varthabharthi

ವೈವಿಧ್ಯ

ಪರಿಸರ ಸಂಬಂಧಿ ಅಪರಾಧ: ದ್ವಂದ್ವ ನೀತಿ

ವಾರ್ತಾ ಭಾರತಿ : 8 Jan, 2018
ಸಮೃದ್ಧಿ ಮತ್ತು ಗೀತಾಂಜೊಯ್ ಸಾಹು

2016ರಲ್ಲಿ ಇಡೀ ಭಾರತದಲ್ಲಿ ವಾಯುಮಾಲಿನ್ಯ ತಡೆ ಹಾಗೂ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಕೇವಲ 25 ಅಪರಾಧ ಪ್ರಕರಣಗಳನ್ನು ದಾಖಲಿಸಲಾಯಿತು. ಮಹಾರಾಷ್ಟವೊಂದರಲ್ಲೇ 25 ಪ್ರಕರಣಗಳು ದಾಖಲಾದವು. ದಿಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಮಲಿನಗೊಂಡ ನಗರಗಳಲ್ಲಿ ಒಂದು ಇರಬಹುದಾದರೂ, ಕಳೆದ ಮೂರು ವರ್ಷಗಳಲ್ಲಿ, ವಾಯುಮಾಲಿನ್ಯ ಕಾಯ್ದೆಯ ಪ್ರಕಾರ, ಅಲ್ಲಿ ಒಂದೇ ಒಂದು ಕ್ರಿಮಿನಲ್ ಅಪರಾಧ ದಾಖಲಾಗಿಲ್ಲ.

ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಪರಿಸರಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಸಂಗ್ರಹಿಸುತ್ತಿದೆ. ಆದರೆ ಸೂಕ್ಷವಾಗಿ ಗಮನಿಸಿದಾಗ ಅದು ದೇಶದಲ್ಲಿ ನಡೆಯುತ್ತಿರುವ ಪರಿಸರ ಸಂಬಂಧಿ ಅಪರಾಧಗಳ ಬಗ್ಗೆ ಅದು ನೀಡುವ ಮಾಹಿತಿ ಅಂಕಿಸಂಖ್ಯೆಗಳು ನಂಬಲರ್ಹವಲ್ಲ ಎಂಬುದು ತಿಳಿದುಬರುತ್ತದೆ.

ಉದಾಹರಣೆಗೆ ಇದನ್ನು ಗಮನಿಸಿ: 2016ರಲ್ಲಿ ಮಧ್ಯಪ್ರದೇಶವು ಜಲ(ಮಾಲಿನ್ಯ ತಡೆ ಹಾಗೂ ನಿಯಂತ್ರಣ) ಕಾಯ್ದೆಯ ಅಡಿಯಲ್ಲಿ ಆರು ಮೊಕದ್ದಮೆಗಳನ್ನು ದಾಖಲಿಸಿತು. ಭಾರತದ ಇತರ ಎಲ್ಲ ಕಡೆಗಳಿಂದ ದಾಖಲಾದ ಒಟ್ಟು ಅಪರಾಧಗಳು ಕೇವಲ ಐದು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೇಶದಲ್ಲಿ 150 ನದಿಗಳು ಮಲಿನಗೊಂಡ ನದಿಗಳೆಂದು ಹೇಳಿದೆ. ಹಾಗೆಯೇ, ಗಂಗಾ ಮತ್ತು ಯಮುನಾ ನದಿಗಳು ಮಲಿನಗೊಂಡಿವೆಯೆಂದು ಹಲವು ಅಧ್ಯಯನಗಳು ಹೇಳಿವೆ. ಇದಕ್ಕೆ ಮುಖ್ಯಕಾರಣ, ಚರ್ಮದ ಕಾರ್ಖಾನೆಗಳು ಮತ್ತು ಇತರ ಕಾರ್ಖಾನೆಗಳು ನದಿಗಳಿಗೆ ಬಿಡುವ ತ್ಯಾಜ್ಯಗಳು. ಆದರೂ ಈ ಎರಡು ನದಿಗಳು ಹರಿದು ಹೋಗುವ ರಾಜ್ಯಗಳ ಯಾವುದೇ ಮಲಿನಕಾರಕ ಕಾರ್ಖಾನೆಗಳ, ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯ ಪ್ರಕಾರ, ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಗಿಲ್ಲ.

ಅದೇ ರೀತಿಯಾಗಿ, 2016ರಲ್ಲಿ ಇಡೀ ಭಾರತದಲ್ಲಿ ವಾಯುಮಾಲಿನ್ಯ ತಡೆ ಹಾಗೂ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಕೇವಲ 25 ಅಪರಾಧ ಪ್ರಕರಣಗಳನ್ನು ದಾಖಲಿಸಲಾಯಿತು. ಮಹಾರಾಷ್ಟವೊಂದರಲ್ಲೇ 25 ಪ್ರಕರಣಗಳು ದಾಖಲಾದವು. ದಿಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಮಲಿನಗೊಂಡ ನಗರಗಳಲ್ಲಿ ಒಂದು ಇರಬಹುದಾದರೂ, ಕಳೆದ ಮೂರು ವರ್ಷಗಳಲ್ಲಿ, ವಾಯುಮಾಲಿನ್ಯ ಕಾಯ್ದೆಯ ಪ್ರಕಾರ, ಅಲ್ಲಿ ಒಂದೇ ಒಂದು ಕ್ರಿಮಿನಲ್ ಅಪರಾಧ ದಾಖಲಾಗಿಲ್ಲ.

 ಭಾರತೀಯ ಅರಣ್ಯಕಾಯ್ದೆಯ ಅನ್ವಯ ದಾಖಲಾಗಿರುವ ಅಪರಾಧಗಳ ಕತೆಯೂ ಇದಕ್ಕಿಂತ ಬಹಳ ಭಿನ್ನವಾಗಿಲ್ಲ. 2017ರ ಆಗಸ್ಟ್‌ನಲ್ಲಿ ಕೇಂದ್ರ ಗಣಿ ಸಚಿವಾಲಯ 2016-17ರಲ್ಲಿ ವಿವಿಧ ಖನಿಜಗಳಿಗೆ ಸಂಬಂಧಿಸಿದಂತೆ 96,000ಕ್ಕಿಂತಲೂ ಹೆಚ್ಚು ಅಪರಾಧಗಳು ವರದಿಯಾಗಿವೆ ಎಂದು ಸಂಸತ್ತಿಗೆ ತಿಳಿಸಿತು ಇದು ಅಪರಾಧ ದಾಖಲೆಗಳ ಸಂಸ್ಥೆ ದಾಖಲಿಸಿರುವ ಒಟ್ಟು ಪರಿಸರ ಸಂಬಂಧಿ ಅಪರಾಧಗಳ ಸಂಖ್ಯೆಗಿಂತ ಹಲವು ಪಟ್ಟು ಹೆಚ್ಚು.

 ಸಂಸ್ಥೆ ನೀಡಿರುವ ಅಂಕಿಸಂಖ್ಯೆಗಳಿಗೂ ಮತ್ತು ನಿಜವಾದ ವಾಸ್ತವಕ್ಕೂ ಇರುವ ಈ ಹೊಂದಾಣಿಕೆಯ ಕೊರತೆಗೆ ಹಲವು ಕಾರಣಗಳಿವೆ.(ಒಂದು) ಮಾಲಿನ್ಯಮಾಡುವವರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗಳು ತೋರುವ ಔದಾಸೀನ್ಯ, ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವುದು, ಅದಕ್ಕಾಗಿ ಹೋರಾಡುವುದು- ಇದೆಲ್ಲ ತುಂಬ ಕಿರಿಕಿರಿಯ, ರಗಳೆಯ, ಸಂಕೀರ್ಣ ಪ್ರಕ್ರಿಯೆಯಾದ್ದರಿಂದ ಮಾಲಿನ್ಯ ನಿಯಂತ್ರಕರು ಮಾಲಿನ್ಯ ಮಾಡುವವರಿಗೆ ಶೋಕಾಸ್ ನೀಡುವುದಕ್ಕೆ ಆದ್ಯತೆ ನೀಡುತ್ತಾರೆ. ಮತ್ತೇನೂ ಮಾಡುವುದಿಲ್ಲ. (ಎರಡು) ಮಾಲಿನ್ಯ ನಿಯಂತ್ರಣ ಕಾನೂನುಗಳನ್ನು ಅನುಷ್ಠಾನಗೊಳಿಸಬೇಕಾದ ರಾಜ್ಯ ಸರಕಾರದ ಅಧಿಕಾರಿಗಳು ಬಹಳ ಸಂದರ್ಭದಲ್ಲಿ ಆ ಕಾನೂನುಗಳನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವುದಿಲ್ಲ.

ಕಾನೂನಿನ ಮುಂದೆ ಅಸಮಾನ:

ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಔದ್ಯಮಿಕ ಮಾಲಿನ್ಯ ಎಸಗುವವರನ್ನು ಮತ್ತು ಅಕ್ರಮ ಗಣಿಗಾರಿಕೆ ಮಾಡುವವರನ್ನು ಶಿಕ್ಷಿಸುವುದು ತೀರ ಅಪರಾಧವಾದದ್ದು, ಅವರು ಆದಿವಾಸಿಗಳತಂಹ ತಮ್ಮ ಹೊಟ್ಟೆಪಾಡಿಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಅವಲಂಬಿಸಿರುವವರ ವಿರುದ್ಧ ಕಾನೂನಿನ ಪೂರ್ಣ ಬಲವನ್ನು ಪ್ರದರ್ಶಿಸಿ ಕಾನೂನನ್ನು ಅನುಷ್ಠಾನಗೊಳಿಸುತ್ತಾರೆ.

2014ರಿಂದ 2015ರ ವರೆಗೆ, ಅಪರಾಧಗಳ ಸಂಸ್ಥೆಯ ಪ್ರಕಾರ, ಪರಿಸರ ಕಾನೂನಿನ ಅನ್ವಯ ಭಾರತೀಯ ಅರಣ್ಯ ಕಾಯ್ದೆ ಉಲ್ಲಂಘನೆಯ 12,684 ಮೊಕದ್ದಮೆಗಳು ನೋಂದಾಯಿಸಲ್ಪಟ್ಟವು, ಅದೇ ಅವಧಿಯಲ್ಲಿ ಅರಣ್ಯ ಸಂರಕ್ಷಣಾ ಕಾನೂನಿನ ಪ್ರಕಾರ ಉಲ್ಲಂಘನೆಯ 2,455 ಮೊಕದ್ದಮೆಗಳು ನೋಂದಾಯಿಸಲ್ಪಟ್ಟವು.

ಅರಣ್ಯ ಸಂಪನ್ಮೂಲವನ್ನು ಪಡೆಯುವುದು ಮತ್ತು ಅರಣ್ಯದಿಂದ ಜನರನ್ನು ಹೊರಗಿಡುವುದು 1927ರ ಭಾರತೀಯ ಅರಣ್ಯ ಕಾಯ್ದೆಯ ಉದ್ದೇಶ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ರಾಷ್ಟ್ರೀಯ ಉದ್ಯಾನಗಳು ಮತ್ತು ವ್ಯಾಘ್ರ ರಕ್ಷಿತ ಪ್ರದೇಶಗಳಂತಹ ಚಲನವಲನಗಳನ್ನು ನಿಯಂತ್ರಿಸುತ್ತದೆ. ಈ ಎರಡು ಕಾನೂನುಗಳ ಅನ್ವಯ ಹೂಡಲಾದ ಮೊಕದ್ದಮೆಗಳನ್ನು ಪರಿಶೀಲಿಸಿದಾಗ ರಾಜಸ್ಥಾನದ ಡೌಲ್‌ಪುರ್ ಜಿಲ್ಲೆಯಲ್ಲಿ 2016ರ ಅಕ್ಟೋಬರ್-ನವೆಂಬರ್‌ನಲ್ಲಿ ಆಪಾದಿತರೆಂದು 10 ಜಿಲ್ಲೆಗಳಲ್ಲಿ ದಾಖಲಾದವರು ಅರಣ್ಯಗಳ ಸುತ್ತಮುತ್ತ ವಾಸಿಸುತ್ತಿರುವ ಬಡವರು ಎಂದು ತಿಳಿದುಬಂತು. ಆಪಾದಿತರಲ್ಲಿ ಹೆಚ್ಚಿನವರ ವಿರುದ್ಧ ಊರುವಲು ಮತ್ತು ಚಿಕ್ಕಪುಟ್ಟ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿದ್ದಕ್ಕಾಗಿ ಮೊಕದ್ದಮೆ ಹೂಡಲಾಗಿತ್ತು.

2006ರ ಅರಣ್ಯ ಹಕ್ಕುಗಳ ಕಾಯ್ದೆಯ ಪ್ರಕಾರ ಅವರಿಗೆ ಈ ಉತ್ಪನ್ನಗಳನ್ನು ಸಂಗ್ರಹಿಸುವ ಹಕ್ಕು ಇದೆ ಎಂಬುದು ಗಮನಾರ್ಹ.

ಇತರ ರಾಜ್ಯಗಳಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಅಥವಾ ಅರಣ್ಯ ಭೂಮಿಯಲ್ಲಿ ಬದಲಿ ಬೇಸಾಯ ಮಾಡಿದ್ದಕ್ಕಾಗಿ ಅರಣ್ಯ ವಾಸಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಗಿದೆ. 2005ರ ಡಿಸೆಂಬರ್ 13ರ ಮೊದಲು ಅವರು ಆ ಜಮೀನನ್ನು ಬಳಸುತ್ತಿದ್ದಲ್ಲಿ ಅವರಿಗೆ ಕಾನೂನು ಬದ್ಧವಾಗಿಯೇ ಆ ಜಮೀನನ್ನು ಬಳಸುವ ಹಕ್ಕು ಇದೆ ಎಂಬುದನ್ನು ಮರೆಯ ಕೂಡದು.

ಅಂದ ಮೇಲೆ ರಾಷ್ಟ್ರೀಯ ದಾಖಲೆಗಳ ಸಂಸ್ಥೆಯ ಅಂಕಿ ಸಂಖ್ಯೆಗಳು ದತ್ತಾಂಶಗಳು ಪರಿಸರ ಸಂಬಂಧಿ ಅಪರಾಧಗಳ ನಿಖರವಾದ ನಂಬಲರ್ಹವಾದ ದತ್ತಾಂಶಗಳಲ್ಲ ಎಂಬುದು ಸ್ಪಷ್ಟ. ಇಷ್ಟೇ ಅಲ್ಲ, ರಾಜ್ಯ ಸರಕಾರಗಳು ಅದಕ್ಕೆ ವರದಿ ಮಾಡಿದ್ದನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುವ ದತ್ತಾಂಶವನ್ನು ಸಂಗ್ರಹಿಸುವ ಅದರ ವಿಧಾನ ಕೂಡ ದೋಷ ಪೂರ್ಣ. ಇನ್ನಷ್ಟು ನಿಖರವಾದ ದತ್ತಾಂಶಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ನೀಡಲಾಗಿರುವ ನಿಯಂತ್ರಣ ಏಜೆನ್ಸಿಗಳು ಮತ್ತು ಇಲಾಖೆಗಳು ಮಾಲಿನ್ಯ ಉಂಟು ಮಾಡುವವರ ವಿರುದ್ಧ ನೀಡುವ ದೂರುಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಸಂಗ್ರಹಿಸಬೇಕಾಗಿದೆ. ಅದೇ ವೇಳೆ ಅರಣ್ಯವಾಸಿ ಸಮು ದಾಯಗಳಿಗೆ ಅರಣ್ಯ ಸಂಬಂಧಿ ನಿಯಮಗಳನ್ನು ಕಾನೂನು ಕ್ರಮಗಳನ್ನು ತಿಳಿಯ ಹೇಳಿ, ಅವರು ತಮಗರಿಯದೆ ಮಾಡುವ ಚಿಕ್ಕಪುಟ್ಟ ತಪ್ಪುಗಳಿಗಾಗಿ ಅವರನ್ನು ಶಿಕ್ಷಿಸದೇ, ಅವರು ತಮ್ಮ ಹೊಟ್ಟೆಪಾಡಿಗಾಗಿ ಅರಣ್ಯವನ್ನು ಅವಂಲಬಿಸಿ ಬದುಕುವಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ಅರಣ್ಯ ಹಾಗೂ ವನ್ಯಜೀವಿ ಅಧಿಕಾರಿಗಳ ಮೇಲೆ ಇದೆ.

ಕೃಪೆ: scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)