varthabharthi

ನಿಮ್ಮ ಅಂಕಣ

ಯಾಂತ್ರೀಕೃತ ಕೃಷಿ ತಂದ ಅವಾಂತರಗಳು

ವಾರ್ತಾ ಭಾರತಿ : 9 Jan, 2018
-ನಾಗೇಶ್ ನಾಯಕ್, ಇಂದಾವರ ತೀರ್ಥಹಳ್ಳಿ

ಮಾನ್ಯರೇ,

ಹೈಟೆಕ್ ಕೃಷಿಯಲ್ಲಿ ನಾವು ತಿನ್ನುತ್ತಿರುವುದು ಆರೋಗ್ಯಕರ ಆಹಾರ, ಸುರಕ್ಷಿತ ಆಹಾರ ಎಂಬ ಶಬ್ದಗಳು ಇಂದು ಎಲ್ಲರ ಬಾಯಲ್ಲಿ ಬರುತ್ತಿವೆ. ಆದರೆ ಯಂತ್ರಗಳ ದಾಗುಂಡಿಯಲ್ಲಿ ನಿಸರ್ಗದ ಪರಿಸ್ಥಿತಿ ಏನಾಗುತ್ತಿದೆ ಎಂಬ ಅರಿವು ನಮ್ಮಲ್ಲಿ ಮರೆಯಾಗಿದೆ.
ಈಗಿನ ವೇಗದ ಕೃಷಿಯಲ್ಲಿ ನಿಸರ್ಗದ ಬಡ ದುಡಿಮೆಗಾರರಾದ ಎರೆಹುಳ, ಜೇನುನೊಣ, ದುಂಬಿಗಳಿಗೆ ಜಾಗವಿಲ್ಲ. ಈಗ ಜಾಗ ಏನಿದ್ದರೂ ಸೀಡ್ ಕಂಪೆನಿಯ ದಲ್ಲಾಳಿಗಳಿಗೆ, ರಸಗೊಬ್ಬರದ ಏಜೆಂಟರಿಗೆ, ಡ್ರಿಲ್ಲಿಂಗ್ ರಿಗ್‌ಗಳ ಮಾಲಕರಿಗೆ, ಡೀಸೆಲ್, ಜನರೇಟರ್ ತಯಾರಕರಿಗೆ. ತೀರಾ ತುರ್ತು ಪರಿಸ್ಥಿತಿ ಬಂದರೆ ಮೋಡ ಬಿತ್ತನೆ ಮಾಡುವ ಪೈಲೆಟ್‌ಗಳಿಗೆ.
ಅನಿವಾರ್ಯವಾಗಿ ನಾವೇ ಹೆಣೆದುಕೊಂಡ ಬಲೆಯಲ್ಲಿ ನಾವೇ ಸಿಕ್ಕಿಬಿದ್ದು ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದೇವೆ. ಈ ಎಲ್ಲಾ ಅವ್ಯವಸ್ಥೆಗಳು ಮುಂದುವರಿದ ದೇಶಗಳಲ್ಲಿ ಎಂದೋ ಆಗಿಬಿಟ್ಟಿದೆ. ಈಗ ನಾವು ಅನುಭವಿಸಬೇಕಾಗಿದೆ.
ನಮ್ಮ ಹಳ್ಳಿಗಳಲ್ಲಿ ಇಂದಿಗೂ ಒಂದು ಹೊಸ ಯಂತ್ರ ಬಂದರೆ ಆಶ್ಚರ್ಯದಿಂದ ನೋಡುವ ಮುಖಗಳಿವೆ. ಕಾರಣ ನಮ್ಮಲ್ಲಿನ್ನೂ ಹಳೆಯ ಭಾವನಾತ್ಮಕವಾದ ಪ್ರಕೃತಿಯೊಡನೆ ಬೆಸೆದುಕೊಂಡಿರುವ ಸುಂದರವಾದ ಕಲ್ಪನೆ ಇದೆ. ಇಂದಿನ ಜಾಗತೀಕರಣದ ವೇಗದಲ್ಲಿ ಈ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಜೊತೆಗೆ ಆರೋಗ್ಯವನ್ನೂ.

 

Comments (Click here to Expand)