varthabharthi

ಕರ್ನಾಟಕ

“ಬಿಜೆಪಿಯ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು ಜೈಲಿಗೆ ಹೋಗಿ ಬಂದವರು”

ಅಮಿತ್ ಶಾ ಮೊದಲು ಅವರ ಪುತ್ರನ ಆಸ್ತಿಯ ಲೆಕ್ಕ ನೀಡಲಿ: ಸಿಎಂ ಸಿದ್ದರಾಮಯ್ಯ

ವಾರ್ತಾ ಭಾರತಿ : 10 Jan, 2018

ಹನೂರು, ಜ.10: ನನ್ನ ಕೈ, ಬಾಯಿ ಶುದ್ಧವಾಗಿದೆ. ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಅಶೋಕ್, ಜಗದೀಶ್ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಎಷ್ಟೇ ಜನ ಸೇರಿದರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹನೂರು ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು,

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‍ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕೇಂದ್ರದಿಂದ ಬಂದ ಅನುದಾನದ ಬಗ್ಗೆ ಲೆಕ್ಕ ಕೇಳುತ್ತಾರೆ. ನನ್ನನ್ನು ಲೆಕ್ಕ ಕೇಳಲು ಇವರ್ಯಾರು. ಇವರಿಗೆ ಕಾನೂನಿನ ಅರಿವಿಲ್ಲ. ಕಾನೂನಾತ್ಮಕವಾಗಿ ನಾನು ಲೆಕ್ಕ ಕೊಡಬೇಕಾಗಿರುವುದು ವಿಧಾನಸಭೆಗೆ ಎಂದರು.

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅಮಿತ್ ಶಾ ಆರೋಪಿಸುತ್ತಾರೆ. ಆದರೆ ಸ್ವತಃ ಅವರೇ ಜೈಲಿಗೆ ಹೋಗಿ ಬಂದಿರುವಂತಹ ವ್ಯಕ್ತಿ. ಪರಿವರ್ತನಾ ರ್ಯಾಲಿಗಳಲ್ಲಿ ಅವರ ಪಕ್ಕ ಕುಳಿತಿರುವ ಯಡಿಯೂರಪ್ಪ ಅವರೇ ಭ್ರಷ್ಟಾಚಾರಿ. ಈ ದೇಶದಲ್ಲಿ ನೇರವಾಗಿ ಚೆಕ್ ಮೂಲಕ ಲಂಚ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ. ಒಟ್ಟಾರೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ಇಬ್ಬರೂ ಜೈಲಿಗೆ ಹೋಗಿ ಬಂದವರೇ. ಇವರಿಗೆ ನಾಚಿಕೆಯಾಗಬೇಕು. ಅಮಿತ್ ಶಾ ಪುತ್ರ ಜಯ್ ಶಾ ಅವರ ಆಸ್ತಿ ಕಳೆದ 3 ವರ್ಷದಲ್ಲಿ ಬಹುಪಾಲು ಹೆಚ್ಚಾಗಿದೆ. ಅಲ್ಲದೆ ಕೊಟ್ಯಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಮೊದಲು ಈ ಹಣದ ಲೆಕ್ಕ ಕೊಡಲಿ, ಬಳಿಕ ನಾನು ಲೆಕ್ಕ ನೀಡುತ್ತೇನೆ ಎಂದರು.

ಅಚ್ಚೇದಿನ್ ಯಾರಿಗೆ ಬಂದಿದೆ?:  2014ರ ಲೋಕಸಭಾ ಚುನಾವಣೆ ವೇಳೆ ಮುಂದಿನ ದಿನಗಳಲ್ಲಿ “ಅಚ್ಛೇದಿನ್ ಬರಲಿದೆ, ನಮಗೆ ಅಧಿಕಾರ ನೀಡಿ, ವಿದೇಶದಲ್ಲಿನ ಕಪ್ಪುಹಣ ತಂದು 100 ದಿನಗಳೊಳಗಾಗಿ ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೂ 15 ಲಕ್ಷ ರೂ. ಹಾಕುವುದಾಗಿ ಸುಳ್ಳು ಭಾಷಣಗಳನ್ನು ಬಿಗಿದರು. ಆದರೆ ಮೂರುವರೆ ವರ್ಷ ಕಳೆದರೂ 15 ಲಕ್ಷವಲ್ಲ, 15 ಪೈಸೆಯೂ ಬಂದಿಲ್ಲ. ಈ ದೇಶದಲ್ಲಿ ಅಚ್ಛೇದಿನ್ ಬಂದಿರುವುದು ಅಂಬಾನಿ, ಅದಾನಿ, ಸಿಂಘಾನಿಯಾ, ಬಾಬಾರಾಮ್‍ದೇವ್ ಅಂತಹವರಿಗೆ ಹೊರತು ದೇಶದ ರೈತರಿಗೆ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗಲ್ಲ ಎಂದು ಸಿದ್ದರಾಮಯ್ಯ  ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ವಾಚ್ ನೀಡಿದ್ದು ನನ್ನ ಆತ್ಮೀಯ ಗೆಳೆಯ: ನನಗೆ ವಾಚ್ ನೀಡಿದ್ದು ದುಬೈನಲ್ಲಿ ವಾಸಿಸುತ್ತಿರುವ ನನ್ನ ಗೆಳೆಯ ದಾವಣಗೆರೆ ಮೂಲದ ಡಾ.ವರ್ಮಾ. ಆದರೆ ಈ ವಾಚನ್ನು ಉದ್ಯಮಿಯೊಬ್ಬರು ಲಂಚವಾಗಿ ನೀಡಿದ್ದಾರೆ ಎಂದು ಆರೋಪ ಮಾಡುತ್ತಾರೆ.  ಇದು ಸತ್ಯಕ್ಕೆ  ದೂರವಾದದು ಎಂದು ಸಿಎಂ ಹೇಳಿದರು.

ಈಶ್ವರಪ್ಪ ನಾಲಿಗೆಗೂ ಮೆದುಳಿಗೂ ಲಿಂಕಿಲ್ಲ: ರಾಜ್ಯದ ಬಿಜೆಪಿ ನಾಯಕ ಈಶ್ವರಪ್ಪ ಅವರ ಮೆದುಳು ಮತ್ತು ನಾಲಿಗೆಗೂ ಲಿಂಕಿಲ್ಲ. ಆದ್ದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕೇಂದ್ರದ ಮಂತ್ರಿ ಅನಂತ್ ಕುಮಾರ್ ಹೆಗಡೆ ಅವರು ತಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸುವುದಕ್ಕೆ ಎನ್ನುತ್ತಾರೆ. ಈ ಸಚಿವನಿಗೆ ಗ್ರಾಮ ಪಂಚಾಯತ್ ಸದಸ್ಯನಾಗುವ ಕನಿಷ್ಠ ಅರ್ಹತೆಯೂ ಇಲ್ಲ. ಬಿಜೆಪಿ ನಾಯಕರು ಪರಿವರ್ತನಾ ರ್ಯಾಲಿ ನಡೆಸುತ್ತಿದ್ದಾರೆ. ಪರಿವರ್ತನೆಯಾಗಬೇಕಿರುವುದು ಬಿಜೆಪಿ ನಾಯಕರಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಅಶೋಕ್, ಜಗದೀಶ್ ಶೆಟ್ಟರ್. ಇವರಿಗೆ ಯಾವುದೇ ಸಂಸ್ಕೃತಿಯಿಲ್ಲ. ಮನಬಂದಂತೆ ಮಾತನಾಡುತ್ತಾರೆ ಎಂದು ಹರಿಹಾಯ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಗೀತಾ ಮಹದೇವ ಪ್ರಸಾದ್, ಸಂಸದ ಧ್ರುವನಾರಾಯಣ್, ಶಾಸಕ ನರೇಂದ್ರ ರಾಜುಗೌಡ, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಜಿ.ಪಂ ರಾಮಚಂದ್ರು ತಾ.ಪಂ ಅಧ್ಯಕ್ಷ ರಾಜು ಇನ್ನಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)