varthabharthi

ಸುಗ್ಗಿ

ಮಲೆನಾಡಿನ ನಕ್ಷತ್ರಗಳು-ಶ್ರಮಸಂಸ್ಕೃತಿಯ ಪ್ರತೀಕ

ಕುಳ್ಳುಂಡೆ ತಿಮ್ಮಯ್ಯಗೌಡ ಕೆಳನರಸೆ ದೇವಪ್ಪಗೌಡ ಕೆ.ಸಿ. ಮಂಜಪ್ಪ

ವಾರ್ತಾ ಭಾರತಿ : 7 Jan, 2018
ಕೆ.ಆರ್. ದಯಾನಂದ. ತೀರ್ಥಹಳ್ಳಿ

ತ್ಯಾನಂದೂರು ಪುಟ್ಟಣ್ಣನವರು ‘‘ಬರೇ ನನ್ನ ಕೃಷಿ ಕಾರ್ಯವನ್ನು ನೋಡಬೇಡ, ನಮ್ಮ ಕೆಳನರಸೆ ತಿಮ್ಮಯ್ಯಗೌಡರ ಕಾರ್ಯ ಶೈಲಿಯನ್ನು ನೋಡು, ಅವರ ತಮ್ಮ ಕೆ.ಸಿ. ಮಂಜಪ್ಪನವರ ಕೃಷಿ ಹೋರಾಟವನ್ನು ತಿಳಿದುಕೋ, ಅವರಿಬ್ಬರ ಅಣ್ಣ ಕೆಳನರಸೆ ದೇವಪ್ಪಗೌಡರು ಕುಟುಂಬದ ಯಜಮಾನರಾಗಿ ಕೃಷಿ ಕ್ಷೇತ್ರ ವ್ಯಾಪಾರ-ವ್ಯವಹಾರ ಅವರ ಬದುಕು ಎಲ್ಲವನ್ನು ಅರ್ಥಮಾಡಿಕೋ, ದೇವಪ್ಪಗೌಡರ ಶ್ರೀಮತಿಯವರಾದ ಗೌರಮ್ಮನವರ ಬಗ್ಗೆ ತಿಳಿದುಕೊಳ್ಳಲೇಬೇಕು’’ ಎಂದಿದ್ದರು.

ಮಲೆನಾಡು ಭಾಗದ ಪ್ರಗತಿಪರ ಕೃಷಿಕರು ಮತ್ತು ಚಿಂತಕರಾಗಿದ್ದ ವೈ.ಎಸ್. ಪುಟ್ಟಣ್ಣ ತ್ಯಾನಂದೂರು ಇವರು ನನಗೆ ಕೆಳನರಸೆ ಕುಟುಂಬವನ್ನು ಪರಿಚಯಿಸಿದ್ದು. ಪರಿಚಯ ಭೇಟಿಯ ಮೂಲಕವಲ್ಲ, ಮಾತಿನ ಮೂಲಕ. ಕೃಷಿ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ನಾನು ಪುಟ್ಟಣ್ಣನವರಲ್ಲಿಗೆ ಪದೇ ಪದೇ ಹೋಗುತ್ತಿದ್ದೆ, ಬಹಳ ಸಮಯವನ್ನು ಅವರಲ್ಲಿ ಕಳೆಯುತ್ತಿದ್ದೆ. ಆಗ ತ್ಯಾನಂದೂರು ಪುಟ್ಟಣ್ಣನವರು ‘‘ಬರೇ ನನ್ನ ಕೃಷಿ ಕಾರ್ಯವನ್ನು ನೋಡಬೇಡ, ನಮ್ಮ ಕೆಳನರಸೆ ತಿಮ್ಮಯ್ಯಗೌಡರ ಕಾರ್ಯ ಶೈಲಿಯನ್ನು ನೋಡು, ಅವರ ತಮ್ಮ ಕೆ.ಸಿ. ಮಂಜಪ್ಪನವರ ಕೃಷಿ ಹೋರಾಟವನ್ನು ತಿಳಿದುಕೋ, ಅವರಿಬ್ಬರ ಅಣ್ಣ ಕೆಳನರಸೆ ದೇವಪ್ಪಗೌಡರು ಕುಟುಂಬದ ಯಜಮಾನರಾಗಿ ಕೃಷಿ ಕ್ಷೇತ್ರ ವ್ಯಾಪಾರ-ವ್ಯವಹಾರ ಅವರ ಬದುಕು ಎಲ್ಲವನ್ನು ಅರ್ಥಮಾಡಿಕೋ, ದೇವಪ್ಪಗೌಡರ ಶ್ರೀಮತಿಯವರಾದ ಗೌರಮ್ಮನವರ ಬಗ್ಗೆ ತಿಳಿದುಕೊಳ್ಳಲೇಬೇಕು’’ ಎಂದಿದ್ದರು. ಇದು ನನ್ನ ಯುವ ಮನಸ್ಸಿಗೆ ಬಹಳ ಆಳವಾಗಿ ಇಳಿದುಬಿಟ್ಟಿತ್ತು. ನಂತರದ ದಿನಗಳಲ್ಲಿ ಮುದ್ದಾಂ ಅವರ ಮನೆಗಳಿಗೆ ಭೇಟಿ ಕೊಟ್ಟು, ಅವರ ತೋಟಗಳನ್ನು ತಿರುಗಿ ಹೊಸ ಅರಿವನ್ನು ಅನುಭವಿಸುತ್ತ ಹೋದೆ.

ಕುಳ್ಳುಂಡೆ ತಿಮ್ಮಯ್ಯಗೌಡರು

ತೆಳ್ಳನೆಯ, ಎತ್ತರದ, ಕಡುಬಣ್ಣದ ಸದಾ ಖಾದಿ ಬಟ್ಟೆಯಲ್ಲಿರುವ ವ್ಯಕ್ತಿ. ಮಾತು ನೇರ, ಸ್ಪಷ್ಟ, ಕೃಷಿಯನ್ನು ಒಂದು ತಪಸ್ಸಿನಂತೆ ಮಾಡಿ ತೋರಿಸಿದವರು. ಕುಳ್ಳುಂಡೆ ಜಮೀನನ್ನು ಅರೆದು ಕುಡಿದವರು. ಅವರ ತೋಟಗಳನ್ನು ನೋಡಿದರೆ ತಿಮ್ಮಯ್ಯ ಗೌಡರ ಅಂತಃಸತ್ವ ಏನೆಂದು ತಿಳಿಯುತ್ತಿತ್ತು. ನಿರ್ಗರ್ವಿ, ಸ್ನೇಹಪರರು, ದಾನಿಗಳು. ಅವರ ಮಗ ಕೇಶವಮೂರ್ತಿಯ ನೆನಪಿಗಾಗಿ ತೀರ್ಥಹಳ್ಳಿಯಲ್ಲಿ ಒಕ್ಕಲಿಗರ ಸಮುದಾಯಕ್ಕೆ ಕಲ್ಯಾಣ ಮಂದಿರವನ್ನು ಕಟ್ಟಿ ದಾನ ಮಾಡಿದವರು. ಹಾಗೆಯೇ ಶಿವಮೊಗ್ಗ ಒಕ್ಕಲಿಗರ ಸಮುದಾಯದ ಕಟ್ಟಡಕ್ಕೆ ಸಹಾಯವನ್ನು ನೀಡಿದವರು. ಅವರೂ ಸಹ ಶಿಕ್ಷಣ ಕ್ಷೇತ್ರದಲ್ಲಿ ದುಡಿದವರು. ನಮ್ಮ ತೀರ್ಥಹಳ್ಳಿಯ ತುಂಗಾ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿದ್ದವರು. ಶಿಕ್ಷಣಕ್ಕಾಗಿ ಅವರು ಸಹಾಯ ಮಾಡಿದ ಒಂದು ಪರಿಯನ್ನು ನಿಮಗೆ ತಿಳಿಸುತ್ತೇನೆ. ನಾನು ತುಂಗಾ ಕಾಲೇಜಿನ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ತಿಮ್ಮಯ್ಯಗೌಡರು ಬಂದಿದ್ದರು.

ಸಾಮಾನ್ಯನಂತೆ ಇಡೀ ಸಮಾರಂಭದಲ್ಲಿ ಕೂತಿದ್ದು ಹೊರಡುವಾಗ ನನ್ನನ್ನು ಬದಿಗೆ ಕರೆದು ಒಂದು ಕವರನ್ನು ಕೊಟ್ಟರು. ಇದೇನೆಂದೆ. ‘‘ಸ್ವಲ್ಪ ಹಣವಿದೆ ಇದನ್ನು ಶಿಕ್ಷಣದ ಅಭಿವೃದ್ಧಿಗೆ ಬಳಸಿಕೊಳ್ಳಿ’’ ಎಂದರು. ಎಷ್ಟಿದೆ ಹಣ ಇದರಲ್ಲಿ ಎಂದಾಗ, ಬಹಳವಿಲ್ಲ ಎಂದರು. ನಾನು ಪ್ರಿನ್ಸಿಪಾಲರನ್ನು ಕರೆದು ‘ತಿಮ್ಮಯ್ಯಗೌಡರು ಶಿಕ್ಷಣದ ಅಭಿವೃದ್ಧಿಗೆ ಕೊಡುತ್ತಿರುವ ಹಣ ಇದು, ಎಷ್ಟಿದೆ ಎಣಿಸಿ ಜಮಾ ತೆಗೆದುಕೊಳ್ಳಿ’ ಎಂದೆ. ಎಣಿಸಿದರೆ 50 ಸಾವಿರ ರೂ.ಗಳು! ದಂಗಾಗಿ ಹೋದೆವು. ‘ಅಲ್ಲ ತಿಮ್ಮೇಗೌಡರೆ ಸಮಾರಂಭದ ಮುಂಚೆ ನೀವು ಕೊಡುವುದನ್ನು ತಿಳಿಸಿದ್ದರೆ, ವಿದ್ಯಾರ್ಥಿಗಳ ಎದುರಿನಲ್ಲಿ ಇದನ್ನು ವ್ಯಕ್ತಪಡಿಸುತ್ತಿದ್ದೆವು, ಯಾಕೆ ತಿಳಿಸಲಿಲ್ಲ’ ಎಂದು ನಾವು ನೊಂದುಕೊಂಡರೆ: ‘ಈ ಆಡಂಬರಗಳೆಲ್ಲ ಬೇಡ, ಯಾವ ರೀತಿಯಲ್ಲಿ ಕೊಟ್ಟರೇನಂತೆ ಒಟ್ಟಿನಲ್ಲಿ ಶಿಕ್ಷಣಕ್ಕೆ ಸಂದರಾಯಿತು’ ಎಂದರು. ಅವತ್ತು ಅವರು ಕೊಟ್ಟ ಆ ಹಣದಿಂದ ತಿಮ್ಮಯ್ಯಗೌಡರ ಶ್ರೀಮತಿಯಾದ ಮೀನಾಕ್ಷಮ್ಮನವರ ಹೆಸರಿನಲ್ಲಿ ತುಂಗಾ ಕಾಲೇಜಿನಲ್ಲಿ ವಿಜ್ಞಾನ ಪ್ರಯೋಗಾಲಯ ಕೊಠಡಿಯೊಂದನ್ನು ನಿರ್ಮಿಸಿದೆ. ಹೀಗೆ ಹಲವು ರೀತಿಗಳಲ್ಲಿ ವಿವಿಧ ಕ್ಷೇತ್ರಗಳಿಗೆ ಸಹಾಯ ಮಾಡುತ್ತಿದ್ದರು. ಕೊನೆಯವರೆಗೂ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದೆ, ಅದು ಅವರ ಮಗ ನಾಗರಾಜನ ಜೊತೆಗೆ ಮುಂದುವರಿದಿದೆ.

ಮುಡುಬ ಕೆ.ಸಿ. ಮಂಜಪ್ಪನವರು:

ತ್ಯಾನಂದೂರು ಪುಟ್ಟಣ್ಣನವರು ಹೇಳಿದ್ದಲ್ಲದೆ ಸಾರ್ವಜನಿಕವಾಗಿಯೂ ಮಂಜಪ್ಪನವರ ಬಗ್ಗೆ ಬಹಳ ಕೇಳಿದ್ದೆ. ಜೀವನದಲ್ಲಿ ಬಹಳ ಹಠವಾದಿ. ಏನೇ ಕೆಲಸವನ್ನು ಮಾಡಬೇಕೆಂದು ಒಂದು ಸಾರಿ ಯೋಚಿಸಿದರೆ ಮಾಡಿಯೇ ತೀರಬೇಕು. ಮುಡುಬ ಸೇತುವೆ ಅವರಿಲ್ಲದಿದ್ದರೆ ಅದು ಅಲ್ಲಿ ಆಗುತ್ತಲೇ ಇರಲಿಲ್ಲ. ಹೊಳೆಯಿಂದ ಬಹಳ ದೂರದಲ್ಲಿರುವ ಅಡಿಕೆ ಮತ್ತು ಕಾಫಿ ತೋಟಗಳಿಗೆ ಆ ಕಾಲದಲ್ಲಿಯೇ ನೀರಾವರಿ ವ್ಯವಸ್ಥೆ ಮಾಡಿದ್ದರು. ಅವರ ಜಮೀನು ಹೆಚ್ಚು ಗುಡ್ಡ ಬೆಟ್ಟಗಳಿಂದ ಕೂಡಿದ್ದು, ಅಂತಹದರಲ್ಲೂ ಅದನ್ನು ಬಹಳ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಪಡಿಸಿದ್ದರು. ನಾನೊಮ್ಮೆ ಅವರ ಜೊತೆಯಲ್ಲಿ ರಾತ್ರಿಯೆಲ್ಲ ಶಿಕಾರಿಗೆ ಹೋಗಿದ್ದೆ. ಬರೀ ಮೊಲಗಳು ಮಾತ್ರ ಸಿಕ್ಕಿದ್ದವು. ಮುಂಜಾನೆ 4 ಗಂಟೆಗೆ ಮಲಗಿದವರು ಬೆಳಗ್ಗೆ 6 ಗಂಟೆಗೆ ಎದ್ದು ಕೆಲಸದ ಮೇಲೆ ನಿರತರಾಗಿದ್ದರು. ನಾನು ಕೇಳಿದೆ: ನಿಮಗೆ ನಿದ್ದೆಯಿಲ್ಲದೆ ಸುಸ್ತಾಗುವುದಿಲ್ಲವೇ ಎಂದು. ಸುಸ್ತು ಅಂತ ಮಲಗಿದರೆ ನಾಳೆ ಇದೇ ಅಭ್ಯಾಸವಾಗುತ್ತೆ ಎನ್ನುತ್ತಿದ್ದರು. ನನ್ನ ಕೃಷಿ ಪ್ರಯೋಗಗಳನ್ನು ಕಂಡು ಖುಷಿ ಪಡುತ್ತಿದ್ದರು. ಮನೆಗೆ ಬಂದ ಅತಿಥಿಗಳನ್ನು ಕರೆದುಕೊಂಡು ಬಂದು ತೋರಿಸುತ್ತಿದ್ದರು. ನನ್ನ ನರ್ಸರಿ ಗಿಡಗಳಿಗೆ ಬಹಳ ಜನ ಗಿರಾಕಿಗಳನ್ನು ಕಳುಹಿಸುತ್ತಿದ್ದರು. ಇವರ ಕೃಷಿ ಸಾಧನೆಗಳು ನನ್ನ ಮೇಲೆ ಬಹಳ ಪ್ರಭಾವವನ್ನು ಬೀರಿದೆ. ಮಂಜಪ್ಪನವರನ್ನು ಕಂಡರೆ ಅವರ ಹತ್ತಿರದವರೆಲ್ಲ ಹೆದರುತ್ತಿದ್ದರು. ಇದು ಕೊನೆಯಲ್ಲಿ ನನಗೂ ಅನುಭವಕ್ಕೆ ಬಂತು. ಸಿಟ್ಟು ಜಾಸ್ತಿ. ಮಂಜಪ್ಪನವರಿಗೆ ಸಿಟ್ಟನ್ನು ನಿಯಂತ್ರಿಸುವ ಶಕ್ತಿಯೊಂದಿದ್ದರೆ ಅವರ ಮುಂದೆ ಮನುಷ್ಯರೇ ಇಲ್ಲ.

ಕೆಳನರಸೆ ದೇವಪ್ಪಗೌಡರು ಮತ್ತು ಗೌರಮ್ಮ

ಕೆಳನರಸೆ ದೇವಪ್ಪಗೌಡರ ಒಡನಾಟ ನನಗೆ ಬಹಳ ಕಡಿಮೆಯೇ. ಆದರೆ ನಾನು ಅವರ ಬಗ್ಗೆ ಕೇಳಿರುವುದು ಜಾಸ್ತಿ. ನನಗೆ ಒಂದು ರೀತಿಯಲ್ಲಿ ‘ದಂತ ಕಥೆ’ಯಾಗಿದ್ದವರು. ನಾನು ಹುಡುಗನಾದ ಸಂದರ್ಭದ ಒಂದು ಅನುಭವವನ್ನು ನೆನೆಸಿಕೊಳ್ಳುತ್ತೇನೆ. ನಮ್ಮ ಬಂಧು ಬೇಗಾನೆ ರಾಮಯ್ಯರವರ ಮದುವೆಯ ಸಂದರ್ಭದಲ್ಲಿ ನಮ್ಮ ಹುಡುಗರಿಗೆ ಊಟ ಬಡಿಸುವ ಕೆಲಸ. ಹುಡುಗಿಯರಿಗೆಲ್ಲ, ಉಪ್ಪು, ಉಪ್ಪಿನಕಾಯಿ, ಹಪ್ಪಳ ಹೀಗೆ ಸಣ್ಣ ತಿನಿಸುಗಳನ್ನು ಬಡಿಸುವ ಕೆಲಸವನ್ನು ನಮ್ಮ ಮಾವಂದಿರು ಹಚ್ಚಿದ್ದರು. ಊಟದ ಚಪ್ಪರದ ಮೇಲ್ವಿಚಾರಣೆಯನ್ನು ಕೆಳನರಸೆ ದೇವಪ್ಪಗೌಡರು ನೋಡಿಕೊಳ್ಳುತ್ತಿದ್ದರು. ದೇವಪ್ಪಗೌಡರು ನಮ್ಮ ಮಾವ ಕಡ್ತೂರು ನಾಗಪ್ಪಗೌಡರಿಗೆ ಹತ್ತಿರದ ಬಂಧುಗಳು ಹಾಗೂ ಆತ್ಮೀಯರು. ಆ ಮದುವೆಗೆ 3-4 ಸಾವಿರ ಜನರು ಸೇರಿದ್ದರು. ಊಟದ ಚಪ್ಪರವೂ ದೊಡ್ಡದು. ಅಭ್ಯಾಸವಿಲ್ಲದೆ ಬಡಿಸುವುದು ಕಷ್ಟಕರವಾಗಿತ್ತು. ಒಂದೊಂದು ಪಂಕ್ತಿ ಊಟ ಆದ ನಂತರ ಮತ್ತೊಂದು ಪಂಕ್ತಿಗೆ ಕೆಲ ಹುಡುಗರು ತಪ್ಪಿಸಿಕೊಳ್ಳುತ್ತಿದ್ದರು. ನಾನು ಏನಾದರಾಗಲಿ ಎಂದು 3 ಪಂಕ್ತಿಯವರೆಗೂ ಉಪ್ಪನ್ನು ಒಂದೇ ಸಮನೆ ಬಡಿಸಿದೆ. ಇದನ್ನು ಮೊದಲಿನಿಂದಲೂ ಗಮನಿಸುತ್ತಿದ್ದ ದೇವಪ್ಪಗೌಡರು ನನ್ನನ್ನು ಹತ್ತಿರ ಕರೆದು ಈ ಹುಡುಗ ಯಾರೆಂದು ನಮ್ಮ ಮಾವ ನಾಗಪ್ಪಗೌಡರಲ್ಲಿ ಕೇಳಿದರು. ಇವನು ನಮ್ಮ ಅಕ್ಕನ ಮಗ ದಯಾನಂದ ಎಂದರು. ದೇವಪ್ಪಗೌಡರು ಬೆನ್ನು ತಟ್ಟಿ ಕೆಲಸವನ್ನು ಚೆನ್ನಾಗಿ ಮಾಡುತ್ತಿದ್ದೀಯಾ. ಹುಡುಗರು ಹೀಗೆ ಕೆಲಸ ಮಾಡಬೇಕೆಂದು ‘ಭೇಷ್’ ಎಂದರು. ಬಗ್ಗಿ, ಎದ್ದು ಉಪ್ಪು ಬಡಿಸಿದ್ದರ ನೋವೆಲ್ಲವೂ ಒಂದು ಕ್ಷಣ ಮಾಯವಾಯಿತು. ಬಹುಶಃ ದೇವಪ್ಪಗೌಡರನ್ನು ಶಾಶ್ವತವಾಗಿ ನೆನಪಿಟ್ಟುಕೊಳ್ಳಲು ಇದೊಂದು ಘಟನೆ ಸಾಕೆಂದು ಕಾಣಿಸುತ್ತೆ.

ಶಿವಮೊಗ್ಗದಲ್ಲೊಮ್ಮೆ ಗುತ್ತಿಗೇರಿ ಮಾನಪ್ಪನನ್ನು (ಚಿತ್ರನಟ ಮಾನು) ಹುಡುಕಿಕೊಂಡು ಹೊರಟಿದ್ದೆ. ಅವನು ದೇವಂಗಿ ಮಂಡಿಯ ಮೇಲಿನ ರೂಂನಲ್ಲಿದ್ದು ಓದುತ್ತಿದ್ದ. ಮಾತನಾಡಿ ಸ್ವಲ್ಪ ಹೊತ್ತಾದ ಮೇಲೆ ಎಲ್ಲಾದರು ಊಟ ಮಾಡೋಣ ಬಾ ಎಂದೆ. ಅವನು ಇಲ್ಲ, ನಾನು ಎರಡು ಹೊತ್ತು ಊಟವನ್ನು ದೇವಪ್ಪಗೌಡರ ಮನೆಯಲ್ಲಿ ಮಾಡುತ್ತಿದ್ದೇನೆ. ನಾನು ಊಟಕ್ಕೆ ತಪ್ಪಿಸಿಕೊಳ್ಳುವ ಹಾಗಿಲ್ಲವೆಂದ. ಇನ್ನೂ ಮುಂದುವರಿದು ಆ ಕಾಲದಲ್ಲಿ ದೇವಪ್ಪಗೌಡರ ಮನೆಯಲ್ಲಿ ಇದ್ದು ಯಾರ್ಯಾರು ಓದುತ್ತಿದ್ದಾರೆ, ಊಟಕ್ಕೆ ಬರುವವರು ಯಾರು, ದೇವಪ್ಪಗೌಡರು ನಮ್ಮಂತಹ ಹುಡುಗರಿಗೆಲ್ಲ ಹೇಗೆ ಸಹಾಯ ಮಾಡುತ್ತಿದ್ದಾರೆ ಎಂದು ಕಣ್ಣಿಗೆ ಕಟ್ಟುವ ಹಾಗೆ ಹೇಳಿದ.

ತ್ಯಾನಂದೂರು ಪುಟ್ಟಣ್ಣನವರು ಒಮ್ಮೆ ಮಾತನಾಡುತ್ತ ಹೇಳಿದ್ದರು. ಕೊಡಗಿನ ಕಡೆಯಿಂದ ಬಂದ ಎರಡು ಹೆಣ್ಣುಮಕ್ಕಳು, ಒಬ್ಬರು ಗಬಡಿ ಸುಬ್ಬಮ್ಮನವರು, ಇನ್ನೊಬ್ಬರು ಗೌರಮ್ಮನವರು, ಇವರು ಬರೀ ತಾಯಿಯಾಗಿ ಬೆಳೆಯಲಿಲ್ಲ, ಈ ಭಾಗಕ್ಕೆ ‘ಮಹಾತಾಯಿ’ಯರಾದರು. ಮಲೆನಾಡಿಗರು ನಾವು ಅವರನ್ನು ಮರೆಯುವಂತಿಲ್ಲ ಎಂದಿದ್ದರು. ತೀರ್ಥಹಳ್ಳಿಯ ಕಿಟ್ಟಪ್ಪ ಮೇಸ್ಟ್ರ ಮಾತಿನಲ್ಲಿ ಹೇಳುವುದಾದರೆ, ಅವರ ಮನೆಯಲ್ಲಿದ್ದು ಓದುತ್ತಿದ್ದ ನನ್ನಂತಹ ಬಡ ಹುಡುಗನನ್ನು ಮಗನಂತೆ ನೋಡಿಕೊಂಡರು, ಮುಂದೆ ಅವರ ಮನೆಯವರಲ್ಲೊಬ್ಬನಾದೆ. ಅವರೇ ನನ್ನ ಭಾಗದ ದೇವರು ಎನ್ನುತ್ತಾರೆ.

ಮಲೆನಾಡಿನಲ್ಲಿ 20ನೇ ಶತಮಾನದ ಮೊದಲಾರ್ಧದಲ್ಲಿ ಶಿಕ್ಷಣ- ಸಾಮುದಾಯಿಕ ಸೇವೆಗಳಲ್ಲಿ ನಿರತರಾಗಿದ್ದ ಮೂವರು ಮಹನೀಯರ ಕುರಿತು ಕೆ.ಆರ್. ದಯಾನಂದ್ ಬರೆದಿದ್ದಾರೆ. ಇದನ್ನು ಡಾ. ಶ್ರೀಕಂಠ ಕೂಡಿಗೆ ಸಂಪಾದಿತ ದೇವಕೃಪ ಕೃತಿಯಿಂದ ಆರಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)