ನ್ಯೂಝಿಲೆಂಡ್ ಗೆ ಪಾಕ್ ವಿರುದ್ಧ 8 ವಿಕೆಟ್ ಗಳ ಜಯ
ನೆಲ್ಸನ್, ಜ.9: ಇಲ್ಲಿ ನಡೆದ ಮಳೆ ಬಾಧಿತ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಝಿಲೆಂಡ್ 8 ವಿಕೆಟ್ಗಳ ಜಯ ಗಳಿಸಿದೆ.
ನೆಲ್ಸನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡಕ್ವರ್ಥ್ ಲೂವಿಸ್ ನಿಯಮದಂತೆ ಗೆಲುವಿಗೆ 151 ರನ್ಗಳ ಸವಾಲನ್ನು ಪಡೆದ ನ್ಯೂಝಿಲೆಂಡ್ ತಂಡ ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್ ಮತ್ತು ರಾಸ್ ಟೇಲರ್ ಅವರ ಉಪಯುಕ್ತ ಆಟದ ನೆರವಿನಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.
ಟಾಸ್ ಜಯಸಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 246 ರನ್ ಗಳಿಸಿತ್ತು. ಮುಹಮ್ಮದ್ ಹಫೀಝ್ (60), ಶಹದಾಬ್ ಖಾನ್(52) ಮತ್ತು ಹಸನ್ ಅಲಿ(51) ಅರ್ಧಶತಕಗಳ ನೆರವಿನಲ್ಲಿ ಪಾಕಿಸ್ತಾನ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.
ಗೆಲುವಿಗೆ 247 ರನ್ಗಳ ಸವಾಲನ್ನು ಪಡೆದ ನ್ಯೂಝಿಲೆಂಡ್ನ ಆಟಕ್ಕೆ ಮಳೆ ಅಡ್ಡಿಪಡಿಸಿತು. ನ್ಯೂಝಿಲೆಂಡ್ 14 ಓವರ್ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 64 ರನ್ ಮಾಡಿದ್ದಾಗ ಮಳೆ ಕಾಣಿಸಿಕೊಂಡಿತು. ಸುಮಾರು 2 ಗಂಟೆಗಳ ಕಾಲ ಆಟ ನಡೆಯಲಿಲ್ಲ. ಮಳೆ ನಿಂತು ಆಟ ಆರಂಭಗೊಂಡಾಗ ನ್ಯೂಝಿಲೆಂಡ್ಗೆ 25 ಓವರ್ಗಳಲ್ಲಿ ಗೆಲುವಿಗೆ 151 ರನ್ ಗಳಿಸಬೇಕಾದ ಪರಿಷ್ಕೃತ ಗುರಿ ನಿಗದಿಪಡಿಸಲಾಗಿತ್ತು. ಅಂತಿಮವಾಗಿ 11 ಓವರ್ಗಳಲ್ಲಿ 87 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದ ನ್ಯೂಝಿಲೆಂಡ್ಗೆ ಮಾರ್ಟಿನ್ ಗಪ್ಟಿಲ್ ಮತ್ತು ರಾಸ್ ಟೇಲರ್ ಮೂರನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ ಗೆಲುವಿಗೆ ಅಗತ್ಯದ ರನ್ ಕಲೆ ಹಾಕಿದರು.
ಮೂರನೇ ವಿಕೆಟ್ಗೆ ಗಪ್ಟಿಲ್ ಮತ್ತು ಟೇಲರ್ 104 ರನ್ ಸೇರಿಸಿದರು. ಗಪ್ಟಿಲ್ ಔಟಾಗದೆ 86 ರನ್(71ಎ, 5ಬೌ,5ಸಿ) ಮತ್ತು ರಾಸ್ ಟೇಲರ್ ಔಟಾಗದೆ 45 ರನ್(43ಎ, 4ಬೌ) ಸೇರಿಸಿ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ನ್ಯೂಝಿಲೆಂಡ್ನ ಆರಂಭಿಕ ದಾಂಡಿಗ ಕಾಲಿನ್ ಮುನ್ರೊ(0) ಅವರು ಮುಹಮ್ಮದ್ ಆಮಿರ್ ಓವರ್ನ ಮೂರನೇ ಎಸೆತದಲ್ಲಿ ಖಾತೆ ತೆರೆಯದೆ ನಿರ್ಗಮಿಸಿದ್ದರು. ತಂಡದ ಸ್ಕೋರ್ 9.3 ಓವರ್ಗಳಲ್ಲಿ 47ಕ್ಕೆ ತಲುಪುವಾಗ ನ್ಯೂಝಿಲೆಂಡ್ನ ಇನ್ನೊಂದು ವಿಕೆಟ್ ಪತನಗೊಂಡಿತು. ನಾಯಕ ಕೇನ್ ವಿಲಿಯಮ್ಸನ್(19) ಅವರು ಫಾಹೀಮ್ ಅಶ್ರಫ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಗಪ್ಟಿಲ್ ಮತ್ತು ರಾಸ್ ಟೇಲರ್ ತಂಡದ ಬ್ಯಾಟಿಂಗ್ನ್ನು ಮುನ್ನಡೆಸಿದರು.
ನ್ಯೂಝಿಲೆಂಡ್ ಐದು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಡುನೇಡಿನ್ನಲ್ಲಿ ಶನಿವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್ ವಿವರ
►ಪಾಕಿಸ್ತಾನ 50 ಓವರ್ಗಳಲ್ಲಿ 246/9
(ಹಫೀಝ್ 60, ಶಹದಾಬ್ ಖಾನ್ 52, ಹಸನ್ ಅಲಿ 51; ಫರ್ಗ್ಯುಸನ್ 39ಕ್ಕೆ 3)
►ನ್ಯೂಝಿಲೆಂಡ್ 23.5 ಓವರ್ಗಳಲ್ಲಿ 151/2(ಗಪ್ಟಿಲ್ ಔಟಾಗದೆ 86, ರಾಸ್ ಟೇಲರ್ ಔಟಾಗದೆ 45; ಆಮಿರ್ 18ಕ್ಕೆ 1).
►ಪಂದ್ಯಶ್ರೇಷ್ಠ: ಮಾರ್ಟಿನ್ ಗಪ್ಟಿಲ್