varthabharthi

ಅನುಗಾಲ

ದೇಶಪ್ರೇಮದ ಬಗ್ಗೆ

ವಾರ್ತಾ ಭಾರತಿ : 11 Jan, 2018
ಬಾಲಸುಬ್ರಹ್ಮಣ್ಯ ಕಂರ್ಜಪಣೆ

ಇಂದು ದೇಶಪ್ರೇಮವೆಂಬ ಕಲ್ಪನೆಯು ತನ್ನ ಬೀಭತ್ಸ ನರ್ತನದ ಮೂಲಕ ದೇಶದೆಲ್ಲೆಡೆ ವಿಕಾರಗಳನ್ನು ಸೃಷ್ಟಿಸಿ ವಿನಾಶಕ್ಕೆ ಕಾರಣವಾಗುವುದನ್ನು ಕಾಣುವಾಗ ಇಂತಹ ಪರಿಸ್ಥಿತಿಯನ್ನು ಟಾಲ್‌ಸ್ಟಾಯ್ ಎಂದೋ ಕಂಡಿದ್ದರೆಂಬುದು ಕುತೂಹಲಕರವಾಗಿದೆ. ಅವರ ‘ದೇಶಪ್ರೇಮ ಮತ್ತು ಸರಕಾರ’ ಎಂಬ ಲೇಖನದ ಮುಖ್ಯಾಂಶಗಳನ್ನು ಗಮನಿಸಿದರೆ ನಾವಿಂದು ಯಾವುದನ್ನು ದೇಶಪ್ರೇಮವೆಂದು ಹೇಳುತ್ತೇವೋ ಅದು ದೇಶದ ಭವಿಷ್ಯಕ್ಕೂ ಹಿತಕ್ಕೂ ಮುಳುವಾಗುತ್ತದೆಂಬುದು ನಿಸ್ಸಂದೇಹ.


ಇಂದು ಗಾಂಧಿ ಇರುತ್ತಿದ್ದರೆ ಈ ದೇಶದ ಸ್ಥಿತಿ-ಗತಿಗಳ ಕುರಿತು ಎಂತಹ ಅಭಿಪ್ರಾಯವನ್ನು ಹೊಂದಿರುತ್ತಿದ್ದರು ಎಂಬುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅವರು ಕಾಂಗ್ರೆಸ್ ಪಕ್ಷದ ವಿಸರ್ಜನೆಗೆ ಸಲಹೆ ನೀಡಿದ್ದರೆಂಬುದು ಕಾಂಗ್ರೆಸ್‌ನ ವಿರೋಧಿಗಳಿಗೆ ರಾಮಬಾಣವಾಗಿದ್ದರೆ, ಗಾಂಧಿಯ ರಾಮ ಮತೀಯ ರಾಜಕಾರಣಕ್ಕೆ ದೊಡ್ಡ ಬಂಡವಾಳವಾಗಿರುವುದು ಇನ್ನೂ ವ್ಯಂಗ್ಯ. ‘‘ಗಾಂಧಿ ಇಂದು ಬದುಕಿರುತ್ತಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು’’ ಎಂದು ಕೆಲವರು ಸುಲಭವಾಗಿ ಹೇಳುತ್ತಾರೆ. ಆದರೆ ನನಗನ್ನಿಸಿದಂತೆ ಹಾಗಾಗುತ್ತಿರಲಿಲ್ಲ. ಅವರ ಕಣ್ಣ ಮುಂದೆಯೇ ದೇಶ ಅಲ್ಲೋಲಕಲ್ಲೋಲವಾಯಿತು. ಹಾಗೆಂದು ಗಾಂಧಿ ತನ್ನ ಗಾಂಧಿತನವನ್ನು ಕಳೆದುಕೊಳ್ಳಲಿಲ್ಲ. ದುರದೃಷ್ಟವಶಾತ್ ಕೆಲವೇ ತಿಂಗಳುಗಳಲ್ಲಿ ಅವರ ಹತ್ಯೆಯಾಯಿತು. ಎಷ್ಟೇ ನೋವನ್ನುನುಭವಿಸಿದರೂ ಎದೆಗುಂದದೆ ಮುನ್ನಡೆಯುವ ಪ್ರವೃತ್ತಿಯ ಗಾಂಧಿಗೆ ಸವಾಲುಗಳು ಹೆಚ್ಚಾದಷ್ಟೂ ದೊಡ್ಡದಾದಷ್ಟೂ ದೇಶಸೇವೆಗೆ, ಸಮಾಜಸೇವೆಗೆ, ಮೇವು ಸಿಕ್ಕಿದಂತೆ. ಆದ್ದರಿಂದ ಅವರು ಎಂತಹ ಪರಿಸ್ಥಿತಿಯಲ್ಲೂ ಆತ್ಮಹತ್ಯೆಯಂತಹ ನಿರ್ಧಾರವನ್ನು ಕೈಗೊಳ್ಳುತ್ತಿರಲಿಲ್ಲ; ಬದಲಿಗೆ ಅಂತಹ ಪರಿಸ್ಥಿತಿಯನ್ನು ಪರಿಹರಿಸುವ ಮತ್ತು ನಿಭಾಯಿಸುವ ಮಾರ್ಗೋಪಾಯಗಳನ್ನು ಹುಡುಕುತ್ತಿದ್ದರು.

ಗಾಂಧಿಯನ್ನು ಕೊಂದ ದೇಶಪ್ರೇಮವೆಂಬ ಕಲ್ಪನೆಯು ಇಂದು ಇಡೀ ದೇಶವನ್ನು ಎಂದಿಗಿಂತಲೂ ಹೆಚ್ಚಾಗಿ ಆವರಿಸಿದೆ. ರಾಮಮಂದಿರಕ್ಕಿಂತಲೂ ಹೆಚ್ಚಾಗಿ ಗೋಡ್ಸೆಗೆ ಮಂದಿರ ಕಟ್ಟುವವರೆಗೂ ಪ್ರಯತ್ನಗಳು ಸಾಗಿವೆಯೆಂದರೆ ಈ ದೇಶಪ್ರೇಮದ ಭಯಾನಕತೆ ಅರ್ಥವಾದೀತು. ಜೈ ಜವಾನ್ ಎಂಬುದನ್ನು ಇಷ್ಟೊಂದು ಮಾದಕವಾಗಿ ಪ್ರಚುರಪಡಿಸಿದ ಕಾಲ ಸ್ವತಂತ್ರ ಭಾರತದ ಏಳು ದಶಕಗಳಲ್ಲಿರಲಿಲ್ಲ. ಇದನ್ನು ಸರಕಾರ ಮತ್ತು ರಾಜಕಾರಣಿಗಳು ಎಷ್ಟೊಂದು ಪರಿಣಾಮಕಾರಿಯಾಗಿ ಪ್ರಚಾರಮಾಡಿದ್ದಾರೆ ಮತ್ತು ಜನರನ್ನು ಅಮಲಿನಲ್ಲಿ ತೊಡಗಿಸಿದ್ದಾರೆಂದರೆ ಪ್ರಾಯಃ ಯಾವ ದೇಶಪ್ರೇಮದ ರಾಜಕಾರಣಿಗೂ ಪ್ರಾಣಕ್ಕೆ ಎರವಾಗದೆ ತಾನೇರಿದ ಹುಲಿಯ ಸವಾರಿಯನ್ನು ಕೈಬಿಡಲು ಕಷ್ಟವಾಗಬಹುದು.

ಗಾಂಧೀಜಿಯನ್ನು ದೇಶಪ್ರೇಮಿಯಲ್ಲವೆಂದು ಯಾರೂ ಹೇಳಲಾರರು. ಅವರಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ಸಿಕ್ಕಿದ ಕೆಲವೇ ವ್ಯಕ್ತಿಗಳಲ್ಲಿ ಟಾಲ್‌ಸ್ಟಾಯ್ ಒಬ್ಬರು. ತಾನೊಬ್ಬ ಹಿಂದೂ ಎಂಬುದನ್ನು ಸಾರ್ವಜನಿಕವಾಗಿ ಅಭಿವ್ಯಕ್ತಿಗೊಳಿಸಿದ ಗಾಂಧಿಗೆ ಟಾಲ್‌ಸ್ಟಾಯ್ ಅವರ ವಿಚಾರಧಾರೆ ಸ್ಫೂರ್ತಿ ನೀಡಿತೆಂಬುದು ಒಂದು ಅಪೂರ್ವ ವಿಚಾರ. ಪೂರ್ವ-ಪಶ್ಚಿಮವು ಮಿಳಿತಗೊಂಡ ಅಪರೂಪದ ಕೆಲವು ಆರೋಗ್ಯಪೂರ್ಣ ನಿದರ್ಶನಗಳಲ್ಲಿ ಗಾಂಧಿ-ಟಾಲ್‌ಸ್ಟಾಯ್ ವಿಚಾರಗಳು ಮುಖ್ಯವಾಗುತ್ತವೆ. ಅದರಲ್ಲೂ ಟಾಲ್‌ಸ್ಟಾಯ್ ಕುರಿತ ಕೆಲವು ವಿಚಾರಗಳನ್ನು ಹೇಳುವುದೇ ಈ ಲೇಖನದ ಉದ್ದೇಶ. 19ನೇ ಶತಮಾನದಲ್ಲಿ ಬದುಕಿ 20ನೇ ಶತಮಾನದ ಆರಂಭದಲ್ಲಿ ಮರಣಹೊಂದಿದ ಟಾಲ್‌ಸ್ಟಾಯ್ ಕ್ರಿಶ್ಚಿಯನ್ ಧರ್ಮದ ಕುರಿತು ಸಾಕಷ್ಟು ಅಧ್ಯಯನ ಮಾಡಿದ ತತ್ವಜ್ಞಾನಿ; ಲೋಕೋತ್ತರ ಸಾಹಿತಿ. ವಿಶ್ವದ ಕೆಲವೇ ಶ್ರೇಷ್ಠ ಮಾರ್ಗದರ್ಶಕರಲ್ಲೊಬ್ಬರು. (ಅವರ ಜೀವನಚರಿತ್ರೆಯನ್ನು ಹೇಳುವುದು ನನ್ನ ಉದ್ದೇಶವಲ್ಲ.) ಅಕಡೆಮಿಕ್ ಅಲ್ಲದೆ ಬದುಕಿದವರಿಗೆ ಏಕಲವ್ಯರು ಹೇರಳವಾಗಿರುತ್ತಾರೆ; ಅರ್ಜುನರು ಕಡಿಮೆ. ಆದ್ದರಿಂದಲೇ ಗಾಂಧಿಯೂ ಟಾಲ್‌ಸ್ಟಾಯ್ ವಿಚಾರಧಾರೆಯಿಂದ ಪ್ರಭಾವಿತರಾದದ್ದು. ನಡೆ-ನುಡಿ ಒಂದಾಗಿರುವ ವ್ಯಕ್ತಿಗಳು ವಿಕ್ಷಿಪ್ತರಂತೆ ಕಾಣಿಸುತ್ತಾರೆ. ಟಾಲ್‌ಸ್ಟಾಯ್ ಅಂತಹ ವ್ಯಕ್ತಿ.

ಇಂದು ದೇಶಪ್ರೇಮವೆಂಬ ಕಲ್ಪನೆಯು ತನ್ನ ಬೀಭತ್ಸ ನರ್ತನದ ಮೂಲಕ ದೇಶದೆಲ್ಲೆಡೆ ವಿಕಾರಗಳನ್ನು ಸೃಷ್ಟಿಸಿ ವಿನಾಶಕ್ಕೆ ಕಾರಣವಾಗುವುದನ್ನು ಕಾಣುವಾಗ ಇಂತಹ ಪರಿಸ್ಥಿತಿಯನ್ನು ಟಾಲ್‌ಸ್ಟಾಯ್ ಎಂದೋ ಕಂಡಿದ್ದರೆಂಬುದು ಕುತೂಹಲಕರವಾಗಿದೆ. ಅವರ ‘ದೇಶಪ್ರೇಮ ಮತ್ತು ಸರಕಾರ’ ಎಂಬ ಲೇಖನದ ಮುಖ್ಯಾಂಶಗಳನ್ನು ಗಮನಿಸಿದರೆ ನಾವಿಂದು ಯಾವುದನ್ನು ದೇಶಪ್ರೇಮವೆಂದು ಹೇಳುತ್ತೇವೋ ಅದು ದೇಶದ ಭವಿಷ್ಯಕ್ಕೂ ಹಿತಕ್ಕೂ ಮುಳುವಾಗುತ್ತದೆಂಬುದು ನಿಸ್ಸಂದೇಹ. ನಮ್ಮದೇ ಆಗಿರುವ ದೇಶಪ್ರೇಮದ ಸಂಕೇತದ ಅತಿರೇಕದ ಒಂದು ಉದಾಹರಣೆಯನ್ನು ನೀಡಬಹುದು: ಈಚೆಗೆ ಸರಕಾರದ ಮೂಲಕವೆಂಬಂತೆ ಸರ್ವೋಚ್ಚ ನ್ಯಾಯಾಲಯವು ಸಿನೆಮಾ ಥಿಯೇಟರ್‌ಗಳಲ್ಲಿ ಸಿನೆಮಾದ ಪ್ರಾರಂಭಕ್ಕೆ ಮೊದಲು ರಾಷ್ಟ್ರಗೀತೆಯನ್ನು ಪ್ರದರ್ಶಿಸುವುದನ್ನು ಮತ್ತು ಅದನ್ನು ಪ್ರದರ್ಶಿಸುವ ಅವಧಿಯಲ್ಲಿ ಪ್ರೇಕ್ಷಕರು ಎದ್ದುನಿಲ್ಲುವುದನ್ನು ಕಡ್ಡಾಯ ಗೊಳಿಸಿತು. ಇದನ್ನು ಅನುಷ್ಠಾನಗೊಳಿಸಲು (ಗೋರಕ್ಷಕ ಪಡೆಯಂತೆ) ದೇಶಪ್ರೇಮಿ ಗೂಂಡಾಪಡೆ ತಕ್ಷಣ ಸಜ್ಜಾಯಿತು. ಪರಿಣಾಮವಾಗಿ ಎದ್ದು ನಿಲ್ಲಲು ಅಶಕ್ತರಾದವರು ಮತ್ತು ತಮ್ಮದೇ ಆದ (ಸ)ಕಾರಣಕ್ಕೆ ಎದ್ದು ನಿಲ್ಲದವರು ಹಿಂಸೆ ಅನುಭವಿಸಬೇಕಾಯಿತು. ಬಹಳ ತಡವಾಗಿ ಸರಕಾರವೂ ಸರ್ವೋಚ್ಚ ನ್ಯಾಯಾಲಯವೂ ಎಚ್ಚೆತ್ತುಕೊಂಡವು. ಈಗ ಅವನ್ನು ಸದ್ಯಕ್ಕಂತೂ ಕಡ್ಡಾಯವಿಲ್ಲವೆಂದು ಘೋಷಿಸಲಾಯಿತು; ಆದೇಶಿಸಲಾಯಿತು. ಮುಂದೇನಾಗುವುದೋ ಗೊತ್ತಿಲ್ಲ.

ಮನುಷ್ಯ ಸಿನೆಮಾಕ್ಕೆ ಹೊಗುವುದು ತನ್ನ ದೇಶಪ್ರೇಮವನ್ನು ಪ್ರದರ್ಶಿಸುವುದಕ್ಕಲ್ಲ. ಮನೋರಂಜನೆಗೆ. ಅಲ್ಲಿ ನೈತಿಕ, ಅಥವಾ ಸಾಮಾಜಿಕ ಶಿಕ್ಷಣ ಸಿಗುತ್ತದೆಂಬ ಭ್ರಮೆ ಯಾರಿಗೂ ಇಲ್ಲ. ಅದೊಂದು ರೀತಿಯ ಹಾನಿಕಾರಕವಲ್ಲದ ಮೋಜು. ಅಲ್ಲೂ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿದರೆ ಇನ್ನು ನಾಟಕ, ಸರ್ಕಸ್, ಮಾತ್ರವಲ್ಲ, ಕಾಫಿ-ಊಟದ ಹೊಟೇಲುಗಳಲ್ಲೂ (ಟಾಯ್ಲೆಟುಗಳಲ್ಲೂ!) ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಬಹುದಲ್ಲ! ಇಷ್ಟಕ್ಕೂ ಸಿನೆಮಾಕ್ಕೆ ಎಲ್ಲರೂ ಹೋಗುತ್ತಾರೆಂಬ ಮತ್ತು ರಾಷ್ಟ್ರಗೀತೆಯನ್ನು ಹಾಡಿದಾಗ ಅವರು ಎದ್ದುನಿಂತರೆ ಸತ್ಪ್ರಜೆಗಳಾಗುತ್ತಾರೆಂಬ ಕಲ್ಪನೆಯೇ ಅವಿವೇಕತನದ್ದು. ಇದರ ಬದಲಾಗಿ ಈಗ ಸಿನೆಮಾಗಳಲ್ಲಿರುವ ಬಹುಪಾಲು ಹಿಂಸೆ, ಕ್ರೌರ್ಯ, ಲೈಂಗಿಕತೆ, ಅಶ್ಲೀಲತೆ ಮಾತ್ರವಲ್ಲ, ಸಿಗರೇಟು, ಮದ್ಯಪಾನ, ಮುಂತಾದ ಋಣಾತ್ಮಕ ಮೌಲ್ಯಗಳನ್ನು ನಿಯಂತ್ರಿಸಿದರೆ ಹೆಚ್ಚು ಹಿತಕರವಾಗಬಹುದು.

ಆದರೆ ನಮ್ಮ ಸುಧಾರಣಾ ನೀತಿ ಹೇಗಿದೆಯೆಂದರೆ ಒಂದು ಕಡೆ ಮದ್ಯಪಾನ ವನ್ನು ನಿಷೇಧಿಸದೆ ಕೋಟ್ಯಾನುಗಟ್ಟಲೆ ಸಂಪಾದಿಸುವುದು; ಇನ್ನೊಂದೆಡೆ ಮದ್ಯಪಾನ ವ್ಯಸನವನ್ನು ನಿಯಂತ್ರಿಸುವ ಮದ್ಯಪಾನ ಸಂಯಮ ಮಂಡಳಿಗಳ, ಮದ್ಯವರ್ಜನ ಶಿಬಿರಗಳ ಸ್ಥಾಪನೆ ಮತ್ತು ಪೋಷನೆಗೆ ಹೆಚ್ಚು ಹಣ ವೆಚ್ಚ ಮಾಡುವುದು. ಸರಕಾರ ತಂಬಾಕು ಮಂಡಳಿಯ ಮೂಲಕ ರೈತರನ್ನು ತಂಬಾಕು ಬೆಳೆಯಲು ಪ್ರೋತ್ಸಾಹಿಸುವುದು; ತಂಬಾಕು ಸೇವನೆಯ ಹಾನಿಯ ಕುರಿತು ಸರಕಾರವೇ ಪ್ರಚಾರ ಮಾಡುವುದು; ಸಿಗರೇಟು ಸೇವನೆ ಆರೋಗ್ಯಕ್ಕೆ ಮಾರಕ ಎಂಬ ಜಾಹೀರಾತನ್ನು ಸಿಗರೇಟು ಪ್ಯಾಕುಗಳ ಮೇಲೆ ಮುದ್ರಿಸು ವುದು. ಇಂತಹ ನಾಟಕಗಳನ್ನು ಯಾವುದೇ ಸರಕಾರ ಯಶಸ್ವಿಯಾಗಿ ಮಾಡುತ್ತಲೇ ಇರುತ್ತದೆ. ಜನರಿಗೆ ಇದರ ಸುಳಿವೇ ಸಿಗುವುದಿಲ್ಲ. ಪ್ಲಾಸ್ಟಿಕ್ ನಿಷೇಧದ ನಾಟಕವನ್ನು ಕಂಡವರೊಬ್ಬರು ಪ್ಲಾಸ್ಟಿಕ್ ತಯಾರಿಕಾ ಘಟಕಗಳನ್ನೇ ಮುಚ್ಚಬಹುದಲ್ಲ! ಎಂದರು. ವಿಷವನ್ನು ಸೃಷ್ಟಿಸಬೇಕು; ಮತ್ತು ವಿಷಪ್ರಾಶನ ಮಾಡಬೇಡಿ ಎಂದು ಜಾಹೀರಾತನ್ನೂ ಹಾಕಬೇಕು. ಅಲ್ಲೂ ಲಾಭ; ಇಲ್ಲೂ ಲಾಭ. ಎಂತಹ ಸವ್ಯಸಾಚಿ ದೃಷ್ಟಿ!

ದೇಶಪ್ರೇಮದ ಪ್ರಹಸನ ಹೀಗೆಯೇ.
ದೇಶಪ್ರೇಮವೆಂಬುದು ಬದುಕಿನ ಸಹಜ ಗುಣವಾಗಬೇಕೇ ಹೊರತು ಘೋಷಿತ ಮಾನದಂಡವಲ್ಲ. ಟಾಲ್‌ಸ್ಟಾಯ್ ಹೇಳುವ ಕೆಲವು ಮಾತುಗಳನ್ನು ಯಥಾವತ್ತಾಗಿ ಎತ್ತಿಕೊಂಡು ಹೇಳಬಹುದು: ‘‘ಇ. ಬೆಲ್ ಫೊರ್ಟ್ ಅವರ ಒಬ್ಬ ವ್ಯಕ್ತಿಯನ್ನು ದೇಶಪ್ರೇಮಿಯೆಂದು ಕರೆಯುವುದು, ಆತನಿಗೆ ನೀವು ಮಾಡಬಹುದಾದ ಘೋರ ಅಪಮಾನವೆಂದು ಪರಿಗಣಿಸಬಹುದಾದ ಕಾಲ ಹತ್ತಿರ ಬರುತ್ತಿದೆ. ದೇಶಪ್ರೇಮವೆಂದರೆ, ಈಗ ಇರುವ ಅರ್ಥದ ಪ್ರಕಾರ- ಪಟ್ಟಭದ್ರ ಹಿತಾಸಕ್ತ ವರ್ಗದವರಿಗೆ ಅನುಕೂಲವಾಗುವಂತೆ, ನಾವು ಹುಟ್ಟಿರುವ ನಿರ್ದಿಷ್ಟ ದೇಶವೊಂದರ ವ್ಯವಸ್ಥೆಯನ್ನು ಕೊಳ್ಳೆಹೊಡೆಯುವ ಅವಕಾಶವೇ ಆಗಿದೆ.’’ ಎಂಬ ಮಾತುಗಳನ್ನು ಟಾಲ್‌ಸ್ಟಾಯ್ ತನ್ನ ‘ದೇಶಪ್ರೇಮ ಮತ್ತು ಸರಕಾರ’ ಎಂಬ ಲೇಖನದ ಆರಂಭದಲ್ಲೇ ಪ್ರಸ್ತಾವನೆಯ ರೂಪದಲ್ಲಿ ಉಲ್ಲೇಖಿಸುತ್ತಾರೆ. ಇದನ್ನು ಓದುವಾಗ ನಮ್ಮಲ್ಲಿ ದೇಶಪ್ರೇಮದ ಹೆಸರಿನಲ್ಲಿ ತಮ್ಮನ್ನೊಲ್ಲದವರಿಗೆ, ಸ್ವತಂತ್ರವಾಗಿ ಅಭಿವ್ಯಕ್ತಿಸುವವರಿಗೆ ದೇಶದ್ರೋಹಿಯ ಪಟ್ಟಕಟ್ಟಿ ಶಿಕ್ಷಿಸುವ ಪ್ರಸಂಗಗಳು ನೆನಪಾಗುತ್ತವಲ್ಲವೇ?

ಟಾಲ್‌ಸ್ಟಾಯ್ ಚಿಂತನೆಯಂತೆ ‘‘ದೇಶಪ್ರೇಮವೆಂಬುದು ಅಸಹಜವಾದ ಅವಿವೇಕದಿಂದ ಕೂಡಿದ ಅಪಾಯಕಾರಿ ಭಾವನೆ’’. ಅಷ್ಟೇ ಅಲ್ಲ, ‘‘ಮಾನವ ಜನಾಂಗವು ಅನುಭವಿಸುತ್ತಿರುವ ಬಹುಪಾಲು ಕಷ್ಟಗಳಿಗೆ ಇದು ಕಾರಣವಾಗಿದೆಯಾದುದರಿಂದ ಈ ಭಾವನೆಯನ್ನು ಬೆಳೆಸಬಾರದು ಮಾತ್ರವಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ದಮನಗೊಳಿಸಬೇಕು; ವಿವೇಕಯುತವಾದ ಎಲ್ಲ ಮಾರ್ಗಗಳಿಂದಲೂ ತೊಡೆದುಹಾಕಬೇಕು.’’

ಒಮ್ಮೆಗೇ ಇದೊಂದು ದೇಶದ್ರೋಹಿ ಮಾತುಗಳಂತೆ ಗೋಚರಿಸಬಹುದು. ಆದರೆ ಟಾಲ್‌ಸ್ಟಾಯ್ ಅವರ ಸಮಗ್ರ ಚಿಂತನೆಯ ಭಾಗವಾಗಿ ಈ ಸಿದ್ಧಾಂತವನ್ನು ಗಮನಿಸಿದರೆ ಇದು ಅಪ್ಪಟ ಸತ್ಯವೆಂದು ಮನದಟ್ಟಾಗುತ್ತದೆ. ಟಾಲ್‌ಸ್ಟಾಯ್ ಉಲ್ಲೇಖಿಸುವ ಆಡುನುಡಿಯಂತೆ ನಿಜವಾದ ದೇಶಪ್ರೇಮವೆನ್ನುವುದು, ತನ್ನ ಜನಗಳ ಹಿತವನ್ನು ಉಳಿದ ದೇಶಗಳ ಕ್ಷೇಮಕ್ಕೆ ಕೆಡುಕಾಗದಂತೆ ಆಶಿಸುವುದರಲ್ಲಿಯೇ ಮಗ್ನವಾಗಿರುತ್ತದೆ. ಆದರೆ ಬಹುಜನರಿಗೆ ದೇಶಪ್ರೇಮವೆನ್ನುವುದು ಆತ್ಮೋದ್ಧಾರದ ಬಯಕೆಯಾಗಿರದೆ ಅನ್ಯ ದೇಶಗಳನ್ನು ಮಾತ್ರವಲ್ಲ, ತಮ್ಮದೇ ದೇಶದ ಇತರರನ್ನು ಹೊಸಕಿ ಹಾಕಲು ಒಂದು ನೆಪವಾಗುತ್ತಿರುವುದು ದುರಂತ. ಇತರರಿಗಿಂತ ತಾವು ಶ್ರೇಷ್ಠರು ಎಂಬ ಅಪಾಯಕಾರಿ ಧೋರಣೆಗೆ, ವ್ಯಸನಕ್ಕೆ, ಭ್ರಮೆಗೆ, ಇದು ದಾರಿಮಾಡಿಕೊಡುತ್ತದೆ. ಟಾಲ್‌ಸ್ಟಾಯ್ ತನ್ನ ಕಾಲದಲ್ಲೇ ‘‘ದೇಶಪ್ರೇಮದಿಂದಾಗುವ ಕೆಡುಕು ಮತ್ತು ಅವಿವೇಕಗಳು ಎಲ್ಲರಿಗೂ ಸ್ಪಷ್ಟವಾಗಿವೆಯೆಂದು ನಿರೀಕ್ಷಿಸಬಹುದಾದರೂ ಸುಸಂಸ್ಕೃತರು ಮತ್ತು ವಿದ್ಯಾವಂತರೇ ಇದನ್ನು ಗಮನಿಸುತ್ತಿಲ್ಲವೆಂಬುದು ಆಶ್ಚರ್ಯಕರ ಸಂಗತಿಯಾಗಿದೆ.’’ ಎಂದು ಹೇಳಿದ್ದರು.

ಈ ಮಾತು ಶತಮಾನಗಳ ಆನಂತರವೂ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲೆಡೆ ಸತ್ಯವಾಗುತ್ತಿದೆಯೆಂದರೆ ಇದೂ ನಾಸ್ಟರ್‌ಡಾಮಸ್‌ನ ಭವಿಷ್ಯದಂತೆ ಉಲ್ಲೇಖಿಸಲ್ಪಡಬೇಕಾದ ವಿಚಾರವೆಂಬುದು ಸ್ಪಷ್ಟ. ಪರಿಪೂರ್ಣದೆಡೆಗೆ ಏರುವ ಏಣಿಯಲ್ಲಿ ಮನುಷ್ಯನು ವಿವಿಧ ಶ್ರೇಣಿಗಳಲ್ಲಿರುವನಾದರೂ ಉದಾತ್ತ ಕಲ್ಪನೆಗಳ ಮೋಹವೇ ಅವನಲ್ಲಿರಬೇಕಾಗಿಲ್ಲ. ಆಗ ಆತನು ದೇಶಪ್ರೇಮದಂತಹ ವಿಚಾರಗಳನ್ನು ಧೂರ್ತತನದಿಂದ ಆಕರ್ಷಕವಾಗಿ ಪ್ರಕಟಿಸಬಲ್ಲ. (ಗಾಂಧಿ ಬಹಳಷ್ಟು ಅಪೇಕ್ಷಿಸಿದ) ಹಿಂಸೆಯ ನಿರ್ಮೂಲನ, ಸಮುದಾಯಕ್ಕೆ ಸೇರಿದ ಧರ್ಮದರ್ಶಿತ್ವದ ಆಸ್ತಿಯ ಒಡೆತನ, ವಿಶ್ವಧರ್ಮ ಮತ್ತು ಸಾರ್ವತ್ರಿಕವಾದ ಸೋದರ ಭಾವನೆಯನ್ನು ಮನುಷ್ಯರಲ್ಲಿ ಬೆಳೆಸುವುದು ನೈಜ ಆದರ್ಶದ ಕಲ್ಪನೆಗಳು. ಆದರೆ ದೇಶಪ್ರೇಮದಲ್ಲಿ ಇಂತಹವಕ್ಕೆ ವ್ಯವಧಾನ, ಅವಕಾಶ ಇರುವುದಿಲ್ಲ. ನಮ್ಮ ದೇಶದಲ್ಲೂ ದೇಶಪ್ರೇಮವು ಧರ್ಮಗುರುವಿನಂತೆ ಲಾಭದಾಯಕವಾದ ಸ್ಥಾನಮಾನಗಳನ್ನು ನೀಡುತ್ತದೆ. ಇಂತಹ ಭಾವನೆಗಳನ್ನು ಉದ್ದೀಪನಗೊಳಿಸುವುದೇ ಒಂದು ಕಾರ್ಖಾನೆಯಾಗುವುದರಿಂದ ಅನೇಕರಿಗೆ ಅಧಿಕಾರಸ್ಥರಿಂದ ಲಾಭ ಮತ್ತು ಪ್ರತಿಫಲವಿದೆ.

ದೇಶಪ್ರೇಮವು ಯುದ್ಧವನ್ನು ಅಥವಾ ಅದರ ಉನ್ಮಾದವನ್ನಂತೂ ಸೃಷ್ಟಿಸುತ್ತದೆ. ಆದ್ದರಿಂದ ಸರಕಾರ ಮತ್ತು ಅಲ್ಲೇ ಇರಲು ಬಯಸುವವರು, ಸರ್ವಾಧಿಕಾರಿಗಳು ಪರರಾಷ್ಟ್ರಗಳನ್ನು ಅನ್ಯಾಯವಾಗಿ ಒರಟುತನದಿಂದ ನಡೆಸಿಕೊಂಡು ಕೆರಳಿಸಿ, ತಮ್ಮ ಜನಗಳನ್ನು ಕುರಿತು ಅವರು ವೈರ ಸಾಧಿಸುವಂತೆ ಮಾಡುವುದರ ಮೂಲಕ ತಮ್ಮ ಜನಗಳಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸುತ್ತಾರೆಂದು ಹೇಳುವುದಕ್ಕಿಂತಲೂ ಉದ್ರೇಕಿಸುತ್ತಾರೆಂದು ಹೇಳಬಹುದು. ಹಿಟ್ಲರ್, ನೆಪೋಲಿಯನ್ ಮುಂತಾದವರು ಇದನ್ನು ಸಾಧಿಸಿದರು. ಇಂದು ದೇಶಪ್ರೇಮದ ಹೆಸರಿನಲ್ಲಿ ನಡೆಯುವ ಕೀಳುಮಟ್ಟದ ದ್ವೇಷಪೂರಿತ ದುಷ್ಟ ನಡೆ-ನುಡಿಗಳು ಯಾವುದೇ ವಿವೇಕಿಯನ್ನೂ ತಲೆತಗ್ಗಿಸುವಂತೆ ಮಾಡ ಬಲ್ಲುದು. ಇಂತಹವರು ಸರಕಾರಗಳ ಪ್ರತಿನಿಧಿಗಳಾಗಿರುವುದು ಇನ್ನೂ ದೊಡ್ಡ ಅಪಾಯ. ಅವರೇ ಕೋಟ್ಯಂತರ ಮುಗ್ಧ, ಮೂರ್ಖ, ಇಲ್ಲವೇ ಅಜ್ಞಾನಿ ಪ್ರಜೆ ಗಳಿಗೆ ನೈತಿಕ ಮತ್ತು ದೇಶಪ್ರೇಮದ ಮಾರ್ಗದರ್ಶಕರಾಗಿರುತ್ತಾರೆ. ಇಂತಹವರ ಕಾರಣದಿಂದಲೇ ದೇಶಗಳು ಪರಸ್ಪರ ಸಂಶಯದಿಂದ ನೋಡುತ್ತವೆೆ; ತಮ್ಮ ಕೊರತೆಗಳನ್ನು, ಲೋಪದೋಷಗಳನ್ನು ಮರೆಮಾಚುವುದಕ್ಕಾಗಿ, ಶ್ರೇಷ್ಠತೆಯನ್ನು ಮೆರೆಸುವುದಕ್ಕಾಗಿ, ಹೆಚ್ಚು ಶಕ್ತರಾಗುವುದಕ್ಕಾಗಿ, ತಮ್ಮ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತವೆೆ. ಉಪವಾಸವಿರುವ ಕಡು ಬಡವನಿಗೂ ‘‘ಜೈ ಜವಾನ್’’ ಎಂದು ಹೇಳಿ ಆತನ ಹಸಿವನ್ನು ದೇಶಪ್ರೇಮದಿಂದ ಮುಚ್ಚಿ ಹಾಕುತ್ತವೆೆ.

ದೇಶಪ್ರೇಮದ ಕುರಿತ ಟಾಲ್‌ಸ್ಟಾಯ್ ಚಿಂತನೆ ತುಂಬಾ ಗಾಢವಾದದ್ದು. ಅವರು ಹೇಳುವ ಈ ಕೆಳಗಿನ ಉಲ್ಲೇಖ ದೇಶಪ್ರೇಮವೆಂಬ ಸಿದ್ಧಾಂತದ ಕುರಿತ ಅವರ ಎಲ್ಲ ಚಿಂತನೆಗಳ ಸಮುಚ್ಚಯದಂತಿದೆ: ಬಿತ್ತುವ ಸಲುವಾಗಿ ಉಳುವ ಅಗತ್ಯವಿದ್ದಾಗ, ಉಳುಮೆ ಬುದ್ಧಿವಂತಿಕೆಯಾಗುತ್ತದೆ. ಆದರೆ ಬಿತ್ತಿದ ಮೇಲೆಯೂ ಉಳುತ್ತಾ ಹೋಗುವುದು ಸ್ಪಷ್ಟವಾಗಿ ಅಪಾಯಕಾರಕ ಅಸಂಬದ್ಧವಾಗುತ್ತದೆ. ಇದೇ ರೀತಿಯಲ್ಲಿ ಸರಕಾರಗಳು ತಮ್ಮ ಜನಗಳು ಏನು ಮಾಡಬೇಕು ಎಂಬುದರ ಬಗ್ಗೆ ನಿರ್ಬಂಧಪಡಿಸುತ್ತಿವೆ. ಅಸ್ತಿತ್ವದಲ್ಲಿರುವ ಒಮ್ಮತವನ್ನು ಭಂಗಿಸಲು ಪ್ರೇರಿಸುತ್ತಿವೆ. ಸರಕಾರದ ಸಲುವಾಗಿಯಲ್ಲದಿದ್ದರೆ ಅತಿಕ್ರಮವಾಗುತ್ತಲೇ ಇರಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)