varthabharthi

ಸಿನಿಮಾ

ಉಪ್ಪಿನಂಗಡಿಯಲ್ಲಿ ಆರಂಭಗೊಂಡ ಚಿತ್ರೀಕರಣ

ಕ್ಯಾನ್ಸರ್ ಬಗ್ಗೆ ಹೆಣೆದ ಚಲನಚಿತ್ರ ‘ಹಂಸಗೀತೆ’

ವಾರ್ತಾ ಭಾರತಿ : 6 Jan, 2018
ಸಂಶುದ್ದೀನ್, ಸಂಪ್ಯ

ಕ್ಯಾನ್ಸರ್ ಎಂಬ ಮಹಾರೋಗಕ್ಕೆ ಬಾಲಕರು, ವೃದ್ಧರೆಂಬ ಭೇದವಿಲ್ಲ. ಯಾರಿಗೂ ಯಾವ ಸಂದರ್ಭದಲ್ಲಿಯಾದರೂ ಈ ರೋಗ ಬಾಧಿಸಿ ಬದುಕನ್ನು ಕತ್ತಲುಗೊಳಿಸುತ್ತದೆ. ಯಾರಿಗಾದರೂ ಕ್ಯಾನ್ಸರ್ ಬಾಧಿಸಿದರೆ ಅವರು ಮಾತ್ರ ನಲುಗುವುದಿಲ್ಲ, ಬದಲಿಗೆ ಅವರೊಂದಿಗೆ ಇಡೀ ಕುಟುಂಬವನ್ನೇ ಸಂಕಷ್ಟ, ದು:ಖ, ದುಮ್ಮಾನಕ್ಕೆ ಕ್ಯಾನ್ಸರ್ ದೂಡಿ ಬಿಡುತ್ತದೆ. ಕ್ಯಾನ್ಸರ್ ಪೀಡಿತರ ಮತ್ತು ಅವರ ಕುಟುಂಬಗಳ ಮನೋಸ್ಥಿತಿಯನ್ನು ಬಿಂಬಿಸುವ, ರೋಗ ಬೀರುವ ಪರಿಣಾಮವನ್ನು ತೆರೆಯ ಮೂಲಕ ಗಮನ ಸೆಳೆಯುವ ನಿಟ್ಟಿನಲ್ಲಿ ಚಲನಚಿತ್ರವೊಂದು ನಿರ್ಮಾಣಗೊಳ್ಳುತ್ತಿದೆ.

 ವೈಚಾರಿಕ ಚಿಂತಕ ಯೋಗೇಶ್ ಮಾಸ್ಟರ್ ಅವರು ಕ್ಯಾನ್ಸರ್ ಕುರಿತು ತಾನು ಬರೆದ ‘ಅಮೃತಾ’ ಕಾದಂಬರಿಯನ್ನು ಆಧರಿಸಿ ಇದೀಗ ‘ಹಂಸಗೀತೆ’ ಎಂಬ ಹೆಸರಿನಲ್ಲಿ ಚಲನಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗುರುವಾರ ಉಪ್ಪಿನಂಗಡಿಯ ಮನೆಯೊಂದರಲ್ಲಿ ಮೊದಲ ಚಿತ್ರೀಕರಣ ಆರಂಭಗೊಂಡಿದೆ. ಈ ಚಿತ್ರ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಿರ್ಮಾಣಗೊಳ್ಳಲಿದೆ.

ಯೋಗೇಶ್ ಮಾಸ್ಟರ್ ಹೇಳುವಂತೆ ಕಳೆದ ಕೆಲವು ವರ್ಷಗಳ ಹಿಂದೆ ಇವರ ಹತ್ತಿರದ ಬಂಧುವೊಬ್ಬರ ಸುಮಾರು 10 ವರ್ಷದ ಪುತ್ರನೊಬ್ಬ ‘ಮೆಡಿಲ್ಲೋ ಬ್ಲಾಸ್ಟೋಮಾ’ ಎಂಬ ಕ್ಯಾನ್ಸರ್‌ಗೆ ತುತ್ತಾಗಿ ಮೃತಪಟ್ಟರು. ಈ ಮರಣ ಅಮೃತಾ ಕಾದಂಬರಿಯ ರಚನೆಗೆ ಪ್ರೇರಣೆಯಾಗಿತ್ತು. ಕ್ಯಾನ್ಸರ್ ಮಹಾಮಾರಿಯ ಬಗ್ಗೆ ಕಾದಂಬರಿ ಬರೆದರು. ಭಾವನಾತ್ಮಕವಾಗಿ ಮತ್ತು ತಾತ್ವಿಕವಾಗಿ ಕಥೆಯನ್ನು ಹೆಣೆದಿರುವ ಕಾದಂಬರಿಯಲ್ಲಿ ಕ್ಯಾನ್ಸರ್‌ನಿಂದ ಬಳಲುವ ಮಗು ಮತ್ತು ಅದರಿಂದ ನೋವು ಮತ್ತು ದುಃಖ ಅನುಭವಿಸುವ ಕುಟುಂಬದ ಬವಣೆಯ ಬಗ್ಗೆ ಗಮನ ಸೆಳೆದಿದ್ದಾರೆ.

ಮಾದಕ ವ್ಯಸನ, ಧೂಮಪಾನ, ಮದ್ಯಪಾನಗಳಂತಹ ಚಟಕ್ಕೆ ಬಲಿಯಾದ ವ್ಯಕ್ತಿಗಳಿಗೆ ಕ್ಯಾನ್ಸರ್ ಬಾಧಿಸುತ್ತದೆ ಎನ್ನುತ್ತೇವೆ. ಆದರೆ ಯಾವುದೇ ದುಶ್ಚಟಗಳಿಲ್ಲದ ಮಕ್ಕಳೂ ಇದಕ್ಕೆ ಬಲಿಯಾಗುತ್ತಿರುವುದು ದುರಂತವೇ ಸರಿ. ಈ ರೋಗಕ್ಕೆ ತುತ್ತಾದ ಮಕ್ಕಳಿಗೆ ಸಾವಿನ ಭಯವಿಲ್ಲ. ಯಾಕೆಂದರೆ ಅವರಿಗೆ ಸಾವು ಎಂಬುದರ ಬಗ್ಗೆ ಯಾವುದೇ ಅರಿವಿಲ್ಲ. ಆದರೆ ರೋಗದ ನೋವಿನ ಭಯ ಇರುತ್ತದೆ. ಮನೆಮಂದಿಗೆ ಮಗುವಿನ ಸಾವಿನ ಭಯವಾದರೆ ಮಗುವಿಗೆ ನೋವಿನ ಭಯ ನಿರಂತರ ಕಾಡುತ್ತಿರುತ್ತದೆ. ಚಿತ್ರಕಥೆಯು ಈ ನೋವು ಮತ್ತು ಭಯವನ್ನು ಅನಾವರಣಗೊಳಿಸುತ್ತಾ ಸಾಗುತ್ತದೆ. ಕಥೋಪನಿಷತ್‌ನಲ್ಲಿ ನಚಿಕೇತ ಎಂಬ ಬಾಲಕ ಯಮನನ್ನು ಸಂಧಿಸುತ್ತಾನೆ. ಇದರ ಆಧುನಿಕ ಅನುಸಂಧಾನವೇ ಈ ಚಿತ್ರಕಥೆ.

ಕನ್ನಡದಲ್ಲಿ ಚಲನಚಿತ್ರ ನಿರ್ಮಿಸಿದಲ್ಲಿ ಅದು ಕೇವಲ ಕನ್ನಡಿಗರಿಗೆ ಮಾತ್ರ ಗೊತ್ತಾಗುತ್ತದೆ. ಭಾರತೀಯ ಕ್ಯಾನ್ಸರ್ ರೋಗಿಗಳ ಮನೋಸ್ಥಿತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಚಲನಚಿತ್ರವನ್ನು ಕನ್ನಡದೊಂದಿಗೆ ಇಂಗ್ಲಿಷ್‌ನಲ್ಲಿಯೂ ನಿರ್ಮಿಸುವುದಾಗಿ ಯೋಗೇಶ್ ಮಾಸ್ಟರ್ ಹೇಳುತ್ತಾರೆ.

ಚಲನ ಚಿತ್ರದಲ್ಲಿ ರೋಗಪೀಡಿತ ಬಾಲಕಿಯೊಬ್ಬಳು ಸಂಗೀತ, ಕರಕುಶಲ ಇತ್ಯಾದಿ ಆಸಕ್ತಿಯನ್ನು ಇಟ್ಟುಕೊಂಡ ಸೂಕ್ಷ್ಮ ಸಂವೇದನೆಯನ್ನು ಬೆಳೆಸಿಕೊಳ್ಳುತ್ತಾಳೆ. ವ್ಯಕ್ತಿಗಳ ಮುಖವಾಡ ಮತ್ತು ನಿಜವಾದ ಮನಸ್ಥಿತಿ ಇವುಗಳ ನಡುವೆ ಸಿಲುಕಿ ಲೋಕವನ್ನು ತಿರಸ್ಕರಿಸುತ್ತಾಳೆ. ಆಗ ಅವಳಿಗೆ ಒಲವು, ಚೆಲುವು ಮತ್ತು ಸಾವು ಇವು ಮೂರು ಸಮಾನ ಎಂಬುದಾಗಿ ಅರ್ಥವಾಗುತ್ತಾ ಹೋಗುತ್ತದೆ. ಇದು ಇಡೀ ಚಿತ್ರದ ಒಟ್ಟಾರೆ ತಾತ್ಪರ್ಯ. ಚಲನ ಚಿತ್ರ ಸಂಪೂರ್ಣ ಮಗು ಕೇಂದ್ರೀಕೃತವಾಗಿ ಸಾಗುತ್ತದೆ. ರೂಪಕ ಮತ್ತು ತಾತ್ವಿಕ ಸಂಕೇತದಲ್ಲಿ ಸಿನೆಮಾ ಸಿದ್ದಗೊಳ್ಳುತ್ತಿದೆ. ಕ್ಯಾನ್ಸರ್ ಪೀಡಿತರ ಬಗ್ಗೆ ಸಮಾಲೋಚನೆಯ ಪ್ರಜ್ಞೆ ಮೂಡಿಸುವುದೇ ಚಿತ್ರ ನಿರ್ಮಾಣದ ನಿರ್ದೇಶಕರ ಮೂಲ ಉದ್ದೇಶ. ಅಬ್ದುಲ್ ಜಬ್ಬಾರ್ ಪೊನ್ನೋಡಿ, ಮಂಜುಳಾ, ಶಂಕರ್ ಬಹದ್ದೂರ್, ಬಾಲ ನಟರಾದ ದೇವಿ, ಕೈವಲ್ಯ ಮತ್ತಿತರರು ನಟರಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಕಿರಣ್ ಶಂಕರ್ ಸಂಗೀತ ನಿರ್ದೇಶನ ಮತ್ತು ರಾಜ್ ಶಿವಶಂಕರ್ ಕ್ಯಾಮರಾ ಚಾಲನೆ ಮಾಡುತ್ತಿದ್ದಾರೆ.

ಸಹಾಯ, ಸಹಕಾರ ಬೇಕಾಗಿದೆ

ಮಗು ಕೇಂದ್ರೀಕೃತವಾಗಿ ರಚನೆಗೊಳ್ಳಲಿರುವ ಈ ಚಲನ ಚಿತ್ರದ ಕಥೆವನ್ನು ಭಾವನಾತ್ಮಕ ಮತ್ತು ತಾತ್ವಿಕವಾಗಿ ಹೆಣೆಯಲಾಗಿದೆ. ಸೂಕ್ಷ್ಮ ಸಂವೇದನೆಯ ಹೆಣ್ಣು ಮಗುವೊಂದು ವ್ಯಕ್ತಿಗಳ ಮುಖವಾಡ ಮತ್ತು ನಿಜವಾದ ಮನಸ್ಥಿತಿಯ ನಡುವೆ ಸಿಲುಕಿ ಲೋಕವನ್ನು ತಿರಸ್ಕರಿಸುತ್ತದೆ. ಆಗ ಅವಳಿಗೆ ಒಲವು, ಚೆಲುವು ಮತ್ತು ಸಾವು ಮೂರೂ ಸಮಾನ ಎಂದು ಅರ್ಥವಾಗುತ್ತದೆ.

 ಚಿತ್ರದ ಮೊದಲ ಚಿತ್ರೀಕರಣ ಉಪ್ಪಿನಂಗಡಿಯಲ್ಲಿ ಆರಂಭಗೊಂಡಿದೆ. ಮುಂದೆ ಮೂಡಿಗೆರೆ, ಸಕಲೇಶಪುರ, ಚಿಕ್ಕಮಗಳೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರಕ್ಕೆ ಯಾವುದೇ ನಿರ್ಮಾಪಕರಿಲ್ಲ. ಚಿತ್ರೀಕರಣದ ಆರಂಭದ ಕೆಲಸಗಳಿಗೆ ಸಹಕಾರ ಸಿಕ್ಕಿದೆ. ಮುಂದೆ ಸಾಕಷ್ಟು ಖರ್ಚುಗಳಿದ್ದು, ಸಾಮಾಜಿಕ ಪ್ರಜ್ಞೆ ಮತ್ತು ಕಳಕಳಿ ಇರುವ ವ್ಯಕ್ತಿಗಳಿಂದ ಸಹಾಯ, ಸಹಕಾರ ಬೇಕಾಗಿದೆ. ಯಾವುದೇ ವ್ಯಕ್ತಿಗಳು ಸಹಕಾರಕ್ಕೆ ಮುಂದಾದಲ್ಲಿ ಪ್ರೀತಿಪೂರ್ವಕವಾಗಿ ಸ್ವೀಕರಿಸಲಾಗುವುದು.
ಯೋಗೇಶ್ ಮಾಸ್ಟರ್,
ನಿರ್ದೇಶಕರು

ಜಾಗೃತಿ ಮೂಡಿಸುವ ಉದ್ದೇಶದಿಂದ ನಟಿಸಲು ಮುಂದಾಗಿದ್ದೇನೆ.

ನಾನು ಕ್ಯಾನ್ಸರ್ ಪೀಡಿತ. ಕಳೆದ 10 ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದೇನೆ. ಇದೊಂದು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಿನೆಮಾ ಆಗಿರುವುದರಿಂದ ನಾನು ಇದರಲ್ಲಿ ನಟಿಸಲು ಮುಂದಾಗಿದ್ದೇನೆ. ಯಾವುದೇ ಮನೆಯಲ್ಲಿ ಒಬ್ಬ ವ್ಯಕ್ತಿಗೆ ಕ್ಯಾನ್ಸರ್ ಬಾಧಿಸಿದರೆ ಆತ ಮಾತ್ರ ಕಷ್ಟ ಪಡುವುದಲ್ಲ. ಆತನ ಕುಟುಂಬ, ಸ್ನೇಹಿತರು, ಹಿತೈಷಿಗಳೆಲ್ಲರೂ ನೋವು ಅನುಭವಿಸುತ್ತಾರೆ. ಇದನ್ನು ಸಮಾಜಕ್ಕೆ ತಿಳಿಸಲು ಮತ್ತು ಮುಂದಿನ ಪೀಳಿಗೆಯಲ್ಲಿ ಯಾರಿಗೂ ಈ ರೋಗ ಬಾರದಿರಲಿ ಎಂಬ ಉದ್ದೇಶ ನನ್ನದು. ಒಲವು, ಚೆಲುವು ಮತ್ತು ಸಾವಿನಲ್ಲಿ ಸಂತೋಷ ಮತ್ತು ದುಃಖದ ಮುಖವಿದೆ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕಾಗಿದೆ. ಆದರೆ ಒಲವು ಮತ್ತು ಚೆಲುವನ್ನು ಖುಷಿಯಿಂದ ಸ್ವೀಕರಿಸುವವರು ಎಲ್ಲರಿಗೂ ಬರಬಹುದಾಗಿರುವ ಸಾವು ಎಂದಾಗ ಮಾತ್ರ ದುಃಖಿಸುತ್ತಾರೆ. ಒಲವು. ಚೆಲುವು ಶಾಶ್ವತವಲ್ಲ. ಸಾವು ಶಾಶ್ವತ ಎಂಬುದನ್ನು ಮರೆಯಬಾರದು. ಇವೆಲ್ಲವೂ ಈ ಸಿನೆಮಾದಲ್ಲಿ ಒಳಗೊಂಡಿದೆ.

-ಅಬ್ದುಲ್ ಜಬ್ಬಾರ್ ಪೊನ್ನೋಟು,
ನಟ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)