varthabharthi

ನಿಮ್ಮ ಅಂಕಣ

ಮಾಧ್ಯಮಗಳೇ, ಬಷೀರನಿಗೆ ಕೊಲೆ ಭಾಗ್ಯ ನೀಡಲು ಹೋದವರು ಯಾರು ಎಂದು ಕೇಳಿದಿರಾ ?

ವಾರ್ತಾ ಭಾರತಿ : 6 Jan, 2018
ಟಿ. ಶಶಿಧರ್

ಫೇಸ್ ಬುಕ್ ನಲ್ಲಿ ಹಿಂದೂ ಅಕ್ಷರ ಭಯೋತ್ಪಾದಕನೊಬ್ಬ #ಹಡೆದವ್ವನ_ಶಾಪ ಎಂದು ಸ್ವತಃ ತಾನೇ ಸೃಷ್ಟಿಸಿ  ಬರೆದ ಪ್ರಚೋದನೆ ನೀಡುವ ಬರಹವನ್ನು ಮುಂದಿಟ್ಟುಕೊಂಡು ಈ ರೀತಿಯ ಕ್ಷುಲ್ಲಕ ಸುದ್ದಿ ಮಾಡುತ್ತಿರುವ #Btv ಯವರೆ, ಮಾಧ್ಯಮವಾಗಿ ಪ್ರಜಾಪ್ರಭುತ್ವ ರಾಷ್ಟ್ರದ ಭಾಗವಾಗಿ ಸ್ವಲ್ಪ ಜವಾಬ್ದಾರಿ ಯಿಂದ ನಡೆದುಕೊಳ್ಳುವುದನ್ನು ಕಲಿಯಿರಿ.

ಸಮಾಜಕ್ಕೆ ಬೇಡವಾದ ಎಲೆಮೆಂಟ್ ಗಳು ಮಾಡಿದ ಕೊಲೆಗಳು ಮುಖ್ಯಮಂತ್ರಿಗಳ ತಲೆಗೆ ಕಟ್ಟಲು ನಾಚಿಕೆಯಾಗುವುದಿಲ್ಲವೆ ? ನಿಮ್ಮಂಥ ಮೂರ್ಖ ಮಾಧ್ಯಮಗಳು ಅಸಂಬದ್ಧ ಸುದ್ದಿ ಮಾಡುವುದರಿಂದಲೂ ಸಹ ಮತೀಯ ಭಯೋತ್ಪಾದನೆ ಹೆಚ್ಚಾಗಿದೆ.

ಯಾವ ಮುಖ್ಯಮಂತ್ರಿಯೇ ಆಗಲಿ ಯಾರನ್ನಾದರೂ ಸಾಯಿಸಲು ಹೇಳುತ್ತಾರೆಯೇ ? ಸಾವಿನ ವ್ಯಾಪಾರ ಮತ್ತು ಹೆಣದ ಮೇಲೆ ಚಿಲ್ಲರೆ ರಾಜಕೀಯ ಮಾಡುವವರೊಂದಿಗೆ ಶಾಮೀಲಾಗಿ ಈ ರೀತಿಯ ಸುಳ್ಳು ಸುದ್ದಿ ಹರಡಲು ನಿಮಗೆ ಮಾನ ಮರ್ಯಾದೆ ಬೇಡವೆ ? ಬಿಟಿವಿ ಇದು ಭರವಸೆಯ ಬೆಳಕು ಎಂದು ಹೇಳುವ ನೀವು, ತಲೆ ಬುಡ ಇಲ್ಲದ ಸುಳ್ಳು ಸುದ್ದಿ ಹರಡುವುದೇ ಭರವಸೆಯ ಬೆಳಕಾ ? ನೀವು ಇದೇ ರೀತಿ ಕೋಮುವಾದಿ ಕೊಲೆಗಡುಕರನ್ನು ಪೋಷಿಸುತ್ತ ಹೋದರೆ ಅಂಥವರಿಂದ ನಿಮಗೂ ಸಹ ಅಪಾಯ ಕಟ್ಟಿಟ್ಟ ಬುತ್ತಿಯಾಗಬಹುದು.

ಮತೀಯ ಸಂಘರ್ಷಕ್ಕೆ ಪುಷ್ಠಿ ನೀಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹವೇ ಸರಿ. ಈ ರೀತಿ ಪ್ರಚೋದನಾತ್ಮಕ ಸುದ್ದಿ ಹರಡಿದರೆ ಸಮಾಜದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಕನಿಷ್ಠ ಅರಿವು ಮಾಧ್ಯಮಗಳಿಗಿರಬೇಕು. ಧಾರ್ಮಿಕ ಮತೀಯ ವಾದಿಗಳನ್ನು ಕಾನೂನಾತ್ಮಕವಾಗಿಯೇ ಶಿಕ್ಷೆಗೆ ಗುರಿ ಮಾಡಬೇಕು. ಅದನ್ನು ಬಿಟ್ಟು ಪೂರ್ವಾಗ್ರಹ ಪೀಡಿತವಾಗಿ ಚಿಲ್ಲರೆ ಟಿ.ಆರ್.ಪಿ.ಗಾಗಿ ಸಂಘಪರಿವಾರದ ಏಜಂಟರಂತೆ ವರ್ತಿಸಿ ಕೋಮು ದ್ವೇಷವನ್ನು ಮತ್ತಷ್ಟು ಹುಟ್ಟು ಹಾಕುತ್ತಾ ಸಾರ್ವಜನಿಕರ ಸಾಮರಸ್ಯದ ಜೀವನದೊಂದಿಗೆ ಚೆಲ್ಲಾಟವಾಡಲು ನಿಮಗೆ ನಾಚಿಕೆಯಾಗಬೇಕು.

ಅದೇ ದಿನ ಮುಸ್ಲಿಂ ವ್ಯಕ್ತಿಯ ಮೇಲೆಯೂ ಸಹ ಹಿಂದೂ ಮೂಲಭೂತವಾದಿ ಶಕ್ತಿಗಳಿಂದ ಮಾರಣಾಂತಿಕ ಹಲ್ಲೆಯಿಂದ ಬದುಕಿದ್ದೂ ಸತ್ತಂತಿರುವ ಬಷೀರನ ಬಗ್ಗೆ ಯಾಕೆ ಮಾಧ್ಯಮಗಳಿಗೆ ಕಾಳಜಿ ಇಲ್ಲ? ಬಷೀರನನ್ನು ಕೊಲೆ ಮಾಡುವಂತೆ ಕೊಲೆ ಭಾಗ್ಯ ನೀಡಿದವರು ಯಾರು ? ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಸಿಕೊಳ್ಳುವವರಿಗೆ ಪ್ರಜಾಪ್ರಭುತ್ವ ಉಳಿವಿನ ಬಗ್ಗೆ ಚಿಂತಿಸಬೇಕೆ ವಿನಃ ಈ ರೀತಿಯಾಗಿ ಬೇಜವಾಬ್ದಾರಿಯಿಂದ ವರ್ತಿಸುವುದಲ್ಲ.

Double standard ಬುದ್ದಿಯಿಂದ ಹೊರ ಬಂದು ಜವಾಬ್ದಾರಿಯಿಂದ ನಡೆದುಕೊಳ್ಳಲು ಕಲಿಯಿರಿ. ಭಾರತದ ಪ್ರತಿಯೊಬ್ಬ ನಾಗರಿಕನ ಹಕ್ಕು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಯೋಚಿಸಿರಿ. ಕೊಳಕು ಹಿಂದೂ ಕೋಮುವಾದಿ ಮನಸ್ಥಿತಿಯಿಂದ ಹೊರಬಂದು ಅನ್ಯ ಧರ್ಮೀಯರನ್ನು ಎರಡನೇ ದರ್ಜೆಯ ನಾಗರಿಕರಂತೆ ಕಾಣುವುದನ್ನು ನಿಲ್ಲಿಸಿ. ಎಲ್ಲರೂ ಸುಖವಾಗಿರಲೆಂದು ಬಯಸುವುದು ಮನುಷ್ಯತ್ವದ ಲಕ್ಷಣ. ತಪ್ಪು ಮಾಡುವ ಮತಾಂಧರು ಕಾನೂನಿನ ಕುಣಿಕೆಯಿಂದ ಪಾರಾಗಲು ಸಾಧ್ಯವಿಲ್ಲ. ಅಂಥಹವರನ್ನು ದೇಶದ ಕಾನೂನು ನೋಡಿಕೊಳ್ಳುತ್ತದೆ.

ಆದರೆ ದೇಶದ ಶಾಂತಿಗೆ ಭಂಗ ತರುವ ಶಕ್ತಿಗಳನ್ನು ವೈಭವೀಕರಿಸುವುದನ್ನು ಮಾಧ್ಯಮಗಳು ನಿಲ್ಲಿಸಬೇಕಾಗಿದೆ. ಇಂಥಹ ಸುಳ್ಳು ಸುದ್ದಿ ಬಿತ್ತರಿಸುವುದರಿಂದ ನಿಮಗೆ ಮನೋರಂಜನೆ ಎನಿಸಬಹುದು ಆದರೆ ಅದೇ ಮನೋರಂಜನೆ ಸಮಾಜಕ್ಕೆ ಕಂಟಕವಾಗುವ ಅಪಾಯ ತಂದೊಡ್ಡಲಿದೆ. ರಾಜ್ಯದಲ್ಲಿ ಮತೀಯ ಗಲಭೆ ಮತ್ತು ಕೊಲೆಗಳಾಗಬಾರದೆಂಬ ಕಳಕಳಿ ಮಾಧ್ಯಮಗಳಿಗಿದ್ದರೆ ಪ್ರಚೋದನೆ ನೀಡುವ ಸುಳ್ಳು ಸುದ್ದಿ ಹರಡಬೇಡಿರಿ.

ಸೂಲಿಬೆಲೆಯಂಥಹ ಅಕ್ಷರ ಭಯೋತ್ಪಾದಕರಿಂದಲೇ ಇಂದು ಕರಾವಳಿ ಹೊತ್ತಿ ಉರಿಯುತ್ತಿವೆ. ಮಾಧ್ಯಮಗಳು ಕಿಚ್ಚಿಗೆ ನೀರು ಎರೆಯಬೇಕೆ ವಿನಃ ತುಪ್ಪ ಸುರಿಯುವುದಲ್ಲ ಎಂಬ ಸಾಮಾನ್ಯ ಜ್ಞಾನ ಇಲ್ಲದೇ ಹೋದರೆ ಹೇಗೆ ಸಮಾಜಕ್ಕೆ ಭರವಸೆಯ ಬೆಳಕಾಗಲು ಸಾಧ್ಯ ?.

ಕೇವಲ ಕಿಚ್ಚು ಹಚ್ಚುವ ಬರಹದ ಬಗ್ಗೆ ಗಂಟೆಗಟ್ಟಲೇ ವೈಭವೀಕರಿಸುವ ನಿಮ್ಮ ಕಣ್ಣಿಗೆ ಕಿಚ್ಚು ಆರಿಸುವ ಮತ್ತು ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಹಾಗೂ ಮತೀಯವಾದಿ ಶಕ್ತಿಗಳಿಗೆ ಬಲಿಯಾಗದಂತೆ ಯುವಕರಿಗೆ ಕಿವಿ ಮಾತು ಹೇಳಿ ಬರೆದ ನನ್ನಂಥವರ ಬರಹಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲ ವೆಂದಾದರೆ ನಿಮಗಿರುವ ಸಾಮಾಜಿಕ ಕಾಳಜಿ ಪ್ರಶ್ನಾರ್ಹ ಅಲ್ಲವೆ ?.

ದಯವಿಟ್ಟು ಇನ್ನು ಮುಂದಾದರೂ ಸಾಮಾಜಿಕ ಹೊಣೆಗಾರಿಕೆ ಮೈಗೂಡಿಸಿಕೊಂಡು,  ಧರ್ಮದ ಹೆಸರಿನಲ್ಲಿ ಅಸಹಿಷ್ಣುತೆ ಸೃಷ್ಟಿಸಿ ಹೊಡೆದಾಡಿ, ಬಡಿದಾಡಿ ಬೀದಿ ಹೆಣವಾಗುತ್ತಿರುವ ಎರಡೂ ಕೋಮಿನ ಯುವಕರನ್ನು ರಕ್ಷಿಸುವ ಕೆಲಸವಾಗಬೇಕೇ ಹೊರತು ಏಕಪಕ್ಷೀಯವಾಗಿ ಧಾರ್ಮಿಕ ಉಗ್ರವಾದಿಗಳ ಬರಹ ಗಳನ್ನು ವೈಭವೀಕರಣ ಮಾಡುವುದನ್ನು ನಿಲ್ಲಿಸಬೇಕಿದೆ.

ಸಾಮಾಜಿಕ ಹೊಣೆಗಾರಿಕೆ ಇಲ್ಲದವರು ಸಮಾಜಕ್ಕೆ ಭರವಸೆಯ ಬೆಳಕು ಆಗಲು ಸಾಧ್ಯವಿಲ್ಲ. ಇನ್ನು ಮುಂದಾದರೂ ಕೋಮುವಾದದ ಮಬ್ಬುಗತ್ತಲಿನಲ್ಲಿರುವ ಬಿಟಿವಿಯು, ಸಮಾಜಕ್ಕೆ ಭರವಸೆಯ ಬೆಳಕು ಆಗುವ ಪ್ರಯತ್ನ ಮಾಡಿದರೆ ಖಂಡಿತವಾಗಿಯೂ ನಾನು ಖುಷಿ ಪಡುತ್ತೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)