varthabharthi

ಸಿನಿಮಾ

ಬೃಹಸ್ಪತಿ: ಮನೋರಂಜಕ ಪ್ರೇಮ ಸಂದೇಶ

ವಾರ್ತಾ ಭಾರತಿ : 7 Jan, 2018

ಮನರಂಜನೆಯೊಂದಿಗೆ ಒಂದೊಳ್ಳೆ ಸಂದೇಶವನ್ನು ಕೂಡ ನೀಡುವಂಥ ಚಿತ್ರ ಬೃಹಸ್ಪತಿ. ಇದು ನಾಯಕ ಮನೋರಂಜನ್ ನಟನೆಯ ಎರಡನೇ ಚಿತ್ರ.

 ಇಂಜಿಯರಿಂಗ್ ಓದಿಯೂ ಉದ್ಯೋಗ ಇಲ್ಲದ ಯುವಕನ ಪಾತ್ರದಲ್ಲಿ ಮನೋರಂಜನ್ ನಟಿಸಿದ್ದಾರೆ. ಹಾಗಾಗಿ ಯಾವುದೇ ಉಪಯೋಗಕ್ಕೆ ಸಿಗದವನು ಎಂಬ ಆರೋಪ ಮನೆಯವರಿಂದಲೇ ಬರುತ್ತಿರುತ್ತದೆ. ಇದರೊಂದಿಗೆ ಒಳ್ಳೆಯ ಕೆಲಸದಲ್ಲಿದ್ದುಕೊಂಡು ತನಗೆ ಸ್ಪರ್ಧಿಯಂತೆ ಕಾಡುವ ತಮ್ಮನ ಕಾಟವೂ ಈತನಿಗಿರುತ್ತದೆ. ಆದರೆ ಎಲ್ಲ ಸಂದರ್ಭದಲ್ಲಿಯೂ ಜತೆಗಿರುವ ತಾಯಿಯ ಬೆಂಬಲ ಆತನಿಗೆ ಶ್ರೀರಕ್ಷೆಯಾಗಿರುತ್ತದೆ. ಆದರೆ ಅವೆಲ್ಲವನ್ನೂ ದಾಟಿ ಬದುಕಿನಲ್ಲಿ ಸಾಧನೆಯ ಮೆಟ್ಟಿಲು ಏರುವ ಕ್ಷಣ ಹೇಗಿರುತ್ತದೆ ಎನ್ನುವುದೇ ಚಿತ್ರದ ಕತೆ.

ಬೃಹಸ್ಪತಿ ತಮಿಳಿನ ‘ವಿಐಪಿ’ ಚಿತ್ರದ ರಿಮೇಕ್. ನಿರ್ದೇಶಕ ನಂದಕಿಶೋರ್ ಮೂಲ ಸಿನೆಮಾದ ದೃಶ್ಯಗಳನ್ನು ಹಾಗೆಯೇ ಕನ್ನಡಕ್ಕೆ ತಂದಿದ್ದಾರೆ. ಆದರೆ ಸಂಭಾಷಣೆಗಳಲ್ಲಿ ರವಿಚಂದ್ರನ್ ಪುತ್ರ ಎನ್ನುವುದನ್ನು ನೆನಪಿಸುವಂಥ ಮಾತುಗಳನ್ನು ಸೇರಿಸಿ ಅಭಿಮಾನಿಗಳ ಮನಗೆಲ್ಲಲು ಪ್ರಯತ್ನಿಸಿದ್ದಾರೆ. ಚಿತ್ರದಲ್ಲಿ ನಾಯಕನ ಪಕ್ಕದ್ಮನೆ ಹುಡುಗಿಯಾಗಿ ನಟಿಸಿರುವುದು ದೂರದ ಬಂಗಾಳಿ ಚೆಲುವೆ ಮಿಷ್ತಿ ಚಕ್ರವರ್ತಿ. ತಂದೆಯಾಗಿ ಸಾಯಿಕುಮಾರ್ ಅಭಿನಯಿಸಿದ್ದು, ಅವರಿಗೆ ಕನ್ನಡದಲ್ಲಿ ಇದು ವಿಭಿನ್ನ ಲುಕ್ ಇರುವ ಚಿತ್ರವಾಗಿದೆ. ತಾಯಿಯಾಗಿ ಸಿತಾರಾ ಕನ್ನಡಕ್ಕೆ ಮರಳಿ ಬಂದಿದ್ದಾರೆ. ಅವರ ಪಾತ್ರಕ್ಕೆ ಚಿತ್ರದಲ್ಲಿ ಪ್ರಾಧಾನ್ಯತೆ ಇದ್ದು, ತಾಯಿ ಸೆಂಟಿಮೆಂಟ್ ಪ್ರೇಕ್ಷಕರ ಮೇಲೆ ಚೆನ್ನಾಗಿ ಪರಿಣಾಮ ಬೀರುವಂತಿದೆ. ಖಳನಾಗಿ ತಾರಕ್ ಪೊನ್ನಪ್ಪಸದ್ಯದಲ್ಲೇ ನಾಯಕನಾಗುವ ಲಕ್ಷಣ ತೋರಿಸಿದ್ದಾರೆ.

ಮನೋರಂಜನ್ ತಮ್ಮ ಪ್ರಥಮ ಚಿತ್ರ ‘ಸಾಹೇಬ’ದಿಂದಲೇ ತಮ್ಮ ಆಯ್ಕೆ ತಂದೆ ನಟಿಸಿದ ಚಿತ್ರಗಳಿಗಿಂತ ಭಿನ್ನ ಎಂದು ತೋರಿಸಿಕೊಟ್ಟಿದ್ದರು. ಆದರೂ ಈ ಚಿತ್ರ ನೋಡುವಾಗ ರವಿಚಂದ್ರನ್‌ರ ‘ಚೋರ ಚಿತ್ತ ಚೋರ’ ಸಿನೆಮಾದ ನೆನಪಾದರೂ ಅಚ್ಚರಿಯಿಲ್ಲ. ಮನೋರಂಜನ್ ರವಿಚಂದ್ರನ್ ನಷ್ಟು ಚೆಲುವನಲ್ಲದಿದ್ದರೂ ಅಭಿನಯದಲ್ಲಿ ಒಂದು ಕೈ ಮುಂದೆಯೇ ಇದ್ದೇನೆ ಎಂಬಂತೆ ಪಾತ್ರವನ್ನು ಆವಾಹಿಸಲು ಪ್ರಯತ್ನಿಸಿರುವುದು ಅಭಿನಂದನೀಯ.

ಸಂಭಾಷಣೆಯಲ್ಲಿ ಎಲ್ಲೋ ಒಂದಷ್ಟು ಸ್ಪಷ್ಟತೆಯ ಕೊರತೆಯಿದ್ದರೂ, ಒಂದೇ ಶಾಟ್‌ನಲ್ಲಿ ಪುಟಗಟ್ಟಲೆ ಮಾತನಾಡಿ ಅಚ್ಚರಿ ಮೂಡಿಸುತ್ತಾರೆ. ಅವಿನಾಶ್ ಮತ್ತು ಪ್ರಕಾಶ್ ಬೆಳವಾಡಿ ಸಣ್ಣ ಪಾತ್ರಗಳಲ್ಲಿ ಬಂದು ಹೋಗುತ್ತಾರೆ. ಸಾಧು ಕೋಕಿಲ ಈ ಬಾರಿ ತುಸು ಗಂಭೀರವಾಗಿದ್ದುಕೊಂಡು ನಗಿಸುವ ಪ್ರಯತ್ನ ನಡೆಸಿದ್ದಾರೆ. ಛಾಯಾಗ್ರಾಹಕ ಸತ್ಯ ಹೆಗಡೆ ಕಣ್ಣಲ್ಲಿ ಮೈಸೂರು ಮನಸೂರೆಗೊಳ್ಳುವಂತಿದೆ. ಹರಿಕೃಷ್ಣ ಸಂಗೀತದಲ್ಲಿ ಎರಡು ಹಾಡುಗಳು ಚೆನ್ನಾಗಿವೆ. ಯೋಗರಾಜ್ ಭಟ್ ರಚನೆಯ ಹಾಡುಗಳೊಂದಿಗೆ ನವ ಪ್ರತಿಭೆ ಪ್ರದ್ಯುಮ್ನರ ರಚನೆಯೂ ಮನ ಸೆಳೆಯುತ್ತದೆ. ಸಂಭಾಷಣೆಗಳು ಹೆಚ್ಚು ಸಿಳ್ಳೆ ಗಿಟ್ಟಿಸಿಕೊಳ್ಳುತ್ತವೆ.

ಮೂಲ ಸಿನೆಮಾ ನೋಡಿದವರಿಗೆ ಮತ್ತು ರವಿಚಂದ್ರನ್ ಶೈಲಿಯ ಚಿತ್ರ ಬಯಸುವವರಿಗೆ ಸಿನೆಮಾ ತೃಪ್ತಿ ನೀಡುವುದು ಕಷ್ಟ. ಆದರೆ ಒಂದು ಒಳ್ಳೆಯ ಸಾಂಸಾರಿಕ ಮನೋರಂಜನಾ ಚಿತ್ರ ನೋಡಲು ಬಯಸುವವರಿಗೆ ಖಂಡಿತವಾಗಿ ಚಿತ್ರ ಇಷ್ಟವಾಗುತ್ತದೆ.

ತಾರಾಗಣ: ಮನೋರಂಜನ್, ಮಿಷ್ತಿ ಚಕ್ರವರ್ತಿ
ನಿರ್ದೇಶಕ: ನಂದ ಕಿಶೋರ್
ನಿರ್ಮಾಪಕ: ರಾಕ್‌ಲೈನ್ ವೆಂಕಟೇಶ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)