varthabharthi

ಸಂಪಾದಕೀಯ

ಕುಸಿಯುತ್ತಿರುವ ಅಂತರ್ಜಲ

ವಾರ್ತಾ ಭಾರತಿ : 10 Jan, 2018

ಮನುಷ್ಯನ ದುರಾಸೆಗೆ ಈ ಜಗತ್ತಿನ ಎಲ್ಲವೂ ಬಲಿಯಾಗುತ್ತಿದೆ. ಪರಿಸರದೊಂದಿಗೆ ಬದುಕುವುದನ್ನು ಕಲಿಯದ ಎಲ್ಲವನ್ನೂ ದೋಚುವ ದುರಾಸೆ ಮನುಕುಲವನ್ನು ಇನ್ನಿಲ್ಲದ ಸಂಕಷ್ಟಕ್ಕೆ ಗುರಿಮಾಡಿದೆ. ಈ ದುರಾಸೆಯಿಂದಾಗಿ ನಮ್ಮ ಜಲಮೂಲಗಳು ಬತ್ತಿ ಹೋಗುತ್ತಿವೆ. ಐದಾರು ದಶಕಗಳ ಹಿಂದೆ ಸ್ವಲ್ಪ ಅಗೆದರೂ ನೆಲದಲ್ಲಿ ನೀರು ಉಕ್ಕಿ ಬರುತ್ತಿತ್ತು. ಎಂತಹ ಬೇಸಿಗೆಯಲ್ಲೂ ಕುಡಿಯುವ ನೀರಿಗೆ ತೊಂದರೆಯಾಗುತ್ತಿರಲಿಲ್ಲ. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. 80ರ ದಶಕದಲ್ಲಿ ತೆರೆದ ಬಾವಿಗಳಿಗೆ ಬದಲಾಗಿ ಕೊಳವೆ ಬಾವಿಗಳನ್ನು ಕೊರೆಯಲು ಆರಂಭಿಸಿದ ಬಳಿಕ ನಮ್ಮ ರಾಜ್ಯದ ಬಹುತೇಕ ಕಡೆ ಅಂತರ್ಜಲ ಪಾತಾಳಕ್ಕೆ ಹೋಗುತ್ತಿದೆ.

ಹಿಂದೆ ಕೆರೆ ಕಟ್ಟೆಗಳು ಮತ್ತು ನದಿ ನೀರನ್ನು ಮಾತ್ರವಲ್ಲ ತೆರೆದ ಬಾವಿಯ ನೀರನ್ನು ಕುಡಿಯಲು ಬಳಸಿಕೊಳ್ಳುತ್ತಿದ್ದೆವು. ಆದರೆ, ಮಳೆಯ ಅಭಾವದಿಂದಾಗಿ ಬೇಕಾದಷ್ಟು ನೀರು ಲಭ್ಯವಾಗದಿದ್ದಾಗ ಕೊಳವೆ ಬಾವಿಯನ್ನು ಕೊರೆಯಲು ಸರಕಾರ ಮುಂದಾಯಿತು. ಆರಂಭದಲ್ಲಿ ಇದು ಪ್ರಯೋಜನಕಾರಿಯಾಯಿತು. ನಮ್ಮ ರಾಜ್ಯದ ಬಹುತೇಕ ನಗರಗಳು ಮತ್ತು ಹಳ್ಳಿಗಳ ಬಾಯಾರಿಕೆಯನ್ನು ಕೊಳವೆ ಬಾವಿಗಳು ನೀಗಿಸುತ್ತಿದ್ದವು, ಯಾವಾಗ ಬೇಕಾದರೂ ನೀರು ಲಭ್ಯವಾಗುತ್ತಿತ್ತು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣ ಅಭಿವೃದ್ಧಿ ಸಚಿವ ಅಬ್ದುಲ್ ನಝೀರ್ ಸಾಬ್ ಎಲ್ಲ ಕಡೆ ಕೊಳವೆ ಬಾವಿಗಳನ್ನು ಕೊರೆಸಿದರು. ಅಂತಲೇ ಜನ ಅವರನ್ನು ‘ನೀರ್ ಸಾಬ್’ ಎಂದು ಕರೆಯುತ್ತಿದ್ದರು.

ಕುಡಿಯುವ ನೀರಿಗಾಗಿ ಮಾತ್ರ ಕೊಳವೆ ಬಾವಿಯನ್ನು ಅವಲಂಬಿಸಿದ್ದರೆ ತೊಂದರೆಯಾಗುತ್ತಿರಲಿಲ್ಲ. ಆದರೆ, ನಮ್ಮ ದುರಾಸೆಯಿಂದಾಗಿ ಕೊಳವೆ ಬಾವಿಯ ನೀರನ್ನು ಕೃಷಿ ಚಟುವಟಿಕೆಗಳಿಗೂ ಉಪಯೋಗಿಸತೊಡಗಿದೆವು. ಹೀಗಾಗಿ ಕೊಳವೆ ಬಾವಿಗಳ ನೀರಿನ ಪ್ರಮಾಣ ಕಡಿಮೆಯಾಗತೊಡಗಿತು. ಮೊದಲು ಕೇವಲ 100 ಅಡಿ ಕೊರೆದರೆ ಲಭ್ಯವಾಗುತ್ತಿದ್ದ ನೀರು ಈಗ 1,000 ಅಡಿ ಕೊರೆದರೂ ಸಿಗುತ್ತಿಲ್ಲ. ಯಾವಾಗ ಕೃಷಿ ಉದ್ದೇಶಗಳಿಗಾಗಿ ಕೊಳವೆ ಬಾವಿಯ ನೀರನ್ನು ಬಳಸಿಕೊಳ್ಳತೊಡಗಿದೆವೋ ಆಗ ಅದರ ಸಂಖ್ಯೆಯೂ ಹೆಚ್ಚಾಗತೊಡಗಿತು. ಇದರಿಂದ ಅಂತರ್ಜಲ ಪ್ರಮಾಣ ಕುಸಿಯತೊಡಗಿತು. ತೆರೆದ ಬಾವಿ ಹಾಗೂ ಕೆರೆ ಕಟ್ಟೆಗಳಲ್ಲಿ ಸಂಗ್ರಹವಾಗುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗತೊಡಗಿತು. ಈಗ 1,500 ಅಡಿ ಕೊರೆದರೂ ಕೆಲವು ಕಡೆ ನೀರು ಲಭ್ಯವಾಗುತ್ತಿಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಲ್ಲಿ ಕೊಳವೆ ಬಾವಿಗಳನ್ನು ತೀರಾ ಆಳಕ್ಕೆ ಕೊರೆದಿರುವುದರಿಂದ ಫ್ಲೋರೈಡ್ ಸಮಸ್ಯೆ ಉಂಟಾಗಿದೆ

2013ರಲ್ಲಿ ಕೊಳವೆ ಬಾವಿಯನ್ನು ಕೊರೆಯಲು ನಿಯಂತ್ರಣ ಹೇರಲಾಯಿತು. ಆದರೆ, ಈ ನಿಯಂತ್ರಣದ ಆದೇಶ ಕಾಗದದಲ್ಲಿ ಮಾತ್ರ ಉಳಿಯಿತು. ಕೊಳವೆ ಬಾವಿ ಕೊರೆಯುವುದು ಈಗಲೂ ನಿರಂತರವಾಗಿ ಮುಂದುವರಿದಿದೆ. ಈಗ 2,000 ಅಡಿ ಕೊರೆದರೂ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಳವೆ ಬಾವಿಗಳಲ್ಲಿ ಬರುವ ನೀರಿನಲ್ಲಿ ಅರ್ಸೆನಿಕ್ ಮತ್ತು ಪ್ಲೋರೈಡ್ ಮುಂತಾದ ರಾಸಾಯನಿಕ ಅಂಶಗಳು ಇರುವುದು ಸಾಬೀತಾಗಿದೆ. ಈ ನೀರನ್ನು ಕುಡಿದು ಅನೇಕ ಕಡೆ ಜನ ನಾನಾ ಆರೋಗ್ಯದ ಸಮಸ್ಯೆಗೀಡಾಗಿ ಅಂಗವಿಕಲರಾಗಿದ್ದಾರೆ. ಈ ರೀತಿ ಕೊಳವೆ ಬಾವಿಗಳನ್ನು ಕೊರೆಯುತ್ತಾ ಭೂಗರ್ಭದಲ್ಲಿರುವ ನೀರನ್ನು ಬರಿದು ಮಾಡುತ್ತಾ ಹೋದರೆ ಮುಂದಿನ ಜನಾಂಗದ ಭವಿಷ್ಯಕ್ಕೆ ನಾವೇ ಕೊಳ್ಳಿ ಇಟ್ಟಂತಾಗುತ್ತದೆ. ಆದ್ದರಿಂದ ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸುವುದು ತುರ್ತು ಅಗತ್ಯವಾಗಿದೆ.

ಅಂತರ್ಜಲ ಪರಿಸ್ಥಿತಿ ಅಪಾಯಕಾರಿ ಮಟ್ಟ ತಲುಪಿದ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಸಣ್ಣ ನೀರಾವರಿ ಸಮೀಕ್ಷಾ ವರದಿಯಿಂದ ತಿಳಿದು ಬಂದಿದೆ. ನಮ್ಮ ರಾಜ್ಯದಲ್ಲಿ 70 ಮೀಟರ್‌ಗಿಂತ ಹೆಚ್ಚು ಆಳ ಕೊರೆಯಲ್ಪಟ್ಟಿರುವ 1.18 ಲಕ್ಷ ಕೊಳವೆ ಬಾವಿಗಳಿವೆ. ಈ ಪೈಕಿ 40 ಸಾವಿರ ಕೊಳವೆ ಬಾವಿಗಳು 150 ಮೀಟರ್‌ಗಿಂತ ಹೆಚ್ಚು ಆಳವಾಗಿವೆ ಎಂದು ಈ ಅಧ್ಯಯನ ವರದಿ ತಿಳಿಸಿದೆ. ಈ ಸರಕಾರಿ ಅಂಕಿಅಂಶಗಳಿಗಿಂತ ವಾಸ್ತವವಾಗಿ ಕೊಳವೆ ಬಾವಿಗಳ ಸಂಖ್ಯೆ ಇನ್ನೂ ಹೆಚ್ಚಾಗಿವೆೆ. ಸರಕಾರಿ ಅಂಕಿಅಂಶಗಳ ಪ್ರಕಾರವೇ ಪ್ರಸ್ತುತ ಹತ್ತು ಅಶ್ವಶಕ್ತಿವರೆಗಿನ ನೀರಾವರಿ ಪಂಪ್‌ಸೆಟ್‌ಗಳ ಸಂಖ್ಯೆ 19.51 ಲಕ್ಷ. ಗೃಹ ಬಳಕೆ ಹಾಗೂ ಕುಡಿಯುವ ನೀರಿನ ಬಾವಿಗಳನ್ನು ಇಲ್ಲಿ ಲೆಕ್ಕಕ್ಕೆ ಇಡಲಾಗಿಲ್ಲ. ನೀರಾವರಿ ಬಾವಿಗಳನ್ನು 500ರಿಂದ 600 ಅಡಿಗಳ ವರೆಗೆ ಕೊರೆಸಲಾಗುತ್ತದೆ

 ಅಂತರ್ಜಲ ಎನ್ನುವುದು ಬ್ಯಾಂಕ್‌ನ ಉಳಿತಾಯ ಖಾತೆ ಇದ್ದಂತೆ. ಅದರಲ್ಲಿ ಆಗಾಗ ಹಣವನ್ನು ಜಮೆ ಮಾಡಿದರೆ ಮಾತ್ರ ಖಾತೆಯಿಂದ ಹಣವನ್ನು ವಾಪಸ್ ಪಡೆಯಬಹುದು. ಆದರೆ, ಖಾತೆಯಲ್ಲಿರುವ ಹಣವೇ ಖಾಲಿಯಾದರೆ ವಾಪಸ್ ಪಡೆಯಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಅಂತರ್ಜಲ ಮರುಪೂರಣವಿಲ್ಲದೆ ಅದನ್ನು ಬರಿದು ಮಾಡುತ್ತಾ ಹೋದರೆ ಈ ಪರಿಸ್ಥಿತಿ ಗಂಭೀರವಾಗುತ್ತಲೇ ಹೋಗುತ್ತದೆ. ಈ ಬಗ್ಗೆ ಸರಕಾರ ಹಾಗೂ ಸರಕಾರೇತರ ಸಂಘಟನೆಗಳು ಸಾಕಷ್ಟು ಜನಜಾಗೃತಿಯನ್ನು ಮೂಡಿಸಿದರೂ ಅಂತರ್ಜಲ ಮರುಪೂರಣ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ನಾವು ಕುಡಿಯುವ ನೀರಿಗಾಗಿ ಮಾತ್ರವಲ್ಲ, ನೀರಾವರಿಗಾಗಿ ಕೊಳವೆ ಬಾವಿಯ ನೀರನ್ನು ವಿಪರೀತ ಬಳಸಿಕೊಳ್ಳುವುದರಿಂದ ಅಂತರ್ಜಲ ಪ್ರಮಾಣ ಕಡಿಮೆಯಾಗುತ್ತಲೇ ಇದೆ.

ನೀರಿನ ಕೊರತೆಯನ್ನು ನಿವಾರಿಸಲು ಕೊಳವೆ ಬಾವಿ ಕೊರೆಯುವುದೊಂದೇ ಪರಿಹಾರವಲ್ಲ. ಬತ್ತಿ ಹೋಗಿರುವ ನದಿಗಳನ್ನು ಮತ್ತು ಕೆರೆಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ. ನಮ್ಮ ರಾಜ್ಯದ ಪ್ರಮುಖ ನದಿಗಳು ಮಲಿನಗೊಂಡಿವೆ. ಬೆಂಗಳೂರಿಗೆ ಕುಡಿಯುವ ನೀರನ್ನು ಪೂರೈಸುವ ಕಾವೇರಿ ನದಿ ನೀರು ಕೂಡಾ ಶುದ್ಧವಾಗಿಲ್ಲ ಎಂದು ಅಧ್ಯಯನ ವರದಿಗಳು ತಿಳಿಸುತ್ತವೆ. ಆದ್ದರಿಂದ ಕಾವೇರಿ, ತುಂಗಾ, ಕೃಷ್ಣಾ ಸೇರಿದಂತೆ ನದಿ ನೀರನ್ನು ಶುದ್ಧಗೊಳಿಸಲು ಸರಕಾರ ಯೋಜನೆ ರೂಪಿಸಬೇಕಾಗಿದೆ. ಇದರ ಜೊತೆಗೆ ಮಳೆ ನೀರನ್ನು ಇಂಗಿಸಲು ಸರಕಾರ ಕ್ರಮಕೈಗೊಳ್ಳಬೇಕು. ಸಾರ್ವಜನಿಕರೂ ಇದಕ್ಕೆ ಸಹಕರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕೆರೆಗಳ ಹೂಳು ತೆಗೆಯುವ ಕಾರ್ಯ ಚುರುಕಾಗಿ ನಡೆಯಬೇಕು. ನಮ್ಮ ರಾಜ್ಯದ ಅನೇಕ ಕಡೆ ಜನರಿಗೆ ಕುಡಿಯುವ ನೀರನ್ನು ಹಿಂದೆ ಈ ಕೆರೆಗಳಿಂದಲೇ ಪೂರೈಸಲಾಗುತ್ತಿತ್ತು. ಆದರೆ, ನಗರೀಕರಣ ತೀವ್ರವಾದಂತೆ ಬೆಂಗಳೂರು ಸಹಿತ ನಮ್ಮ ಮಹಾನಗರಗಳ ಸುತ್ತಮುತ್ತ ಇರುವ ಕೆರೆಗಳು ಒತ್ತುವರಿಗೆ ಒಳಗಾಗಿವೆ.

ಕೆಲವೆಡೆ ಕೆರೆಗಳನ್ನು ಒತ್ತುವರಿ ಮಾಡಿ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಇನ್ನೂ ಅನೇಕ ಕಡೆ ಕೆರೆಗಳನ್ನು ಸಂಪೂರ್ಣ ಮುಚ್ಚಿ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ಇಂತಹ ಅನೇಕ ಕಟ್ಟಡಗಳಿಗೆ ಸರಕಾರದ ಅಧಿಕೃತ ಪರವಾನಿಗೆಯೂ ಇರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೆರೆಗಳಲ್ಲಿ ಮತ್ತು ಪ್ರಮುಖ ಜಲಾಶಯಗಳಲ್ಲಿ ಕೂಡಾ ಹೂಳು ತುಂಬಿವೆ. ಆದ್ದರಿಂದ ಸರಕಾರ ಇವುಗಳ ಹೂಳನ್ನು ತೆಗೆಯಲು ಕ್ರಮ ಕೈಗೊಳ್ಳಬೇಕಾಗಿದೆ. ಆದರೆ, ನಮ್ಮ ಸರಕಾರ ಹೂಳು ತೆಗೆಸುವುದಾಗಿ ಭರವಸೆ ನೀಡುತ್ತಲೇ ಇದೆ. ಇದಕ್ಕಾಗಿ ವಿಶ್ವಸಂಸ್ಥೆಯ ನೆರವಿನೊಂದಿಗೆ ಜಲ ಸಂವರ್ಧನೆ ಯೋಜನೆಯನ್ನು ರೂಪಿಸಲಾಯಿತು. ಆ ಯೋಜನೆ ಕೂಡಾ ಅಧಿಕಾರಶಾಹಿಯ ನಿರ್ಲಕ್ಷದಿಂದಾಗಿ ಸರಿಯಾಗಿ ಅನುಷ್ಠಾನಕ್ಕೆ ಬರಲಿಲ್ಲ

ಇವೆಲ್ಲದರ ಜೊತೆಗೆ ನಮ್ಮ ರಾಜ್ಯದಲ್ಲಿ ಪ್ರತೀ ವರ್ಷ ಒಂದಿಲ್ಲೊಂದು ಕಡೆ ಮಳೆಯ ಅಭಾವ ಉಂಟಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ನಮ್ಮ ಅಮೂಲ್ಯವಾದ ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳಲು ಅಸಾಧ್ಯವಾಗಿರುವುದು. ಟಿಂಬರ್ ಮಾಫಿಯಾ ಕೈವಾಡದಿಂದ ಕಾಡು ನಾಶವಾಗುತ್ತಲೇ ಇದೆ. ಇದರ ಜೊತೆಗೆ ಪಶ್ಚಿಮಘಟ್ಟದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಅಪಾಯಕಾರಿ ಯೋಜನೆಗಳನ್ನು ಸರಕಾರ ತಂದಿರುವುದರಿಂದ ಪ್ರತೀ ವರ್ಷ ಲಕ್ಷಾಂತರ ಗಿಡಮರಗಳು ನಾಶವಾಗುತ್ತಿವೆ. ಆದ್ದರಿಂದ ನಮ್ಮ ಕಾಡನ್ನು ಉಳಿಸಿಕೊಳ್ಳಲು ನಾವು ಸಂಕಲ್ಪ ಮಾಡಿಕೊಳ್ಳಬೇಕಾಗಿದೆ. ಈಗಾಗಲೇ ನಾವು ಅಂತರ್ಜಲವನ್ನು ವಿವೇಚನೆ ಇಲ್ಲದೆ ಬಳಸಿಕೊಂಡಿದ್ದೇವೆ. ಅದರಿಂದಾಗಿ ಸಾಕಷ್ಟು ತೊಂದರೆಯನ್ನೂ ಅನುಭವಿಸುತ್ತಿದ್ದೇವೆ. ಇನ್ನಾದರೂ ಅದಕ್ಕೆ ಕಡಿವಾಣ ಹಾಕಬೇಕು. ಅಂತರ್ಜಲ ಮರುಭರ್ತಿ ಕಾರ್ಯ ಬರೀ ಸರಕಾರದ ಕೆಲಸವಲ್ಲ ಜನರೂ ಅದು ತಮ್ಮ ನಿತ್ಯದ ಕರ್ತವ್ಯವೆಂದು ಕಾರ್ಯೋನ್ಮುಖರಾಗುವುದು ಅಗತ್ಯವಾಗಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)