್ನು ಪಡೆದರು. "ಹಿಂದೆಲ್ಲಾ ನಾನು ಹೇಗೆ ಕಾಣುತ್ತೇನೆಂಬುದರ ಬಗ್ಗೆ ನನಗೆ ಗಮನವಿರಲಿಲ್ಲ. ನಾನೊಬ್ಬಳು ಒಳ್ಳೆಯ ವಿದ್ಯಾರ್ಥಿನಿಯಾಗಿ ಚೆನ್ನಾಗಿ ಕಲಿಯಬೇಕೆಂಬುದೇ ನನ್ನ ಉದ್ದೇಶವಾಗಿತ್ತು. ಆದರೆ  ಮಿಸ್ ಇಂಡಿಯಾ ಆದ ನಂತರ ನಾನು ಹೇಗೆ ಕಾಣುತ್ತೇನೆಂಬುದು ಹೆಚ್ಚು ಮುಖ್ಯವಾಗುತ್ತದೆ. ಇದು ನನಗೆ ಸಂತೋಷ ನೀಡಿಲ್ಲ'' ಎನ್ನುತ್ತಾರೆ.

"ಮಿಸ್ ಇಂಡಿಯ ಕಿರೀಟ ಗೆದ್ದಾಗ ನನಗೆ 19 ವರ್ಷ. ಯಾರಾದರೂ ಯುವಕರು ನನ್ನನ್ನು ನೋಡಿ ಇಷ್ಟ ಪಡಬಹುದು ಎಂದೆಲ್ಲಾ  ಯೋಚಿಸಿದ್ದೆ. ಆದರೆ ನಂತರ ಅಲ್ಲಿ ನಾವು ಹೇಗೆ ಯೋಚಿಸುತ್ತೇವೆ ಎಂಬುದು ಮುಖ್ಯವಾಗುವುದೇ ಇಲ್ಲ, ಇಲ್ಲಿ ಸೌಂದರ್ಯ ಮತ್ತು ಸೆಕ್ಸ್ ಮಾತ್ರ ಮುಖ್ಯವಾಗಿತ್ತು ಎಂದು ತಿಳಿದು ಬಂತು'' ಎನ್ನುತ್ತಾರೆ ಶೋಭಿತಾ.

ಮಿಸ್ ಇಂಡಿಯಾ ಆಗಿ ಆಯ್ಕೆಯಾಗುವುದಕ್ಕಿಂತಲೂ ಮುಂಚೆ ಮಾಡೆಲಿಂಗ್ ಮಾಡಿದ್ದ ಆಕೆ ಅದು ಕೂಡ ತಮಗೆ ಸಂಕಟ ತಂದಿತ್ತು ಎಂದಿದ್ದಾರೆ.  ಸೈಫ್ ಆಲಿ ಖಾನ್ ಅವರ ಅಭಿನಯದ `ಚೆಫ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶೋಭಿತಾ  ಸೈಫ್ ಜತೆ ನಟಿಸಿರುವ ಇನ್ನೊಂದು ಚಿತ್ರ `ಕಾಲಾಕಾಂಡಿ' ಜನವರಿ 12ರಂದು ಬಿಡುಗಡೆಗೊಳ್ಳಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)