varthabharthi

ನಿಮ್ಮ ಅಂಕಣ

ಇಂತಹ ಕೆಟ್ಟ ಸಂಸ್ಕೃತಿ ಶೋಭೆ ತರುವಂತಹದ್ದಲ್ಲ

ವಾರ್ತಾ ಭಾರತಿ : 10 Jan, 2018
-ಜಿ. ರವಿಕಿರಣ ರೈ, ಕೋಟೆಕಾರ್, ಮಂಗಳೂರು

ಮಾನ್ಯರೇ,

ಸೊಮಾಲಿಯಾದ ಅಧ್ಯಕ್ಷ ಒಮ್ಮೆ ಜಪಾನಿಗೆ ಹೋಗಿ ಅಲ್ಲಿಯ ಜನರಿಗೆ ಹೀಗೆ ಹೇಳಿದರಂತೆ- ‘‘ನಿಮ್ಮ ಜಪಾನಿನ ರಾಜಕಾರಣಿಗಳು ಅಯೋಗ್ಯರು, ನಿಮ್ಮ ಜಪಾನಿನ ಜನರು ಸೋಮಾರಿಗಳು, ನಿಮ್ಮ ದೇಶವನ್ನು ನಮ್ಮ ಸೋಮಾಲಿಯಾದ ರಾಜಕಾರಣಿಗಳ ಕೈಯಲ್ಲಿ ಕೊಡಿ, ಅದನ್ನು ನಾವು ಅಮೆರಿಕಕ್ಕಿಂತ ಹೆಚ್ಚು ಅಭಿವೃದ್ಧಿಪಡಿಸುತ್ತೇವೆ’’ ಎಂಬುದಾಗಿ. ಅದೇ ರೀತಿ ಉತ್ತರ ಪ್ರದೇಶದಿಂದ ಯೋಗಿ ಆದಿತ್ಯನಾಥರು ಬಂದು ನಮ್ಮ ಕರ್ನಾಟಕವನ್ನು ಉತ್ತರಪ್ರದೇಶದ ಹಾಗೆ ಅಭಿವೃದ್ಧಿ ಪಡಿಸುತ್ತೇನೆ ಎಂದು ಹೇಳುತ್ತಿದ್ದಾರೆ ಹಾಗೂ ಕರ್ನಾಟಕದ ಕೆಲವು ಪತ್ರಕರ್ತರು ಹೇಳಿಕೆಗೆ ಭಯಂಕರ ಪ್ರಾಮುಖ್ಯತೆ ಕೊಟ್ಟು ಅವರನ್ನು ಪ್ರಧಾನಿ ಮೋದಿಯ ವಾರಸುದಾರ ಎಂಬಂತೆ ಬಿಂಬಿಸುತ್ತಿದ್ದಾರೆ.

 ಇತ್ತೀಚೆಗೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಆಮ್ಲಜನಕ ಸಿಗದೆ ನೂರಾರು ಮಕ್ಕಳು ಮೃತಪಟ್ಟಿದ್ದಾರೆ, ಇಪ್ಪತ್ತೆರಡು ಕೋಟಿ ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ ದಿನನಿತ್ಯವೆಂಬಂತೆ ಕೊಲೆ-ಸುಲಿಗೆಗಳು ನಡೆಯುತ್ತಿವೆ. ಅಂತಹವರು ತಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಇತರರ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದಾರೆ.

ಒಂದು ರಾಜ್ಯದ ಮುಖ್ಯಮಂತ್ರಿ ಇನ್ನೊಂದು ರಾಜ್ಯಕ್ಕೆ ಹೋಗಿ ಅಲ್ಲಿಯ ಮುಖ್ಯಮಂತ್ರಿಯನ್ನು ಹೀಯಾಳಿಸುವಂತಹ ಕೆಟ್ಟ ಸಂಸ್ಕೃತಿ ಯಾರಿಗೂ ಶೋಭೆಯಲ್ಲ. ಇತ್ತೀಚೆಗೆ ಯೋಗಿಯವರ ಪಕ್ಷದವರು ಆಡಳಿತ ನಡೆಸುವ ರಾಜ್ಯಗಳಾದ ಮಧ್ಯಪ್ರದೇಶದ ಶಿವರಾಜ್ ಸಿಂಗ್, ರಾಜಸ್ಥಾನದ ವಸುಂಧರಾ ರಾಜೇ, ಗೋವಾದ ಪಾರಿಕ್ಕರ್ ಕರ್ನಾಟಕಕ್ಕೆ ಆಗಮಿಸಿ ಇಲ್ಲಿನ ಮುಖ್ಯಮಂತ್ರಿಯನ್ನು ಹೀಯಾಳಿಸಿದ್ದಾರೆ. ಅಂದರೆ ಇವರೆಲ್ಲ ಪರೋಕ್ಷವಾಗಿ ಇಲ್ಲಿನ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದ ಮತದಾರರನ್ನೇ ಹೀಯಾಳಿಸುತ್ತಿದ್ದಾರೆ. ಇನ್ನಾದರೂ ಇಂತಹ ಹೊರಗಿನ ರಾಜಕಾರಣಿಗಳು ರಾಜಕೀಯ ಸಂಸ್ಕಾರವನ್ನು ತೋರಿಸಲಿ.

-ಜಿ. ರವಿಕಿರಣ ರೈ, ಕೋಟೆಕಾರ್, ಮಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)