varthabharthi

ಸುಗ್ಗಿ

ಮಲೆನಾಡಿನ ಸಮಾಜವಾದಿ ಪುಟ್ಟಯ್ಯ

ವಾರ್ತಾ ಭಾರತಿ : 7 Jan, 2018
ನೆಂಪೆ ದೇವರಾಜ್

ಸಮಾಜವಾದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಎಲ್ಲೇ ನಡೆಯಲಿ. ಆಹ್ವಾನ ಪತ್ರಿಕೆ ಇಲ್ಲದಿದ್ದರೂ ಅಲ್ಲಿಗೆ ಹಾಜರ್. ಆದರೆ ಎಂದೂ ವೇದಿಕೆಗೆ ಹಂಬಲಿಸಿದವರಲ್ಲ. ಹಿಂಬದಿಯ ಸೀಟಲ್ಲೇ ಖುಷಿಕಂಡವರು ಇವರು. ತೆರೆದಿದ್ದ ಪ್ರಕೃತಿ ಪ್ರಿಂಟರ್ಸ್ ಹಲವು ಚಳವಳಿಗಳಿಗೆ ಪ್ರೇರಕವಾಯಿತು. ಸಮಾಜವಾದಿ ಚಳವಳಿಗಾರರಂತೂ ಇವರ ಪ್ರಿಂಟಿಂಗ್ ಪ್ರೆಸ್ಸಿಗೆ ಬಹು ಹತ್ತಿರ.

ಕರ್ನಾಟಕದ ಸಮಾಜವಾದಿ ಚಳವಳಿಯು ರೂಪಿಸಿರುವ ಪ್ರಮುಖ ರಲ್ಲಿ ಶಿವಮೊಗ್ಗದ ಪುಟ್ಟಯ್ಯ ಒಬ್ಬರು.

ಮೈಸೂರಿನಲ್ಲಿ ಓದು ಮುಗಿಸಿ ಶಿವಮೊಗ್ಗಕ್ಕೆ ಬಂದವರಿಗೆ ಸಮಾಜವಾದಿ ಚಳವಳಿ ಕೈಬೀಸಿ ಕರೆಯಿತು. ಅದಾಗಲೇ ಉಳುವವನೆ ಹೊಲದೊಡೆಯ ಚಳವಳಿ ಗೋಪಾಲಗೌಡರ ನೇತೃತ್ವದಲ್ಲಿ ಒಂದು ತಾರ್ಕಿಕ ಅಂತ್ಯ ಕಾಣುವ ಎಲ್ಲ ಲಕ್ಷಣಗಳೂ ಗೋಚರಿಸಿದ್ದವು. ದಕ್ಷಿಣ ಕನ್ನಡದ ಪೆರ್ಡೂರಿನಿಂದ ಸಾಗರ ಕ್ಕೆ ಬಂದು ಒಂದು ಮತ್ತು ಎರಡನೇ ತರಗತಿ ಓದುವಾಗಲೇ ಕಾಗೋಡು ಹೋರಾಟ ಪುಟ್ಟ ಬಾಲಕನಲ್ಲಿ ಸಂಚಲನ ಮೂಡಿಸುತ್ತಿತ್ತು. ಸಾಗರ- ಶಿವಮೊಗ್ಗ-ಮೈಸೂರು ಇಲ್ಲೆಲ್ಲ ವಿದ್ಯಾಭ್ಯಾಸಕ್ಕಾಗಿ ಓಡಾಡುತ್ತಿದ್ದಾಗ ಇವರಿಗೆ ಸಮಾಜವಾದಿ ಆಲೋಚನೆಗಳು ಸಾಥ್ ನೀಡುತ್ತಾ ಬಂದವು.

ಮೈಸೂರಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯತ್ತಿದ್ದಾಗ ದಿ.ರಾಮದಾಸ್, ಎನ್.ಡಿ ಸುಂದರೇಶ್, ಪ. ಮಲ್ಲೇಶ್ ಮುಂತಾದವರ ಒಡನಾಟದಿಂದ ಶುದ್ಧ ಸೋಶಿಯಲಿಸ್ಟ್ ಆದರು. ಡಾ.ಲೋಹಿಯಾರ ‘ಅಂಗ್ರೇಜಿ ಹಟಾವೋ’ ಚಳವಳಿಯಲ್ಲಿ ಸಕ್ರಿಯರಾದರು. ಸಮಾಜವಾದಿ ಯುವಜನ ಸಭಾದೊಂದಿಗಿನ ನಂಟು ಇವರ ಯೋಚನಾ ಲಹರಿಯಲ್ಲಿ ಮಹತ್ತರ ಬದಲಾವಣೆಗಳನ್ನುಂಟು ಮಾಡಿತು. ಯುವಜನ ಸಭಾದಲ್ಲಿದ್ದಾ ಗಲೇ ಇದೇ ಜನರೆಲ್ಲ ಸೇರಿ ಕನ್ನಡ ಯುವಜನ ಸಭಾವನ್ನೂ ಸ್ಥಾಪಿಸುತ್ತಾರೆ. ಕೋಣಂದೂರು ಲಿಂಗಪ್ಪ ಮತ್ತು ಪ.ಮಲ್ಲೇಶ್ ಇದರ ನೇತಾರರು. ಮೈಸೂರಿನ ಮಲ್ಲೇಶ್‌ರವರ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಸೇರಿಕೊಳ್ಳುತ್ತಿದ್ದ ಇವರೆಲ್ಲ ಕನ್ನಡದ ಮೇಲೆ ಅನ್ಯ ಭಾಷೆಗಳು ನಡೆಸುತ್ತಿದ್ದ ದಾಳಿಯ ವಿರುದ್ದ ಚಳವಳಿ ಆರಂಭಿಸುತ್ತಾರೆ. ಸಮಾಜವಾದಿ ಯುವಜನ ಸಭಾದಿಂದ ಎನ್. ಡಿ ಸುಂದರೇಶ್, ರಾಮದಾಸ್, ನಂಜುಂಡಸ್ವಾಮಿ, ತೇಜಸ್ವಿ ಮುಂತಾದ ವರ ಕಣ್ಣು ಮೈಸೂರಿನ ಕ್ರಾಫಡ್ ಈ ಹಾಲ್ ಎದುರಿದ್ದ ಆಂಗ್ಲ ವ್ಯಕ್ತಿ ‘ಗೋರ್ಡಾನ್’ ಪ್ರತಿಮೆಯ ಮೇಲೆ ಬೀಳುತ್ತದೆ. ಈ ಗೋರ್ಡಾನ್ ಎಂಬವ್ಯಕ್ತಿಯ ಪ್ರತಿಮೆ ಭಾರತಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಇವರನ್ನು ಸದಾ ಅಣಕಿಸುತ್ತಿರುತ್ತದೆ. ಮಹಾರಾಜ ಕಾಲೇಜಿನಿಂದ ಹೊರ ಹೋದಾ ಗೆಲ್ಲ ಈ ಪ್ರತಿಮೆಗೆ ಗತಿ ಕಾಣಿಸಲೇ ಬೇಕೆಂದುಕೊಳ್ಳುತ್ತಾರೆ. ಈ ಯುವಜನ ಸಭಾದವರು. ರಾತ್ರೋರಾತ್ರಿ ಇದನ್ನು ಕೀಳುವ ಸಾಹಸ ದಲ್ಲಿ ಎಲ್ಲ ಒಂದಾಗುತ್ತಾರೆ. ಹಾರೆ, ಪಿಕಾಸಿ , ಸಬ್ಬಲ್ಲುಗಳನ್ನು ಹಾಕಿ ಮೀಟಿ ಕೆಡವಿ ಹಾಕಲು ಪ್ರಯತ್ನಿಸುತ್ತಾರೆ. ಆದರೆ ಈ ಪ್ರತಿಮೆ ಅದೆಷ್ಟು ಗಟ್ಟಿಯಾ ಗಿತ್ತೆಂದರೆ ಸಾಮಾನ್ಯ ಪ್ರಯತ್ನಗಳಿಗೆ ಕಮಕ್ ಕಿಮಕ್ ಎನ್ನದೆ ಹೋರಾ ಟಗಾರರನ್ನು ಆಟವಾಡಿಸತೊಡಗುತ್ತದೆ. ದೊಡ್ಡ ಬಾವಿ ಹಗ್ಗವನ್ನು ಕಟ್ಟಿ ಎಳೆಯುತ್ತಾರೆ. ಪ್ರತಿಮೆ ತನ್ನ ಬಿಗುವನ್ನು ಬಿಟ್ಟುಕೊಡುವುದೇ ಇಲ್ಲ!. ಒಂದು ಕಡೆ ಪೊಲೀಸರ ಕಣ್ಣಿಗೆ ಮಣ್ಣೆರಚಬೇಕು. ಮತ್ತೊಂದೆಡೆ ಮಹಾರಾಜ ಕಾಲೇಜು ಹಾಸ್ಟೆಲ್ ವಾರ್ಡನ್ ಕಣ್ಣು ತಪ್ಪಿಸಬೇಕು. ಪಿಸು ಮಾತಿನ ಕಾರ್ಯಾಚ ರಣೆಯಲ್ಲೇ ಇದೆಲ್ಲಾ ನಡೆಯುತ್ತಿರುತ್ತದೆ. ಇವರ ಗುಂಪಿನಲ್ಲಿದ್ದ ನಂಬಳ ಪ್ರಭಾಕರ್ ಎನ್ನುವವರು ಪ್ರತಿಮೆ ಯನ್ನು ಉರುಳಿಸಲು ಮತ್ತೊಂದು ಯೋಜನೆಯನ್ನು ರೂಪಿಸು ತ್ತಾರೆ. ಗಾಂಧಿ ಮಾರ್ಗದಲ್ಲಿದ್ದ ಪ್ರತಿಮೆ ಕೆಡವುವ ಹೋರಾಟ ನಂಬಳ ಪ್ರಭಾಕರ್‌ರವರ ಯೋಜನೆಯಿಂದ ಹೌಹಾರುತ್ತದೆ. ಡೈನಮೇಟ್ ಹಾಕಿ ಗೋರ್ಡಾನ್ ಪ್ರತಿಮೆ ಯನ್ನು ಉಡಾಯಿಸುವುದು ಇವರ ಯೋಚನೆ! ಈ ಪ್ಲಾನ್ ಬಾಯಿಬಿ ಟ್ಟೊಡನೆ ಉಳಿದವರ ಎದೆ ಹಾರುತ್ತದೆ. ಗಾಂಧಿ ಮಾರ್ಗ ಬಿಟ್ಟು ಈ ಯೋಜನೆ ಜಾರಿಗೆ ಬಂದರೆ ಆಗಬಹುದಾದ ಪರಿಣಾ ಮವನ್ನು ಊಹಿಸಿದ್ದರಿಂದ ಅಷ್ಟೇನೂ ಬೆಂಬಲ ಪ್ರಭಾಕರ್ ಗೆ ಸಿಗಲಿಲ್ಲ. ನಂತರ ಒಂದು ನಿರ್ಧಾ ರಕ್ಕೆ ಬರಲಾಯಿತು. ರಸ್ತೆಯೊಂದರ ಪ್ಯಾಚ್ ಕೆಲಸ ಕ್ಕಾಗಿ ಇಟ್ಟಿದ್ದ ಡಾಂಬರು ಡಬ್ಬಿ ಇವರುಗಳ ಕಣ್ಣಿಗೆ ಬಿತ್ತು. ಒಂದಷ್ಟು ಡಾಂಬರನ್ನು ತಂದು ಗೋರ್ಡಾನ್ ಪ್ರತಿಮೆಯ ಮೇಲೆ ಸುರಿದು ಸಾಮ್ರಾಜ್ಯಶಾಹಿತ್ವದ ಪ್ರಾತಿನಿಧ್ಯಕ್ಕೆ ತಮ್ಮ ವಿರೋಧವನ್ನು ತೋರಿಸಿದರು.

ಈ ನಂಬಳ ಪ್ರಭಾಕರ್‌ರವರು ಮೈಸೂರಿನಲ್ಲಿ ಯುವಜನ ಸಭಾ ದಿಂದ ನಡೆದ ಬಹಳಷ್ಟು ಹೋರಾಟದಲ್ಲಿ ಭಾಗಿಯಾಗಿದ್ದವರಂತೆ. 1977ರಎಮರ್ಜೆನ್ಸಿಯಲ್ಲೂ ಚಟುವಟಿಕೆಯಲ್ಲಿ ಇದ್ದವರು. ಆದರೆ ಇದ್ದಕ್ಕಿದ್ದಂತೆ ಇವರು ಎಲ್ಲೂ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳದಿರುವ ಬಗ್ಗೆ ಪುಟ್ಟಯ್ಯ ಆಶ್ಚರ್ಯದಿಂದ ಕೇಳುತ್ತಾರೆ. ದಿ. ಎನ್.ಡಿ ಸುಂದರೇಶ್‌ರವರ ಸಹೋದರರಾಗಿರುವ ಪ್ರಭಾಕರ್ 1978 ರ ನಂತರ ತಮ್ಮ ಮನೆ ತೀರ್ಥ ಹಳ್ಳಿ ಸಮೀಪದ ನಂಬಳದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳುತ್ತಾರೆ. ಆದರೆ ಶಿವಮೊಗ್ಗದಾದ್ಯಂತ ರೈತ ಚಳವಳಿ ಪರಾಕಾಷ್ಟೆ ತಲುಪಿದಾಗಲೂ ಇಂತಹ ಪ್ರಭಾಕರ್ ಕಾಣಿಸಿಕೊಳ್ಳದೆ ತಮ್ಮ ಕೃಷಿಯ ಬದುಕಲ್ಲಿ ಅರ್ಥ ಕಂಡುಕೊಂಡಿದ್ದು ಇನ್ನೂ ಪುಟ್ಟಯ್ಯನಂತವರಿಗೆ ಚಿದಂಬರ ರಹಸ್ಯವಾಗಿಯೇ ಕಾಡುತ್ತದೆ.

ಮೈಸೂರಿನಿಂದ ಸ್ನಾತಕೋತ್ತರ ಪದವಿ ಹೊತ್ತುಕೊಂಡು ಬಂದವರುಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮೀಜಿಯವರಿಂದ ಪ್ರೇರೇಪಿತರಾ ಗಿದ್ದನ್ನು ಮರೆಯಲು ಸಾಧ್ಯವಿಲ್ಲ. ಮಲ್ಲಾಡಿ ಹಳ್ಳಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾಗ ಸ್ವಾಮೀಜಿಯವರು ಒಂದಷ್ಟು ಶಿಕ್ಷಕರನ್ನು ಕರೆದು ಕೂರಿಸಿದರು. ‘ನಿಮ್ಮಲ್ಲಿ ಯಾರಾದರೂ ಮಲ್ಲಾಡಿಹಳ್ಳಿ ಬಿಟ್ಟು ದೂರದೂರಿಗೆ ಹೋಗಿ ಶಾಲೆ ಸ್ಥಾಪಿಸಿ ಅಲ್ಲಿಯ ಮಕ್ಕಳಿಗೆ ವಿದ್ಯೆ ನೀಡುವ ಮನಸ್ಸಿದೆಯೆ’ ಎಂದು ಪ್ರಶ್ನಿಸುತ್ತಾರೆ. ಎಲ್ಲರೂ ಮುಖ ಮುಖ ನೋಡುತ್ತಾ ಕುಳಿತರೇ ವಿನಃ ಯಾರೂ ಮುಂದೆ ಬರಲಿಲ್ಲ! ಆಗ ಸ್ವಾಮೀಜಿ ಯವರ ಪ್ರಶ್ನೆಗೆ ಮೊದಲು ಉತ್ತರಿಸಿದ್ದು ಪುಟ್ಟಯ್ಯನವರು! ‘‘ನಾನು ಹೋಗುತ್ತೇನೆ. ಎಲ್ಲಿಗೆ ಎಂಬುದನ್ನು ತಿಳಿಸಿ’’ ಎಂದರಂತೆ. ಪುಟ್ಟಯ್ಯ ನವರದು ನೇರ ನುಡಿ. ಸುತ್ತಿ ಬಳಸಿ ಮಾತಾಡುವ ಅಸಾಮಿಯಲ್ಲ. ಮಲ್ಲಾಡಿಹಳ್ಳಿಯಲ್ಲಿದ್ದಾಗ ಈ ನೇರ ನಡೆ ನುಡಿ ಇನ್ನೂ ಪ್ರಖರವಾಗಿತ್ತು.

ಶಿಕಾರಿಪುರ ತಾಲೂಕಿನ ಅಮಟೆ ಕೊಪ್ಪ ಎಂಬ ಹಳ್ಳಿಯಲ್ಲಿ ಶಾಲೆ ಸ್ಥಾಪಿಸುವ ನಿರ್ಧಾರವನ್ನು ಸ್ವಾಮೀಜಿಯವರು ಮೊದಲೇ ಮಾಡಿದ್ದರು. ಅಮಟೆಕೊಪ್ಪದಲ್ಲಿನ ಜನ ಶಾಲೆಯ ಮುಖ ನೋಡಿದವರೇ ಅಲ್ಲ! ಬೋವಿಜನಾಂಗ ಮತ್ತು ಲಂಬಾಣಿ ಜನರೇ ತುಂಬಿದ್ದ ಈ ಊರಲ್ಲಿ ಶಾಲೆ ಪ್ರಾರಂಭಿ ಸುವುದೆಂದರೆ ಅಸಾಧ್ಯದ ಮಾತಾಗಿತ್ತು. ಆದರೆ ಯಾವ ಮೀನಮೇಷಕ್ಕೂ ಎಡೆ ಮಾಡಿಕೊಡದೆ ಪುಟ್ಟಯ್ಯನವರು ಅಲ್ಲಿ ನೆಲೆಸಿ ಶಾಲೆ ಆರಂಭಿಸುವ ನಿರ್ಧಾರ ತೆಗೆದುಕೊಂಡಾಗ ಸ್ವಾಮೀಜಿಯರಿಗೆ ಖುಷಿಯಾಯಿತು. ಶಾಲೆಗೆ ಹುಡುಗರನ್ನು ತಂದು ಸೇರಿಸುವುದು, ಅವರಿಗೆ ಉಳಿದುಕೊಳ್ಳಲು ಹಾಸ್ಟೆಲ್ ಆರಂಭಿಸುವುದು ಇವರ ಮುಂದಿದ್ದ ಸವಾಲಾಗಿತ್ತು.

ನೋಡ ನೋಡುತ್ತಿದ್ದಂತೆ ಹುಡುಗರು ಶಾಲೆಯತ್ತ ಮುಖ ಮಾಡ ತೊಡಗುತ್ತಾರೆ. ಸಾಗರ, ಸೊರಬ ಮತ್ತು ತೀರ್ಥಹಳ್ಳಿ ಕಡೆ ಜೋಳಿಗೆ ಹಿಡಿದು ಹೋಗುತ್ತಾರೆ ಪುಟ್ಟಯ್ಯನವರು! ದವಸ ಧಾನ್ಯಗಳನ್ನು ಸಂಗ್ರಹಿ ಸುತ್ತಾರೆ. ಕೊಟ್ಟ ಹಣಕ್ಕೆ ರಶೀದಿ ಬರೆಯುತ್ತಾರೆ. ಇವರ ಶಿಸ್ತಿನ ಮತ್ತು ತ್ಯಾಗಮಯವಾದ ಬದುಕು ಇಲ್ಲಿ ಅರ್ಥ ಪಡೆದುಕೊಳ್ಳುತ್ತದೆ.

ಅದಾವ ಕಾರಣಕ್ಕೋ ಏನೋ ಅಮಟೆಕೊಪ್ಪದ ಶಾಲಾ ಶಿಕ್ಷಕನ ಕೆಲಸಕ್ಕೆ ವಿದಾಯ ಹೇಳುತ್ತಾರೆ. ಮತ್ತೆ ಶಿವಮೊಗ್ಗಕ್ಕೆ ಬರುತ್ತಾರೆ. ಪ್ರಕೃತಿ ಪ್ರಿಂಟರ್ಸ್ ಎಂಬ ಪ್ರೆಸ್ ಆರಂಭಿಸುತ್ತಾರೆ. ಮಾಜಿ ವಿಧಾನ ಪರಿಷತ್ ಸದಸ್ಯ ಮಾದಪ್ಪ,ಪ್ರಖರ ಸಮಾಜವಾದಿ ಎಸ್. ಬರ್ಮಪ್ಪ,ಹಾಲಪ್ಪ, ಎಂ.ಬಿ ನಟ ರಾಜ್ ಇವರಿಗೆಲ್ಲ ಈ ಪ್ರಿಂಟಿಂಗ್ ಪ್ರೆಸ್ ಹಲವು ಹೋರಾಟಗಳನ್ನು ರೂಪಿಸಲು ವೇದಿಕೆಯಾಗುತ್ತದೆ.

ಅವಿವಾಹಿತರಾಗಿಯೇ ಉಳಿದ ಪುಟ್ಟಯ್ಯನವರು ಸ್ಪುರದ್ರೂಪಿ. ಇವರು ಮದುವೆಯಾಗದೆ ಉಳಿಯಲು ಕಾರಣವೇನೆಂಬ ಕುತೂ ಹಲವಿದೆ. ಆದರೆ ಯಾರಿಗೂ ಕೇಳುವ ಧೈರ್ಯವಿಲ್ಲ! ಶ್ವೇತ ವಸ್ತ್ರಧಾರಿಯಾಗಿ ಶಿವಮೊಗ್ಗದ ಮಿಷನ್ ಕಾಂಪೌಂಡಿನಲ್ಲಿ ವಾಸವಿರುವ ಇವರಿಗೆ ಇಂದಿಗೂ ಒಂದು ಸೈಟ್ ಇಲ್ಲ ಸ್ವಂತ ಮನೆ ಇಲ್ಲ. ತಮ್ಮ ಸಹೋದರನ ಮಗಳ ಮನೆಯ ಒಂದು ಭಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಶ್ರೀಯುತರನ್ನು ಕಾಣಲು ಬಂದು ಹೋಗುವವರಿಗೆಲ್ಲ ಹೋಟೆಲ್‌ನಲ್ಲಿ ಕಾಫಿ ತಿಂಡಿ ಕೊಡಿಸಿ ಕಳುಹಿಸದೆ ಬಿಡುವವರಲ್ಲ! ಬೇರೆಯವರಿಗೆ ಬಿಲ್ ಎತ್ತಲೂ ಬಿಡುವುದಿಲ್ಲ.

ಶಿವಮೊಗ್ಗ ಸಿಟಿಯಲ್ಲಿ ಬೆಳಗ್ಗಿನ ನಾಲ್ಕು ಗಂಟೆಗೆ ಬಸ್ ಸ್ಟಾಂಡಿನಲ್ಲಿ ಕೂತು ಬೇರೆ ಬೇರೆ ಊರುಗಳಿಗೆ ಪತ್ರಿಕೆಗಳನ್ನು ವಿಂಗಡಿಸುತ್ತಾ ರಾಜಕಾರಣ ವನ್ನು ಶುದ್ಧಗೊಳಿಸುವ ಬಗ್ಗೆ ಯೋಚಿಸತೊಡಗಿದವರು. ಇದೀಗ ಈ ಇಳಿ ವಯಸ್ಸಲ್ಲಿ ಪತ್ರಿಕಾ ಏಜೆನ್ಸಿಗೆ ವಿದಾಯ ಹೇಳಿದ್ದಾರೆ. ಸಮಾಜವಾದಕ್ಕೆಸಂಬಂಧಿಸಿದ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಎಲ್ಲೇ ನಡೆಯಲಿ. ಆಹ್ವಾನ ಪತ್ರಿಕೆ ಇಲ್ಲದಿದ್ದರೂ ಅಲ್ಲಿಗೆ ಹಾಜರ್. ಆದರೆ ಎಂದೂ ವೇದಿಕೆಗೆ ಹಂಬಲಿಸಿದವರಲ್ಲ. ಹಿಂಬದಿಯ ಸೀಟಲ್ಲೇ ಖುಷಿಕಂಡವರು ಇವರು. ತೆರೆದಿದ್ದ ಪ್ರಕೃತಿ ಪ್ರಿಂಟರ್ಸ್ ಹಲವು ಚಳವಳಿಗಳಿಗೆ ಪ್ರೇರಕವಾಯಿತು. ಸಮಾಜವಾದಿ ಚಳವಳಿಗಾರರಂತೂ ಇವರ ಪ್ರಿಂಟಿಂಗ್ ಪ್ರೆಸ್ಸಿಗೆ ಬಹು ಹತ್ತಿರ.

ಜನತಾದಳ ಅಧಿಕಾರಕ್ಕೆ ಬಂದಾಗ ಬಹಳ ಮಂದಿ ಸಮಾಜವಾದಿಗಳು ಅಧಿಕಾರದ ಸವಿಯುಂಡರು. ಆದರೆ ಪುಟ್ಟಯ್ಯ ಅದರ ಹತ್ತಿರವೂ ಸುಳಿ ಯಲಿಲ್ಲ. ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಇವರಿಗೆ ಅಧಿಕಾರದ ರುಚಿಯಡುಗೆ ತಿನ್ನುವ ಬಹಳಷ್ಟು ಅವಕಾಶಗಳಿದ್ದವು. ಜೆ.ಎಚ್ ಪಟೇಲ್ ಮತ್ತು ಗೋಪಾಲಗೌಡರು ಶಿವಮೊಗ್ಗದ ನ್ಯಾಶನಲ್ ಲಾಡ್ಜಿನಲ್ಲಿ ಉಳಿದುಕೊಂಡಿದ್ದಾಗೆಲ್ಲ ಅಲ್ಲಿ ಪುಟ್ಟಯ್ಯನವರ ಹಾಜರಿ ಇದ್ದೇ ಇರುತ್ತಿತ್ತು. ಅಲ್ಲಿ ನಡೆಯುತ್ತಿದ್ದ ಅನೇಕ ಚರ್ಚೆಗಳಿಗೆ ಪುಟ್ಟಯ್ಯನವರು ಸಾಕ್ಷೀಭೂತರು. ನ್ಯಾಯವಾಗಿ ದಕ್ಕಬೇಕಿದ್ದ ಎಲ್ಲವನ್ನು ನಿರಾಕರಿಸಿದರು. ಅದಕ್ಕಿಂತ ಮುಖ್ಯ ವಾಗಿ ಅದರ ಹತ್ತಿರವೂ ಹೋಗಲಿಲ್ಲ. ಶಿವಮೊಗ್ಗ ಅಭಿವೃದ್ಧ್ದಿ ಪ್ರಾಧಿಕಾರದ ಅಧ್ಯಕ್ಷತೆಯನ್ನೂ ಬೇಡವೆಂದರು. ಅಭಿವೃದ್ಧಿ ಪ್ರಾಧಿಕಾರ ಇವರಿಗೆ ನೀಡಬೇಕಿದ್ದ ನಿವೇಶನವನ್ನೂ ತಿರಸ್ಕರಿದವರು ಪುಟ್ಟಯ್ಯನವರು!

ಭಾರತ ರತ್ನದಂತಹ ಅತ್ಯುಚ್ಚವಾದ ಪ್ರಶಸ್ತಿಗಳನ್ನು ಸಚಿನ್ ತೆಂಡುಲ್ಕರ್ ತರದ ಆಟಗಾರರಿಗೆ ಕೊಟ್ಟ ಬಗ್ಗೆ ಇವರಿಗೆ ಖೇದವಿದೆ. ದುಡ್ಡಿಗಾಗಿ ಆಡಿ ದ್ದಾರೆ. ರಾಜ್ಯಸಭೆ ಸದಸ್ಯರಾಗಿ ಪ್ರಜಾಸತ್ತೆಯ ಅತ್ಯುನ್ನತ ವೇದಿಕೆಗೆ ಹಾಜ ರಾಗದೆ ಇವರೆಲ್ಲ ಅಣಕಮಾಡುತ್ತಿರುವುದು ವಿಷಾದನೀಯ ಸಂಗತಿ ಎನ್ನುತ್ತಾರೆ. ತನ್ನ ದೇಹದಲ್ಲಿ ಉಸಿರನ್ನು ಮಾತ್ರ ಇಟ್ಟಕೊಂಡಿರುವ ಜಾರ್ಜ್ ಫೆರ್ನಾಂಡಿಸ್‌ರಂತಹ ಸರಳತೆ ಮತ್ತು ಪ್ರಾಮಾಣಿಕತೆ ಮೈಗೂಡಿಸಿಕೊಂಡಿ ರುವ, ಮತ್ತು ದೇಶಕ್ಕಾಗಿ ಜೀವ ತೇದಂಥವರಿಗೆ ಭಾರತ ರತ್ನ ಹುಡುಕಿ ಕೊಂಡು ಬಾರದಿರುವ ಬಗ್ಗೆ ಇವರಿಗೆ ಬೇಸರವಿದೆ.

ಇತ್ತೀಚೆಗೆ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಸ್ವರಾಜ್ ಅಭಿಯಾನ ಸಂಘಟನೆ ಇವರನ್ನು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದು ಸನ್ಮಾನಿಸಿತು. ಇಡೀ ಶಿವಮೊಗ್ಗದ ನೂರಾರು ಪರಿಶುದ್ಧ ಮನಸ್ಸುಗಳಿಗೆ ಖುಷಿ ಯಾಯಿತು. ಸ್ವರಾಜ್ ಇಂಡಿಯಾ ಕಾರ್ಯಕರ್ತರು ಇವರನ್ನು ಸನ್ಮಾನಕ್ಕೆ ಒಪ್ಪಿಸಿದ್ದಾದರೂ ಹೇಗೆ ಎಂಬ ಕುತೂಹಲದ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ. ಇವರನ್ನು ಸನ್ಮಾನಿಸಿದ ದೇವನೂರ ಮಹದೇವರಿಗೆ ವಂದನೆ ಗಳನ್ನು ತಿಳಿಸಬೇಕಾಗುತ್ತದೆ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಇವರನ್ನು ಸನ್ಮಾನಿಸಲು ಶಿವಮೊಗ್ಗದ ಅನೇಕರು ಪ್ರಯತ್ನಿಸಿದ್ದರು. ಸ್ವತಃ ದೇವೇಗೌಡರೇ ಇವರನ್ನು ಸನ್ಮಾನಿಸುವವರಿದ್ದರು. ಇವರ ಗೆಳೆಯರನೇಕರು ಸನ್ಮಾನ ಸ್ವೀಕಾರಕ್ಕೆ ಒಪ್ಪಿಕೊಳುವಂತೆ ಒತ್ತಾಯಿಸಿದ್ದರು. ಆದರೆ ಇದಕ್ಕೆಲ್ಲ ಸೊಪ್ಪು ಹಾಕದೆ ಸನ್ಮಾನವನ್ನು ನಯವಾಗಿಯೇ ತಿರಸ್ಕರಿಸಿದ್ದರು. ಮೊನ್ನೆ ಸ್ವರಾಜ್ ಅಭಿಯಾನದ ವಸಂತ ಕುಮಾರ್ ಮತ್ತು ಶಿವಾನಂದ ಕುಗ್ವೆಯವರು ಸನ್ಮಾನಕ್ಕೆ ಒಪ್ಪಿಕೊಳ್ಳಲಾರರು ಎಂಬ ಅನುಮಾನದಲ್ಲೇ ಹೋಗಿದ್ದರಂತೆ. ಇವರು ಒಪ್ಪಿಕೊಂಡಿದ್ದಕ್ಕೆ ಅನೇಕ ಇವರ ಗೆಳೆಯರು ಪರಮಾಶ್ಚರ್ಯಚಕಿತರಾಗಿ ನೋಡಿದ್ದಾರೆ.

             ಮೈಸೂರಿನ ಗೋರ್ಡಾನ್ ಪ್ರತಿಮೆ

‘‘ಅವರ ಮೂಲ ಸಿದ್ಧಾಂತ ನಮಗೆ ಒಪ್ಪಿತವಲ್ಲದಿದ್ದರೂ ಅವರ ಸಾಮಾಜಿಕ ಕಳಕಳಿ ಪ್ರಶ್ನಾತೀತ. ಅವರಿಗೆ ಮಾಡಿದ ಸನ್ಮಾನ ಅವರ ಸಾಮಾಜಿಕ ಕಳಕಳಿಗೆ ಸಂದ ಗೌರವ.’’ ಈ ಮಾತನ್ನು ಹೇಳಿದವರು ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ ಸಿದ್ದರಾಮಣ್ಣನವರು.ಎರಡು ಮೂರು ದಶಕ ಗಳ ಕಾಲ ಸಿದ್ದರಾಮಣ್ಣನವರು ಪ್ರತಿಪಾದಿಸುವ ಆರೆಸ್ಸೆಸ್ ಮತ್ತು ಪುಟ್ಟಯ್ಯ ನವರ ನಡುವೆ ಪ್ರಜಾಸತ್ತೆಯ ಚೌಕಟ್ಟು ಮೀರದ ರೀತಿಯಲ್ಲಿ ಮಾರಾಮಾರಿ ಯಾದ ವೈಚಾರಿಕ ಭಿನ್ನಾಭಿಪ್ರಾಯಗಳ ಚರ್ಚೆ ನಡೆದಿದೆ. ಆದರೆ ವ್ಯಕ್ತಿಗತ ವಾಗಿ ಸಿದ್ದರಾಮಣ್ಣನವರ ತರದ ಬೇರೆ ಬೇರೆ ವಿಚಾರಧಾರೆಯವರು ಕೂಡಾ ಪುಟ್ಟಯ್ಯನವರನ್ನು ಅಪ್ರತಿಮವಾಗಿ ಪ್ರೀತಿಸುತ್ತಿದ್ದರು ಎಂಬುದಕ್ಕೆ ಮೇಲಿನ ಸಿದ್ದರಾಮಣ್ಣನವರ ಮಾತೇ ಸಾಕ್ಷಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)