varthabharthi

ಸಿನಿಮಾ

‘ಆ ದಿನಗಳು’ ಚೇತನ್ ಈ ದಿನಗಳಲ್ಲಿ...

ವಾರ್ತಾ ಭಾರತಿ : 6 Jan, 2018
ಆರ್.ಜೆ. ನಜ್ಮಾ ನಝೀರ್

ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಕಾರ್ಮಿಕರ ಸಮಸ್ಯೆ, ಪ್ರತ್ಯೇಕ ಲಿಂಗಾಯತ ಧರ್ಮ, ದಿಡ್ಡಳ್ಳಿ ಹೋರಾಟ ಹೀಗೆ ಹತ್ತು ಹಲವು ಹೋರಾಟಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಟ ಅಹಿಂಸಾ ಚೇತನ್ ವ್ಯವಸ್ಥೆಯ ಬದಲಾವಣೆಗಾಗಿ ತುಡಿಯುವ ಜೊತೆಗೆ ದುಡಿಯುವ ಜೀವ. ಸಿನೆಮಾದಿಂದ ಕ್ರಾಂತಿ ಸಾಧ್ಯ ಎಂದು ಸಿನೆಮಾ ರಂಗಕ್ಕೆ ಬಂದ ಚೇತನ್ ಈಗ ಸಿನೆಮಾ ಜಗತ್ತಿನಿಂದ ದೂರವಾಗಿ ಫುಲ್ ಟೈಮ್ ಹೋರಾಟಗಳಲ್ಲಿ ತೊಡಗಿಸಿಕೊಂಡು ಚಿತ್ರರಂಗವನ್ನೇ ಮರೆತಿದ್ದಾರೆ ಎಂದು ಕುಹಕ ವಾಡೋ ಮಂದಿಗೂ ನಮ್ಮ ನಡುವೆ ಕಮ್ಮಿಯಿಲ್ಲ. ಆದರೆ, ಸಿನೆಮಾ- ಚಿತ್ರರಂಗ ಕೂಡಾ ಈ ಸಮಾಜದ ಭಾಗ ಎಂದು ಹೇಳುವ ಚೇತನ್ ಕಳೆದ ಒಂದು ವರ್ಷದಿಂದ ಕರ್ನಾಟಕ ಚಲನಚಿತ್ರ ಕಾರ್ಮಿಕ- ಕಲಾವಿದ-ತಂತ್ರಜ್ಞರ ಒಕ್ಕೂಟದ ಜೊತೆಗೆ ಸದ್ದಿಲ್ಲದೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.

ಮಾಲಕರಿಗೆ ಹಣಬಲ, ರಾಜಕೀಯ ಬೆಂಬಲ ಇರುತ್ತದೆ. ಅದುವೇ ಅವರ ಶಕ್ತಿ. ಆದರೆ ಕಾರ್ಮಿಕರಿಗೆ ಒಗ್ಗಟ್ಟೇ ಶಕ್ತಿ. ಒಗ್ಗಟ್ಟಿ ನಿಂದ ಒಕ್ಕೂಟ, ಒಕ್ಕೂಟದಿಂದ ಜನಶಕ್ತಿ. ಹಾಗಾಗಿ ಕಾರ್ಮಿಕರು ಯಾವುದೇ ಪಿತೂರಿಗೆ ಒಳಗಾಗದೆ ಧರ್ಮ, ಜಾತಿ, ಲಿಂಗದ ಹೆಸರಿನಲ್ಲಿ ಕಾರ್ಮಿಕರನ್ನು ಒಡೆಯುವ ಶಕ್ತಿಗಳನ್ನು ಮೆಟ್ಟಿ ನಡೆಯಬೇಕು ಎನ್ನುವ ಚೇತನ್ ಕಾರ್ಮಿಕರೇ ಕಾರ್ಮಿಕರ ನಾಯಕರಾಗಬೇಕು ಎಂಬ ಆಶಯ ಹೊತ್ತವರು. ಈಗ ಸುಮಾರು ಒಂದು ತಲೆಮಾರಿನ ನಂತರ ಅಂದರೆ ಮೂವತ್ತು ವರ್ಷಗಳ ನಂತರ ಕಾರ್ಮಿಕ-ಕಲಾವಿದ-ತಂತ್ರಜ್ಞರ ಒಕ್ಕೂಟಕ್ಕೆ ಮೀಸೆ ಕೃಷ್ಣ ಅವರು ಅಧ್ಯಕ್ಷರಾಗುವ ಮೂಲಕ ಈ ಆಶಯ ಈಡೇರಿದೆ ಮತ್ತು ಇದು ಪ್ರಜಾಪ್ರಭುತ್ವದ ಗೆಲುವು ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಕಾರ್ಮಿಕರ ಬಗ್ಗೆ ಮಾತಾಡುವಾಗ ಚೇತನ್ ಉದಾಹರಣೆಯಾಗಿ ತೆಗೆದುಕೊಳ್ಳುವುದು 2008ರಿಂದ 2012ರ ತನಕದ ಜಾಗತಿಕ ಆರ್ಥಿಕ ಹಿನ್ನಡೆಯ ಸಂದರ್ಭ ಈಜಿಪ್ಟ್ ಮತ್ತು ಟ್ಯುನೀಷಿಯಾದಲ್ಲಿ ಕಾರ್ಮಿಕ ಚಳವಳಿ ಸರಕಾರವನ್ನೇ ಬದಲಾಯಿಸಿದ ಘಟನೆಗಳನ್ನು. ದಿನಸಿ ಬೆಲೆ ಗಗನಕ್ಕೇರಿದರೂ ವೇತನ ಹೆಚ್ಚಳ ಕಾಣದಾದಾಗ ಕಾರ್ಮಿಕರು ಸಂಘಟಿತರಾಗಿ ಬೀದಿಗಿಳಿದಿದ್ದರು ಮತ್ತು ತಮ್ಮ ಹೋರಾಟದಲ್ಲಿ ಜಯಗಳಿಸಿದ್ದರು.

ಹೀಗೆ ಅನ್ಯಾಯದ ವಿರುದ್ಧದ ಹೋರಾಟದ ಕಿಚ್ಚನ್ನು ಕಾರ್ಮಿಕರೊಳಗೆ ತುಂಬುತ್ತಲೇ ಇರುವ ಚೇತನ್, ಒಕ್ಕೂಟ ವ್ಯವಸ್ಥೆಯ ಮಹತ್ವ, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮತ್ತು ಸಿನೆಮಾ ಕಾರ್ಮಿಕರಿಗೆ ಸಾಮಾಜಿಕ ಕಳಕಳಿಯ ಪಾಠ ಹೇಳುತ್ತಿದ್ದಾರೆ. ಇದೀಗ ಸಿನೆಮಾ ರಂಗದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗಾಗಿ FIRE ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇದು ಚೇತನ್ ಅವರ ಕನಸಿನ ಕೂಸು. FIREನಲ್ಲಿ ಮುಖ್ಯವಾಗಿ ’3W’ಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಮತ್ತು ಅದಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದಾರೆ. ಆ ’3W’ ಹೀಗಿವೆ: Women, Worker, Writer.
ಈ ಮೂರು ’W ’ಗಳು ಸಿನೆಮಾ ರಂಗದಲ್ಲಿ ಸಾಕಷ್ಟು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಮಹಿಳೆಯರಿಗಂತೂ ಸಿನೆಮಾ ಲೋಕ ಸುರಕ್ಷಿತವಲ್ಲ, ಸದಾ ತುಳಿಯುತ್ತಾ ಹೆಣ್ಣುಮಕ್ಕಳನ್ನು ಸಿನೆಮಾದಲ್ಲಿ ಬೆಳೆಯಲು ಬಿಡುತ್ತಿಲ್ಲ ಎಂಬ ಕೂಗು ಇಂದು ನಿನ್ನೆಯದಲ್ಲ. ಈ ಬಗ್ಗೆ ಸ್ವತಃ ಚೇತನ್ 2013ರಲ್ಲಿ ಬರೆದ ಲೇಖನವೊಂದು ಸಾಕಷ್ಟು ಸುದ್ದಿಯಾಗಿತ್ತು. ಸಿನೆಮಾ ರಂಗದಲ್ಲಿ ಇಂತಹ ಸಮಸ್ಯೆಗಳು ಇಲ್ಲ ಎಂದು ಯಾರೇ ಹೇಳಿದರೂ ಮಹಿಳೆಯರ ಸಮಸ್ಯೆಗಳನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿಯೇ ಚೇತನ್ ‘ಪ್ರಿವೆನ್ಷನ್ ಆಫ್ ಸೆಕ್ಸುವೆಲ್ ಹೆರಾಸ್‌ಮೆಂಟ್ ಅಟ್ ವರ್ಕ್‌ಪ್ಲೇಸ್ -2013’ ಮೂಲಕ ಇಂಟರ್ನಲ್ ಕಂಪ್ಲೈನ್ಟ್ಸ್ ಕಮಿಟಿಯನ್ನು ಕನ್ನಡ ಸಿನೆಮಾ ರಂಗದಲ್ಲಿ ತರಲು ಶ್ರಮಿಸುತ್ತಿದ್ದಾರೆ. ಇದು ಜಾರಿಯಾದರೆ ಭಾರತೀಯ ಸಿನೆಮಾ ರಂಗದಲ್ಲೇ ಮೊದಲ ಪ್ರಯತ್ನವಾಗಿ ದಾಖಲಾಗಲಿದೆ. ಈ ಸಮಿತಿ ರಚನೆಯಾದರೆ ಚಿತ್ರರಂಗದಲ್ಲಿ ದುಡಿಯುವ ಮಹಿಳೆಯರಿಗೆ ಸಾಕಷ್ಟು ಅನುಕೂಲಗಳಾಗಲಿವೆ. ಜೊತೆಗೆ ಈಗ ಬೆರಳೆಣಿಕೆಯಷ್ಟಿರುವ ಮಹಿಳಾ ಕಾರ್ಮಿಕರ, ತಂತ್ರಜ್ಞರ, ಬರಹಗಾರರ ಸಂಖ್ಯೆ ಹೆಚ್ಚುತ್ತದೆ. ಇದೊಂದು ಪ್ರಗತಿಪರ ಕೆಲಸ, ಸಿನೆಮಾ ರಂಗವನ್ನು ಬೆಳೆಸುವ ಕೆಲಸ ಮತ್ತು ಇದು ಆದಷ್ಟು ಬೇಗ ಜಾರಿಯಾಗಲಿ ಎಂದು ಹತ್ತಾರು ವರ್ಷಗಳಿಂದ ಸಿನೆಮಾ ರಂಗದಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರೊಬ್ಬರು ಹೇಳುತ್ತಿದ್ದಾರೆ.

ಇನ್ನು ನೆರೆಯ ಭಾಷೆಗಳ ಸಿನೆಮಾ ರಂಗದಲ್ಲಿರುವಂತೆ ಬರಹಗಾರರ ಬಳಗ ಮಾಡಿ ನೈಜ ಪ್ರತಿಭೆಗಳನ್ನು ತಾರಾಪ್ರಭೆಯಲ್ಲಿ ಕಳೆದು ಹೋಗದಂತೆ ಜನರಿಗೆ ಪರಿಚಯಿಸುವ ಪ್ರಯತ್ನ ಚೇತನ್ ಮತ್ತು FIRE ಬಳಗದ್ದು.

ಕಾರ್ಮಿಕರ ಸಮಗ್ರ ಏಳಿಗೆಗಾಗಿ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಚೇತನ್ ತಮ್ಮ ಹಿಂದಿನ ಹೋರಾಟಗಳಂತೆ ಸರಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಕಾರ್ಮಿಕರಿಗಾಗಿ ಸರಕಾರದಿಂದ ನಿವೇಶನ ಮಂಜೂರು ಮಾಡಿಸಲು ಮಾತುಕತೆ ನಡೆಸುತ್ತಿದ್ದೇವೆ ಎನ್ನುವ ಚೇತನ್ ಪ್ರಸಾಧನ ಕಲೆ (Make up) ಸಂಘದ ಅಧ್ಯಕ್ಷರಾದ ಪುರುಷೋತ್ತಮರವರ ಜೊತೆಗೂಡಿ ಅರ್ಜಿಗಳನ್ನು ಒಟ್ಟುಗೂಡಿಸುತ್ತಿದ್ದಾರೆ ಮತ್ತು ಚಿತ್ರೀಕರಣದಲ್ಲಿ ದುಡಿಯುವ ಎಲ್ಲಾ ಕಾರ್ಮಿಕರಿಗೆ ಸರಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಕಳೆದ ಎಪ್ರಿಲ್ ತಿಂಗಳಲ್ಲಿ ಸರಕಾರದ ಮಾನ್ಯತೆ ಪಡೆದ FIREನ ಅಧ್ಯಕ್ಷರಾಗಿ ಪ್ರಿಯಾಂಕಾ ಉಪೇಂದ್ರ, ಉಪಾಧ್ಯಕ್ಷರಾಗಿ ಕವಿತಾ ಲಂಕೇಶ್, ಕಾರ್ಯದರ್ಶಿಯಾಗಿ ಚೇತನ್ ಅಹಿಂಸಾ ಜೊತೆ ಕಾರ್ಯದರ್ಶಿಯಾಗಿ ಹರಿಣಿ ಮದನ್ ಮತ್ತು ಖಜಾಂಜಿಯಾಗಿ ರೇಖಾರಾಣಿ ಕೆಲಸ ಮಾಡುತ್ತಿದ್ದಾರೆ. ನಟಿ ಸುಧಾರಾಣಿ, ನಿರ್ದೇಶಕರಾದ ಪವನ್ ಕುಮಾರ್, ಗಿರಿರಾಜ್, ಜಯತೀರ್ಥ, ಬರಹಗಾರರಾದ ಕವಿರಾಜ್, ನಾಗೇಂದ್ರ ಪ್ರಸಾದ್ ಮತ್ತು ಸಂಗೀತ ನಿರ್ದೇಶಕ ಹಂಸಲೇಖರನ್ನು ಒಳಗೊಂಡಂತೆ ಸಾಕಷ್ಟು ಕಲಾವಿದರು ಮತ್ತು ಸಮಾಜದ ವಿವಿಧ ಸ್ತರಗಳಲ್ಲಿ ದುಡಿಯುತ್ತಿರುವ ಒಟ್ಟು 60ರಷ್ಟು ಕ್ರಿಯಾಶೀಲ ಜನರನ್ನು FIRE ಒಳಗೊಂಡಿದೆ.

ನಾಯಕ ನಟನಾದವನು ತೆರೆಯ ಮೇಲಷ್ಟೇ ನಾಯಕನಾದರೆ ಸಾಲದು. ತೆರೆಯ ಹಿಂದೆಯೂ, ಸಮಾಜದಲ್ಲೂ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ನಿಜವಾದ ಹೀರೋ ಆಗಬೇಕು. ಅಮೆರಿಕದಲ್ಲಿ ಹುಟ್ಟಿ ಬೆಳೆದ ‘ಆ ದಿನಗಳ’ ಚೇತನ್ ಈ ದಿನಗಳಲ್ಲಿ ಜನಪರ, ಪ್ರಗತಿಪರ, ಪರಿಸರಪರ, ಕನ್ನಡಪರ, ಮಹಿಳಾಪರ ಕಾರ್ಯಗಳ ಮೂಲಕ ಜನಮಾನಸದಲ್ಲಿ ನಿಜವಾದ ಹೀರೋ ಆಗಿದ್ದಾರೆ. ಸದಾ ಬುದ್ಧ, ಬಸವಣ್ಣ, ಅಂಬೇಡ್ಕರ್, ಶರಣರ ತತ್ವ ಪಾಲಿಸೋ ಚೇತನ್ ಅವರ ಸಮಾಜಮುಖಿ ಹೀರೋಯಿಸಂ ಹೀಗೇ ಮುಂದುವರಿಯಲಿ ಎಂದು ಆಶಿಸೋಣ.. ಜೊತೆಯಾಗೋಣ.

ನಾಯಕ ನಟನಾದವನು ತೆರೆಯ ಮೇಲಷ್ಟೇ ನಾಯಕನಾದರೆ ಸಾಲದು. ತೆರೆಯ ಹಿಂದೆಯೂ, ಸಮಾಜದಲ್ಲೂ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ನಿಜವಾದ ಹೀರೋ ಆಗಬೇಕು. ಅಮೆರಿಕದಲ್ಲಿ ಹುಟ್ಟಿ ಬೆಳೆದ ‘ಆ ದಿನಗಳ’ ಚೇತನ್ ಈ ದಿನಗಳಲ್ಲಿ ಜನಪರ, ಪ್ರಗತಿಪರ, ಪರಿಸರಪರ, ಕನ್ನಡಪರ, ಮಹಿಳಾಪರ ಕಾರ್ಯಗಳ ಮೂಲಕ ಜನಮಾನಸದಲ್ಲಿ ನಿಜವಾದ ಹೀರೋ ಆಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)