varthabharthi

ನಿಮ್ಮ ಅಂಕಣ

ಖಾಸಗಿ ಶಿಕ್ಷಕರ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು?

ವಾರ್ತಾ ಭಾರತಿ : 5 Jan, 2018
ನಸ್ರಿಯಾ ಸೈಯದ್, ದೇರಳಕಟ್ಟೆ

ಮಾನ್ಯರೇ,

ಇಂದು ಎಲ್ಲಿ ನೋಡಿದರೂ ನಾಯಿಕೊಡೆಗಳಂತೆ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿವೆ. ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಬಂಡವಾಳಶಾಹಿ ವ್ಯಾಪಾರಿಗಳು ಗಲ್ಲಿಗೊಂದು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದ್ದಾರೆ. ಮತ್ತೆಲ್ಲಾ ಮಾಫಿಯಾಗಳಂತೆ ಇದನ್ನು ‘ಎಜುಕೇಶನ್ ಮಾಫಿಯಾ’ ಎಂದೇ ಕರೆಯಬಹುದು. ಪೋಷಕರಿಂದ ಆಂಗ್ಲ ಭಾಷೆಯ ಗುಮ್ಮನನ್ನು ತೋರಿಸಿ ಸಮವಸ್ತ್ರ, ಪುಸ್ತಕ, ವ್ಯಾನು ಫೀಸು, ಆ ಫೀಸು, ಈ ಫೀಸು ಎಂದು ಹಗಲು ದರೋಡೆ ಮಾಡಲು ಪ್ರಾರಂಭಿಸಿದ್ದಾರೆ. ಬ್ಯಾಂಕಿನಲ್ಲಿ ಸಾಲ ಮಾಡಿ ಶಾಲೆಯ ದುಬಾರಿ ಫೀಸು ಕಟ್ಟುವ ಪರಿಸ್ಥಿತಿ ಇಂದಿನ ಪೋಷಕರಿಗೆ ಬಂದೊದಗಿದೆ. ಆದರೆ ಮಾಫಿಯಾದಲ್ಲಿ ನಿಜವಾಗಿ ಬಲಿಪಶುಗಳಾಗಿರುವುದು ಇದೀಗ ತಾನೇ ಬಿ.ಎಡ್/ಡಿ.ಎಡ್ ಮುಗಿಸಿ ಉದ್ಯೋಗವನ್ನು ಅರಸುತ್ತಿರುವ ಶಿಕ್ಷಕರು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆಯಿರುವುದರಿಂದ ಶಾಲೆಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ.

ಈ ಕಾರಣಕ್ಕಾಗಿ ಸರಕಾರ ಕಾಲ ಕಾಲಕ್ಕೆ ಶಿಕ್ಷಕರ ನೇಮಕಾತಿ ಮಾಡುತ್ತಿಲ್ಲ. ಆದರೆ ಪದವಿ ಮುಗಿಸಿಕೊಂಡಿರುವ ಶಿಕ್ಷಕರು ಅನಿವಾರ್ಯವಾಗಿ ಖಾಸಗಿ ಶಾಲೆಗಳತ್ತ ಮುಖಮಾಡುವಂತಾಗಿದೆ. ಖಾಸಗಿ ಶಾಲೆಗಳು ದುಬಾರಿ ಹಣವನ್ನು ವಿದ್ಯಾರ್ಥಿಗಳಿಂದ ವಸೂಲು ಮಾಡಿ, ಶಿಕ್ಷಕರಿಗೆ ಕನಿಷ್ಠ ವೇತನವನ್ನೂ ನೀಡದೆ, ನಿಗದಿತ ಸಮಯಕ್ಕಿಂತಲೂ ಹೆಚ್ಚು ಕೆಲಸ ಮಾಡಿಸುತ್ತಾ, ನಿರಂತರ ಮಾನಸಿಕ ಹಿಂಸೆ ನೀಡುತ್ತಾ ಇರುವುದು ಕಂಡುಬರುತ್ತಿದೆ. ಈ ಶೋಷಣೆಯ ವಿರುದ್ಧ ಅತ್ತ ಸರಕಾರಕ್ಕೆ ದೂರು ಸಲ್ಲಿಸಿದಲ್ಲಿ ಎಲ್ಲಿ ತಮ್ಮ ತಾತ್ಕಾಲಿಕ ಕೆಲಸ ಕಳೆದುಕೊಳ್ಳುತ್ತೇವೆಯೋ ಎಂಬ ಭಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರಕಾರವು ಖಾಸಗಿ ಶಿಕ್ಷಕರಿಗೆ ಸೇವಾ ಭದ್ರತೆ ಮತ್ತು ಇನ್ನಿತರ ಸೌಲಭ್ಯಗಳನ್ನು ನೀಡಬೇಕೆಂದು ಆದೇಶಿಸಿದೆ. ಇತ್ತೀಚಿನ ವೇತನ ಪ್ರಮಾಣದ ಪ್ರಕಾರ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಕನಿಷ್ಠ ವೇತನ ರೂ. 13,600 ಹಾಗೂ ಪ್ರೌಢ ಶಾಲೆೆಗಳಿಗೆ ರೂ. 17,600 ನಿಗದಿಯಾಗಿದೆ. ಇದಿಷ್ಟೇ ಅಲ್ಲದೆ ಹಲವು ಸೌಲಭ್ಯ, ಹಕ್ಕುಗಳನ್ನು ಶಿಕ್ಷಕರಿಗೆ ನೀಡಿದೆ. ಇದೆಲ್ಲವನ್ನೂ ಉಲ್ಲಂಘಿಸಿ ರೂ. 3,000 ದಿಂದ 5,000ದವರೆಗೆ ಮಾಸಿಕ ವೇತನ ನೀಡಿ ಅವರ ವೃತ್ತಿಗೂ ಗೌರವ ನೀಡದೆ ರಾಜ್ಯದ ಹಲವೆಡೆ ದಯನೀಯವಾಗಿ ಹಿಂಸಿಸುತ್ತಿದ್ದಾರೆ.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿಯಿದ್ದರೂ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ದಾಖಲಾತಿಗಾಗಿ ಪ್ರತೀ ವರ್ಷ ಸರ್ಕಸ್ ಮಾಡುವ ವಿದ್ಯಾ ಸಂಸ್ಥೆಗಳು ಹೇಗೆ ವಿದ್ಯಾರ್ಥಿಗಳು ಇಲ್ಲದಿದ್ದರೆ ಶಾಲೆ ನಡೆಸಲು ಸಾಧ್ಯವಿಲ್ಲವೋ ಅದೇ ರೀತಿ ಶಿಕ್ಷಕರು ಇಲ್ಲದೆ ಸಂಸ್ಥೆ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಖಾಸಗಿ ಶಿಕ್ಷಕರು ಶಾಲಾ ಆಡಳಿತ ಮಂಡಳಿಗಳಿಗೆ ತಿಳಿಯಪಡಿಸಬೇಕು. ತಮ್ಮ ಹಕ್ಕುಗಳಿಗಾಗಿ ಐಕ್ಯರಾಗಿ ಖಾಸಗಿ ಶಿಕ್ಷಕರು ಹೋರಾಟ ನಡೆಸುವ ಕಾಲ ಬಂದಿದೆ. ಹಗಲು ರಾತ್ರಿಯೆನ್ನದೆ ವಿದ್ಯಾ ಸಂಸ್ಥೆಯ ಉನ್ನತಿಗಾಗಿ ನಿರಂತರ ದುಡಿಯುತ್ತಿರುವ ಖಾಸಗಿ ಶಿಕ್ಷಕರ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೆಗೆ ಹೋರಾಟ ಮುಂದುವರಿಯಬೇಕಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)