varthabharthi

ಸಂಪಾದಕೀಯ

ಬರ್ಬರ, ಅಮಾನವೀಯ!

ವಾರ್ತಾ ಭಾರತಿ : 5 Jan, 2018

ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಸುರತ್ಕಲ್‌ನಲ್ಲಿ ದೀಪಕ್ ಎನ್ನುವ ತರುಣನನ್ನು ಅತ್ಯಂತ ಬರ್ಬರವಾಗಿ ಹಾಡಹಗಲೇ ಕೊಂದು ಹಾಕಿದ್ದಾರೆ. ಎಲ್ಲರೂ ನೋಡು ನೋಡುತ್ತಿರುವಂತೆಯೇ ಮಧ್ಯಾಹ್ನದ ಹೊತ್ತಿನಲ್ಲಿ ಕೊಲೆ ನಡೆಯಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಅದೆಷ್ಟು ಹದಗೆಟ್ಟಿರಬೇಕು? ಪೊಲೀಸ್ ಇಲಾಖೆಯ ಭಯವಿಲ್ಲದೆ ಕ್ರಿಮಿನಲ್‌ಗಳು ಅದೆಷ್ಟು ಕೊಬ್ಬಿರಬೇಕು ಎನ್ನುವುದನ್ನು ಊಹಿಸಬಹುದು. ಸರಿ, ಕೊಂದವನು ಮತ್ತು ಕೊಲ್ಲಲ್ಪಟ್ಟವನ ಧರ್ಮ ಬೇರೆ ಬೇರೆಯಾದರೆ ಏನು ನಡೆಯಬೇಕೋ ಅದೇ ನಡೆಯಿತು. ಅಂದು ರಾತ್ರಿ ಟೋಪಿ, ಗಡ್ಡ ಇಟ್ಟ ಇಬ್ಬರಿಗೆ ದುಷ್ಕರ್ಮಿಗಳು ಬರ್ಬರವಾಗಿ ಇರಿದರು. ಅದರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಹೆಸರು, ಧರ್ಮ ಬೇರೆಬೇರೆಯಾದಾಕ್ಷಣ ಸಾವು ಬೀರುವ ಪರಿಣಾಮ ಬೇರೆಯಾಗಲು ಸಾಧ್ಯವೆ?

ತರುಣ ದೀಪಕ್ ಬಿಜೆಪಿ ಕಾರ್ಯಕರ್ತನೆಂದು ಹೇಳುತ್ತಾರೆ. ಯಾವುದೇ ರಾಜಕೀಯದಲ್ಲಿ ಅಥವಾ ಪ್ರಜಾಸತ್ತಾತ್ಮಕವಾದ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುವುದು ತಪ್ಪೇನಲ್ಲ. ಆದರೆ ಆತನೇನೂ ರಾಜಕೀಯದಲ್ಲಿ ಸಕ್ರಿಯನಾಗಿರಲಿಲ್ಲ. ಜೊತೆಗೆ ಸ್ಥಳೀಯ ಮುಸ್ಲಿಮರ ಜೊತೆಗೂ ಅನ್ಯೋನ್ಯವಾಗಿದ್ದ. ಈತ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕನೂ ಮುಸ್ಲಿಮನಾಗಿದ್ದ. ಎಲ್ಲರೂ ಈತನ ಕುರಿತಂತೆ ಸದಭಿಪ್ರಾಯವನ್ನೇ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಒಬ್ಬ ತರುಣನನ್ನು ಇಷ್ಟೊಂದು ಭೀಕರ ರೀತಿಯಲ್ಲಿ ದುಷ್ಕರ್ಮಿಗಳು ಕೊಂದು ಹಾಕುತ್ತಾರೆ ಎನ್ನುವುದು ದಕ್ಷಿಣ ಕನ್ನಡ ಸಾಗುತ್ತಿರುವ ದಿಕ್ಕನ್ನು ಹೇಳುತ್ತದೆ. ಕೊಲೆ ನಡೆಯುವ ಸಂದರ್ಭದಲ್ಲಿ ಅದನ್ನು ತಡೆಯಲು ಸ್ಥಳೀಯ ಮುಸ್ಲಿಮರೇ ಯತ್ನಿಸಿದ್ದಾರೆ. ಆದರೆ ರಾಕ್ಷಸತ್ವದ ಮುಂದೆ, ಆ ಮಿಣುಕು ಮಾನವೀಯತೆ ಜಯ ಸಾಧಿಸಲಿಲ್ಲ. ಆದರೆ, ಕಾರ್ ನಂಬರ್‌ನ್ನು ಕೊಟ್ಟು ಆರೋಪಿಗಳನ್ನು ಹಿಡಿಯಲು ನೆರವು ನೀಡಿರುವುದು ಸ್ಥಳೀಯ ಮುಸ್ಲಿಮರೇ. ಈ ಕಾರಣಕ್ಕಾಗಿ ಸ್ಥಳೀಯರನ್ನು ಅಭಿನಂದಿಸಬೇಕು.

ಮಾನವೀಯತೆ ಸತ್ತಿದೆಯೋ ಎಂಬ ಪ್ರಶ್ನೆ ಎದುರಾದಾಗ ಇವರ ಮನುಷ್ಯತ್ವ ಒಂದಿಷ್ಟು ಸಾಂತ್ವನವನ್ನು ಹೇಳುತ್ತದೆ. ಆದರೆ ಆ ಯುವಕನನ್ನು ಕಳೆದುಕೊಂಡ ಕುಟುಂಬದ ದುಃಖವನ್ನು ಯಾರಿಗೂ ಭರಿಸಲು ಸಾಧ್ಯವಿಲ್ಲ. ಇದೇ ಸಂದರ್ಭದಲ್ಲಿ ಮಿಂಚಿನ ರೀತಿಯಲ್ಲಿ ಕಾರ್ಯಾಚರಣೆ ಎಸಗಿ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಶಹಭಾಶ್ ಹೇಳಲೇಬೇಕು. ಪೊಲೀಸರ ಈ ಕಾರ್ಯವೈಖರಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಬಹುದಾಗಿದ್ದ ಅರ್ಧ ಅನಾಹುತವನ್ನು ತಪ್ಪಿಸಿತು. ಕೊಲೆಗಾರರಿಗೂ ಸುರತ್ಕಲ್‌ನ ಗಾಂಜಾ ಮಾಫಿಯಾಗೂ ನೇರ ಸಂಬಂಧವಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಕೊಲೆಗಾರರು ಈ ಹಿಂದೆಯೂ ಹತ್ತು ಹಲವು ಕೃತ್ಯಗಳನ್ನೆಸಗಿ ಜೈಲು ಸೇರಿದವರು.

ಇತ್ತೀಚೆಗೆ ಸುರತ್ಕಲ್‌ನಲ್ಲಿ ನೌಫಾಲ್ ಎಂಬ ಯುವಕನನ್ನು ಅಪಹರಿಸಿ ಕೊಂದು ಹಾಕಿದ ಪ್ರಕರಣಕ್ಕೂ ಇವರಿಗೂ ಸಂಬಂಧವಿದೆ ಎನ್ನಲಾಗುತ್ತಿದೆ. ಕೊಲೆಗೆ ಕಾರಣ ಏನೇ ಇರಲಿ. ದುಷ್ಕರ್ಮಿಗಳು ಗಲ್ಲು ಶಿಕ್ಷೆಗೆ ಸರ್ವ ರೀತಿಯಲ್ಲೂ ಅರ್ಹರು. ಮೇಲ್ನೋಟಕ್ಕೆ ಅವರ ಉದ್ದೇಶ ಕೇವಲ ಒಬ್ಬನ ಕೊಲೆಯಷ್ಟೇ ಆಗಿಲ್ಲ. ಸಮಾಜದ ಶಾಂತಿ ಕೆಡಿಸಿ ಇನ್ನಷ್ಟು ಕೊಲೆ, ನಾಶ, ನಷ್ಟಗಳನ್ನು ಎಸಗುವುದು ಅವರ ಗುರಿಯಾಗಿತ್ತು. ದೀಪಕ್ ಕೊಲೆಯಾದ ಬೆನ್ನಿಗೇ ಮತ್ತೆ ಸುರತ್ಕಲ್‌ನಲ್ಲಿ ಇನ್ನಿಬ್ಬರು ಅಮಾಯಕರ ಮೇಲೆ ನಡೆದ ದಾಳಿಯೇ ಇದಕ್ಕೆ ಸಾಕ್ಷಿ. ಇವರೆಲ್ಲರೂ ಯಾವ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸಿದರು? ಬಹುಶಃ ಹೆಣ ಬೀಳುವುದನ್ನು ಕಾಯುತ್ತಿರುವ ರಾಜಕಾರಣಿಗಳೇ ಹೇಳಬೇಕು.

ದೀಪಕ್‌ನ ಸಾವು ಇನ್ನೊಂದು ಧರ್ಮೀಯರು ಎಸಗಿದ್ದು ಎಂದು ಗೊತ್ತಾಗುತ್ತಲೇ ಈ ರಾಜಕಾರಣಿಗಳು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಾ, ಕೊಲೆಗಳಿಗೆ ಧರ್ಮದ ನಂಟನ್ನು ಅಂಟಿಸುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಗಾಂಜಾ ಸೇವಿಸಿ ಗೂಂಡಾಗಿರಿಯೆಸಗುವ, ಕೊಲೆ ಮಾಡುವ ಈ ಕೊಲೆಗಾರರು ಯಾವ ಧರ್ಮವನ್ನೂ ಪ್ರತಿನಿಧಿಸಲಾರರು? ದೀಪಕ್‌ನನ್ನು ಕೊಂದವರು ಗಾಂಜಾ ಸೇವಿಸಿದ್ದರು ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ದೀಪಕ್‌ನ ಹೆಣವನ್ನು ಮುಂದಿಟ್ಟುಕೊಂಡು ಇನ್ನಷ್ಟು ಕೊಲೆ, ನಾಶ, ನಷ್ಟಗಳಿಗೆ ಪ್ರೇರಣೆ ನೀಡುತ್ತಿರುವವರು ಸೇವಿಸಿರುವುದು ಏನನ್ನು? ಇಬ್ಬರೂ ಒಂದೇ ಅಲ್ಲವೇ? ಒಬ್ಬ ಸಂಘಪರಿವಾರ ಮುಖಂಡನಂತೂ ಎಷ್ಟು ನೀಚನಂತೆ ವರ್ತಿಸಿದ ಎಂದರೆ, ದೀಪಕ್‌ನ ಮೃತದೇಹ ಇರುವ ಅಂಬ್ಯುಲೆನ್ಸ್ ಮೇಲೆ ಹತ್ತಿ ನಿಂತು ಭಾಷಣಕ್ಕೆ ತೊಡಗಿದ. ಪುಣ್ಯಕ್ಕೆ ಉಳಿದ ಸಂಘಪರಿವಾರ ಕಾರ್ಯಕರ್ತರೇ ಬುದ್ಧಿ ಹೇಳಿ ಆತನನ್ನು ಕೆಳಗೆ ಇಳಿಸಿದರು. ದೀಪಕ್ ಕೊಲೆಯನ್ನು ವಿರೋಧಿಸಿ ಬಿಜೆಪಿ ಮತ್ತು ಸಂಘಪರಿವಾರ ಪ್ರತಿಭಟನೆಗಳಿದಿವೆ.

ಪ್ರತಿಭಟನೆ ನಡೆಸುವುದು ಸಹಜವೇ ಆಗಿದೆ. ದೀಪಕ್ ಕುಟುಂಬಕ್ಕೆ ನ್ಯಾಯ ಸಿಗಲು, ಕಾನೂನನ್ನು ಎಚ್ಚರಿಸಲು, ಸರಕಾರವನ್ನು ನಿದ್ದೆಯಿಂದ ಎಬ್ಬಿಸಲು ಪ್ರತಿಭಟನೆ ಅಗತ್ಯ. ಆದರೆ ಪ್ರತಿಭಟನೆಯ ಹೆಸರಲ್ಲಿ ಇನ್ನಷ್ಟು ನಾಶ, ನಷ್ಟಗಳಿಗೆ ಪ್ರಚೋದಿಸುತ್ತಾ ಚುನಾವಣಾ ರಾಜಕೀಯ ಮಾಡುವುದು ಅತ್ಯಂತ ಅಮಾನವೀಯ. ಅದು ಕೊಲೆಗೀಡಾದ ಯುವಕನಿಗೆ ಮಾಡುವ ದ್ರೋಹವೂ ಕೂಡ. ಯಾವ ಕಾರಣಕ್ಕಾಗಿ ದೀಪಕ್‌ನನ್ನು ಕೊಂದಿದ್ದಾರೆ ಎನ್ನುವುದು ಈವರೆಗೆ ಸ್ಪಷ್ಟವಿಲ್ಲ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೊಲೆಗಾರರು ಬಿಜೆಪಿಯ ಕಾರ್ಯಕರ್ತರು ಎಂಬ ಅರ್ಥದಲ್ಲಿ ಶಾಸಕರೊಬ್ಬರು ಹೇಳಿಕೆ ನೀಡಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಇವರು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಆದರೆ ಶಾಸಕರು ಇಂತಹ ಬೀಸು ಹೇಳಿಕೆಯನ್ನು ನೀಡಿ ಹೊಣೆಗಾರಿಕೆಯಿಂದ ಜಾರಿಕೊಳ್ಳುವಂತೆ ಇಲ್ಲ. ಸುರತ್ಕಲ್‌ನಲ್ಲಿ ಇಂತಹ ಕೃತ್ಯಗಳು ಯಾಕೆ ಹೆಚ್ಚುತ್ತಿವೆ ಎನ್ನುವುದನ್ನು ಮೊದಲು ಶಾಸಕರು ಅರ್ಥ ಮಾಡಿಕೊಳ್ಳಬೇಕಾಗಿದೆ.

ಸುರತ್ಕಲ್‌ನಾದ್ಯಂತ ಗಾಂಜಾ ಮಾಫಿಯಾ ಬೆಳೆಯುತ್ತಿದೆ ಎಂಬ ಕುರಿತು ಸಾರ್ವಜನಿಕರು ಹಲವು ಸಮಯದಿಂದ ಆತಂಕವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿನ ಪೊಲೀಸರು ಮತ್ತು ರಾಜಕಾರಣಿಗಳ ಮೂಗಿನ ಕೆಳಗೇ ಇವುಗಳು ನಡೆಯುತ್ತಿರುವುದರಿಂದ ಸಾರ್ವಜನಿಕರು ಇದರ ವಿರುದ್ಧ ಧ್ವನಿಯನ್ನು ಎತ್ತುವುದಕ್ಕೂ ಅಂಜುವಂತಹ ಪರಿಸ್ಥಿತಿ ಇದೆ. ಇತ್ತೀಚೆಗೆ ನೌಫಾಲ್ ಎಂಬ ಯುವಕನ ಅಪಹರಣವಾದಾಗ ಪೊಲೀಸರು ತನಿಖೆಯ ಕುರಿತಂತೆ ಉಡಾಫೆ ತೋರಿಸಿದ್ದರು. ಸಿಪಿಎಂ ಸೇರಿದಂತೆ ಕೆಲವು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ ಬಳಿಕವಷ್ಟೇ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಸ್ವೀಕರಿಸಿದರು. ನೌಫಾಲ್‌ನನ್ನು ಈ ಗಾಂಜಾ ತಂಡ ಹತ್ಯೆಗೈದು ಕಾಡಿನಲ್ಲಿ ಎಸೆದಿರುವುದು ತನಿಖೆಯಿಂದ ಬಯಲಿಗೆ ಬಂತು. ಒಂದು ವೇಳೆ ಅದೇ ನೌಫಾಲ್‌ನನ್ನು ಬೇರೆ ಧರ್ಮೀಯರು ಅಥವಾ ಸಂಘಪರಿವಾರ ಕಾರ್ಯಕರ್ತರು ಕೊಂದಿದ್ದರೆ ಧರ್ಮರಕ್ಷಕರು ಒಂದಾಗಿ ಬೀದಿಗೆ ಬರುತ್ತಿದ್ದರು. ಆದರೆ ಕೊಲ್ಲಲ್ಪಟ್ಟವನು, ಕೊಂದವರೂ ಒಂದೇ ಧರ್ಮೀಯರಾಗಿದ್ದುದರಿಂದ ಸುರತ್ಕಲ್ ಶಾಂತವಾಗಿತ್ತು.

ಆದರೆ ದೀಪಕ್ ವಿಷಯದಲ್ಲಿ ಹಾಗಾಗಲಿಲ್ಲ. ಸುರತ್ಕಲ್, ಮೂಲ್ಕಿ ಪರಿಸರವನ್ನು ಅಡ್ಡೆ ಮಾಡಿಕೊಂಡಿರುವ ಇಂತಹ ಕ್ರಿಮಿನಲ್‌ಗಳನ್ನು ಅಟ್ಟಾಡಿಸಿ ಹಿಡಿದು ಜೈಲಿಗೆ ತಳ್ಳಿದ್ದರೆ ದೀಪಕ್‌ನ ಕೊಲೆ ನಡೆಯುತ್ತಿರಲಿಲ್ಲವೇನೋ? ಈ ಗಾಂಜಾಮಾಫಿಯಾ ಬರೇ ಸುರತ್ಕಲ್‌ಗಷ್ಟೇ ಸೀಮಿತವಾಗಿಲ್ಲ. ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡುತ್ತಿವೆ. ಉಳ್ಳಾಲವೂ ಈ ಗ್ಯಾಂಗ್‌ಗಳಿಗೆ ಕುಖ್ಯಾತವಾಗಿದೆ. ಉಳ್ಳಾಲದಲ್ಲಿ ಹೆಚ್ಚುತ್ತಿರುವ ಕ್ರಿಮಿನಲ್ ಕೃತ್ಯಗಳ ಹಿಂದೆಯೂ ಈ ತಂಡದ ಪಾತ್ರವಿದೆ. ವಿಪರ್ಯಾಸವೆಂದರೆ, ಉಳ್ಳಾಲ ಕಾಂಗ್ರೆಸ್‌ನ ಮುಖಂಡನೇ ಇಲ್ಲಿನ ‘ಟಾರ್ಗೆಟ್ ಗ್ಯಾಂಗ್’ನ ಮುಖಂಡ. ಹೀಗಿರುವಾಗ, ಜಿಲ್ಲೆಯಲ್ಲಿ ಶಾಂತಿ ನೆಲೆಸುವುದಾದರೂ ಹೇಗೆ?

ಅದೇನೇ ಇರಲಿ. ದೀಪಕ್ ಹತ್ಯೆ ತನಿಖೆ ಕೊಲೆಗೈದ ನಾಲ್ವರು ಗಾಂಜಾ ರೌಡಿಗಳನ್ನು ಹಿಡಿಯುವುದರೊಂದಿಗೆ ಮುಕ್ತಾಯವಾಗಬಾರದು. ಯಾವುದೋ ಒಂದು ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ನಂಬುವುದು ಕಷ್ಟ. ಆದುದರಿಂದ ಆ ರೌಡಿಗಳನ್ನು ಬಳಸಿದವರು ಯಾರು ಎನ್ನುವುದೂ ತನಿಖೆಯಿಂದ ಹೊರಬರಬೇಕು. ರಾಜಕೀಯ ಕಾರಣಗಳಿಗಾಗಿ ಸುಪಾರಿ ಕೊಟ್ಟು ಕೊಲ್ಲಿಸಲಾಗಿದೆಯೇ? ದಕ್ಷಿಣ ಕನ್ನಡದ ಶಾಂತಿ, ಸೌಹಾರ್ದವನ್ನು ನಾಶ ಮಾಡುವ ಉದ್ದೇಶವಿರುವ ಶಕ್ತಿಗಳು ಇದರಲ್ಲಿ ಭಾಗೀದಾರರೇ ಎನ್ನುವುದೂ ತನಿಖೆಗೊಳಪಡಬೇಕು. ಜೊತೆಗೆ ಅಂದೇ ರಾತ್ರಿ ಇಬ್ಬರು ಅಮಾಯಕರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳೂ ಜೈಲು ಸೇರಬೇಕು. ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಮುಚ್ಚುವ ಬದಲು, ತಕ್ಷಣ ಪೊಲೀಸ್ ಇಲಾಖೆ ಚುರುಕಾಗಿ ಸುರತ್ಕಲ್, ಉಳ್ಳಾಲ ಆಸುಪಾಸಿನಲ್ಲಿ ಗಾಂಜಾ ಮಾಫಿಯಾಗೆ ಕಡಿವಾಣವನ್ನು ಹಾಕಬೇಕು. ಇಲ್ಲವಾದರೆ ಮುಂದಿನ ಚುನಾವಣೆಯ ಹೊತ್ತಿಗೆ ದಕ್ಷಿಣ ಕನ್ನಡ ಕೋಮುಗಲಭೆಗಳಿಂದ ಛಿದ್ರವಾಗಿ ಹೋದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)