varthabharthi

ನಿಮ್ಮ ಅಂಕಣ

ದಲಿತ, ಮುಸ್ಲಿಮರ ಶೋಷಣೆಗೆ ಹೊಸ ಮುಖ

ವಾರ್ತಾ ಭಾರತಿ : 11 Jan, 2018
ಹರೀಶ್ ಖಾರೆ

ಆಡಳಿತಶಕ್ತಿಗಳಿಂದ ಹಿಡಿದು ಮಾಧ್ಯಮರಂಗದಲ್ಲಿರುವ ಅವುಗಳ ಮಿತ್ರರವರೆಗೆ ಎಲ್ಲರೂ ಬಹಿರಂಗವಾಗಿ ಒಪ್ಪಿಕೊಳ್ಳಲು ನುಣುಚಿಕೊಳ್ಳುತ್ತಿರುವ ಸತ್ಯವೊಂದನ್ನು ಕರ್ತವ್ಯದಲ್ಲಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ದೊಡ್ಡ ಧ್ವನಿಯೊಂದಿಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ ಈ ಸಲದ ಗುಜರಾತ್ ಚುನಾವಣೆಯಲ್ಲಿ ಮತದಾರರು ಕೂದಲೆಳೆಯ ಅಂತರದ ಗೆಲುವನ್ನು ನೀಡಿದ್ದಾರೆ. ಯಾಕೆಂದರೆ ರೈತರು ಹತಾಶರಾಗಿದ್ದಾರೆ, ಯುವಜನರಿಗೆ ದುಡಿಯಲು ಉದ್ಯೋಗ ಸಿಗುತ್ತಿಲ್ಲ ಎಂದು ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಬಿಜೆಪಿ ನಾಯಕತ್ವ, ಅದಕ್ಕಿಂತಲೂ ಮುಖ್ಯವಾಗಿ ನಾಗಪುರದಲ್ಲಿರುವ ಪಕ್ಷದ ಮಾರ್ಗದರ್ಶಕರು ಹಾಗೂ ಕಣ್ಗಾವಲುಗಾರರು, ತಮ್ಮ ತೀಕ್ಷ್ಣ ಬುದ್ಧಿಮತ್ತೆ ಬಗ್ಗೆ ಜಂಭಕೊಚ್ಚಿಕೊಂಡಿರಬಹುದು. ಚುನಾವಣೆಯ ನಂತರ ಅವರು ತಮ್ಮ ಲೆಕ್ಕಾಚಾರ ಎಲ್ಲಿ ತಪ್ಪಾಯಿತೆಂದು ಯೋಚಿಸತೊಡಗಿದ್ದಾರೆ.

ಭಾರೀ ಪ್ರಚಾರ ಪಡೆದಿರುವ ‘ಗುಜರಾತ್ ಮಾದರಿಯ ಅಭಿವೃದ್ಧಿ’ಯು ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಾರದೆಂಬುದನ್ನು ನೀತಿ ಆಯೋಗದ ಸಮಾಲೋಚಕರನ್ನು ಹೊರತುಪಡಿಸಿ, ಪ್ರತಿಯೊಬ್ಬರಿಗೂ ತುಂಬಾ ಚೆನ್ನಾಗಿ ಅರಿವಾಗಿದೆ. ಗುಜರಾತ್ ಮಾದರಿಯ ಅಭಿವೃದ್ಧಿಯು ಗ್ರಾಮೀಣ ಭಾರತದಲ್ಲಿ ರುವ ನಿರುದ್ಯೋಗದ ಪ್ರಮಾಣವನ್ನಾಗಲಿ ಅಥವಾ ನಗರ ಪ್ರದೇಶಗಳಲ್ಲಿರುವ ಅಸಂಪೂರ್ಣ ಉದ್ಯೋಗದ ಪ್ರಮಾಣವನ್ನಾಗಲಿ, ಎಳ್ಳಿನಷ್ಟೂ ಕಡಿಮೆ ಮಾಡಲಾರದೆಂಬುದು ಈಗ ಎಲ್ಲರಿಗೂ ತಿಳಿದಿದೆ. ಅದರಲ್ಲೂ 2019ರ ಲೋಕಸಭಾ ಸಮರಕ್ಕೆ ಮೊದಲು ಖಂಡಿತವಾಗಿಯೂ ಸಾಧ್ಯವಾಗದು. ಮುಂದಿನ 16 ತಿಂಗಳುಗಳಲ್ಲಿ ಎನ್‌ಡಿಎ ಸರಕಾರವು ಎಷ್ಟೇ ಪ್ರಯತ್ನ ಮಾಡಲಿ, ಭಾರತವು ಬಡರಾಷ್ಟ್ರವಾಗಿ, ಅಸಮಾನ ಸಮಾಜವಾಗಿಯೇ ಉಳಿಯಲಿದೆ. ಬಡವರಲ್ಲಿ ಬಹುತೇಕ ಮಂದಿ ಗ್ರಾಮೀಣ ಭಾರತದಲ್ಲಿ, ಅವಕಾಶವಂಚಿತರಾಗಿ ಹಾಗೂ ಕಠಿಣವಾದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುತ್ತಾರೆ.

ಆರ್ಥಿಕ ತೊಂದರೆಯು, ಹಿಂದೆಂಗಿಂತಲೂ ಈಗ ಹೆಚ್ಚು ತೀಕ್ಷ್ಣತೆಯಿಂದ ವ್ಯಾಖ್ಯಾನಿಸಲ್ಪಡುತ್ತಿದೆ. ಮತದಾರರನ್ನು ‘ಅಚ್ಛೆ ದಿನ್’ನ ಭರವಸೆಯೊಂದಿಗೆ ಮರುಳು ಮಾಡಲು ಸಾಧ್ಯವಿಲ್ಲ. ಇದೇ ಸಂದರ್ಭದಲ್ಲಿ ಗ್ರಾಮೀಣ ಮತದಾರರು ತಮ್ಮ ಅಹವಾಲುಗಳನ್ನು ಮುಂದಿಡುವುದಕ್ಕೆ ಅವಕಾಶ ನೀಡುವುದು ಸರಕಾರಕ್ಕೆ ಬೇಕಾಗಿಲ್ಲ. ಇದಕ್ಕಾಗಿ ಈ ರಾಜಕೀಯ ನಾಟಕದಲ್ಲಿ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಏನಾದರೂ ಹೊಸ ತಂತ್ರಗಾರಿಕೆಯನ್ನು ಅದು ಅಳವಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ, ‘ಭೀಮಾ ಕೋರೆಗಾಂವ್ ಯುದ್ಧ’ದ ವರ್ಷಾಚರಣೆ ಸಂದರ್ಭದಲ್ಲಿ ಹಠಾತ್ತನೆ ಹಿಂಸಾಚಾರ ಸ್ಫೋಟಿಸಿದೆ. ಈ ಹಿಂಸಾಚಾರವು ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದಿರಬಹುದು. ಆದರೆ ಹಿಂಸಾಚಾರದ ಮೇಲೆ ಹೇರಲ್ಪಟ್ಟ ವ್ಯಾಖ್ಯಾನವು ಅತ್ಯಂತ ಭಯವನ್ನು ಹುಟ್ಟಿಸುವಂತಿದೆ.

 ಸಮಾಜದಲ್ಲಿ ಶಿಸ್ತು, ನಂಬಿಕೆ ಹಾಗೂ ಸೌಹಾರ್ದವನ್ನು ಸೃಷ್ಟಿಸುವುದು ರಾಜಕಾರಣದ ಪ್ರಧಾನ ಕಾರ್ಯವಾಗಿದೆ. ಒಂದು ಮಾದರಿ ರಾಜಕೀಯ ವ್ಯವಸ್ಥೆಯು ಸಮಾಜದ ಎಲ್ಲಾ ವರ್ಗಗಳ ಜನರಿಗೂ ಪಾಲುದಾರಿಕೆ, ಗೌರವ ಹಾಗೂ ಅವಕಾಶದ ಕೊಡುಗೆಯನ್ನು ನೀಡುತ್ತದೆ. ಏನಿಲ್ಲವೆಂದರೂ ಆ ಕುರಿತಾಗಿ ಭರವಸೆಯನ್ನಾದರೂ ನೀಡುತ್ತದೆ. ಇದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಸೃಷ್ಟಿಸುತ್ತದೆ. ಮೊದಲ 60 ವರ್ಷಗಳಲ್ಲಿ, ನಮ್ಮ ಗಣರಾಜ್ಯವು ನೆಹರೂ ಮಾದರಿಯ ಆಡಳಿತ ಸುವ್ಯವಸ್ಥೆಯನ್ನು ಕಂಡಿತ್ತು. ನೆಹರೂವಾದಿ ಸುವ್ಯವಸ್ಥೆಗೆ, ನಂಬಿಕೆಯ ರಾಜಕಾರಣವು ಕೀಲಿಗೈಯಾಗಿತ್ತು. ರಾಜಕೀಯ ನಾಯಕರು, ರಾಜಕೀಯ ಪಕ್ಷಗಳು ಹಾಗೂ ಮತದಾರ ವರ್ಗವು ಬಹುತ್ವವಾದ, ವೈವಿಧ್ಯತೆ ಹಾಗೂ ಭಿನ್ನಾಭಿಪ್ರಾಯಗಳಿಗೆ ಸಂಪೂರ್ಣವಾಗಿ ಬದ್ಧತೆಯನ್ನು ತೋರ್ಪಡಿಸುತ್ತಿದ್ದರು. ನಮ್ಮ ಸಂವಿಧಾನವು ಹಾಗೂ ಅದರ ವಿವಿಧ ಸಂಸ್ಥೆಗಳು ಪ್ರಜೆಗಳ ನಡುವೆ ಪೌರತ್ವದ ಬಂಧಗಳನ್ನು ಸ್ಥಾಪಿಸಲು ನೆರವಾಗಿದ್ದರೂ, ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು ಸಮಾಜದಲ್ಲಿ ನಂಬಿಕೆ ಮತ್ತು ಸೌಹಾರ್ದವನ್ನು ಸೃಷ್ಟಿಸುವ ಪ್ರಾಥಮಿಕ ಕೆಲಸವನ್ನು ವಹಿಸಿಕೊಂಡಿದ್ದರು.

ಕಾಮರಾಜ್, ವೈ.ಬಿ.ಚವಾಣ್ ಅಥವಾ ದೇವರಾಜ್ ಅರಸ್ ಅವರಂತಹ ಮುತ್ಸದ್ಧಿ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು, ಇತರರ ಅಭಿಪ್ರಾಯ, ಚಿಂತನೆಗಳಿಗೆ ಅವಕಾಶ ನೀಡುವಂತಹ ರಾಜಕೀಯ ವ್ಯಾಕರಣವೊಂದನ್ನು ಅಭಿವೃದ್ಧಿಪಡಿಸಿದರು. ನಾವು ಕರ್ಪೂರಿ ಠಾಕೂರ್, ಲಾಲು ಪ್ರಸಾದ್ ಹಾಗೂ ಮಾಯಾವತಿ ಅಂತಹವರನ್ನು ಸೃಷ್ಟಿಸಿದೆವು.ಸಾಮಾಜಿಕ ತೃಪ್ತಿಯು ಯಾವತ್ತೂ ಭಾಗಶಃವಾಗಿರುತ್ತದೆ. ಆದರೆ ಯಾವುದೇ ಅಸಮಾಧಾನವು ವಿಧ್ವಂಸಕಕಾರಿ ಪ್ರಮಾಣದಲ್ಲಿ ಇರುತ್ತಿರಲಿಲ್ಲ. ಯಾಕೆಂದರೆ ರಾಜಕೀಯ ಅವಕಾಶವನ್ನು ಯಾರಿಗೂ ನಿರಾಕರಿಸಲಾಗುತ್ತಿರಲಿಲ್ಲ.

ಆನಂತರ 1990ರ ದಶಕದ ಆರಂಭದಲ್ಲಿ, ನವೀನ ಮಾದರಿಯ ರಾಜಕಾರಣವನ್ನು ಬಯಸುವಂತಹ ನೂತನ ಆರ್ಥಿಕತೆಯೆಡೆಗೆ ನಾವು ಹೊರಳಿದೆವು. ನಾವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದೆವು. ನಾವು ‘ಡಿಸೆಂಬರ್ 6, 1992’ ಘಟನೆಯನ್ನು ಆಯೋಜಿಸಿದೆವು. ಕೆಲವೇ ವರ್ಷಗಳೊಳಗೆ ನಾವು, ದೇಶಾದ್ಯಂತ ಉದ್ಯಮ, ವ್ಯವಹಾರದಲ್ಲಿ ತೊಡಗುವಂತಹ ಮಧ್ಯಮವರ್ಗವೊಂದನ್ನು ಸೃಷ್ಟಿಸಿದೆವು. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸ್ವೀಕಾರಾರ್ಹ ಮುಖವೆನಿಸಿಕೊಂಡರು. ಆವಾಗಿನಿಂದ, ನಮ್ಮ ಬಳಿ ಮುಕ್ತಾಯವನ್ನೇ ಕಾಣದಿರುವಂತಹ ರಾಜಕೀಯ ನಾಗರಿಕ ಸಮರವೊಂದು ತಲೆದೋರಿದೆ. ಈ ಸಮರವು 2014ರ ಮೇನಲ್ಲಿ ಒಂದು ರೀತಿಯ ಇತ್ಯರ್ಥದ ಹಂತವನ್ನು ತಲುಪಿತ್ತು. ನಾವು ನವಭಾರತದ ಉದಯವನ್ನು ಘೋಷಿಸಿದೆವು ಹಾಗೂ ದೇಶದಲ್ಲಿ ಹೊಸತಾಗಿ ಸಹಜ ವಾತಾವರಣ ರೂಪುಗೊಳ್ಳುವ ಕನಸನ್ನು ಕಾಣತೊಡಗಿದೆವು.

ಆದರೆ ವಾಸ್ತವದಲ್ಲಿ ಇದಕ್ಕೆ ವ್ಯತಿರಿಕ್ತವಾದ ವಾತಾವರಣ ಸೃಷ್ಟಿಯಾಗಿತ್ತು. ಬಿಜೆಪಿಯ ಚುನಾವಣಾ ಮ್ಯಾನೇಜರ್‌ಗಳು, ಅನೇಕ ಜಾತಿಗಳನ್ನು ಉಪಜಾತಿಗಳಾಗಿ ವಿಂಗಡಿಸುವಲ್ಲಿ ಹಾಗೂ ಅವರೆಲ್ಲರನ್ನೂ ತನ್ನ ಶಿಬಿರದೊಳಗೆ ತರುವಂತಹ ಚುನಾವಣಾ ಕಾರ್ಯತಂತ್ರವನ್ನು ರೂಪಿಸಿದರು.
ಈ ಪ್ರಕ್ರಿಯೆಯಲ್ಲಿ ಚುನಾವಣಾ ಕ್ರೋಡೀಕರಣವು ಸಮಾಜದ ಎಲ್ಲಾ ಲೋಪಯುತವಾದ ರೇಖೆಗಳನ್ನು ಜೀವಂತವಾಗಿರಿಸಿದವು. ಈ ಸಂದರ್ಭದಲ್ಲಿ ಹಿಂದುತ್ವ ವಾದವು ನಿರ್ದಿಷ್ಟ ಗುರುತು, ಜಾತಿ, ಸಮುದಾಯಗಳ ಗುಂಪು ಗೂಡುವಿಕೆಯನ್ನು ಪ್ರತಿಪಾದಿಸತೊಡಗಿದವು. ಅವು ವೈಯಕ್ತಿಕ, ಸಮುದಾಯಗಳ ಅಥವಾ ಸ್ಥಳೀಯರ ಅಹವಾಲು ಗಳಿಗಿಂತಲೂ ಹೆಚ್ಚಾಗಿ ರಾಷ್ಟ್ರೀಯವಾದಿ, ದೇಶಭಕ್ತಿ, ಪಾಕ್ ವಿರೋಧಿವಾದ, ಭಾರತೀಯ ಸೇನೆ, ಕುಲಭೂಷಣ್ ಮತ್ತಿತರ ವಿಷಯಗಳ ಬಗ್ಗೆ ಗಮನಹರಿಸುವುದಕ್ಕೆ ಆದ್ಯತೆಯನ್ನು ನೀಡತೊಡಗಿದವು.

ಕಳೆದ ಕೆಲವು ವರ್ಷಗಳಲ್ಲಿ ಹಿಂದೂರಾಷ್ಟ್ರವಾದ ಹಾಗೂ ಹಿಂದೂ ಸಂವೇದನೆಯ ಹೆಸರಿನಲ್ಲಿ ಬೀದಿಹಿಂಸೆ ಹಾಗೂ ಆಕ್ರೋಶವನ್ನು ಸಮರ್ಥಿಸಿಕೊಳ್ಳತೊಡಗುವ ವಾತಾವರಣ ಸೃಷ್ಟಿಯಾಗಿದೆ. ಈ ರೀತಿಯ ಅಧಿಕೃತವಾದ ಹಿಂಸಾಚಾರ ಹಾಗೂ ಬೆದರಿಕೆಯ ನೂತನ ಪಂಥವೊಂದು ನಮ್ಮ ದೈನಂದಿನ ಬದುಕಿನೊಳಗೆ ನುಸುಳಿದೆ. ಇಂದು ದಿನ ಪತ್ರಿಕೆಗಳ ಸ್ಥಳೀಯ ಪುಟಗಳು ಸಾಮಾನ್ಯ ಜನರು, ಇತರ ಸಾಮಾನ್ಯರ ಮೇಲೆ ಹಿಂಸೆಯನ್ನು ಎಸಗಿರುವ ಸುದ್ದಿಗಳೇ ತುಂಬಿರುತ್ತವೆ. ಸಾಮಾಜಿಕ ಜಾಲತಾಣಗಳಂತೂ ದ್ವೇಷದ ವಿಷವನ್ನು ಕಾರುವಲ್ಲೇ ನಿರತವಾಗಿವೆ ಹಾಗೂ ಕೆಟ್ಟಮಾತುಗಳಿಂದ ತುಂಬಿಹೋಗಿವೆ. ನಾವು ಕ್ಷುಲಕ ಹಾಗೂ ಸಣ್ಣತನದಿಂದ ವರ್ತಿಸಿದಾಗಲಷ್ಟೇ ನಾವು ಒಳ್ಳೆಯವರೆನಿಸಿಕೊಳ್ಳುವಂತಹ ಭಾವನೆಯನ್ನು ಮೂಡಿಸಲಾಗುತ್ತಿದೆ. ರಾಷ್ಟ್ರಪತಿ ಭವನದಲ್ಲಿ ಈ ಸಲದ ಕ್ರಿಸ್‌ಮಸ್‌ನಲ್ಲಿ ಕ್ಯಾರೋಲ್ ಗಾಯನವಿರಲಿಲ್ಲ. ಕ್ರಿಸ್‌ಮಸ್‌ಗಾಗಿ ಸೇವಾಸಂಸ್ಥೆಯೊಂದಕ್ಕೆ ದೇಣಿಗೆಯನ್ನು ಕೋರಿದ್ದಾರೆಂಬ ಕಾರಣಕ್ಕಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿಯವರ ಪತ್ನಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗಳ ಸುರಿಮಳೆಯಾಗಿತ್ತು.

2017ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಮಗೆದುರಾಗಿತ್ತು. ಭಾರತದ ಕುರಿತಂತೆ ಕೋಮುವಾದಿಗಳ ಹೊಸ ವ್ಯಾಖ್ಯಾನವನ್ನು ಪ್ರಶ್ನಿಸಿದ ದಲಿತರು, ಒಬಿಸಿಗಳು ಹಾಗೂ ಇತರ ಸಾಮಾಜಿಕವಾಗಿ ಆಕ್ರೋಶಗೊಂಡ ಗುಂಪುಗಳ ಜೊತೆ ಕೆಲಸ ಮಾಡುವ ದಾರಿಯೊಂದನ್ನು ಆ ಸಂದರ್ಭದಲ್ಲಿ ಕಾಂಗ್ರೆಸ್ ಪತ್ತೆಹಚ್ಚಿರುವ ಹಾಗೆ ಕಂಡುಬಂದಿತು. ಗುಜರಾತ್‌ನಲ್ಲಿ ‘ವಿಕಾಸ’ ಹಾಗೂ ‘ಗುಜರಾತ್ ಅಸ್ಮಿತೆ’ಯ ಹೆಸರಿನಲ್ಲಿ ಮತಯಾಚಿಸಿದ ಬಿಜೆಪಿಗೆೆ ‘ಮಹಾಗೆಲುವು’ ದೊರೆತ ಕೆಲವೇ ದಿನಗಳೊಳಗೆ ಪಟೇಲ್ ಸಮುದಾಯದ ಅತ್ಯಂತ ಹಿರಿಯ ಸಚಿವರೊಬ್ಬರು ಸಂಪುಟವನ್ನು ಸೇರಲು ನಿರಾಕರಿಸಿದರು. ತನ್ನ ಸಮುದಾಯದ ಆತ್ಮಗೌರವಕ್ಕೆ ಮಾನ್ಯತೆ ನೀಡಿಲ್ಲವೆಂಬ ಅಸಮಾಧಾನವನ್ನು ಅವರು ಹೊರಹಾಕಿದ್ದರು. ಆನಂತರ ಕೋಲಿ ಸಮುದಾಯದ ಸಚಿವರೂ ಅಸಮಾಧಾನದ ಧ್ವನಿಯೆತ್ತಿದರು.

ಮುಸ್ಲಿಮರು ಮತ್ತು ದಲಿತರನ್ನು ಮೂಲೆಗುಂಪು ಮಾಡುವುದಕ್ಕಾಗಿ ಚುನಾವಣಾ ರಾಜಕೀಯ ಹಾಗೂ ತಂತ್ರಗಾರಿಕೆಗಳನ್ನು ಹೊಸ ರೀತಿಯಲ್ಲಿ ರೂಪಿಸಲಾಯಿತು. ಬಿಜೆಪಿಗೆ ಅದು ಹೇಳಿಕೊಳ್ಳುತ್ತಿರುವ ‘ಕಾಂಗ್ರೆಸ್ ಮುಕ್ತ ಭಾರತ’ ಸಾಧ್ಯವಾಗಬಹುದು. ಆದರೆ ಬಡತನ ಮುಕ್ತ ಭಾರತ ಅಥವಾ ಭ್ರಷ್ಟಾಚಾರ ಮುಕ್ತ ಭಾರತವಾಗಲು ಸಾಧ್ಯವಾಗದಿರುವುದು ಮಾತ್ರ ದುರಂತವಾಗಿದೆ.

ಗುಜರಾತ್ ಚುನಾವಣೆಯು ‘ಕಂಪನ ವಲಯ’ಗಳನ್ನು ಆತಂಕಕಾರಿಯಾದ ರೀತಿಯಲ್ಲಿ ಅನಾವರಣಗೊಳಿಸಿದೆ. ಈಗ ಹಾಗೂ ಮೇ 2019ರ ನಡುವೆ ದೊಡ್ಡ ಸಂಖ್ಯೆಯಲ್ಲಿ ಭಾರತೀಯರು ಭೀತಿಯಲ್ಲಿ ದಿನಗಳೆಯಬೇಕಾಗಿದೆ. ಜಾತಿ ರಾಜಕೀಯದ ಪುನರಾಗಮನದ ಭೀತಿ ತಲೆಯೆತ್ತಿದೆ. ಜಿಗ್ನೇಶ್ ಮೆವಾನಿ ಹಾಗೂ ಉಮರ್ ಖಾಲಿದ್, ಮುಂಬೈಯಲ್ಲಿ ದಾಂಧಲೆಗೆ ಪ್ರಚೋದನೆ ನೀಡಿದವರೆಂಬಂತೆ ಬಿಂಬಿಸಲಾಗುತ್ತಿದೆ. ರಾಹುಲ್‌ಗಾಂಧಿಗೆ ಗಲಭೆಕೋರರ ನಾಯಕತ್ವವನ್ನು ಈಗಾಗಲೇ ಕೇಸರಿ ಸಂಘಟನೆಗಳು ನೀಡಿವೆ.

ಸುದ್ದಿವಾಹಿನಿಗಳ ನಿರೂಪಕರು, ಕೋರೆಗಾಂವ್ ಗಲಭೆಯನ್ನು ಪ್ರತಿಭಟಿಸಿದವರನ್ನೇ ಶಾಂತಿಭಂಜಕರೆಂದು ಘೋಷಿಸಿಬಿಟ್ಟಿದ್ದು, ಅವರ ವಿರುದ್ಧ ಕತ್ತಿ ಮಸೆಯುತ್ತಿವೆ.

‘ನವಭಾರತ’ದ ನವರಾಜಕೀಯವು ಅಪನಂಬಿಕೆಯನ್ನು ಉತ್ಪಾದಿಸುತ್ತಿದೆಯೇ ಹೊರತು ಉಪಶಮನಮಾಡುತ್ತಿಲ್ಲ, ವಿಭಜನೆಯನ್ನು ಮಾಡುತ್ತಿದೆಯೇ ಹೊರತು ಸೌಹಾರ್ದ ವನ್ನಲ್ಲ. ಆದರೆ ಆ ಬಗ್ಗೆ ಆಳುವವರಿಗೆ ಯೋಚನೆಯಿಲ್ಲ. ಮುಂದೆ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕಾಗಿದೆ. ಒಂದು ವೇಳೆ ದಲಿತರು ತಮ್ಮದೇ ಆದ ಇತಿಹಾಸದಲ್ಲಿ ನಂಬತೊಡಗಿದರೆ, ಅವರು ಥಳಿತವನ್ನು ಎದುರಿಸ ಬೇಕಾಗುತ್ತದೆ. ಹೀಗೆ ದಲಿತರ, ದಮನಿತರ ವರ್ತಮಾನಕಾಲ ಮಾತ್ರವಲ್ಲ ಭೂತಕಾಲವೂ ಇಂಥವರ ನಿಯಂತ್ರಣದಲ್ಲಿದೆ.

ಕೃಪೆ: thewire.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)