varthabharthi

ಸಂಪಾದಕೀಯ

ಮ್ಯಾನ್‌ಹೋಲ್ ಹುತಾತ್ಮರು

ವಾರ್ತಾ ಭಾರತಿ : 8 Jan, 2018

ರಾಜ್ಯದ ವರ್ಚಸ್ಸು, ಘನತೆ ರವಿವಾರ ಬೆಳಗ್ಗೆ ಬೆಂಗಳೂರಿನ ಕೊಳಚೆ ಗುಂಡಿಯಲ್ಲಿ ಹೆಣವಾಗಿ ತೇಲುತ್ತಿತ್ತು. ಹೌದು. ಮ್ಯಾನ್‌ಹೋಲ್‌ನ ಕೊಳಚೆಯನ್ನು ಶುದ್ಧೀಕರಣ ಮಾಡಲೆಂದು ಇಳಿದು ಮತ್ತೆ ಮೂವರು ಬಡ ಕಾರ್ಮಿಕರು ಅದರೊಳಗೆ ಹೆಣವಾಗಿದ್ದಾರೆ. ಕಳೆದ ವರ್ಷ ಇಂತಹ ಎರಡು ಪ್ರಮುಖ ಘಟನೆಗಳು ರಾಜ್ಯದಲ್ಲಿ ವರದಿಯಾಗಿದ್ದವು. ಆ ಸಂದರ್ಭದಲ್ಲಿ ಸರಕಾರ ಗಂಭೀರ ಹೇಳಿಕೆಗಳನ್ನು ನೀಡಿ ಇನ್ನು ಮುಂದೆ ಇಂತಹ ಘಟನೆ ನಡೆಯುವುದಿಲ್ಲ ಎಂಬ ಭರವಸೆಯನ್ನೂ ನೀಡಿತ್ತು. ಇದೇ ಸಂದರ್ಭದಲ್ಲಿ ಸರಕಾರದ ಸಚಿವರೊಬ್ಬರ ‘‘ಆ್ಯಂಬ್ಯುಲೆನ್ಸ್ ಮತ್ತು ಅಧಿಕಾರಿಯೊಬ್ಬನ ಉಪಸ್ಥಿತಿಯಲ್ಲಿ ಮ್ಯಾನ್ ಹೋಲ್‌ಗೆ ಇಳಿಯಬಹುದು’’ ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಮ್ಯಾನ್‌ಹೋಲ್‌ಗಳಿಗೆ ಇಳಿದು ಇನ್ನೊಬ್ಬರ ಮಲಮೂತ್ರಗಳನ್ನು ಶುಚಿಗೊಳಿಸುವುದೆಂದರೆ ಅದು ಮನುಷ್ಯನ ಘನತೆಗೇ ಧಕ್ಕೆ ತರುತ್ತದೆ. ಇಂತಹ ಕೆಲಸಗಳಿಗೆ ಅತೀ ಹೆಚ್ಚು ಬಳಕೆಯಾಗುವುದು ದಲಿತರು, ತೀರಾ ಬಡವರು. ಈ ಕೆಲಸ ಮಾಡುವ ಕಾರಣಕ್ಕಾಗಿಯೇ ಅವರನ್ನು ಅತ್ಯಂತ ಕೀಳಾಗಿ ಸಮಾಜ ನೋಡುತ್ತದೆ. ಮಲಮೂತ್ರಗಳಿರುವ ಕೊಳಚೆಗುಂಡಿಗೆ ಇಳಿಯಬೇಕಾದರೆ ಕಾರ್ಮಿಕನೊಬ್ಬ ಮೊದಲು ತನ್ನ ವ್ಯಕ್ತಿತ್ವವನ್ನು, ಆತ್ಮಾಭಿಮಾನವನ್ನು ಕೊಂದು ಕೊಳ್ಳಬೇಕು. ಬಳಿಕವಷ್ಟೇ ಆತ ಗುಂಡಿಗೆ ಇಳಿದು ಇನ್ನೊಬ್ಬರ ಕೊಳಚೆಯನ್ನು ಕೈಯಲ್ಲಿ ಮುಟ್ಟಬಲ್ಲ. ಈ ಕಾರಣಕ್ಕಾಗಿಯೇ ಸಚಿವರ ಹೇಳಿಕೆಯನ್ನು ಕೆಲವರು ಖಂಡಿಸಿದ್ದರು. ಇದೀಗ ಸಚಿವರು ನೀಡಿದ ಆ ಮಾರ್ಗದರ್ಶನವೂ ಇಲ್ಲದೆ ಮತ್ತೆ ಕಾರ್ಮಿಕರನ್ನು ಕೊಳಚೆಗುಂಡಿಗೆ ಇಳಿಸಲಾಗಿದೆ. ತಂತ್ರಜ್ಞಾನವಿಲ್ಲದೆ ಬದುಕೇ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಅನ್ನ ಉಣಿಸುವಂತಹ ರೊಬೋಟ್‌ಗಳು ಬಂದಿವೆ. ಚಂದ್ರನ ಮೇಲೆ ಮನುಷ್ಯ ಕಾಲಿಟ್ಟಿದ್ದಾನೆ ಎಂದು ಕೊಚ್ಚಿಕೊಳ್ಳುತ್ತೇವೆ.

ಮಂಗಳನಲ್ಲಿ ವಾಸ ಮಾಡುವ ಬಗ್ಗೆ ಯೋಚಿಸುತ್ತಿದ್ದೇವೆ. ಪ್ರಧಾನಿಯವರು ಅಹ್ಮದಾಬಾದ್‌ನಿಂದ ಮುಂಬೈಗೆ ಬುಲೆಟ್ ಟ್ರೈನ್ ಓಡಿಸಲು ಆತುರರಾಗಿದ್ದಾರೆ. ಬುಲೆಟ್ ಟ್ರೈನ್‌ನಿಂದ ವಿಶ್ವದ ಮುಂದೆ ದೇಶದ ವರ್ಚಸ್ಸು ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ. ಆದರೆ ನಮ್ಮದೇ ಕಕ್ಕಸು ಗುಂಡಿಯನ್ನು ಶುಚಿಗೊಳಿಸಲು ಯಂತ್ರವನ್ನು ಬಳಸುವಂತಹ ಸ್ಥಿತಿಯಲ್ಲಿ ನಾವಿಲ್ಲ. ಇನ್ನೊಬ್ಬ ಮನುಷ್ಯನನ್ನು ಅದಕ್ಕಾಗಿ ಬಳಸುವ ಸ್ಥಿತಿಯಲ್ಲಿದ್ದೇವೆ. ಇದು ವಿಜ್ಞಾನಕ್ಕೂ, ತಂತ್ರಜ್ಞಾನಕ್ಕೂ ನಾವು ಮಾಡುತ್ತಿರುವ ಅವಮಾನವಲ್ಲವೇ?. ಚೀನಾ, ಜಪಾನ್‌ನಂತಹ ದೇಶಗಳು ಮ್ಯಾನ್‌ಹೋಲ್ ಶುಚಿಗೊಳಿಸಲು ಯಂತ್ರಗಳನ್ನು ಬಳಸುತ್ತಿರುವಾಗ, ಭಾರತದಲ್ಲಿ ಬರೇ ಮೂರು ತಿಂಗಳಲ್ಲಿ 50ಕ್ಕೂ ಅಧಿಕ ಮಂದಿ ಮ್ಯಾನ್‌ಹೋಲ್ ನೊಳಗೆ ಪ್ರಾಣ ಕಳೆದುಕೊಂಡಿರುವುದು ದೇಶದ ವರ್ಚಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲವೇ? ದೇಶಾದ್ಯಂತ ಮ್ಯಾನ್‌ಹೋಲ್‌ಗಳಲ್ಲಿ ಸರಣಿ ಸಾವು ಮುಂದುವರಿಯುತ್ತಲೇ ಇದೆಯಾದರೂ, ಇದಕ್ಕೊಂದು ಪರ್ಯಾಯ ವ್ಯವಸ್ಥೆಯನ್ನು ಮಾಡಲು ಯಾವುದೇ ಸರಕಾರಗಳು ಇಚ್ಛಾಶಕ್ತಿಯನ್ನು ತೋರುತ್ತಿಲ್ಲ. ಈ ದೇಶದ ನಾಯಕರ ಜಾತೀಯ ಮನಸ್ಥಿತಿಯ ಪರಿಣಾಮ ಇದು. ಮ್ಯಾನ್‌ಹೋಲ್‌ಗೆ ಇಳಿದು ಶುದ್ಧೀಕರಿಸುವುದು ಒಂದು ನಿರ್ದಿಷ್ಟ ಜಾತಿಯ ಜನರ ಕರ್ತವ್ಯ ಎಂದು ಆಳುವವರು ಭಾವಿಸಿದ್ದಾರೆ. ಆ ಕೆಲಸವನ್ನೇ ನಿರ್ವಹಿಸಿ ಬದುಕು ಕಟ್ಟುವ ಸಮುದಾಯವನ್ನು ಉಳಿಸಿ ಬೆಳೆಸುವ ಕೊಳಕು ಮನಸ್ಥಿತಿ ಇದರ ಹಿಂದಿದೆ. ಅವರು ವಿದ್ಯೆ ಕಲಿತು ಸಮಾಜ ಮುಖ್ಯವಾಹಿನಿಗೆ ಬರಬೇಕು, ಉನ್ನತ ಹುದ್ದೆಗಳನ್ನು ಹೊಂದಬೇಕು ಎನ್ನುವಂತಹ ಉದ್ದೇಶ ಯಾವುದೇ ಸರಕಾರಗಳಿಗಿದ್ದರೆ, ಮ್ಯಾನ್‌ಹೋಲ್‌ಗಳಿಗೆ ಇಳಿಯುವ ವ್ಯವಸ್ಥೆಯನ್ನು ಆಧುನಿಕಗೊಳಿಸುತ್ತಿತ್ತು. ಅದಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲು ಮುಂದಾಗುತ್ತಿತ್ತು.

ನರೇಂದ್ರ ಮೋದಿಯವರು ಅಧಿಕಾರ ಹಿಡಿದ ಬೆನ್ನಿಗೇ ಸ್ವಚ್ಛತಾ ಆಂದೋಲನಕ್ಕೆ ಆದ್ಯತೆ ನೀಡಿದ್ದರು. ಇದಕ್ಕಾಗಿ ತೆರಿಗೆಯನ್ನೂ ವಿಧಿಸಿದರು. ಆದರೆ ಸ್ವಚ್ಛತೆ ಎಂದರೆ, ಬೀದಿ ಗುಡಿಸುವುದಷ್ಟೇ ಅಲ್ಲ. ರಾಜಕಾರಣಿಗಳ ಪ್ರಹಸನದಿಂದ ಅಥವಾ ಅಧಿಕಾರಿಗಳು ಹಮ್ಮಿಕೊಳ್ಳುವ ವಿಚಾರಸಂಕಿರಣಗಳಿಂದ ದೇಶ ಶುಚಿಯಾಗುವುದಿಲ್ಲ. ಅಂತಿಮವಾಗಿ ಪೊರಕೆ ಹಿಡಿದು ಪ್ರತಿದಿನ ರಸ್ತೆ ಗುಡಿಸುವ, ಕೊಳಚೆ ಚರಂಡಿಗಳಿಗೆ ಇಳಿಯುವ ಜನರೇ ಈ ಸ್ವಚ್ಛತಾ ಆಂದೋಲನದ ನಿಜವಾದ ನೇತಾರರು. ಈ ಕಾರ್ಮಿಕರು ಒಂದು ದಿನ ಪೊರಕೆ ಹಿಡಿಯದಿದ್ದರೆ ದುರ್ಗಂಧ ಬೀರುವುದಕ್ಕೆ ಶುರುವಾಗುತ್ತದೆ. ಬ್ಯಾಂಕ್ ನೌಕರರು, ವಕೀಲರು, ವೈದ್ಯರು ಮುಷ್ಕರಕ್ಕಿಳಿದಂತೆ ಈ ಕಾರ್ಮಿಕರು ಒಂದು ವಾರ ಮನೆಯಲ್ಲೇ ಕುಳಿದರೆ ನಮ್ಮ ನಗರಗಳ ಸ್ಥಿತಿ ಹೇಗಾದೀತು ಎನ್ನುವುದನ್ನು ಕಲ್ಪಿಸಿಕೊಳ್ಳಿ. ಹೀಗೆ ಈ ದೇಶವನ್ನು ಶುಚಿಯಾಗಿಡಲು ತಮ್ಮ ಮಾನ, ಪ್ರಾಣ ಎರಡನ್ನೂ ಅರ್ಪಿಸುವ ಈ ಕಾರ್ಮಿಕರಿಗೆ ಸರಕಾರ ಕೊಡುವ ಕೂಲಿಯಾದರೂ ಎಷ್ಟು? ಸ್ವಚ್ಛತೆಗೆ ಮೀಸಲಾಗಿಟ್ಟಿರುವ ಹಣದಲ್ಲಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಬಾಚಿ ಉಳಿದ ಅತ್ಯಂತ ಕನಿಷ್ಠ ಹಣ ಈ ಕಾರ್ಮಿಕರಿಗೆ ದೊರಕುತ್ತದೆ. ಅಂದರೆ ಈ ಕಾರ್ಮಿಕರ ಹೆಸರಲ್ಲಿ ಹಣ ದೋಚುತ್ತಿರುವ ಒಂದು ದೊಡ್ಡ ವರ್ಗವೇ ಇದೆ. ಅವರೆಲ್ಲ ಸೇರಿ ಈ ದೇಶದ ಖಜಾನೆಯನ್ನು ಶುಚಿಗೊಳಿಸುತ್ತಿದ್ದಾರೆ.

ಮ್ಯಾನ್‌ಹೋಲ್‌ಗಳಿಗೆ ಕಾರ್ಮಿಕರನ್ನು ಇಳಿಸುವುದನ್ನು ತಡೆಯಲು ಸರಕಾರಕ್ಕೆ ಸಾಧ್ಯವೇ ಇಲ್ಲವೆಂದಾದರೆ, ಕನಿಷ್ಠ ಆ ಕಾರ್ಮಿಕರ ಕಾಯಕದ ಘನತೆಯನ್ನಾದರೂ ಮೇಲೆತ್ತುವುದಕ್ಕೆ ಪ್ರಯತ್ನಿಸಬೇಕು. ಮುಖ್ಯವಾಗಿ ಈ ಕಾರ್ಮಿಕರನ್ನು ಅಧಿಕೃತವಾಗಿ ಗುರುತಿಸುವ ಕೆಲಸ ನಡೆಯಬೇಕು. ಈ ಪೌರಕಾರ್ಮಿಕರ ವೇತನ, ಸೌಲಭ್ಯಗಳನ್ನು ದುಪ್ಪಟ್ಟುಗೊಳಿಸಬೇಕು. ಈ ದೇಶವನ್ನು ಗಡಿಯಲ್ಲಿ ಕಾಯುವ ಸೈನಿಕರಿಗೆ ಯಾವೆಲ್ಲ ಸೌಲಭ್ಯಗಳಿವೆಯೋ ಆ ಸೌಲಭ್ಯಗಳೆಲ್ಲವೂ ದೇಶದೊಳಗೆ ನಿಂತು ಇಲ್ಲಿನ ರೋಗ ರುಜಿನಗಳ ವಿರುದ್ಧ, ಮಾಲಿನ್ಯಗಳ ವಿರುದ್ಧ ಹೋರಾಡುತ್ತಾ ಆರೋಗ್ಯ ಕೆಡಿಸಿಕೊಳ್ಳುವ, ಪ್ರಾಣ ಅರ್ಪಿಸುವ ಪೌರ ಕಾರ್ಮಿಕರಿಗೂ ಸಿಗಬೇಕು. ಹೊರಗಿನ ಶತ್ರುಗಳಿಗಿಂತ ಅಪಾಯಕಾರಿ, ಮಾಲಿನ್ಯವೆನ್ನುವ ಒಳಗಿನ ಶತ್ರು. ಇದರ ವಿರುದ್ಧ ಹೋರಾಡುವ ಸೈನಿಕರು ಒಂದು ವಾರ ರಜೆ ಘೋಷಿಸಿದರೆ ಈ ನಗರಗಳಲ್ಲಿ ಯಾರೂ ಓಡಾಡುವಂತಿಲ್ಲ. ರೋಗರುಜಿನಗಳೆನ್ನುವ ಶತ್ರುಗಳು ದೇಶಾದ್ಯಂತ ಏಕಾಏಕಿ ವ್ಯಾಪಿಸಿ ಈ ವ್ಯವಸ್ಥೆಯನ್ನು ನಾಶಗೊಳಿಸುತ್ತದೆ.

ಆದುದರಿಂದ, ಇವರ ಕೆಲಸದ ಹಿರಿಮೆಯನ್ನು ಮೊದಲು ಸರಕಾರ ಗುರುತಿಸಬೇಕು. ಮ್ಯಾನ್‌ಹೋಲ್‌ನಲ್ಲಿ ಅತ್ಯಂತ ಅಮಾನವೀಯವಾಗಿ ಬಿದ್ದು ಸಾಯುವ ಈ ಕಾರ್ಮಿಕರನ್ನು ಹುತಾತ್ಮರೆಂದು ಗೌರವಿಸಬೇಕು. ಸಕಲ ಸರಕಾರಿ ಗೌರವಗಳೊಂದಿಗೆ ಅವರನ್ನು ಅಂತ್ಯ ಸಂಸ್ಕಾರ ಮಾಡಬೇಕು. ಆಗ ಆ ಕುಟುಂಬದವರಿಗೆ ಒಂದು ಸಣ್ಣ ಸಾಂತ್ವನವಾದರೂ ಸಿಕ್ಕಿದಂತಾಗುತ್ತದೆ. ಶತ್ರುಗಳ ಗುಂಡಿಗೆ ಯಾವಾಗಬೇಕಾದರು ಬಲಿಯಾಗಬಹುದು ಎನ್ನುವುದು ಗೊತ್ತಿದ್ದೇ ಸೈನಿಕನೊಬ್ಬ ಗಡಿಯಲ್ಲಿ ದೇಶ ಕಾಯುತ್ತಿರುತ್ತಾನೆ. ಇದೇ ಸಂದರ್ಭದಲ್ಲಿ ಮ್ಯಾನ್‌ಹೋಲ್‌ಗೆ ಇಳಿಯುವ ದಲಿತನೊಬ್ಬನ ಮನಸ್ಥಿತಿಯೂ ಇದೇ ಆಗಿರುತ್ತದೆ. ಅಪಾಯವಿದೆ ಎಂದು ಅರಿತೂ, ಈ ನೆಲದ ಜನರ ಮೇಲಿನ ಪ್ರೀತಿಯಿಂದ ಅವನು ಕೊಳಚೆಗುಂಡಿಗೆ ಇಳಿಯುತ್ತಾನೆ. ಅಲ್ಲಿ ಸತ್ತರೆ, ಅದು ದೇಶಕ್ಕಾಗಿ ಆತ ಮಾಡಿದ ಬಲಿದಾನವೇ ಆಗಿರುತ್ತದೆ. ಆ ಬಲಿದಾನವನ್ನು ನಾವೆಲ್ಲರೂ ಗೌರವಿಸಲೇಬೇಕು. ಕನಿಷ್ಠ ಇಷ್ಟು ಮಾಡಿದರೂ ಪ್ರಧಾನಿ ಮೋದಿಯವರ ಸ್ವಚ್ಛತಾ ಆಂದೋಲನ ಯಶಸ್ವಿಯಾದಂತೆ. ಇಲ್ಲವಾದರೆ ನಮ್ಮ ದೇಶವನ್ನು ಮುಂದಿನ ದಿನಗಳಲ್ಲಿ ವಿದೇಶಿಯರು ಮ್ಯಾನ್‌ಹೋಲ್‌ನೊಳಗೆ ಹುಡುಕ ತೊಡಗುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)