varthabharthi

ಅನುಗಾಲ

ಕುಮಾರವ್ಯಾಸನು ಹಾಡಿದನೆಂದರೆ..

ವಾರ್ತಾ ಭಾರತಿ : 4 Jan, 2018
ಬಾಲಸುಬ್ರಹ್ಮಣ್ಯ ಕಂರ್ಜಪಣೆ

ಸಾಂಪ್ರದಾಯಿಕ ನಂಬಿಕೆಯ ಕುಮಾರವ್ಯಾಸನಿಂದ ನಾವು ಇಂದಿನ ಸಮಾಜದ ಕರಾರುವಾಕ್ಕಾದ ವಿವರಣೆಯನ್ನು ನಿರೀಕ್ಷಿಸಬಾರದು; ಅಪೇಕ್ಷಿಸಬಾರದು; ಆದರೆ ಮ್ಯಾಥ್ಯೂ ಆರ್ನಾಲ್ಡ್ ಹೇಳಿದಂತಹ ಸಂಸ್ಕೃತಿ ಪತನದ ಸೂಚನೆಯನ್ನು ಕುಮಾರವ್ಯಾಸ ಆಗಲೇ ನೀಡಿದ್ದನೆಂಬುದನ್ನು ಮರೆಯಬಾರದು.


ಜನವರಿ 2ರಂದು ಪುಷ್ಯ ಮಾಸದ ಹುಣ್ಣಿಮೆ. ಕುಮಾರವ್ಯಾಸ ಜಯಂತಿ. ಸರಕಾರದಿಂದ ಅದನ್ನು ಆಚರಿಸಿದ ಬಗ್ಗೆ ಮಾಹಿತಿಯಿಲ್ಲ. ಆದರೆ ಉತ್ಸಾಹಿಗಳನೇಕರು ಈ ಮಹಾಕವಿಯನ್ನು ಆತನ ಕುರಿತ ಕೃತಿಗಳನ್ನು ಅಲ್ಲಿ ಇಲ್ಲಿ ಅಂತರ್ಜಾಲ ತಾಣಗಳಲ್ಲಿ ನೆನಪು ಮಾಡಿಕೊಂಡರು. ‘‘ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’’ ಎಂಬ ಕುವೆಂಪು ವಾಣಿಯನ್ನು ಒಬ್ಬರು ಉಲ್ಲೇಖಿಸಿದರೆ, ಇನ್ನೊಬ್ಬರು ಈ ಮಹಾಕವಿಯ ಪದ್ಯಗಳನ್ನೇ ಉಲ್ಲೇಖಿಸಿದರು. ಗದುಗಿನ ವೀರನಾರಾಯಣನಿಲ್ಲದೆ ಕುಮಾರವ್ಯಾಸನಿಲ್ಲ; ಕುಮಾರವ್ಯಾಸನಿಲ್ಲದೆ ಗದುಗಿನ ವೀರನಾರಾಯಣನಿಲ್ಲ. ಕೃಷ್ಣಾರ್ಜುನರ ಹಾಗಿರುವ ಜೋಡಿ. ಕುಮಾರವ್ಯಾಸನದೆಂದು ನಂಬಲಾದ ಚಿತ್ರ ಅನಾವರಣವಾದರೆ ಗದುಗಿನ ವೀರನಾರಾಯಣನ ಮೂರ್ತಿಯೂ ಪ್ರತ್ಯಕ್ಷಗೊಂಡಿತು.

 ಕುಮಾರವ್ಯಾಸನ ನಿಜ ನಾಮ ನಾರಣಪ್ಪ. ಕೇವಲ ಐದು ಶತಮಾನಗಳ ಹಿಂದೆ ಇದ್ದ ಒಬ್ಬ ಕನ್ನಡದ ಕವಿಯು ಭಾಷೆಯಲ್ಲಿ ಈ ಮಾದರಿಯ ಮೋಡಿಯನ್ನು ಮಾಡಿದನೆಂದು ನಂಬುವುದೇ ಕಷ್ಟ. ಅನೇಕ ಬಾರಿ ಇಂತಹ ಅತಿಮಾನುಷ ಶಕ್ತಿಯೇ ದಂತಕಥೆಗಳಿಗೆ ಕಾರಣವಾಗುತ್ತದೆ. ಕುಮಾರವ್ಯಾಸನ ಕವಿತಾ ರಚನೆಯ ಹಿಂದೆಯೂ ಇಂತಹದೇ ದಂತ ಕಥೆ ನಿರ್ಮಾಣವಾಗಿದೆ. ಇದು ಎರಡು ಬಗೆಯದು: ಒಂದು ಐತಿಹ್ಯದಂತೆ, ಇನ್ನೊಂದು ಪವಾಡದಂತೆ. ನಾರಣಪ್ಪಹೋಗಿದ್ದ ಯಾವುದೋ ಮನೆಯ ಸಮಾರಂಭದ ಪಂಕ್ತಿ ಊಟದಲ್ಲಿ ಮಗುವೊಂದು ಹಠಮಾಡಿದಾಗ ತಾಯಿ ಅದನ್ನು ದರ್ಯೋಧನನಿಗೆ ಹೋಲಿಸಿ ಬೈದಳಂತೆ. ಆಗ ಊಟಮಾಡುತ್ತಿದ್ದ ವ್ಯಕ್ತಿಯೊಬ್ಬ ಕಣ್ಣಿನಲ್ಲಿ ನೀರು ಸುರಿಸಿಕೊಂಡು ಎದ್ದುಹೋದನಂತೆ. ಕುತೂಹಲಭರಿತನಾದ ನಾರಣಪ್ಪಆತನನ್ನು ಹಿಂಬಾಲಿಸಿ ಬಲವಂತವಾಗಿ ಮಾತನಾಡಿಸಿದಾಗ ಆತ ಚಿರಂಜೀವಿಯಾದ ಅಶ್ವತ್ಥಾಮನೆಂದು ಗುರುತಾಯಿತಂತೆ. ಕಲಿಯುಗವಾದ್ದರಿಂದ ಅನಾಮಿಕನಾಗಿ ಉಳಿದಿದ್ದಾನೆ ಅಶ್ವತ್ಥಾಮ. ಮಹಾಭಾರತವನ್ನು ಕಾವ್ಯದ ಮೂಲಕ ಪುನರುಜ್ಜೀವಿಸುವ ತನ್ನ ಆಶಯವನ್ನು ನಾರಣಪ್ಪಹೇಳಿದಾಗ ಆತನಿತ್ತ ವರ ಈ ಮಹಾಭಾರತ. ಆದರೆ ಇಲ್ಲೂ ಶರತ್ತಿತ್ತು.

ನಾರಣಪ್ಪನ ಬೆನ್ನ ಹಿಂದೆ ಕಥಾನಕವನ್ನು ಒಬ್ಬ ಹೇಳುತ್ತಿದ್ದರೆ ಒದ್ದೆಬಟ್ಟೆಯಲ್ಲಿ ನಾರಣಪ್ಪಬರೆದುಕೊಳ್ಳಬೇಕಾಗಿತ್ತು. ತಿರುಗಿ ನೋಡಬಾರದು. ಹತ್ತು ಪರ್ವಗಳು ಮುಗಿದಾಗ ನಾರಣಪ್ಪಕುತೂಹಲ ತಡೆಯದೆ ತಿರುಗಿ ನೋಡಿದಾಗ ಕಥೆ ಹೇಳುವ ವ್ಯಕ್ತಿ ಮಾಯವಾದನಂತೆ. ಆತ ಅಶ್ವತ್ಥಾಮನೇ ಅಥವಾ ನಾರಾಯಣ ರೂಪೀ ಕೃಷ್ಣನೇ ಎಂಬ ರಹಸ್ಯ ಬಯಲಾಗುವುದಿಲ್ಲ. ಕವಿಯು ಹೇಳಿಕೊಂಡಂತೆ ಆತ ಗದುಗಿನ ವೀರನಾರಾಯಣ. ‘‘ವೀರನಾರಾಯಣನೆ ಕವಿ ಲಿಪಿಕಾರ ಕುವರ ವ್ಯಾಸ!’’ ಹೀಗೆ ಬರೆದುಕೊಂಡದ್ದರಿಂದ ಕಾವ್ಯ ಕುಮಾರವ್ಯಾಸನದ್ದೇ ಎಂಬುದು ಖಂಡಿತ. ಏಕೆಂದರೆ ಈ ಸಾಲನ್ನು ಭಗವಂತ ಹೇಳಲಾರ. ಆದರೆ ಇದು ನಂಬಿಕೆ ಮಾತ್ರ ಎಂಬುದು ಸ್ಪಷ್ಟ. ಯಾವುದೇ ಕಾಲದ, ಯಾವುದೇ ಭಾಷೆಯ ಕೆಲವು ಕಾವ್ಯಗಳನ್ನು, ಕವಿತೆಗಳನ್ನು ಓದಿದಾಗ ಇದು ಅಪೌರುಷೇಯವೆಂಬಂತೆ ಗೋಚರಿಸುತ್ತದೆ. ಹೀಗೂ ಬರೆಯಲು ಸಾಧ್ಯವೇ ಎಂದನ್ನಿಸುತ್ತದೆ.

ಇನ್ನು ಕೆಲವರ ಬದುಕೂ ಇಂತಹ ಪವಾಡಸದೃಶವಾಗಿರುತ್ತದೆ. ಹರಿದಾಸರುಗಳ ಬದುಕೂ ಹೀಗೆ ದಂತಕಥೆಯಾಗಿದೆ. ಅದರೊಂದಿಗೆ ಉಡುಪಿಯ ಕೃಷ್ಣ ತಿರುಗಿ ಕನಕನಿಗೆ ದರ್ಶನ ನೀಡಿದ ಐತಿಹ್ಯ ಮುಂದುವರಿದಿದೆ. ಇದನ್ನು ಗೌರವಿಸುವುದು ಸಮಾಜದ ಸಜ್ಜನಿಕೆಯಾಗಿದೆ. ಐದಾರು ಶತಮಾನಗಳಷ್ಟು ಹಿಂದೆ ಆಧುನಿಕತೆ ಇಣುಕುತ್ತಿದ್ದಾಗ, ಶಾಪಾದಪಿ-ಶರಾದಪಿಗಳು ಕೋವಿಗೆ, ಫಿರಂಗಿ, ಮದ್ದುಗುಂಡುಗಳಿಗೆ ಹಾದಿ ಮಾಡಿಕೊಟ್ಟ ಕಾಲದಲ್ಲಿ ಇಂತಹ ಅತಿಮಾನುಷ ಘಟನೆಗಳು ನಡೆದವೆಂದು ನಂಬುವುದು ವಿವೇಕದ ಅಗ್ನಿಪರೀಕ್ಷೆಯಾಗುತ್ತದೆ. ಅದನ್ನು ನಂಬಿಕೆಯ ನೆಲೆಯಲ್ಲೇ ಬಿಟ್ಟುಬಿಡಬೇಕು.

ಒಂದು ವೇಳೆ ಈ ನಂಬಿಕೆ ಸುಳ್ಳಾದರೂ ಯಾರಿಗೂ ನಷ್ಟವಿಲ್ಲ. ಸಮಾಜವು ಹೆದರಬೇಕಾದದ್ದು ನಂಬಿಕೆಗಲ್ಲ; ಮೂಢನಂಬಿಕೆಗೆ; ಮತ್ತು ದುರುದ್ದೇಶದ ನಂಬಿಕೆಗೆ. ಇಂತಹ ಕುಮಾರವ್ಯಾಸನು ಭೂತ, ವರ್ತಮಾನ, ಭವಿಷ್ಯಗಳಲ್ಲಿ ಲೀಲಾಜಾಲವಾಗಿ ಓಡಾಡಿದ್ದಾನೆ. ಆತನ ಕಾವ್ಯದ ಕುರಿತು ಹೇಳಿ ಮುಗಿಯದು. ಕೃಷ್ಣಕಥೆಯೆಂದು ಆತ ಬಣ್ಣಿಸಿದರೂ ಅದು ಮನುಷ್ಯರೆಲ್ಲರ ಕಥೆ. ವೇದಪಾರಾಯಣದ ಫಲವೆಂಬ ಅಪೌರುಷೇಯದ ಹೊದಿಕೆ ಒಳಗಿನ ಹಿರಣ್ಯವನ್ನು ಮುಚ್ಚಿತ್ತಷ್ಟೇ. ರಾಮಾಯಣದಲ್ಲಿ ವಾಲ್ಮೀಕಿಯು ಬದುಕು ಹೇಗೆ ಆದರ್ಶಮಯವಾಗಿರಬೇಕು ಅಥವಾ ಬದುಕನ್ನು ಆದರ್ಶಮಯವಾಗಿಸುವುದು ಹೇಗೆ ಎಂದು ಚಿತ್ರಿಸಿದರೆ ವ್ಯಾಸರು ಭಾರತದ ಮೂಲಕ ಬದುಕಿನ ದುರಂತವನ್ನು ಕಟ್ಟಿಕೊಟ್ಟರು.

ಗ್ರೀಕ್ ನಾಟಕಗಳ, ಶೇಕ್ಸ್‌ಪಿಯರ್‌ನ ದುರಂತನಾಟಕಗಳ ಚಿತ್ರಗಳಿಗೂ ಇದಕ್ಕೂ ಸಾಮ್ಯತೆಯಿದೆ. ಕರ್ಣ, ಕೌರವ, ಹ್ಯಾಮ್ಲೆಟ್, ಈಡಿಪಸ್ ಇವರೆಲ್ಲ ವಿಧಿಯ ಬಲೆಗೆ ತುತ್ತಾಗಿ ವಿಪರ್ಯಾಸದಲ್ಲಿ ಬದುಕಿದವರು; ಸತ್ತವರು. ಕುಮಾರವ್ಯಾಸನು ವಾಲ್ಮೀಕಿ, ವ್ಯಾಸರನ್ನು ಖಂಡಿತಾ ಓದಿರಬಹುದು (ತಿಂತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ). ಪಂಪ, ರನ್ನರನ್ನೂ ಓದಿರಬಹುದು. ಆದರೆ ಅವನ ಕಾಲಕ್ಕಾಗಲೇ ಕಾವ್ಯದ ಭಾಷೆ ಬಹಳಷ್ಟು ಬದಲಾಗಿತ್ತು. ಆದ್ದರಿಂದ ಆತ ಕಾವ್ಯದ ಭಾಷೆ, ಛಂದಸ್ಸು, ಇವನ್ನು ತನ್ನ ಕಾಲಕ್ಕೆ, ದೇಶಕ್ಕೆ, ದೇಸಿಗೆ ಒಗ್ಗಿಸಿಕೊಂಡ. ಕುಮಾರವ್ಯಾಸನಿಗೆ ತನ್ನ ಕಾಲದ ಅರಿವಿತ್ತು. ಯಾವನೇ ಕವಿಗೆ ತಾನೇನೇ ಬರೆಯಲಿ, ಅದು ತನ್ನ ಕಾಲದ, ದೇಶದ ಚರಿತ್ರೆಯಾಗಬೇಕೆಂಬ ಆಸೆ, ಹುಮ್ಮಸ್ಸು ಇರುತ್ತದೆ. ಕಾವ್ಯದ ಧ್ವನಿಯು ತನ್ನ ಸುತ್ತಣ ಸಮಾಜವನ್ನು ಎಚ್ಚರಿಸಬೇಕೆಂಬ ದೃಷ್ಟಿಯಿಂದಲೇ ಕವಿ ಕಲ್ಪನೆ ಮೂಡುತ್ತದೆ.

ಪಂಪ ಅರಿಕೇಸರಿಯನ್ನು ಅರ್ಜುನನಾಗಿಸಿದಂತೆ ಚಿತ್ರಿಸಲು ಕುಮಾರವ್ಯಾಸನಿಗೆ ಯಾವ ರಾಯರೂ ಇರಲಿಲ್ಲವೆಂದು ಕಾಣುತ್ತದೆ. ಉಳಿದವನು ಗದುಗಿನ ವೀರನಾರಾಯಣನೊಬ್ಬನೇ. ಪ್ರಾಯಃ ಇದರಿಂದಾಗಿಯೇ ಕೃಷ್ಣನ ಕುರಿತು ವಿಶೇಷವಾದ ಆಸಕ್ತಿ, ಆಪ್ತತೆ ಕುಮಾರವ್ಯಾಸನಿಗೆ. ವೀರನಾರಾಯಣ ತನ್ನೊಡೆಯನೂ ಹೌದು; ಯುಗದ, ಜಗದ ಒಡೆಯನೂ ಹೌದು. ಆದ್ದರಿಂದ ಆತ ಜಗತ್ತನ್ನು ನಿಯಂತ್ರಿಸುವುದರೊಂದಿಗೆ ಕವಿಯ ಕಲ್ಪನೆಯನ್ನೂ ಮೋಹಕವಾಗಿ ನಿಯಂತ್ರಿಸುತ್ತಾನೆ. ಕಥೆ ಆದಿ ಪರ್ವದ ಮೊದಲ ನಾಲ್ಕು ಸಂಧಿಗಳಲ್ಲೇ ಚಂದ್ರವಂಶದ ಅನೇಕ ತಲೆಮಾರುಗಳ ಸಂದಿಗೊಂದುಗಳನ್ನು ದಾಟಿ ಪಾಂಡವರ ಜನನದ ಹಂತಕ್ಕೆ ಬರುತ್ತದೆ. ಅಲ್ಲಿಂದ ಆನಂತರ ಸಮಪಾತಳಿಯ ನೆಲವೊಂದರಲ್ಲಿ ಒಂದು ತಲೆಮಾರಿನ ಕಥೆಯು ಹತ್ತು ಪರ್ವಗಳನ್ನು ವ್ಯಾಪಿಸುತ್ತದೆ. ಮೊದಲ ಐದು ಪರ್ವಗಳು ಕುರುಕ್ಷೇತ್ರಕ್ಕೆ ಭೂಮಿಕೆಯನ್ನು ಸಿದ್ಧಗೊಳಿಸುತ್ತಾ ಹೋಗುತ್ತವೆ. ಅದಕ್ಕೆ ಬೇಕಾದ ವೈರದ, ಅಪಮಾನದ, ಅಭಿಮಾನದ ತಯಾರಿಯಿಂದ ಮೊದಲ್ಗೊಂಡು, ಪರಸ್ಪರ ಸೆಣಸಲು ಬೇಕಾದ ಶಸ್ತ್ರಾಸ್ತ್ರ ತಯಾರಿಯ ವರೆಗೆ ವರ-ಶಾಪಗಳ ವರೆಗೆ ಹಬ್ಬಿದರೆ ಕೊನೆಯ ಐದು ಪರ್ವಗಳು ಯುದ್ಧದ, ಸಾವು-ನೋವಿನ ಕಥೆಯೇ ಆಗುತ್ತವೆ.

ಕುಮಾರವ್ಯಾಸನು ಕಥೆಯ, ಕಾವ್ಯದ ನೆಪದಲ್ಲಿ ಕಾಲದಲ್ಲಿ ಹಿಂದೂ ಮುಂದೂ ಸರಿಯುತ್ತಾನೆ. ಅಶ್ವತ್ಥಾಮನಂತಹ ಪಾತ್ರವೊಂದು ಚಿರಂಜೀವಿಯಾಗಿ ಉಳಿಯುವುದು ಕಾವ್ಯದ ದೃಷ್ಟಿಯಿಂದ ಮಾತ್ರವಲ್ಲ, ಬದುಕಿನ ದೃಷ್ಟಿಯಿಂದಲೂ ಮುಖ್ಯವಾಗುತ್ತದೆ. ಸಾವಿಲ್ಲದಿರುವುದು ಸುಖವಲ್ಲ; ಸಾವಿನಂತೆಯೇ ಬದುಕೂ ಘೋರ ದುರಂತವಾಗಬಲ್ಲುದು ಎಂಬ ಸೂಚನೆ ಕಾವ್ಯದಲ್ಲಿದೆ. ಕಾವ್ಯದಲ್ಲಿ ಬರುವ ತಂತ್ರವೂ ನೀತಿಪಾಠವೂ ಸಾರ್ವಕಾಲಿಕ ಸತ್ಯಗಳನ್ನು ಹೇಳಬಯಸುತ್ತದೆ. ಕರ್ಣನ ಬದುಕು ಯಾರ ಬದುಕೂ ಆಗಬಲ್ಲುದು. ದುರ್ಯೋಧನನ ಹಠಕ್ಕೂ ಕೈವಲ್ಯವೇ ಉದ್ದೇಶ. (ಕೃಷ್ಣನ ಕೆಣಕಿದಲ್ಲದೆ ವಹಿಲದಲ್ಲಿ ಕೈವಲ್ಯವಿಲ್ಲೆಂದ). ಮಾಯಾವಿ ಮಧುಸೂದನನ ವ್ಯೆಹಗಳು ಆತ ದೇವರೆಂಬ ನೆಪದಿಂದಾಗಿ ಮಾತ್ರ ಪಾಪದಿಂದ ಪಾರಾಗುತ್ತವೆ. ಪಾಂಡವರ ಗೆಲುವು ಸಾಧ್ಯವಾಗುವುದು ವೀರನಾರಾಯಣನ ಕರುಣದಿಂದಲೇ. ಕುಮಾರವ್ಯಾಸನ ದೇವರು ‘ವೀರ.’ ಒಂದರ್ಥದಲ್ಲಿ ಮಹಾಭಾರತದಲ್ಲಿ ಖಳನಾಯಕರೇ ಇಲ್ಲ; ಎಲ್ಲರೂ ನಾಯಕರೇ.

ಕುಮಾರವ್ಯಾಸನು ಕುರುಕ್ಷೇತ್ರದ ಕೊನೆಯ ದುರಂತವನ್ನು ಸ್ಮ್ಮಶಾನ ಸದೃಶವಾಗಿಯೇ ಹೇಳಿದ್ದಾನೆ. ಬಾಂಬುದಾಳಿಗೆ ತುತ್ತಾದ ಹಿರೋಷಿಮಾ ನಾಗಸಾಕಿ ಅಥವಾ ಇತ್ತೀಚೆಗಿನ ಇರಾಕಿನ ದುರಂತಗಳನ್ನು ಗಮನಿಸಿದವರಿಗೆ ಕುರುಕ್ಷೇತ್ರ ಮನಸ್ಸಿಗೆ ಕಾಣಬಹುದು. ಕಲಿಯುಗ ದ್ವಾಪರವಾಗುವುದು ಇಲ್ಲೇ. ಕುವೆಂಪು ಅವರಿಗೆ ಸ್ಮಶಾನ ಕುರುಕ್ಷೇತ್ರಂ ಬರೆಯಲು ಸ್ಫೂರ್ತಿ ‘ಕುಮಾರವ್ಯಾಸನ ಕಾವ್ಯ ಸಹ್ಯಾದ್ರಿ’ಯೇ ಇರಬಹುದು. ಅಷ್ಟೇ ಅಲ್ಲ; ಕೊನೆಯ ಪರ್ವದ ಕೊನೆಯ ಅಂದರೆ ಹದಿಮೂರನೆಯ ಸಂಧಿಯ (ಈಗ ಬಹು ಖ್ಯಾತವಾದ) 9ನೆಯ ಪದ್ಯವು ಹೀಗಿದೆ:

ಆ ಸುಯೋಧನನರಮನೆಯನವ
ನೀಶ ಹೊಕ್ಕನು ಪವನಸುತ ದು

ಶ್ಶಾಸನನ ಸದನವನು ಪಾರ್ಥಗೆ ಕರ್ಣಭವನದಲಿ॥
ಶ್ಶಾಸನಾನುಜರರಮನೆಗಳುಳಿ

ದೈಸುಮನೆ ಭಂಡಾರವಾದುದು ಭೂಪ ಕೇಳೆಂದ॥

ಎಲ್ಲ ದೇಶಕಾಲಗಳಲ್ಲೂ ವ್ಯವಸ್ಥೆಯು ಬದಲಾಯಿತೆಂದು ಸಮಾಜ ಯೋಚಿಸಿದರೆ ಅದೇ ವ್ಯವಸ್ಥೆಯು ಹಿಂಬಾಗಿಲ ಮೂಲಕ ಮತ್ತೆ ಎದುರಾಗುತ್ತದೆ. ‘ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ’ ಎಂಬ ಗಾದೆ ಸುಳ್ಳಾಗದು. ದ್ವಾಪರದಲ್ಲಿ ಚಿರಂಜೀವಿಯಾಗುಳಿದ ಇನ್ನೊಬ್ಬ ತ್ರೇತಾಯುಗದ ಹನುಮಂತ. ಆತ ಅಶ್ವತ್ಥಾಮನಿಗಿಂತಲೂ ಹಳಬ. ಶ್ರೀರಾಮನನ್ನೂ ಶ್ರೀಕೃಷ್ಣನನ್ನೂ ಕಂಡವನು. ಒಂದು ರೀತಿಯಲ್ಲಿ ಯುಗಳಯುಗಪುರುಷ. ಕುಮಾರವ್ಯಾಸ ಕಥೆಯಲ್ಲಿ ಆತ ಕಲಿಕಾಲಕ್ಕೆ ಪ್ರವೇಶಿಸಿಲ್ಲ. ಆದರೆ ಆತನಿಂದಲೂ ಕುಮಾರವ್ಯಾಸನು ಕಲಿಯುಗದ ಅಂದರೆ ತನ್ನ ಸಮಕಾಲೀನ ತಲ್ಲಣಗಳನ್ನು ನಿರೂಪಿಸಿದ್ದಾನೆ.

ಪ್ರಾಯಃ ಕುಮಾರವ್ಯಾಸ ಬದುಕಿದ್ದ ಕಾಲದಲ್ಲಿದ್ದ ಸಾಮಾಜಿಕ ಶೈಥಿಲ್ಯ ಕವಿಯನ್ನು ಕಾಡಿರಬೇಕು. ಅರಣ್ಯ ಪರ್ವದ ಸಂಧಿ 10ರ (ಸೌಗಂಧಿಕಾ ಪ್ರಸಂಗದ)ಲ್ಲಿನ 34ನೇ ಪದ್ಯ ಇದನ್ನು ಮಾರ್ಮಿಕವಾಗಿ ವಿವರಿಸುತ್ತದೆ. ತ್ರಿಕಾಲ ಪ್ರಜ್ಞೆಯ ಹನುಮಂತನು ಯುಗ ಕಳೆದಂತೆಲ್ಲ ಸತ್ವ, ಸತ್ಯ ಕಳೆಗುಂದುತ್ತದೆಯೆಂಬುದನ್ನು ಹೇಳುತ್ತ ಕಲಿಯುಗದ ಮನುಷ್ಯರು ಹೇಗಿರುತ್ತಾರೆಂದು ಹೀಗೆ ವಿವರಿಸುತ್ತಾನೆ:

ಹೀನಸತ್ವರು ಸತ್ಯ ಧರ್ಮ ವಿ
ಹೀನರರ್ಥ ಪರಾಯಣರು ಕುಜ
ನಾನುರಕ್ತರು ವರ್ಣ ಧರ್ಮಾಶ್ರಮ ವಿದೂಷಕರು॥
ದಾನಿಗಳು ದುಷ್ಪಾತ್ರದಲಿ ಗುಣ
ಮೌನಿಗಳು ಗರ್ವಿತರು ಮಿಥ್ಯಾ
ಜ್ಞಾನಿಗಳು ಕಲಿಯುಗದ ಮನುಜರು ಭೀಮ ಕೇಳೆಂದ॥

ಇಲ್ಲಿ ಕಲಿಯುಗ ಎಂದರೆ ಕುಮಾರವ್ಯಾಸಯುಗ. ಇಂತಹ ಪರಿಸ್ಥಿತಿಯಲ್ಲಿ ಕುಮಾರವ್ಯಾಸ ಹುಟ್ಟಿದ್ದು ಭುವನದ ಸೌಭಾಗ್ಯ. ಸಾಂಪ್ರದಾಯಿಕ ನಂಬಿಕೆಯ ಕುಮಾರವ್ಯಾಸನಿಂದ ನಾವು ಇಂದಿನ ಸಮಾಜದ ಕರಾರುವಾಕ್ಕಾದ ವಿವರಣೆಯನ್ನು ನಿರೀಕ್ಷಿಸಬಾರದು; ಅಪೇಕ್ಷಿಸಬಾರದು; ಆದರೆ ಮ್ಯಾಥ್ಯೂ ಆರ್ನಾಲ್ಡ್ ಹೇಳಿದಂತಹ ಸಂಸ್ಕೃತಿ ಪತನದ ಸೂಚನೆಯನ್ನು ಕುಮಾರವ್ಯಾಸ ಆಗಲೇ ನೀಡಿದ್ದನೆಂಬುದನ್ನು ಮರೆಯಬಾರದು. ಹಳೆಗನ್ನಡದ ಮುದ್ದಣನು ಆಧುನಿಕತೆಯ ಪ್ರವಾಹದ ನಡುವೆಯೂ ಹಳೆಯ ಹೊನ್ನನ್ನು ಕಿಲುಬಾಗದಂತೆ ಉಳಿಸಿದ್ದನ್ನು ನೆನಪಿಸಿಕೊಂಡರೆ ಇನ್ನೂ ಆಳದಲ್ಲಿ ಕುಮಾರವ್ಯಾಸನ ಪ್ರತಿಭೆಯ ಗೆರೆಮಿರಿವ ಚಿನ್ನದದಿರಿನ ಹೊಳಪು ಕಾಣಸಿಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)