varthabharthi

ನಿಮ್ಮ ಅಂಕಣ

ಸರಕಾರಿ ಶಾಲೆಗಳೇ ಇಂಗ್ಲಿಷ್ ಕಲಿಸಲಿ

ವಾರ್ತಾ ಭಾರತಿ : 11 Jan, 2018
-ಬಿ.ಜೆ. ವಿನಯಾದಿತ್ಯ, ಭದ್ರಾವತಿ

ಮಾನ್ಯರೇ,

ಕೇಂದ್ರ, ರಾಜ್ಯ ಸರಕಾರಗಳು 6 ರಿಂದ 14 ವರ್ಷದ ಮಕ್ಕಳಿಗೆ ಮೂಲಭೂತ ಹಕ್ಕುಗಳಲ್ಲಿ ಒಂದಾದ ಶೈಕ್ಷಣಿಕ ಹಕ್ಕಿಗೆ ಸಂಬಂಧಿಸಿದಂತೆ ಉಚಿತ ಶಿಕ್ಷಣವನ್ನು ನೀಡಲು ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಸರಕಾರ ಉಚಿತವಾಗಿ ಸಮವಸ್ತ್ರ, ಬಿಸಿಯೂಟ, ಪಠ್ಯಪುಸ್ತಕ ವಿತರಣೆ, ಕ್ಷೀರಭಾಗ್ಯ ಹಾಗೂ ವಿದ್ಯಾರ್ಥಿ ವೇತನ ಮುಂತಾದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಶಾಲಾ ಮಕ್ಕಳ ಅಭಿವೃದ್ಧ್ದಿಗೆ ಶ್ರಮಿಸಲಾಗುತ್ತಿದೆ. 2010-2011ರಿಂದ 2014-2015 ಸಾಲಿನ ರಾಜ್ಯದ ಸರಕಾರಿ ಶಾಲೆಯ ಮಕ್ಕಳ ಪ್ರವೇಶಾತಿ ದಾಖಲೆ-ವಿವರಗಳನ್ನು ಪರಿಶೀಲಿಸಿದಾಗ ಸುಮಾರು ಶೇ. 15ರಷ್ಟು ಸರಕಾರಿ ಶಾಲೆಗಳಿಗೆ ಮಕ್ಕಳ ಪ್ರವೇಶ ಕುಸಿತ ಕಂಡುಬಂದಿರುವುದು ವಿಷಾದನೀಯ ಸಂಗತಿಯಾಗಿದೆ. ಈ ಎಲ್ಲಾ ಮಕ್ಕಳು ಖಾಸಗಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆಗೊಂಡಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಸರಕಾರವು ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿರುವುದು ಸಮರ್ಥನೀಯ. ದೇಶದಾದ್ಯಂತ ಪ್ರಸ್ತುತ ಇರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗಲು ಅವಕಾಶ ನೀಡಬೇಕಾದರೂ, ಹೊಸದಾಗಿ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಳ್ಳಲು ಅವಕಾಶ ನೀಡದೆ ಸರಕಾರಿ ಶಾಲೆಗಳ ಅಭಿವೃದ್ಧಿಯತ್ತ ಸರಕಾರ ಗಮನಹರಿಸಿದರೆ ಸರಕಾರಿ ಶಾಲೆಗಳು ಉಳಿದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)